Friday, 13th December 2024

ಕಿವಿಯನ್ನೇ ಕುಯ್ದು ವೇಶ್ಯಾಗ್ರಹಕ್ಕೆ ಕೊಟ್ಟ ವಿಕ್ಷಿಪ್ತ ಚಿತ್ರಕಾರ

ತಿಳಿರು ತೋರಣ

srivathsajoshi@yahoo.com

ಸೋಜಿಗವೆಂದರೆ ಜೀವಿತದುದ್ದಕ್ಕೂ ವಿಫಲ ವ್ಯಕ್ತಿ, ಅರೆಹುಚ್ಚ ಅಂತೆಲ್ಲ ಕರೆಸಿಕೊಂಡ ವಿನ್ಸೆಂಟ್, ಸತ್ತಮೇಲೆಯೇ ಜಗತ್ಪ್ರಸಿದ್ಧ ನಾದದ್ದು. ಬದುಕಿದ್ದಾಗ ಆತನ ಚಿತ್ರಗಳಿಗೆ ಅಂಥದೇನೂ ಬೇಡಿಕೆ ಇಲ್ಲದ್ದು, ೨೦ನೆಯ ಶತಮಾನದಲ್ಲಿ ಪ್ರಪಂಚದಲ್ಲಿ ಅತ್ಯದಿಕ ಬೆಲೆಗೆ ಮಾರಾಟವಾದ ಚಿತ್ರಗಳೆಂಬ ಖ್ಯಾತಿ ಸಿಕ್ಕಿದ್ದು ಆತನ ಚಿತ್ರಗಳಿಗೇ ಎನ್ನುವುದು ವಿಚಿತ್ರವಾದರೂ ಸತ್ಯ. ಈಗ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಆತನ ಹೆಸರಿನದೇ ಒಂದು ಪ್ರಸಿದ್ಧ ಮ್ಯೂಸಿಯಂ ಕೂಡ ಇದೆ.

ಅವಯವವೊಂದನ್ನು ಕತ್ತರಿಸಿ, ಅಂದರೆ ತನ್ನದೇ ಶರೀರವನ್ನು ಘಾಸಿಗೊಳಿಸಿ, ದಕ್ಷಿಣೆ ಯಾಗಿಯೋ ದಾನ ರೂಪದಲ್ಲೋ ಅರ್ಪಿಸಿದ ನಿದರ್ಶನಗಳು ನಮ್ಮ ಹಿಂದೂ ಪುರಾಣ ಕಥೆಗಳಲ್ಲಿ ಸಿಗುತ್ತವೆ. ತನ್ನದೊಂದು ಕಣ್ಣನ್ನು ಕಿತ್ತು ಶಿವನಿಗೆ ಕೊಟ್ಟ ಬೇಡರ ಕಣ್ಣಪ್ಪ, ತನ್ನ ಬಲಗೈಯ ಹೆಬ್ಬೆರಳನ್ನು ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ನೀಡಿದ ಏಕಲವ್ಯ, ಗಿಡುಗ-ಪಾರಿವಾಳಗಳ ವೇಷದಲ್ಲಿ ಬಂದ ಇಂದ್ರ-ಅಗ್ನಿಯರಿಗೆ ತನ್ನ ತೊಡೆಯ ಮಾಂಸವನ್ನೇ ಅರ್ಪಿಸಿದ ಶಿಬಿ ಚಕ್ರವರ್ತಿ- ಮುಂತಾದವರೆಲ್ಲ ತತ್‌ಕ್ಷಣಕ್ಕೆ ನೆನಪಾಗುತ್ತಾರೆ.

ಆದರೆ ಆಧುನಿಕ ಯುಗದಲ್ಲಿ, ರೇಝರ್ ಬ್ಲೇಡ್‌ನಿಂದ ತನ್ನದೊಂದು ಕಿವಿಯನ್ನು ಕುಯ್ದು ಹೆಣ್ಣೊಬ್ಬಳಿಗೆ ಕೊಟ್ಟ ವಿಚಿತ್ರ ಮತ್ತು ವಿಕ್ಷಿಪ್ತ ಘಟನೆ ನಡೆದಿರುವುದು ೧೯ನೆಯ ಶತಮಾನದ ಪ್ರಖ್ಯಾತ ಚಿತ್ರಕಾರ ವಿನ್ಸೆಂಟ್ ವಿಲ್ಲೆಮ್ ವಾನ್ ಗೋಘ್‌ನ ಜೀವನದಲ್ಲಿ. ಬಹುಶಃ ಜೀವನದ ಸಂಧ್ಯಾಕಾಲದಲ್ಲಿ ಅಂದರೆ ಹೆಚ್ಚು ಸೂಕ್ತ; ಏಕೆಂದರೆ ಆ ಘಟನೆ ಆದಮೇಲೆ ಸುಮಾರು ಎರಡು ವರ್ಷ ಕಾಲವಷ್ಟೇ ವಿನ್ಸೆಂಟ್ ವಾನ್ ಗೋಘ್ ಬದುಕಿದ್ದದ್ದು. (ಈ ಲೇಖನದಲ್ಲಿನ್ನು ವಿನ್ಸೆಂಟ್ ಎಂದಷ್ಟೇ ಬಳಸುತ್ತೇನೆ, ಎರಡು ಕಾರಣಗಳಿಗಾಗಿ: ಆತ ತನ್ನ ಚಿತ್ರಗಳಲ್ಲಿ ‘ವಿನ್ಸೆಂಟ್’ ಅಂತಲೇ ಸಹಿ ಮಾಡುತ್ತಿದ್ದನು; ಆತನ ಪೂರ್ಣ ಹೆಸರಿನಲ್ಲಿರುವ ‘ವಾನ್ ಗೋಘ್’ ಭಾಗವನ್ನು ಹೇಗೆ ಉಚ್ಚರಿಸಬೇಕು ಮತ್ತು ಬರೆಯಬೇಕು ಎಂಬುದು ಬೇರೆಬೇರೆ ಭಾಷೆಗಳಲ್ಲಿ ಬೇರೆಬೇರೆ ರೀತಿ ಇರುವುದರಿಂದ ಸ್ವಲ್ಪ ಚರ್ಚಾಸ್ಪದ).

ವಿನ್ಸೆಂಟ್ ಹುಟ್ಟಿದ್ದು ೩೦ ಮಾರ್ಚ್ ೧೮೫೩ರಂದು, ನೆದರ್ ಲ್ಯಾಂಡ್ಸ್‌ನ ಝುಂಡರ್ಟ್ ಎಂಬ ಪಟ್ಟಣದಲ್ಲಿ ಮೇಲ್ಮಧ್ಯಮ
ವರ್ಗದ ಕುಟುಂಬವೊಂದರಲ್ಲಿ. ಬಾಲ್ಯದಲ್ಲಿ ಆತ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ತೋರುತ್ತಿದ್ದನಾದರೂ ಅಭಿಜಾತ ಪ್ರತಿಭೆ ಎನ್ನುವಷ್ಟೇನಲ್ಲ. ಹದಿಹರೆಯದಲ್ಲೂ ಚಿತ್ರಕಾರ ಆಗಿರದೆ ಚಿತ್ರಗಳ ವ್ಯಾಪಾರಿ (ಡೀಲರ್) ಅಷ್ಟೇ ಆಗಿದ್ದನು. ಅದಕ್ಕಾಗಿ ಊರೂರು ಅಲೆಯುವುದೂ ಇತ್ತು. ಹಾಗೆ ಲಂಡನ್‌ನಲ್ಲಿರುವಾಗ ಸ್ವಲ್ಪ ಖಿನ್ನತೆ ಜುಗುಪ್ಸೆ ಬಂದು ಅಧ್ಯಾತ್ಮದತ್ತ ಹೊರಳಿದನು.

ರೋಮನ್ ಕ್ಯಾಥೊಲಿಕರ ಪ್ರಾಬಲ್ಯವಿದ್ದ ಬೆಲ್ಜಿಯಂನಲ್ಲಿ ಪ್ರೊಟೆಸ್ಟೆಂಟ್ ಮಿಷನರಿಯಾಗಿ ಸೇವೆ ಸಲ್ಲಿಸಿದನು. ಅಲ್ಲೂ ಅನಾರೋಗ್ಯ ಮತ್ತು ಏಕಾಂಗಿತನ ಕಾಡಿದ ಮೇಲೆ ೧೮೮೧ರಲ್ಲಿ ನೆದರ್‌ಲ್ಯಾಂಡ್ಸ್‌ಗೆ ಮರಳಿ, ಚಿತ್ರರಚನೆಯನ್ನೇ ಪೂರ್ಣಕಾಲಿಕ ಕಸುಬಾಗಿ ಕೈಗೆತ್ತಿಕೊಂಡನು. ವಿನ್ಸೆಂಟ್‌ನ ಸಹೋದರ ಥಿಯೊ ಎಂಬುವವನು ಚಿತ್ರಗಳ ವ್ಯಾಪಾರಿಯಾಗಿದ್ದವನು ಅಣ್ಣನಿಗೆ ಆರ್ಥಿಕ ಮತ್ತು ಮಾನಸಿಕ ಬೆಂಬಲ ನೀಡುತ್ತಿದ್ದನು. ಅವರಿಬ್ಬರ ನಿರಂತರ ಪತ್ರವ್ಯವಹಾರದಿಂದಾಗಿಯೇ ವಿನ್ಸೆಂಟ್‌ನ ವ್ಯಕ್ತಿತ್ವದ ಬಗ್ಗೆ ಹೆಚ್ಚು ಗೊತ್ತಾಗಿರುವುದು.

ವಿನ್ಸೆಂಟ್ ೧೮೮೬ರಲ್ಲಿ ಪ್ಯಾರಿಸ್‌ಗೆ ಹೋಗಿ ಎರಡು ವರ್ಷಗಳ ಬಳಿಕ ಫ್ರಾನ್ಸ್ ನಲ್ಲೇ ದಕ್ಷಿಣದ ಆರ್ಲೆಸ್ ಪಟ್ಟಣದಲ್ಲಿ ನೆಲೆಸಿ ದನು. ಗಾಢ ಬಣ್ಣಗಳಿಂದ ಕೂಡಿದ ಆಕರ್ಷಕ ಚಿತ್ರಗಳನ್ನು ಬಿಡಿಸಿದನು. ಆದರೆ ಆತನ ಮಾನಸಿಕ ಮತ್ತು ದೈಹಿಕ ಆರೋಗ್ಯ ತುಂಬ ಬಿಗಡಾಯಿಸಿತ್ತು. ಹೊತ್ತುಹೊತ್ತಿಗೆ ಸರಿಯಾಗಿ ಊಟವಿಲ್ಲ. ಅದರ ಮೇಲೆ ಕುಡಿತದ ಚಟವೂ ಇತ್ತು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದನಾದರೂ ಡಿಪ್ರೆಷನ್ ಮುಂದುವರಿದಿತ್ತು. ೨೭ ಜುಲೈ ೧೮೯೦ರಂದು ವಿನ್ಸೆಂಟ್ ಒಂದು ರಿವಾಲ್ವರ್‌ನಿಂದ ತನಗೆ ತಾನೇ ಗುಂಡಿಕ್ಕಿಕೊಂಡು ಎರಡು ದಿನಗಳ ಬಳಿಕ ಕೊನೆಯುಸಿರೆಳೆದನು. ಆಗ ಆತನ ಪ್ರಾಯ ೩೭ ವರ್ಷ ಅಷ್ಟೇ!

ಸೋಜಿಗವೆಂದರೆ ಜೀವಿತದುದ್ದಕ್ಕೂ ವಿಫಲ ವ್ಯಕ್ತಿ, ಅರೆಹುಚ್ಚ ಅಂತೆಲ್ಲ ಕರೆಸಿಕೊಂಡ ವಿನ್ಸೆಂಟ್, ಸತ್ತಮೇಲೆಯೇ ಜಗತ್ಪ್ರಸಿದ್ಧ ನಾದದ್ದು. ಬದುಕಿದ್ದಾಗ ಆತನ ಚಿತ್ರಗಳಿಗೆ ಅಂಥದೇನೂ ಬೇಡಿಕೆ ಇಲ್ಲದ್ದು, ೨೦ನೆಯ ಶತಮಾನದಲ್ಲಿ ಪ್ರಪಂಚದಲ್ಲಿ ಅತ್ಯಧಿಕ
ಬೆಲೆಗೆ ಮಾರಾಟವಾದ ಚಿತ್ರಗಳೆಂಬ ಖ್ಯಾತಿ ಸಿಕ್ಕಿದ್ದು ಆತನ ಚಿತ್ರಗಳಿಗೇ ಎನ್ನುವುದು ವಿಚಿತ್ರವಾದರೂ ಸತ್ಯ. ಈಗ ಆಮ್‌ಸ್ಟರ್
ಡ್ಯಾಮ್‌ನಲ್ಲಿ ಆತನ ಹೆಸರಿನದೇ ಒಂದು ಪ್ರಸಿದ್ಧ ಮ್ಯೂಸಿಯಂ ಕೂಡ ಇದೆ. ‘ಸನ್‌ಫ್ಲವರ್ಸ್’, ‘ದ ಸ್ಟಾರ್ರಿ ನೈಟ್’, ‘ವ್ಹೀಟ್‌ಫೀಲ್ಡ್
ವಿದ್ ಕ್ರೋವ್ಸ್’ ಮುಂತಾದ ಅತಿಪ್ರಖ್ಯಾತ ವರ್ಣಚಿತ್ರಗಳು ಸಾವಿರಾರು ಪ್ರವಾಸಿಗರ ಮನತಣಿಸುತ್ತವೆ.

ಅಂತಹ ವಿನ್ಸೆಂಟ್ ತನ್ನ ಕಿವಿ ಕುಯ್ದುಕೊಂಡ ಪ್ರಸಂಗ ಈಗಲೂ ಒಂದು ಒಗಟಾಗಿಯೇ ಉಳಿದಿದೆ. ಬ್ಲೇಡ್‌ನಿಂದ ಕತ್ತರಿಸಿದ
ಕಿವಿಯನ್ನು ಕಾಗದದಲ್ಲಿ ಸುತ್ತಿ, ಆರ್ಲೆಸ್ ಪಟ್ಟಣದ ವೇಶ್ಯಾಗೃಹಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಗ್ಯಾಬಿ ಎಂಬ ಹೆಣ್ಣಿನ ಕೈಗೆ ಕೊಟ್ಟು ‘ಇದನ್ನು ಜೋಪಾನವಾಗಿ ಇಟ್ಟುಕೋ’ ಎಂದಿದ್ದನಂತೆ. ಅದಕ್ಕೆ ಮೊದಲು ರಕ್ತಸಿಕ್ತ ಮುಖಕ್ಕೆ ತಾನೇ ಬ್ಯಾಂಡೇಜ್ ಕಟ್ಟಿಕೊಂಡಿದ್ದನಂತೆ. ಆಮೇಲೆ ಆವತ್ತು ಸಂಜೆ ಪ್ರeಹೀನನಾಗಿ ಬಿದ್ದಿದ್ದ ಆತನನ್ನು ಹತ್ತಿರದ ಆಸ್ಪತ್ರೆಗೆ ಒಯ್ಯಲಾಯಿತು.

ಕತ್ತರಿಸಲ್ಪಟ್ಟ ಕಿವಿಯನ್ನೂ ಗ್ಯಾಬಿಯಿಂದ ಪಡೆದು ಯಾರೋ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು; ಆದರೆ ಅದನ್ನಿನ್ನು ಜೋಡಿಸುವುದು ಸಾಧ್ಯವಿಲ್ಲ ಎಂದು ವೈದ್ಯರು ಕೈಚೆಲ್ಲಿದರು. ಚಿಕಿತ್ಸೆ ಪಡೆದು ಮನೆಗೆ ಮರಳಿದ ಮೇಲೆ ವಿನ್ಸೆಂಟ್ ತನ್ನ ವಿಕಾರ ಮುಖದ ಎರಡು ಚಿತ್ರಗಳನ್ನು ಬಿಡಿಸಿದನು: ‘ಸೆಲ್‌ಫ್ ಪೋರ್ಟ್ರೇಟ್ ವಿದ್ ಬ್ಯಾಂಡೇಜ್ಡ್ ಇಯರ್’ ಹಾಗೂ ‘ಸೆಲ್ಫ್ ಪೋರ್ಟ್ರೇಟ್ ವಿದ್ ಬ್ಯಾಂಡೇಜ್ಡ್ ಇಯರ್ ಏಂಡ್ ಪಪ್’. ಮುಂದೆ ಅವೂ ತುಂಬ ಪ್ರಸಿದ್ಧವಾದುವು, ಮಾತ್ರವಲ್ಲ ಒಟ್ಟಾರೆಯಾಗಿ ವಿನ್ಸೆಂಟ್‌ನ ಮರಣೋತ್ತರ ಪ್ರಸಿದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದುವು.

ವಿನ್ಸೆಂಟ್ ನ ಬೇರೆ ಚಿತ್ರಗಳನ್ನು ನೋಡಿರದಿದ್ದವರಿಗೂ ಈ ಕಿವಿ ಕುಯ್ದುಕೊಂಡ ಪ್ರಸಂಗ ಆತನ ಬಗ್ಗೆ ಎಲ್ಲಿಲ್ಲದ ಕುತೂಹಲ ಕೆರಳಿಸಿತು. ‘ಯೇನ ಕೇನ ಪ್ರಕಾರೇಣ ಪ್ರಸಿದ್ಧ ಪುರುಷ’ ಆಗಲಿಕ್ಕೆ ಆತ ಹಾಗೆ ಮಾಡಿಕೊಂಡಿದ್ದನೇ? ಇಲ್ಲ. ಮೊದಲೇ ಮಾನಸಿಕ ಅಸ್ವಸ್ಥನಾಗಿದ್ದ ವಿನ್ಸೆಂಟ್ ಅದ್ಯಾವ ತೊಳಲಾಟದಲ್ಲಿ ಅಂಥದೊಂದು ಸಾಹಸಕ್ಕೆ ಮುಂದಾದನೋ! ಕಿವಿಯನ್ನೇನೋ ಕುಯ್ದುಕೊಂಡನು, ಅದನ್ನು ವೇಶ್ಯಾಗೃಹಕ್ಕೆ ಏಕೆ ಕೊಟ್ಟನೋ! ಊಹೆಗಳು ಹಲವು; ಅಸಲಿಯತ್ತು ಹೇಳಲಿಕ್ಕೆ ಈಗ ಅವನಿಲ್ಲ! ಕಿವಿ ಕುಯ್ದ ಘಟನೆಯ ಬಳಿಕ ಒಂದೆರಡು ವರ್ಷಗಳಷ್ಟೇ ಆತ ಬದುಕಿದ್ದದ್ದು.

ಅದೂ ಬಹುಮಟ್ಟಿಗೆ ಹುಚ್ಚಾಸ್ಪತ್ರೆಯಲ್ಲಿಯೇ, ತಲೆಯಲ್ಲಿ ಅನೂಹ್ಯ ಧ್ವನಿಗಳನ್ನು ಕೇಳಿಸಿಕೊಳ್ಳುತ್ತ. ವಿನ್ಸೆಂಟ್‌ನ ಚಿತ್ರಕಲೆಯ ಬಗ್ಗೆ ಅಧ್ಯಯನ ನಡೆಸುವವರು ಅವನ ವಿಕ್ಷಿಪ್ತ ಮನಸ್ಸನ್ನು ಅಳೆಯುವ ಪ್ರಯತ್ನವನ್ನೂ ಮಾಡುತ್ತಾರೆ. ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ-ಬರ್ಕ್ಲೀ ಇಲ್ಲಿ ಮನಃಶಾಸ್ತ್ರ ಪ್ರಾಧ್ಯಾಪಕರಾಗಿರುವ ಪ್ರೊ. ಡಬ್ಲ್ಯು.ಎಂ.ರನ್ಯನ್ ಎಂಬುವವರು ೧೯೮೧ರಲ್ಲಿ ಈಬಗ್ಗೆಯೇ ಒಂದು ಪ್ರೌಢಪ್ರಬಂಧ ಮಂಡಿಸಿದ್ದಾರೆ.

ವಿನ್ಸೆಂಟ್ ಕಿವಿ ಕುಯ್ದುಕೊಂಡಿರುವುದನ್ನು ಕುರಿತು ಕೆಲ ವ್ಯಾಖ್ಯಾನಗಳನ್ನು ಮುಂದಿಟ್ಟಿದ್ದಾರೆ. ಹದಿಮೂರು ಬೇರೆಬೇರೆ
ಊಹೆಗಳನ್ನು ವಿಶ್ಲೇಷಿಸಿ ಯಾವುದು ನಿಜವಿರಬಹುದು, ಯಾವುದರ ಸಾಧ್ಯತೆ ಅಲ್ಲಗಳೆಯಲಾಗದು ಅಂತೆಲ್ಲ ಪಟ್ಟಿ ಮಾಡಿದ್ದಾರೆ. ಈ ಅಧ್ಯಯನದಿಂದ ವಿನ್ಸೆಂಟ್‌ನ ವಿಕ್ಷಿಪ್ತ ಜೀವನದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದಂತಾಗಿದೆ.

ಪ್ರೊ.ರನ್ಯನ್ ಪಟ್ಟಿ ಮಾಡಿರುವ ಊಹೆಗಳಲ್ಲಿ ಅರ್ಧದಷ್ಟು, ವಿನ್ಸೆಂಟ್‌ನ ಖಾಸಗಿ ಜೀವನದ ಸಮಸ್ಯೆಗಳಿರಬಹುದೆಂದು ಬೆಟ್ಟು
ತೋರಿಸುತ್ತವೆ. ಉದಾಹರಣೆಗೆ ಸಹೋದರ ಥಿಯೊನಿಗೆ ಮದುವೆ ನಿಶ್ಚಯವಾದಾಗ ಅದು ವಿನ್ಸೆಂಟ್‌ನನ್ನು ಅಧೀರನನ್ನಾಗಿಸಿದ್ದಿರ ಬಹುದು. ಅಥವಾ, ವಿನ್ಸೆಂಟ್‌ಗೆ ತನ್ನ ಒಡನಾಡಿ ಮತ್ತು ಆದರ್ಶವೆನಿಸಿಕೊಂಡಿದ್ದ ಚಿತ್ರಕಾರ ಗೌಗ್ವಿನ್ ಎಂಬಾತನ ಜೊತೆಗಿದ್ದ ಆತ್ಮೀಯತೆ ಕೆಲವೊಮ್ಮೆ ಹೆಚ್ಚುಕಡಿಮೆಯಾದಾಗ ಹತಾಶೆ ಮೂಡಿದ್ದೂ ಇರಬಹುದು. ಇದರಲ್ಲಿ ಥಿಯೊ ಬಗೆಗಿನ ಥಿಯರಿಗೆ ಹೆಚ್ಚು ಪುಷ್ಟಿ ಸಿಗುವುದೇಕೆಂದರೆ ವಿನ್ಸೆಂಟ್ ಎಲ್ಲದಕ್ಕೂ ಥಿಯೊನನ್ನೇ ಅವಲಂಬಿಸಿದ್ದನು. ಮದುವೆಯಾದ ಮೇಲಿನ ಥಿಯೊ ತನ್ನ ಬಗ್ಗೆ ಕಾಳಜಿ ತೋರಲಿಕ್ಕಿಲ್ಲ ಎಂದು ವಿನ್ಸೆಂಟ್‌ಗೆ ಅನಿಸಿದ್ದಿರಬಹುದು.

ಅಲ್ಲದೇ ಈ ಕಿವಿ ಪ್ರಸಂಗ ನಡೆದಿದ್ದು ಕ್ರಿಸ್ಮಸ್‌ನ ಆಸುಪಾಸಿನಲ್ಲೇ. ಸಾಮಾನ್ಯವಾಗಿ ಕ್ರಿಸ್ಮಸ್ ಸಮಯವನ್ನು ವಿನ್ಸೆಂಟ್ ತನ್ನ ತಮ್ಮ ನೊಟ್ಟಿಗೆ ಕಳೆಯುತ್ತಿದ್ದನು. ಆ ವರ್ಷ ತಮ್ಮನು ಕ್ರಿಸ್ಮಸ್ ಹಬ್ಬವನ್ನು ಪ್ರಿಯತಮೆಯ ಜೊತೆ ಆಕೆಯ ಮನೆಯಲ್ಲಿ ಆಚರಿಸುವುದೆಂದು ನಿರ್ಧರಿಸಿದಾಗ ಅದಕ್ಕೆ ಪ್ರತಿಭಟನೆಯೆಂಬಂತೆ, ಥಿಯೊಗೆ ಕರುಣೆ ಬಂದು ಕ್ರಿಸ್ಮಸ್ ಆಚರಣೆಯ ಪ್ಲಾನ್ ಬದಲಿಸುವಂತೆ ಮಾಡಲು ವಿನ್ಸೆಂಟ್ ಕಿವಿ ಕುಯ್ದುಕೊಂಡು ತಮ್ಮನ ಗಮನ ಸೆಳೆದನೇ? ಮತ್ತೊಂದು ಊಹೆಯ ಪ್ರಕಾರ ವಿನ್ಸೆಂಟ್‌ನು ರೌಲಿನ್ಸ್ ಎಂಬ ಕುಟುಂಬದ ಗಮನ ಸೆಳೆಯಲು ಪ್ರಯತ್ನಿಸಿದ್ದಿರಬಹುದು.

ಏಕೆಂದರೆ ಈಹಿಂದೆ ಒಮ್ಮೆ ವರ್ಣಚಿತ್ರವೊಂದಕ್ಕೆ ರೌಲಿನ್ಸ್ ಕುಟುಂಬದ ಹಿರಿಯ ಮಹಿಳೆಯೊಬ್ಬಳನ್ನು ರೂಪದರ್ಶಿ ಯಾಗು ವಂತೆ ವಿನ್ಸೆಂಟ್ ಕೇಳಿಕೊಂಡಿದ್ದನು. ಆಕೆ ತೊಟ್ಟಿಲು ತೂಗುತ್ತ ಮಕ್ಕಳ ಆರೈಕೆ ಮಾಡುವ ದೃಶ್ಯವನ್ನು ಕಂಡ ವಿನ್ಸೆಂಟ್ ತಾನೀಗ ಅಂಥ ಪ್ರೀತಿಮಮತೆಗಳಿಂದ ವಂಚಿತನಾಗಿದ್ದೇನಲ್ಲ ಎಂದು ಕೊರಗಿದ್ದಿರಬಹುದು. ಕಾಕತಾಳೀಯವೆಂದರೆ, ಕಿವಿ ಕುಯ್ದುಕೊಂಡಂದು ಆಮೇಲೆ ವಿನ್ಸೆಂಟ್‌ನನ್ನು ಆಸ್ಪತ್ರೆಗೆ ಒಯ್ಯಲು ನೆರವಾದದ್ದು ಆ ರೂಪದರ್ಶಿ ಹೆಂಗಸಿನ ಗಂಡನೇ! ಇನ್ನೂ ಒಂದು ಊಹೆಯು ವಿನ್ಸೆಂಟ್‌ಗೆ ಗೌಗ್ವಿನ್‌ನ ಮೇಲೆ ಸಲಿಂಗ ಆಕರ್ಷಣೆ ಇದ್ದಿರಬಹುದೆಂದೂ, ಅದನ್ನು ಹತ್ತಿಕ್ಕುವ ಅಭಿವ್ಯಕ್ತಿಯ ಒಂದು ನಮೂನೆ ಯಾಗಿಯೇ ಕಿವಿಯ ಬಲಿದಾನ ಮಾಡಿದ್ದಿರಬಹುದೆಂದೂ ಅಂದಾಜಿಸುತ್ತದೆ.

ಪುರಾವೆಯೆಂಬಂತೆ, ಡಚ್ ಭಾಷೆಯಲ್ಲಿ ಕಿವಿಗೆ ಇರುವ ಪದವನ್ನೇ ಪುರುಷ ಜನನೇಂದ್ರಿಯ ಎಂಬರ್ಥದಲ್ಲೂ ವ್ಯಂಗ್ಯವಾಗಿ ಬಳಸುವುದರಿಂದ ಸಾಂಕೇತಿಕವಾಗಿ ವಿನ್ಸೆಂಟ್ ತನ್ನ ಪುರುಷತ್ವವನ್ನು ಕತ್ತರಿಸಿಕೊಂಡೆನೆಂದು ಹೇಳಹೊರಟಿದ್ದಾನೆ- ಅಂತ ಆ ಊಹೆಯ ಸಮರ್ಥಕರ ಅಂಬೋಣ. ಆದರೆ ವಿನ್ಸೆಂಟ್ ಸಲಿಂಗಕಾಮಿ ಆಗಿರಲಿಲ್ಲ, ಅಂಥದೇನನ್ನೂ ತನ್ನ ಬರವಣಿಗೆಯಲ್ಲಿ
ಕೂಡ ಯಾವತ್ತೂ ವ್ಯಕ್ತಪಡಿಸಿಲ್ಲ, ಮಾತ್ರವಲ್ಲ ಆತ ಆಗೊಮ್ಮೆ ಈಗೊಮ್ಮೆ ವೇಶ್ಯಾಗೃಹಕ್ಕೂ ಹೋಗುತ್ತಿದ್ದನು, ಹೆಣ್ಣುಗಳನ್ನು ಭೇಟಿ ಯಾಗುತ್ತಿದ್ದನು… ಎನ್ನುತ್ತ ಆ ವಾದವನ್ನು ಅಲ್ಲಗಳೆಯುವವರೂ ಇದ್ದಾರೆ.

ಬೇರೆ ಕೆಲವು ಊಹೆಗಳು ವಿನ್ಸೆಂಟ್‌ನ ಖಾಸಗಿ ಸಂಗತಿಗಳ ಸುತ್ತ ಗಿರಕಿಹೊಡೆಯದೆ, ಆತನ ಕಲಾಪ್ರತಿಭೆ ಮತ್ತು ಚಿತ್ರಗಳ ಮೂಲಕ
ವಿವಿಧ ಸೂಕ್ಷ್ಮಗಳನ್ನು ತಿಳಿಸುವ ಆತನ ಸಾಮರ್ಥ್ಯವನ್ನೇ ಈ ಕಿವಿ ಪ್ರಸಂಗಕ್ಕೂ ತಳುಕು ಹಾಕುತ್ತವೆ. ಉದಾಹರಣೆಗೆ, ಕಿವಿ ಕುಯ್ದುಕೊಂಡ ಕೆಲ ದಿನಗಳ ಹಿಂದೆಯಷ್ಟೇ ವಿನ್ಸೆಂಟ್ ಒಂದು ಕಲಾಕೃತಿಯಲ್ಲಿ ‘ಯಹೂದ್ಯ ಪಾದ್ರಿಯೊಬ್ಬನ ಸೇವಕನು ಏಸುಕ್ರಿಸ್ತನನ್ನು ಬಂಧಿಸಲಿಕ್ಕೆ ಬಂದಾಗ ಸೈಮನ್ ಪೀಟರನು ಆ ಸೇವಕನ ಕಿವಿ ಕತ್ತರಿಸುವ ದೃಶ್ಯ’ವನ್ನು ಚಿತ್ರಿಸಿದ್ದನಂತೆ.

ಧರ್ಮಭೀರುವಾದ ವಿನ್ಸೆಂಟ್ ಬರೀ ಚಿತ್ರ ಸಾಲದೆಂಬಂತೆ ಆ ದೃಶ್ಯವನ್ನು ಪ್ರತ್ಯಕ್ಷ ತೋರಿಸಲಿಕ್ಕೆಂದು ತನ್ನದೇ ಕಿವಿ ಕತ್ತರಿಸಿ ಕೊಂಡನು ಎಂದು ಒಂದು ಊಹೆ. ಅಥವಾ, ಫ್ರಾನ್ಸ್‌ನಲ್ಲಿ ಆಗಲೂ ಈಗಲೂ ಜನಪ್ರಿಯವಾದ ‘ಬುಲ್ ಫೈಟ್’- ಎತ್ತುಗಳ ಜೊತೆ ಮನುಷ್ಯರ ಸೆಣಸಾಟ- ಕ್ರೀಡೆಯಿಂದ ಪ್ರಭಾವಿತನಾಗಿ ವಿನ್ಸೆಂಟ್ ಒಂದು ಪ್ರಾತ್ಯಕ್ಷಿಕೆ ನಡೆಸಿದ್ದಿರಬಹುದು ಎಂದು ಇನ್ನೊಂದು ಊಹೆ. ಬುಲ್ ಫೈಟ್ ಕ್ರೀಡೆಯಲ್ಲಿ ಎತ್ತಿನ ಜೊತೆ ಸೆಣಸಿ ಗೆಲ್ಲುವ ವ್ಯಕ್ತಿಗೆ (ಆತನನ್ನು ಮೆಟಡಾರ್ ಎನ್ನಲಾಗುತ್ತದೆ) ಎತ್ತಿನ ಕಿವಿಯನ್ನು ಬಹುಮಾನವಾಗಿ ಕೊಡುವುದು, ಮತ್ತು ಆತ ಅದನ್ನು ತನ್ನಿಷ್ಟದ ಹೆಣ್ಣಿಗೆ ಕೊಡುವುದು ಕ್ರಮ.

ವಿನ್ಸೆಂಟ್ ತನ್ನ ಕಿವಿಯನ್ನು ಕತ್ತರಿಸಿ ವೇಶ್ಯಾಗೃಹದ ಹೆಣ್ಣೊಬ್ಬಳಿಗೆ ಕೊಟ್ಟನಷ್ಟೆ? ಬಹುಶಃ ಆ ಪ್ರಕ್ರಿಯೆಯಲ್ಲಿ ಅವನು ತನ್ನನ್ನು
ಏಕಕಾಲಕ್ಕೆ ಎತ್ತು ಮತ್ತು ಎತ್ತನ್ನು ಸೆಣಸಿ ಗೆದ್ದ ವ್ಯಕ್ತಿ ಎಂಬಂತೆ ಪ್ರತಿಬಿಂಬಿಸಲಿಕ್ಕೆ ಹೊರಟಿದ್ದನು! ವಿನ್ಸೆಂಟ್ ವೇಶ್ಯಾಗೃಹಕ್ಕೆ ಹೋಗುತ್ತಿದ್ದದ್ದು ತೀಟೆ ತೀರಿಸಿಕೊಳ್ಳಲಿಕ್ಕೆ ಅಲ್ಲ. ವೇಶ್ಯೆಯರನ್ನೂ ತನ್ನ ಹಾಗೆಯೇ ಕೀಳಾಗಿ ಕಾಣುವ ಸಮಾಜದ ಮೇಲೆ ವಿನ್ಸೆಂಟ್‌ಗೆ ಸಿಟ್ಟು ಇತ್ತು. ವೇಶ್ಯೆಯರ ಬಗ್ಗೆ ಅನುಕಂಪ ಇತ್ತು. ‘ವೇಶ್ಯೆಯೆಂದರೆ ಕಸಾಯಿಖಾನೆಯಲ್ಲಿ ಮಾಂಸ ಇದ್ದಂತೆ’ ಎಂದು ಆತ ಒಮ್ಮೆ ಬರೆದುಕೊಂಡಿದ್ದನಂತೆ.

ಅಷ್ಟಾಗಿ, ಸ್ವಾರಸ್ಯವೇನೆಂದರೆ ಕತ್ತರಿಸಿದ ಕಿವಿಯನ್ನು ಕಾಗದದಲ್ಲಿ ಮಡಚಿ ವೇಶ್ಯಾಗೃಹಕ್ಕೊಯ್ದು ಗ್ಯಾಬಿ ಎಂಬ ಯಾವ ಹೆಣ್ಣಿಗೆ ವಿನ್ಸೆಂಟ್ ಕೊಟ್ಟನೋ, ಆ ಗ್ಯಾಬಿ ವೇಶ್ಯೆ ಆಗಿರಲಿಲ್ಲ! ಅಲ್ಲಿ ಆಕೆ ಬರಿ ಒಬ್ಬ ಸ್ವಚ್ಛತಾ ಕರ್ಮಚಾರಿಣಿಯಷ್ಟೇ ಆಗಿದ್ದಳು. ಕಡು ಬಡತನದಲ್ಲಿದ್ದ ಆಕೆ, ಹುಚ್ಚುನಾಯಿ ಕಡಿತದ ದುಬಾರಿ ಚಿಕಿತ್ಸೆಗೆ ದುಡ್ಡು ಜೋಡಿಸಲಿಕ್ಕಾಗಿ ವೇಶ್ಯಾಗೃಹದಲ್ಲಿ ಪಾರ್ಟ್‌ ಕೈಮ್ ಕ್ಲೀನರ್ ಆಗಿ ದುಡಿಯುತ್ತಿದ್ದಳು. ಬೇರೆ ಸಮಯದಲ್ಲಿ ಒಂದು ಕೆಫೆಯಲ್ಲಿ ದುಡಿಯುತ್ತಿದ್ದ ಆಕೆಯನ್ನು ವಿನ್ಸೆಂಟ್ ಕೆಲವೊಮ್ಮೆ ಆ ಕೆಫೆಯಲ್ಲೂ ಭೇಟಿಯಾಗುತ್ತಿದ್ದನು, ಆಕೆಯ ಸ್ಥಿತಿಯ ಬಗ್ಗೆ ಮಮ್ಮಲಮರುಗುತ್ತಿದ್ದನು ಎಂದು ಕೂಡ ಹೇಳಲಾಗಿದೆ.

ಸೈಕಾಲಜಿಯ ಇನ್ನೂ ಒಂದು ದೃಷ್ಟಿಕೋನದ ಪ್ರಕಾರ- ವಿನ್ಸೆಂಟ್‌ಗೆ ‘ಓಡಿಪಸ್ ಕಾಂಪ್ಲೆಕ್ಸ್’ ಎಂಬ ಮನೋದೌರ್ಬಲ್ಯ ಇತ್ತು. ಆ ಕಾಯಿಲೆ ಇದ್ದವರು ತಮ್ಮ ಹೆತ್ತವರ ಮೇಲೆ ಪದೇ ಪದೇ ಆಕ್ರೋಶ ವ್ಯಕ್ತಪಡಿಸುತ್ತಿರುತ್ತಾರೆ. ವಿನ್ಸೆಂಟ್ ಆವತ್ತೇ ಬೆಳಗ್ಗೆ ಚಿತ್ರಕಾರ ಮಿತ್ರ ಗೌಗ್ವಿನ್‌ನ ಮೇಲೆ ಹಲ್ಲೆಗೆ ಮುಂದಾಗಿದ್ದನು. ಗೌಗ್ವಿನ್‌ನಲ್ಲಿಯೇ ತನ್ನ ಹೆತ್ತವರನ್ನು ಕಲ್ಪಿಸಿಕೊಂಡಿದ್ದನು. ಆದರೆ ಗೌಗ್ವಿನ್ ತೀಕ್ಷ್ಣವಾಗಿ ದಿಟ್ಟಿಸಿ ನೋಡಿದಾಗ ವಿನ್ಸೆಂಟ್ ಹಿಮ್ಮೆಟ್ಟಬೇಕಾಯಿತು. ಆದರೂ ಹತಾಶೆಯನ್ನು ತಡೆದುಕೊಳ್ಳಲಾಗದೆ ಸಂಜೆ ಆ ಘೋರ ಕೃತ್ಯಕ್ಕೆ ತೊಡಗಿದನು- ಎಂಬ ವಿವರಣೆಯೂ ಇದೆ.

ಇವೆಲ್ಲ ಸಾಧ್ಯತೆಗಳನ್ನು ಮಂಡಿಸಿದ ಮೇಲೆ ಪ್ರೊ.ರನ್ಯನ್ ಅವರ ಅಭಿಪ್ರಾಯವೆಂದರೆ- ಮನುಷ್ಯನ ನಡತೆಗೆ, ಅದರಲ್ಲೂ ಮಾನಸಿಕ ಸಮತೋಲವಿಲ್ಲದ ಮನುಷ್ಯನ ನಡತೆಗೆ, ಇದಮಿತ್ಥಂ ಎಂದು ಒಂದು ನಿರ್ದಿಷ್ಟ ಕಾರಣವನ್ನು ಕೊಡುವುದು ಕಷ್ಟ. ಬಹುಶಃ ಬೇರೆಬೇರೆ ಊಹೆಗಳ ಹಿಂದಿರುವ ವಾಸ್ತವಗಳ ಸಂಯುಕ್ತ ಫಲವಾಗಿ ವಿನ್ಸೆಂಟ್ ಆ ಕೃತ್ಯ ನಡೆಸಿರಬಹುದು. ಉದಾ ಹರಣೆಗೆ, ಬುಲ್ ಫೈಟ್ ಪ್ರಚೋದನೆ ಇದ್ದಿರಬಹುದಾದರೂ, ಕ್ರಿಸ್ಮಸ್‌ನ ಆಸುಪಾಸಿನಲ್ಲಿ ಘಟನೆ ನಡೆದಿರುವುದು ತಮ್ಮನ ವಿವಾಹ ನಿಶ್ಚಯದಿಂದಾದ ಮಾನಸಿಕ ಕ್ಷೋಭೆಯಿಂದಲೇ ಇರಬಹುದು.

ಕಾರಣಗಳೇನೇ ಇದ್ದರೂ ಒಟ್ಟಾರೆಯಾಗಿ ಈ ಘಟನೆಯು ವಿನ್ಸೆಂಟ್ ನನ್ನು ಕರ್ಟ್ ಕೊಬೈನ್ ಅಥವಾ ಡೇವಿಡ್ ಫಾಸ್ಟರ್ ವಾಲ್ಲೇಸ್ ಮುಂತಾದ ‘ಸ್ವಯಂಶಿಕ್ಷೆ ಮತ್ತು ಮುಂದುವರಿದು ಆತ್ಮಹತ್ಯೆ ಮಾಡಿಕೊಂಡ ಕಲಾವಿದ’ರ ಸಾಲಿನಲ್ಲಿಯೇ ನಿಲ್ಲಿಸು ವಂತಾಗಿರುವುದು ಹೌದು. ಪಾಪ, ಅವನ ಮಾನಸಿಕ ಅಸ್ವಾಸ್ಥ್ಯವನ್ನು ಕಡೆಗಣಿಸಿ ಇದನ್ನೊಂದು ಕ್ರಿಯೇಟಿವ್ ಆಕ್ಟ್ ಎಂಬಂತೆ ಪ್ರತಿಬಿಂಬಿಸುವುದು ಯಾವ ದೃಷ್ಟಿಯಿಂದಲೂ ಸರಿಯಲ್ಲ. ಮಾನಸಿಕ ಅಸ್ವಾಸ್ಥ್ಯವು ವಿನ್ಸೆಂಟ್‌ನ ಕ್ರಿಯಾತ್ಮಕತೆ ಹೊರಬರಲಿಕ್ಕೆ ದೊಡ್ಡದೊಂದು ಅಡ್ಡಗೋಡೆಯಾಗಿತ್ತು. ‘ಚಿತ್ರಕಲೆಯಲ್ಲಿ ತೊಡಗಿದೆನೆಂದರೆ ನಾನು ಎಲ್ಲ ನೋವನ್ನೂ ಮರೆಯುತ್ತೇನೆ’ ಎಂದು ಒಮ್ಮೆ ವಿನ್ಸೆಂಟ್ ಹೇಳಿದ್ದನು,  ಹುಚ್ಚಾಸ್ಪತ್ರೆಯಲ್ಲಿದ್ದಾಗಲೂ ಒಳ್ಳೊಳ್ಳೆಯ ಚಿತ್ರಗಳನ್ನು ಬಿಡಿಸುವುದು ಹೇಗೆ ಸಾಧ್ಯವಾಯಿತು ಎಂಬ ಸಂದರ್ಶಕರ ಪ್ರಶ್ನೆಗೆ.

‘ಇದೊಂದು ಕಾಯಿಲೆ ನನ್ನನ್ನು ಬಾಧಿಸುವುದಲ್ಲದಿದ್ದರೆ ನಾನು ಇನ್ನೂ ಎಷ್ಟು ಒಳ್ಳೆಯ ಚಿತ್ರಗಳನ್ನು ಬಿಡಿಸಬಲ್ಲವ ನಾಗುತ್ತಿದ್ದೆನೋ!’ ಎಂದು ಸಹೋದರ ಥಿಯೊಗೆ ಬರೆದ ಪತ್ರವೊಂದರಲ್ಲಿ ವಿನ್ಸೆಂಟ್ ತನ್ನ ಮನದ ನೋವನ್ನು ತೋಡಿ ಕೊಂಡಿದ್ದನಂತೆ. ಅಂತೂ ಅನರ್ಘ್ಯ ಪ್ರತಿಭೆಯೊಂದು ಪರಿಸ್ಥಿತಿಗಳಿಂದಾಗಿ ನಲುಗಿ ಹೋಯಿತು. ಪರ್ಸನಾಲಿಟಿ ಡಿಸಾರ್ಡರ್‌ ನಂಥ ಮಾನಸಿಕ ದೌರ್ಬಲ್ಯ, ಅದಕ್ಕೆ ಪೂರಕವಾಗಿ ಮದ್ಯಪಾನದ ದುಶ್ಚಟ, ಪೌಷ್ಟಿಕ ಆಹಾರದ ಕೊರತೆ, ಮತ್ತು  ಚಿತ್ರಗಾರಿಕೆ ಯಲ್ಲಿ ಬಳಸುತ್ತಿದ್ದ ಬಣ್ಣಗಳಲ್ಲಿದ್ದ ಸೀಸದ ಅಂಶವೂ ದೇಹದೊಳಕ್ಕೆ ಹೋಗಿರಬಹುದಾ ದದ್ದು- ಎಲ್ಲವೂ ಸೇರಿ ವಿನ್ಸೆಂಟ್‌ನನ್ನು ಇನ್ನಿಲ್ಲದಂತೆ ಕಾಡಿದುವು, ವಿಕ್ಷಿಪ್ತಗೊಳಿಸಿದುವು.

‘ಮೇಣದ ಬತ್ತಿಯ ಜ್ವಾಲೆಯ ಮೇಲೆ ನಾನು ಎಷ್ಟು ಹೊತ್ತು ಕೈಹಿಡಿದುಕೊಂಡು ಇರಬಲ್ಲೆನೋ ಅಷ್ಟು ಹೊತ್ತು ನೀನು ನನ್ನ ಜೊತೆಗಿರು!’ ಎಂದು ಒಮ್ಮೆ ಆತ ಒಬ್ಬಳು ಹೆಂಗಸಿಗೆ ಸವಾಲು ಹಾಕಿದ್ದನಂತೆ- ಅಂದರೆ ಆ ರೀತಿಯ ಸ್ವಯಂ ಹಿಂಸೆಯ ಆಲೋ ಚನೆಗಳು ಅವನಲ್ಲಿ ಆಗಾಗ ಹುಟ್ಟಿಕೊಳ್ಳುತ್ತಲೇ ಇದ್ದುವು.

ಕೊನೆಗೂ ಒಂದುದಿನ ಗುಂಡಿಕ್ಕಿಕೊಂಡು ಸತ್ತನು. ಅದಾಗಿ ಆರೇ ತಿಂಗಳಲ್ಲಿ ಸಹೋದರ ಥಿಯೊ ಸಹ ಕೊನೆಯುಸಿರೆಳೆದನು- ಪ್ರೀತಿಯ ಅಣ್ಣನನ್ನು ಕಳೆದುಕೊಂಡ ದುಃಖ ಮತ್ತು ಅಷ್ಟರಲ್ಲಿ ಉಲ್ಬಣವಾದ ನರರೋಗ ಅವನನ್ನು ನುಂಗಿ ನೊಣೆಯಿತು. ಆಗ ಆತನ ವಯಸ್ಸು ಕೇವಲ ೩೩ ವರ್ಷ. ಹಾಗೆ ನೋಡಿದರೆ ಥಿಯೊನ ಹೆಂಡತಿ ಜೊಹಾನ್ನಾ ಬಾಂಗರ್‌ಳಿಗೆ ಜಗತ್ತು ಕೃತಜ್ಞವಾಗಿರ ಬೇಕು- ವಿನ್ಸೆಂಟ್‌ನ ಅದ್ಭುತ ಕಲಾಕೃತಿಗಳನ್ನು ಪ್ರೀತಿ ಗೌರವಗಳಿಂದ ಜತನವಾಗಿಟ್ಟುಕೊಂಡು, ಆಮೇಲೆ ಅವುಗಳ ಕ್ರಮಬದ್ಧ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಜಗತ್ತಿನೆಲ್ಲೆಡೆ ಏರ್ಪಡಿಸಿ ವಿನ್ಸೆಂಟ್‌ನ ಕೀರ್ತಿಯನ್ನು ಆಕಾಶದೆತ್ತರಕ್ಕೆ ಏರಿಸಿದ್ದಕ್ಕೆ ಮತ್ತು ಹೆಸರನ್ನು ಅಜರಾಮರವಾಗಿಸಿದ್ದಕ್ಕೆ.