ದಾಸ್ ಕ್ಯಾಪಿಟಲ್
dascapital1205@gmail.com
ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾಳಜಿಯನ್ನೂ, ಬಹುದೊಡ್ಡ ಕನಸನ್ನೂ ಹೊಂದಿದ್ದಷ್ಟೇ ಅಲ್ಲದೆ ಗಮ್ಯದ ಕಡೆಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಯಾರು ಏನೇ ಹೇಳಿದರೂ ಎದೆಗುಂದದೆ ಎದುರಿಸುವ ಛಾತಿ ಅವರಲ್ಲಿ ಹುಟ್ಟು ಸಹಜವಾಗೇ ಮೂಡಿತ್ತು.
ಇಂದಿಗೆ ಹದಿಮೂರು ವರ್ಷಗಳಾಯಿತು. ದೈಹಿಕವಾಗಿ ಅವರಿಲ್ಲದಿದ್ದರೂ ಅವರ ಅಸ್ಮಿತೆ ಯಾವತ್ತೂ ಕಾಡುತ್ತಲೇ ಇರುತ್ತದೆ. ಅಂಥ ಧೀರ, ಗಂಭೀರ, ಭಾವಪ್ರಧಾನ ಸಂನ್ಯಾಸಿ ಅವರು. ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳನ್ನು ಹುಟ್ಟು ಹಾಕಿ ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಅಸಾಧಾರಣವೆನಿಸುವಂಥ ಕೊಡುಗೆಯನ್ನು ಕೊಟ್ಟವರು ಉಡುಪಿಯ ಶ್ರೀ ಅದಮಾರು ಮಠದ ಹಿರಿಯ ಯತಿಗಳಾದ ವೃಂದಾ ವನಸ್ಥರಾದ ಪರಮಪೂಜ್ಯ ಶ್ರೀವಿಬುಧೇಶ ತೀರ್ಥ ಶ್ರೀಪಾದರು.
ಅಂದುಕೊಂಡಿದ್ದನ್ನು ಸಾಧಿಸಲು ಎಂಥಾ ಸವಾಲುಗಳಿಗೂ ಧೈರ್ಯಗೆಡುತ್ತಿರಲಿಲ್ಲ. ಯಾವುದಕ್ಕೂ ಯಾವುದನ್ನೂ ಯಾರಿಗೂ ಅಂಜದೆ ನಿರ್ಭಿಡೆಯಿಂದ ಹೇಳುವ ವ್ಯಕ್ತಿತ್ವ ಅವರದಾಗಿತ್ತು. ಸಂನ್ಯಾಸ ಧರ್ಮವನ್ನೂ ಅಲೌಕಿಕವಾದ ಬದುಕನ್ನೂ ಲೌಕಿಕ ದೊಂದಿಗೆ ಸಮತೂಕದಲ್ಲಿ ಸದ್ಯಕ್ಕೂ ಶಾಶ್ವತಕ್ಕೂ ತಾದಾತ್ಮ್ಯದಿಂದ ಸ್ಪಂದಿಸುತ್ತ ಬಹುದೊಡ್ಡ ಕನಸನ್ನು ಹೊಂದಿದ್ದ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಅವಿರತವಾಗಿ ಶ್ರಮಿಸಿ ಯಶಸ್ವಿಯಾದವರು. ಈ ಮುಖೇನ ಶಿಕ್ಷಣ ಸೇವೆಯ ಕೈಂಕರ್ಯ ದಿಂದಲೇ ದೇಶಸೇವೆಯ ಕನಸನ್ನು ನನಸನ್ನಾಗಿ ಮಾಡಿಕೊಂಡ ಯತಿಪುಂಗವರಾಗೇ ಮೇಲ್ಪಂಕ್ತಿಯಾಗಿ ಉಳಿದು ಬಿಟ್ಟವರು.
ಸರಕಾರವೊಂದು ಮಾಡಬಹುದಾದ ಮಾಡಬೇಕಾದ ಕಾರ್ಯಸಾಧನೆಯನ್ನೂ ಮೀರಿ ಕರ್ನಾಟಕದ ಅನೇಕ ಮಠಮಾನ್ಯಗಳು ಸಂಘ ಸಂಸ್ಥೆಗಳು ಶಿಕ್ಷಣಕ್ಷೇತ್ರದಲ್ಲಿ ಮಾಡಿವೆ. ಸಿದ್ಧಗಂಗಾ, ಸುತ್ತೂರು, ಆದಿಚುಂಚನಗಿರಿ, ತರಳಬಾಳು, ಸಿರಿಗೆರೆ, ಗವಿಸಿದ್ದೇಶ್ವರ, ಅದಮಾರು, ಪೇಜಾವರ, ಧರ್ಮಸ್ಥಳ, ಮಣಿಪಾಲದ ಪೈಗಳು…ಇವರೇ ಮುಂತಾದ ಹಲವು ಹತ್ತು ಸಂಘ ಸಂಸ್ಥೆಗಳು ನಾಡಿ ನುದ್ದಕ್ಕೂ ನಿರಂತರ ಶಿಕ್ಷಣ ಸೇವೆಯಲ್ಲಿ ನಿರತವಾಗಿವೆ.
ಮೂವತ್ತಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದ ಶ್ರೀ ವಿಬುಧೇಶ ತೀರ್ಥರು ಕೇವಲ ಶಿಕ್ಷಣ ಕ್ಷೇತ್ರವನ್ನು ಮಾತ್ರ ಪರಿ ಗಣಿಸಿದರು ಎಂದು ಹೇಳಲು ಸಾಧ್ಯವಿಲ್ಲ. ಸಾಂದರ್ಭಿಕವಾಗಿ ರಾಜಕಾರಣಕ್ಕೆ ಸಂಬಂಧಿತವಾಗಿಯೂ ಅವರು ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಅಭಿವ್ಯಕ್ತಿಸಿದ್ದಿದೆ. ನಾವು ನಮ್ಮ ಮನೆಯ, ನಮ್ಮ ಬಾಂಧವ್ಯದ, ನಮ್ಮ ಭಾಷೆಯ, ನಮ್ಮ ಪ್ರಾಂತದ ಮಟ್ಟಿಗಷ್ಟೆ ಚಿಂತಿಸಬಾರದು.
ರಾಷ್ಟ್ರೀಯ ಚಿಂತನೆ ಮುಖ್ಯವಾಗಬೇಕು ಎಂದ ಶ್ರೀಗಳು, ಧರ್ಮಗುರುಗಳು ರಾಜಕೀಯವನ್ನು ಚರ್ಚಿಸುವುದು, ವಿಮರ್ಶಿಸು ವುದು, ಜನರಿಗೆ ಮಾರ್ಗದರ್ಶನ ಮಾಡುವುದು ತಪ್ಪಲ್ಲ. ಈ ಹಿಂದೆ ರಾಜಮಹಾರಾಜರುಗಳ ಕಾಲದಲ್ಲಿ ಧರ್ಮಗುರುಗಳು ರಾಜಕೀಯ ವಿಷಯಗಳಲ್ಲೂ ಮಾರ್ಗದರ್ಶನ ಮಾಡುತ್ತಿದ್ದರು ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಇಂದಿರಾಗಾಂಧಿಯ ಎಮರ್ಜೆನ್ಸಿಯನ್ನು ಸಮರ್ಥಿಸುತ್ತ ‘ಯಾರ ಸ್ವಾತಂತ್ರ್ಯದ ಬಗ್ಗೆ ಮಾತಾಡುತ್ತೀರಿ? ಉತ್ತರ ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶಗಳ ಜನರ ದುರವಸ್ಥೆಯನ್ನು ಬರಗಾಲಪೀಡಿತ ಪ್ರದೇಶದ ಕಾರ್ಮಿಕ ಸಂಕಟವನ್ನು ಒಮ್ಮೆ ನೋಡಬನ್ನಿ.
ಆಗ ತಿಳಿಯುತ್ತದೆ ನೀವು ಮಾತಾಡುವ ಸ್ವಾತಂತ್ರ್ಯದ ಪೊಳ್ಳುತನ ಏನೆಂದು. ಈ ದೇಶದ ಶೇ.ಎಪ್ಪತ್ತು ಮಂದಿ ಬದುಕುವ ಹಕ್ಕಿ ನಿಂದಲೇ ವಂಚಿತರಾಗಿದ್ದಾರೆ. ಅವರಿಗೆ ಸ್ವಾತಂತ್ರ್ಯವೆಂದರೇನೇ ಗೊತ್ತಿಲ್ಲ. ಎಂದಾದರೂ ಅವರಿಗೆ ಮಾತಾಡುವ ಹಕ್ಕಿತ್ತೇ ಈ ದೇಶದಲ್ಲಿ? ಅಂಥ ವರ್ಗದ ಏಳ್ಗೆಗಾಗಿ ಕೈಗೊಂಡ ಯಾವ ಆರ್ಥಿಕ ಶಿಸ್ತಿಗೂ ನನ್ನ ಬೆಂಬಲವಿದೆ’ ಎಂದ ಶ್ರೀ ವಿಬುಧೇಶ ತೀರ್ಥರು ಸೋನಿಯಾಗಾಂಧಿ ಪ್ರಧಾನಿಯಾದರೆ, ದೇಶ ಬಿಟ್ಟು ಹೋಗುತ್ತೇನೆ ಎಂಬರ್ಥದ ಮಾತುಗಳನ್ನಾಡಿದ್ದರು.
ಅಚ್ಚರಿಯೆನಿಸುವಂಥ ಹೇಳಿಕೆಗಳನ್ನು ನೀಡಿದರೂ ಅದನ್ನು ಸಮರ್ಥಿಸಿಕೊಳ್ಳುವ ಬೌದ್ಧಿಕ ಜಾಣ್ಮೆ ಮತ್ತು ವೈಚಾರಿಕತೆ ಅವ ರಲ್ಲಿತ್ತು. ಕಾರಣ ಅವರಲ್ಲಿ ಎಲ್ಲ ಬಗೆಯ ನಿಲುವುಗಳನ್ನು ಪರಾಮರ್ಶಿಸಿ ಸ್ವೀಕರಿಸುವ ದೊಡ್ಡ ಗುಣವಿತ್ತು. ಆದ್ದರಿಂದ ಅವರು ವಿವಾದಾತ್ಮಕ ವ್ಯಕ್ತಿಯಾಗಿ ಹಲವು ಸನ್ನಿವೇಶಗಳಲ್ಲಿ ಕಂಡಿದ್ದಿದೆ. ವಿಜ್ಞಾನ, ಸಂಗೀತ, ಯಕ್ಷಗಾನ, ಸಾಹಿತ್ಯ, ಕಲೆ, ಭರತನಾಟ್ಯ, ಜಾನಪದಗಳಲ್ಲಿ ಅಪಾರ ಅಭಿರುಚಿ ಮತ್ತು ಆಸಕ್ತಿ ಹೊಂದಿದ್ದ ಅವರು ಎಲ್ಲದಕ್ಕೂ ಪ್ರೋತ್ಸಾಹವನ್ನು ಎಲ್ಲ ಬಗೆಯಿಂದಲೂ ನೀಡುತ್ತಿದ್ದರು.
ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾಳಜಿಯನ್ನೂ, ಬಹುದೊಡ್ಡ ಕನಸನ್ನೂ ಹೊಂದಿದ್ದಷ್ಟೇ ಅಲ್ಲದೆ ಗಮ್ಯದ ಕಡೆಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಯಾರು ಏನೇ ಹೇಳಿದರೂ ಎದೆಗುಂದದೆ ಎದುರಿಸುವ ಛಾತಿ ಅವರಲ್ಲಿ ಹುಟ್ಟು ಸಹಜವಾಗೇ ಮೂಡಿತ್ತು. ಇಂಗ್ಲಿಷನ್ನು ನಮ್ಮ ಮಕ್ಕಳು ಕಲಿಯಲೇಬೇಕೆಂಬ ಒತ್ತಾಸೆಯಂತೂ ಶ್ರೀಗಳಲ್ಲಿ ಬಲವಾಗಿ ಬೇರೂರಿತ್ತು. ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಇಂಗ್ಲಿಷ್ ಸಾಹಿತ್ಯವನ್ನು ದಿನಪತ್ರಿಕೆಗಳನ್ನು ಓದುವಂತೆ ಮತ್ತೆಮತ್ತೆ ಪ್ರೇರೇಪಿಸು
ತ್ತಿದ್ದರು.
ಒತ್ತಾಯಿಸುತ್ತಿದ್ದರು. ಅಸ್ಖಲಿತವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಅವರು ಇಂಗ್ಲಿಷ್ ಸ್ವಾಮೀಜಿ ಅಂತೆಲೇ ಪ್ರಸಿದ್ಧಿ ಯಾದರೂ ಇಂಗ್ಲಿಷ್ ಮುಖೇನ ಆಧುನಿಕತೆಯನ್ನು ಸ್ವೀಕರಿಸಿ ಆಧುನಿಕರಾಗುವ ಮನಸ್ಥಿತಿಗೆ ಅವರಲ್ಲಿ ವಿರೋಧವಿತ್ತು. ವೈಚಾರಿಕ ವೈರುದ್ಧ್ಯ ಗಳಲ್ಲೂ ಸತ್ಯವನ್ನೇ ನೆಚ್ಚಿಕೊಳ್ಳುವ ಅವರ ಧೋರಣೆಗಳು ಯಾವತ್ತೂ ಅವರನ್ನು ಕ್ರಿಯಾಶೀಲವಾಗೇ ಇಟ್ಟಿದೆ. ಈ ಕ್ರಿಯಾಶೀಲತೆ ಮತ್ತು ನಿರಂತರ ಚಿಂತನಶೀಲತೆ ಅವರಲ್ಲಿ ಎರವಲಾಗಿ ಬಂದಿದ್ದಲ್ಲ.
ಸಹಜವಾಗಿಯೇ ಹುಟ್ಟಿಕೊಂಡದ್ದು. ದೈವವನ್ನು ಆರಾಧಿಸುವ, ಪ್ರೀತಿಸುವ, ಅದನ್ನೇ ನಂಬಿ ಲೌಕಿಕದಲ್ಲೂ ಅಲೌಕಿಕದ ಸಂನ್ಯಾಸ ಧರ್ಮವನ್ನು ಪಾಲಿಸುವ, ಮಧ್ವ ಸಿದ್ಧಾಂತವನ್ನೂ, ಆಧ್ಯಾತ್ಮಿಕತೆಯನ್ನೂ ತನ್ನ ಒಡಲ ಹಸಿವೆಂದೇ ನೆಚ್ವಿಕೊಂಡು ಬದುಕಿದ ವಿಬುಧೇಶರ ಸ್ವಾಸ್ಥ್ಯ ಕೊನೆಯವರೆಗೂ ಇದ್ದದ್ದು ಮಾತ್ರ ಶಿಕ್ಷಣದ! ಅದಮಾರು ಮಠ ಎಜ್ಯುಕೇಷನ್ ಕೌನ್ಸಿಲನ್ನು ಹುಟ್ಟುಹಾಕಿ ಆ ಮೂಲಕ ಉಡುಪಿ, ಭದ್ರಾವತಿ, ಚಿಕ್ಕಮಗಳೂರು, ಬೇಲೂರು, ಬೆಂಗಳೂರು, ಮುಂಬಯಿ, ದೆಹಲಿಗಳಲ್ಲಿ
ಪೂರ್ಣಪ್ರಜ್ಞ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಿಯು ಕಾಲೇಜುಗಳನ್ನು ಕಟ್ಟಿಬೆಳೆಸಿದ ಅವರು ಜೀವಮಾನದ ಕನಸಾದ ವೈಜ್ಞಾನಿಕ ಸಂಶೋಧನಾ ಕೇಂದ್ರವನ್ನು ಬೆಂಗಳೂರಿನ ಬಿದಲೂರಿನಲ್ಲಿ ಸ್ಥಾಪಿಸಿದರು.
ಬೆಂಗಳೂರಲ್ಲಿ ಪೂರ್ಣಪ್ರಜ್ಞ -ಕಲ್ಟಿ ಇಂಪ್ರೂವ್‌ಮೆಂಟ, ಉಡುಪಿಯಲ್ಲಿ ಡಿಗ್ರಿಕಾಲೇಜು, ಎಂಬಿಎ, ಪಿಯು, ಸಂಜೆ ಕಾಲೇಜನ್ನು
ಕಟ್ಟಿದರು. ಶ್ರೀ ರಘುಮಾನ್ಯತೀರ್ಥರ ಕನಸಾದ ಸಂಸ್ಕೃತ ಮಹಾಪಾಠಶಾಲೆಯ ಕಟ್ಟಡದ ಪೂರ್ತಿರಚನೆ, ವೇದಪಾಠಶಾಲೆಯ ಆರಂಭ, ಬಡ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಎಜ್ಯುಕೇಶನ್ ಸೊಸೈಟಿ, 1969ರಲ್ಲಿ ಸರ್ವಧರ್ಮ ಸಮ್ಮೇಳನ ವನ್ನು ಬೆಂಗಳೂರಿನ ಲಾಲ್‌ಬಾಗಲ್ಲಿ ಸಂಯೋಜಿಸಿದ್ದು, ಶ್ರೀ ಸುಧೀಂದ್ರ ತೀರ್ಥರ ನೆನಪಿಗಾಗಿ ಉಡುಪಿ ಶ್ರೀಕೃಷ್ಣನಿಗೆ ಚಿನ್ನದ ತೊಟ್ಟಿಲು ಮತ್ತು ಬೆಳ್ಳಿರಥ, ಕೃಷ್ಣಮಠದಲ್ಲಿ ಭೋಜನಶಾಲೆ, 1999ರಲ್ಲಿ ವಿಶ್ವಬ್ಯಾಂಕ್ ಅಧ್ಯಕ್ಷರು ಹಾಗೂ ಕ್ಯಾಂಟರ್ ಬರಿಯ ಆರ್ಚ್ ಬಿಷಪ್ಪರ ಆಹ್ವಾನದ ಮೇರೆಗೆ ಸರ್ವಧರ್ಮ ಗುರುಗಳ ಸಮಾವೇಶದಲ್ಲಿ ಭಾಗಿಯಾಗಿ ಬಡತನ ನಿರ್ಮೂಲನಾ ಯೋಜನೆ ಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ಆಗ್ರಹ, ಇಂಗ್ಲೆಂಡಿನಲ್ಲಿ ನಡೆದ ಧರ್ಮ ಮತ್ತು ಪರಿಸರ ಸಂರಕ್ಷಣೆ ಸಮಾವೇಶದಲ್ಲಿ ಪಾಲ್ಗೊಂಡು ಅದೇ ವಿಷಯದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ರಾಷ್ಟ್ರಕ್ಕೆ ನೊಬೆಲ್ಲಿಗೆ ಸರಿದೂಗುವ ಪ್ರಶಸ್ತಿ ನೀಡಬೇಕೆಂಬ ಸದಾಗ್ರಹ, 1993ರಲ್ಲಿ ಯು.ಎಸ್.ಎ. ಮತ್ತು 1995ರಲ್ಲಿ ಯು.ಕೆ.ಗೆ ಭೇಟಿ, ಉಡುಪಿಯಲ್ಲಿ ಅದಮಾರು ಮಠ ಅತಿಥಿಗೃಹ, ಪೂರ್ಣ ಪ್ರಜ್ಞ ಸಭಾಭವನ, ಪೂರ್ಣಪ್ರಜ್ಞ ಗ್ರಾಮೀಣ ಸಂಸ್ಥೆ, ಬೆಂಗಳೂರು ಸಮೀಪ ಬಡತನ ಹಾಗೂ ಸೌಲಭ್ಯ ವಂಚಿತ ಬರಪೀಡಿತ ಕೆಲವು ಪ್ರದೇಶಗಳಲ್ಲಿ, ಚಿಕ್ಕಮಗಳೂರಿನ ಸಂಗಮೇಶ್ವರಪೇಟೆಯ ಹತ್ತಿರದ ಹಳ್ಳಿಯಲ್ಲಿ ೫೨ ಮನೆಗಳನ್ನು, ಬಾಗೇಪಲ್ಲಿಯ 3 ಹಳ್ಳಿಗಳನ್ನು ದತ್ತುಕೊಂಡದ್ದು, ಇತ್ಯಾದಿ ದಾನಧರ್ಮಗಳು- ಇವು ಶ್ರೀಗಳ ಜೀವನ ಸಾಧನೆಗಳು.
ಶ್ರೀಗಳಿಂದ ವಿದ್ಯಾವಾಚಸ್ಪತಿ ಅಭಿದಾನ ಪಡೆದ ದಿ.ಬನ್ನಂಜೆಯವರ ಮಾತಿದು: ‘ಅವರು ದಾರಿ ನೋಡಿಕೊಂಡು ನಡೆದವರಲ್ಲ. ಅವರು ನಡೆದದ್ದೇ ದಾರಿಯಾಯಿತು. ಅವರು ಯಾರನ್ನೂ ಅನುಸರಿಸಲಿಲ್ಲ. ಉಳಿದವರು ಹಿಂದೆ ಬರುವಂತೆ ಅವರು ಮುಂದೆ ನಡೆದರು.’ ಗೌರವಾನ್ವಿತ ಡಾ.ರಾಜೇಂದ್ರ ಪ್ರಸಾದ್, ಡಾ.ರಾಧಾಕೃಷ್ಣನ್, ಶ್ರೀ ಶಾಸೀ, ಆರ್.ಆರ್.ದಿವಾಕರ, ವಾಜಪೇಯಿ,
ಅಡ್ವಾಣಿ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ, ಹನುಮಂತಯ್ಯ, ಬಿ.ಡಿ.ಜತ್ತಿ, ರತ್ನವರ್ಮ ಹೆಗ್ಗಡೆ, ಕಡಂದಲೆ ಕೃಷ್ಣಭಟ್ಟರು, ಜನರಲ್ ಕಾರ್ಯಪ್ಪ, .ಮಾಧವ ಪೈ, ಟಿ.ಎ.ಪೈ, ಕೆ.ಕೆ.ಪೈ, ಉಪೇಂದ್ರ ನಾಯಕ್, ರಾಜಕುಮಾಶ್ರೀ, ರಾಮಕೃಷ್ಣ ಹೆಗಡೆ, ಜೀವರಾಜ ಆಳ್ವ, ಡಿ.ಬಿ.ಚಂದ್ರೇಗೌಡ, ಡಾ.ಜಾಕೀರ್ ಹುಸೇನ್, ಶ್ರೀಮತಿ ಸರೋಜಿನಿ ನಾಯ್ಡು, ಗದ್ವಾಲ್ ಮಹಾರಾಣಿ, ಕೊಚ್ಚಿ ಮಹಾರಾಜರು, ಶ್ರೀಕಂಠದತ್ತ ಒಡೆಯರ್, ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ಕೆ.ಎಂ.ಮುನ್ಷಿ, ಸುಖಾಡಿಯಾ, ಮುಥಾಲಿಕ್ ದೇಸಾಯಿ, ಎಚ್.ಎಸ್.ಬಲ್ಹೋಟ್, ಭವನಾನಿ, ವಿಶ್ವನಾಥ ರಾವ್, ವೈ.ಬಿ.ಚವ್ಹಾಣ್, ಡಾ.ಸರೋ ಜಿನಿ ಮಹಿಷಿ, ಆರ್ .ಡಿ.ಖಾಡೀಲ್ಕರ್, ಕೆ.ಎಸ್.ಹೆಗ್ಡೆ, ಆಸ್ಕರ್ ಫೆರ್ನಾಂಡಿಸ್, ಶಿವರಾಮ ಕಾರಂತ, ಮಾಧವಗಾಡ್ಗೀಳ್, ಅನಂತಮೂರ್ತಿ..
ಅನೇಕ ಮಹನೀ ಯರು ಸಾಂದರ್ಭಿಕವಾಗಿ ಶ್ರೀಗಳ ಸತ್ಕಾರ್ಯದಲ್ಲಿ ಸಹಕರಿಸಿ ಭಾಗಿಯಾದವರು.
ಉಡುಪಿ ಶ್ರೀಕೃಷ್ಣ ಮಠ ಇವರ ಕಾಲದಲ್ಲೂ ಉತ್ಕರ್ಷವನ್ನು ಕಂಡಿದೆ. ಅದಕ್ಕಿಂತ ಮುಖ್ಯವಾಗಿ, ದೈವವನ್ನೂ ಅಧ್ಯಾತ್ಮಿಕತೆ ಯನ್ನೂ ವಿದ್ಯಾಪ್ರಸಾರ ಮತ್ತು ಜ್ಞಾನದಾನದಲ್ಲಿ ಕಂಡ ಯತಿಶ್ರೇಷ್ಠರಾಗಿ ಜೀವಂತವಾಗಿ ಉಳಿದ ಯತಿಪುಂಗವರಿವರು.