Thursday, 12th September 2024

Dr B Gurunath Column: ವೈದ್ಯೋ ನಾರಾಯಣೋ ಹರಿಃ

ಪ್ರತಿಸ್ಪಂದನ

ಡಾ.ಬಿ.ಗುರುನಾಥ್

ಸಂಪಾದಕ ವಿಶ್ವೇಶ್ವರ ಭಟ್ಟರ ‘ದೇವರ ಆಟ ಬಲ್ಲವರಾರು, ಆತನ ಮರ್ಮ ಅರಿತವರಾರು?!’ ಅಂಕಣಬರಹ (ಆ. ೨೯) ಸೊಗಸಾಗಿ ಮೂಡಿಬಂದಿದೆ. ಇದನ್ನು ಓದಿದ ನಂತರ ಅಂತ
ರ್ಜಾಲದಲ್ಲಿ ಕಂಡ ಮನಕಲಕುವ ಘಟನೆಯೊಂದನ್ನು ಹಂಚಿಕೊಳ್ಳಬೇಕೆನಿಸಿತು. ಇದು ಜೆ.ಬಿ.ಪ್ರಸಾದ್ ಅವರ ಸಂಗ್ರಹಾನುವಾದ. ಅರ್ಧರಾತ್ರಿಯಾಗಿತ್ತು. ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಆ
ವೈದ್ಯರು ತಮ್ಮ ಕೆಲಸವನ್ನೆಲ್ಲಾ ಮುಗಿಸಿ ಮಲಗಿ ಹತ್ತು ನಿಮಿಷವೂ ಆಗಿರಲಿಲ್ಲ, ಯಾರೋ ಬಾಗಿಲು ತಟ್ಟಿದ ಶಬ್ದ. ವೈದ್ಯರು ನಿಯತ್ತಿನ ಮನುಷ್ಯ, ಬೇಸರಿಸಿಕೊಳ್ಳದೆ ಬಾಗಿಲು ತೆರೆದರು. ಒಳಬಂದಾತ ಇವರ ಕಾಲುಹಿಡಿದು, ‘ಸರ್, ಗರ್ಭಿಣಿಯೊಬ್ಬಳು ಪ್ರಸವವೇದನೆ ಅನುಭವಿಸುತ್ತಿದ್ದಾಳೆ, ಆಕೆಯನ್ನು ನೀವೇ ಕಾಪಾಡಬೇಕು’ ಎಂದು ಅಲವತ್ತುಕೊಂಡ.

ವೈದ್ಯರು ತಕ್ಷಣ ಅವನೊಂದಿಗೆ ಹೊರಟು ಗರ್ಭಿಣಿಯ ಮನೆ ತಲುಪಿದರು. ಆಕೆಗೆ ೨೦ರ ವಯಸ್ಸಿರಬಹುದು, ಪ್ರಸವ ನಿಜಕ್ಕೂ ಕಷ್ಟದಾಯಕವಾಗಿತ್ತು. ಆಕೆ ವೈದ್ಯರ ಕೈಹಿಡಿದುಕೊಂಡು, ‘ಸಾಹೇಬ್ರೇ, ಗಂಡ ನನ್ನ ಕೈಬಿಟ್ಟುಹೋದ, ನನಗೆ ದಟ್ಟದಾರಿದ್ರ್ಯ. ಹುಟ್ಟುವ ಮಗುವನ್ನು ಸಾಕಲಾರೆ. ನನ್ನನ್ನು ಉಳಿಸಬೇಡಿ, ಸಾಯಿಸಿಬಿಡಿ’ ಎಂದು ಕೋರಿದಳು. ಎಲ್ಲ ರೋಗಿಗಳೂ, ಹೇಗಾದರೂ ಮಾಡಿ ನನ್ನನ್ನು ಉಳಿಸಿ ಎಂದು ಬೇಡಿಕೊಂಡರೆ ಈಕೆ ತನ್ನನ್ನು ಸಾಯಿಸಿಬಿಡಿ ಎನ್ನುತ್ತಿದ್ದಾಳೆಂದರೆ ಆಕೆಗೆ ಬದುಕು ಅದೆಷ್ಟು ದುರ್ಭರವೆನಿಸಿರಬೇಕು ಎಂದು ಗ್ರಹಿಸಿದ ವೈದ್ಯರು, ‘ನನಗೆ ರೋಗಿಯನ್ನು ಉಳಿಸೋದು ಗೊತ್ತೇ ಹೊರತು ಸಾಯಿಸೋದಲ್ಲಮ್ಮಾ; ಯೋಚನೆ ಮಾಡಬೇಡ, ಹೆರಿಗೆ ಆದ ನಂತರ ಆ ವಿಷಯ ನೋಡಿಕೊಳ್ಳೋಣ’ ಎಂದು ಸಮಾಧಾನಿಸಿ ಚಿಕಿತ್ಸೆಗೆ ಮುಂದಾದರು.

ಕೆಲ ಕಾಲದ ಪ್ರಯಾಸದ ನಂತರ ಆಕೆ ಹೆಣ್ಣು ಮಗುವನ್ನು ಹೆತ್ತಳು. ವೈದ್ಯರು, ‘ಚಿಂತೆ ಮಾಡಬೇಡಮ್ಮಾ, ನನಗೆ ಫೀಸು ಬೇಡ. ಬದಲಿಗೆ ನಾನೇ ೧೦೦ ರುಪಾಯಿ ಕೊಡ್ತಿದ್ದೀನಿ, ಇಟ್ಟುಕೋ. ನೀನು ಚೇತರಿಸಿಕೊಂಡ ಮೇಲೆ ಪುಣೆಯ ನರ್ಸಿಗ್ ಕಾಲೇಜಿನಲ್ಲಿನ ಗುಮಾಸ್ತರಿಗೆ ಈ ಪತ್ರ ಕೊಡು, ಅವರು ನಿನಗೆ ನೆರವಾಗ್ತಾರೆ’ ಎಂದು ಹೇಳಿ ಹೊರಟರು. ಕೆಲ ಕಾಲದ ನಂತರ ಆಕೆ
ಪುಣೆಯಲ್ಲಿ ಗುಮಾಸ್ತರನ್ನು ಭೇಟಿಯಾಗಿ ವೈದ್ಯರು ಕೊಟ್ಟ ಪತ್ರವನ್ನು ಕೊಟ್ಟಳು. ಅದನ್ನೋದಿದ ಅವರು ಆಕೆಯನ್ನು ನರ್ಸಿಂಗ್ ಟ್ರೇನಿಂಗ್‌ಗೆ ಸೇರಿಸಿಕೊಂಡು ಹಾಸ್ಟೆಲ್ ವಾಸಕ್ಕೂ ಅನುವುಮಾಡಿಕೊಟ್ಟರು. ತರಬೇತಿಯ ನಂತರ ಉದ್ಯೋಗವನ್ನೂ ಕೊಡಿಸಿದರು.

೨೫ ವರ್ಷಗಳು ಕಳೆದವು. ಆ ವೈದ್ಯರು ಈಗ ವೈದ್ಯಕೀಯ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್. ಒಂದು ವಿಶ್ವವಿದ್ಯಾಲಯದವರು ತಮ್ಮ ಮೇಧಾವಿ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ಗಳನ್ನು ಪ್ರದಾನಿಸಲು ಅವರನ್ನು ಆಹ್ವಾನಿಸಿದರು. ಕಾರ್ಯಕ್ರಮ ಮುಗಿದ ನಂತರ ‘ಚಂದ್ರಾ’ ಎಂಬಾಕೆ ಅವರನ್ನು ಭೇಟಿಯಾಗಿ, ‘ಸರ್, ತಾವು ದಯವಿಟ್ಟು ನಮ್ಮ ಮನೆಗೆ ಬರಬೇಕು’ ಎಂದು ಬೇಡಿಕೊಂಡಳು. ಬೇರೆಯವರಾಗಿದ್ದರೆ ‘ಒಲ್ಲೆ’ ಎನ್ನುತ್ತಿದ್ದರೇನೋ; ಆದರೆ ಇವರದ್ದು ಮೃದುಮನಸ್ಸು. ಹೇಗಿದ್ದರೂ ಮನೆಯ ಹಾದಿಯೇ ತಾನೇ? ಎಂದುಕೊಂಡು ಆಕೆಯ ಮನೆಗೆ ತೆರಳಿದರು. ಮನೆಯಲ್ಲಿ ಆಕೆಯ ತಾಯಿ ತನ್ನ ಪರಿಚಯ, ಹುಟ್ಟೂರು ಇತ್ಯಾದಿ ಹೇಳುವಾಗ, ತಾವು ಹಿಂದೊಮ್ಮೆ ಅದೇ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದುದು ವೈದ್ಯರಿಗೆ ನೆನಪಾಯಿತು. ಅಷ್ಟರಲ್ಲಿ ಆ ಯುವತಿ ವೈದ್ಯರ ಕಾಲುಮುಟ್ಟಿ ನಮಸ್ಕರಿಸಿದಳು.

ಸಂಕೋಚಪಟ್ಟ ವೈದ್ಯರು, ‘ಯಾಕಮ್ಮಾ ನನಗೆ….?’ ಎಂದಾಗ ಆಕೆಯ ತಾಯಿ, ‘ಸಾಹೇಬರೇ ನೆನಪಿದೆಯೇ, ಅಂದು ಮಧ್ಯರಾತ್ರಿ ನನ್ನ ಗುಡಿಸಲಿಗೆ ಬಂದು ಹೆರಿಗೆ ಮಾಡಿಸಿದಿರಿ. ಆಗ
ಹುಟ್ಟಿದವಳೇ ಈ ಹುಡುಗಿ. ಅಂದು ನೀವು ತೋರಿದ ದಯೆಯಿಂದಾಗಿ ನಾನು ಈಕೆಯನ್ನು ಬೆಳೆಸಿ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಯಿತು. ನನ್ನ ಪಾಲಿಗೆ ದೇವರಾಗಿ ಬಂದು ಕಾಪಾಡಿ ಬದುಕಿಗೊಂದು ದಾರಿಮಾಡಿಕೊಟ್ಟ ನಿಮ್ಮ ಹೆಸರನ್ನೇ ಆಕೆಗೆ ಇಟ್ಟಿರುವೆ, ಚಂದ್ರಾ ಇವಳ ಹೆಸರು’ ಎಂದು ಹೇಳಿ ಕಣ್ಣೊರೆಸಿಕೊಂಡಳು. ಚಂದ್ರಾ ಹೇಳಿದಳು: ‘ಇಷ್ಟರಲ್ಲೇ ನಾವು ಬಡವರಿಗಾಗಿ ಉಚಿತ ಆಸ್ಪತ್ರೆಯನ್ನು ಆರಂಭಿಸುತ್ತಿದ್ದು ಅದಕ್ಕೂ ನಿಮ್ಮ ಹೆಸರೇ ಇಡಲಿದ್ದೇವೆ. ದಯಮಾಡಿ ಅದರ ಉದ್ಘಾಟನೆಗೂ ನೀವೇ ಬರಬೇಕು ಸರ್’. ವೈದ್ಯರು ‘ಆಗಲಿ’ ಎಂದು ತಲೆಯಾಡಿಸಿದರು.

ಆ ವೈದ್ಯರು ಯಾರು ಗೊತ್ತೇ? ಅವರೇ ಡಾ.ರಾಮಚಂದ್ರ ಕುಲಕರ್ಣಿಯವರು. ಇವರು ಇನೋಸಿಸ್ ಖ್ಯಾತಿಯ ಸುಧಾ ಮೂರ್ತಿಯವರ ತಂದೆ. ಆಕೆಯೂ ತಂದೆಯ ಹೆಜ್ಜೆಗಳಲ್ಲೇ ಮುಂದು ವರಿದು ಕರುಣಾಮಯಿ ಸಮಾಜಸೇವಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಘಟನೆಯನ್ನು ಓದಿದಾಗ ನನಗನ್ನಿಸಿದ್ದು- ‘ಖಂಡಿತ ದೇವರಿದ್ದಾನೆ’.

(ಲೇಖಕರು ವೈದ್ಯರು)

 

 

Leave a Reply

Your email address will not be published. Required fields are marked *