Friday, 13th December 2024

ಲಸಿಕೆ ಓಕೆ ; ಟೂಲ್‌ ಕಿಟ್‌’ಗಳ ಬಗ್ಗೆ ಜೋಕೆ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ಕಳೆದ ವಾರ ಉತ್ತರ ಪ್ರದೇಶದ ಅಲಿಗಢದಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ನರ್ಸ್ ಮತ್ತು ಮೇಲ್ವಿಚಾರಕ ವೈದ್ಯನ ವಿರುದ್ಧ ಒಂಬತ್ತು ವಿವಿಧ ಕಾಯಿದೆಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇವರಿಬ್ಬರು ಮಾಡಿರುವ ಘನಂದಾರಿ ಕೆಲಸವೇನೆಂದರೆ, ಜೀವ ಉಳಿಸಿಕೊಳ್ಳಲು ನೆರವಾಗುವ ಲಸಿಕೆಯನ್ನು ಪಡೆಯಲು ಬರುವ ಮುಗ್ಧ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ತುಂಬಿದ ಸಿರಿಂಜನ್ನು ಚುಚ್ಚುತ್ತಾರೆ. ಆದರೆ ಔಷಧಿಯನ್ನು ದೇಹಸೇರಲು ಸಿರಿಂಜನ್ನು ಅದುಮದೆ ಹಾಗೇ ತೆಗೆದು ಕಸದಬುಟ್ಟಿಗೆ ಎಸೆಯುವುದು ಮತ್ತು ಯಶಸ್ವಿ ಲಸಿಕೆ ಪಡೆದವರ ಪೋರ್ಟಲ್‌ನಲ್ಲಿ ಅವರ ಹೆಸರನ್ನು ಸೇರಿಸುವುದು. ಪಾಪ, ತಾನು ಲಸಿಕೆ ಪಡೆದಿದ್ದೇನೆ ಎಂದು ಖುಷಿಯಿಂದ ಮನೆಗೆ ಬಂದು ಕರೋನಾ ತನಗೇನೂ ಮಾಡುವುದಿಲ್ಲ ಎಂದು ನೆಮ್ಮದಿ ಯಾಗಿದ್ದು, ಹಾಗೇನಾದರೂ ಕರೋನಾ ಸೋಂಕು ದೃಢಪಟ್ಟು ನರಳಿದರೆ ಮೋದಿ ವ್ಯಾಕ್ಸೀನ್ ಸರಿಯಿಲ್ಲ, ಅದು ಬರಿ ನೀರು, ಬಿಜೆಪಿ ಸರಕಾರದ ವ್ಯಾಕ್ಸೀನ್ ಡಮ್ಮಿ, ಮೋದಿ ರಾಜೀನಾಮೆ ಕೊಡಬೇಕು ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ.

ಈ ರೀತಿ ವ್ಯಾಕ್ಸೀನ್ ಚುಚ್ಚಿ ಔಷಧ ದೇಹ ಸೇರದಂತೆ ಮಾಡಿದ 29 ಲಸಿಕೆ ತುಂಬಿದ ಸಿರಿಂಜ್‌ಗಳು ಕಸದಬುಟ್ಟಿಯಲ್ಲಿ ಸಿಕ್ಕಿದ್ದ ರಿಂದ ಅದು ಅಲ್ಲಿಗೆ ಮಾತ್ರ ಸಮಾಪ್ತಿ ಆಯಿತೆನ್ನಿ. ಅಂದಹಾಗೆ ಆ ನರ್ಸ್ ಹೆಸರು ನಿಹಾಖಾನ್ ಮತ್ತು ಉಸ್ತುವರಿ ವೈದ್ಯನ ಹೆಸರು ಆರ್ಫೀನ್ ಜೆಹ್ರ. ಎರಡನೆಯದಾಗಿ ಪಂಜಾಬಿನ ಕಾಂಗ್ರೆಸ್ ಸರಕಾರ ಮಾಡಿದ ವ್ಯಾಕ್ಸೀನ್ ವ್ಯಾಪಾರ. ಕೇಂದ್ರ ಸರಕಾರದಿಂದ
ಲಸಿಕೆಯೊಂದನ್ನು ನಾನೂರು ರುಪಾಯಿಗಳಿಗೆ ಖರೀದಿಸಿ ಅದನ್ನು ಸಾರ್ವಜನಿಕರಿಗೆ ಉಚಿತವಾಗ ನೀಡಬೇಕಿದ್ದನ್ನು ಪಂಜಾಬ್ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಯೊಂದಕ್ಕೆ 1060 ರು.ನಂತೆ ಮಾರಿಕೊಂಡಿದೆ.

ಖಾಸಗಿ ಆಸ್ಪತ್ರೆಗಳು ಅದನ್ನು 1560 ರು.ನಂತೆ ಸಾರ್ವಜನಿಕರಿಗೆ ಮಾರಿಕೊಂಡು ಸಂತುಷ್ಟ ಗೊಂಡಿವೆ. ಉಚಿತವಾಗಿ ಪಡೆಯ ಬೇಕಿದ್ದ ಜನಸಾಮಾನ್ಯರು ಬಡವರು ಅಸಹಾಯಕರು ಮೋದಿ ವ್ಯಾಕ್ಸೀನ್ ಫ್ರೀಯಾಗಿ ಕೊಡ್ತಿಲ್ಲ, ಎಲ್ಲಾ ಶ್ರೀಮಂತರಿಗೆ ಮಾರಿ ಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತದೆ. ಆಶ್ಚರ್ಯವೆಂದರೆ ಆರೋಗ್ಯ ಸಚಿವ ಬಲ್ಬೀರ್‌ಸಿಂಗ್ ವ್ಯಾಕ್ಸೀನ್ ಕುರಿತು ನನಗೇನು ಗೊತ್ತಿಲ್ಲ, ಎಲ್ಲವನ್ನು ಪ್ರಧಾನ ಕಾರ್ಯದರ್ಶಿಗಳು ನೋಡಿಕೊಳ್ಳುತ್ತಿದ್ದಾರೆಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಆದರೆ ಇಲ್ಲಿ ಆರೋಗ್ಯ ಸಚಿವರಾದ ಡಾ.ಕೆ. ಸುಧಾಕರ್ ಅವರು ಹಗಲಿರುಳು ಹೊಣೆಗಾರಿಕೆಯಿಂದ ಶ್ರಮಿಸುತ್ತಿದ್ದರೂ ಕಾಂಗ್ರೆಸ್ ಅವರ ರಾಜೀನಾಮೆ ಕೇಳುತ್ತದೆ.

ಕೇಂದ್ರ ಸರಕಾರ ಲಸಿಕೆಯನ್ನು ಸರಿಯಾಗಿ ಪೂರೈಸುತ್ತಿಲ್ಲ, ಉಚಿತವಾಗಿ ನೀಡುತ್ತಿಲ್ಲ, ಬಡವರಿಗೆ ಸಿಗುತ್ತಿಲ್ಲ ಎಂದು ಬಾಯಿ ಬಡಿದುಕೊಳ್ಳುವ ಲಸಿಕೆಭಾಗ್ಯ ನೀಡಲು ಸಿದ್ಧ ಎನ್ನುತ್ತಿದ್ದ ಇಲ್ಲಿನ ಭಾಗ್ಯಪುರುಷನನ್ನು ಕೂಡಲೇ ಪಂಜಾಬ್ ರಾಜ್ಯಕ್ಕೆ ದಬ್ಬಬೇಕಿದೆ. ಮೂರನೆಯದು, ಜಾರ್ಖಂಡ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಲಸಿಕೆಯ ಕುರಿತು ವ್ಯವಸ್ಥಿತ ಅಪಪ್ರಚಾರ ಮಾಡು ವುದೇ ಗುರಿಯಾಗಿದೆ. ಮಹಾರಾಷ್ಟ್ರದಲ್ಲಿ ವ್ಯಾಕ್ಸಿನ್ ಮೂರು ಪಾಲಾಗಿದೆಯಷ್ಟೆ. ಕೇರಳದ ಚುನಾವಣೆ ಪ್ರಚಾರದಲ್ಲಿ ಉಚಿತ ವ್ಯಾಕ್ಸೀನ್ ಭರವಸೆ ನೀಡಿ ಈಗ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಆರಂಭವಾಗಿದೆ.

ಇನ್ನು ಪಶ್ಚಿಮಬಂಗಾಳದಲ್ಲಿ ಲಸಿಕೆಗೆ ಆಡಳಿತ ಪಕ್ಷದ ಬಣ್ಣಬಳಿದು ನೀಡಲಾಗುತ್ತಿದೆ. ರಾಜಸ್ಥಾನದಲ್ಲಿ ಲಸಿಕೆಗಳನ್ನು ಕಸದ ಬುಟ್ಟಿಗೆಸೆದು ಹಾಳುಮಾಡಲಾಗಿದೆ. ಇನ್ನು ಬೆಂಗಳೂರಿನ ಒಂದು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಪಂಚೆಪ್ಯಾಂಟು
ಹಾಸಿಕೊಂಡು ತಿಹಾರ್ ಜೈಲ್ ಆಕೃತಿಯನ್ನು ಅಪ್ಪಿಕೊಂಡಿರುವ ಪ್ರೀಪೇಡ್ – ಪೋಸ್ಟ್‌ಪೇಡ್ ಗಿರಾಕಿಯೊಬ್ಬ ಎಂಥ ಅವಿವೇಕಿಯೆಂದರೆ ಕೇಂದ್ರ ಸರಕಾರ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದರೂ ಅದನ್ನು ಮನಗಾಣದೇ, ಕೇಂದ್ರ ಸರಕಾರ ಲಸಿಕೆಯನ್ನು ಉಚಿತವಾಗಿ ನೀಡಬೇಕೆಂದು ಅಗ್ರಹಿಸುತ್ತಾನೆ.

ಆರಂಭದಲ್ಲಿ ವ್ಯಾಕ್ಸೀನ್ ನೀಡಲು ಶುರುಮಾಡಿದಾಗ ಅದನ್ನು ಮೋದಿ ವ್ಯಾಕ್ಸೀನ್ – ಬಿಜೆಪಿ ವ್ಯಾಕ್ಸೀನ್ ಎಂದೆ ಅಪಹಾಸ್ಯ, ಅಪಪ್ರಚಾರ ಮಾಡಿದರು. ಹೀಗಾಗಿ ಲಸಿಕೆ ಪಡೆಯಬೇಕಾದವರು ಹಿಂಜರಿಯುವಂತಾಗಿ ಲಕ್ಷಾಂತರ ಡೋಸ್‌ಗಳು ಸತ್ತು (ಎಕ್ಸಪೈರಿ ಡೇಟ್) ಹೋಗುವುದರಿಂದ ಅದನ್ನು ಬೇಡಿಕೆಯಿಟ್ಟ ದೇಶಗಳಿಗೆ ನೀಡು ವಂತಾಗಿಸಿದರು. ಆನಂತರ ಮೋದಿಗೆ
ನಮಗಿಂತ ಅನ್ಯ ದೇಶಗಳೇ ಹೆಚ್ಚಾದವೇ? ಎಂದು ಪ್ರಶ್ನಿಸಲಾರಂಭಿಸಿದರು.

ಒಟ್ಟಿನಲ್ಲಿ ಇವರಿಗೆ ಚೀನಾದೇಶ ತನ್ನ ಚೀನ ಐಟಂ ಡಬ್ಬಾ ವ್ಯಾಕ್ಸೀನನ್ನು ಭಾರತಕ್ಕೆ ನೀಡಿದ್ದರೂ ಇವರುಗಳು ಕಣ್ಣಿಗೊತ್ತಿ ಕೊಂಡು ಚುಚ್ಚಿಸಿಕೊಳ್ಳುತ್ತಿದ್ದರೇನೋ. ಆದರೆ ದೇಶದ ಸ್ವಾಭಿಮಾನಿ ವಿಜ್ಞಾನಿಗಳು, ವೈದ್ಯರುಗಳು ಕೇಂದ್ರ ಸರಕಾರದ
ಎಡೆಬಿಡದ ಪ್ರಯತ್ನ, ಉತ್ತೇಜನ ಮತ್ತು ಸಹಕಾರದಿಂದಾಗಿ ಕೆಲವೇ ತಿಂಗಳಲ್ಲಿ ಯಶಸ್ವಿ ಲಸಿಕೆಯನ್ನು ದೇಶಕ್ಕೆ ಅರ್ಪಿಸಿದರು. ಇದನ್ನು ದಿಲ್ಲಿಯ ಏಮ್ಸ್ ಜಿನೋಮಿಕ್ ಸೀಕ್ವೆನ್ಸ್‌ನಲ್ಲಿ ಅಧ್ಯಯನ ನಡೆಸಿ, ಎರಡೂ ಲಸಿಕೆ ಪಡೆದವರಿಗೆ ಸೋಂಕು ದೃಢಪಡುವ ಪ್ರಮಾಣ ತೀರಾ ಕಡಿಮೆ ಎಂದು ಸ್ಪಷ್ಟಪಡಿಸಿತು.

ಅಮೆರಿಕ ಅಧ್ಯಕ್ಷರ ವೈದ್ಯಕೀಯ ಸಲಹೆಗಾರ, ಸಾಂಕ್ರಾಮಿಕ ರೋಗಾಣು ತಜ್ಞ ಡಾ. ಅಂತೋಣಿ-ಸಿ ಭಾರತದ ಲಸಿಕೆಗೆ ೬೧೭ ರೂಪಾಂತರಿಗಳನ್ನು ಹಿಮ್ಮೆಟ್ಟಿಸುವ ಶಕ್ತಿಯಿದೆಯೆಂದು ಎಂದು ಒಪ್ಪಿಕೊಂಡರು. ಒಂದೊಂದು ರಾಜ್ಯ, ಒಂದೊಂದು ಪಕ್ಷಗಳು,
ಸಂಘಟನೆಗಳು, ಈ ವ್ಯಾಕ್ಸಿನ್ ವಿಚಾರವನ್ನೇ ಟೂಲ್ಕಿಟ್ ರಾಜಕೀಯದಲ್ಲಿ ಬಳಸಿಕೊಳ್ಳಲಾರಂಭಿಸುತ್ತಿರುವ ಕರ್ಮಕಾಂಡ ಗಳನ್ನು ಗಮನಿಸಿದ ಕೇಂದ್ರ ಸರಕಾರ ಕೂಡಲೇ ಎಚ್ಚೆತ್ತುಕೊಂಡಾಗಲೇ ಮೋದಿಯವರು ಇತ್ತೀಚೆಗೆ ಟಿವಿ ಪರದೆಗೆ ಬಂದು ಇಡೀ ದೇಶದ ನೂರಾ ಮೂವತ್ತು ಕೋಟಿ ಪ್ರಜೆಗಳಿಗೂ ಉಚಿತ ವ್ಯಾಕ್ಸೀನ್ ನೀಡುವ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.

ಅದೂ ಕೇಂದ್ರ ಸರಕಾರದ ನೆರಳಿನ ಈ ಯಾಗ ನಡೆಯುತ್ತದೆಂದು ಘೋಷಿಸಿದರು. ಆ ಮೂಲಕ ಲಸಿಕೆ ರಾಜಕೀಯವನ್ನು ಟೂಲ್‌ಕಿಟ್ ಸಂಯೋಜಕರನ್ನು ಏಕಾಏಕಿ ಬಡಿದುಹಾಕಿದರು. ಈ ನಿರ್ಣಯವನ್ನು ಅನೇಕರು ಇದು ನಮಗೆ ಸಿಕ್ಕ ಜಯ ಎಂದು
ಬೀಗುತ್ತಿದ್ದಾರೆ. ಆದರೆ ಈಗಾಗಲೇ ಇಪ್ಪತ್ತು ಕೋಟಿಗೂ ಹೆಚ್ಚು ಮಂದಿಗೆ ಉಚಿತವಾಗೇ ಲಸಿಕೆ ನೀಡಲಾಗಿರುವುದು ಇವರಿಗೆ ತಿಳಿದಿಲ್ಲವೇ? ಇಂಥವರ ಹರಾಮಿ ಕುತಂತ್ರಗಳಿಗೆ ಅವಕಾಶ ನೀಡಬಾರದೆಂದೇ ಮೋದಿಯವರು ಈ ತೀರ್ಮಾನ ಕೈಗೊಂಡಿರು ವುದು ಸ್ಪಷ್ಟ.

ಆದರೆ ಇದು ಇಷ್ಟಕ್ಕೇ ಮುಗಿಯುವುದಿಲ್ಲ. ನಿಜವಾದ ಆಟ ಶುರುವಾಗುವುದೇ ಇನ್ನು ಮುಂದೆ. ಇಷ್ಟು ದಿನ ರಾಜ್ಯ ಸರಕಾರಗಳಿಗೆ ನೀಡಿದ್ದ ಈ ಅಭಿಯಾನವನ್ನು ಕೇಂದ್ರ ಸರಕಾರವೇ ನಡೆಸುವುದರಿಂದ ಕೇವಲ ಕರೋನಾ ಸೋಂಕಿನ ವಿರುದ್ಧದ ಲಸಿಕೆ ಮಾತ್ರವಲ್ಲ, ವಿರೋಧ ಪಕ್ಷಗಳು, ದೇಶದ್ರೋಹಿಗಳು, ಟೂಲ್‌ಕಿಟ್ ಗಿರಾಕಿಗಳೂ, ಅಸಹಿಷ್ಣು ಗಂಜಿಗಿರಾಕಿಗಳನ್ನೂ ಮೆಟ್ಟಿನಿಲ್ಲ ಬೇಕಾದ ದೊಡ್ಡ ಸವಾಲನ್ನು ಕೈಗೆತ್ತಿಕೊಂಡಿದೆ.

ನಮ್ಮ ದೇಶದಲ್ಲಿ ಎಂತೆಂಥ ಮನಸ್ಥಿತಿಯವರಿದ್ದಾರೆಂದರೆ ಬಾರು – ರೆಸ್ಟೋರೆಂಟುಗಳ ಮುಂದೆ ಸಾವಿರಾರು ರುಪಾಯಿಗಳ ಫಾರಿನ್ ಬ್ರಾಂಡು ಎಣ್ಣೆಯನ್ನು ಸಾಲಿನಲ್ಲಿ ನಿಂತು ಖರೀದಿಸುತ್ತಾರೆ. ಅವಶ್ಯಕತೆ ಇಲ್ಲದಿದ್ದರೂ ಮೂರು ನಾಲ್ಕು ಬಂಗಲೆ, ಸೈಟು
ಅಪಾರ್ಟ್‌ಮೆಂಟ್, ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ಅನಗತ್ಯ ಕ್ಲಬ್ಬು – ಪಬ್ಬು – ರೆಸಾರ್ಟ್ – ಹೋಟೆಲ್ – ಗೇಮುಗಳಲ್ಲಿ ಮಜಾ ಉಡಾಯಿಸುತ್ತಾರೆ, ತಮ್ಮ ಮಕ್ಕಳನ್ನು ವಿದೇಶಿ ಮಜಾತಾಣಗಳಿಗೆ ಕಳುಹಿಸಿ ಅಲ್ಲಿ ಸತ್ತುಬೀಳುವಷ್ಟು ಮಜಾಮಾಡಲು ಅವಕಾಶ ನೀಡುತ್ತಾರೆ.

ಆದರೆ ವ್ಯಾಕ್ಸೀನ್ ಮಾತ್ರ ಸರಕಾರ ಪುಗ್ಸಟ್ಟೆ ಕೊಡಬೇಕೆಂದು ರೊಚ್ಚಿಗೇಳುತ್ತಾರೆ. ಬೇನಾಮಿ ಹೆಸರುಗಳಲ್ಲಿ ಕೋಟ್ಯಂತರ
ಬೆಲೆಬಾಳುವ ಆಸ್ತಿಗಳನ್ನು ಮಾಡಿದರೂ ಅದರಂದು ಪಾಲು ಇಂಥ ದೇಶಕಟ್ಟುವ ಅಭಿಯಾನಕ್ಕೆ ಅರ್ಪಿಸದೆ ಭಿಕ್ಷೆಯೆತ್ತಿ ಬಡವರನ್ನು ಉದ್ಧಾರ ಮಾಡುತ್ತೇನೆಂದು ಲಸಿಕೆ ಓಕೆ; ಟೂಲ್‌ಕಿಟ್‌ಗಳ ಬಗ್ಗೆ ಜೋಕೆ !

ಬೊಗಳುತ್ತಾರೆ. ಇಂಥ ದೇಶದಲ್ಲಿ ಈ ಲಸಿಕೆ ಅಭಿಯಾನವನ್ನು ಬಹಳ ಎಚ್ಚರದಿಂದ ಮತ್ತು ಶಿಸ್ತುಬದ್ಧವಾಗಿ ನಡೆಸಬೇಕಿದೆ. ಚೀನಾ ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಮೈಲುಗಳ ದೂರ ಸಾಲಿನಲ್ಲಿ ನಿಂತು ಆರೇಳು ತಾಸು ಕಾದು ಲಸಿಕೆ ಪಡೆಯುತ್ತಿದ್ದಾರೆ. ಆದರೆ ನಮ್ಮಲ್ಲಿ ಲಸಿಕೆ ವಿಚಾರವನ್ನೂ ಮನೆಹಾಳು ರಾಜಕೀಯ ಮಾಡಿಕೊಂಡು ಕುಳಿತಿದ್ದಾರೆ. ಮೊದಲಿಗೆ ಮೋದಿಯವರು ಮಾಡಬೇಕಾದ ಕೆಲಸವೆಂದರೆ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಯನ್ನು ನೀಡಲೇಬಾರದು. ಈಗಾಗಲೇ ಕರೋನಾ ನೆಪದಲ್ಲಿ ಖಾಸಗಿ
ಆಸ್ಪತ್ರೆಗಳು ಕೊಬ್ಬಿದ ಕುರಿಗಳಂತಾಗಿವೆ. ಇಂಥವರಿಗೆ ಕನಿಷ್ಠದರ ನಿಗದಿಪಡಿಸಿ ಶೇ.25 ಭಾಗದಷ್ಟು ಲಸಿಕೆ ನೀಡಿದರೂ ಇವರುಗಳು ಅದಕ್ಕೆ ಇದಕ್ಕೆ ಅಂತಲೇ ಸಾವಿರಾರು ರುಪಾಯಿ ಸೇರಿಸಿ ಸುಲಿಗೆ ಮಾಡಲಾರಂಭಿಸುತ್ತಾರೆ.

ಆದ್ದರಿಂದ ಮತದಾನದಂತೆ ಎಷ್ಟೇ ಶ್ರೀಮಂತನಾದರೂ ಸರಕಾರಿ ಕೇಂದ್ರಕ್ಕೆ ಬಂದು ಅಚ್ಚುಕಟ್ಟಾಗಿ ಲಸಿಕೆ ಪಡೆಯುವಂಥ ವ್ಯವಸ್ಥೆಯನ್ನು ಮಾಡಬೇಕಿದೆ. ಲಸಿಕೆ ಕೇಂದ್ರಕ್ಕೆ ಬರಲಾಗದ ವೃದ್ಧರು ದೈಹಿಕ ಅಸಮರ್ಥರಿಗೆ ಮಾತ್ರ ಇಬ್ಬರು ದಾದಿಯರು
ಅವರ ಮನೆಗೇ ತೆರಳಿ ನೀಡುವಂತಾಗಲಿ. ಲಸಿಕೆ ಪಡೆಯುವವರು ಬೇಕಾದರೆ ತಮ್ಮ ಮೊಬೈಲ್ ಗಳಲ್ಲಿ ಲಸಿಕೆ ಚುಚ್ಚುವುದನ್ನು ವಿಡಿಯೋ ಮಾಡಿಕೊಳ್ಳುವ ಅವಕಾಶ ನೀಡಲಿ.

ಬೇಕಾದರೆ ಮೊದಲ ಲಸಿಕೆ ಮತ್ತು ಎರಡನೇ ಲಸಿಕೆ ಪಡೆದ ಮಂದಿಗೆ ಮತದಾನದಲ್ಲಿದ್ದಂತೆ ಬೆರಳಿಗೆ ಶಾಯಿಯಲ್ಲಿ ಗುರುತನ್ನು ಹಾಕುವಂತಾದರೆ ಲಸಿಕೆಯ ಲೆಕ್ಕ ಪಕ್ಕ ಆಗುತ್ತದೆ. ಜತೆಗೆ ಮೊದಲ ಮತ್ತು ಎರಡನೇ ಲಸಿಕೆಯ ಸ್ಪಷ್ಟತೆ ಸಿಗುತ್ತದೆ. ಮುಖ್ಯವಾಗಿ ಲಸಿಕೆ ಚುಚ್ಚಿಸಿಕೊಂಡೂ ಇನ್ನೂ ನನಗೆ ಮೋದಿ ಲಸಿಕೆ ನೀಡಿಲ್ಲ ಸಿಕ್ಕಿಲ್ಲ ಎಂದು ಅಪಪ್ರಚಾರ ಮಾಡುವುದನ್ನು ತಪ್ಪಿಸಬಹು ದಾಗಿದೆ.

ಲಸಿಕೆ ನೀಡುವ ಸದುದ್ದೇಶ ಒಂದಾದರೆ ಅದನ್ನು ಹಾಳು ಮಾಡುವ ದುರುದ್ದೇಶ ಸಾವಿರಾರು ಇರುತ್ತದೆ. ಇಲ್ಲಿ ಸೂಕ್ಷ್ಮವಾದ ವಿಚಾರವೆಂದರೆ ಕೆಲ ದೇಶದ್ರೋಹಿ ಪಕ್ಷಗಳು ಈ ಕರೋನಾ ಮತ್ತು ಲಸಿಕೆ ಅಭಿಯಾನವನ್ನೇ ನೆಚ್ಚಿಕೊಳ್ಳುವಂತ್ತಾಗಿದೆ. ಸಾಧ್ಯವಾದಷ್ಟೂ ಈ ಅಭಿಯಾನಮತ್ತು ಲಸಿಕೆಯ ಶಕ್ತಿ ವಿಫಲವಾಗಿ, ಜನ ಸರಕಾರದ ವಿರುದ್ಧ ದಂಗೆ ಏಳುವಂತಾಗಿ, ವ್ಯವಸ್ಥೆಯನ್ನು ಕುಲಗೆಡಿಸಿ, ಆ ಮೂಲಕ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆಯಲ್ಲಿದೆ.

ಇದರ ಜತೆಗೆ ಫಾರ್ಮಸಿ ಲಾಬಿಗೂ ಈ ಲಸಿಕೆ ಸೋಲಬೇಕೆಂಬ ಹರಕೆ ಇರುತ್ತದೆ. ಒಂದೊಮ್ಮೆ ಇಡೀ 138 ಕೋಟಿ ಜನ ಲಸಿಕೆ
ಪಡೆದು ಕರೋನಾ ಮುಂಡಾಮೋಚಿಕೊಂಡು ಹೋದರೆ ಕೇಂದ್ರ ಸರಕಾರ ಬಲಿಷ್ಠಗೊಂಡು ಟೂಲ್‌ಕಿಟ್ ಪಕ್ಷಗಳು
ಅನಾಥವಾಗುತ್ತವೆ, ಫಾರ್ಮಸಿ ಕಂಪನಿಗಳು ಬಡವಾಗುತ್ತದೆ. ಹೀಗಾಗಿ ಟೂಲ್‌ಕಿಟ್ ಕುತಂತ್ರಗಳು ಹೆಚ್ಚಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಲಸಿಕೆ ಪಡೆದ ವ್ಯಕ್ತಿ ಅಕಸ್ಮಾತಾಗಿ ಇನ್ನಾವುದೋ ಕಾರಣಕ್ಕೆ ಸತ್ತರೆ, ಆತ ಲಸಿಕೆ ಪಡೆದದ್ದರಿಂದಲೇ ಸತ್ತ ಎಂದು ಅಪಪ್ರಚಾರ ಮಾಡುವುದು, ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳಲ್ಲಿ ಲಸಿಕೆ ಲಭ್ಯವಾಗದಂತೆ ಮಾಡಿ ಅಲ್ಲಿ ಪಾದರಾಯನಪುರವನ್ನು ಪ್ರೇರೇಪಿಸುವುದು, ಕೆಲ ಪಕ್ಷಗಳು ಸಂಘಟನೆಗಳು ಕೃತಕ ಲಸಿಕೆ ಅಭಾವವನ್ನು ಸೃಷ್ಟಿಸುವುದು, ಲಸಿಕೆಗಳನ್ನು ಕಾಳಸಂತೆಯಲ್ಲಿ ಮಾರಿಕೊಳ್ಳುವುದು, ಲಸಿಕೆ ನೀಡುವ ಕೇಂದ್ರದಲ್ಲಿ ಜಾತಿ, ಭಾಷೆ, ಭೇದಗಳನ್ನು ಬಿತ್ತಿ ದಾಂಧಲೆ
ಮಾಡುವುದು, ಹೀಗೆ ನಾನಾ ರೀತಿಯ ಎಡವಟ್ಟುಗಳು ಸೃಷ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಈಗಾಗಲೇ ಬೆಡ್ ಬ್ಲಾಕಿಂಗ್, ಆಕ್ಸಿಜನ್ ಆಟಗಳನ್ನು ಜನ ನೋಡಿದ್ದಾರೆ. ಆದ್ದರಿಂದ ಕೇಂದ್ರ ಸರಕಾರ ಲಸಿಕೆ ಕೇಂದ್ರಗಳ ಉಸ್ತುವಾರಿ ಮತ್ತು ಮೇಲ್ವಿಚಾರಿಕೆಯನ್ನುಧರ್ಮಸ್ಥಳ, ಸಿದ್ಧಗಂಗಾ, ಶೃಂಗೇರಿ, ಉಡುಪಿ, ಸುತ್ತೂರು, ಆದಿಚುಂಚನಗಿರಿಯಂಥ ಧಾರ್ಮಿಕ ಮಠಗಳಿಗೆ ನೀಡಿದರೆ ಮೀಣ ಜನರು ಭಯಭಕ್ತಿಯಿಂದ ಲಸಿಕೆಯನ್ನು ಪಡೆದುಕೊಳ್ಳುತ್ತಾರೆ. ನಮ್ಮಲ್ಲಿ ಜಾತಿಗೊಂದು ಸಂಘಟನೆಗಳು ಸಂಸ್ಥೆಗಳಿವೆ.

ಆಯಾ ಜಾತಿಮಠಗಳಲ್ಲಿನ ಪ್ರಜ್ಞಾವಂತರ ಸಮಿತಿಗಳನ್ನು ಮಾಡಿ ಮಠಮಂದಿರಗಳಲ್ಲಿ ಮತ್ತು ಮಸೀದಿ ಚರ್ಚ್‌ಗಳ ನೇತೃತ್ವ ದಲ್ಲಿ ಲಸಿಕೆ ಕೇಂದ್ರಗಳನ್ನು ತೆರೆದರೆ ಜನ ಮುಕ್ತ ಮನಸ್ಸಿನಿಂದ ಲಸಿಕೆ ಪಡೆದುಕೊಳ್ಳುತ್ತಾರೆ. ಆಗ ಲಸಿಕೆಗೆ ಅಂಟಿರುವ ರಾಜಕೀಯ ಸೋಂಕು ಮುಕ್ತವಾಗಿ ಲಸಿಕೆ ಅಭಿಯಾನ ಪವಿತ್ರವಾಗಿ ಯಶಸ್ಸುಕಂಡು ಪ್ರಜೆಗಳು ಭವಿಷ್ಯದಲ್ಲಿ ಬದುಕುಳಿಯು ತ್ತಾರೆ.

ಇಂಥ ಮಾದರಿ ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರುಗಳು ಧರ್ಮ, ಜಾತಿಭೇದ ಗಳಿಲ್ಲದೇ ಮಾಡುವುದನ್ನು ಜಗತ್ತೇ ಪ್ರಶಂಸಿಸಿದೆ. ಪ್ರಧಾನಿಗಳ ಇಂಥ ದಿಟ್ಟ ನಿರ್ಧಾರದಿಂದಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೊದಲ ಬಾರಿಗೆ ಸಮಾನ ನಾಗರಿಕ ಸಂಹಿತೆಯಡಿಯಲ್ಲಿ ಉಚಿತವಾಗಿ ಲಭಿಸುತ್ತಿರುವ ಮೊದಲ ಸರಕಾರಿ ಯೋಜನೆ ಈ ವ್ಯಾಕ್ಸೀನ್ ಎಂದು
ಸಮಾಧಾನಪಡುವಂತಾಗಿದೆ. ಹೀಗೆ ಲಸಿಕೆಯನ್ನು ದೇಶಕಟ್ಟುವ ಒಂದು ಹೊಣೆಗಾರಿಕೆಯಂತೆ, ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಸ್ವಾಭಿಮಾನದಂತೆ ನಡೆಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ.

ಅದನ್ನು ಬಿಟ್ಟು ಜೀವ ಉಳಿಸಿಕೊಳ್ಳುವ ಯೋಜನೆಯೊಳಗೆ ದರಿದ್ರ ರಾಜಕೀಯವನ್ನು ಬೆರೆಸಿ ತಮ್ಮ ಅಸ್ತಿತ್ವವನ್ನು ಕಾಪಾಡಿ ಕೊಳ್ಳುವ ನೀಚತನವನ್ನು ಎಲ್ಲಾ ಪಕ್ಷದವರೂ ಬಿಡಬೇಕಿದೆ.