Wednesday, 11th December 2024

ಪ್ರತಿಪಕ್ಷದ ಅನುಪಸ್ಥಿತಿಯಲ್ಲಿ ಎಚ್‌ಡಿಕೆನೇ ನಾಯಕ !

ಅಭಿಮತ

ಮರಿಲಿಂಗಗೌಡ ಮಾಲಿಪಾಟೀಲ್

ಸದ್ಯಕ್ಕಂತೂ ಅಧಿಕೃತ ಪ್ರತಿಪಕ್ಷದ ನಾಯಕರಲ್ಲದಿದ್ದರೂ ಸಾಂವಿಧಾನಿಕ ಮಾನ್ಯತೆ ಇಲ್ಲದೆ ಹೋದರೂ ಸಾರ್ವಜನಿಕರ ಹಿತ ಕಾಪಾಡಲು ಕುಮಾರಸ್ವಾಮಿಯವರೇ ಪ್ರತಿಪಕ್ಷದ ನಾಯಕರಂತೆ ಕಾಣಿಸುತ್ತಿದ್ದಾರೆ. ಅಧಿಕೃತ ಪ್ರತಿಪಕ್ಷವಾಗ ಬೇಕಿದ್ದ ಬಿಜೆಪಿ ತನ್ನ ಸೋಲಿನ ಪರಾಮರ್ಶೆಯಲ್ಲಿಯೇ ಮುಳುಗಿಹೋಗಿದೆ.

ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಿದ್ದರೆ ಪ್ರಬಲ ಪ್ರತಿಪಕ್ಷದ ಅಸ್ತಿತ್ವ ಅಗತ್ಯ ಎಂಬುದು ರಾಜಕೀಯ ಪ್ರಾಥಮಿಕ ಜ್ಞಾನ ಇರುವ ಎಲ್ಲರಿಗೂ ತಿಳಿದಿರುವ ಅಂಶ. ಅಡಳಿತ ಪಕ್ಷ, ಪ್ರತಿಪಕ್ಷ ಇತ್ಯಾದಿ ಸ್ಥಾನಗಳು ತೀಮಾರ್ನವಾಗುವುದು ಜನತಾ ನ್ಯಾಯಾಲಯದಲ್ಲಿ. ಅಲ್ಲಿ ಬಯಸಿದ್ದು ಒಂದು, ದಕ್ಕಿದ್ದು ಇನ್ನೊಂದು ಎಂಬ ಸ್ಥಿತಿ ಬಂದರೂ ದೊರೆತ ಸ್ಥಾನವನ್ನೂ ಸಮರ್ಥವಾಗಿ ನಿಭಾಯಿಸಲೇಬೇಕು.

ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸ್ಥಾನ ಪಡೆಯುವಲ್ಲಿ ಬಿಜೆಪಿ ವಿಫಲವಾಗಿ ಜನರಿಂದ ತಿರಸ್ಕೃತಗೊಂಡಿದೆ. ಅಧಿಕಾರಕ್ಕೆ ಬರುವ ಬಯಕೆಯಲ್ಲಿದ್ದ ಬಿಜೆಪಿ, ತನಗೆ ಬಂದ ಸ್ಥಿತಿಯಿಂದ ಆಘಾತಕ್ಕೊಳಗಾದಂತಿದೆ. ಹಾಗಾಗಿ ಪ್ರತಿಪಕ್ಷ ತಾನು ಎನ್ನುವ ವಾಸ್ತವಕ್ಕೆ ಒಗ್ಗಿಕೊಳ್ಳಬೇಕಿದ್ದರೆ ಅದಕ್ಕೆ ಸಮಯ ಬೇಕೇನೋ ಎಂಬ ಅನುಮಾನ ಜನರಲ್ಲಿ ಹುಟ್ಟಿ ಕೊಳ್ಳುವಂತಿದೆ. ಪ್ರತಿಪಕ್ಷದ ನಾಯಕನಾಗಿ ಯಾರನ್ನು ಆಯ್ಕೆಮಾಡಬೇಕು ಎನ್ನುವ ವಿಷಯದಲ್ಲಿಯೂ ಆ ಪಕ್ಷ ಗೊಂದಲದಲ್ಲಿಯೇ ಇದ್ದಂತಿದೆ. ಹಾಗಾಗಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಎದುರು ಪಡೆದ ಸ್ಥಾನಗಳ ಲೆಕ್ಕಾಚಾರದಲ್ಲಿ ಪ್ರತಿಪಕ್ಷವಾಗಿದ್ದ ಬಿಜೆಪಿ ಮಂಕಾಗಿ ಕಾಣಿಸುತ್ತಿದೆ.

ಈ ಹಂತದಲ್ಲಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ನಿಜವಾದ ಪ್ರತಿಪಕ್ಷದ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಪಕ್ಷ ಅಧಿಕಾರಕ್ಕೆ ಬರದೇ ಹೋದರೆ ಪಕ್ಷವನ್ನೇ ವಿಸರ್ಜಿಸುವುದಾಗಿ ಚುನಾವಣೆಗೂ ಮೊದಲೇ ಕುಮಾರಸ್ವಾಮಿ ಘೋಷಿಸಿದ್ದರು. ಆದರೆ, ಅಧಿಕಾರಕ್ಕೆ ಬರುವ ಆಸೆ ಯಿಂದ ಮತದಾರರಿಗೆ ಕೊಂಚ ಭಾವನಾತ್ಮಕ ಒತ್ತಡ ಹಾಕುವ ಉದ್ದೇಶದಿಂದ ಆ  ತನ್ನಾಡಿರ ಬಹುದು ಅಷ್ಟೇ ಹೊರತು ಕುಮಾರಸ್ವಾಮಿ ಹೇಳಿದಂತೆ ಪಕ್ಷವನ್ನು ವಿಸರ್ಜಿಸಬೇಕೆಂದು ಬಯಸುವುದು ಅಪೇಕ್ಷಣೀಯವೇನೂ ಅಲ್ಲ.

ಯಾಕೆಂದರೆ ಕುಮಾರಸ್ವಾಮಿಯವರೇ ಸದ್ಯಕ್ಕೆ ನೈಜ ಪ್ರತಿಪಕ್ಷದ ನಾಯಕಂತೆ ಕಾಣಿಸುತ್ತಿದ್ದಾರೆ. ಬಿಜೆಪಿ ಮಾಡಬೇಕಿರುವ ಕೆಲಸಗಳನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಕಾಣಬಹುದು. ‘ಇತ್ತೀಚೆಗೆ ಅಧಿಕಾರಿ ಯೊಬ್ಬರು ಸಂಬಂಧಪಟ್ಟ ಸಚಿವರಿಗೆ ಅರಿವಿಲ್ಲದೇ ಟ್ರಾನ್ಸ್ ಫರ್ ಆಗ್ತಾರೆ. ಇದನ್ನು ತಿಳಿದ ಸಚಿವರು ವಿದೇಶದಿಂದಲೇ ಫೋನ್ ಮಾಡಿ ಆ ಅಧಿಕಾರಿಗೆ ಚಾರ್ಜ್ ತಗೊಳ್ಳಬೇಡ ಎಂದು ಹೇಳುತ್ತಾರೆ’ ಸರಕಾರದ ಮಟ್ಟದಲ್ಲಿ ನಡೆದ ಈ ಘಟನೆ ತಿಳಿದದ್ದು ಕುಮಾರ ಸ್ವಾಮಿಗೆ.

Read E-Paper click here

ಕುಮಾರಸ್ವಾಮಿ ಇಂಥ ಕೆಲಸಗಳಲ್ಲಿ ಪಳಗಿದವರು ಎನ್ನುವುದು ಕನ್ನಡನಾಡಿನ ಸಮಸ್ತ ಜನತೆಗೂ ಗೊತ್ತು. ಒಂದೇ ಹುದ್ದೆಗೆ
ನಾಲ್ಕು ಜನರಿಗೆ ಮುಖ್ಯಮಂತ್ರಿ ಪತ್ರ ಕೊಟ್ಟಿದ್ದರು ಎಂದೂ ಇತ್ತೀಚೆಗೆ ಎಚ್‌ಡಿಕೆ ಆರೋಪಿಸಿದ್ದರು. ವಾಸ್ತವವಾಗಿ ಇದೆಲ್ಲ
ತುಂಬ ರಹಸ್ಯವಾಗಿ ನಡೆಯುವಂತಹ ಕೆಲಸಗಳು. ಆದರೆ ಕುಮಾರಸ್ವಾಮಿಯವರಿಗೆ ಅದೆಲ್ಲ ಹೇಗೆ ಗೊತ್ತಾಗುತ್ತದೆ? ಅದೇ ಕುಮಾರಸ್ವಾಮಿಯವರ ವೈಶಿಷ್ಟ್ಯ. ಈ ಮೊದಲು ಬಿಜೆಪಿ ಆಡಳಿತದಲ್ಲಿzಗ ಕುಮಾರಸ್ವಾಮಿಯವರು ಹಲವು ಸಚಿವರ ಮೇಲೆ ಆರೋಪಗಳ ಸರಮಾಲೆಯನ್ನೇ ಮಾಡಿದ್ದರು. ಆದರೆ ಅದೆಲ್ಲ ಊಹಾಪೋಹಗಳ ಆಧಾರದಲ್ಲಿ ನಡೆದಿರಲಿಲ್ಲ. ಪ್ರತಿಯೊಂದು ಆರೋಪಕ್ಕೂ ಕುಮಾರಸ್ವಾಮಿ ಯವರ ಬಳಿ ದಾಖಲೆಗಳಿದ್ದವು.

ಸರಕಾರದ ಮಟ್ಟದಲ್ಲಿ ಸಣ್ಣ ಕದಲಿಕೆ ನಡೆದರೂ ಅದು ಕುಮಾರಸ್ವಾಮಿಯವರಿಗೆ ತಿಳಿಯುತ್ತಿತ್ತು. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಅವರು ಹೆಕ್ಕಿ ತೆಗೆಯುತ್ತಿದ್ದರು. ಯಾರಿಗೂ ಸಿಗದಂಥ ದಾಖಲೆಗಳು ಎಚ್‌ಡಿಕೆಗೆ ಮಾತ್ರ ಹೇಗೆ ಸಿಗುತ್ತಿತ್ತು
ಎಂಬುದು ಇಂದಿಗೂ ಚಿದಂಬರ ರಹಸ್ಯ. ಬಿಜೆಪಿ ಆಡಳಿತದಲ್ಲಿದ್ದಾಗ ಕಾಂಗ್ರೆಸ್, ಶೇ೪೦ ಸರಕಾರ ಎಂದು ಆರೋಪಿಸಿತ್ತು. ಮಾತ್ರವಲ್ಲ, ಇದರ ಮೂಲಕ ಬಿಜೆಪಿ ಸರಕಾರವನ್ನು ಇನ್ನಿಲ್ಲದಂತೆ ಕಾಡಿತ್ತು. ಬಿಜೆಪಿ ಈ ಆರೋಪವನ್ನು ಸಮರ್ಥವಾಗಿ ಕೌಂಟರ್ ಮಾಡುವಲ್ಲಿ ವಿಫಲವಾಗಿತ್ತು ಮತ್ತು ಅಂತಿಮವಾಗಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವಲ್ಲಿ ಅದು ಅತ್ಯಂತ ಪರಿಣಾಮ ಕಾರಿಯಾಗಿತ್ತು.

ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಿಜೆಪಿ ಸುಮ್ಮನಾಗಿದೆ. ಆದರೆ ಕುಮಾರಸ್ವಾಮಿಯವರು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಕ್ಕೆ ಇದು ಶೇ.೪೫ ಸರಕಾರ ಎಂದು. ಬಿಜೆಪಿ ಆಡಳಿತದಲ್ಲಿದ್ದ ಅವಧಿಯ ಕಾಮಗಾರಿಗಳಿಗೆ ಎಲ್ಒಸಿ ನೀಡಲು ಕಾಂಗ್ರೆಸ್ ಸರಕಾರವೂ ಪರ್ಸೆಂಟೇಜ್ ನಿಗದಿಪಡಿಸಿದೆ. ಶೇ.೪೦ರ ಜತೆಗೆ ಇನ್ನೂ ಶೇ.೫ ಸೇರಿಸಿ ಶೇ.೪೫ ಗುತ್ತಿಗೆದಾರರಿಂದ ವಸೂಲಿ ಮಾಡು ತ್ತಿರುವ ಕಾರಣ ಸದ್ಯಕ್ಕೆ ಇದು ಶೇ.೪೫ ಸರಕಾರ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇದು ನಿಜವೇ ಆಗಿದ್ದರೆ ಈ ಆರೋಪವನ್ನು ಯಾರು ಮಾಡಬೇಕಿತ್ತು, ಬಿಜೆಪಿ ತಾನೇ? ತನ್ನನ್ನು ಶೇ.೪೦ ಸರಕಾರ ಎಂದು ಆರೋಪಿಸಿದ ಕಾಂಗ್ರೆಸ್ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶ ದೊರೆತಾಗ ಬಿಜೆಪಿ ಯಾಕೆ ಸುಮ್ಮನಿದೆ? ಕುಮಾರಸ್ವಾಮಿ ಯವರು ಕಾಂಗ್ರೆಸ್‌ನ ಆಡಳಿತ ಶೈಲಿಯ ಬಗ್ಗೆ ಬಾಂಬ್‌ಗಳನ್ನೇ ಸಿಡಿಸಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಕಾಮಗಾರಿಗಳಿಗೆ  ಸಂಬಂಧಿಸಿದಂತೆ ೬೦೦ ಕೋಟಿ ರು.ಗಳಿಗೂ ಅಧಿಕ ಮೊತ್ತದ ಎಲಒಸಿ ಗುತ್ತಿಗೆದಾರರಿಗೆ ಬಿಡುಗಡೆಯಾಗಿತ್ತು. ಆದರೆ, ಈ ಹಣ
ಬಿಡುಗಡೆಯಾಗದಂತೆ ಕಾಂಗ್ರೆಸ್ ಸಂಸದರೊಬ್ಬರು ತಡೆಹಿಡಿದಿದ್ದರು. ಯಾಕೆ ಎನ್ನುವ ಪ್ರಶ್ನೆಗೆ ಸಿಗುವ ಉತ್ತರವೇ ಪರ್ಸೆಂಟೇಜ್ ವಸೂಲಿ ದಂಧೆ ಎಂದಿರುವ ಕುಮಾರಸ್ವಾಮಿ ಈ ಬಗ್ಗೆ ಎಲ್ಲ ವಿವರಗಳೂ ನಮ್ಮ ಬಳಿ ಇವೆ ಎಂದಿದ್ದಾರೆ.

ಲೆಕ್ಕ ಹಾಕಿದರೆ ಕುಮಾರಸ್ವಾಮಿ ಅಧಿಕಾರದಲ್ಲಿದ್ದದ್ದು ೨೦ ತಿಂಗಳು ಮಾತ್ರ. ಆದರೆ ಇದಕ್ಕೆ ಹೋಲಿಸಿದರೆ ಬಿಜೆಪಿ ಮತ್ತು
ಕಾಂಗ್ರೆಸ್, ಹೆಚ್ಚಿನ ಸಮಯ ಅಧಿಕಾರದಲ್ಲಿದ್ದವು. ಆದರೆ ಅವರಾರಿಗೂ ಸಿದ್ಧಿಸದ ಸಾಮರ್ಥ್ಯವೊಂದು ಕುಮಾರಸ್ವಾಮಿಗೆ ಸಿದ್ಧಿಸಿದೆ. ಅದೆಂದರೆ ರಹಸ್ಯ ದಾಖಲೆಗಳನ್ನು ಪಡೆಯುವುದು. ಈ ವಿಷಯದಲ್ಲಿ ಸಚಿವಾಲಯದ ಆಯಕಟ್ಟಿನ ಜಾಗಗಳಲ್ಲಿ ಕುಮಾರಸ್ವಾಮಿಯ ಜನರು ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಾಸ್ತವ ಏನು ಎನ್ನುವುದನ್ನು ಅವರೇ ಹೇಳಬೇಕು.

ಸದ್ಯಕ್ಕಂತೂ ಅಧಿಕೃತ ಪ್ರತಿಪಕ್ಷದ ನಾಯಕರಲ್ಲದಿದ್ದರೂ ಸಾಂವಿಧಾನಿಕ ಮಾನ್ಯತೆ ಇಲ್ಲದೆ ಹೋದರೂ ಸಾರ್ವಜನಿಕರ ಹಿತ ಕಾಪಾಡಲು ಕುಮಾರಸ್ವಾಮಿಯವರೇ ಪ್ರತಿಪಕ್ಷದ ನಾಯಕರಂತೆ ಕಾಣಿಸುತ್ತಿದ್ದಾರೆ. ಅಧಿಕೃತ ಪ್ರತಿಪಕ್ಷವಾಗ ಬೇಕಿದ್ದ ಬಿಜೆಪಿ ತನ್ನ ಸೋಲಿನ ಪರಾಮರ್ಶೆಯಲ್ಲಿಯೇ ಮುಳುಗಿಹೋಗಿದೆ. ಆ ಬಗ್ಗೆ ಹೊರಬರುತ್ತಿರುವ ಸತ್ಯಗಳು ಬಿಜೆಪಿಗೆ ಇನ್ನಷ್ಟು ಶಾಕನ್ನೇ ಕೊಡುತ್ತಿದೆ. ಆದರೆ, ಚುನಾವಣಾ ಫಲಿತಾಂಶ ನೀಡಿದ ಶಾಕ್‌ನಿಂದ ಮೊದಲು ಹೊರಬಂದವರೇ ಕುಮಾರಸ್ವಾಮಿ ಎಂಬುದರಲ್ಲಿ
ಯಾವುದೇ ಅನುಮಾನವಿಲ್ಲ.

ಕಾಂಗ್ರೆಸ್ ಸರಕಾರ ಬಿಜೆಪಿಗಿಂತ ಕುಮಾರ ಸ್ವಾಮಿಯವರು ಬಿಡುಗಡೆ ಮಾಡುವ ದಾಖಲೆಗಳ ಬಗ್ಗೆ, ಆರೋಪಗಳ ಬಗ್ಗೆ ಗುರಾಣಿ ಹಿಡಿದು ಎದುರಿಸಬೇಕಾಗಿದೆ. ಹಾಗಾಗಿ ಕುಮಾರಸ್ವಾಮಿ ಜನರ ಪಾಲಿನ ವಿಪಕ್ಷ ನಾಯಕ ಎನಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿರುವುದು ಮಾತ್ರ ಸುಳ್ಳಲ್ಲ!!!