Thursday, 19th September 2024

ಮೌಲ್ಯ ಮತ್ತು ಹೊಣೆಗಾರಿಕೆ

ಪ್ರತಿಸ್ಪಂದನ 

ಪ್ರಕಾಶ ಹೆಗಡೆ

ವಿಜಯ್ ದರಡಾ ಅವರ ‘ಸಂಗತ’ ಅಂಕಣದಲ್ಲಿ (ವಿಶ್ವವಾಣಿ ಮಾ.೧೪), ಸಂಪತ್ತು ಮತ್ತು ಪ್ರಸಿದ್ಧಿ ಎಂಬ ‘ಡೆಡ್ಲಿ ಕಾಂಬಿನೇಷನ್’ ಇದ್ದರೂ ಅಂಬಾನಿ
ಕುಟುಂಬವು ಹೇಗೆ ಕೌಟುಂಬಿಕ ಮೌಲ್ಯಗಳನ್ನು ಪೋಷಿಸಿಕೊಂಡು ಬಂದು, ಒಂದು ಮಾದರಿ ಕುಟುಂಬವಾಗಿ ಕಾಣಸಿಗುತ್ತಿದೆ ಎಂಬುದನ್ನು ವಿಶ್ಲೇಷಿಸ ಲಾಗಿದೆ.

ನಮ್ಮಲ್ಲಿ ಒಂದು ಮಾತಿದೆ- ಅಪ್ಪ ಗಳಿಸಿದ್ದನ್ನು ಮಕ್ಕಳು ಖರ್ಚು ಮಾಡುತ್ತಾರೆ. ಮುಂದೆ ಮೊಮ್ಮಗ ಮತ್ತೆ ಶ್ರಮಜೀವನದಿಂದ ಗಳಿಸುತ್ತಾನೆ, ಅವನ ಮಗ ಖರ್ಚು ಮಾಡುತ್ತಾನೆ. ಜೀವನಚಕ್ರ ಹೀಗೆ ತಿರುಗುತ್ತಿರುತ್ತದೆ. ಹಾಗಂತ ಈ ಹೇಳಿಕೆ ಎಲ್ಲ ಕುಟುಂಬಗಳಿಗೂ ಅನ್ವಯಿಸುವುದಿಲ್ಲ. ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬಿಕರು, ಧೀರೂಭಾಯ್ ಅಂಬಾನಿಯವರ ಮೌಲ್ಯಗಳನ್ನು ಪೋಷಿಸಿ ವೃದ್ಧಿಸಲು ಶ್ರಮಪಟ್ಟಿದ್ದು ನಿಜ. ಮುಕೇಶರ ಪತ್ನಿ ನೀತಾ ಅಂಬಾನಿಯವರು ‘ರಿಲಯನ್ಸ್ ಫೌಂಡೇಷನ್’ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾರೆ.

ಸಮಾಜದ ಒಳಿತಿಗಾಗಿ ಮತ್ತು ಕ್ರೀಡೆಗಳ ಅಭಿವೃದ್ಧಿಗಾಗಿ ಅನುದಿನವೂ ಶ್ರಮಿಸುತ್ತಿದ್ದಾರೆ. ಅವರ ಮಕ್ಕಳೂ ಈ ಚಟುವಟಿಕೆಗಳಿಗೆ ಒತ್ತಾಸೆಯಾಗಿ  ನಿಂತಿದ್ದಾರೆ. ಆದರೆ ಮುಕೇಶರ ತಮ್ಮ ಅನಿಲ್ ಅಂಬಾನಿಯವರಿಗೆ, ಕುಟುಂಬದ ಮೌಲ್ಯವನ್ನೂ ಪೋಷಿಸಲಾಗಲಿಲ್ಲ, ತಮ್ಮ ಪಾಲಿಗೆ ಬಂದ ರಿಲಯನ್ಸ್ ಕಂಪನಿಗಳನ್ನೂ ಬೆಳೆಸಲಾಗಲಿಲ್ಲ. ಕುಟುಂಬದ ಮೌಲ್ಯಗಳನ್ನು ಅದರ ವಿಭಿನ್ನ ಸದಸ್ಯರು ತಮ್ಮದೇ ನೆಲೆಯಲ್ಲಿ ಹೇಗೆ ಗ್ರಹಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.

ಇನ್ನು, ಇದೇ ಸಂಚಿಕೆಯ ‘ನೂರೆಂಟು ವಿಶ್ವ’ ಅಂಕಣದಲ್ಲಿ, ವನ್ಯಜೀವಿಗಳನ್ನು ಗೌರವಿಸಬೇಕಾದ ಛಾಯಾಗ್ರಾಹಕರ ಬಗೆಗೆ ವಿಶ್ವೇಶ್ವರ ಭಟ್ಟರು ಮಾಡಿದ ವಿಶ್ಲೇಷಣೆ ಸೊಗಸಾಗಿತ್ತು. ಕೆಲವು ‘ಯಪ್ಪಿ’ಗಳು (ಖಿPP ಟ್ಠ್ಞಜ ಖ್ಟಿಚಿZ Pಟ್ಛಛಿooಜಿಟ್ಞZ) ದುಬಾರಿ ಟೆಲಿಸ್ಕೋಪ್ ಕ್ಯಾಮರಾ ಖರೀದಿಸಿ, ಯುದ್ಧಕ್ಕೆ ಹೊರಟವರಂತೆ ವನ್ಯಜೀವಿಗಳ ಛಾಯಾಗ್ರಹಣಕ್ಕೆ ಹೊರಟುಬಿಡುತ್ತಾರೆ, ರಕ್ಷಿತಾರಣ್ಯಗಳಿಗೆ ದುಂಬಾಲು ಬೀಳುತ್ತಾರೆ. ಅಲ್ಲಿ ಸೆರೆಹಿಡಿದ ಫೋಟೋ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ‘ಥಮ್ಸ್ ಅಪ್’ ಗಿಟ್ಟಿಸಿಕೊಂಡು, ಕಾಲರ್ ಅನ್ನು ಮೇಲೆ ಮಾಡಿಕೊಳ್ಳುವುದೇ ಇಂಥವರ ಮುಖ್ಯಗುರಿ. ಕಾಡಿನಲ್ಲಿ ಸಫಾರಿಗೆ ಹೋಗುತ್ತಿರುವಾಗ ಹುಲಿಯೇನಾದರೂ ಕಂಡರೆ, ಆ ಜೀಪಿನ ಡ್ರೈವರ್ ಎಲ್ಲ ಸಫಾರಿ ಜೀಪಿನವರಿಗೂ ಕೂಡಲೆ ಸುದ್ದಿ ಮುಟ್ಟಿಸು ತ್ತಾನೆ.

ನಿಮಿಷ ಮಾತ್ರದಲ್ಲಿ ಹತ್ತಾರು ಜೀಪುಗಳು ಅಲ್ಲಿ ಪ್ರತ್ಯಕ್ಷ! ಇದನ್ನು ಕಂಡ ಆ ಹುಲಿಗೆ, ‘ಯಾಕಾದರೂ ಈ ರಸ್ತೆಯಲ್ಲಿ ಬಂದೆನೋ’ ಎನ್ನಿಸಬಹುದು! ಈ ‘ಯಪ್ಪಿ’ಗಳ ನಡವಳಿಕೆ ಎಷ್ಟು ವಿಚಿತ್ರ ಮತ್ತು ಹಾಸ್ಯಾಸ್ಪದವಾಗಿರುತ್ತದೆ ಎಂದರೆ, ಸಫಾರಿಯಲ್ಲಿ ಆ ಹುಲಿಯನ್ನು ನೋಡುವುದಕ್ಕಿಂತ ಇವರ ವರ್ತನೆ ಯನ್ನು ಅವಲೋಕಿಸುವುದೇ ಹೆಚ್ಚು ಮಜಾ ಕೊಡುತ್ತದೆಯೆಂದು ಅನಿಸುತ್ತದೆ. ನಾನೊಮ್ಮೆ ಸಫಾರಿಗೆ ಹೋದಾಗ, ಇಂಥವರ ನಡವಳಿಕೆಯ ಹಾಸ್ಯಾ ಸ್ಪದ ಕ್ಷಣಗಳನ್ನು ಕ್ಲಿಕ್ಕಿಸಿದ ‘ಕಿಕ್’ ಅನುಭವಿಸಿದೆ. ನನ್ನ ಆಪ್ತರೊಬ್ಬರು ಉತ್ತಮ ವನ್ಯಜೀವಿ ಛಾಯಾಗ್ರಾಹಕರು. ಭಾರತದ ಅನೇಕ ಅಭಯಾರಣ್ಯಗಳಲ್ಲಿ ವಾರಗಟ್ಟಲೆ ಕಾದು ಉತ್ತಮ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಈ ‘ಯಪ್ಪಿ’ಗಳ ಆಕ್ರಮಣ ಸಹಿಸಿಕೊಳ್ಳಲಾಗದೆ ತಮ್ಮ ವನ್ಯಜೀವಿ ಛಾಯಾಗ್ರಹಣದ ಖಯಾಲಿಗೆ ತಿಲಾಂಜಲಿಯಿತ್ತಿದ್ದಾರೆ! ಕೌಟುಂಬಿಕ ಮೌಲ್ಯ ಮತ್ತು ಅರಣ್ಯದಲ್ಲಿ ಜವಾಬ್ದಾರಿಯುತ ವರ್ತನೆ- ನಾವೆಲ್ಲರೂ ಯೋಚಿಸಬೇಕಾದ ವಿಷಯಗಳೇ ಅಲ್ಲವೇ?

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *