ತಿಳಿರು ತೋರಣ
srivathsajoshi@yahoo.com
ವೆನೆಜುವೆಲಾದವರಲ್ಲದಿದ್ದರೂ ಕನಿಷ್ಠ ಆ ಪ್ರಾಂತ್ಯದ ಪೌರಾಂಗನೆಯರು ‘ವಿದ್ಯುದ್ದಾಮಸುರಿತಚಕಿತ’ರಾಗುವ ದೃಶ್ಯವು ಮನಮೋಹಕವೇ ಆಗಿರಬಹುದು ಎಂದು ನನ್ನ ಊಹೆ. ಕ್ಯಾಟಟುಂಬೊ ಲೈಟ್ನಿಂಗ್‌ನ ಬಗ್ಗೆ ಮೊನ್ನೆ ಓದಿ ತಿಳಿದು ಕೊಂಡಾಗ ವೆನೆಜುವೆಲಾ ದೇಶದ ಬ್ಯೂಟಿ ಕ್ವೀನ್‌ಗಳೂ, ಉಜ್ಜಯಿನಿಯ ಉಪ್ಪರಿಗೆಯಲ್ಲಿ ನಿಂತ ಪೌರಾಂಗನೆ ಯರೂ ಏಕಕಾಲಕ್ಕೇ ನನ್ನ ಮನದಲ್ಲೊಮ್ಮೆ ಹಾದುಹೋದದ್ದು ನಿಜ.
ಅಲಕಾಪುರಿಯಲ್ಲಿ ಕ್ಷುಲ್ಲಕ ಕಾರಣವೊಂದಕ್ಕೆ (ಸಮಯಕ್ಕೆ ಸರಿಯಾಗಿ ಹೂವುಗಳನ್ನು ಕೊಯ್ದು ತರಲಿಲ್ಲವೆಂದು ಇರಬಹುದು) ಕುಬೇರನಿಂದ ಶಾಪಕ್ಕೊಳಗಾದ ಯಕ್ಷನೊಬ್ಬ ದಿವಿಯಿಂದ ಬುವಿಗೆ, ಅಂದರೆ ಸ್ವರ್ಗದಿಂದ ಭರತಭೂಮಿಯಲ್ಲಿ ರಾಮಗಿರಿ ಎಂಬಲ್ಲಿಗೆ ವರ್ಗಾವಣೆಯಾಗುತ್ತಾನೆ.
ಒಂದು ವರ್ಷ ಕಾಲ ಹೆಂಡತಿಯಿಂದ ದೂರವಿರಬೇಕು, ವಿರಹವನ್ನನುಭವಿಸಬೇಕು ಎಂದು ಆತನಿಗೆ ಕುಬೇರ ಕೊಟ್ಟಿದ್ದ ಶಿಕ್ಷೆ. ಹಾಗೆ ಶಿಕ್ಷೆಯನ್ನನುಭವಿಸುತ್ತ, ಮಳೆಗಾಲದಲ್ಲಿ ಆಷಾಢದ ಮೊದಲ ಮೋಡ ಕಂಡಾಕ್ಷಣ ವಿರಹವ್ಯಥೆ ಉಮ್ಮಳಿಸಿ ಬರುತ್ತದೆ. ಅದೇ ಮೋಡದ ಮೂಲಕ ಯಕ್ಷ ತನ್ನ ಮನದನ್ನೆಗೆ ಪ್ರೇಮಸಂದೇಶ ಕಳುಹಿಸುತ್ತಾನೆ. ರಾಮಗಿರಿ ಯಿಂದ ಅಲಕಾಪುರಿಯನ್ನು ಹೇಗೆ ತಲುಪಬೇಕು, ದಾರಿಯಲ್ಲಿ ನಿಸರ್ಗದ ಯಾವ್ಯಾವ ದೃಶ್ಯಗಳನ್ನೆಲ್ಲ ಸವಿಯಬೇಕು ಎಂದು ಕೂಡ ಮೋಡಕ್ಕೆ ತಿಳಿಸುತ್ತಾನೆ.
ಕಾಳಿದಾಸ ವಿರಚಿತ, ‘ಪ್ರೇಮದ ಪ್ರತಿ ಮುಖವಾದ ವಿಪ್ರಲಂಭದ ಭಾವಗೀತೆ’ ಎಂದೇ ಖ್ಯಾತವಾದ ಮೇಘದೂತಂ ಕಾವ್ಯದ ತಿರುಳು ಅದು. ಮೇಘದೂತಂನ ಕೆಲವು ಶ್ಲೋಕ ಗಳು ನಮಗೆ ಹತ್ತನೆಯ ತರಗತಿಯ ಸಂಸ್ಕೃತ ಪಠ್ಯ ದಲ್ಲಿದ್ದುವು.
ವಿಶೇಷವಾಗಿ ಈ ಒಂದು ಶ್ಲೋಕ ನನಗೆ ತುಂಬ ಇಷ್ಟದ್ದು ಮತ್ತು ಆಗ ಕಂಠಪಾಠ ಮಾಡಿದ್ದು ಈಗಲೂ ನೆನಪಲ್ಲುಳಿದಿದೆ:
ವಕ್ರಃ ಪಂಥಾ ಯದಪಿ ಭವತಃ ಪ್ರಸ್ಥಿತಸ್ಯೋತ್ತರಾಶಾಂ ಸೌಧೋತ್ಸಂಗಪ್ರಣಯವಿಮುಖೋ ಮಾಸ್ಮ ಭೂರುಜ್ಜಯಿನ್ಯಾಃ|
ವಿದ್ಯುದ್ದಾಮಸುರಿತಚಕಿತೈಸ್ತತ್ರ ಪೌರಾಂಗನಾನಾಂ ಲೋಲಾಪಾಂಗೈರ್ಯದಿ ನ ರಮಸೇ ಲೋಚನೈರ್ವಂಚಿತೋಧಿಸಿ||
ಇದರ ಶಬ್ದಾರ್ಥ ಅಥವಾ ಭಾವಾನುವಾದವನ್ನು ನಾನಿಲ್ಲಿ ಬರೆಯುವುದಕ್ಕಿಂತ ಒಂದು ಕೆಲಸ ಮಾಡೋಣ. ಕನ್ನಡದ
ಕವಿಶ್ರೇಷ್ಠರನೇಕರು ಇಡೀ ಮೇಘದೂತಂ ಕಾವ್ಯವನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಅವುಗಳಿಂದ ಈ ಶ್ಲೋಕದ್ದಷ್ಟೇ
ಭಾವಾನುವಾದದ ಪದ್ಯಗಳನ್ನು ಅವಲೋಕಿಸೋಣ.
ಮೊದಲಿಗೆ, ಎಸ್. ವಿ. ಪರಮೇಶ್ವರ ಭಟ್ಟರ ಕೃತಿಯಿಂದ: ಉತ್ತರದ ದಸೆಗೆಂದು ಪಯಣ ಬೆಳೆಸುವ ನಿನಗೆ ಉಜ್ಜಯಿನಿಯಾ ದಾರಿ ಬಳಸಾದರುಂ ಅಲ್ಲಿನ ಮಹೋತ್ತುಂಗ ಸೌಧದರಮನೆಗಳಲಿ ಸ್ನೇಹವಿರಹಿತನೆನಿಸಿ ಮೊಗದಿರುಹದ ಬಳ್ಳಿಮಿಂಚಿನ ಬೆಳಗಿಗಿರದೆ ಭಯದಿಂ ಬೆದರಿ ಚಲಿಸುತಿರುವಾ ನಗರದಂಗನೆಯರ ಚಕಿತ ಲೋಲಾಪಾಂಗ ಲೋಚನಂಗಳ ನೋಡಿ ನೀನಲ್ಲಿ ರಮಿಸದಿರೆ ವಂಚಿತನಹೆ||
ಇದು ಮೂಲ ಸಂಸ್ಕೃತದಂತೆಯೇ, ಅಷ್ಟಿಷ್ಟು ಹಳಗನ್ನಡ- ನಡುಗನ್ನಡಗಳ ಛಾಯೆಯೂ ಇದ್ದು, ಒಂದೇ ಓದಿನಲ್ಲಿ ಅರ್ಥ
ಮಾಡಿಕೊಳ್ಳಲಿಕ್ಕೆ ತುಸು ಕಷ್ಟವೇ ಆಗಬಹುದು. ಆದರೂ ಒಟ್ಟಾರೆಯಾಗಿ ಯಕ್ಷನು ಮೋಡದ ಬಳಿ ಏನು ಹೇಳಿದ್ದಿರಬಹುದೆಂದು ಅಂದಾಜು ಮಾಡುವುದು ಸುಲಭವೇ ಇದೆ.
ಅದಕ್ಕಿಂತ, ದ. ರಾ. ಬೇಂದ್ರೆಯವರು ಕನ್ನಡ ಮೇಘದೂತ ಕೃತಿಯಲ್ಲಿ ಮಾಡಿದ ಅನುವಾದ ಬೇಗ ಅರ್ಥವಾಗುವಂತಿದೆ: ಉತ್ತರಕ್ಕೆ ಹೊರಟವಗೆ ಉಜ್ಜಯನಿ ಅಡ್ಡವಾದರೇನು? ಅಲ್ಲಿ ಮೇಲುಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು ಆ ಊರ ಹೆಂಗಸರ ಕಣ್ಣ ಬಳಿ ಮಿಂಚೇ ಮಿಣುಕು ಎನ್ನು ಅವರ ಕಣ್ಣ-ಕುಡಿ-ಲಲ್ಲೆಯೊಲ್ಲೆಯಾ? ವ್ಯರ್ಥ ಇದ್ದು ಕಣ್ಣು|| ಇದರಲ್ಲಿ ಬೇಂದ್ರೆಯವರು ಕಾಳಿದಾಸನಿಗೂ ಹೊಳೆಯದ ಕೆಲವು ಭಾವಚಮತ್ಕಾರಗಳನ್ನು ಪೋಣಿಸಿದ್ದಾರೇನೋ ಅಂತನಿಸುತ್ತದೆ.
ಏಕೆಂದರೆ ಮೂಲದಲ್ಲಿ ಕಾಳಿದಾಸ ಬರೆದದ್ದು ‘ಮೋಡ ಬಂದಾಗ ಹೊಳೆಯುವ ಮಿಂಚಿನಿಂದ ಚಕಿತರಾದ ಆ ಉಜ್ಜಯಿನಿಯ ಚೆಲುವೆಯರ ಚಂಚಲಗಣ್ಣಿನ ಕುಡಿನೋಟದ ವಿಲಾಸವನ್ನು ನೋಡಿ ಆನಂದಪಡದಿದ್ದರೆ ನಿನ್ನ ಕಣ್ಣು ಇದ್ದೂ ವ್ಯರ್ಥ!’ ಅಂತ ಯಕ್ಷನು ಮೋಡಕ್ಕೆ ಹೇಳಿದನು ಎಂದು. ಅನುವಾದದಲ್ಲಿ ಬೇಂದ್ರೆಯವರು ಈ ಆಶಯವನ್ನು ಇನ್ನೂ ಸ್ವಾರಸ್ಯಕರವಾಗಿಸಿ ‘ಉಜ್ಜಯಿನಿಯ ಹೆಂಗಳೆಯರ ಕಣ್ಣಿನ ಕಾಂತಿಯ ಮುಂದೆ ಮಿಂಚು ಕೂಡ ಮಿಣುಮಿಣುಕೆನಿಸುತ್ತದೆ’ ಎಂದು ಬರೆದಿದ್ದಾರೆ. ಯಕ್ಷ ಹೆಚ್ಚು ರಸಿಕನೋ ಕಾಳಿದಾಸ ಹೆಚ್ಚು ರಸಿಕನೋ ಅವರಿಬ್ಬರಿಗಿಂತಲೂ ನಮ್ಮ ಬೇಂದ್ರೆ ಹೆಚ್ಚು ರಸಿಕರೋ ಓದುಗರಿಗೆ ಬಿಟ್ಟ ವಿಚಾರ.
‘ಮೋಡದೊಡನೆ ಮಾತುಕತೆ- ಹೊಸಗಾಲದ ಆಖ್ಯಾನ- ವ್ಯಾಖ್ಯಾನ ಸಮೇತ ಕಾಳಿದಾಸನ ಮೇಘದೂತದ ಕನ್ನಡ ಭಾವಾ
ನುವಾದ’ ಎಂಬ ಕೃತಿಯಲ್ಲಿ ಅಕ್ಷರ ಕೆ. ವಿ ಅವರು ಇನ್ನಷ್ಟು ಸರಳವಾಗಿ, ಮಿಂಚಿನ ವಿಚಾರದಲ್ಲಿ ಕಾಳಿದಾಸನ ಮೂಲ ಕಲ್ಪನೆ ಯನ್ನೇ ಉಳಿಸಿಕೊಂಡು, ಹೀಗೆ ಅನುವಾದ ಮಾಡಿದ್ದಾರೆ: ಬಡಗು ದಿಕ್ಕಿಗೆ ಹೊರಟ ನಿನಗದು ಸುತ್ತು ಹಾದಿಯೇ ಆದರೂ ಸರಿ ಉಜ್ಜಯಿನಿ ಉಪ್ಪರಿಗೆ ದೃಶ್ಯವ ಕಳೆದುಕೊಳ್ಳದಿರೈ ಮಿಂಚು ಬೆಳಕಿಗೆ ಬೆಚ್ಚಿ ಕಂಗಳ ನೋಟವೊಗೆಯುವ ಪೇಟೆ ಹೆಂಗಳ
ಕಾಣದಿದ್ದೊಡೆ ಕಣ್ಣು ಇದ್ದುದು ವ್ಯರ್ಥ ಕಾಣಯ್ಯ||
ಅಕ್ಷರರು ಕೊಟ್ಟಿರುವ ವ್ಯಾಖ್ಯಾನವು ಇದನ್ನು ಮತ್ತಷ್ಟು ತೆರೆದಿಡುತ್ತದೆ. ‘ಮೋಡವನ್ನು ಉಜ್ಜಯಿನಿಗೆ ಕರೆದೊಯ್ಯುವುದಕ್ಕಾಗಿ ತಾನು ಅದರ ಮಾರ್ಗವನ್ನೇ ಬದಲಾಯಿಸುತ್ತಿರುವ ಸುಳಿವನ್ನು ಯಕ್ಷ ಈ ಪದ್ಯದಲ್ಲಿ ಕೊಡುತ್ತಿದ್ದಾನೆ. ಬಳಸುಹಾದಿಯಾದರೂ ಸರಿ, ಉಜ್ಜಯಿನಿಯನ್ನು ತಪ್ಪಿಸಿಕೊಳ್ಳಬೇಡವೆಂಬುದು ಆತನ ಸಲಹೆ. ಯಾತಕ್ಕೆ? ಯಕ್ಷನ ಉತ್ತರವನ್ನು ಪದ್ಯವು ಎರಡು
ಸಮಾಸಪದಗಳಲ್ಲಿ ಹಿಡಿದಿಟ್ಟಿದೆ: ‘ಸೌಧೋತ್ಸಂಗಪ್ರಣಯವಿಮುಖ’ ಮತ್ತು ‘ವಿದ್ಯುದ್ದಾಮಸುರಿತಚಕಿತ’. ಒಳಪದಗಳನ್ನು
ಬಿಡಿಸಿ ಅನ್ವಯಿಸಿದರೆ ಈ ಒಂದೊಂದು ಪದವೂ ವಾಕ್ಯಗಳಾಗುತ್ತವೆ.
ಸೌಧ ಅಂದರೆ ಬಹುಮಹಡಿಗಳ ಮಹಲು, ಉತ್ಸಂಗ ಅಂದರೆ ತೊಡೆ, ಅಥವಾ ಶಿಖರ, ತುದಿ ಅಂತಲೂ ಆಗುತ್ತದೆ. ಆದ್ದರಿಂದ ಸೌಧೋತ್ಸಂಗ ಅಂದರೆ ಮಹಲಿನ ಬಿಸಿಲುಮಚ್ಚು. ಪ್ರಣಯ, ಅಂದರೆ ಆ ಮಾಳಿಗೆಯ ಮೇಲೆ ಕಂಡುಬರುವ ನಲ್ಲನಲ್ಲೆಯರ ಪ್ರೀತಿಯ ಆಟಗಳು- ಇಂಥ ಉಜ್ಜಯಿನಿಯ ಉಪ್ಪರಿಗೆ ನೋಟವನ್ನು ನೀನು ತಪ್ಪಿಸಿಕೊಳ್ಳದಿರು. ಮತ್ತು ಅಲ್ಲಿಯ ಪೌರಾಂಗನೆ ಯರು- ವಿದ್ಯುತ್ ಅಂದರೆ ನಿನ್ನ ಮಿಂಚು, ದಾಮ ಅಂದರೆ ಬಳ್ಳಿ, ಸುರಿತ ಅಂದರೆ ಅದರ ಕುಣಿತಕ್ಕೆ, ಚಕಿತ ಅಂದರೆ ಬೆದರಿ ನಿನ್ನೆಡೆ ಹಾರಿಸುವ- ಕುಡಿನೋಟದ ಸುಖವನ್ನು ಕಳೆದುಕೊಳ್ಳದಿರು.
ಇದು ಉಜ್ಜಯಿನಿ ಭೇಟಿಯನ್ನು ಯಕ್ಷನು ಮೋಡಕ್ಕೆ ಶಿಫಾರಸು ಮಾಡುವುದಕ್ಕೆ ಕಾರಣ.’ ಆದರೆ, ಕಾಳಿದಾಸನು ಯಕ್ಷನಿಂದ ಈ ಶಿಫಾರಸುಗಳನ್ನು ಮಾಡಿಸುತ್ತಿರುವುದಕ್ಕೆ ಕಾವ್ಯದ ಹೊರಗಿಂದಲೂ ಕಾರಣಗಳಿವೆ. ಮೊದಲನೆಯದಾಗಿ ಅವಂತಿ ಅಥವಾ ಅವಂತಿಕಾಪುರ ಎಂಬ ಹೆಸರುಗಳೂ ಇದ್ದ ಪ್ರಾಚೀನ ಉಜ್ಜಯಿನಿಯು ಸಾಹಿತ್ಯ, ಸಂಗೀತಕಲೆ ಮತ್ತು ಒಟ್ಟಾರೆಯಾಗಿ ಸಾಂಸ್ಕೃತಿಕ ಸಮೃದ್ಧಿಯ ಕೇಂದ್ರವಾಗಿತ್ತು.
ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಮಹಾಕಾಲೇಶ್ವರನಿರುವುದು ಅಲ್ಲಿಯೇ. ಅದೇ ಉಜ್ಜಯಿನಿಯು, ಕಾಳಿದಾಸನು ಯಾರ ಆಸ್ಥಾನಿಕನಾಗಿದ್ದನೋ ಆ ದೊರೆ ಚಂದ್ರಗುಪ್ತ ವಿಕ್ರಮಾದಿತ್ಯನ ರಾಜಧಾನಿಯೂ ಆಗಿತ್ತು. ಅಷ್ಟೇಅಲ್ಲ, ಅದು ಕಾಳಿದಾಸಾದಿ ಯಾಗಿ ಸಂಸ್ಕೃತದ ಅನೇಕ ಕವಿಗಳ ಪ್ರೀತಿಯ ಊರೂ ಹೌದು. ಉಪಮೆಯಲ್ಲೇ ಹೇಳುವುದಾದರೆ- ಯಕ್ಷನ ಪ್ರಿಯತಮೆ ಅಲಕಾ ಪುರಿಯವಳು, ಕಾಳಿದಾಸನ ಪ್ರಿಯತಮೆ ಉಜ್ಜಯಿನಿಯೇ! ಆದ್ದರಿಂದಲೇ ಯಕ್ಷನಿಗೆ ಮೋಡವನ್ನು ಅಲಕಾಪುರಿಯತ್ತ ಕಳಿಸುವ ಒತ್ತಡವುಂಟಾದಂತೆ, ಕಾಳಿದಾಸನಿಗೆ ಮೋಡವನ್ನು ಉಜ್ಜಯಿನಿಗೂ ಕರೆದೊಯ್ಯುವ ಒತ್ತಾಸೆ.
ಇದಿಷ್ಟನ್ನೂ ಇಂದಿನ ಅಂಕಣಬರಹದ ಪೀಠಿಕೆ ಅಂತ ತಿಳಿಯಿರಿ. ಮೇಘದೂತಂ ಕಾವ್ಯದ ಈ ಒಂದು ಶ್ಲೋಕವನ್ನು, ಅದರಲ್ಲೂ ‘ವಿದ್ಯುದ್ದಾಮಸುರಿತಚಕಿತೈಸ್ತತ್ರ ಪೌರಾಂಗ ನಾನಾಂ’ ಎಂಬ ಮೂರನೆಯ ಚರಣವನ್ನು ಮಾತ್ರ ಏಕೆ ಫೋಕಸ್ ಮಾಡಿ ನೋಡಿದ್ದು ಎಂದು ಇನ್ನುಮುಂದಿನ ಭಾಗದಲ್ಲಿ ಗೊತ್ತಾಗುತ್ತದೆ. ಅದಕ್ಕಾಗಿ ಈಗ ಭೂಗೋಳದ ಪಶ್ಚಿಮಾರ್ಧಕ್ಕೆ ಬನ್ನಿ, ದಕ್ಷಿಣೋತ್ತರ ಅಮೆರಿಕ ಖಂಡಗಳ ಮೇಲೊಮ್ಮೆ ಕಣ್ಣುಹಾಯಿಸಿ.
ವೆನೆಜುವೆಲಾ. ದಕ್ಷಿಣ ಅಮೆರಿಕ ಖಂಡದಲ್ಲಿ, ಕೆರಿಬಿಯನ್ ಸಮುದ್ರ ಕರಾವಳಿಯಲ್ಲಿರುವ ಒಂದು ದೇಶ. ಭೂಪಟದಲ್ಲಿ ನೋಡಿ ದರೆ ದಕ್ಷಿಣ ಅಮೆರಿಕ ಖಂಡದ ತಲೆಯ ಭಾಗದಲ್ಲಿ ಕಾಣುತ್ತದೆ. ಪೆಟ್ರೋಲಿಯಂ ಉದ್ಯಮ, ಜೀವ ವೈವಿಧ್ಯ, ಮತ್ತು ನೈಸರ್ಗಿಕ ಸೌಂದರ್ಯಗಳಿಗೆ ಹೆಸರಾಗಿರುವುದು. ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜಕೀಯ ಅಸ್ಥಿರತೆ, ಆರ್ಥಿಕ ದಿವಾಳಿತನ, ಸರ್ವಾಧಿಕಾರಿ ಅಟಾಟೋಪಗಳನ್ನೆಲ್ಲ ಅನುಭವಿಸಿ ಸುದ್ದಿಯಲ್ಲಿದ್ದದ್ದೂ ಹೌದು. ಇವೆಲ್ಲಕ್ಕಿಂತ ಮುಖ್ಯವಾಗಿ ವೆನೆಜುವೆಲಾ ದೇಶದ್ದೊಂದು ಹೆಗ್ಗಳಿಕೆಯಿದೆ.
ಅದೇ ನೆಂದರೆ ಸೌಂದರ್ಯಸ್ಪರ್ಧೆಗಳನ್ನು ಗೆಲ್ಲುವುದರಲ್ಲಿ ವೆನೆಜುವೆಲಾದ ಸಂದರಿಯರದು ಎತ್ತಿದ ಕೈ! ಇದುವರೆಗೆ ಒಟ್ಟು ಏಳು ಬಾರಿ ಮಿಸ್ ಯುನಿವರ್ಸ್, ಆರು ಬಾರಿ ಮಿಸ್ ವರ್ಲ್ಡ್, ಎಂಟು ಬಾರಿ ಮಿಸ್ ಇಂಟರ್‌ನ್ಯಾಷನಲ್, ಎರಡು ಬಾರಿ ಮಿಸ್ ಅರ್ತ್ ಟೈಟಲ್‌ಗಳನ್ನು ವೆನೆಜುವೆಲಾ ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಬೇರಾವ ದೇಶವೂ ಇಷ್ಟೊಂದು ಸಂಖ್ಯೆಯಲ್ಲಿ ಗೆದ್ದದ್ದಿಲ್ಲ.
1981ರಲ್ಲಂತೂ ಮಿಸ್ ಯುನಿವರ್ಸ್ ಮತ್ತು ಮಿಸ್ ವರ್ಲ್ಡ್ ಕಿರೀಟಗಳೆರಡೂ, ಅಂತೆಯೇ 2013ರಲ್ಲಿ ಮಿಸ್ ಯುನಿವರ್ಸ್ ಮತ್ತು ಮಿಸ್ ಅರ್ತ್ ಕಿರೀಟಗಳೆರಡೂ ವೆನೆಜುವೆಲಾದ ಚೆಲುವೆಯರ ಪಾಲಾಗಿದ್ದವು. ಇದು ಕೂಡ ಬೇರಾವ ದೇಶವೂ ಇದುವರೆಗೆ ಸಾಧಿಸದಿರುವ ವಿಕ್ರಮ. ಸೌಂದರ್ಯ ಸ್ಪರ್ಧೆಗಳಲ್ಲಿ ಗೆಲ್ಲುವ ಕನಸನ್ನು ಅಲ್ಲಿ ಹುಡುಗಿಯರಿಗೆ ಎಳೆ ಪ್ರಾಯದಲ್ಲೇ ಬಿತ್ತಲಾಗುತ್ತ ದಂತೆ. ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸುವ ಗುರಿಯಿರುವವರು ಹೇಗೆ ಎಳವೆಯಿಂದಲೇ ತಾಲೀಮು ನಡೆಸುತ್ತಾರೋ ಆ ಪರಿಯಲ್ಲಿ, ಬಹುಶಃ ಅದಕ್ಕಿಂತಲೂ ಕಠಿಣವಾಗಿ, ಸೌಂದರ್ಯ ಸ್ಪರ್ಧೆಯ ಕಿರೀಟಗಳನ್ನು ಗೆಲ್ಲಲು ತಯಾರಿಗಳು ನಡೆದಿರುತ್ತವೆ.
ಹಾಗಾದರೆ ವೆನೆಜುವೆಲಾದಲ್ಲಿ ಹುಟ್ಟಿದ ಹೆಣ್ಮಕ್ಕಳೆಲ್ಲ ಮೋಸ್ಟ್ ಬ್ಯೂಟಿಫುಲ್ ಆಗಿಯೇ ಇರುತ್ತಾರೆಂದೇ? ಹಾಗೇನಿಲ್ಲ ಆದರೆ ಬ್ಯೂಟಿ ಕ್ವೀನ್‌ಗಳನ್ನು ತಯಾರು ಮಾಡುವುದು ಹೇಗೆಂದು ನಾವು ಚೆನ್ನಾಗಿ ಬಲ್ಲೆವು ಎಂದಿದ್ದನು ನನ್ನೊಬ್ಬ ಸಹೋದ್ಯೋಗಿ, ವೆನೆಜುವೆಲಾ ಮೂಲದವನು, ಈ ಬಗ್ಗೆ ನಾನು ಅವನಲ್ಲಿ ಕೇಳಿದ್ದಾಗ. ವೆನೆಜುವೆಲಾದಲ್ಲಿ ಬ್ಯೂಟಿ ಪೇಜೆಂಟ್ ಅನ್ನೋದು ದೊಡ್ಡ ಉದ್ಯಮ. ಒಟ್ಟಿನಲ್ಲಿ, ಸೌಂದರ್ಯದ ಖನಿಗಳಾದ ‘ಪೌರಾಂಗನೆ’ಯರು ವೆನೆಜುವೆಲಾದಲ್ಲಿ ಪುಷ್ಕಳವಾಗಿ ಇದ್ದಾರೆಂಬುದು ಸತ್ಯ.
ವೆನೆಜುವೆಲಾ ದೇಶದ್ದು ಇನ್ನೂ ಒಂದು ವಿಶ್ವವಿಖ್ಯಾತಿ ಇದೆ. ಅದೇನೆಂದರೆ ಪ್ರಪಂಚದಲ್ಲೇ ಅತಿಹೆಚ್ಚು ಮಿಂಚು ಬರುವ ಸ್ಥಳ
ಇರುವುದು ವೆನೆಜುವೆಲಾದಲ್ಲಿ. ಕ್ಯಾಟಟುಂಬೊ ನದಿಯು ಮುರಾಕಾಯ್ಬೊ ಸರೋವರವನ್ನು ಸೇರುವ ಪ್ರದೇಶದಲ್ಲಿ. ‘ಲೈಟ್ನಿಂಗ್ ಕ್ಯಾಪಿಟಲ್ ಆಫ್ ದ ವರ್ಲ್ಡ್’ ಎಂದೇ ಅದರ ಪ್ರಸಿದ್ಧಿ. ಕ್ಯಾಟಟುಂಬೊ ಎಂದು ಆ ನದಿಗೆ ಹೆಸರಿರುವುದೇ ಮಿಂಚು ಗುಡುಗುಗಳ ತಾಣ ಎಂಬರ್ಥದಲ್ಲಿ ಅಂತೆ. ವರ್ಷದಲ್ಲಿ ಸುಮಾರು 200 ರಿಂದ 260 ರಾತ್ರಿಗಳಲ್ಲಿ, ಪ್ರತಿ ನಿಮಿಷಕ್ಕೆ 16 ರಿಂದ 40ಸರ್ತಿ ಎಂಬಂತೆ ಅಲ್ಲಿ ಮಿಂಚು ಕಾಣಿಸಿಕೊಳ್ಳುತ್ತದೆ.
ಸೆಪ್ಪೆಂಬರ್-ಅಕ್ಟೋಬರ್ ತಿಂಗಳುಗಳ ಮಳೆಗಾಲದ ಅವಧಿಯಲ್ಲಿ ಅತಿ ಹೆಚ್ಚು; ಜನವರಿ-ಫೆಬ್ರವರಿಯಲ್ಲಿ ಕೊಂಚ ಕಡಿಮೆ.
ಆದರೂ ಮಿಂಚೇ ಇಲ್ಲದ ರಾತ್ರಿಗಳು ಇಲ್ಲವೇಇಲ್ಲ ಎನ್ನುವಷ್ಟು ಅಪರೂಪ. ಪ್ರಾಚೀನ ಕಾಲದಲ್ಲಿ ಪೋರ್ಚುಗೀಸ್ ಮತ್ತು
ಸ್ಪಾನಿಷ್ ನಾವಿಕರು ಆ ಪ್ರದೇಶಗಳನ್ನು ಮೊತ್ತಮೊದಲಿಗೆ ಗುರುತಿಸಿದ್ದಾಗಲೇ ಈ ಪ್ರಕೃತಿವೈಚಿತ್ರ್ಯವನ್ನು, ನಿಸರ್ಗದ ನಿಗೂಢ ಶಕ್ತಿ
ಪ್ರದರ್ಶನವನ್ನು, ಕಂಡು ಬೆರಗಾಗಿದ್ದರು. ‘ಸೈಂಟ್ ಆಂಥೊನಿಯ ಲ್ಯಾಂಟರ್ನ್’, ‘ಮುರಾಕಾಯ್ಬೊ ಸರೋವರದ ದೀಪಸ್ತಂಭ’
ಅಂತೆಲ್ಲ ಇದನ್ನು ಹೆಸರಿಸಿದ್ದರು.
ಮೊದಲೆಲ್ಲ ಇದು ಆ ಭೂಪ್ರದೇಶದಲ್ಲಿ ಸಾಂದ್ರವಾಗಿರುವ ಯುರೇನಿಯಂನಿಂದ, ಅಥವಾ ಹತ್ತಿರದ ಜೌಗು ಪ್ರದೇಶಗಳಲ್ಲಿ ಮೀಥೇನ್ ಅನಿಲದ ಬಿಡುಗಡೆಯಿಂದ, ಅಥವಾ ಮುರಾಕಾಯ್ಬೊ ಸರೋವರದಡಿಯಲ್ಲಿರುವ ತೈಲನಿಕ್ಷೇಪಗಳಿಂದಾಗಿ ಸಂಭವಿ ಸುವುದಿರಬಹುದು ಎಂದು ನಂಬಲಾಗಿತ್ತು. ಆದರೆ ಪರಿಸರ ವಿಜ್ಞಾನಿಗಳ ನಿರಂತರ ಅಧ್ಯಯನದಿಂದ, ನಾಸಾ ಸಹಯೋಗದಲ್ಲಿ ಉಪಗ್ರಹಗಳಿಂದ ಪಡೆದ ಅಂಕಿಅಂಶಗಳಿಂದ, ಭೌಗೋಳಿಕವಾಗಿ ಆ ಪ್ರದೇಶದ ಅನನ್ಯ ರಚನೆ ಮತ್ತು ಅದಕ್ಕೆ ತಕ್ಕಂತೆ ಬೀಸುವ ಗಾಳಿಯಿಂದಾಗಿಯೇ ಅಷ್ಟೊಂದು ಪ್ರಮಾಣದಲ್ಲಿ ಮಿಂಚುವುದು ಎಂಬ ಅಂಶ ಅಕ್ಷರಶಃ ‘ಬೆಳಕಿಗೆ ಬಂದಿದೆ’.
ಮುರಾಕಾಯ್ಬೊ ಸರೋವರವು ಮೂರು ಬದಿಗಳಲ್ಲಿ ಪರ್ವತಶ್ರೇಣಿಯಿಂದ ಸುತ್ತುವರಿದಿದ್ದು ಉತ್ತರದ ಭಾಗ ಮಾತ್ರ ಕೆರಿಬಿಯನ್ ಸಮುದ್ರಕ್ಕೆ ತೆರೆದುಕೊಂಡಿದೆ. ಸಮುದ್ರದ ಬಿಸಿ ನೀರು ಸರೋವರದೊಳಕ್ಕೆ ನುಗ್ಗುತ್ತದೆ, ಸೂರ್ಯಕಿರಣಗಳು ಅದರಿಂದ ನೀರಾವಿ ಯನ್ನು ಹೀರಿ ಪರ್ವತಶ್ರೇಣಿಯತ್ತ ಸೆಳೆಯುತ್ತವೆ, ಸಂಜೆಯ ಹೊತ್ತು ಪರ್ವತಶ್ರೇಣಿಯ ತುದಿಯಿಂದ ತಂಗಾಳಿ ಬೀಸಿದಾಗ ಅಲ್ಲಿ ಆಗಲೇ ಶೇಖರಣೆಯಾದ ನೀರಾವಿಗೆ ಡಿಕ್ಕಿಹೊಡೆಯುತ್ತದೆ. ಆ ಜಟಾಪಟಿಯಿಂದ ತೀವ್ರ ಪ್ರಮಾಣದಲ್ಲಿ ವಿದ್ಯುತ್ ಕಣಗಳ ಉತ್ಪಾದನೆಯಾಗಿ ಮಿಂಚು ಸಂಭವಿಸುತ್ತದೆ.
ಒಂದೆರಡು ದಿನ ಅಥವಾ ತಿಂಗಳು ಅಲ್ಲ, ವರ್ಷದ ಬಹುಭಾಗ ಹೀಗೆಯೇ. 2010ರಲ್ಲಿ ಒಮ್ಮೆ ಕ್ಷಾಮ ಪರಿಸ್ಥಿತಿ ಬಂದಿದ್ದಾಗ
ಮಾತ್ರ ಮಿಂಚುವಿಕೆ ಗಣನೀಯವಾಗಿ ಕಡಿಮೆಯಾಗಿತ್ತಂತೆ. ವೆನೆಜುವೆಲಾ ದೇಶಕ್ಕೆ ಸ್ವಾತಂತ್ರ್ಯ ಸಿಗುವುದರಲ್ಲಿ ಕ್ಯಾಟಟುಂಬೊ ಲೈಟ್ನಿಂಗ್‌ನ ಪಾತ್ರವೂ ಇದೆಯೆನ್ನುವುದು ಆಶ್ಚರ್ಯವಾದರೂ ನಿಜ ಸಂಗತಿ. 1823ರವರೆಗೂ ಆ ಪ್ರದೇಶವು ಸ್ಪೇನ್‌ನ
ವಶದಲ್ಲಿತ್ತು. ಆ ವರ್ಷ ಜುಲೈ 24ರ ರಾತ್ರಿ ಹೊಡೆದ ಸತತ ಮಿಂಚು ಎಡ್ಮಿರಲ್ ಹೋಸೆ ಪ್ರುಡೆನ್ಸಿಯೊ ಪೆಡಿಲ್ಲಾ ನೇತೃತ್ವದ
ತುಕಡಿಯು ಸ್ಪಾನಿಷ್ ಯುದ್ಧನೌಕೆಗಳನ್ನು ಪುಡಿಪುಡಿ ಮಾಡುವ ಕಾರ್ಯಾಚರಣೆಗೆ ದೀಪಸ್ತಂಭದಂತೆ ನೆರವಾಯಿತು.
ಆ ನಿರ್ಣಾಯಕ ಕದನದಲ್ಲಿ ಎಡ್ಮಿರಲ್ ಹೋಸೆಯ ಗೆಲುವು ಸ್ವತಂತ್ರ ವೆನೆಜುವೆಲಾ ರಾಷ್ಟ್ರದ ಉದಯಕ್ಕೆ ದಾರಿಮಾಡಿಕೊಟ್ಟಿತು. ಮುರಾಕಾಯ್ಬೊ ಸರೋವರದ ಸುತ್ತಮುತ್ತ ವಾಸಿಸುವ ಮೂಲ ನಿವಾಸಿಗಳಿಗೆ ಮಿಂಚಿನ ಬಗ್ಗೆ ಭಾರೀ ಹೆಮ್ಮೆ. ಅವರ ಪೈಕಿ
ಬೇರಿ ಜನಾಂಗವು ಅದು ದೈತ್ಯಶಕ್ತಿಯ ಸಾವಿರಾರು ಮಿಂಚುಹುಳುಗಳಿಂದಾಗಿ ಆಗುತ್ತಿದೆ ಎಂದು ನಂಬಿದ್ದರೆ ವೇಯ್ಯು ಜನಾಂಗ ದವರು ಪ್ರೇತಾತ್ಮಗಳು ಸಂಚರಿಸುವಾಗಿನ ಬೆಳಕು ಅದು ಎಂದು ನಂಬಿದ್ದರಂತೆ.
20ನೆಯ ಶತಮಾನದಲ್ಲಿ ಕ್ಯಾಟಟುಂಬೊ ಲೈಟ್ನಿಂಗ್‌ನ ಚಿತ್ರೀಕರಣ, ಫೋಟೊ ಮತ್ತು ವಿಡಿಯೊಗಳು ಮಾಧ್ಯಮಗಳಲ್ಲಿ
ಹರಿದಾಡತೊಡಗಿ ಪ್ರಪಂಚಕ್ಕೆಲ್ಲ ಪರಿಚಯವಾದಾಗಿನಿಂದ ವೆನೆಜುವೆಲಾ ಪ್ರಜೆಗಳು, ಅದರಲ್ಲೂ ಝುಲಿಯಾ ರಾಜ್ಯದವರು ಮಿಂಚನ್ನು ತಮ್ಮ ಅಭಿಮಾನದ ಸಂಕೇತವಾಗಿಸಿದರು. 1991ರಲ್ಲಿ ಝುಲಿಯಾ ರಾಜ್ಯದ ಧ್ವಜ ದಲ್ಲಿಯೂ ಮಿಂಚಿನ ಝಿಗ್ ಝ್ಯಾಗ್ ರೇಖೆಯೊಂದು ಸೇರ್ಪಡೆಯಾಯಿತು. ವರ್ಷದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಮಿಂಚು ಉಂಟಾಗುವ ಸ್ಥಳ ಎಂದು
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಹ ದಾಖಲಿಸಿತು.
‘ವನ್ಸ್ ಅಪಾನ್ ಎ ಟೈಮ್ ಇನ್ ವೆನೆಜುವೆಲಾ’ ಎಂಬ ಹೆಸರಿನ ಸಾಕ್ಷ್ಯಚಿತ್ರ ನಿರ್ಮಾಣವಾಗಿ ಪ್ರಸಾರವಾಯಿತು, 2021ರ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಎಂಟ್ರಿ ಪಡೆಯಿತು. ಈಗ ಹವಾಮಾನ ತಜ್ಞರು ಎಷ್ಟು ಪಳಗಿದ್ದಾರೆಂದರೆ ಮಳೆ-ಬಿಸಿಲು-ಚಳಿ-ಹಿಮಪಾತಗಳ
ಮುನ್ಸೂಚನೆಯಂತೆಯೇ ಕ್ಯಾಟಟುಂಬೊ ಲೈಟ್‌ನಿಂಗ್‌ನ ಮುನ್ಸೂಚನೆಯನ್ನೂ ಕರಾರುವಾಕ್ಕಾಗಿ, ಅದೂ ಮೂರುನಾಲ್ಕು
ತಿಂಗಳ ಮೊದಲೇ, ಕೊಡಬಲ್ಲವರಾಗಿದ್ದಾರೆ.
ಇಡೀ ವೆನೆಜುವೆಲಾ ದೇಶದವರಲ್ಲದಿದ್ದರೂ ಕನಿಷ್ಠ ಆ ಪ್ರಾಂತ್ಯದ ಪೌರಾಂಗನೆಯರು ‘ವಿದ್ಯುದ್ದಾಮಸುರಿತಚಕಿತ’ರಾಗುವ ದೃಶ್ಯವು ಮನಮೋಹಕವೇ ಆಗಿರಬಹುದು ಎಂದು ನನ್ನ ಊಹೆ. ಕ್ಯಾಟಟುಂಬೊ ಲೈಟ್ನಿಂಗ್‌ನ ಬಗ್ಗೆ ಮೊನ್ನೆ ಒಂದುದಿನ ಇದೇ ಮೊತ್ತಮೊದಲ ಬಾರಿಗೆ ಓದಿ ತಿಳಿದುಕೊಂಡಾಗ ವೆನೆಜುವೆಲಾ ದೇಶದ ಬ್ಯೂಟಿ ಕ್ವೀನ್‌ಗಳೂ, ಉಜ್ಜಯಿನಿಯ ಉಪ್ಪರಿಗೆಯಲ್ಲಿ ನಿಂತ ಪೌರಾಂಗನೆಯರೂ ಏಕಕಾಲಕ್ಕೇ ನನ್ನ ಮನದಲ್ಲೊಮ್ಮೆ ಹಾದುಹೋದದ್ದು ನಿಜ. ರಸಿಕತೆಯ ಇಂಡೆಕ್ಸ್ ನಲ್ಲಿ ನಾನು ಮೇಘದೂತಂನ ಯಕ್ಷನಿಗಾಗಲೀ, ಕೃತಿಕಾರ ಕಾಳಿದಾಸನಿಗಾಗಲೀ, ಅನುವಾದಕಾರ ಬೇಂದ್ರೆಯವರಿಗಾಗಲೀ ಹತ್ತಿರಕ್ಕೂ ಬಾರೆನು ಎನ್ನುವುದು ಬೇರೆ ವಿಚಾರ.