Friday, 13th December 2024

ಹೂವು-ಹಾಡುಗಳ ರಾಶಿ ಓಲೆ, ಭಾವೈಕ್ಯಗಾನದ ಉರುಟಣೆ ಉಯ್ಯಾಲೆ

ತಿಳಿರು ತೋರಣ

srivathsajoshi@yahoo.com

ಅಂಕಣಬರಹಕ್ಕೆ ಮೆಚ್ಚುಗೆ ಬಂತೆನ್ನುವುದಕ್ಕಿಂತಲೂ, ಹಾಡುಗಳನ್ನು ಅರಸುತ್ತ ಹೂದೋಟದಲ್ಲಿ ವಿಹರಿಸಿ ಮನಸ್ಸಿಗೆ ತಂಪನೆರೆದುಕೊಂಡ ಅನುಭೂತಿ ಓದುಗರದಾಯ್ತು, ಮನೆಮಂದಿಯೆಲ್ಲ ಸೇರಿ ಹೂಮಾಲೆ ಹೂಗುಚ್ಛಗಳನ್ನು ಹಾಡುಗಳಲ್ಲಿ ಹುಡುಕಿದರು, ಒಂದೊಂದು ಹಾಡು ನೆನಪಾಗುತ್ತಿದ್ದಂತೆಯೂ ಹಿರಿಹಿರಿ ಹಿಗ್ಗಿದರು- ಎಂಬುದೇ ಹೆಚ್ಚು ಹೃದಯಸ್ಪರ್ಶಿಯೆನಿಸಿದ ಸಂಗತಿ.

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆಯನ್ನು ‘ಅತ್ತೆಗೂ ಸೊಸೆಗೂ ಒಂದೇ ಕಾಲ(ಮ್)’ ಎಂದು ನಾನೊಮ್ಮೆ ಪದವಿನೋದಕ್ಕೆ ಒಳಪಡಿಸಿದ್ದೆ. ಹನ್ನೆರಡು ವರ್ಷಗಳ ಹಿಂದೆ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಅಂಕಣ ಬರೆಯುತ್ತಿದ್ದಾಗಿನ ಮಾತಿದು. ಒಮ್ಮೆ ಒಂದು ಅಂಕಣ-ಬರಹದಲ್ಲಿ ಒಂದಿಷ್ಟು ಕನ್ನಡ ಚಿತ್ರಗೀತೆಗಳನ್ನು- ಅವುಗಳ ಸಾಹಿತ್ಯದಲ್ಲಿ ಕೋಟಿ, ಲಕ್ಷ, ಸಾವಿರ, ನೂರು, ಐವತ್ತು, ಹತ್ತು, ಒಂಬತ್ತು, ಎಂಟು, ಏಳು, ಆರು… ಮುಂತಾಗಿ ಯಾವುದೇ ಅಂಕಿ-ಸಂಖ್ಯೆ ಬರುವಂಥವನ್ನು- ಆಯ್ದುಕೊಂಡು ಸಂಖ್ಯೆಗಳ ಇಳಿಕೆ ಕ್ರಮದಲ್ಲಿ ಪೋಣಿಸಿ ‘ಹೀಗೂ ಒಂದು ಕನ್ನಡ ಚಿತ್ರಗೀತೆಗಳ ಕೌಂಟ್‌ಡೌನ್!’ ಎಂಬ ಶೀರ್ಷಿಕೆ ಕೊಟ್ಟು ಬರೆದಿದ್ದೆ.

ಕೌಂಟ್‌ಡೌನ್ ಅನ್ನು ಒಂದರವರೆಗೆ ತಂದು ನಿಲ್ಲಿಸಿ ಸೊನ್ನೆ ಇರುವ ಚಿತ್ರಗೀತೆ ಯಾವುದಾದರೂ ನೆನಪಾದರೆ ತಿಳಿಸಿರೆಂದು ಓದುಗರಿಗೆ ಪಂಥಾಹ್ವಾನ ಕೊಟ್ಟಿದ್ದೆ. ಆಗಿನ್ನೂ ಫೇಸ್‌ಬುಕ್ ವಾಟ್ಸ್ಯಾಪ್‌ಗಳು ಸರ್ವವ್ಯಾಪಿ ಆಗಿರಲಿಲ್ಲ. ಇಮೇಲ್ ಮೂಲಕವಷ್ಟೇ ಸಂವಹನ. ಆದರೂ ರಾಶಿ ರಾಶಿ ಮಿಂಚೋಲೆಗಳು ಬಂದಿದ್ದವು. ಸೊನ್ನೆ ಇರುವ ಚಿತ್ರಗೀತೆಗಳನ್ನಷ್ಟೇ ಅಲ್ಲದೆ ಬೇರೆ ಸಂಖ್ಯೆಗಳಿರುವುವನ್ನೂ ಓದುಗರು ನೆನಪಿನಾಳಕ್ಕೆ ಗಾಳಹಾಕಿ ಹುಡುಕಿ ತಂದಿದ್ದರು.

ಒಬ್ಬರಂತೂ ಪೂರ್ಣಸಂಖ್ಯೆಗಳಷ್ಟೇ ಏಕೆ, ೧/೨ ಅಂತ ಭಿನ್ನರಾಶಿ ಇರುವ ಹಾಡೂ ಕನ್ನಡದಲ್ಲಿದೆ ಎನ್ನುತ್ತ ‘ಶಿವ ಅಂತ ಹೋಗುತ್ತಿದ್ದೆ ರೋಡಿನಲಿ… ಅರ್ಧ ಟ್ಯಾಂಕು ಪೆಟ್ರೋಲ್ ಇತ್ತು ಬೈಕಿನಲಿ…’ ಜಾಕಿ ಚಿತ್ರದ ಹಾಡನ್ನು ನೆನಪಿಸಿದ್ದರು.

ಅಂಥದೊಂದು ಅನನ್ಯತೆ ಮೆರೆದು ಮೆಚ್ಚುಗೆಗೆ ಪಾತ್ರರಾಗಿದ್ದರು. ಆ ಚಟುವಟಿಕೆಯಲ್ಲಿ ನನಗೆ ಹೆಚ್ಚು ಖುಶಿಯೆನಿಸಿದ್ದು ಓದುಗರು ಅಂಕಣಬರಹ ಮೆಚ್ಚಿದರು ಎಂಬುದಲ್ಲ; ಮರೆತೇಹೋಗಿದ್ದ ಚಿತ್ರಗೀತೆಗಳನ್ನೆಲ್ಲ ನೆನಪಿಸಿಕೊಂಡು ಬರೆದು ತಿಳಿಸಿದರು ಎಂಬುದೂ ಅಲ್ಲ; ಬದಲಿಗೆ, ‘ಮನೆಯಲ್ಲಿ ಎಲ್ಲರೂ ಸೇರಿ ಹಾಡುಗಳ ಹುಡುಕಾಟ ನಡೆಸಿದೆವು…’, ‘ನಾನೂ-ನನ್ನೆಜಮಾನ್ರೂ ಸ್ಪರ್ಧೆಗಿಳಿದವರಂತೆ ಹಾಡುಗಳ ಬೆನ್ನಟ್ಟಿದೆವು…’, ‘ಅಮ್ಮ ನನಗೆ ಫೋನ್‌ನಲ್ಲಿ ಈ ಹಾಡುಗಳನ್ನು ತಿಳಿಸಿ ನಿಮಗೆ ಇಮೇಲ್ ಮಾಡಲು ಹೇಳಿದ್ದಾರೆ…’ ರೀತಿಯ ಪತ್ರಗಳು. ಕೇವಲ ಮನೋರಂಜನೆಗೆಂದು ಕೊಟ್ಟಿದ್ದ ‘ಟಾಸ್ಕ್’ ಮನೆಮಂದಿಯನ್ನೆಲ್ಲ ಒಗ್ಗೂಡಿಸಿತ್ತೆಂದರೆ ಅದಕ್ಕಿಂತ ಹೆಚ್ಚಿನದೇನು ಬೇಕು!

ಮರುವಾರದ ಅಂಕಣದಲ್ಲಿ ಅವೆಲ್ಲದರ ಕೃತಜ್ಞತಾ ಪೂರ್ವಕ ಉಲ್ಲೇಖ ಮಾಡಿದ್ದೆ. ಒಂದು ಪತ್ರವನ್ನಂತೂ ವಿಶೇಷವಾಗಿ ಹೈಲೈಟ್ ಮಾಡಿದ್ದೆ. ಆ ಹೆಸರುಗಳನ್ನು ಈಗಲೂ ಜ್ಞಾಪಕ ಇಟ್ಟುಕೊಂಡಿದ್ದೇನೆ: ಬೆಂಗಳೂರಿನಿಂದ ಸರಸ್ವತಿ ಲಕ್ಷ್ಮೀನಾರಾಯಣ ಮತ್ತು ರಮ್ಯಾ ಸುಹಾಸ್ ಎಂಬುವವರು ಜಂಟಿಯಾಗಿ ಬರೆದಿದ್ದ
ಪತ್ರವದು. ಅವರು ಅತ್ತೆ-ಸೊಸೆ. ಹಾಗೆ ಪರಿಚಯ ತಿಳಿಸುತ್ತ ಇಬ್ಬರೂ ಸೇರಿ ಸಂಖ್ಯಾಗೀತೆಗಳನ್ನು ಕಲೆಹಾಕಿ ಅಂದವಾಗಿ ಬರೆದು ಕಳುಹಿಸಿದ್ದರು. ‘ಹಾಡುಗಳ ಪಟ್ಟಿಗಿಂತಲೂ ಇವರ ಅನ್ಯೋನ್ಯತೆಗೆ ತಲೆದೂಗಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂತಾ ರಲ್ಲಾ, ಇಲ್ಲಿ ಅತ್ತೆಗೂ ಸೊಸೆಗೂ ಒಂದೇ ಕಾಲ(ಮ್)!’ ಎಂದು ಆ ಅತ್ತೆ-ಸೊಸೆ ಜೋಡಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದೆ.

ಕಳೆದವಾರ ತಿಳಿರುತೋರಣ ಅಂಕಣದಲ್ಲಿ ‘ಹಲವು ಹೂವುಗಳ ಹೆಸರಿರುವ ಹಳೆಯ ಹಾಡುಗಳ ಹುಡುಕುವಿಕೆ’ ಚಟುವಟಿಕೆಯನ್ನು ಓದುಗರ ಮುಂದೊಡ್ಡಿದಾಗ ಬಂದ ಪ್ರತಿಕ್ರಿಯೆಗಳು ಈ ಮಧುರ ನೆನಪುಗಳನ್ನು ಮತ್ತೊಮ್ಮೆ ತಾಜಾ ಆಗಿಸಿದುವು. ಇಲ್ಲೂ ಅಷ್ಟೇ. ಅಂಕಣಬರಹಕ್ಕೆ ಮೆಚ್ಚುಗೆ ಬಂತೆನ್ನುವುದಕ್ಕಿಂತಲೂ, ಹಾಡುಗಳನ್ನು ಅರಸುತ್ತ ಹೂದೋಟದಲ್ಲಿ ವಿಹರಿಸಿ ಮನಸ್ಸಿಗೆ ತಂಪನೆರೆದುಕೊಂಡ ಅನುಭೂತಿ ಓದುಗರದಾಯ್ತು, ಮನೆಮಂದಿಯೆಲ್ಲ ಸೇರಿ ಹೂಮಾಲೆ ಹೂಗುಚ್ಛಗಳನ್ನು ಹಾಡುಗಳಲ್ಲಿ ಹುಡುಕಿದರು, ಒಂದೊಂದು ಹಾಡು ನೆನಪಾಗುತ್ತಿದ್ದಂತೆಯೂ ಹಿರಿಹಿರಿ ಹಿಗ್ಗಿದರು – ಎಂಬುದೇ ಹೆಚ್ಚು ಹೃದಯಸ್ಪರ್ಶಿಯೆನಿಸಿದ ಸಂಗತಿ. ಅದನ್ನು ಗೌರವಿಸಲಿಕ್ಕೆಂದೇ ಈ ವಾರದ ಅಂಕಣವನ್ನು ಹೀಗೆ ವಿನಿಯೋಗಿಸುತ್ತಿದ್ದೇನೆ.

ಪತ್ರಿಸಿದ ಪ್ರತಿಯೊಬ್ಬರ ಹೆಸರನ್ನೂ ಸೇರಿಸಬೇಕೆಂದರೂ ಅದು ಕಾರ್ಯಸಾಧುವಲ್ಲ. ಆದ್ದರಿಂದ ಪ್ರಾತಿನಿಽಕವಾಗಿ, ಹೂವಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧ
ಎಂಬುದನ್ನು ಗೌರವಿಸುತ್ತ, ಕೆಲವೇಕೆಲವು ಪತ್ರಗಳನ್ನು ಆಯ್ದುಕೊಂಡು ಅವುಗಳ ಮೂಲಕವೇ ಎಲ್ಲರಿಗೂ ಮೆಚ್ಚುಗೆ ಅಭಿನಂದನೆ ಧನ್ಯವಾದ ತಿಳಿಸುತ್ತಿದ್ದೇನೆ. ಹೂವುಗಳ, ಹಾಡುಗಳ, ಮತ್ತು ಹೂವು-ಹಾಡುಗಳ ಹುಚ್ಚು ನನಗಿಂತಲೂ ಹೆಚ್ಚು ಇರುವವರು ಇದ್ದಾರೆಂದು ಪ್ರತಿಕ್ರಿಯೆಗಳಿಂದ ತಿಳಿದಾಗಿನ ಸಂತಸದ
ಅಭಿವ್ಯಕ್ತಿಯಿದು.

‘ದೇವ ಕಾಶಿ ವಿಶ್ವೇಶ್ವರನ ಸೋಮವಾರದ ಅಭಿಷೇಕ… ಅನ್ನಪೂರ್ಣೆ ಅರಿಶಿನಕುಂಕುಮ ಸೇವೆ ನೋಡೋಣ ಬನ್ನಿ…’ ಎಂದು ಆರಂಭವಾಗುವ ಸಂಪ್ರದಾಯ ಗೀತೆಯೊಂದನ್ನು ನೆನಪಿಸಿಕೊಂಡು ನನ್ನ ಅಕ್ಕ ಛಾಯಾ ಹೆಬ್ಬಾರ್ ಬರೆದುಕಳುಹಿಸಿದ್ದೇ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬಂದ ಮೊತ್ತಮೊದಲ ಹೂವುಹಾಡು.
ಅದರ ಒಂದು ಚರಣದಲ್ಲಿ ‘ಸಹಸ್ರ ಬಿಲ್ವ ತುಂಬೆ ಹೂವು ಪತ್ರೆ ಪುಷ್ಪ ಪಾರಿಜಾತ… ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆ…’ ಎಂದು ಹೂವುಗಳ  ಸರಮಾಲೆಯೇ ಇದೆ.

ಬಾಲ್ಯದಲ್ಲಿ ನಮ್ಮನೆ ಯಲ್ಲಿ ಅಕ್ಕಂದಿರು ಮತ್ತು ನನ್ನ ಅಮ್ಮ ಸಹ ಇದನ್ನು ಹಾಡುತ್ತಿದ್ದದ್ದು ಕೇಳಿದ ನೆನಪಿದೆ. ಲೇಖನ ಬರೆಯುವಾಗ ನೆನಪಾಗಿರಲಿಲ್ಲ ಅಷ್ಟೇ.
ಬಹುಶಃ ಇದು ಕರ್ನಾಟಕದ ಬೇರೆಬೇರೆ ಭಾಗಗಳಲ್ಲೂ ಪರಿಚಿತ ವಿರುವ ಸಂಪ್ರದಾಯಗೀತೆ ಎಂದುಕೊಂಡಿ ದ್ದೇನೆ. ಏಕೆಂದರೆ ಶಿರಸಿಯಿಂದ ವೀಣಾ ಹೆಗಡೆ ಅವರಿಗೂ ತತ್‌ಕ್ಷಣಕ್ಕೆ ನೆನಪಾದದ್ದು ಈ ಹಾಡೇ (ಆಮೇಲೆ ಅವರು ದಿನಕರ ದೇಸಾಯಿಯವರ ‘ಜಾಜಿ ಮಲ್ಲಿಗೆ ಬಕುಲ ಸೇವಂತಿಯಂತೆ| ದಾಸಾಳಕೆಲ್ಲಿಹುದು ಪರಿಮಳದ ಚಿಂತೆ? ಚಿಂತೆಯಿಲ್ಲದ ಹೂವು ಅರಳಿ ಪ್ರತಿನಿತ್ಯ| ಹನ್ನೆರಡು ತಿಂಗಳೂ ಸಾರುತಿದೆ ಸತ್ಯ’ ಚೌಪದಿಯನ್ನೂ ನೆನಪಿಸಿದರು.

ಆಶ್ಚರ್ಯವೆಂದರೆ ಈ ಚೌಪದಿ ಹಿಂದೊಮ್ಮೆ ದಾಸವಾಳದ ಬಗ್ಗೆ  ರೆದಿದ್ದ ಅಂಕಣಬರಹದ ಸಂದರ್ಭದಲ್ಲಿ ಪ್ರಸ್ತಾವವಾಗಿತ್ತು; ಈಬಾರಿ ನನಗೇ ಮರೆತುಹೋಗಿತ್ತು)! ಬೆಂಗಳೂರಿನಿಂದ ವರಲಕ್ಷ್ಮೀ ಮುಕುಂದ ರಾವ್ ಅವರ ಪ್ರತಿಕ್ರಿಯೆಯಲ್ಲೂ ದೇವಕಾಶಿ ವಿಶ್ವೇಶ್ವರನದೇ ಹಾಡು, ಅವರ ಅತ್ತೆ ಆ ಒಂದು ಚರಣವನ್ನಷ್ಟೇ ಹಾಡಿದ್ದರ ಧ್ವನಿತುಣುಕಿನ ಸಹಿತ! ಜೊತೆಯಲ್ಲೊಂದು ಟಿಪ್ಪಣಿ: ‘ಕಳೆದೆರಡು ದಿನಗಳಿಂದ ಹೂವುಗಳ ಹಾಡುಗಳನ್ನೇ ಮೆಲುಕುಹಾಕುತ್ತಿದ್ದೇನೆ.

ಇತ್ತೀಚೆಗಷ್ಟೇ ನಾನು ಕೇಳಿದ ಹಾಡಿನ ಒಂದು ಸಣ್ಣ ತುಣುಕು ಇಲ್ಲಿದೆ. ಇದು ಕಾಶಿ ವಿಶ್ವೇಶ್ವರನಿಗೆ ಅಭಿಷೇಕ ಮತ್ತು ಅನ್ನಪೂರ್ಣೆಗೆ ಅರಿಷಿಣಕುಂಕುಮ ಸೇವೆ ಮಾಡುವಾಗ ಹಾಡುವ ಒಂದು ಸಂಪ್ರದಾಯದ ಹಾಡು. ಮೈಸೂರಿನಲ್ಲಿರುವ  ನ್ನ ಅತ್ತೆಯವರ ಧ್ವನಿಯನ್ನು ದೂರವಾಣಿ ಮೂಲಕ ರೆಕಾರ್ಡ್ ಮಾಡಿ ಕಳುಹಿಸುತ್ತಿದ್ದೇನೆ.’ ಆಹಾ! ಈಬಾರಿಯೂ ಅತ್ತೆ-ಸೊಸೆಗೆ ಒಂದೇ ಕಾಲ(ಮ್) ಆಯ್ತು ಅಂತ ಒಮ್ಮೆ ಅಂದ್ಕೊಂಡೆ. ಇವರಿಬ್ಬರು ಸೋದರತ್ತೆ-ಸೋದರಸೊಸೆ ಎಂದು ಆಮೇಲೆ ತಿಳಿಯಿತು. ಆದರೇನಂತೆ, ಬಾಂಧವ್ಯ ಬಂಧುರತೆ ಕಮ್ಮಿಯೇನಲ್ಲ.

ಹಾಡಿನ ಹುಡುಕಾಟ ಕಂಬೈಂಡ್ ಎಫರ್ಟ್ ಅನ್ನೋದು ಪ್ರಶಂಸಾರ್ಹ ವಿಶೇಷ. ಇನ್ನೊಂದು ಪ್ರಶಂಸಾರ್ಹ ಪ್ರತಿಕ್ರಿಯೆ ಕಳುಹಿಸಿದವರು ಜ್ಯೋತಿ ರಾಜೇಶ್. ಇವರು ಕುದುರೆ ಮುಖದವರು. (ಅಪಾರ್ಥ ಮಾಡ್ಕೋ ಬೇಡಿ! ಕುದುರೆಮುಖ ಊರಿನವರು. ಹಾಸ್ಯಪ್ರವೃತ್ತಿಯವರೆಂದು ಗೊತ್ತಿರುವುದರಿಂದ ಹೀಗೆ ಲೈಟಾಗಿ ತಮಾಷೆ ಮಾಡಬಲ್ಲೆ). ಜ್ಯೋತಿಯವರ ಪ್ರತಿಕ್ರಿಯೆ ನನಗೆ ಮೆಚ್ಚುಗೆ ಆಗಿದ್ದೇಕೆಂದರೆ ಅಂಕಣ ಓದಿಮುಗಿಸಿದ ಮರುಕ್ಷಣದಲ್ಲೇ ವಾಟ್ಸ್ಯಾಪ್‌ನಲ್ಲಿ ಪಟಪಟನೆ ಮೆಸೇಜು ಟೈಪ್ ಮಾಡಿ ಒಂದಲ್ಲ ಎರಡಲ್ಲ ಹತ್ತು ಹಾಡುಗಳನ್ನು ದಬದಬನೆ ನನ್ನ ಮೇಲೆ ಸುರಿದಿದ್ದಕ್ಕೆ. ಪ್ರತಿಯೊಂದರಲ್ಲೂ ಕನಿಷ್ಠ ಎರಡು ಹೂವುಗಳಿರುವುದನ್ನು ಖಾತ್ರಿ ಪಡಿಸಿದ್ದೀರಿ ತಾನೆ? ಮತ್ತು, ಲೇಖನದಲ್ಲಿ ಉದಾಹರಣೆಯಾಗಿ ಕೊಟ್ಟಿದ್ದವುಗಳನ್ನೇ ಸೇರಿಸಿಲ್ಲ ತಾನೆ? ಎಂದು ನಾನು ಕೇಳಿದ್ದಕ್ಕೆ ‘ಅದೆಲ್ಲ ನನಗೆ ಗೊತ್ತಿಲ್ಲ. ಲೇಖನ ಓದಿದಾಗಿನ ಖುಶಿಯಲ್ಲಿ ಏನೆಲ್ಲ ತೋಚಿತೋ ಎಲ್ಲವನ್ನೂ ತತ್‌ಕ್ಷಣ ಬರೆದುಕಳುಹಿಸಿದೆ!’ ಎಂದು ಪ್ರಾಮಾಣಿಕವಾಗಿ ಉತ್ತರಿಸಿದರು.

ಇಂತಹ ಲವಲವಿಕೆಯಿರುವ ವರೊಡನೆ ಸಂವಾದ ನನಗಿಷ್ಟ. ಜ್ಯೋತಿಯವರ ಪಟ್ಟಿಯಲ್ಲಿದ್ದ ದ್ದೊಂದು ಕುವೆಂಪು ಬರೆದ ಎಲ್ಲಾದರು ಇರು ಎಂತಾದರೂ
ಇರು… ಅದರಲ್ಲಿ ಬರುವ ‘ಕಾಜಾಣಕೆ ಗಿಳಿ ಕೋಗಿಲೆಯಿಂಪಿಗೆ… ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ… ಮಾವಿನ ಹೊಂಗೆಯ ತಳಿರಿನ ತಂಪಿಗೆ… ರಸ ರೋಮಾಂಚನಗೊಳುವಾತನ ಮನ’ ಇದನ್ನು ಬೆಂಗಳೂರಿನಿಂದ ಶುಭದಾ ಚಡಗ ಸೇರಿದಂತೆ ಬೇರೆ ಕೆಲವರೂ ನೆನಪಿಸಿಕೊಂಡಿದ್ದಾರೆ.

ಇಷ್ಟವಾದ ಮತ್ತೊಂದು ಪತ್ರ ಅಮೆರಿಕದ ಮರುಭೂಮಿ ರಾಜ್ಯ ಅರಿಝೋನಾದಿಂದ ಭವಾನಿ ಪ್ರಸಾದ್ ಅವರದು. ‘ಈ ಸಲದ ಸ್ವಾರಸ್ಯಕರ ತಿಳಿರುತೋರಣ ನೋಡಿ ಸಂತೋಷವಾಯಿತು. ವಿಧವಿಧ ಹೂವಿನ ಪರಿಮಳ ಬೀರುವ ಉದ್ಯಾನವನಕ್ಕೆ ಹೋದಂತೆ ಅನಿಸಿತು. ಇದರಿಂದ ಸ್ಪೂರ್ತಿಗೊಂಡು ನಮ್ಮ ಅರಿಝೋನಾ ಕನ್ನಡ  ಸಂಗೀತದ ‘ಇಂಚರ’ ಗುಂಪಿನ ಪ್ರತಿಯೊಬ್ಬರೂ ಉತ್ಸಾಹದಿಂದ ಬೇರೆಬೇರೆ ಹೂವುಗಳ ಹಾಡು ಹುಡುಕಿದೆವು. ಇಲ್ಲಿ ೧೧೯ ಡಿಗ್ರಿ ಫ್ಯಾರನ್‌ಹೀಟ್ ಬಿಸಿಲಝಳದಲ್ಲಿ ಬೇಯುತ್ತಿರುವ ನಮಗೆ ಇದು ಸ್ವಾಗತಾರ್ಹ ಚಟುವಟಿಕೆಯಾಯಿತು.

ನಾನು ಹುಡುಕುಹ್ಯಾಟ್ ಹಾಕಿಕೊಂಡು ಹುಡುಕಿದ ಹಾಡಿನ ಸಾಲು: ಜಾಜಿ ಮಲ್ಲಿಗೆ ಬಕುಳ ಚೆಲುಗುಲಾಬಿಯ ಗಂಧ… ಗಿಡಬಳ್ಳಿ ಎಲೆ ಕಾಯಿ ನದಿ ಗಿರಿ ಝರಿಗಳಿಂದ. ಇದು ಮಹಾಂತೇಶ ಶಾಸ್ತ್ರಿಯವರ ಯಾವ ಹಿರಿಕರ್ತನದು ಈ ಜಗದ ನಾಟಕವು ಭಾವಗೀತೆಯದು. ನನ್ನ ಗೆಳತಿಯೊಬ್ಬರ ಆಯ್ಕೆ: ಧವಳ ನೀಲಿ ಕನಕಾಂಬರಿ ಕೆಂಪು ಹೂದೋಟದ ಕಿರು ಹಾದಿಯಲಿ… ಸೇವಂತಿಗೆ ಮಲ್ಲಿಗೆ ಮಂದಾರ ಹೂಗಳ ಹೆಸರಿವೆ ಯಾದಿಯಲಿ. ಇದು ಭಾವಭೃಂಗ ಸಂಕಲನದಲ್ಲಿ ಎಚ್.ಎಸ್.ವೆಂಕಟೇಶ ಮೂರ್ತಿಯವರ ರಚನೆ.’ ನೋಡಿ! ಹೂವು-ಹಾಡು ಹುಡುಕುವಿಕೆಗೆ ಒಂದು ಗ್ರೂಪ್ -ಆಕ್ಟಿವಿಟಿ ಆಗಬಲ್ಲ ಉಪಯುಕ್ತತೆ ಇದೆಯೆಂದು ನಾನಂದುಕೊಂಡಿರಲಿಲ್ಲ.

ಅರಿಝೋನಾ ಕನ್ನಡಿಗರು ಅದನ್ನು ಅರ್ಥಪೂರ್ಣ ವಾಗಿ ಮಾಡಿತೋರಿಸಿದರು! ಲೇಖನದ ಉಪಯುಕ್ತತೆಯ ಇನ್ನೊಂದು ಆಯಾಮವನ್ನು ಕಂಡುಕೊಂಡವರು ಮಂಗಳೂರಿನಿಂದ ಸಫಿಯಾ ಹಮೀದ್, ‘ಸಂಗ್ರಹಯೋಗ್ಯ ಲೇಖನ. ಹೂಮನಸಿನ ಮಕ್ಕಳಿಗೆ ಹೂವನ್ನು ಕುರಿತು ವರ್ಕ್‌ಶಾಪ್, ಸ್ಪರ್ಧೆಗಳು, ಇತರೇ ಚಟುವಟಿಕೆಗಳನ್ನು ಮಾಡಿಸಲು ಉಪಯೋಗಿ ಪುಷ್ಪವೃಷ್ಟಿ’ ಎಂಬ ಪ್ರತಿಕ್ರಿಯೆಯ ಮೂಲಕ. ಅದನ್ನೋದಿದಾಗ ನೆನಪಾದದ್ದು, ಫೇಸ್‌ಬುಕ್‌ನಲ್ಲಿಯೂ ಒಂದಿಬ್ಬರು ಉಲ್ಲೇಖಿಸಿದ್ದ, ನಮ್ಮ ಕಾರ್ಕಳದ ಫೇಮಸ್ ಟೀಚರ್ ವಂದನಾ ರೈ ಅವರ ಕನ್ನಡ ಹೂವುಗಳ ಹೆಸರುಗಳು ಅಭಿನಯಗೀತೆ. ಅದರಲ್ಲಿ ಅವರು ಶಾಲೆಯ ಒಬ್ಬೊಬ್ಬ ಶಿಕ್ಷಕಿಯನ್ನೂ ಒಂದೊಂದು ಹೂವಿಗೆ ಸಮೀಕರಿಸಿ ಅವರೆಲ್ಲ ಒಬ್ಬೊಬ್ಬರಾಗಿ ಹೂವು ಹಿಡಿದುಕೊಂಡು ತರಗತಿಗೆ ಬಂದು ಮಕ್ಕಳೊಡನೆ ನೃತ್ಯದಲ್ಲಿ ಸೇರುವ ದೃಶ್ಯ. ಚಿಕ್ಕ ಮಕ್ಕಳಿಗೆ ಕಲಿಸುವಿಕೆಯನ್ನು ಹೇಗೆ ಆಸಕ್ತಿದಾಯಕವಾಗಿ, ಕ್ರಿಯಾಶೀಲವಾಗಿ ಮಾಡಬಹುದೆನ್ನುವುದಕ್ಕೆ ವಂದನಾ ರೈ ಪ್ರಯೋಗಗಳು ಅತ್ಯುತ್ತಮ ಮಾದರಿ.

ಕಳೆದವಾರದ ಲೇಖನದ ಇನ್ನೊಂದು ಕೊರತೆಯಾಗಿ ಉಳಿದುಕೊಂಡದ್ದು ಹರಿಹರನ ಪುಷ್ಪರಗಳೆ ಕಾವ್ಯದ ಉಲ್ಲೇಖ. ಅಪ್ರತಿಮ ಶಿವಭಕ್ತ ಚೆನ್ನಯ್ಯನು ಕರಿಕಾಲಚೋಳ ರಾಜನ ಕುದುರೆಗೆ ಮೇವನ್ನು ತರಲು ಹೋಗುತ್ತಿದ್ದ ನದೀತೀರದಲ್ಲಿ ಮರಳಿನ ಶಿವಲಿಂಗ ರಚಿಸಿ ವಿವಿಧ ಪುಷ್ಪಗಳಿಂದ ಅರ್ಚಿಸುತ್ತಿದ್ದನೆಂಬ
ವರ್ಣನೆ. ಪರಿಮಳದ ತಿರುಳೆನಿಪ ಮೊಲ್ಲೆ ಮಲ್ಲಿಗೆಗಳಿಂ| ಹರವರಿಯ ಕಂಪಿಡುವ ಸಂಪಗೆಯರಳ್ಗಳಿಂ| ಮರುಗ ದವನಂ ಪಚ್ಚೆ ಪಡ್ಡಳಿಯ ಪೂಗಳಿಂ| ಸುರಗಿ ಸುರಹೊನ್ನೆ ಚೆಂಗಣಿಗಿಲೆಯ ಪೂಗಳಿಂ… ಸಂಗಡಿಸಿ ಸಿಂಗರಿಸಿ ಪೂಜಿಸುತ್ತಿದ್ದ ರೀತಿ.

ಬೆಂಗಳೂರಿನಿಂದ ಭಾರತಿ ಅವರು ಈ ಕಾವ್ಯಭಾಗವನ್ನೂ ಬರೆದು ನೆನಪಿಸಿದ್ದಾರೆ. ಪುಷ್ಪರಗಳೆಯ ತುಂಬ ಹೂವಿನದೇ ಸಾಮ್ರಾಜ್ಯ, ಪುಷ್ಪಪ್ರಿಯರೆಲ್ಲ ಓದಲೇಬೇಕಾದ ಕಾವ್ಯವಿದು ಎಂದಿದ್ದಾರೆ ಪಿರಿಯಾಪಟ್ಟಣದ ಗೀತಾ ಸುಬ್ಬರಾವ್. ಪುಷ್ಪರಗಳೆಯನ್ನು ನೆನಪಿಸಿಕೊಂಡ ಇನ್ನಿಬ್ಬರು- ಬೆಂಗಳೂರಿನಿಂದ ಶ್ಯಾಮಲಾ ಕೆ.ಎಲ್ ಮತ್ತು ಮಂಗಳೂರಿನಿಂದ ಸಾವಿತ್ರಿ. ಆಸೂರಿ ರಾಮಸ್ವಾಮಿ ಅಯ್ಯಂಗಾರ್ ಕವಿಯ ಶ್ರೀನಿವಾಸ ಲೀಲಾವಿಲಾಸಂನಲ್ಲಿ ಹೂವುಗಳ ಉಲ್ಲೇಖದ ವಾರ್ಧಕ ಷಟ್ಪದಿಯೊಂದನ್ನು ಕಳುಹಿಸಿದವರು ತುಮಕೂರಿನ ಪ್ರಭಾವತಿ ಮೂರ್ತಿ.

ಹರಪನಹಳ್ಳಿಭೀಮವ್ವನ ಸಂಪತ್ ಶುಕ್ರವಾರದ ಹಾಡಿನಲ್ಲಿ ಹೂಗಳ ಪಟ್ಟಿಯಿದೆಯೆಂದು ೧೦೮ ಚರಣಗಳ ಎಂಟು ಪುಟದ ಪಿಡಿಎಫ್ ಕಳುಹಿಸಿದವರು ಮುಂಬೈಯಿಂದ ರಂಗಲಕ್ಷ್ಮಿ. ಅವರು ಮೂಲತಃ ಹಿರಿಯೂರಿನವರಂತೆ. ‘ನಾನು ಚಿಕ್ಕವಳಾಗಿದ್ದಾಗ ನಮ್ಮ ಅಜ್ಜನ ಮನೆಗೆ ಹೊಳೆನರಸೀಪುರಕ್ಕೆ ಹೋಗುತ್ತಿದ್ದೆ. ಅಲ್ಲಿ ಅಜ್ಜಿ ತುಳಸಿಪೂಜೆ ಮಾಡುತ್ತಾ ಆರತಿ ಎತ್ತುತ್ತಾ ಈ ಜಯಮಂಗಳಂ ನಿತ್ಯ ಶುಭಮಂಗಳಂ ಹಾಡನ್ನು ಹೇಳುತ್ತಿದ್ದರು. ಇದರಲ್ಲಿ ಪರಮತತ್ತ್ವಗಳೆಂಬೊ
ಪಾರಿಜಾತವ ಮುಡಿದು ಪರಮಾತ್ಮ ಗೌರಿಗಾರತಿ ಎತ್ತುವೆ… ಸಾಧು ಸಜ್ಜನರೆಂಬೊ ಸಂಪಿಗೆ ಹೂವ ಮುಡಿದು ಸಂಪನ್ನೆ ಗೌರಿಗಾರತಿ ಎತ್ತುವೆ… ಪಾಲಿಸು ಲಕ್ಷ್ಮಿ ಬೇಡುವೆ ವರವ ಲೀಲೆಯಿಂದಲೇ ಪರಿ ಪರಿ ಸುಮವ ಕೇದಿಗೆಯನು ದಿವ್ಯ ಕೇದಿಗೆ ಮನೋಹರ ಸೋದರಿ ಪಾಲಿಸು ನೀನು ಮೋದದಿಂದಲಿ ವರ ರೋಜಾ ಸುಮಂಗಲ ಪಾದರಿ ಪರಿಪರಿ ಪುಷ್ಪಗಳ… ಪತಿಭಾಗ್ಯವೆಂಬೋ ಮರುಗ ಮಲ್ಲಿಗೆಯ ಅತೀತದಿಂದಲಿ ಪಾಲಿಸು ಮತಿವಂತಳೇ ನಿನ್ನ ಬೇಡುತ್ತಲಿರುವೆನು ಸುತಳೆಂಬ ಸುತ್ತು ಮಲ್ಲಿಗೆ ಸುಮವ… ಅಂತೆಲ್ಲ ಬರುತ್ತದೆ’ ಎಂದು ಸವಿನೆನಪಿನಲ್ಲಿ ಕೆಲವು ಕ್ಷಣ ಕಳೆದ ಪುಳಕ ಹಂಚಿಕೊಂಡಿದ್ದಾರೆ ಟೊರಾಂಟೊದಿಂದ ಸುಧಾ ಸುಬ್ಬಣ್ಣ.

ಹೀಗೆಯೇ ‘ನಮ್ಮ ಅತ್ತೆ ಹೂ ಮುಡಿಸುವ ಶಾಸ್ತ್ರದಲ್ಲಿ ಒಂದು ಹಾಡು ಹೇಳುತ್ತಿದ್ದರು…’ ಎಂದು ಹುಬ್ಬಳ್ಳಿಯಿಂದ ರತ್ನಾ ಹುಲ್ಮನಿ, ‘ನಮ್ಮಮ್ಮನ ಹಾಡಿನ ಪುಸ್ತಕದಲ್ಲಿದ್ದ ಒಂದು ಭಕ್ತಿಗೀತೆ….’ ಎಂದು ಮೈಸೂರಿನ ಜಯಲಕ್ಷ್ಮೀ ರಾವ್, ‘ಹವ್ಯಕ ಹಾಡುಗಳಲ್ಲಿ ನನ್ನ ಅಮ್ಮ ಹಾಡುವ ಮತ್ತು ನನ್ನ ಇಷ್ಟದ ಹಾಡುಗಳಲ್ಲಿ ಒಂದಾದ ಕರುಣಿಸೋ ಹೂವ ಒಲಿದು ದೇವಾ…’ ಎಂದು ಬೆಂಗಳೂರಿನ ಸೌಮ್ಯಾ ಭಟ್, ‘ನನ್ನ ಮೊದಲ ಸಂಗೀತ ಗುರುಗಳು ಶ್ರೀಯುತ ಗರ್ತಿಕೆರೆ ರಾಘಣ್ಣ ನವರ ಮಗಳು ಶ್ರೀದೇವಿ ಗರ್ತಿಕೆರೆ ನಮಗೊಂದು ಹಾಡು ಹೇಳಿಕೊಟ್ಟಿದ್ದರು…’ ಎನ್ನುತ್ತ ಹದಿಮೂರು ಹೂವುಗಳ ಹೆಸರಿರುವ ಹಾಡು ಬರೆದುಕಳುಹಿಸಿದ ಬೆಂಗಳೂರಿನ ರಮ್ಯಾ ವಿನಯಚಂದ್ರ… ಇವರೆಲ್ಲ ಹೂವುಹಾಡಿನ ನೆಪದಲ್ಲಿ ಹಿರಿಯರನ್ನು ಸ್ಮರಿಸಿದ ರೀತಿ ಮೆಚ್ಚಬೇಕಾದ್ದು.

ಇಂಥವೇ  ಹಲವಾರು ಪತ್ರಗಳು. ಯಾವುದನ್ನು ಸೇರಿಸಲಿ ಯಾವುದನ್ನು ಬಿಡಲಿ ಎಂದು ತೋಚದ ಪರಿಸ್ಥಿತಿ. ಆದರೂ ಇದೊಂದು ಪತ್ರವನ್ನು ಎತ್ತಿಕೊಳ್ಳಲೇ ಬೇಕು ಎಂದು ವಿಶೇಷವಾಗಿ ಗುರುತಿಸಿದ್ದನ್ನು ಉಲ್ಲೇಖಿಸಿ ಈ ಪತ್ರಸಂಚಯವನ್ನು ಮುಗಿಸುತ್ತೇನೆ. ಇದನ್ನು ಬರೆದವರು ಮುಂಬೈಯಿಂದ ಉಮಾ ರಾವ್. ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿರುವವರು. ಕಳೆದವಾರವಿಡೀ ಹೂವು-ಹಾಡುಗಳನ್ನೇ ಧ್ಯಾನಿಸುತ್ತ ಕನಿಷ್ಠ ಏಳೆಂಟಾದರೂ ಸಂದೇಶಗಳನ್ನು, ಸ್ವಹಸ್ತಾಕ್ಷರಗಳಲ್ಲಿ ಬರೆದಿಟ್ಟಿದ್ದ ಹಾಡುಗಳ ಡಿಜಿಟಲ್ ಚಿತ್ರಗಳನ್ನು ಅವರು ನನಗೆ ಕಳುಹಿಸಿದ್ದಾರೆ.

ಅವುಗಳಲ್ಲಿ ಕಳಶಪ್ರಾಯವಾದುದು: ‘ಮೋಜಿನ ಒಂದು ವಿಷಯವನ್ನು ಹಂಚಿಕೊಳ್ಳುವೆ. ನನ್ನ ಮುತ್ತಾತನವರು ರಾಮಣ್ಣ ಎಂದು. ಅವರು ನನ್ನ ತಂದೆಯ ತಾಯಿಯ ತಂದೆ. ನಾನು ಹೈಸ್ಕೂಲಿಗೆ ಬರುವವರೆಗೂ ಬದುಕಿದ್ದರು. ನಮ್ಮ ಮನೆಗೆ ಆಗಾಗ ಬಂದು ಕೆಲವು ದಿನಗಳಿರುತ್ತಿದ್ದರು. ಅವರು ಯಾವಾಗಲೂ ಒಂದು
ಹಾಡನ್ನು ಗುನುಗುನಿಸುತ್ತಿದ್ದರು- ಪ್ರಾಣಕಾಂತನೆ ಕೇಳ್, ಗುಣವಂತನೆ ಚೆಂಡು ಕಟ್ಟಿ ಪಂದ್ಯದೊಳಾಡೋಣ ಬಾ ಬಾ ಬಾ. ಮಲ್ಲಿಗೆ ಸುಮ ಜಾಜಿಯು ಎಲ್ಲ ಕೂಡಿಸಿ ಬಲು ಉಲ್ಲಾಸದಿಂದ ಕಟ್ಟಿ ಮೆಲ್ಲನೆ ಎಸೆಯುವೆ ಬಾ ಬಾ ಬಾ- ಅಂತ. ಇದು ಉರುಟಣೆಯ ಹಾಡು ಎಂದು ನನಗೆ ಹೇಳಿದ್ದರಾದರೂ ಆಗ ನನಗೆ ಉರುಟಣೆ ಏನೆಂದು ಗೊತ್ತಿರಲಿಲ್ಲ. ಹಾಡಿನ ಮುಂದಿನ ನುಡಿಗಳು ಮರೆತುಹೋಗಿವೆ.

ನೋಡಿ, ಹೂವುಹಾಡುಗಳ ಅಂಕಣ ಏನೆಲ್ಲ ಮಧುರಸ್ಮೃತಿಗಳನ್ನು ಉದ್ದೀಪಿಸುತ್ತಿದೆ!’ ಹೌದಲ್ವಾ, ಉಮಾರವರ ಮುತ್ತಾತ ಅಂದ್ರೆ ನಾಲ್ಕು ತಲೆಮಾರುಗಳಷ್ಟು ಹಿಂದಿನ ನೆನಪುಗಳು! ಬಹುಶಃ ತನ್ನದೇ ಮದುವೆಯಲ್ಲಿ- ಅಂದರೆ ಮತ್ತೂ ಹತ್ತೈವತ್ತು ವರ್ಷಗಳ ಹಿಂದಿನ- ಉರುಟಣೆ ಸಂಪ್ರದಾಯ ನೆನಪಿಸಿಕೊಂಡು
ಪುಳಕಗೊಳ್ಳುತ್ತ ಹಾಡುತ್ತಿದ್ದರಿರಬಹುದು. ಇದನ್ನೀಗ ‘ಮುತ್ತಾತನಿಗೂ ಮರಿಮೊಮ್ಮಗಳಿಗೂ ಒಂದೇ ಕಾಲ(ಮ್)’ ಎನ್ನಬೇಕಾಯ್ತು! ಅಂದಹಾಗೆ ಉರುಟಣೆ ಅಂದ್ರೆ ನಿಮಗೆ ಗೊತ್ತಲ್ಲ? ಮದುವೆ ಸಮಾರಂಭದಲ್ಲಿ ಹಸೆಯ ಮೇಲೆ ಕುಳಿತ ವಧೂವರರು ಪರಸ್ಪರ ಅರಿಸಿನ-ಕುಂಕುಮ, ಗಂಧ, ಪುಷ್ಪಗಳನ್ನು ಅನುಲೇಪನ ಮಾಡುವ, ತಾಂಬೂಲ ನೀಡುವ, ಹೂವಿನ ಚೆಂಡಾಡುವ, ಬಿಂದಿಗೆಯ ನೀರಿನಲ್ಲಿ ಮುಳುಗಿಸಿಟ್ಟ ಉಂಗುರ ಯಾರು ಮೊದಲು ಹೊರತೆಗೆಯುತ್ತಾರೆಂದು ಸ್ಪರ್ಧಿಸುವ, ಒಗಟಿನ ಮೂಲಕ ಪರಸ್ಪರ ಹೆಸರು ಹೇಳಿಕೊಳ್ಳುವ, ಬಂಧು ಬಾಂಧವರಿಗೆಲ್ಲ ಮೋಜುಮಸ್ತಿಯ ರಸದೌತಣ ಒದಗಿಸುವ ಅತ್ಯಂತ ರೋಮಾಂಚ ಕವೂ ರೋಮ್ಯಾಂಟಿಕ್ಕೂ ಆದ ಸುಂದರ ಸಂಪ್ರದಾಯ.

ಅದೇ, ಶುಭಮಂಗಳ ಚಿತ್ರಗೀತೆಯಲ್ಲಿ ಬರುವ ‘ಭಾವತರಂಗವೇ ಸಪ್ತಪದಿ ನಾಗೋಲೆ ಭಾವೈಕ್ಯಗಾನವೇ ಉರುಟಣೆ ಉಯ್ಯಾಲೆ… ಭಾವೋನ್ಮಾದವೇ ಶೃಂಗಾರಲೀಲೆ ಬದುಕೇ ಭಾವದ ನವರಾಗ ಮಾಲೆ…’