Saturday, 14th December 2024

ಬಿಜೆಪಿ ಟಿಕೆಟ್‌ ; ರಾಜ್ಯಕ್ಕೂ ಯುಪಿ ಮಾದರಿ ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ರಾಜ್ಯದಲ್ಲಿ 72 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಬಹುತೇಕ ಅನುಮಾನ. ಪಕ್ಷದ ಸಂಘಟನೆಯಲ್ಲಿ ಹೆಚ್ಚು ಕಾಣಿಸಿ ಕೊಳ್ಳದೇ ಇರುವ ಶಾಸಕರನ್ನು ಗಮನಿಸಿ, ಅವರಿಗೆ ‘ಬದಲಿ’ ವ್ಯವಸ್ಥೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿಯೂ ಬಿಜೆಪಿ ವರಿಷ್ಠರಿದ್ದಾರೆ.

ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಲೇಬೇಕು. ಅದು ಅಧಿಕಾರ, ಸ್ಥಾನಮಾನ ಅಥವಾ ಇನ್ಯಾವುದೇ ಇರಲಿ. ಆದರೆ ಈ ಮಾತು ರಾಜಕಾರಣಿ ಹಾಗೂ ರಾಜಕೀಯಕ್ಕೆ ಮಾತ್ರ ಆಗಿಬರುವುದಿಲ್ಲ. ಒಬ್ಬ ವ್ಯಕ್ತಿ ಅಧಿಕಾರದ ಗದ್ದುಗೆ ಏರಿದರೆ, ಏನಕ್ಕೆ ಏನೇ ಆಗಲಿ, ಆತ ಸಾಯುವ ತನಕ ಅದೇ ಸ್ಥಾನದಲ್ಲಿ ಮುಂದುವರಿಯಲು ಬಯಸುತ್ತಾನೆ. ಅದರಲ್ಲಿ ಯೂ ಸಮುದಾಯದ ಬೆಂಬಲವಿರುವ ವ್ಯಕ್ತಿ ಏನಾದರೂ ಶಾಸಕ-ಸಂಸದನಾಗಿ ಒಮ್ಮೆ ಗೆದ್ದುಬಿಟ್ಟರೆ, ಐದು ವರ್ಷ ಮಾತ್ರವಲ್ಲದೇ, ಮುಂದಿನ ಐವತ್ತು ವರ್ಷ ಅದೇ ವ್ಯಕ್ತಿ ಜನಪ್ರತಿನಿಧಿಯಾಗಿರಲು ಬಯಸುತ್ತಾನೆ. ಪಕ್ಷಗಳು ಸಹ ಆತನಿಗೆ ಟಿಕೆಟ್ ನೀಡದಿದ್ದರೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಅವರಿಗೆ ಮಣೆ ಹಾಕುತ್ತ ಹೋಗುತ್ತವೆ.

ಈ ಮಾತು ಕೇವಲ ಯಾವುದೋ ಒಂದು ಪಕ್ಷಕ್ಕೆ ಅನ್ವಯವಾಗುವುದಿಲ್ಲ. ಬದಲಿಗೆ ಭಾರತದಲ್ಲಿರುವ ರಾಜಕೀಯ ವ್ಯವಸ್ಥೆಯೇ ಹಾಗಿದೆ. ಒಂದು ವೇಳೆ ಪ್ರಬಲ ಅಭ್ಯರ್ಥಿಯನ್ನು (ಹಣ, ಜನ, ತೋಳ್ಬಲ ಯಾವು ದಾದರೂ ಆಗಲಿ) ಬದಲಾಯಿಸಿ ಇನ್ನೊಬ್ಬರಿಗೆ ಟಿಕೆಟ್ ನೀಡಲು ಅಥವಾ ಸ್ಥಳೀಯವಾಗಿ ಆತನ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ ಎನ್ನುವ ಕಾರಣಕ್ಕೆ ಟಿಕೆಟ್ ನೀಡದೇ ಬೇರೆಯವರಿಗೆ ನೀಡಿದರೆ, ಅದಕ್ಕೆ ಬಂಡಾಯ ಶುರು ಮಾಡಿ, ದೊಡ್ಡ ಡ್ರಾಮಾವೇ ನಡೆಯುತ್ತದೆ. ಆ ಡ್ರಾಮಾ ತಗ್ಗಿಸಲು, ಬಂಡಾಯ ಅಭ್ಯರ್ಥಿಗೆ ಕೆಲವು ಆಫರ್‌ಗಳನ್ನು ಬೇರೆ ನೀಡಬೇಕು.

ಈ ಎಲ್ಲ ತಲೆಬಿಸಿ ಬೇಡವೇ ಬೇಡ ಎನ್ನುವ ಬಹುತೇಕ ರಾಜಕೀಯ ಪಕ್ಷಗಳು, ‘ಅಜ್ಜ ಹಾಕಿದ ಆಲದ ಮರ’ ಎನ್ನುವಂತೆ ಸಿಟ್ಟಿಂಗ್ ಎಂಎಲ್‌ಎ ಅಥವಾ ಎಂಪಿಗಳಿಗೆ ಟಿಕೆಟ್ ಕೊಟ್ಟು ಗೆಲವಿನ ಬಗ್ಗೆಯಷ್ಟೇ ಯೋಚಿಸುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಇಡೀ ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ ಚುನಾವಣೆ ಯಲ್ಲಿ ಹಾಲಿ 20 ಶಾಸಕರಿಗೆ ಟಿಕೆಟ್ ನೀಡದೇ ಹೊಸಬ ರಿಗೆ ಅವಕಾಶ ನೀಡಿದೆ. 403 ಕ್ಷೇತ್ರಗಳಿರುವ ಅತಿದೊಡ್ಡ ರಾಜ್ಯದಲ್ಲಿ ಬಿಜೆಪಿ 20 ಹಾಲಿ ಶಾಸಕರಿಗೆ ಟಿಕೆಟ್ ನೀಡದಿರುವುದು ದೊಡ್ಡ ವಿಷಯವೇ ಎನ್ನುವವರ ಗಮನಕ್ಕೆ, ಈ 20 ಹಾಲಿ ಶಾಸಕರು ಇರುವುದು ಕೇವಲ ಮೊದಲ ಹಂತದ ಚುನಾವಣೆ ನಡೆಯಲಿರುವ 107 ಕ್ಷೇತ್ರಗಳಿಗೆ ಸೀಮಿತವಾಗಿ.

ಇನ್ನುಳಿದ ಹಂತದಲ್ಲಿ ಬಿಡುಗಡೆಯಾಗಲಿರುವ ಪಟ್ಟಿಯಲ್ಲಿ ಇನ್ನಷ್ಟು ಹಾಲಿ ಶಾಸಕರಿಗೆ ಗೇಟ್‌ಪಾಸ್ ಕೊಡುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದು ಬಿಜೆಪಿ ವಲಯದ ಮಾತಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾಲಿ ಶಾಸಕರಿಗೆ ಕೊಕ್ ಕೊಟ್ಟು, ಹೊಸ ಮುಖಗಳಿಗೆ ಅವಕಾಶ ನೀಡುತ್ತಿರುವುದಕ್ಕೆ ಕಾರಣಗಳು ಹಲವಿರ ಬಹುದು. ಒಂದು ಈಗಾಗಲೇ ಮೇಲೆ ಹೇಳಿದಂತೆ, ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹಾಗೂ ಮತದಾರರೊಂದಿಗೆ ಉತ್ತಮ ಒಡನಾಟ
ಹೊಂದಿರದೇ ಇರುವುದು ಅಥವಾ ಆಡಳಿತ ವಿರೋಧಿ ಅಲೆ ಹೆಚ್ಚಿರುವುದರಿಂದ ಟಿಕೆಟ್ ಕೈತಪ್ಪಿದೆ. ಇಲ್ಲವೇ, ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಅಭ್ಯರ್ಥಿ ಗೆಲ್ಲುವುದು ಕಷ್ಟ ಎನ್ನುವುದು ಸ್ಪಷ್ಟವಾಗಿರುವುದರಿಂದಲೂ ಟಿಕೆಟ್ ನೀಡದೇ ‘ರಿಸ್ಕ್’ ತಗೆದುಕೊಂಡಿರಬಹುದು.

ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಕೆಲ ಹಾಲಿ ಶಾಸಕರು, ಬಿಜೆಪಿ ತೊರೆದು ಕಾಂಗ್ರೆಸ್ ಅಥವಾ ಇತರ ಪಕ್ಷಗಳಿಗೆ ಹೋಗಿರುವುದರಿಂದ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಈ ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ವರಿಷ್ಠರು ಅಘೋಷಿತವಾಗಿ 75 ವರ್ಷಮೇಲ್ಪಟ್ಟವರನ್ನು ಸಕ್ರಿಯ ರಾಜಕಾರಣದಿಂದ ಹಿಂದಕ್ಕೆ
ಕಳುಹಿಸಿ ಯುವಕರಿಗೆ ಅವಕಾಶ ನೀಡಬೇಕು ಎನ್ನುವ ಕಾರಣಕ್ಕಾಗಿಯೂ ಇದಾಗಿದೆ.

ಆದರೆ 75 ವರ್ಷ ಮೇಲ್ಪಟ್ಟ ಹಾಲಿ ಶಾಸಕರು ಸಹಜವಾಗಿಯೇ, ಆ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುತ್ತಾರೆ. ಕೆಲವರು, ಪಕ್ಷಕ್ಕಿಂತ ಹೆಚ್ಚಾಗಿ ತಾವೇ
ಹೆಚ್ಚಾಗಿರುತ್ತಾರೆ. ಅಂತಹ ಕ್ಷೇತ್ರದಲ್ಲಿ ವಂಶಪಾರಂಪರ್ಯದ ರೀತಿಯಲ್ಲಿ ಶಾಸಕರು ಆಯ್ಕೆಯಾಗುವುದನ್ನು ನೋಡಿದ್ದೇವೆ. ಕರ್ನಾಟಕದಲ್ಲಿಯೂ ಈ ರೀತಿಯ ಹಲವು ಕ್ಷೇತ್ರಗಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಎಲ್ಲದಕ್ಕೂ ಒಂದು ಬದಲಾವಣೆಯ ಗಾಳಿ ಬೇಕೇ ಬೇಕಿತ್ತು. ಆ ಗಾಳಿ ಇದೀಗ ಉತ್ತರ ಪ್ರದೇಶ ಚುನಾವಣೆಯ ಮೂಲಕ ಬಿಜೆಪಿಯಲ್ಲಿ ಶುರುವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಈ ಪ್ರಯೋಗ ಕೇವಲ ಉತ್ತರ ಪ್ರದೇಶಕ್ಕೆ ಸೀಮಿತವಾಗುವುದಿಲ್ಲ ಎನ್ನುವ ಗುಸು-ಗುಸು ಈಗಾಗಲೇ ಬಿಜೆಪಿಯಲ್ಲಿ ಶುರುವಾಗಿದೆ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ರಾಜ್ಯ ಉತ್ತರ ಪ್ರದೇಶ. ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಬೇಕು ಎನ್ನುವ ಹಠಕ್ಕೆ ಬಿಜೆಪಿ ಬಿದ್ದಿದೆ. ಅದಕ್ಕಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶದ ಚುನಾವಣಾ ರ‍್ಯಾಲಿಯಲ್ಲಿ ಹೆಚ್ಚಾಗಿ ಬಿಂಬಿಸಲಾಗು ತ್ತಿದೆ. ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೂ,  ರೀತಿಯ ರಿಸ್ಕ್ ತಗೆದುಕೊಳ್ಳುತ್ತಿರುವುದನ್ನು ನೋಡಿದರೆ, ಮುಂದಿನ ಒಂದುವರೆ ವರ್ಷದಲ್ಲಿ ಕರ್ನಾಟಕದಲ್ಲಿ ಎದುರಾಗ ಲಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಇದು ಜಾರಿಯಾಗಲಿದೆ.

ಈಗಾಗಲೇ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಬದಲು ಅಚ್ಚರಿಯ ರೀತಿಯಲ್ಲಿ ಕೆಲವೊಮ್ಮೆ ಆಯ್ಕೆ ಪ್ರಕ್ರಿಯೆಗಳು ಕರ್ನಾಟಕದಲ್ಲಿಯೂ ನಡೆದಿದೆ. ಇದರೊಂ
ದಿಗೆ ರಾಜ್ಯ ಬಿಜೆಪಿಯಿಂದ ಕಳುಹಿಸಿದ ಪಟ್ಟಿ ಹೊರತಾಗಿ, ಅಚ್ಚರಿಯ ರೀತಿಯಲ್ಲಿ ರಾಜ್ಯಸಭೆ, ವಿಧಾನಪರಿಷತ್‌ಗೆ ಆಯ್ಕೆಯಾಗಿರುವುದನ್ನು ನೋಡಿದ್ದೇವೆ. ಒಂದು ಹಂತದಲ್ಲಿ ಇದು ಯಡಿಯೂರಪ್ಪ ಅವರ ಹಿನ್ನಡೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿದ್ದವು. ಆದರೆ ಇದೇ ಮಾಡೆಲ್ ಅನ್ನು ದೇಶದೆಲ್ಲೆಡೆ ಮಾಡುವ ಲೆಕ್ಕಾಚಾರ ದಲ್ಲಿ ಬಿಜೆಪಿಯಿದೆ.

ಹಾಗೇ ನೋಡಿದರೆ ಕರ್ನಾಟಕದಲ್ಲಿ ಮುಂದಿನ ಚುನಾವಣೆಗೂ ಮೊದಲೇ ನಾಯಕತ್ವಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಆಗ್ಗಾಗೆ ಕೇಳಿಬರುತ್ತಿದೆ. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗಿನಿಂದಲೂ ‘ಹೊಸ ಮುಖ’ಕ್ಕೆ ಆದ್ಯತೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇದೆ. ಆದರೆ ಆ ಮುಖ ಯಾವುದು ಎನ್ನುವ ಬಗ್ಗೆ ಮಾತ್ರ ಸ್ಪಷ್ಟನೆ ಇಲ್ಲಿಯವರೆಗೆ ಸಿಕ್ಕಿಲ್ಲ. ಉತ್ತರ ಪ್ರದೇಶದ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಬದಲಾವಣೆ ಮಾಡಲು ಹೊರಟರೆ, ಹಲವು ಶಾಕಿಂಗ್ ಬದಲಾವಣೆಯಾಗುವುದರಲ್ಲಿ ಅನುಮಾನವೇ ಇಲ್ಲ.

ಈಗಾಗಲೇ ಕರ್ನಾಟಕದಲ್ಲಿ 72 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಬಹುತೇಕ ಡೌಟ್ ಎನ್ನುವುದು ಖಾತ್ರಿಯಾಗಿದೆ. ಇದರೊಂದಿಗೆ ಕ್ಷೇತ್ರದಲ್ಲಿ ಹೆಸರು ಕೆಡಿಸಿಕೊಂಡಿರುವ ಹಾಗೂ ಪಕ್ಷದ ಸಂಘಟನೆಯಲ್ಲಿ ಹೆಚ್ಚು ಕಾಣಿಸಿಕೊಳ್ಳದೇ ಇರುವ ಹಲವು ಶಾಸಕರನ್ನು ಗಮನಿಸಿ, ಅವರಿಗೆ ‘ಬದಲಿ’ ವ್ಯವಸ್ಥೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿಯೂ ವರಿಷ್ಠರಿದ್ದಾರೆ. ಆದರೆ ಉತ್ತರ ಪ್ರದೇಶದ ರೀತಿಯಲ್ಲಿಯೇ ಕರ್ನಾಟಕದಲ್ಲಿಯೂ ಆಗುವುದೇ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ.

70 ವರ್ಷ ಮೇಲ್ಪಟ್ಟ ಕನಿಷ್ಠ 10ಕ್ಕೂ ಹೆಚ್ಚು ಶಾಸಕರು ಬಿಜೆಪಿಯಲ್ಲಿದ್ದಾರೆ. ಆದರೆ ಇವರಲ್ಲಿ ಬಹುತೇಕತು ತಮ್ಮ ನಂತರ ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬೇಕು. ಇಲ್ಲವೇ, ಪಕ್ಷದ ವಿರುದ್ಧ ನಿಲ್ಲುತ್ತೇವೆ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ಲೋಕಸಭಾ ಚುನಾವಣೆ ಗಮನದಲ್ಲಿರಿಸಿಕೊಂಡು ನೋಡುವುದಾದರೆ ಉತ್ತರ ಪ್ರದೇಶ ಚುನಾವಣೆ ಬಿಜೆಪಿ ಪಾಲಿಗೆ ಪ್ರಮುಖ ಚುನಾವಣೆ. ಅಲ್ಲಿಯೇ ಹೊಸ ಮುಖಗಳ ಪ್ರಯೋಗಕ್ಕೆ ಬಿಜೆಪಿ ಕೈ ಹಾಕಿರುವುದನ್ನು ಗಮನಿಸಿದರೆ, ಬಿಜೆಪಿ ವರಿಷ್ಠರು ಈಗ ಹುಡುಕಾಡುತ್ತಿರುವುದು ಮುಂದಿನ ವರ್ಷದ ಚುನಾವಣೆ
ಅಲ್ಲವೇ ಅಲ್ಲ, ಬದಲಿಗೆ ಮುಂದಿನ 10 ವರ್ಷದಲ್ಲಿ ಪಕ್ಷ ಸಂಘಟನೆಗೆ ಬೇಕಿರುವ ತಯಾರಿಯನ್ನು ಈಗಿನಿಂದಲೇ ಆರಂಭಿಸಿದೆ ಎನ್ನುವುದು ಸ್ಪಷ್ಟ. ಈ ರೀತಿಯ ಪ್ರಯೋಗ ಉತ್ತರ ಪ್ರದೇಶಕ್ಕೆ ಮಾತ್ರವೇ ಸೀಮಿತವಾಗಲಿದೆಯೇ ಅಥವಾ ಕರ್ನಾಟಕದಲ್ಲಿಯೂ ಮುಂದುವರಿಯಲ್ಲಿದೆಯೇ ಎನ್ನುವುದನ್ನು ನೋಡಬೇಕಿದೆ.

ಏಕೆಂದರೆ, ಕರ್ನಾಟಕದಲ್ಲಿರುವ ರಾಜಕೀಯ ಲೆಕ್ಕಾಚಾರಗಳೇ ಬೇರೆ ಅಲ್ಲವೇ!