ಸುಪ್ತ ಸಾಗರ
ರಾಧಾಕೃಷ್ಣ ಭಡ್ತಿ
rkbhadti@gmail.com
ವಿಧಾನಪರಿಷತ್ ಎಂಬುದು ಕುಟುಂಬ ಸದಸ್ಯರಿಗೆ ಹುದ್ದೆ ಕೊಡಿಸುವ, ಜಾತಿ ಪ್ರಾತಿನಿಧ್ಯಕ್ಕೆ ಹವಣಿಸುವ, ಪುನರ್ವಸತಿ ಬಯಸುವ ರಾಜಕಾರಣಿಗಳ, ಹಣವಂತರ ಅಧಿಕಾರ ಸ್ಥಾನದ ಹಿಂಬಾಗಿಲಾಗದೇ ನೈಜ ಪ್ರಜಾಪ್ರತಿನಿಧಿ ಸಭೆಯಾಗಬೇಕಿದೆ. ಪ್ರಾತಿನಿಽತ್ವದ ಪ್ರಕ್ರಿಯೆ, ಸ್ವರೂಪಗಳನ್ನು ಬದಲಿಸಿ, ಪ್ರಸ್ತುತ ಸನ್ನಿವೇಶ ಗಳಿಗನುಗುಣ ಸರಿಪಡಿಸಿ ಹಿರಿಯರ ಸದನ ಉಳಿಸಿಕೊಳ್ಳುವ ಅಗತ್ಯ ಇದ್ದೇ ಇದೆ.
ಯಜ್ಞ ಯಾಗಾದಿಗಳಲ್ಲಿ ನಿಯಮಿತ ಪರಂಪರೆ ಎಂಬುದೊಂದಿದೆ. ನಿಯಮಿತ ಯಜ್ಞದಲ್ಲಿ ಒಟ್ಟು ಹದಿನೆಂಟು ಮಂದಿ ಇರಬೇಕು. ನಾಲ್ಕು ಋಗ್ವೇದಿ ಋತ್ವಿಜರು, ನಾಲ್ಕು ಯಜುರ್ವೇದೀಯ ಋತ್ವಿಜರು ಹಾಗೂ ನಾಲ್ವರು ಸಾಮವೇದದವರು ಇರಬೇಕೆಂದು ವಿಽ ಹೇಳುತ್ತದೆ. ಯಜ್ಞದ ಬ್ರಹ್ಮತ್ವಕ್ಕೆ ಒಬ್ಬ ಮುಖ್ಯಸ್ಥ ಬೇಕು. ಆರು ಮಂದಿ ಸಹಾಯಕರು ಅಗತ್ಯ. ಇಷ್ಟಲ್ಲದೇ ಹೋಮ ಕರ್ಮವನ್ನು ಮಾಡಿಸುವಾತ ಸಪತ್ನೀಕನಾಗಿರಬೇಕು.
ಹಾಗೆಂದು ಇಲ್ಲಿ ಸಹಾಯಕರಾಗಲೀ, ಯಜಮಾನನಾಗಲೀ, ಕೊನೆಗೆ ಬ್ರಹ್ಮತ್ವ ವಹಿಸಿರುವಾತನೂ ಮಂತ್ರ ಗಳನ್ನು ಉಚ್ಚರಿಸುವುದಿಲ್ಲ, ಅವ್ಯಾರದ್ದೂ ಯಾಗದಲ್ಲಿ ಸಕ್ರಿಯ ಪಾತ್ರವಿರುವುದಿಲ್ಲ. ಆರಂಭದಲ್ಲಿ ಸಂಕಲ್ಪ ಮುಗಿಸಿ ಹೋಮಾಧ್ವರ್ಯುವಿಗೆ ತನ್ನ ಪರವಾಗಿ ಮುಂದಿನ ಕರ್ಮಾಂಗದ ಅಧಿಕಾರ ಕೊಟ್ಟು ಕೈಮುಗಿದು ಕುಳಿತುಕೊಳ್ಳುವುದಷ್ಟೇ ಯಜಮಾನನ ಕೆಲಸ. ಸಹಾಯಕರು ಕಾಲಕಾಳಕ್ಕೆ ಅಗತ್ಯ ಪಡಿಚಾಕರಿ ಮಾಡುತ್ತಾರೆ.
ವೇದಜ್ಞರು ಆಹುತಿ, ತರ್ಪಣ, ನಮಸ್ಕಾರಗಳಿಗೆ ಭಾದ್ಯಸ್ಥರು. ಮುಂದಿನದನ್ನು ನೆರವೇರಿಸುತ್ತಾರೆ. ಬ್ರಹ್ಮತ್ವ ದಲ್ಲಿ ಕುಳಿತವರು? ಎತ್ತರದ ಗೌರವಯುತ ಪೀಠದಲ್ಲಿ ಕೊನೆಯವರೆಗೆ, ಆಸನ(ಭಂಗಿ) ವನ್ನೂ ಬದಲಿಸದೇ ತದೇಕಚಿತ್ತಾರಾಗಿ ಗಮನಿಸುತ್ತಾ ಕುಳಿತಿರಬೇಕು. ಆತ ಪ್ರಾಜ್ಞನೂ, ಹಿರಿಯನೂ, ಅನುಭವಿಯೂ ಆಗಿರ ಬೇಕು. ಅಷ್ಟಕ್ಕೂ ಹಾಗೆ ನೋಡುತ್ತ ಕುಳಿತಿರಲು ಒಬ್ಬನ ಅಗತ್ಯವಿದೆಯೇ? ಕೇವಲ ದಕ್ಷಿಣೆಯ ಖರ್ಚಿಗೆ ಅವನೊಬ್ಬ ಏಕೆ? ಎಲ್ಲವನ್ನೂ ಬಲ್ಲ ವಿದ್ವಾಂಸ ನನ್ನೇ ಅಧ್ವರ್ಯಕ್ಕೆ ನಿಗದಿ ಮಾಡಿದ ಮೇಲೆ ಈ ಬ್ರಹ್ಮತ್ವದ ಅನಿವಾರ್ಯ ವಿದೆಯೇ? ವಿಶೇಷವೆಂದರೆ ಯಜ್ಞದ ವಿಧಿ ವಿಧಾನದಲ್ಲಿ ಯಾವುದೇ ಭಾಗದಲ್ಲಿ ಲೋಪವಾದರೆ ಅವನೇ ಜವಾಬ್ದಾರ.
ಹೋಮ ಕರ್ತೃ ಕರ್ಮಾಂಗವನ್ನು ಮುಗಿಸುವ ಆತುರದಲ್ಲಿ ಕೆಲವನ್ನು ಬಿಟ್ಟುಬಿಡಬಹುದು. ಮರೆಯಬಹುದು. ಹಿಂದೆ ಮುಂದಾಗಬಹುದು. ಕಾಲ ವ್ಯತ್ಯಯ ಮಾಡಬಹುದು. ಸ್ವರ, ಮಂತ್ರ, ಕ್ರಿಯೆ, ಕರ್ಮ,ಭಕ್ತಿ ಹೀಗೆ ಯಾವುದರಲ್ಲೂ ತುಸುವೂ ದೋಷ ಬಾರದಂತೆ ನೋಡಿಕೊಳ್ಳುವ ಹೊಣೆ ಬ್ರಹ್ಮ ಪೀಠದಲ್ಲಿ ಕುಳಿತ ವನದ್ದೇ ಆಗಿರುತ್ತದೆ. ಹಾಗೆಂದು ಸಣ್ಣಪುಟ್ಟ ಹೋಮಗಳಲ್ಲಿ ನೆಪಕ್ಕೆ ಬ್ರಹ್ಮಪೀಠದಲ್ಲಿ ಒಂದು ದರ್ಭೆ ಯನ್ನೋ, ಪವಿತ್ರದ ಗಂಟನ್ನೋ, ತುಂಬಿದ ಕಳಶವನ್ನೋ ಸ್ಥಾಪಿಸಿ ಅಧ್ವರ್ಯುವೇ ಎಲ್ಲವನ್ನೂ ಮುಗಿಸಿಬಿಡುತ್ತಾನೆ.
ಆತ ತಜ್ಞನಾಗಿದ್ದಲ್ಲಿ ತಪ್ಪೇನಿಲ್ಲ. ಆದರೆ, ಇಂಥ ಸನ್ನಿವೇಶದಲ್ಲಿ ಕಾರ್ಯಬಾಹುಳ್ಯದ ನಡುವೆ ಆತನ ಮೇಲೆ ಹೊಣೆಗಾರಿಕೆ, ಒತ್ತಡ ಹೆಚ್ಚಿಗುತ್ತದೆ. ಬಹುಶಃ ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಹಿರಿಯರ ಮನೆ ಎನಿಸಿಕೊಳ್ಳುವ ವಿಧಾನ ಪರಿಷತ್ ಹಾಗೂ ರಾಜ್ಯ ಸಭೆಗಳ ಪಾತ್ರವೂ ಈ ಯಾಗಗಳಲ್ಲಿನ ಬ್ರಹ್ಮ ಪಟ್ಟದಂತೆಯೇ. ಅದು ಇಲ್ಲದಿದ್ದರೂ ಹೋಮ ನಡೆಯುತ್ತದೆ. ಆದರೆ ಲೋಪವಾಗದಂತೆ ಆಡಳಿತ ಯಜ್ಞವನ್ನು ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಕಳೆಮನೆ ಎನಿಸಿ ಕೊಳ್ಳುವ ಶಾಸಕಾಂಗದ ನೇರ ಸದನದ ಹೊಣೆಯಾಗಿರುತ್ತದೆ. ಇದಕ್ಕೆ ಮಾರ್ಗದರ್ಶನ ನೀಡಲು ಜ್ಞಾನಿ, ಅನುಭವಿಗಳೆನಿಸಿಕೊಂಡವರ ಬ್ರಹ್ಮ ಪೀಠದ ನೆರವು
ಮಾರ್ಗದರ್ಶನ ಬೇಕಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಯಾಗದ ಬ್ರಹ್ಮ ಪೀಠವೇ ನಮ್ಮ ವಿಧಾನ ಪರಿಷತ್ ಅಥವಾ ಮೇಲ್ಮನೆ.
ಮೊನ್ನೆ ಮೊನ್ನೆ ಸಾಕಷ್ಟು ರಾಜಕೀಯ ಹಳವಂಡಗಳ ಬಳಿಕ ಕೊನೆಗಂತೂ ರಾಜ್ಯದ ವಿಧಾನ ಪರಿಷತ್ತಿನ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಿದೆ.
ಅದರ ಹಿಂದೆಯೇ ಮತ್ತೊಮ್ಮೆ ಮೇಲ್ಮನೆಯ ಅಗತ್ಯದ ಕುರಿತಾದ ಚರ್ಚೆಯೂ ಮೊದಲಾಗಿದೆ. ಇಂಥದ್ದೊಂದು ಪ್ರಸ್ತಾಪ, ಚರ್ಚೆ ಹೊಸತಲ್ಲ. ಈ ಹಿಂದೆಯೂ ಕೇಳಿ
ಬಂದಿತ್ತು. ತೀರಾ ಇತ್ತೀಚೆಗೆ ನೆರೆಯ ಆಂಧ್ರಪ್ರದೇಶದಲ್ಲಿ ವಿಧಾನ ಸಭೆಯಲ್ಲಿ ಭಾರೀ ಬಹುಮತ ಹೊಂದಿರುವ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್, ಅಲ್ಲಿನ
ಮೇಲ್ಮನೆಯನ್ನೇ ವಿಸರ್ಜಿಸುತ್ತದೆ ಎಂಬ ಗುಲ್ಲೂ ಹಬ್ಬಿತ್ತು. ನಿಜಕ್ಕೂ ಮೇಲ್ಮನೆಯ ಅವಶ್ಯಕತೆ ಇಲ್ಲವೇ? ಚರ್ಚೆ ಅಗತ್ಯವೇ? ಇಂಥದೊಂದು ಕೂಗು ಈ ಹಿಂದೆಯೂ ಕೆಲವ ಬಾರಿ ಕೇಳಿಬಂದಿತ್ತು.
ಆಗೆಲ್ಲವೂ ಪ್ರಜಾಪ್ರಭೂತ್ವದಲ್ಲಿ ಹಿರಿಯರ ಸದನದ ಪಾತ್ರ, ಮೌಲ್ಯದ ಬಗೆಗೆ ಸಾರ್ವಜನಿಕವಾಗಿ ವಿಭಿನ್ನ ಅಭಿಪ್ರಾಯಗಳು ಹೊರ ಹೊಮ್ಮಿತ್ತಲ್ಲದೇ, ರಾಜಕೀಯ ದಿಂದ ಹೊರತಾದ, ಸಮಾಜದ ಎಲ್ಲ ಸ್ತರದ ಅನುಭವಿಗಳ ಜ್ಞಾನ ಬಳಕೆಗಾಗಿ ವಿಧಾನ ಪರಿಷತ್ ಪರಿಕಲ್ಪನೆಯನ ಪ್ರಸ್ತುತತೆಯನ್ನು ಪ್ರತಿಪಾದಿಸಲಾಗಿತ್ತು. ಬೇರೆಲ್ಲ ಸಂದರ್ಭಗಳಲ್ಲಿ ಮೇಲ್ಮನೆಯ ಅನಿವಾರ್ಯ ಕಾಣುತ್ತದೋ ಇಲ್ಲವೋ. ಆದರೆ, ಮಹತ್ವದ ‘ಶಾಸನ ಅಥವಾ ಕಾನೂನು ರಚನೆ’ ಎನ್ನುವ ಪ್ರಕ್ರಿಯೆ ಇದೆಯಲ್ಲಾ, ಅದು ತುಸು ತಲೆಬೇನೆಯದ್ದೇ.
ಯಾವುದೋ ಒತ್ತಡಕ್ಕೆ ಒಳಗಾಗಿ, ಇನ್ಯಾರದ್ದೋ ತೆವಲಿಗೆ, ಹಿತಾಸಕ್ತಿಗೆ ಕಟ್ಟುಬಿದ್ದು ತಯಾರಾಗುವಂಥದ್ದಲ್ಲ. ಸಂವಿಧಾನದ ಆಶಯದಡಿಯಲ್ಲಿ ಪ್ರಜಾ ಹಿತಾ ಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಕಾಲಕಾಳಕ್ಕೆ ಹೊಸ ಕಾನೂನುಗಳನ್ನು ರುಪಿಸಬೇಕಾಗುತ್ತೆ. ಕೆಲವೊಂದನ್ನು ತಿದ್ದುಪಡಿಗೂ ಒಳಪಡಿಸಬೇಕಾಗುತ್ತದೆ. ಇದರಲ್ಲಿ ಆತುರವಾಗಲೀ, ವಿವೇಚನಾ ರಾಹಿತ್ಯವಾಗಲೀ ಸಲ್ಲ. ಸಾಕಷ್ಟು ಅಧ್ಯಯನ, ಸಲಹೆ-ಅಭಿಪ್ರಾಯಗಳ ಕ್ರೋಡೀಕರಣ, ಚರ್ಚೆ, ಪರಾಮರ್ಶೆಯ ನಂತರವೇ ವಿಧೇಯಕದ ರೂಪದಲ್ಲಿ ಕರಡು ಮಂಡನೆಯಾಗಿ, ಸದನಗಳ ಅಂಗೀಕಾರದ ನಂತರ ಕಾಯಿದೆಯಾಗಿ ಪರಿವರ್ತನೆಯತಾಗಬೇಕು.
ಇದೆಲ್ಲ ಬಹುಶಃ ರಾಜಕೀಯವನ್ನುಳಿದು ಬೇರಿನ್ನಾವ ಹಿನ್ನೆಲೆ ಇರದ(ಕೆಲವೊಮ್ಮೆ ಇದ್ದಿರಲೂಬಹುದು) ಶಾಸಕರಿಂದ ಆಗಲಿಕ್ಕಿಲ್ಲ. ಅಥವಾ ಅವರ ಒತ್ತಡದಲ್ಲಿ ಇಷ್ಟಕ್ಕೆಲ್ಲ ಸಮಯದ, ಅನುಭವದ ಅಭಾವವೂ ಕಾಡಬಹುದು. ಒಬ್ಬ ಶಾಸಕ ಅಥವಾ ಸಚಿವ ಎಲ್ಲ ವಿಚಾರಗಳಲ್ಲೂ ತಜ್ಞತೆ ಹೊಂದಿರಬೇಕೆಂದೇನೂ ಇಲ್ಲ, ಅದು ಸಾಧ್ಯವೂ ಇಲ್ಲ. ಹಾಗೆಂದು ಆಯಾ ವಿಷಯ ತಜ್ಞರನ್ನೇ ನೇರವಾಗಿ ಶಾಸನಸಭೆಗೆ ತಂದು ಕುಳ್ಳಿರಿಸಿಕೊಂಡು ಕಾಯಿದೆಗಳನ್ನು ರೂಪಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಹಾಗೊಮ್ಮೆ ಆಗುವುದಾದರೆ ಪ್ರಜಾಪ್ರಭುತ್ವದ ಮೌಲ್ಯದ ಕಥೆಯೇನು? ಈ ಎಲ್ಲವನ್ನೂ ಯೋಚಿಸಿ, ಸಮಾಜದ ವಿವಿಧ ರಂಗದ ಕ್ಷೇತ್ರದ ಪರಿಣತರು, ಸಾಧಕರು, ಅನುಭವಿಗಳನ್ನೇ ಒಳಗೊಂಡ ಪ್ರತ್ಯೇಕ ಹಿರಿಯರ ಸದನವೊಂದನ್ನು ಸೃಷ್ಟಿಸಿದ್ದು; ಸಂಸತ್‌ನಲ್ಲೂ, ವಿಧಾನಸಭೆಯಲ್ಲೂ.
ಹಾಗೆಂದು ಇವರೆಲ್ಲರೂ ರಾಜಕೀಯೇತರರಾಗಿರ ಬೇಕೆಂದೇನೂ ಇಲ್ಲ. ಸಮಾಜದ ಎಲ್ಲ ರಂಗವೆಂದ ಮೇಲೆ ಅದರಲ್ಲಿ ರಾಜಕೀಯವೂ ಸೇರುತ್ತದಲ್ಲ, ಅಥವಾ ಎಲ್ಲ ರಂಗದಲ್ಲೂ ನಾಯಕತ್ವ ಗುಣವುಳ್ಳವರೂ ಇರುತ್ತಾರಲ್ಲವೇ? ಇಂಥವರಿಗೆ ಭಾರತದಂಥ ಬೃಹತ್ ಚುನಾವಣಾ ವ್ಯವಸ್ಥೆಯಲ್ಲಿ ಖಾಡಾಖಾಡಿ ಸ್ಪರ್ಧೆಯ ಆಸಕ್ತಿ, ಬಲ ಎರಡೂ ಇಲ್ಲದೇ ಇರಬಹುದು. ಅಂಥವರನ್ನು ನಿಗದಿತ, ಸೀಮಿತ ಮತದಾರರ ಸಮುದಾಯದಿಂದ ಆರಿಸಿಯೋ, ನಾಮ ನಿರ್ದೇಶನ ಮಾಡಿಯೋ ಶಾಸನ ಸಭೆಗೆ ತರುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಕಾರಣಕ್ಕಾಗಿಯೇ ಸಂಸದೀಯ ವ್ಯವಸ್ಥೆಯಲ್ಲಿ ಮೇಲ್ಮನೆಗಳ ಸದಸ್ಯರಿಗೆ ಇನ್ನಿಲ್ಲದ ಗೌರವ, ಆದ್ಯತೆ. ಯಾವುದೇ ಆವೇಶ, ಆತುರ, ಒತ್ತಡ, ಪ್ರಭಾವಗಳಿಗೆ ಒಳಗಾಗದೇ ನಿಧಾನಕ್ಕೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕೆಂಬುದು ಇದರ ಹಿಂದಿನ ಉದ್ದೇಶ.
ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಇಂಥದ್ದೊಂದು ಸದನವಿದ್ದು, ‘ಸ್ಲೋಹೌಸ್’ ಎಂದೇ ಇದನ್ನು ಗುರುತಿಸಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಇಲ್ಲಿನ ಸದಸ್ಯರು ದುರ್ಬಲರು, ಅಪ್ರಯೋಜಕರು, ನಿಧಾನಗ್ರಾಹಿಗಳು ಎಂದೇನೂ ಅಲ್ಲ. ಸಾಕಷ್ಟು ಅನುಭವಿ, ವಿಷಯ ಪರಿಣತ, ಜ್ಞಾನಿಗೆ ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಇಲ್ಲದೇ ಇರಬಹುದು. ಈ ಕಾರಣಕ್ಕೆ ಪ್ರಬುದ್ಧ ಚಿಂತಕರ ಪ್ರಯೋಜನ ದಕ್ಕದೇ ಹೋಗಬಾರದಲ್ಲ? ಆಗಿನ ಸಂವಿಧಾನ ಪರಿಣತರ ಇನ್ನೂ ವಿಶೇಷ ಆಶಯವೆಂದರೆ ಕ್ರೀಡೆ, ಕಲೆ, ರಂಗಭೂಮಿ, ಸಂಗೀತ, ಸಾಹಿತ್ಯ, ಶಿಕ್ಷಣ ಸಮಾಜ ಸೇವಾ ಕ್ಷೇತ್ರಗಳ ಪ್ರಾತಿನಿಧ್ಯ ಸಿಕ್ಕಾಗ ಆಯಾ ಕ್ಷೇತ್ರದ ಅಭಿವೃದ್ಧಿ ಸಾಧನೆ
ಸುಲಭವಾಗುತ್ತದೆ. ಜತೆಗೆ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಡಿ ಬರುವ ಗ್ರಾಮಾಪಂಚಾಯಿತಿಗಳು, ನಗರಾಡಳಿತಗಳಿಗೂ ಶಾಸನ ಸಭೆಯಲ್ಲಿ ಪ್ರಾತಿನಿಧ್ಯ ಸಿಕ್ಕಲ್ಲಿ ಸ್ಥಳೀಯ ಅಗತ್ಯಗಳ ಅರಿವು ಆಡಳಿತಾರೂಢರಿಗೆ ಕರಾರುವಾಕ್ ಆಗಿ ಆಗುತ್ತದೆ.
ಇಷ್ಟೆಲ್ಲ ಆದ ಮೇಲೆ ಶಾಸಕಾಂಗದ ಚುನಾಯಿತ ಪ್ರತಿನಿಽಗಳಿಗೂ ಹಿರಿಯರ ಸದನದಲ್ಲಿ ಪ್ರಾತಿನೀಧ್ಯ ಬೇಡವೇ? ಅದಿಲ್ಲದಿದ್ದರೆ ಸಂಪರ್ಕ ಸಾಧನೆಯೇ ಆಗದೇ ಉಳಿದೀತು ಎಂಬ ಕಾರಣಕ್ಕೆ ವಿಧಾನಸಭೆಯಿಂದಲೂ ಪ್ರತಿನಿಧಿಗಳನ್ನು ಚುನಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಪ್ರಸ್ತುತ ೧/೩ ರಷ್ಟು ಸ್ಥಳೀಯ
ಸಂಸ್ಥೆಗಳ ಪ್ರತಿನಿಧಿಗಳು, ೧/೩ ರಷ್ಟು ವಿಧಾನಸಭಾ ಸದಸ್ಯರಿಂದ ಆಯ್ಕೆಗೊಂಡ ಸದಸ್ಯರು, ೧/೧೨ ರಷ್ಟು ಪದವೀಧರ ಮತ್ತು ೧/೧೨ ರಷ್ಟು ಶಿಕ್ಷಕರ ಪ್ರತಿನಿಧಿಗಳು ಮತ್ತು ೧/೬ ರಷ್ಟು ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಪ್ರತಿನಿಧಿಗಳಿಗೆ ಮೇಲ್ಮನೆಯಲ್ಲಿ ಅವಕಾಶವಿದೆ.
ಇಂಥ ಹಿರಿಯರ ಸದನವೊಂದರ ಔಚಿತ್ಯ ಹಾಗೂ ಅಗತ್ಯ ಎರಡೂ ಪ್ರಶ್ನೆಗೊಳಪಡುತ್ತಿದೆ. ಸಂವಿಧಾನಿಕ ಮಹತ್ವದ ಮೇಲ್ಮನೆಯ ಬಗೆಗಿನ ಹೊಯ್ದಾಟಕ್ಕೆ ಭಾರತದ ವಿವಿಧ ರಾಜ್ಯಗಳಲ್ಲಿ ಬೃಹತ್ ಇತಿಹಾಸವೇ ಇದೆ. ೨೦೧೯ರಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ ಬಳಿಕ ಕರ್ನಾಟಕ ಸೇರಿ ದೇಶದ ಆರು ರಾಜ್ಯಗಳಲ್ಲಿ ಮಾತ್ರ ಮೇಲ್ಮನೆ ಅಸ್ತಿತ್ವದಲ್ಲಿದೆ. ಆಂಧ್ರ, ಕರ್ನಾಟಕ ಬಿಟ್ಟರೆ ಬಿಹಾರ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಪ್ರದೇಶ. ಮಧ್ಯಪ್ರದೇಶದಲ್ಲಿ ೧೯೫೬ರಲ್ಲಿ ಶಾಸಕಾಂಗ ಪರಿಷತ್ ಸ್ಥಾಪನೆ ಸಂಬಂಧ ವಿಧೇಯಕ ಅಂಗೀಕರಿಸಲಾಗಿದ್ದರೂ ಈವರೆಗೆ ಅಧಿಸೂಚನೆ ಹೊರಬಿದ್ದಿಲ್ಲ.
ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ಮೇಲ್ಮನೆ ಅಸ್ತಿತ್ವದ ಚರ್ಚೆ ಸಂಸತ್ತಿನಲ್ಲಿ ಉಳಿದಿದೆ. ಪಂಜಾಬ್ (೧೯೭೦), ತಮಿಳುನಾಡು (೧೯೮೬) ಮತ್ತು ಪಶ್ಚಿಮ ಬಂಗಾಳ (೧೯೬೯) ನಾನಾ ಕಾರಣಕ್ಕೆ ಅಲ್ಲಿನ ವಿಧಾನ ಪರಿಷತ್‌ಗಳನ್ನು ರದ್ದುಗೊಳಿಸಿವೆ. ಈ ಪೈಕಿ ತಮಿಳುನಾಡಿನ ವಿಚಾರದಲ್ಲಿ ಮೂರು ಬಾರಿ ಮೇಲ್ಮನೆಯ ಹಾವು ಏಣಿಯಾಟ ನಡೆದಿದೆ. ತೀರಾ ಇತ್ತೀಚಿಗಿನ ಆಂಧ್ರದಲ್ಲೇ ಅಲ್ಲಿನ ಎಪಿಎಲ್ ಸಿ(ವಿಧಾನ ಪರಿಷತ್)ಯನ್ನು ಮೊದಲಿಗೆ ಸ್ಥಾಪಿಸಿದ್ದು ೧೯೫೮ರಲ್ಲಿ. ಈಬಗ್ಗೆ ಅಲ್ಲಿನ ವಿಧಾನ ಸಭೆ- ಎಪಿಎಲಎ ಈ ಸಂಬಂಧ ನಿರ್ಣಯ ಕೈಗೊಂಡಿತ್ತು. ಆದರೆ ೧೯೮೨ರಲ್ಲಿ ಅಧಿಕಾರಕ್ಕೇರಿದ ಎನ್‌ಟಿಆರ್ ನೇತೃತ್ವದ ತೆಲುಗು ದೇಶಂ
ಇದನ್ನು ರದ್ದು(೧೯೮೫ರಲ್ಲಿ)ಗೊಳಿಸಿದ್ದರು.
ಪುನಃ ಸುಮಾರು ೩ ದಶಕಗಳ ಬಳಿಕ ಈಗಿನ ಮುಖ್ಯಮಂತ್ರಿ ಜಗನ್‌ರ ತಂದೆ ವೈ ಎಸ್. ರಾಜಶೇಖರ ರೆಡ್ಡಿಯವರೇ ಆಸಕ್ತಿವಹಿಸಿ ೨೦೦೭ರಲ್ಲಿ ವಿಧಾನ ಪರಿಷತ್ ಅನ್ನು ಪುನರ್ ಸ್ಥಾಪಿಸಿದ್ದರು. ಹಾಗೆ ನೋಡಿದರೆ ರಾಜ್ಯಗಳಲ್ಲಿ ಇಂಥದ್ದೊಂದು ಹಿರಿಯರ ಸದನ ಕಡ್ಡಾಯವೂ ಅಲ್ಲ, ಹಾಗೆಂದು ಸ್ವತಂತ್ರವಾಗಿ ಸ್ಥಾಪನೆ-ರದ್ದು ಪ್ರಕ್ರಿಯೆಗೆ ಅವಕಾಶವೂ ಇಲ್ಲ. ಸಂಸತ್ತಿನ ವಿಧೇಯಕ ೧೬೯ರ ವಿಭಾಗ (೧) ರ ಪ್ರಕಾರ, ರಾಜ್ಯದ ಶಾಸಕಾಂಗವು ತನ್ನ ಒಟ್ಟು ಸದಸ್ಯತ್ವದ ಮೂರನೇ ಎರಡರಷ್ಟು ಸದಸ್ಯರ ಬಲದೊಂದಿಗೆ ನಿರ್ಣಯ ಅಂಗೀಕರಿಸಬೇಕು.
ಆನಂತರ ಸಂಸತ್ ಸಿಇದಕ್ಕೆ ಅವಕಾಶ ನೀಡಬೇಕು. ಸಂಸತ್ತು ಸಹ ಈ ವಿಚಾರದಲ್ಲಿ ಸ್ವತಂತ್ರವಲ್ಲ. ರಾಜ್ಯದ ನಿರ್ಣಯದ ಮೇಲೆ ನಿರ್ಧಾರ ಕೈಗೊಳ್ಳಬೇಕು. ಸಂಸತ್ತಿನ ೧೬೮ನೇ ವಿಧಿಯ ಪ್ರಕಾರ ಎರಡು ಸದನಗಳನ್ನು ಹೊಂದಿರುವ ರಾಜ್ಯಗಳ ಹೆಸರುಗಳನ್ನು ಪಟ್ಟಿ ಮಾಡಲಾಗುತ್ತದೆ. ಹೀಗಾಗಿ ಪ್ರತಿ ಬಾರಿ (ರಚನೆ-ರದ್ದು) ಈ ವಿಧೇಯಕವನ್ನು ಬದಲಿಸಬೇಕಾದ ಅನಿವಾರ್ಯವಿದೆ. ಕಾರ್ಯ ಕಲಾದ ದೃಷ್ಟಿಯಿಂದ ರಾಜ್ಯಗಳ ವಿಧಾನ ಪರಿಷತ್ ಅಂದರೆ ಅದು ರಾಜ್ಯಸಭೆಗೆ ಸಮ. ವಿತ್ತೀಯ ವೀಧೇಯಕವೊಂದನ್ನು ಹೊರತುಪಡಿಸಿ ಉಳಿದೆಲ್ಲದಕ್ಕೂ ಉಭಯ ಸದನಗಳ ಅನುಮೋದನೆ ಅಗತ್ಯ. ಒಂದೊಮ್ಮೆ ವಿಧಾನ ಪರಿಷತ್ ತಿದ್ದುಪಡಿ ಗಳನ್ನು ಸೂಚಿಸಿತು, ಪೂರ್ಣ ತಿರಸ್ಕರಿಸಿತು ಅಥವಾ ಮೂರು ತಿಂಗಳವರೆಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ ಅಂದುಕೊಳ್ಳಿ.
ಆಗ ಪುನಃ ವಿಧಾನಸಭೆ ಆ ವಿಧೇಯಕವನ್ನು ಅಂಗೀಕರಿಸಿ ಕಳುಹಿಸಬೇಕಾಗುತ್ತದೆ. ಪುನಃ ಪರಿಷತ್ ಅದನ್ನು ತಿರಸ್ಕರಿಸಿದರೆ ಅಥವಾ ವಿಧಾನಸಭೆ ಸ್ವೀಕರಿಸಲು ಸಾಧ್ಯವಿಲ್ಲದ ತಿದ್ದುಪಡಿಗಳೊಂದಿಗೆ ಅಂಗೀಕರಿಸಿದರೆ ಅಥವಾ ತಿಂಗಳೊಳಗೆ ಅಂಗೀಕರಿಸದೇ ಹೋದರೆ, ಉಭಯ ಸದನಗಳೂ ಅಂಗೀಕರಿಸಿವೆ ಎಂದೇ ಪರಿ ಗಣಿತವಾಗುತ್ತದೆ. ಇಲ್ಲಿ ಪರಿಷತ್ತಿಗೆ ಸಮಯ ವಿಧಾನ ಸಭೆಗಿಲ್ಲ. ಅದೇ ಸಂಸತ್ತಿನ ವಿಚಾರದಲ್ಲಿ ಉಭಯ ಸದನಗಳಿಗೂ ಅನ್ವಯ. ಈ ವಿಷಯದಲ್ಲಿ ಅಲ್ಲಿ ರಾಜ್ಯಸಭೆಗೇ ಅಧಿಕಾರ ಹೆಚ್ಚು.
ರಾಜ್ಯದ ಮೇಲ್ಮನೆ ಅಭಿಪ್ರಯಾವನ್ನು ಸಂಸತ್ತು ಕಾನೂನಿನ ಮೂಲಕ ಬದಲಿಸಬಹುದು, ಆದರೆ ರಾಜ್ಯಸಭೆಯ ವಿಷಯದಲ್ಲಿ, ಸಂವಿಧಾನದಲ್ಲೇ ಅದಕ್ಕೆ ಅವಕಾಶ ಇದೆ. ರಾಜ್ಯಸಭೆಯಂತೆಯೆ, ವಿಧಾನ ಪರಿಷತ್ತಿನ ಸದಸ್ಯರು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗೆ ಮತದಾರರಲ್ಲ. ಸಂಸತ್ತಿನ ಯಾವುದೇ ಕಾರ್ಯ
ಕಲಾಪಗಳೀಗೂ ಸಂಬಂಧವಿಲ್ಲ. ಅವರ ವ್ಯಾಪ್ತಿ ರಾಜ್ಯಕ್ಕೆ ಸೀಮಿತ. ಇಂಥವೆಲ್ಲ ವಿಚಾರದಲ್ಲಿ ಸಂವಿಧಾನ ರಚನಾ ಸಭೆಯಲ್ಲಿಯೇ ಭಿನ್ನಾಭಿಪ್ರಾಯವಿದ್ದುದರಿಂದ
ಗೊಂದಲಗಳು ಮುಂದುವರಿದುಕೊಂಡೇ ಬಂದಿದೆ.
ಹೀಗಾಗಿ ಮತ್ತೆ ಮತ್ತೆ ರದ್ದು ಪ್ರಸ್ತಾಪವನ್ನು ರಾಜಕಾರಣಿಗಳು ಮಾಡುತ್ತಲೇ ಬರುತ್ತಿದ್ದಾರೆ. ತಮ್ಮ ಅಭಿಪ್ರಾಯಗಳಿಗೆ ಮೇಲಿನೆಲ್ಲವನ್ನೂ ಸಮರ್ಥನೆಯಾಗಿ
ನೀಡುತ್ತಿದ್ದಾರೆ. ಈಗಂತೂ ರಾಜಕೀಯ ಪುನರ್ವಸತಿ ಕೇಂದ್ರ, ರಾಜಕೀಯ ಪೈಪೋಟಿಯ ಕಾರಸ್ಥಾನ, ಹಣಬಲವಿದ್ದವರ, ಅಧಿಕಾರಸ್ಥರ ಕುಟುಂಬಸ್ಥರು, ಸಂಬಂಧಿಕರ ಆಸ್ತಿಯಾದಂತಾಗಿರುವ ದೃಷ್ಟಿಯಿಂದ ಮೇಲ್ಮನೆ ಅಪ್ರಸ್ತುತವೆನಿಸಿರುವುದು ಸತ್ಯ. ಈ ಬಾರಿ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿನ ರಾಜಕೀಯ ದೊಂಬರಾಟ, ಹಣದ ಮೇಲಾಟ ನೋಡಿದ ಬಳಿಕವಂತೂ ಮೇಲ್ಮನೆ ಗೌರವ ಹೀಗೆ ಮುಕ್ಕಾಗುವ ಬದಲು ರದ್ದಾಗುವುದೇ ಮೇಲೆನಿಸಿದೆ.
ಆದರೆ, ಹೀಗೆ ಕೈ ಚೆಲ್ಲುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾಯಕಾರಿ. ಆದರೆ ರಾಜಕೀಯ ಮತ್ತು ಆಡಳಿತ ಸುಧಾರಣೆಯ ಭಾಗವಾಗಿ, ಪ್ರೇರಕ ಶಕ್ತಿಯಾಗಿ,
ಮಾರ್ಗದರ್ಶಿ ಮಂಡಳಿಯಾಗಿ ಹಿರಿಯರ ಸದನದ ಅಗತ್ಯ ಇದ್ದೇ ಇದೆ. ಸ್ವರುಪ ಬದಲಾಗಿ ಇನ್ನಷ್ಟು ಸ್ವಾಯತ್ತೆ ಯೊಂದಿಗೆ ನಮ್ಮ ವಿಧಾನ ಪರಿಷತ್ತು ನೈಜ ಪ್ರಜಾಪ್ರತಿನಿಧಿ ಸಭೆಯಾಗಬೇಕಿದೆ. ಮಾಡಬೇಕಿದೆ. ದಿದನದಿಂದ ದಿನಕ್ಕೆ ಗಬ್ಬೆದ್ದು ಹೋಗುತ್ತಿರುವ ಮೇಲ್ಮನೆ ಪ್ರಾತಿನಿಧಿತ್ವದ ಪ್ರಕ್ರಿಯೆ, ಸ್ವರೂಪಗಳನ್ನು ಬದಲಿಸಿ, ಪ್ರಸ್ತುತ ಸನ್ನಿವೇಶಗಳಿಗನುಗುಣವಾಗಿ ಸರಿಪಡಿಸಿ ಹಿರಿಯರ ಸದನವನ್ನು ಉಳಿಸಿಕೊಳ್ಳುವ ಅಗತ್ಯ ಇದ್ದೇ ಇದೆ, ಅಂದೂ; ಇಂದೂ; ಮುಂದೂ.