Friday, 13th December 2024

ವನಸ್ತ್ರೀ ಎಂದರಷ್ಟೇ ಸಾಕೆ, ಹಿತ್ತಿನ ಬೀಜಕ್ಕೆ ಬೇರೆ ಹೆಸರು ಬೇಕೆ ?

ಸುಪ್ತ ಸಾಗರ

rkbhadti@gmail.com

ಮಲೆನಾಡಿನ ಮನೆಗಳಲ್ಲಿ ತೋಟ, ಗದ್ದೆಗಳ ಸಂಪೂರ್ಣ ಉಸ್ತುವಾರಿ ಮನೆಯ ಗಂಡಸರದ್ದು. ಹಾಗೆಯೇ ಹಣಕಾಸಿನ ವ್ಯವಹಾರವೂ ಅವರದ್ದೇ. ‘ಗೃಹ’ ಇಲಾಖೆ ಉಸ್ತುವಾರಿ ಮಾತ್ರ ಮನೆಯ ಹೆಂಗಸರದ್ದು. ಅದರಲ್ಲೂ ಅವರ ಖಾತೆಗೆ ಒಳಪಡು ವುದು ಮನೆಯ ಹಿತ್ತಲು ಮಾತ್ರ. ಇದೇ ಹಿತ್ತಲಿನಲ್ಲಿ ಚಮತ್ಕಾರ ಮಾಡಿ ಆರ್ಥಿಕ ಸ್ವಾವಲಂಬನೆ ಸಾಽಸಿದ ಶಿರಸಿಯ ಮಹಿಳೆಯರ ಕಥನವಿದು…

ಆಕೆಯ ಹೆಸರು ಲಕ್ಷ್ಮೀ ಸಿದ್ದಿ. ಹೆಸರೇ ಸೂಚಿಸುವಂತೆ ಹಿಂದುಳಿದ ಸಿದ್ದಿ ಜನಾಂಗದವಳು. ಮನೆಯೋ ಶಿರಸಿಯಿಂದ ಸುಮಾರು 40 ಕಿಮೀ ದೂರದಲ್ಲಿರುವ ಮತ್ತಿಘಟ್ಟದ ತಪ್ಪಲು. ಗುಡ್ಡ ಬೆಟ್ಟಗಳ ನಡುವೆ ಕಡಿದಾದ ಕಾನನದ ದಾರಿಯಲ್ಲಿ ಏರಿ ಇಳಿದರೆ ಮನೆ ಸಿಗುತ್ತದೆ. ಸುತ್ತಲಿನ ಪರಿಸರವಂತೂ ‘ಸೂರ್ಯನ ಕಿರಣ ಕಾಣದ ಕಾಡು’ ಎಂದು ಪಠ್ಯದಲ್ಲಿ ಓದಿದೇ ವಲ್ಲಾ ಅಕ್ಷರಶಃ ಅದೆ. ಆದರೆ ಇಂದು ಲಕ್ಷ್ಮೀ ಸಿದ್ದಿ ತಯಾರಿಸಿದ ಕೊಕಂ ಬಾಮ್ (ಮುರುಗಲು ತುಪ್ಪ) ರಾಜ್ಯದ ಗಡಿಯನ್ನೂ ದಾಟಿದೆ.

ಅಷ್ಟೇ ಏಕೆ ಶಾಲೆಯ ಕರಿಹಲೆಗೆಯನ್ನೇ ಕಂಡರಿಯದ ಲಕ್ಷ್ಮಿ ಸಿದ್ದಿ ಸಿಲಿಕಾನ್ ಸಿಟಿಗೆ ಬಂದು ತಾನೇ ಸ್ವತಃ ಬೆಳೆದ ಗೆಣಸನ್ನು ವ್ಯಾಪಾರ ಮಾಡಿ ಹೋಗಿದ್ದಾಳೆ. ದೂರದ ಅಮೆರಿಕದಿಂದ ಬಂದ ವಿದ್ಯಾರ್ಥಿಗಳ ಜತೆ ತಾನು ಬೆಳೆದ ತರಕಾರಿಗಳ ಕುರಿತಾಗಿ ಅಳುಕಿಲ್ಲದೆ ಮಾತನಾಡುತ್ತಾಳೆ. ಲಕ್ಷ್ಮೀ ಸಿದ್ದಿಯ ಉತ್ಸಾಹದ ಹಿಂದಿರುವ ಕತೃತ್ವ ಶಕ್ತಿಯನ್ನರಸುತ್ತ ಹೋದರೆ ತೆರೆಯ ಮೇಲೊಂದು ಅದ್ಭುತವಾದ ಕಥನ ಮೂಡುತ್ತದೆ. ಅದೇ ‘ವನಸೀ’!

ಅದು ಹನ್ನೊಂದು ವರ್ಷಗಳ ಹಿಂದಿನ ಮಾತು. ಮಾರ್ಚ್ ೮, ೨೦೦೧, ಶಿರಸಿಯ ಪೇಟೆಯಿಂದ ಸುಮಾರು ೬ ಕಿ.ಮೀ ದೂರ ದಲ್ಲಿರುವ ನೀರ್ನಳ್ಳಿ ಎಂಬ ಒಂದು ಪುಟ್ಟ ಗ್ರಾಮದಲ್ಲಿ ಮಲೆನಾಡಿನ ಒಂದಷ್ಟು ಗೃಹಿಣಿಯರು ಸೇರಿದ್ದರು. ಮಲೆನಾಡಿನ ಮನೆಗಳಲ್ಲಿ ತೋಟ, ಗದ್ದೆಗಳ ಸಂಪೂರ್ಣ ಉಸ್ತುವಾರಿ ಮನೆಯ ಗಂಡಸರದ್ದು. ಹಾಗೆಯೇ ಹಣಕಾಸಿನ ವ್ಯವಹಾರವೂ ಅವರದ್ದೇ. ‘ಗೃಹ’ ಇಲಾಖೆ ಉಸ್ತುವಾರಿ ಮಾತ್ರ ಮನೆಯ ಹೆಂಗಸರದ್ದು.

ಅದರಲ್ಲೂ ಅವರ ಖಾತೆಗೆ ಒಳಪಡುವುದು ಮನೆಯ ಹಿತ್ತಲು ಮಾತ್ರ. ಅದೇ ಅವರ ಕಚೇರಿ. ಇಲ್ಲೆ ಏನಾದರೂ ಒಂದು ಚಮ ತ್ಕಾರ ಮಾಡಬೇಕೆಂಬ ಒಂದು ಪುಟ್ಟ ಕನಸು ಅಂದು ಮೊಳಕೆಯೊಡೆಯುವುದಿತ್ತು. ಅಲ್ಲಿ ಸೇರಿದ್ದ ಮಹಿಳೆಯರ ಪೈಕಿ ಕಮಲಾ ಎಂಬಾಕೆ ತಾನು ಹಿತ್ತಿಲಲ್ಲಿ ಬೆಳೆದ ತರಕಾರಿಯ ಬೀಜಗಳನ್ನು ನೀಡುವುದರ ಮೂಲಕ ಆ ಕನಸಿಗೆ ಬೀಜಾಂಕುರ ವನ್ನಿತ್ತರು.

ವನಸ್ತ್ರೀ’ ಎಂದರೆ ಕಾಡಿನ ಮಹಿಳೆ. ಹೌದು, ಹೆಸರಿಗೆ ತಕ್ಕಂತೆ ಅದು ಕಾಡಿನ ರೈತಾಪಿ ಮಹಿಳೆಯರ ಗುಂಪು. ತಮ್ಮ ಮನೆಯ ಹಿತ್ತಿಲಿನಲ್ಲಿ ಬೆಳೆದ ನಾಟಿ ತರಕಾರಿ ಮತ್ತು ಹೂವುಗಳ ಬೀಜಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ಆ ಮೂಲಕ ಉತ್ಕೃಷ್ಟ ಬೀಜಗಳ ಸಂಗ್ರಹ ಮತ್ತು ಸಂರಕ್ಷಣೆಯೊಂದಿಗೆ ಆರ್ಥಿಕವಾಗಿ ಸ್ವಾವಲಂಬನೆಯನ್ನೂ ಗಳಿಸುತ್ತಿರುವ ಶಿರಸಿಯ ಆಸುಪಾಸಿನ ಹಳ್ಳಿ ಮಹಿಳೆಯರ ಗುಂಪು ಈ ‘ವನಸ್ತ್ರೀ’. ಆದರೆ ‘ವನಸ್ತ್ರೀ’ ಎಂಬ ಮೂರಕ್ಷರದ ಹೆಸರಿಗೂ ಮುನ್ನ ‘ಮಲ್ನಾಡ್ ಫಾರೆಸ್ಟ್ ಗಾರ್ಡನ್ ಆಂಡ್ ಸೀಡ್ ಎಕ್ ಚೇಂಜ್ ಕಲೆಕ್ಟಿವ್’ ಎಂಬ ಉದ್ದದ ಹೆಸರಿಡಲಾಗಿತ್ತು.

ಸರಿಯಾದ ದೂರವಾಣಿ ಸಂಪರ್ಕವಿಲ್ಲದ ಆ ಕಾಲದಲ್ಲಿ ಸಂಸ್ಥೆಯ ಮೀಟಿಂಗ್‌ನ ಕುರಿತಾಗಿ ಸುದ್ದಿ ಮುಟ್ಟಿಸುತ್ತಿದ್ದದ್ದು ಸ್ಥಳೀಯ ಪೋಸ್ಟ್ ಮ್ಯಾನ್. ಅದೂ ಅಲ್ಲದೆ ಮೀಟಿಂಗ್‌ನ ಹೆಸರಲ್ಲಿ ಮಹಿಳೆಯರು ಸೇರುತ್ತಿದ್ದದ್ದು ಯಾರದ್ದೋ ಮನೆ ಅಥವಾ  ಕಟ್ಟಡ ದಲ್ಲಲ್ಲ. ಬದಲಾಗಿ ಶಿರಸಿಯ ಬಸ್ ಸ್ಟ್ಯಾಂಡ್, ಪೋಸ್ಟ್ ಆಫೀಸ್ ಅಥವಾ ಯಾವುದೋ ಮರದ ಕೆಳಗೆ ಸೇರಿ, ತಮ್ಮ ಹಿತ್ತಿಲಿನಲ್ಲಿ ಬೆಳೆದ ತರಕಾರಿ ಬೀಜಗಳನ್ನು ತಮ್ಮ ತಮ್ಮಲ್ಲೇ ಹಂಚಿಕೊಳ್ಳುತ್ತಿದ್ದರು!

ಬೀಜಗಳ ಸಂರಕ್ಷಣೆ ಮತ್ತು ಸಂಗ್ರಹ, ಗಾರ್ಡನ್ ಬೆಳೆಸುವುದು ಹೀಗೆ ಹಲವಾರು ತರಬೇತಿಗಳನ್ನು ಮನೆಗಳಲ್ಲಿ ಅಥವಾ ಸಿಕ್ಕಂತಹ ಸಾರ್ವಜನಿಕ ಕಟ್ಟಡಗಳಲಲ್ಲಿ ನಡೆಸುತ್ತಿದ್ದರು. ಇನ್ನು ವರ್ಷಕ್ಕೊಮ್ಮೆ ವಾರ್ಷಿಕೋತ್ಸವವೂ ನಡೆಯುತ್ತಿತ್ತು. ತಮ್ಮ ಹಿತ್ತಿಲಲ್ಲಿ ಬೆಳೆದ ತರಕಾರಿ ಮತ್ತು ವಿವಿಧ ಗಿಡಗಳನ್ನು ಗುಂಪಿನವರು ತಂದು ಒಪ್ಪವಾಗಿ ಜೋಡಿಸಿಡಬೇಕಿತ್ತು, ಯಾರು ಚೆನ್ನಾಗಿ  ಮಾಡಿ ದ್ದಾರೋ ಅವರಿಗೆ ಬಹುಮಾನ ನೀಡಲಾಗುತ್ತಿತ್ತು.

ಇದು ಕಥೆಯ ಮೊದಲಾರ್ಧ. ಇದೀಗ ಇಂಟರ್ವಲ್. ಇಂಟರ್ವಲ್ ನಂತರ ‘ವನಸ್ತ್ರೀ’ ಕಥೆ ಇನ್ನೊಂದು ಆಯಾಮವನ್ನು ಪಡೆದುಕೊಳ್ಳುತ್ತದೆ. ಸರಿ, ದ್ವೀತಿಯಾರ್ಧಕ್ಕೆ ಬಂದರೆ… 2004 ತೆರೆದುಕೊಳ್ಳುತ್ತದೆ. ಹೇಗೂ ಪ್ರತಿವರ್ಷ ವಾರ್ಷಿಕೋತ್ಸವದ ಹೆಸರಲ್ಲಿ ಹಿತ್ತಿಲಲ್ಲಿ ತಾವು ಬೆಳೆದ ತರಕಾರಿ, ಹೂವು ಹಾಗೂ ಬೀಜಗಳನ್ನು ತರುತ್ತೇವೆ, ಹಾಗಾದಲ್ಲಿ ತಂದ ಧಾನ್ಯ ಲಕ್ಷ್ಮೀಯನ್ನು ಇಲ್ಲೇ ಮಾರಾಟ ಮಾಡಿ ಮನೆಗೆ ಧನಲಕ್ಷ್ಮಿಯನ್ನೇಕೆ ಕರೆದೊಯ್ಯಬಾರದೆಂಬ ಯೋಚನೆ ಮೂಡಿತು.

ಆಗ ಶುರುವಾದದ್ದೆ ‘ಮಲ್ನಾಡ್ ಮೇಳ’. ವರ್ಷಕ್ಕೊಮ್ಮೆ ಮಳೆಗಾಲದ ಆರಂಭದಲ್ಲಿ ಈ ಮೇಳಗಳ ಆಯೋಜನೆ. ಮೇಳದಲ್ಲಿ ವನಸೀ ಸದಸ್ಯರು ತಾವು ಬೆಳೆದ ತರಕಾರಿ, ಹೂವು, ಸಂಗ್ರಹಿಸಿದ ಬೀಜಗಳು ಹಾಗೂ ಮನೆಯಲ್ಲೇ ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಶುರುವಿಟ್ಟುಕೊಂಡರು. ಆದರೆ ಇದು ಕೇವಲ ಕೊಡು-ಕೊಳ್ಳುವಿಕೆ ವ್ಯವಹಾರಕ್ಕಷ್ಟೆ ಸೀಮಿತವಾದಾಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮೇಳಕ್ಕೆ ಒಬ್ಬ ಸಂಪನ್ಮೂಲ ವ್ಯಕ್ತಿಯನ್ನು ಕರೆದು, ಒಂದು ವಿಷಯದ ಕುರಿತು ಮಾತನಾಡಿಸಿ ಸದಸ್ಯರಲ್ಲಿ ಸೂರ್ತಿ ತುಂಬಲು ಯೋಜಿಸಲಾಯಿತು.

ಮೇಳಕ್ಕೆ ಇನ್ನೊಂದು ಸ್ವಲ್ಪ ರಂಗನ್ನು ನೀಡುವ ಸಲುವಾಗಿ ಅಡುಗೆ ಸ್ಪರ್ಧೆಯನ್ನೂ ಆಯೋಜಿಸಲಾಯಿತು. ಪ್ರತಿವರ್ಷ ಒಂದೇ ಬಗೆಯ ಪದಾರ್ಥ ಬೋರಾಗುತ್ತದೆಂದು, ಮರು ವರ್ಷದಿಂದ ಒಂದೊಂದು ಬಗೆಯ ಅಡುಗೆ ವೈವಿಧ್ಯದ ಸ್ಪರ್ಧೆ ಆಯೋಜನೆ ಗೊಂಡಿತು. ಈ ವರ್ಷ ಉಪ್ಪಿನಕಾಯಿಯಾದರೆ ಮುಂದಿನ ವರ್ಷ ಕಳಲೆಯ ಬಗೆಗಳು. ಇಂಥ ಅಡುಗೆ ಸ್ಪರ್ಧೆಯನ್ನು ನೋಡು ವುದೇ ಒಂದು ಚೆಂದ. ಅಬ್ಬಾ! ಹೆಣ್ಣುಮಕ್ಕಳಿಗೆ ಅದೆಷ್ಟು ಬಗೆಯ ಅಡುಗೆಗಳು ಗೊತ್ತಲ್ಲ ಎಂಬ ಹೆಮ್ಮೆ ಮೂಡುವುದು ಇಲ್ಲಿಯೇ! ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮನೋರಮಾಕ್ಕ ವರ್ಣಿಸುವ ರೀತಿಯಲ್ಲೇ ಮೇಳದ ಚಿತ್ರಣ ಕಣ್ಣಮುಂದೆ ಬರುತ್ತದೆ.

ಸ್ಥಳೀಯ ಮಟ್ಟದಲ್ಲಿ ಮೇಳಕ್ಕೆ ಉತ್ತಮ ಸ್ಪಂದನೆ ದೊರೆತ ಕಾರಣ ‘ವನಸೀ’ಯರು ಸೀದಾ ರಾಜಧಾನಿ ಬೆಂಗಳೂರು ಬಸ್ಸನ್ನು ಹತ್ತಿದರು. ತಮ್ಮ ಹಿತ್ತಿಲಲ್ಲಿ ಬೆಳೆದ ಬೆಳೆಗಳಿಗೆ ಬೆಂಗಳೂರಿನಲ್ಲಿ ದೊರೆತ ಅದ್ಭುತ ಸ್ಪಂದನೆ ನೋಡಿ ಆಶ್ಚರ್ಯಗೊಂಡರು. ಹೀಗೆ ಅಂದು ಶಿರಸಿಯ ಬಳಿಯ ಕುಗ್ರಾಮದಲ್ಲಿ ರೂಪುಗೊಂಡ ‘ವನಸ್ತ್ರೀ’ ಇಂದು ಸಿಲಿಕಾನ್ ಸಿಟಿಯಲ್ಲೂ ಛಾಪು ಮೂಡಿಸಿದ್ದಾಳೆ.

ಅಷ್ಟಕ್ಕೇ ಆಕೆ ನಿಂತಾಳು ಹೇಗೆ? ಇದೀಗ ಮಾರುಕಟ್ಟೆಯಲ್ಲಿ ‘ವನಸ್ತ್ರೀ’ ಉತ್ಪನ್ನಗಳಿಗೆ ವಿಶಿಷ್ಟ ಬೇಡಿಕೆಯಿದ್ದು, ಬೆಂಗಳೂರಿನ ೧೩
ಮಳಿಗೆಗಳಲ್ಲಿ ಹಾಗೆ ಮೈಸೂರು ಸೇರಿದಂತೆ ಹೊರ ರಾಜ್ಯಗಳಾದ ಗೋವಾ, ಚೆನ್ನೈ, ಮುಂಬೈ ಮತ್ತು ಪುಣೆಯಲ್ಲೂ ‘ವನಸ್ತ್ರೀ’ ಯಲ್ಲಿ ತಯಾರಾಗುವ ಜೇನುತುಪ್ಪ, ಹಲಸಿನ ಹಣ್ಣಿನ ಹಪ್ಪಳ, ಬೆಲ್ಲ, ಕೊಕಂಜ್ಯೂಸ್, ಸಾವಯವ ಬೀಜಗಳ ಕಿಟ್ ಹಾಗೂ ವಿಶೇಷವೆಂಬಂತೆ ೮ ಬಗೆಯ ಮಲೆನಾಡಿನ ತಂಬುಳಿಗಳ ಇನ್‌ಸ್ಟಂಟ್ ಪೌಡರ್ ಸೇರಿದಂತೆ ಹಲವು ಉತ್ಪನ್ನಗಳು ಮಾರಾಟ ವಾಗುತ್ತಿವೆ. ತಂಡದ ಸದಸ್ಯರು ತಾವು ಮನೆಯಲ್ಲೇ ತಯಾರಿಸಿದ ಉತ್ಪನ್ನವನ್ನು ‘ವನಸ್ತ್ರೀ’ಗೆ ತಂದುಕೊಡುತ್ತಾರೆ.

ನಂತರ ಅದರ ಗುಣಮಟ್ಟವನ್ನು ಪರೀಕ್ಷಿಸಿ ಶಿರಸಿಯಲ್ಲಿ ಪ್ಯಾಕ್ ಮಾಡಿ, ಲೇಬಲ್ ಅಂಟಿಸಿ ಕಳುಹಿಸಲಾಗುತ್ತದೆ. ಕರೋನಾ ಕಾಲಘಟ್ಟದಲ್ಲಿ ಎರಡು ವರ್ಷ ಮನೆಯಲ್ಲೇ ಕುಳಿತುಕೊಳ್ಳುವ ಅನಿವಾರ್ಯದಲ್ಲಿ,ರೂಪುಗೊಂಡದ್ದು ಅಂಚೆ ಸಾಗಾಟ ಯೋಜನೆ. ಹುಲೇಕಲ್ ಅಂಚೆ ಕಚೇರಿಯದ್ದು ಇದರಲ್ಲಿ ಪ್ರಮುಖ ಪಾತ್ರ. ಅದರ ಮೂಲಕ ಸಣ್ಣ ಸಣ್ಣ ಪೊಟ್ಟಣಗಳಲ್ಲಿ, ಇಡೀ ಭರತ ಖಂಡದ ಮೂಲೆಮೂಲೆಗಳಿಗೆ ವೈವಿಧ್ಯಮಯ ಬೀಜಗಳನ್ನು ರವಾನಿಸಲಾಗುತ್ತಿದೆ. ಬಳಕೆದಾರರು-ಬೀಜೋತ್ಪಾದಕರ
ಸುಗಮ ಸಂವಹನಕ್ಕೆ ವಾಟ್ಸ್‌ಆಪ್ ಗುಂಪುಗಳನ್ನು ರಚಿಸಲಾಗಿದೆ. ಇದೇ ವೇದಿಕೆಯಲ್ಲಿ ಆರ್ಡರ್‌ಗಳ ಬರುತ್ತವೆ.

ಅದಕ್ಕನುಗುಣವಾಗಿ ನಿರಂತರ ಬೀಜ-ಉತ್ಪನ್ನಗಳ ಪೂರೈಕೆಯಾಗುತ್ತಿದೆ. ಇಂಥ ‘ವನಸ್ತ್ರೀ’ ಕುರಿತಾಗಿ ಸ್ಥಳೀಯರಿಗೆ ಮಾಹಿತಿ
ಇದೆಯೋ ಇಲ್ಲವೋ ಆದರೆ ಅಮೆರಿಕ ಸೇರಿದಂತೆ ಹೊರ ದೇಶದ ವಿದ್ಯಾರ್ಥಿಗಳು ಇಂಟರ್ನೆಟ್‌ನಲ್ಲಿ ಈ ಬಗ್ಗೆ ತಿಳಿದು
ಇಂಟರ್ನ್‌ ಶಿಪ್‌ಗಾಗಿ ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ! ಅವರಲ್ಲಿರುವ ಪ್ರತಿಭೆಯಿಂದ ಸಂಸ್ಥೆಗೆ ಪ್ರಯೋಜನ ಪಡೆದು ಕೊಳ್ಳುವುದರೊಂದಿಗೆ ಇಲ್ಲಿನ ದೇಸಿ ಸಂಸ್ಕೃತಿಯನ್ನು ಪರಿಚಯಿಸುವ ಅದ್ಭುತ ಕೆಲಸವೂ ನಡೆಯುತ್ತಿದೆ. ಮನೋರಮಾಕ್ಕರ ಮಾತಲ್ಲೆ ಕೇಳುವುದಾದರೆ ಫಾರಿನ್ನಿಂದ ಬಂದರೂ ಇಲ್ಲಿನ ಜನರೊಂದಿಗೆ ಒಂದಾಗಿ ಬೆರೆಯುತ್ತಾರೆ. ಅದರಲ್ಲೂ ಮಲೆನಾಡಿನ ಅಡುಗೆಗಳೆಂದರೆ ಅವರಿಗೆ ಬಲು ಇಷ್ಟ. ಅಪ್ಪೆಹುಳಿ, ತಂಬಳಿ, ದೋಸೆಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ವನಸ್ತ್ರೀ’ಸದಸ್ಯರೊಂದಿಗೆ ಸೇರಿ ಹಿತ್ತಿಲಿನ ತೋಟದಲ್ಲಿ ಕೈ ಮಣ್ಣು ಮಾಡಿಕೊಳ್ಳುತ್ತಾರೆ. ಇದರಿಂದ ಸದಸ್ಯರಿಗೂ ಬಹಳಷ್ಟು ಖುಷಿ ಇದೆ. ‘ಮಲೆನಾಡು ಬಹಳ ಅಪರೂಪದ ಜಾಗ. ಆದರೆ ಇಲ್ಲಿನ ರೈತಾಪಿ ಮಹಿಳೆಯರಿಗೆ ಮುಖವಿಲ್ಲ, ಧ್ವನಿ ಇಲ್ಲ, ಆಕಾರವಿಲ್ಲ. ಮತ್ತು ಈಗಿನ ಕಾಲದಲ್ಲಿ ಆಹಾರ ಅಸುರಕ್ಷತೆ, ಅಪೌಷ್ಠಿಕ ಆಹಾರ ಇತ್ಯಾದಿ ಸಮಸ್ಯೆಗಳಿಗೆ ಅವರ ಸಾಂಸ್ಕೃತಿಕ ಮತ್ತು ಪಾರಂಪರಿಕ ಜ್ಞಾನದಲ್ಲೇ ಪರಿಹಾರವಿದೆ. ಇದನ್ನೆಲ್ಲ ಕಳೆದುಕೊಳ್ಳುವ ಮುನ್ನ ಅವರನ್ನು ಒಂದುಗೋಡಿಸಬೇಕು ಮತ್ತು ಅದರಿಂದ ಸಮಾಜಕ್ಕೆ ಉಪಯೋಗವಾಗಬೇಕೆಂಬ ಒಳ್ಳೆಯ ಉದ್ದೇಶದೊಂದಿಗೆ ವನಸೀ ಹುಟ್ಟುಹಾಕಿದೆ’ ಎನ್ನುತ್ತಾರೆ ‘ವನಸ್ತ್ರೀ’ರುವಾರಿ ಸುನೀತಾ ರಾವ್.

ವನಸ್ತ್ರೀ’ಯ ಕೆಲಸ ಕೇವಲ ಇಷ್ಟಕ್ಕೆ ಸೀಮಿತವಾಗಿಲ್ಲ. ಬದಲಾಗಿ ಒಂದು ಮಾದರಿ ಸಮುದಾಯವನ್ನು ರೂಪಿಸುವಲ್ಲೂ ಮಹತ್ತರ ಪಾತ್ರ ವಹಿಸಿದೆ. ಸದಾ ಸಂಪ್ರದಾಯದ ಚೌಕಟ್ಟಿನಲ್ಲಿ ಬಂಧಿತರಾಗಿರುವ ಹಳ್ಳಿಯಮಹಿಳೆಯರು ಭೇದಗಳೆಲ್ಲವ ಬದಿಗಿಟ್ಟು ಒಂದು ದಿನ ಒಟ್ಟಾಗಿ ಸೇರಿ ಒಂದು ಸುಂದರ ತಾಣಕ್ಕೆ ಪಿಕ್‌ನಿಕ್ ಹೋಗಿ ಅಲ್ಲೇ ಅಡುಗೆ ಮಾಡಿ, ಊಟ ಮಾಡಿ ಒಂದಷ್ಟು ಹರಟೆ ಹೊಡೆದು ವಾಪಾಸಾಗುತ್ತಾರೆಂದರೆ ಸಮಾನತೆಯ ಹಾದಿಯಲಿ ‘ವನಸ್ತ್ರೀ’ ಮೂಡಿಸಿದ ಬದಲಾವಣೆಯ
ಅರಿವಾಗುತ್ತದೆ. ಇನ್ನು ಭವಿಷ್ಯವನ್ನು ಹಸುರಾಗಿಸುವ ನಿಟ್ಟಿನಲ್ಲಿ ಪೇಟೆಯಲ್ಲಿ ಬೆಳೆದ ಮಕ್ಕಳಿಗೆ ಶಿಬಿರ ಆಯೋಜಿಸಿ, ಮಲೆನಾಡಿನ ತಿಂಡಿಯ ಸ್ವಾದದೊಂದಿಗೆ ಇಲ್ಲಿನ ಪರಿಸರದ ರುಚಿಯನ್ನೂ ಉಣಿಸಿ, ‘ವನಸೀ‘ಸದಸ್ಯರ ಯಶೋಗಾಥೆ ಕೇಳಿಸಿ, ಒಂದಷ್ಟು ಹಸಿರು ಚಿಂತನೆಯನ್ನೂ ತಲೆಯಲ್ಲಿ ಬಿತ್ತುವ ಕೆಲಸವೂ ಸದ್ದಿಲ್ಲದೆ ನಡೆಯುತ್ತಿದೆ.

ಇಂಥ ವೇದಿಕೆಗಳಲ್ಲೇ ಇತ್ತೀಚೆಗೆ ಸಂಸ್ಥೆಯ ಸದಸ್ಯೆ ರೇವತಿಯಕ್ಕನ ಕವನ ಸಂಕಲನವೂ ಬಿಡುಗಡೆಯಾಗಿದೆ. ಕೆಲವು ಮದುವೆ ಗಳಲ್ಲಿ ಬಂದ ಅತಿಥಿಗಳಿಗೆ ಸಸಿಗಳನ್ನು ಕೊಟ್ಟಿರುವುದನ್ನು ನೀವು ನೋಡರಬಹುದು ಅಥವಾ ಸುದ್ದಿಯಾಗಿ ಕೇಳಿರಬಹುದು. ಆದರೆ ಈ ಸಸಿಗಳು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಪಡೆದುಕೊಂಡವರು ಕಷ್ಟದಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಇತ್ತೀಚಿನ ಕೆಲವು ಮದುವೆಗಳಲ್ಲಿ ಬೀಜಗಳನ್ನು ತಾಂಬೂಲ ರೂಪದಲ್ಲಿ ನೀಡಲಾಗುತ್ತಿದೆಯಂತೆ. ಅದರಲ್ಲೂ ೞವನಸ್ತ್ರೀೞ ಸಂಸ್ಥೆಯಲ್ಲಿ ಉತ್ತಮ ತಳಿಯ ಬೀಜಗಳನ್ನು ಪೊಟ್ಟಣಗಳಲ್ಲಿ ಉತ್ತಮ ರೀತಿಯ ಪ್ಯಾಕೇಜ್‌ನೊಂದಿಗೆ ಮಾರುವುದರಿಂದ ತಾಂಬೂಲದ ಜತೆ ನೀಡಲು ಬೀಜದ ಪ್ಯಾಕೆಟ್‌ಗಳನ್ನು ಕೊಂಡುಹೋಗುತ್ತಾರಂತೆ!

ಮಲೆನಾಡಿನ ಗೃಹಿಣಿಯರು ಪುರುಷರಿಗಿಂತ ಹೆಚ್ಚು ಶ್ರಮಜೀವಿಗಳೆಂದರೆ ತಪ್ಪಲ್ಲ. ಗಂಡಸರು ತೋಟ ಗದ್ದೆಯಲ್ಲಿ ಶ್ರಮ ವಹಿಸಿ ದುಡಿಯುತ್ತಾರಾದರೂ ಆ ಶ್ರಮ ಹಣ ರೂಪದಲ್ಲಿ ಮರಳಿ ದೊರೆಯುತ್ತದೆ. ಆದರೆ ಹೆಣ್ಣುಮಕ್ಕಳ ಸ್ಥಿತಿ ಹಾಗಲ್ಲ. ಮನೆಯಲ್ಲಿ ಎಲ್ಲರಿಗಿಂತ ಮುಂಚಿತವಾಗಿಯೇ ಎದ್ದು ಕೊಟ್ಟಿಗೆಯಾದಿಯಾಗಿ ಮನೆಯ ಪ್ರತಿಯೊಂದು ಕೆಲಸವನ್ನೂ ಮಾಡಿ ಮುಗಿಸಿ ಮಲಗುವಷ್ಟರಲ್ಲಿ ಮನೆ ಮಂದಿ ನಿದ್ದೆಗೆ ಜಾರಿರುತ್ತಾರೆ. ಆದರೂ ಒಂದು ಬಳೆ ಕೊಳ್ಳಲು ದುಡ್ಡು ಬೇಕೆಂದರೆ ಗಂಡನ ಹತ್ತಿರ ಕೈಯೊಡ್ಡಬೇಕು. ವಾಸ್ತವ ಸ್ಥಿತಿ ಹೀಗಿರುವಾಗ. ತಮ್ಮ ಪಾಲಿನ ಹಿತ್ತಲಿನಲ್ಲಿ ಅಡಗಿದ್ದ ಆರ್ಥಿಕ ಸ್ವಾವಲಂಬನೆಯನ್ನು ಮಹಿಳೆಯರಿಗೆ ಪೂಚಯಿಸಿದ್ದಲ್ಲದೆ, ಸ್ಥಳೀಯ ಉತ್ಕೃಷ್ಟ ತಳಿಗಳ ಸಂರಕ್ಷಣೆಯನ್ನೂ ಮಾಡುತ್ತಿರುವ ೞವನಸ್ತ್ರೀೞಸಂಸ್ಥೆಗೆ, ಅಲ್ಲಿನ ಸದಸ್ಯರಿಗೆ ಹಾಗೂ ಇದರ ರೂವಾರಿ ಸುನಿತಾ ರಾವ್ ಅವರಿಗೆ ಸಲಾಂ ಹೊಡೆಯಲೇ ಬೇಕು.

ಹ್ಞಾ, ಅಂದಹಾಗೆ ಆರಂಭದಲ್ಲಿ ಬೆರಳಣಿಕೆಯಷ್ಟು ಸದಸ್ಯರನ್ನು ಹೊಂದಿದ್ದ ‘ವನಸೀ’ಸಂಸ್ಥೆಯಲ್ಲಿ ಸದ್ಯ ಇನ್ನೂರಕ್ಕೂ ಮಿಕ್ಕಿ ಸದಸ್ಯರಿದ್ದಾರೆ! ಅವರಿಗೊಂದು ಭೇಷ್ ಎನ್ನಬೇಕೆನಿಸಿದರೆ, ಸುನಿತಾರಾವ್ ಅವರ ದೂರವಾಣಿ: ೮೧೦೫೭೫೨೩೨೫.