Saturday, 14th December 2024

ವಿಶ್ವ ಮನ್ನಣೆಗೆ ಪಾತ್ರನಾದ ಹಳ್ಳಿಯ ವೈದ್ಯ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಸೋಡಿಯಂ ನೈಟ್ರೋಪ್ರುಸೈಡ್ ತುಂಬಾ ಅಪಾಯಕಾರಿ ಔಷಧ. ಐಸಿಯುಗಳಲ್ಲಿ ಮಾನಿಟರ್ ಮಾಡಿ, ಚಿಕಿತ್ಸೆ ಮಾಡಿದರೆ ಇದು ಹೆಚ್ಚು ಸುರಕ್ಷಿತ. ಹಾಗಾಗಿ
ಬೇರೆ ಇನ್ನೂ ಅಪಾಯಕಾರಿ ಅಲ್ಲದ ಔಷಧವನ್ನು ಶೋಧಿಸಬೇಕು ಎಂದು ಡಾ.ಬಾವಸ್ಕರ್ ಮನಸ್ಸಿಗೆ ಬಂದಿತು.

ಒಂದು ಸಣ್ಣ ಹಳ್ಳಿಯಿಂದ ಬಂದ ಒಬ್ಬ ಸಾಮಾನ್ಯ ವ್ಯಕ್ತಿ ವೈದ್ಯಕೀಯ ರಂಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಅಪರೂಪದ ದೊಡ್ಡ ಸಾಧನೆ ಮಾಡಿ ಹೆಸರು ಗಳಿಸುತ್ತಾರೆ ಎಂದರೆ ಅದು ದೊಡ್ಡ ವಿಷಯವೇ ಸರಿ.

ಹೌದು, ಇವರು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕಂಡು ಬರುವ ವಿಷಜಂತು ಚೇಳು ಕಡಿತಕ್ಕೆ ತಮ್ಮದೇ ಒಂದು ಔಷಧ ಕಂಡು ಹಿಡಿದು ಅದನ್ನು ಜಗತ್ತಿನಾದ್ಯಂತ ತಜ್ಞ ವೈದ್ಯರು ಒಪ್ಪಿ ಉಪಯೋಗಿಸತೊಡಗಿದ್ದಾರೆ ಎಂದರೆ ಇದು ಅತೀ ವಿಶೇಷವೇ ಸರಿ. ಇವರು ಡಾ.ಹಿಮ್ಮತರಾವ್ ಬಾವಸ್ಕರ್. ಮಹಾ ರಾಷ್ಟ್ರದ ಮುಂಬೈನಿಂದ 175 ಕಿ.ಮೀ. ದಕ್ಷಿಣಕ್ಕಿರುವ ಕೊಂಕಣ ಭಾಗದ ಏನೂ ಬೆಳವಣಿಗೆ ಕಾಣದ ಮಹದ್ ಎಂಬ ಹಳ್ಳಿಯವರು. ಇವರ ಹೆಸರು ಈಗ ಮುನ್ನೆಲೆಗೆ ಬರಲು ಕಾರಣ ಈ ಬಾರಿ ಅವರಿಗೆ ಉಳಿದ ೯ ವೈದ್ಯರ ಜೊತೆಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಕೊಡಲಾಯಿತು.

ಬಡ ಕುಟುಂಬದಿಂದ ಬಂದ ಡಾ.ಹಿಮ್ಮತರಾವ್ ಅವರು ನಾಗಪುರ ಸರಕಾರಿ ವೈದ್ಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ನಂತರ ರಾಯಗಡ ಜಿಲ್ಲೆಯ ಪಿಎಚ್‌ಸಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಅಲ್ಲಿ ಬಹಳಷ್ಟು ಜನ ಚೇಳು ಕಡಿತದ ರೋಗಿಗಳು ಬರುತ್ತಿದ್ದರು. ಅವರಿಗೆ ಲಭ್ಯವಿದ್ದ ಸೂಕ್ತ ಚಿಕಿತ್ಸೆ ಕೊಟ್ಟಾಗಲೂ ಹಲವು ರೋಗಿಗಳು ಸಾವನ್ನಪ್ಪುತ್ತಿದ್ದರು. ಅದರ ಬಗ್ಗೆ ವಿವರವಾದ ವಿವರಗಳನ್ನು ಕಲೆ ಹಾಕುತ್ತ, ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ, ಸೂಕ್ಷ್ಮವಾಗಿ ಬದಲಾವಣೆ ಗಳನ್ನು ದಾಖಲಿಸತೊಡಗಿದರು. ಅವರಲ್ಲಿದ್ದ ಉಪಕರಣಗಳೆಂದರೆ ಸ್ಟೆಥೋಸ್ಕೋಪ್ ಮತ್ತು ಬಿಪಿ ತಪಾಸಣೆಯ ಉಪಕರಣ-ಇವೆರಡೇ ಇದ್ದದ್ದು. ಆದರೆ ಸೂಕ್ಷ್ಮ ವಾದ ಗಮನಿಸುವಿಕೆ, ಅದರ ಹಿಂದೆ ಸಾಕಷ್ಟು ಓದು, ಜ್ಞಾನ, ವಿವರಗಳ ದಾಖಲೀ ಕರಣ-ಇವೆಲ್ಲವೂ ಅವರಿಗೆ ವರವಾಯಿತು.

ರೋಗಿಯ ಪಕ್ಕದಲ್ಲೇ ಕುಳಿತು ಮಾನಿಟರ್ ಮಾಡುತ್ತ ಹಲವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ. ಚೇಳು ಕಡಿತದ ಸಾಮಾನ್ಯ ರೋಗ ಲಕ್ಷಣಗಳೆಂದರೆ-ಬಹಳವಾಗಿ ಬೆವರುವುದು, ವಾಂತಿ, ಕೈ-ಕಾಲುಗಳು ತಣ್ಣಗಾಗಿ ಬಿಡುವುದು, ರಕ್ತದೊತ್ತಡ ಹೆಚ್ಚಾಗುವುದು, ಒಂದು ರೀತಿಯ ಸಣ್ಣ ಪ್ರಮಾಣದ ನೋವು, ಪುರುಷ ಜನನಾಂಗದ ನಿಮಿರುವಿಕೆ ನಂತರ ಮುಂದುವರಿದು ಬಾಯಿಯಲ್ಲಿ ಜೊಲ್ಲು ಸುರಿಯುವಿಕೆ, ಹೃದಯದ ಅನಿಯಮಿತ ಬಡಿದುಕೊಳ್ಳುವಿಕೆ, ಒಮ್ಮೆಲೇ ರಕ್ತದೊತ್ತಡ ತೀವ್ರವಾಗಿ ಕಡಿಮೆಯಾಗುವುದು, ಬಾಯಿಯಿಂದ ನೊರೆಗೂಡಿದ ವಾಂತಿಯಾಗುವುದು, ನಂತರ ಹೊರಭಾಗದ ರಕ್ತ ಚಲನೆ ಸಂಪೂರ್ಣ ಸ್ಥಗಿತಗೊಳ್ಳುವುದು. ಹೀಗಾಗಿ ಡಾ.ಬಾವಸ್ಕರ್ ಅವರು ಇಂತಹ ವ್ಯಕ್ತಿಗಳ ಮರಣಕ್ಕೆ ಕಾರಣ ಎಂದರೆ ಶ್ವಾಸಕೋಶದಲ್ಲಿನ ದ್ರವದಿಂದ ಊತ ಎಂದು ಕಂಡುಕೊಂಡರು. ಆಗ ಅವರು
ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳಾದ ಅಟ್ರೋಪಿನ್, ಬೀಟಾ ಬ್ಲಾಕರ್ಸ್, ಸಿಪಿಎಂ, ಅಮೈನೋಫಿಲ್ಲಿನ್ ಮುಂತಾದ ಔಷಧಗಳನ್ನು ಪ್ರಯೋಗಿಸಿದಾಗ ಅವ್ಯಾವುವೂ ನಿರೀಕ್ಷಿತ ಪರಿಣಾಮ ಬೀರಲಿಲ್ಲ.

ಅವರು ತಮ್ಮ ಎಲ್ಲ ರೋಗಿಗಳ ರೋಗಲಕ್ಷಣಗಳನ್ನು ಹಾಫ್ ಕಿನ್ ಸಂಸ್ಥೆಗೆ ಕಳುಹಿಸಿಕೊಟ್ಟರು. ಅಲ್ಲಿ ಗಿನಿ ಪಿಗ್‌ಗಳ ಮೇಲೆ ಮತ್ತಷ್ಟು ಪರೀಕ್ಷೆಗಳನ್ನು ನಡೆಸ ಲಾಯಿತು. ಈ ರೋಗಿಗಳ ವಿವರಗಳನ್ನು ಪ್ರತಿಷ್ಟಿತ ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್ ಗೆ ಕಳುಹಿಸಿಕೊಟ್ಟರು (1978). ಅವರು ಇವರ ಪತ್ರವನ್ನು ಸಂಪಾದಕರಿಗೆ ಪತ್ರ ವಿಭಾಗದಲ್ಲಿ ಪ್ರಕಟಿಸಿದರು. ಈ ರೀತಿಯ ಸಂಶೋಧನೆ ನಡೆಸಲು ಎಂಬಿಬಿಎಸ್ ಪದವಿ ಸಾಕಾಗುವುದಿಲ್ಲ ಎಂದು ಮನಗಂಡು ಪುಣೆ ಬಿ.ಜೆ.ಮೆಡಿಕಲ್ ಕಾಲೇಜಿಗೆ ಮೆಡಿಸಿನ್‌ನಲ್ಲಿ ಎಂಡಿಗೆ ಸೇರಿಕೊಂಡರು. ಅಲ್ಲಿ ಮುಂದುವರಿದ ತಾಂತ್ರಿಕತೆ ಮತ್ತು ಇಂಟೆನ್ಸಿವ್ ಕೇರ್ ವಿಭಾಗದಲ್ಲಿ ವಿಶೇಷ ಪರಿಣಿತಿ ಪಡೆದು ಕೊಂಡರು. ಈ ಹೊಸದಾದ ಜ್ಞಾನ ಭಂಡಾರವನ್ನು ಸಮ್ಮಿಳನಗೊಳಿಸಿ, ಚೇಳು ಕಡಿತದ 51 ರೋಗಿಗಳ ವಿವರಗಳನ್ನು ದಾಖಲಿಸಿ ಭಾರತೀಯ ಜರ್ನಲ್ ಒಂದಕ್ಕೆ ಪ್ರಕಟಣೆಗಾಗಿ ಕಳಿಸಿಕೊಟ್ಟರು.

ಇಂಗ್ಲಿಷ್ ಬರವಣಿಗೆ ಸರಿಯಾಗಿಲ್ಲ ಎಂಬ ಷರಾದೊಂದಿಗೆ ಹಿಂದಿರುಗಿ ಬಂದಿತು. ಅದೇ ಸಂಶೋಧನೆ ಪೇಪರ್ ಅನ್ನು ಲ್ಯಾನ್ಸೆಟ್ ಜರ್ನಲ್‌ಗೆ ಕಳುಹಿಸಿಕೊಟ್ಟರು.
ಪ್ರಕಟಣೆಗೆ ಸ್ವೀಕರಿಸಿದ್ದೇವೆ ಎಂದು ಒಂದು ವಾರದಲ್ಲಿ ಪತ್ರ ಬಂದಿತು. ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ 1982 ರಲ್ಲಿ ಪ್ರಕಟವಾಯಿತು. ಚೇಳು ಕಡಿತದಿಂದ ಉಂಟಾಗುವ ಹೃದಯ ವೈಫಲ್ಯವು ರಿಫ್ರಾಕ್ಟರಿ ಹೃದಯ ವೈಫಲ್ಯದ ರೀತಿಯದ್ದೇ ಎಂದು ಮನಗಂಡು ಇದಕ್ಕೆ ಸೋಡಿಯಂ ನೈಟ್ರೋಪ್ರುಸೈಡ್ ಔಷಧ ಸೂಕ್ತ
ಎಂದು ಹಲವು ರೋಗಿಗಳಲ್ಲಿ ಪ್ರಯೋಗಿಸಿ ಸಫಲರಾದರು.

ಅವರು ಎಂಡಿ ಪೂರೈಸಿ ಡಾ.ಪ್ರಮೋದಿನಿ ಅವರನ್ನು ವಿವಾಹವಾದರು. ನಂತರ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಪ್ರಾಕ್ಟೀಸ್ ಆರಂಭಿಸಿದರು. ಪರಿಸ್ಥಿತಿ ಮೊದಲಿಗಿಂತ ಭಿನ್ನವಾಗೇನೂ ಇರಲಿಲ್ಲ. ಆಗ 8 ವರ್ಷದ ಮಗು ಚೇಳು ಕಡಿತದಿಂದ ಆಸ್ಪತ್ರೆಗೆ ಬಂದಿತು. ಆ ಮಗು ತೀವ್ರವಾದ ಪಲ್ಮನರಿ ಎಡಿಮಾ ಹಂತಕ್ಕೆ
ತಲುಪಿದುದರಿಂದ ಮಗು ಉಳಿಯುವ ಸಾಧ್ಯತೆ ತುಂಬಾ ಕಡಿಮೆಯಿತ್ತು. ಆಗ ಅವರು ಮಗುವಿನ ತಂದೆಯಲ್ಲಿ ತಾವು ಸೋಡಿಯಂ ನೈಟ್ರೋಪ್ರುಸೈಡ್ ಎಂಬ ಅಪಾಯಕಾರಿ ಔಷಧವನ್ನು ಪ್ರಯೋಗಿಸಿ ಮಗು ಉಳಿಸಲು ಪ್ರಯತ್ನಿಸುತ್ತೇನೆ ಎಂದರು. ಆ ಔಷಧ ಮಗುವಿನ ಹೃದಯದ ಮೇಲೆ ಬೀಳುವ ಅನವಶ್ಯಕವಾದ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಅವರ ಅನಿಸಿಕೆಯಾಗಿತ್ತು. ಆ 8 ವರ್ಷದ ಮಗುವಿಗೆ ನೈಟ್ರೋಪ್ರುಸೈಡ್ ಔಷಧವನ್ನು ನಿಧಾನವಾಗಿ ಇಂಜೆಕ್ಷನ್ ಡ್ರಿಪ್
ಮೂಲಕ ಹನಿ ಹನಿಯಾಗಿ ಕೊಡಲಾರಂಭಿಸಿದರು.

4 ಗಂಟೆಗಳ ನಂತರ ಹುಡುಗನು ಸುಧಾರಿಸತೊಡಗಿದ. ಬಿಪಿ ಏರಲಾರಂಭಿಸಿತು. ಪಲ್ಮನರಿ ಎಡಿಮಾ ಕಾಣೆಯಾಯಿತು. 24 ಗಂಟೆಗಳ ನಂತರ ಈ ಹುಡುಗ ಉಳಿದ ಎಂದು ಸಂತೋಷದಲ್ಲಿ ಡಾ.ಬಾವಸ್ಕರ್ ಘೋಷಿಸಿದರು. ಹೀಗೆ ಇವರು ಮಗುವಿಗೆ ಚಿಕಿತ್ಸೆ ಕೊಡುತ್ತಿರುವ ಸಂದರ್ಭದಲ್ಲಿಯೇ ತಂದೆಯ ಮರಣ ತಿಳಿಸುವ
ಟೆಲಿಗ್ರಾಂ ಬಂದಿತು. ಆಗ ದ್ವಂದ್ವ ಮನಸ್ಸಿನಲ್ಲಿದ್ದ ಇವರು ಕರ್ತವ್ಯ ಮುಖ್ಯವೆಂದು ಮಗುವಿನ ಚಿಕಿತ್ಸೆ ಮುಂದುವರಿಸಿದರೇ ವಿನಾ ತಂದೆಯ ಶವಸಂಸ್ಕಾರಕ್ಕೆ ತೆರಳಲಿಲ್ಲ.

ಸೋಡಿಯಂ ನೈಟ್ರೋಪ್ರುಸೈಡ್ ತುಂಬಾ ಅಪಾಯಕಾರಿ ಔಷಧ (ಇದು ಒಮ್ಮೆಲೇ ಬಿಪಿ ಕಡಿಮೆ ಮಾಡುವ ಸಾಧ್ಯತೆ ತುಂಬಾ ಇದೆ). ಐಸಿಯುಗಳಲ್ಲಿ ಮಾನಿಟರ್ ಮಾಡಿ, ಚಿಕಿತ್ಸೆ ಮಾಡಿದರೆ ಇದು ಹೆಚ್ಚು ಸುರಕ್ಷಿತ. ಹಾಗಾಗಿ ಬೇರೆ ಇನ್ನೂ ಅಪಾಯಕಾರಿ ಅಲ್ಲದ ಔಷಧವನ್ನು ಶೋಧಿಸಬೇಕು ಎಂದು ಡಾ.ಬಾವಸ್ಕರ್ ಮನಸ್ಸಿಗೆ ಬಂದಿತು. ಲೈಬ್ರರಿಯಲ್ಲಿ ಕುಳಿತು ಹಲವು ಜರ್ನಲ್ ಗಳಲ್ಲಿ ಶೋಧಕ್ಕೆ ತೊಡಗಿದರು. ಆಗ ಅವರ ಗಮನಕ್ಕೆ ಬಂದದ್ದು ರಿಫ್ರಾಕ್ಟರಿ  ಹೃದಯ ವೈಫಲ್ಯದಲ್ಲಿ ಉಪಯೋಗಿ ಸುತ್ತಿದ್ದ ಔಷಧ ಪ್ರಜೋಸಿನ್. ಫಿಯೋಕ್ರೋಮಾಸೈಟೋಮಾ ಕಾಯಿಲೆಯಲ್ಲಿ ರಕ್ತದಲ್ಲಿ ಕೆಟಕೋಲಮಿನ್ ಹೆಚ್ಚಳದಿಂದ ಉಂಟಾಗುವ ಬಿಪಿ ಇಳಿಸಲು ಇದನ್ನು ಉಪಯೋಗಿಸುತ್ತಾರೆ. ಚೇಳು ಕಡಿತದಲ್ಲೂ ವಿಷವು ಮಾನವ ಅಡ್ರಿನಲ್ ಗ್ರಂಥಿಗಳ ಮೇಲೆ ಪ್ರಭಾವ ಬೀರಿ ಕೆಟಾಕೋಲಮಿನ್ ಗಳು ಅಧಿಕ ಪ್ರಮಾಣದಲ್ಲಿ ರಕ್ತದಲ್ಲಿ ಕಂಡು ಬರುತ್ತವೆ.

ಡಾ ಬಾವಸ್ಕರ್ ರು. 1986ರಲ್ಲಿ ಈ ಔಷಧವನ್ನು ಉಪಯೋಗಿಸಿ ಚಿಕಿತ್ಸೆ ಮಾಡಿದ್ದು ಯಾರೊಬ್ಬರೂ ಮರಣ ಹೊಂದಲಿಲ್ಲ. 1986 ರಲ್ಲಿ ’’Prazocin in
the management of cardiovascular manifestations of scorpion sting”‘ ಪೇಪರ್ ಲ್ಯಾನ್ಸೆಟ್ ಜರ್ನಲ್ ನಲ್ಲಿ ಪ್ರಕಟವಾಯಿತು. ಚೇಳು
ಕಡಿತದಲ್ಲಿ ಪ್ರಜೋಸಿನ್ ಔಷಧ ಉಪಯೋಗಿಸಿ ಫಲಪ್ರದವಾಗಿ ಚಿಕಿತ್ಸೆ ಮಾಡಬಹುದು ಎಂಬ ಡಾ.ಬಾವಸ್ಕರ್ ರ ಸಂದೇಶವನ್ನು ಜಾಗತಿಕ ತಜ್ಞ ವೈದ್ಯರು ಮಾನ್ಯ ಮಾಡಿದರು. ಇದರಿಂದ ಡಾ.ಬಾವಸ್ಕರ್ ರಿಗೆ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿತು.

ಚೇಳು ಕಡಿತದಿಂದ ಜನರು ಮರಣ ಹೊಂದುವ ಸಂಖ್ಯೆ, ಈ ಔಷಧದ ಉಪಯೋಗಕ್ಕಿಂತ ಮೊದಲು ಶೇ.40ರಷ್ಟು ಆಗಿದ್ದರೆ ಪ್ರಜೋಸಿನ್ ಪ್ರಯೋಗದ ನಂತರ ಶೇ.1ರಷ್ಟಕ್ಕೆ ಇಳಿಯಿತು. ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ ಯಾವುದೋ ಹೊರಗಿನ ಏಜನ್ಸಿ ಅಥವಾ ಸರಕಾರದ ಹಣದ ನೆರವನ್ನು ಪಡೆದು ಈ
ಸಂಶೋಧನೆ ಮಾಡಿದ್ದಲ್ಲ. ಮಾನವ ಜೀವನದ ಉದ್ಧಾರಕ್ಕೆ ಕೈಗೊಳ್ಳುವ ಸಂಶೋಧನೆಗಳು ಒಬ್ಬ ವ್ಯಕ್ತಿಯ ಕಠಿಣ ಪರಿಶ್ರಮ, ತನ್ಮಯತೆ ಮತ್ತು ಅರ್ಪಣಾ ಮನೋಭಾವ ಮುಖ್ಯವಾಗುತ್ತದೆ ಎಂದು ಡಾ.ಬಾವಸ್ಕರ್ ಅವರ ಸಂಶೋಧನೆ ನಮಗೆ ತೋರಿಸುತ್ತದೆ.

ಡಾ.ಬಾವಸ್ಕರ್ ಅವರ ಇನ್ನಿತರ ಸಾಧನೆಗಳನ್ನು ಗಮನಿಸಿದರೆ-ಏಪಿಐ ಟೆಕ್ಸ್ಟ್ ಬುಕ್ ಆಫ್ ಮೆಡಿಸಿನ್‌ನಲ್ಲಿ ಎರಡು ಅಧ್ಯಾಯಗಳನ್ನು ಬರೆದಿದ್ದಾರೆ. ಫಾರ್ಮಕಾ ಲಜಿಯ ಜನಪ್ರಿಯ ಟೆಕ್ಸ್ಟ್ ಬುಕ್ ಸಾತೋಷ್ಕರ್ ಅವರ ಪುಸ್ತಕದಲ್ಲಿ ಸಹಿತ ಪ್ರಜೋಸಿನ್ ಚೇಳು ಕಡಿತದ ಬಗೆಗಿನ ಚಿಕಿತ್ಸೆ ಎಂಬುದನ್ನು ಸೇರಿಸಲಾಗಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್‌ನ ಜನವರಿ 2011ರ ಸಂಚಿಕೆಯಲ್ಲಿ ಅವರ ಸಂಶೋಧನೆಯ ಬಗ್ಗೆ ಒಂದು ಪೂರ್ಣ ಪೇಪರ್ ಪ್ರಕಟವಾಗಿದೆ. ತುಂಬಾ ಕಡಿಮೆ ಅವಕಾಶ ಮತ್ತು ವಸ್ತುಗಳಿಂದ ಹೇಗೆ ಇವರ ಸಂಶೋಧನೆ ಆರಂಭಗೊಂಡು ರೋಗಿಗಳನ್ನು ನಿರಂತರವಾಗಿ ಸೂಕ್ಷ್ಮವಾಗಿ ಗಮನಿಸುವುದರಿಂದ ಹೇಗೆ ಸಂಶೋಧನೆ ಕೊನೆ ಗೊಂಡಿತು ಎಂಬ ಬಗ್ಗೆ ಸಂಪಾದಕೀಯವನ್ನು ಮೇಲಿನ ಅದೇ ಸಂಚಿಕೆಯಲ್ಲಿ ಸಂಪಾದಕರು ಬರೆದಿದ್ದಾರೆ.

ಹಾವಿನ ಕಡಿತದ ಬಗ್ಗೆಯೂ ಡಾ.ಬಾವಸ್ಕರ್ ಕೆಲಸ ಮಾಡಿದ್ದಾರೆ. ಕ್ರೇಟ್ ಎಂಬ ಜಾತಿಯ ಹಾವಿನ ಕಡಿತದಲ್ಲಿ ಸ್ಥಳೀಯವಾಗಿ ಹೆಚ್ಚು ಲಕ್ಷಣಗಳಿರುವುದಿಲ್ಲ. ಆಗ ಕಾಯಿಲೆ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ಆರಂಭಿಸುವುದು ತಡವಾಗುತ್ತದೆ. ಇದರಲ್ಲಿ ಉಂಟಾಗುವ ಹೊಟ್ಟೆ ನೋವು ಎಷ್ಟೋ ಸಂದರ್ಭ ಅಪೆಂಡಿಸೈಟಿಸ್
ಎಂದು ತಪ್ಪು ತಿಳಿಯಲ್ಪಟ್ಟಿದೆ. ಮಧ್ಯ ರಾತ್ರಿ ಹೊಟ್ಟೆ ನೋವು ಎಂದು ಹಾಸಿಗೆಯಿಂದ ಏಳುವ ರೋಗಿಯಲ್ಲಿ ಕಣ್ಣಿನ ರೆಪ್ಪೆಗಳು ಇಳಿದಿದ್ದರೆ ಇದು ಕ್ರೇಟ್ ಹಾವಿನ ಕಡಿತದಿಂದ ಎಂದು ಖಚಿತವಾಗಿ ಹೇಳಬಹುದು ಎಂದು ಡಾ.ಬಾವಸ್ಕರ್ ಅಭಿಮತ.

ಹಳ್ಳಿಗಳಲ್ಲಿ ಬೆಳಗಿನ ನಸುಕಿನಲ್ಲಿ ಬಹಿರ್ದೆಸೆಗೆಂದು ಬಯಲು ಅಥವಾ ಕಾಡಿಗೆ ಹೋಗುವ ಮಹಿಳೆಯರು ರಸೆಲ್ ವೈಪರ್ ಹಾವಿನ ಕಡಿತಕ್ಕೆ ಒಳಗಾಗಿ Acute Renal failure ಗೆ ಒಳಗಾಗಿ ಮರಣ ಹೊಂದುತ್ತಿದ್ದರು. ಆಗ ಕೂಡಲೇ ಕಾಯಿಲೆ ಪತ್ತೆ ಹಚ್ಚಿ ಆಂಟಿ ಸ್ನೇಕ್ ವೆನಮ್, ಮ್ಯಾನಿಟಾಲ್, ಫ್ರೂಸ್ ಮೈಡ್, ಅಸಿಟೈಲ್ ಸಿಸ್ಟೇನ್-ಹೀಗೆ ಚಿಕಿತ್ಸೆಯ ಪ್ರೊಟೊಕಾಲ್ ರೂಪಿಸಿ ಹಲವಾರು ಮರಣವನ್ನು ತಡೆಗಟ್ಟಲು ಕಾರಣರಾದರು. ಡಾ.ಬಾವಸ್ಕರ್ ಅವರು ಇದುವರೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ೬೦ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಪ್ರತಿಷ್ಠಿತ ಲ್ಯಾನ್ಸೆಟ್‌ನಲ್ಲಿಯೇ 17 ಪತ್ರಗಳು, ಒಂದು ಪ್ರಬಂಧ ಮತ್ತು 3 ರೋಗಿಗಳ ಕೇಸ್ ವರದಿಗಳು ಪ್ರಕಟವಾಗಿವೆ. ವೈದ್ಯರಿಗಾಗಿ ಅವರು ಸ್ಕಾರ್ಪಿಯಾನ್ ಸ್ಟಿಂಗ್ ಎಂಬ ಮಾನೋಗ್ರಾಮ್ ಪ್ರಕಟಿಸಿದ್ದಾರೆ. ಇದರ ಮುನ್ನುಡಿಯನ್ನು ಆಕ್ಸ್ ಫರ್ಡ್ ಟೆಕ್ಸ್ಟ್ ಬುಕ್ ಆಫ್ ಮೆಡಿಸಿನ್‌ನ ಸಂಪಾದಕ ಡಾ.ಡೇವಿಡ್ ವಾರೆಲ್ ಬರೆದಿದ್ದಾರೆ ಎಂದರೆ ಇದರ ಘನತೆಯನ್ನು ಗಮನಿಸಿ. ಇವರಿಗೆ ಪದ್ಮಪ್ರಶಸ್ತಿ ಕೊಟ್ಟದ್ದು ಸೂಕ್ತವೇ. ಆದರೆ ಇವರ ಅಗಾಧ ವೈಯಕ್ತಿಕ ಪರಿಶ್ರಮ ಮತ್ತು ವೈದ್ಯಕೀಯ ರಂಗಕ್ಕೆ ಇವರ ಕಾಣಿಕೆ ಗಮನಿಸಿ ಪದ್ಮ ಭೂಷಣವೇ ಕೊಡಬೇಕಿತ್ತು ಎಂದು ನನ್ನ ಅನಿಸಿಕೆ.

(ಹೆಚ್ಚಿನ ಮಾಹಿತಿ ಕೃಪೆ: ಅಜಿಂಕ್ಯ ಕಾಳೆ – ಅಂತರ್ಜಾಲ)