ತನ್ನಿಮಿತ್ತ
ಗ.ನಾ.ಭಟ್ಟ
ರಾಮನು ಆದರ್ಶ ಪುರುಷ ಎಂದೇ ಖ್ಯಾತನಾಗಿರುವ ವ್ಯಕ್ತಿ. ಆತನು ಆಳಿದ ರಾಜ್ಯವನ್ನು ರಾಮರಾಜ್ಯ ಎಂದೇ ಕರೆದು, ಇಂದಿಗೂ ಎಲ್ಲಾ ಆಡಳಿತಗಳು ‘ರಾಮರಾಜ್ಯ’ವನ್ನು ನೀಡಲು ಪ್ರಯತ್ನಿಸುತ್ತಾರೆ, ಆ ಮೂಲಕ ಜನರ ಹಿತವನ್ನು ಕಾಪಾಡಲು ಬಯಸುತ್ತಾರೆ. ರಾಮನು ಮೈಗೂಡಿಸಿಕೊಂಡಿದ್ದ ಅಂತಹ ವಿಶೇಷ ಗುಣಗಳು ಯಾವುವು? ಅದನ್ನು ವಾಲ್ಮೀಕಿ ಋಷಿಗಳು ಆ ಮಹಾನ್ ಕಾವ್ಯದಲ್ಲಿ ಹೇಗೆ ಸೆರೆಹಿಡಿದಿದ್ದಾರೆ? ನಾಳೆ ಆಚರಣೆಗೊಳ್ಳಲಿರುವ ರಾಮನವಮಿಯ ಸಂದರ್ಭದಲ್ಲಿ ಈ ಬರಹ.
ವಾಲ್ಮೀಕಿಯ ಪೂರ್ವಜೀವನದ ಒಂದು ಐತಿಹ್ಯದಂತೆ ಆತ ಒಬ್ಬ ಬೇಡನಾಗಿದ್ದ. ಮಾತ್ರವಲ್ಲ ದರೋಡೆಕೋರನಾಗಿ ಜೀವಿಸು ತ್ತಿದ್ದ. ದಾರಿಯಲ್ಲಿ ಹೋಗಿ ಬರುವವರನ್ನು ಕೊಲೆಬೆದರಿಕೆ ಹಾಕಿ ಸುಲಿಯುತ್ತಿದ್ದ. ಅವರ ಬಳಿ ಇರುವ ನಗನಾಣ್ಯಗಳೆನ್ನೆಲ್ಲಾ ಕಸಿದು ಕೊಳ್ಳುತ್ತಿದ್ದ. ಹಾಗೆ ಆತ ತನ್ನ ಕೆಲಸದಲ್ಲಿ ನಿರತನಾಗಿದ್ದಾಗ ಒಮ್ಮೆ ಆ ದಾರಿಯಲ್ಲಿ ನಾರದಮಹರ್ಷಿಗಳು ಬಂದರು.
ದರೋಡೆಕೊರನಿಗೆ ನಾರದರೇನು ನಾರದರ ಅಪ್ಪನೇನು? ಅವರನ್ನೂ ಗದರಿಸಿ, ಅವರಲ್ಲಿರುವ ವಸ್ತುಗಳನ್ನೂ, ಬೆಲೆಬಾಳುವ ಪದಾರ್ಥಗಳನ್ನೂ ಕೊಡುವಂತೆ ಆಗ್ರಹಿಸಿದ. ನಾರದರ ಬಳಿ ಅವರ ಮಹತೀವೀಣೆಯನ್ನು ಬಿಟ್ಟು ಇನ್ನೇನು ಇರಲು ಸಾಧ್ಯ? ‘ಅಯ್ಯಾ, ನನ್ನ ಬಳಿ ಇರುವುದೊಂದೇ ಈ ವೀಣೆ. ಬೇಕಾದರೆ ಇದನ್ನು ಪಡೆ’ ಎಂದರು. ಹಾಗೆ ಅವರು ಹೇಳುವಾಗ ಬೇಡ ಅವರ ಮಾತಲ್ಲಿ ಏನೋ ಆಪ್ಯಾಯತೆ ಯನ್ನೂ, ಅನುಗ್ರಾಹಕ ಗುಣವನ್ನೂ ಕಂಡ. ಯಾರು? ಏನು ? ಎಂದು ಎಲ್ಲಾ ವಿಚಾರಿಸಿದ.
ನಾರದರು ತನ್ನನ್ನು ಪರಿಚಯಿಸಿಕೊಂಡು ‘ನೀನು ಹೀಗೆ ನಿರಪರಾಽಗಳನ್ನು ಕೊಲ್ಲುವುದು, ಅವರ ಬಳಿ ಇರುವ ವಸ್ತುಗಳನ್ನು ಬಲಾತ್ಕಾರವಾಗಿ ಕಸಿದುಕೊಳ್ಳುವುದು ಅಪರಾಧ. ಅದು ಸರಿಯಲ್ಲ. ನೀನು ಇಂತಹ ಹೇಯಕೃತ್ಯವನ್ನು ತ್ಯಜಿಸಿ ಮನುಷ್ಯನಾಗಿ, ಒಳ್ಳೆಯವನಾಗಿ ಬದುಕು’ ಎಂದರು. ‘ಅದಕ್ಕೇನು ಮಾಡಬೇಕು?’ ಎಂದು ಮರುಪ್ರಶ್ನಿಸಿದ ವ್ಯಾಧ. ತಾನೊಂದು ಮಂತ್ರವನ್ನು ಹೇಳಿಕೊಡುವುದಾಗಿಯೂ ಅದನ್ನು ಅನವರತ ಜಪಿಸು, ಅದರಿಂದ ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಅವನಿಗೆ ರಾಮ ಮಂತ್ರವನ್ನು ಬೋಽಸಿದರು. ಆ ರಾಮನಾಮಸ್ಮರಣೆಯೇ ಆ ಬೇಡನಿಗೆ ತಾರಕ ಮಂತ್ರವಾಗಿ ಅವನನ್ನು ಋಷಿಯನ್ನಾಗಿ, ಮಹರ್ಷಿಯನ್ನಾಗಿ ಪರಿವರ್ತಿಸಿತು.
ಅವನು ಹಾಗೆ ಆ ಮಂತ್ರವನ್ನು ಜಪಿಸುವಾಗ ಅವನ ಸುತ್ತ ಹುತ್ತ ಬೆಳೆದು ಅವನಿಗೆ ಅವನ ಪರಿವೆಯೇ ಇಲ್ಲವಾಗಿ ಅವನೊಬ್ಬ
ದಾರ್ಶನಿಕನಾಗಿ, ಕವಿಯಾಗಿ ಮಾರ್ಪಟ್ಟಿದ್ದ. ಅವನು ಆ ಹುತ್ತ ವನ್ನು ಒಡೆದು ಹೊರಗೆ ಬಂದಿದ್ದರಿಂದ ಅವನು ವಾಲ್ಮೀಕಿಯೆನಿ
ಸಿಕೊಂಡ. ಸಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ ಎಂದು ಆರ್ಥ. ವಲ್ಮೀಕವೇ ಅವನ ಮರುಜನ್ಮಕ್ಕೆ, ಹೊಸಪ್ರಜ್ಞೆಗೆ, ಹೊಸ ಮನಸ್ಸಿಗೆ, ಹೊಸಬುದ್ಧಿಗೆ, ಹೊಸದಿಕ್ಕಿಗೆ ಕಾರಣವಾದ್ದರಿಂದ ಅಂದಿನಿಂದ ಆತ ವಾಲ್ಮೀಕಿಯೆನಿಸಿಕೊಂಡು ತಮಸಾನದಿಯ ದಡದಲ್ಲಿ ವಾಸಿಸತೊಡಗಿದ.
ಅವನೊಬ್ಬ ದೊಡ್ಡ ಕುಲಪತಿಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಾತ್ಮವಿದ್ಯೆಯನ್ನೂ, ಅದರ ಅಂಗಗಳಾದ ವೇದೋ
ಪನಿಷತ್ತುಗಳನ್ನೂ ಶಿಲ್ಪ, ಗಾಂಧರ್ವ, ನಾಟ್ಯ ಮೊದಲಾದ ಲೌಕಿಕವಿದ್ಯಗಳನ್ನೂ ಹೇಳಿಕೊಡುತ್ತಿದ್ದ. ಹಾಗಿರುವಾಗಲೇ
ನಾರದರು ಮತ್ತೊಮ್ಮೆ ಅಲ್ಲಿಗೆ ಬಂದರು. ವಾಲ್ಮೀಕಿಗೆ ಎಲ್ಲಿಲ್ಲದ ಹರ್ಷವುಂಟಾಯಿತು. ಅವರನ್ನು ತನ್ನ ಗುರುವೆಂದು ಮನಸಾ
ಸ್ಮರಿಸಿ, ಅರ್ಘ್ಯಪಾದ್ಯಾದಿಗಳಿಂದ ಅವರನ್ನು ಅರ್ಚಿಸಿ ತನ್ನ ಮನದ ಕುತೂಹಲವನ್ನು ಅವರ ಬಳಿ ತೋಡಿಕೊಂಡ. ತನ್ನ
ಮನದಲ್ಲಿ ಉದಿಸಿದ ಸಂದೇಹಕ್ಕೆ ನಿವಾರಣೆಯನ್ನು ಬಯಸಿದ.
ಅವನ ಸಂದೇಹ ಮತ್ತೇನೂ ಅಲ್ಲ. ಅವನಿಗೊಂದು ಕಾವ್ಯವನ್ನು ಬರೆಯಬೇಕಿತ್ತು. ತನ್ನ ಮನದಲ್ಲೇ ಒಬ್ಬ ಆದರ್ಶ ವ್ಯಕ್ತಿಯನ್ನು ಚಿತ್ರಿಸಿಕೊಂಡಿದ್ದ. ಆ ಆದರ್ಶದಲ್ಲಿ ಹದಿನಾರು ಗುಣಗಳನ್ನು ಸೇರಿಸಿಕೊಂಡಿದ್ದ. ಆ ಹದಿನಾರು ಗುಣಗಳು ಒಬ್ಬನಲ್ಲೇ ಇರಬೇಕು. ಮಾತ್ರವಲ್ಲ. ಅವನು ಮನುಷ್ಯನೇ ಆಗಿರಬೇಕು. ದೇವತೆಯಾಗಿರಬಾರದು. ಅಥವಾ ಇನ್ಯಾರೋ ಆಗಿರಬಾರದು. ಅಂತಹ ವ್ಯಕ್ತಿ ಯಾರು ಅನ್ನುವುದೇ ಅವನ ಸಂದೇಹ ಮತ್ತು ಕುತೂಹಲ. ವಾಲ್ಮೀಕಿ ನಾರದರಲ್ಲಿ ಕೇಳಿದ ಗುಣವಂತ, ವೀರ್ಯವಂತ, ಧರ್ಮಜ್ಞ, ಕೃತಜ್ಞ, ಸತ್ಯವಾದಿ, ದೃಢಪ್ರತಿಜ್ಞ ಮೊದಲಾದ ಹದಿನಾರು ಗುಣಗಳಲ್ಲಿ ವಿದ್ವಾಂಸ, ಸಮರ್ಥ, ಸುಂದರ, ಆತ್ಮವಂತ ಮತ್ತು ಜಿತಕ್ರೋಧ ಎಂಬ ಗುಣಗಳೂ ಸೇರಿವೆ.
ವಿದ್ವಾನ್ ಕಃ ಕಃ ಸಮರ್ಥಶ್ಚ ಕಶ್ಚೈಕಪ್ರಿಯದರ್ಶನಃ |
ಆತ್ಮವಾನ್ ಕೋ ಜಿತಕ್ರೋಧೋ ದ್ಯುತಿಮಾನ್
ಕೋನಸೂಯಕಃ ||
ಬಾಲಕಾಂಡ: ೧-೩,೪
ಇಲ್ಲಿ ವಿದ್ವಾನ್: ಎಂದರೆ- ಎಲ್ಲವನ್ನೂ ತಿಳಿದವನು, ಶಾಸ್ತ್ರಕೋವಿದ ಎಂದು ಅರ್ಥ. ರಾಮ ಒಬ್ಬ ಕ್ಷತ್ರಿಯನಾದ್ದರಿಂದ ಅವನ ವೀರ್ಯ, ಶೌರ್ಯ, ಪರಾಕ್ರಮ, ಬಿಲ್ವಿದ್ಯಾನೈಪುಣ್ಯ, ಶತ್ರುಸಂಹಾರ ಮುಂತಾದ ಕ್ಷಾತ್ರಗುಣಗಳು ಮುನ್ನೆಲೆಗೆ ಬರುತ್ತವೆಯೇ ಹೊರತು ಅವನ ವಿದ್ವತ್, ಶಾಸ್ತ್ರಪರಿಣತಿ, ವೇದಾಧ್ಯಯನ ಮೊದಲಾದ ಬ್ರಾಹ್ಮವಿದ್ಯೆಗಳು ಗಮನಕ್ಕೆ ಬರುವುದಿಲ್ಲ. ಆದರೆ ರಾಮ ಅಪ್ರತಿಮ ವೀರನಾಗಿರುವಂತೆ ಮಹಾವಿದ್ವಾಂಸನೂ ಆಗಿದ್ದ. ಅದನ್ನು ನಾರದರೇ ವಾಲ್ಮೀಕಿಗೆ ಪರಿಚಯಿಸುವಾಗ ಹೇಳಿದ್ದರು.
ವೇದವೇದಾಂಗತತ್ತ್ವಜ್ಞೋ ಧನುರ್ವೇದೇ ಚ ನಿಷ್ಠಿತಃ |
ಸರ್ವಶಾಸಾರ್ಥತತ್ತ್ವಜ್ಞಃ ಸ್ಮತಿಮಾನ್ ಪ್ರತಿಭಾನವಾನ್ ||
ಬಾಲಕಾಂಡ: ೧-೧೪,೧೫
‘ಶ್ರೀರಾಮ ವೇದವೇದಾಂಗಗಳ ರಹಸ್ಯವನ್ನು ಬಲ್ಲವನು; ಧನುರ್ವೇದದಲ್ಲಿ ವಿಶೇಷ ನಿಷ್ಠೆಯುಳ್ಳವನು. ಸಕಲಶಾಸ್ತ್ರಗಳ
ತತ್ತ್ವವನ್ನು ಅರಿತವನು; ಅವನ ಶ್ಮರಣಶಕ್ತಿ ಅಸದೃಶವಾದುದು; ಅವನು ಮಹಾಪ್ರತಿಭಾಶಾಲಿ’ ಎಂದು ನಾರದರು ಹೇಳುತ್ತಾರೆ.
ಇವಲ್ಲದೆ ಮಹರ್ಷಿ ವಾಲ್ಮೀಕಿಯೇ ಅವನ ವಿದ್ವತ್ತನ್ನು ಕೊಂಡಾಡಿದ್ದು ಇದೆ.
ಸಮ್ಯಗ್ವಿದ್ಯಾವ್ರತಸ್ನಾತೋ ಯಥಾವತ್ ಸಾಂಗವೇದವಿತ್ |
ಇಷ್ವಸೇ ಚ ಪಿತುಃ ಶ್ರೇಷ್ಠೋ ಬಭೂವ ಭರತಾಗ್ರಜಃ ||
ಅಯೋಧ್ಯಾಕಾಂಡ: ೧-೨೦
‘ಶ್ರೀರಾಮನು ಗುರುಸನ್ನಿಧಿಯಲ್ಲಿ ಕ್ರಮವಾಗಿ ವಿದ್ಯಾಭ್ಯಾಸವನ್ನು ಮಾಡಿ ಸಮಾವೃತನಾಗಿದ್ದನು. ವೇದವೇದಾಂಗಗಳನ್ನು
ವಿಧಿ ಪೂರ್ವಕವಾಗಿ ಅಧ್ಯಯನ ಮಾಡಿದ್ದನು. ಅಸಶಸ್ತ್ರಗಳಲ್ಲಿ ತಂದೆಯನ್ನು ಮೀರಿಸುವಷ್ಟು ಪರಿಣತಿ ಪಡೆದಿದ್ದ. ಇದನ್ನು
ಹನುಮಂತ ವ್ಯಾಖ್ಯಾನಿಸುವುದನ್ನು ನೋಡಬೇಕು. ಅದು ಬರುವುದು ‘ಸುಂದರಕಾಂಡ’ದಲ್ಲಿ. ಸೀತೆಗ ತಾನು ನಿಜವಾಗಿಯೂ ರಾಮದೂತನೆಂದು ನಂಬಿಕೆಯುಂಟಾಗಲು ಹೇಳಿದ ಸಂದರ್ಭದಲ್ಲಿ ಬಂದ ಮಾತು ಅದು.
ಯಜುರ್ವೇದ ವಿನೀತಶ್ಚ ವೇದವಿದ್ಭಿಃ ಸುಪೂಜಿತಃ |
ಧನುರ್ವೇದೇ ಚ ವೇದೇಷು ವೇದಾಂಗೇಷು ಚ ನಿಷ್ಠಿತಃ ||
ಸುಂದರಕಾಂಡ: ೩೫-೧೪
“ಶ್ರೀರಾಮ ಯಜುರ್ವೇದದಲ್ಲಿ ಅದ್ಭುತಪಾಂಡಿತ್ಯವುಳ್ಳವನು. (ಅದು ಅವನ ಸ್ವಾಧ್ಯಾಯಶಾಖೆ) ವೇದಪಾರಂಗತ ರಾದ ಬ್ರಾಹ್ಮಣರಿಂದಲೂ ಗೌರವಿಸಲ್ಪಡುವವನು. ಧನುರ್ವೇ ದದಲ್ಲಂತೂ ಕೇಳುವುದೇ ಬೇಡ. ಅಷ್ಟು ಪರಿಣತಿ ಅವನಿಗೆ. ವೇದಾಂಗ ಗಳಲ್ಲೂ ಅಷ್ಟೇ!” ಇವಿಷ್ಟು ರಾಮನ ವಿದ್ವತ್ತಿನ ಬಗ್ಗೆ ಬಂದ ಪ್ರಶಸ್ತಿಗಳು. ಶ್ರೀರಾಮ ವಿದ್ವಾಂಸನಾಗಿರುವಷ್ಟೇ ಮಹಾಸಾಮರ್ಥ್ಯ ಶಾಲಿಯೂ ಆಗಿದ್ದ. ಕವಿ ವಾಲ್ಮೀಕಿಯೇ ರಾಮನ ಸಾಮರ್ಥ್ಯ ವನ್ನು ಕೊಂಡಾಡಿದ್ದು ಅಯೋಧ್ಯಾಕಾಂಡದಲ್ಲಿ ಬರುತ್ತದೆ. ಈ ಎಲ್ಲರನ್ನೂ ಸಂಹರಿಸುವುದಕ್ಕೆ ಮೊದಲೇ ವಾಲ್ಮೀಕಿ ರಾಮನ ಸಾಮರ್ಥ್ಯವನ್ನು ಗುರುತಿಸಿದ್ದ.
ಯದಾ ವ್ರಜತಿ ಸಂಗ್ರಾಮಂ ಗ್ರಾಮಾರ್ಥೇ ನಗರಸ್ಯ ವಾ ||
ಗತ್ವಾ ಸೌಮಿತ್ರಿಸಹಿತೋ ನಾವಿಜಿತ್ಯ ನಿವರ್ತತೇ ||
ಅಯೋಧ್ಯಾಕಾಂಡ: ೨-೩೬,೩೭
“ಗ್ರಾಮವನ್ನೋ ನಗರವನ್ನೋ ರಕ್ಷಿಸುವುದಕ್ಕಾಗಿ ಯುದ್ಧ ಒದಗಿದರೆ, ಲಕ್ಷ್ಮಣನೊಡನೆ ಹೊರಟನೆಂದರೆ ಶತ್ರುಗಳನ್ನು
ಗೆಲ್ಲದೆ ಹಿಂದಿರುಗುವುದಿಲ್ಲ” ಪ್ರಿಯದರ್ಶನಃ:- ಎಂದರೆ ಎಷ್ಟು ನೋಡಿದರೂ ನೋಡಿ ದಣಿಯದ, ಮತ್ತೆ ಮತ್ತೆ ನೋಡ ಬೇಕೆನ್ನೆಸುವ ಅಪೂರ್ವ ಸೌಂದರ್ಯನಿಽ ಎಂದು ಅರ್ಥ.
ಶ್ರೀರಾಮನ ಸೌಂದರ್ಯದ ಕುರಿತು ದಿನದಿನವೂ ಭಕ್ತಿಯಿಂದ ರಾಮಾಯಣ ಪಾರಾಯಣ ಮಾಡುವವರ ಬಾಯಲ್ಲಿ ನಿತ್ಯವೂ ನಲಿಯುತ್ತಿರುತ್ತದೆ. ಅದು- ವೇದವೇದಾಂತವೇದ್ಯಾಯ ಮೇಘಶ್ಯಾಮಲಮೂರ್ತಯೇ |
ಪುಂಸಾಂ ಮೋಹನರೂಪಾಯ ಪುಣ್ಯಶ್ಲೋಕಾಯ ಮಂಗಲಮ್ ||
“ಶ್ರೀರಾಮನು ವೇದವೇದಾಂತಗಳಲ್ಲಿ ಪ್ರತಿಪಾದಿಸಲ್ಪಟ್ಟವನು, ಮೇಘದಂತೆ ಕಪ್ಪುಬಣ್ಣವನ್ನು ಹೊಂದಿದವನು, ಗಂಡಸರೂ ಮೋಹಗೊಳ್ಳುವಷ್ಟು ಸುಂದರರೂಪವನ್ನು ಹೊಂದಿದವನು. ಅಂತಹ ಪ್ರಾತಃಸ್ಮರಣೀಯನಾದ ಶ್ರೀರಾಮನಿಗೆ ಮಂಗಳ ವುಂಟಾಗಲಿ.” ಎಂದು ಭಕ್ತನೊಬ್ಬ ಕೊಂಡಾಡಿದ್ದು ಶ್ರೀರಾಮನ ಸೌಂದರ್ಯಕ್ಕೆ ಆರತಿ ಬೆಳಗಿದಂತಿದೆ.
“ರಾಮ” ಎಂಬ ಹೆಸರಲ್ಲೇ ಸೌಂದರ್ಯವಿದೆ. “ಲೋಕಾನ್ ರಮಯತಿ ಇತಿ ರಾಮಃ”, “ತನ್ನ ಚೆಲುವಿನಿಂದಲೇ ಜಗತ್ತನ್ನು
ರಂಜಿಸು ವವನು” ಎಂದು ಇದಕ್ಕೆ ಅರ್ಥ. ಶ್ರೀರಾಮನ ಸೌಂದರ್ಯವನ್ನು ಕವಿ ವಾಲ್ಮೀಕಿ ಬಹುರೋಚಕವಾಗಿ ಸೆರೆಹಿಡಿದಿದ್ದಾನೆ.
ಗಂಧರ್ವರಾಜಪ್ರತಿಮಂ ಲೋಕೇ ವಿಖ್ಯಾತಪೌರುಷಮ್ |
ದೀರ್ಘಬಾಹುಂ ಮಹಾಸತ್ವಂ ಮತ್ತಮಾತಂಗಗಾಮಿನಮ್ ||
ಚಂದ್ರಕಾಂತಾನನಂ ರಾಮಮತೀವಪ್ರಿಯದರ್ಶನಮ್ |
ರೂಪೌದಾರ್ಯಗುಣೈಃ ಪುಂಸಾಂ ದೃಷ್ಟಿಚಿತ್ತಾಪಹಾರಿಣಮ್ |
ಘರ್ಮಾಭಿತಪ್ತಾಃ ಪರ್ಜನ್ಯಂ ಹ್ಲಾದಯಂತಮಿವ ಪ್ರಜಾಃ |
ನ ತತರ್ಪ ಸಮಾಯಾಂತಂ ಪಶ್ಯಮಾನೋ ನರಾಽಪಃ ||
ಅಯೋಧ್ಯಾ: ೩-೨೮,೨೯,೩೦
‘ಶ್ರೀರಾಮ ಗಂಧರ್ವರಿಗೆ ಸಮಾನಾದ ರೂಪವುಳ್ಳವನಾಗಿದ್ದ. ಲೋಕದಲ್ಲಿ ಪೌರುಷವಂತನೆಂದು ಪ್ರಖ್ಯಾತನಾಗಿದ್ದ. ನೀಳವಾದ
ತೊಳುಗಳುಳ್ಳವನೂ, ಮಹಾಸತ್ವಶಾಲಿಯಾಗಿಯೂ, ಮದ್ದಾನೆಯಂತೆ ಗಂಭೀರ ನಡಿಗೆಯುಳ್ಳವನೂ, ಚಂದ್ರನಂತೆ ಆಕರ್ಷಕ
ಮುಖವುಳ್ಳವನೂ ಆಗಿದ್ದ. ಅವನನ್ನು ನೋಡಿದಷ್ಟೂ ಆನಂದ ಹೆಚ್ಚುತ್ತಿತ್ತು. ತನ್ನ ಸೌಂದರ್ಯ, ಔದಾರ್ಯಾದಿಗುಣಗಳಿಂದ
ನೋಡುವವರ ಕಣ್ಮನವನ್ನು ಸೂರೆಗೋಳ್ಳುತ್ತಿದ್ದ. (ದೃಷ್ಟಿಚಿತ್ತಾಪಹಾರಿಣಮ್) ಬೇಸಿಗೆಯಿಂದ ಬಳಲಿದವರಿಗೆ ಮೇಘವಿದ್ದಂತೆ
ನೋಡುವ ಜನರೆಲ್ಲರಿಗೂ ಶ್ರೀರಾಮನು ಆಹ್ಲಾದವನ್ನುಂಟುಮಾಡುತ್ತಿದ್ದ.
ಅಂತಹ ಮಗನನ್ನು ಎಷ್ಟು ನೋಡಿದರೂ ದಶರಥನಿಗೆ ತೃಪ್ತಿಯಾಗಲಿಲ್ಲ.” ಇದು ವಾಲ್ಮೀಕಿ ರಾಮನ ಸೌಂದರ್ಯವನ್ನು ಕೊಂಡಾಡಿದ ಬಗೆ. ವಾಲ್ಮೀಕಿಯ ಮುಂದಿನ ಪ್ರಶ್ನೆ “ಆತ್ಮವಾನ್” ಯಾರು ಅಂತ? ಆತ್ಮವಾನ್- ಆತ್ಮ ಅನ್ನುವುದಕ್ಕೆ ಜೀವಾತ್ಮಾ, ಸಂಕಲ್ಪಶಕ್ತಿ-ಗಟ್ಟಿತನ, ದೇಹ, ಸ್ವಭಾವ ಮತ್ತು ಪರಮಾತ್ಮಾ ಎಂಬ ಅರ್ಥಗಳಿವೆ.
ಇಲ್ಲಿ ಸಂಕಲ್ಪಶಕ್ತಿ- ಗಟ್ಟಿತನ ಅನ್ನವುದನ್ನು ತೆಗೆದುಕೊಳ್ಳುವುದಾದರೆ ಮುಂಡಕೋಪನಿಷತ್ತಿನ “ನಾಯಮಾತ್ಮಾ ಬಲಹೀನೇನ
ಲಭ್ಯಃ”, “ಬಲಹೀನನಿಗೆ ಆತ್ಮವು ಲಭಿಸುವುದಿಲ್ಲ.”ಎಂಬ ಮಾತನ್ನು ನೆನಪಿಸಿಕೊಳ್ಳಬೇಕು. ಯಾರು ಕಷ್ಟಸಹಿಷ್ಣುವಲ್ಲವೋ
ಅವನ ಆತ್ಮ ಬಲಿಯುವುದಿಲ್ಲ. ಧರ್ಮರಕ್ಷಕನಿಗೆ ಆತ್ಮ ಗಟ್ಟಿಯಿರಬೇಕು. ಇಲ್ಲಿ ಆತ್ಮ ಅಂದರೆ Wಟಟ Poತಿeಡಿ, ಸಂಕಲ್ಪಶಕ್ತಿ.
ದೃಢನಿರ್ಧಾರ ಎಂದು ಅರ್ಥ. ನಮ್ಮಲ್ಲಿ ಅನೇಕರಿಗೆ ಮನಸ್ಸು ಮೆತುವಾಗಿರುತ್ತದೆ. ಅಳ್ಳಕವಾಗಿರುತ್ತದೆ.
ಅಂಥಹವರಿಗೆ ನ್ಯಾಯಾನ್ಯಾಯದ, ಧರ್ಮಾಧರ್ಮದ, ಒಳಿತು-ಕೆಡುಕುಗಳ ಸ್ಪಷ್ಟ ಪರಿಜ್ಞಾನವಿರುವುದಿಲ್ಲ. ಅಂತಹವರು ಎಲ್ಲದಕೂ ಅಯ್ಯೋ ಅನ್ನುತ್ತಿರುತ್ತಾರೆ. ಅಂತಹವರ ಆತ್ಮ ಗಟ್ಟಿಯಿರುವುದಿಲ್ಲ. ಅದನ್ನೇ ಆತ್ಮದೌರ್ಬಲ್ಯ, ಆತ್ಮಶೈಥಿಲ್ಯ ಅಂತ ಹೇಳವುದು. ರಾಮನಲ್ಲಿ ಆತ್ಮಶಕ್ತಿ ವಿಪುಲವಾಗಿತ್ತು. ಇದನ್ನೇ ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಅದು “ಮಹಾಧೈರ್ಯ” ಎಂಬ ಗುಣ.
ತದಪ್ರಿಯಾಮಮಿತ್ರಘ್ನೋ ವಚನಂ ಮರಣೋಪಮಮ್ |
ಶ್ರುತ್ವಾ ನ ವಿವ್ಯಥೇ ರಾಮಃ ಕೈಕೇಯೀಂ ಚೇದಮಬ್ರವೀತ್ ||
ಅಯೋಧ್ಯಾ-೧೯-೧
ಆತ್ಮ ಅನ್ನವುದಕ್ಕೆ ಇನ್ನೊಂದು ಅರ್ಥ ಸತ್ವಶಾಲಿತ್ವ ಅಂತ. ರಾಮನ ಸತ್ವಶಾಲಿತ್ವವನ್ನು ಗಮನಿಸುವುದಾದರೆ ಆತ ಒಂದು
ನರಪಿಳ್ಳೆಯ ಸಹಾಯವೂ ಇಲ್ಲದೆ ಮೂರು ಲೋಕವನ್ನೇ ಜಯಿಸಿದ್ದ ರಾವಣನನ್ನು ಮುಗಿಸಿದ್ದ. ರಾವಣನ ನಗರಕ್ಕೆ ಮುತ್ತಿಗೆ
ಹಾಕಿ ರಾವಣನನ್ನೂ ಅವನ ನಗರವನ್ನೂ ಧ್ವಂಸಗೊಳಿಸಿದ್ದ. ವಾಲ್ಮೀಕಿಗಳ ಇನ್ನೊಂದು ಪ್ರಶ್ನೆಯಲ್ಲಿ ಬಹಳ ಮಹತ್ತರ ವಾದುದು ಜಿತಕ್ರೋಧಃ ಅನ್ನುವುದು.
ಜಿತಕ್ರೋಧಃ ಅಂದರೆ ಕೋಪವನ್ನು ಗೆದ್ದವನು ಅಂತ ಅರ್ಥ. ರಾಮನು ಕೋಪವೇ ಇಲ್ಲದವನಾಗಲೀ ಅಥವಾ ಬರೀ ಕೋಪವೇ ಇದ್ದವನಾಗಲೀ ಆಗಿರಲಿಲ್ಲ. ರಾಮನ ಜಿತಕ್ರೋಧತ್ವಕ್ಕೆ ಉದಾಹರಣೆಯಾಗಿ- ವಾಲಿಯ ವಧೆಯ ನಂತರ ರಾಮಕಾರ್ಯವನ್ನು ಮರೆತು ತನ್ನ ಭೋಗವಿಲಾಸದಲ್ಲಿ ಮಗ್ನನಾಗಿದ್ದ ಸುಗ್ರೀವನನ್ನು ಎಚ್ಚರಿಸುವುದಕ್ಕೆ ಲಕ್ಷ್ಮಣನ ಮೂಲಕ ರಾಮ ಹೇಳಿ ಕಳುಹಿಸಿದ ಮಾತೊಂದೇ ಸಾಕು.
ಸ ಚ ಸಂಕುಚಿತಃ ಪಂಥಾಃ ಯೇನ ವಾಲೀ ಹತೋ ಗತಃ |
ಸಮಯೇ ತಿಷ್ಠ ಸುಗ್ರೀವ ಮಾ ವಾಲಿಪಥಮನ್ವಗಾಃ ||
ಕ ಏವ ರಣೇ ವಾಲೀ ಶರೇಣ ನಿಹತೋ ಮಯಾ |
ತ್ವಾಂ ತು ಸತ್ಯಾದತಿಕ್ರಾಂತಂ ಹನಿಷ್ಯಾಮಿ ಸಬಾಂಧವಂ ||
(ಕಿಷ್ಕಿಂಧಾ ೩೦- ೮೧,೮೨)
‘ವಾಲಿಯನ್ನು ಯಾವ ದಾರಿಯಿಂದ ಮುಗಿಸಿದೆನೋ ಆ ದಾರಿ ಇನ್ನೂ ಮುಚ್ಚಲ್ಪಟ್ಟಿಲ್ಲ. ನಿನಗಾಗಿ ಅದಿನ್ನೂ ತೆರೆದೇ ಇದೆ. ಕೊಟ್ಟ ಮಾತಿನಂತೆ ನಡೆದುಕೋ. ವಾಲಿಯ ದಾರಿಯನ್ನು ಹಿಡಿಯಬೇಡ. ರಣರಂಗದಲ್ಲಿ ನಾನು ವಾಲಿಯೊಬ್ಬನನ್ನೇ ಕೊಂದಿದ್ದೆ. ನೀನು ಮಾತಿನಂತೆ ನಡೆದುಕೊಳ್ಳದಿದ್ದರೆ ನಿನ್ನನ್ನು ನಿನ್ನ ಬಂಧುಬಳಗ ಸಹಿತ ಕೊಂದುಹಾಕುತ್ತೇನೆ’ ಎಂದ.
ಶ್ರೀರಾಮನ ಈ ಕೋಪೋದ್ರಿಕ್ತ ಮಾತಿನಲ್ಲಿ ಎಂತಹ ಗಾಂಭೀರ್ಯ ಅಡಗಿದೆ ಎಂಬುದನ್ನು ಗಮನಿಸಬೇಕು. ಶ್ರೀರಾಮನ ಎರಡರಷ್ಟು ಕೋಪಿಷ್ಠನಾದ ಲಕ್ಷ್ಮಣ ಅದಕ್ಕೆ ‘ಅವನು ಕೊಟ್ಟ ಮಾತಿನಂತೆ ನಡೆದುಕೊಳ್ಳುವವನಲ್ಲ. ಅವನನ್ನು ಈಗಲೇ ಮುಗಿಸಿಬರ‍್ತೇನೆ. ಅಪ್ಪಣೆ ಕೊಡು’ ಅಂತ ರೇಗಿದ. ಅದಕ್ಕೆ ಶ್ರೀರಾಮ ಲಕ್ಷ್ಮಣನನ್ನು ಸಂತೈಸಿ ಹೇಳುವ ಮಾತು ಅವನ ಕೋಪ ವಶಿತ್ವಕ್ಕೆ, ಜಿಕ್ರೋಧತ್ವಕ್ಕೆ ಸಾಕ್ಷಿಯಾಗಿದೆ. ‘ಯಾವನು ಕೋಪವನ್ನು ವಿವೇಕದಿಂದ ತಡೆದುಕೊಳ್ಳುವನೋ ಆ ವೀರನೇ ಪುರುಷ ಶ್ರೇಷ್ಠನೆನಿಸುವನು.
ಸಜ್ಜನನಾದ ನೀನು ಈ ಬಗೆಯ ಕೃತ್ಯವನ್ನು ಮಾಡಬಾರದು. ಸುಗ್ರೀವನಲ್ಲಿ ಮೊದಲಿದ್ದ ಪ್ರೀತಿಯನ್ನೇ ತೋರಿಸು’ ಎಂದು
ಹೇಳುತ್ತಾನೆ. ಇದೇ ಅಲ್ಲವೆ ಜಿತಕ್ರೋಧತ್ವ ಅಂದರೆ. ಇದು ಶ್ರೀರಾಮನ ಮಹಾಗುಣಗಳಲ್ಲಿ ಒಂದು. ಶ್ರೀರಾಮನ ಗುಣಗಳನ್ನು ಎಷ್ಟು ವರ್ಣಿಸಿದರೂ ಸಾಲದು. ರಾಮನ ಮೂಲಕ ಅಂತಹ ಗುಣಾದರ್ಶಗಳನ್ನು ಕಟ್ಟಿಕೊಟ್ಟ ವಾಲ್ಮೀಕಿಯೂ, ಅಂತಹ ಗುಣಗಳುಳ್ಳ ರಾಮನನ್ನು ಬಣ್ಣಿಸಿದ ನಾರದಮಹರ್ಷಿಯೂ, ಅಂತಹ ಗುಣಗಳ ಮೂರ್ತರೂಪವೇ ಆದ ಶ್ರೀರಾಮನೂ ಎಂದೆಂದೂ ನಮ್ಮ ಹೃದಯದಲ್ಲಿ ನೆಲೆಸಲಿ.