ಶಶಾಂಕಣ
shashidhara.halady@gmail.com
ಒಂದು ಕಡೆ ಹಾಡಿ, ಇನ್ನೊಂದು ಕಡೆ ಗುಡ್ಡದಂತಹ ಖಾಲಿ ಜಾಗ, ಅದರ ನಡುವೆ ಇತ್ತು ಆ ಪುಟ್ಟ ಏಕೋಪಾಧ್ಯಾಯ ಸರಕಾರಿ ಶಾಲೆ. ಅದಕ್ಕೆ ಸ್ವಂತ ಕಟ್ಟಡವೇ ಇರಲಿಲ್ಲ! ಆ ಪುಟ್ಟ ಊರಲ್ಲಿ ಬಾಡಿಗೆ ಕಟ್ಟಡಗಳೂ ಲಭ್ಯವಿರಲಿಲ್ಲ! ಹಾಗಿದ್ದರೆ ಹೇಗೆ ನಡೆಯುತ್ತಿತ್ತು ಆ ಶಾಲೆ?
ಶಾಲೆ ಎಂದರೆ ಎಲ್ಲಾ ಶಾಲೆಗಳೂ ಒಂದೇ ಅಲ್ಲವೆ? ಅದರಲ್ಲಿ ಹಳ್ಳಿ ಶಾಲೆಯ ದೇನು ವಿಶೇಷ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರವುಂಟು! -ಆ ಶಾಲೆಯು ಕೇವಲ ಹಳ್ಳಿ ಶಾಲೆ ಮಾತ್ರವಲ್ಲ, ಕುಗ್ರಾಮದ ಶಾಲೆ ಅದು. ಆದ್ದರಿಂದಲೇ ವಿಶೇಷವಿದೆ!
ನಮ್ಮ ಮನೆಯಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ, ಹಾಡಿ-ಹಕ್ಕಲು-ಗುಡ್ಡಗಳ ನಡುವೆಯಿದ್ದ ಆ ಶಾಲೆಗೆ ಹೋಗಲು ಇದ್ದ ಏಕೈಕ ಕನ್ವೆಯನ್ಸ್ ಎಂದರೆ ಕಾಲ್ನಡಿಗೆ! ಸೈಕಲ್ ಸೇರಿದಂತೆ ಯಾವುದೇ ವಾಹನ ತಲುಪಲಾಗದ, ಹಾಡಿಯೊಂದರ ಪಕ್ಕದಲ್ಲಿದ್ದ ಬೆಳಾರ ಜಾಗದಲ್ಲಿತ್ತು ನನ್ನ ಆ ಶಾಲೆ. ಆ ಶಾಲೆಯ ಹೆಸರಿನದೇ ಒಂದು ಕಥೆಯಿದೆ. ಅದೂ ವಿಶೇಷವೇ! ನಾನು ಅಲ್ಲಿಗೆ ಹೋಗುತ್ತಿದ್ದಾಗ ಅದು ಗೋರಾಜಿ ಶಾಲೆ.
ಗೋರಾಜಿ ಎಂಬ ಜನವಸತಿಯ ಪಕ್ಕದಲ್ಲಿ, ಕಾಡಿನಂಚಿನ ಒಂದು ಗುಡಿಸಲಿ ನಲ್ಲಿತ್ತು ಆ ಶಾಲೆ. ಆದರೆ ಮೂಲತಃ ಅದರ ಹೆಸರು ಹುಯ್ಯಾರು ಶಾಲೆ! ಶಾಲೆಯ ಫಲಕದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹುಯ್ಯಾರು ಎಂಬ ಬರಹವೂ ಇತ್ತು. ನಮ್ಮ ಮನೆಯಿರುವ ಪ್ರದೇಶವೆಲ್ಲವೂ ಈಗ ಹಾಲಾಡಿ ಗ್ರಾಮಕ್ಕೆ ಸೇರಿದ್ದರೂ, ಮುಂಚೆ ಅದು ಹುಯ್ಯಾರು ಗ್ರಾಮಕ್ಕೆ ಸೇರಿತ್ತಂತೆ. ಆದ್ದರಿಂದಲೇ ಹುಯ್ಯಾರು ಶಾಲೆ ಎಂಬ ಹೆಸರು. ಆದರೆ, ಈಗ ಹುಯ್ಯಾರು ಗ್ರಾಮ ದರೆ ಹರನಗುಡ್ಡೆಯಿಂದಾಚೆಯ ಪ್ರದೇಶವೆಂದೇ ತಿಳಿವಳಿಕೆಯಿದೆ.
ನಾನು ಶಾಲೆಗೆ ಹೋಗುವಾಗ ಗೋರಾಜಿಯಲ್ಲಿದ್ದರೂ, ಆ ಪುಟ್ಟ ಶಾಲೆಗೆ ಆಗ ಸ್ವಂತ ಕಟ್ಡವಿರಲಿಲ್ಲ. 1959ರಲ್ಲಿ ಆರಂಭ ಗೊಂಡಿದ್ದ ಆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡದ ಭಾಗ್ಯ ದೊರೆತದ್ದು 1980ರ ದಶಕದಲ್ಲಿ! ಅದರದ್ದೇ ಒಂದು ಪ್ರತ್ಯೇಕ ಕಥೆಯಿದ್ದು, ಅದನ್ನು ಆಮೇಲೆ ಹೇಳುತ್ತೇನೆ. ಸ್ವಂತ ಕಟ್ಟಡವಿಲ್ಲದೇ ಈ ಶಾಲೆಯು ಸುಮಾರು ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದಾದರೂ ಹೇಗೆ ಎಂಬುದನ್ನು ನೋಡೋಣ.
ಸುಮಾರು 1959ರಲ್ಲಿ ಆರಂಭಗೊಂಡ ‘ಹುಯ್ಯಾರು ಶಾಲೆ’ಯು ಮುದೂರಿ ಶಾಲೆ ಎಂಬ ಅಡ್ಡ ಹೆಸರನ್ನೂ ಪಡೆದಿತ್ತು! ಏಕೆಂದರೆ, ಆ ಶಾಲೆ ಆರಂಭಗೊಂಡದ್ದೇ ಮುದೂರಿ ಮಹಾಲಿಂಗೇಶ್ವರ ದೇವಾಲಯದ ಹೆಬ್ಬಾಗಲಿನಲ್ಲಿ. ನಮ್ಮವರೇ ಆದ ರಾಮ, ಲಕ್ಷ್ಮಣ ಮೊದಲಾದವರು ಆ ಶಾಲೆಯ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು. ನನಗಿಂತಲೂ ಮುಂಚೆ ‘ಮುದೂರಿ ಶಾಲೆ’ಗೆ ಹೋಗಿದ್ದ ಸುಶೀಲಕ್ಕ, ರಾಮ, ಲಕ್ಷ್ಮಣ, ಹಂಜಾರ್ ಸಹೋದರರು ಮೊದಲಾದರಿಂದ ನಾನು ಕೇಳಿ ತಿಳಿದಂತೆ, ಮುದೂರಿ ದೇವಾಲಯದ ಪುರಾತನ ಹೆಬ್ಬಾಗಿಲಿನ ಜಾಗದಲ್ಲಿದ್ದ ಆ ಶಾಲೆಗೆ, ‘ಶಶಿಕಲಾ’ ಎಂಬ ಟೀಚರ್ ಇದ್ದರು.
ಬಸ್ ಸಂಪರ್ಕ, ರಸ್ತೆ ಸಂಪರ್ಕ ಇಲ್ಲದಿದ್ದ, ಕಾಡಿನ ನಡುವೆ ಇದ್ದ ಮುದೂರಿ ದೇವಾಲಯದ ಆವರಣದಲ್ಲಿದ್ದ ಆ ಶಾಲೆಗೆ, ಆ ಮಹಿಳಾ ಟೀಚರ್ ಹೇಗೆ ಬರುತ್ತಿದ್ದರೋ ಸ್ಪಷ್ಟವಿಲ್ಲ. ಆ ಜನಾನುರಾಗಿ ಟೀಚರ್ ಅವರ ಊರು ಕುಂದಾಪುರ! 25 ಕಿ.
ಮೀ. ದೂರದ ಕುಗ್ರಾಮದ ಶಾಲೆಯಲ್ಲಿ ಅವರು ಹೇಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಈಗ ಊಹಿಸಿಕೊಳ್ಳಲು ಕೌತುಕ ಎನಿಸುತ್ತದೆ. ಇರಲಿ, ಮುದೂರಿ ದೇವಾಲಯದ ಹೆಬ್ಬಾಗಿಲಿನಲ್ಲಿ ವಿಘ್ನ ವಿಲ್ಲದೇ ನಡೆಯುತ್ತಿದ್ದ ಆ ಶಾಲೆ, ಒಮ್ಮೆಗೇ
ನಿಂತು ಹೋಗುವ ಪ್ರಸಂಗ ಎದುರಾಯಿತು.
ಅದು 1960ರ ದಶಕ. ದೇವಾಲಯದ ಹೆಬ್ಬಾಗಿಲು ಜೀರ್ಣಾವಸ್ಥಯಲ್ಲಿತ್ತು; ಅದರ ಛಾವಣಿಗೆ ಹೊದಿಸಿದ್ದು, ಕೈಯಿಂದಲೇ ತಯಾರಿಸಿದ್ದ ಹೆಂಚುಗಳು. ಒಂದು ದಿನ ತರಗತಿ ನಡೆಯುತ್ತಿರುವಾಗಲೇ, ಒಂದು ಹಂಚು ಜಾರಿ ಬಿತ್ತು. ಬಿದ್ದಿದ್ದು ನೇರವಾಗಿ
ವಿಶಾಲು ಎಂಬ ಹುಡುಗಿಯ ತಲೆಯ ಮೇಲೆ! ಗಾಯವೂ ಆಯಿತು.
ಈಗಲೋ ಆಗಲೋ ಬಿದ್ದುಹೋಗುವಂತಿದ್ದ ಆ ದೇಗುಲದ ಹೆಬ್ಬಾಗಿಲಿನ ಛಾವಣಿಯ ಅಡಿ, ಇನ್ನು ಮುಂದೆ ಪುಟಾಣಿಗಳನ್ನು ಕೂರಿಸಿ ತರಗತಿ ನಡೆಸುವುದು ಅಪಾಯ ಎಂದರಿತ ಅಧ್ಯಾಪಕರು, ಬೇರೆ ಕಟ್ಟಡಕ್ಕಾಗಿ ತಲಾಶು ಮಾಡತೊಡಗಿದರು.
ಆ ಪ್ರದೇಶವೆಲ್ಲವೂ ಕುಗ್ರಾಮದ ಭಾಗಗಳು, ರಸ್ತೆ ಸಂಪರ್ಕವಿಲ್ಲ, ಕಾಲ್ನಡಿಗೆಯಿಂದ ಮಾತ್ರ ತಲುಪಬಹುದಾದ, ದೂರದ ದೂರದ ಮನೆಗಳಿರುವ ಅಲ್ಲಿ, ಪ್ರತ್ಯೇಕ ಶಾಲಾ ಕಟ್ಟಡವಾದರೂ ಎಲ್ಲಿ ಸಿಗಬೇಕು? ಕೊನೆಗೆ, ಅಲ್ಲಿಂದ ಎರಡು ಕಿ.ಮೀ.
ದೂರದಲ್ಲಿದ್ದ ಗೋರಾಜಿ ಎಂಬಲ್ಲಿದ್ದ, ಮಯ್ಯ ಎಂಬುವವರು ತಮ್ಮ ಮನೆಯ ಕಡುಮಾಡಿನ ಜಗಲಿ ಭಾಗವನ್ನು ಶಾಲೆ ನಡೆಸಲು ಬಿಟ್ಟುಕೊಟ್ಟರು.
ಇತ್ತ ಮುದೂರಿ ದೇವಾಲಯದ ಪುರಾತನ ಹೆಬ್ಬಾಗಿಲನ್ನು ಕುಂದಾಪುರದ ಹೆಂಚಿನ ಕಾರ್ಖಾನೆ ಮಾಲೀಕರಾದ ಕೃಷ್ಣ ನೆಕ್ಕತ್ತಾಯರ ಕುಟುಂಬದವರು ಜೀರ್ಣೋದ್ಧಾರ ಮಾಡಿಸಲು ಮುಂದಾದರು. ಮೂಲತಃ ಹಾಲಾಡಿಯವರಾದ ಅವರು
ಉತ್ತಮ ಗುಣಮಟ್ಟದ ಮಂಗಳೂರು ಹೆಂಚು ಹೊದಿಸಿದ ಹೆಬ್ಬಾಗಿಲನ್ನು ನಿರ್ಮಿಸುವಲ್ಲಿ ಮುತುವರ್ಜಿ ವಹಿಸಿದರು. ನಂತರದ ವರ್ಷಗಳಲ್ಲಿ ಅಲ್ಲಿನ ಮುಖಮಂಟಪವನ್ನೂ ಗಟ್ಟಿ ಮುಟ್ಟಾಗಿ ಕಟ್ಟಿಸಿದ ವಿಚಾರ ಅಲಾಯಿದ. ಗೋರಾಜಿಯ ಮಯ್ಯ ಅವರ ಮನೆಯ ಭಾಗದಲ್ಲಿ ನಡೆಯುತ್ತಿದ್ದ ಆ ಶಾಲೆಯನ್ನು, ನಂತರ ಅಲ್ಲೇ ಹತ್ತಿರದ, ಹಾಡಿಪಕ್ಕದ ಖಾಲಿ ಜಾಗದಲ್ಲಿದ್ದ ಒಂದು ಗುಡಿಸಲಿಗೆ ಸ್ಥಳಾಂತರಿಸಲಾಯಿತು.
ಕೈ ಯಲ್ಲೊಂದು ಓಲಿ ಕೊಡೆಯನ್ನು ಹಿಡಿದು, ನಾನು ಆ ಶಾಲೆಯನ್ನು ಸೇರಿದಾಗ, ಅಲ್ಲಿದ್ದ ಮುಖ್ಯೋಪಾಧ್ಯಾಯರು ಸುಬ್ರಾಯ ಭಟ್ ಅವರು. ನಾಲ್ಕೇ ತರಗತಿಗಳಿದ್ದ, ಕಾಡಿನ ನಡುವಿನ ಗುಡಿಸಲಿನಲ್ಲಿದ್ದ ಆ ಶಾಲೆಯಲ್ಲಿ ಅಧ್ಯಯನ ಮಾಡುವುದೆಂದರೆ, ಇತ್ತ ಅಕ್ಷರಾಭ್ಯಾಸವೂ ಹೌದು, ಅತ್ತ ಪರಿಸರದ ಪಾಠವೂ ಹೌದು. ಅಕ್ಷರಾಭ್ಯಾಸವನ್ನು ಏಕೈಕ ಮಾಸ್ಟ್ರಾಗಿದ್ದ ಸುಬ್ರಾಯ ಭಟ್‌ರು ಮಾಡಿಸಿದರೆ, ನಮಗೆ ಪರಿಸರದ ಪಾಠ ದೊರೆಯುತ್ತಿದ್ದುದು, ಆ ಶಾಲೆಗೆ ನಡೆದು ಬರುತ್ತಿದ್ದ ದಾರಿಯಲ್ಲಿ. ಅದು ಹೇಗೆಂದು ತಿಳಿಯಲು, ಆ ಹಳ್ಳಿ ಶಾಲೆಯ ಒಂದು ದಿನದ ದಿನಚರಿಯನ್ನು ನೆನಪಿಸಿಕೊಳ್ಳಬೇಕು!
ಬೆಳಗ್ಗೆ ಬೇಗನೆದ್ದು ಸ್ನಾನ ಮಾಡಿ, ಕುಚ್ಚಿಗೆ ಅಕ್ಕಿಯ ಗಂಜಿಯನ್ನು ತಿಂದು, ಕೈಲೊಂದು ಸ್ಲೇಟು ಹಿಡಿದು, ಮಳೆಯ ವಾತಾವರಣ ವಿದ್ದರೆ ಓಲಿಕೊಡೆಯನ್ನೂ ಇನ್ನೊಂದು ಕೈಯಲ್ಲಿ ಹಿಡಿದು ಶಾಲೆಯತ್ತ ಹೊರಟರೆ, ಮೊದಲಿಗೆ ಎದುರಾಗುವುದು ಗದ್ದೆ ಬೈಲು. ನಮ್ಮ ಮನೆಯ ಅಂಗಳ ದಾಟಿ, ಮೊದಲ ಹೆಜ್ಜೆ ಇಟ್ಟರೆ ಸಿಗುವುದೇ ಬತ್ತದ ಗದ್ದೆ. ವರ್ಷದ ಎಂಟು ತಿಂಗಳುಗಳ ಕಾಲ ಅದರಲ್ಲಿ ನೀರು, ಕೆಸರು! ಗದ್ದೆಯಂಚಿನ ಕಂಟದ ಮೇಲೆ ಬೆಳೆದ ಹುಲ್ಲಿನ ನಡುವೆ, ಪುಟಾಣಿ ಹೆಜ್ಜೆಯಿಡುತ್ತಾ ನನ್ನ ಸವಾರಿ ಹೊರಡು ತ್ತಿತ್ತು. ಆರೆಂಟು ಗದ್ದೆ ಕಂಟಗಳ ಮೇಲೆ ನಡೆದು, ಉತ್ತರ ದಿಕ್ಕಿನ ಒಂದು ತೋಡಿನ ಅಂಚಿನಲ್ಲಿ ಸಾಗಿದರೆ, ಮುಡಾರಿ ಭಟ್ಟರ ಮನೆ.
ಅಲ್ಲಿ ಎದುರಾಗುತ್ತಿತ್ತು ನಾನು ದಾಟಬೇಕಾದ ಮೊದಲ ‘ಸಂಕ’. ವರ್ಷದಲ್ಲಿ ಎಂಟು ತಿಂಗಳು ಹರಿಯುವ ನೀರಿನಿಂದ ತುಂಬಿರುತ್ತಿದ್ದ ಆ ತೋಡನ್ನು ದಾಟಲು, ಸುಮಾರು 20 ಅಡಿ ಉದ್ದದ ಮರದ ಕಾಂಡವೇ ಆಸರೆ. ಆ ಸಂಕದ ಮೇಲೆ
ಬ್ಯಾಲೆನ್ಸ್ ಮಾಡುತ್ತಾ ತೋಡು ದಾಟಿ, ಮುಡಾರಿ ಭಟ್ಟರ ಮನೆಯಿಂದ ಗೋರಾಜಿ ಶಾಲೆಗೆ ಬರುತ್ತಿದ್ದ ಮಕ್ಕಳನ್ನು ಜತೆ ಮಾಡಿಕೊಂಡು, ಪೂರ್ವದಿಕ್ಕಿನ ಮಕ್ಕಿಗದ್ದೆಗಳನ್ನು ದಾಟಿದಾಗ, ಹಕ್ಕಲು ಸಿಗುತ್ತಿತ್ತು.
ಆ ಹಕ್ಕಲಿನ ತುಂಬಾ ನಾನಾ ರೀತಿಯ ಗಿಡಗಳು, ಪೊದೆಗಳು. ಸಳ್ಳೆ, ನೇರಳೆ, ಮುರಿನ ಮರ ಮೊದಲಾದ ಹತ್ತಾರು ಪ್ರಭೇದದ ಗಿಡಗಳು ಅಲ್ಲಿ ಒತ್ತೊತ್ತಾಗಿ ಬೆಳೆದಿದ್ದವು. ಅವುಗಳ ನಡುವೆ ಪದೇ ಪದೇ ಕಣ್ಣಿಗೆ ಬೀಳುತ್ತಿದ್ದ ಜೀವಿ ಎಂದರೆ ಕಾಯಿಕಳ್ಳ (ಓತಿ ಕ್ಯಾತ). ಆ ಕಾಯಿಕಳ್ಳನಿಗೆ ಮಕ್ಕಳನ್ನು ಕಂಡರೆ ಅಸಹನೆ, ಅಪಹಾಸ್ಯವಂತೆ! ಅದು ಗಿಡವೊಂದರ
ಕಾಂಡದ ಮೇಲೆ ಕುಳಿತು, ತಲೆಯಲ್ಲಾಡಿಸುತ್ತಾ, ನಮ್ಮನ್ನು ಅಣಕಿಸುತ್ತಿತ್ತು. ನಮ್ಮಲ್ಲಿ ಯಾರಾದರೊಬ್ಬರು ಕಲ್ಲು ಬೀಡಿದಾಗ, ಅದರ ತಲೆ ಅಪ್ಪಚ್ಚಿ!
ಆ ಹಕ್ಕಲಿನಲ್ಲಿ ಕಾಲು ಕಿ.ಮೀ. ನಡೆದ ನಂತರ, ದೊಡ್ಡ ಮರಗಳಿದ್ದ ಹಾಡಿಗೆ ನಮ್ಮ ಪ್ರವೇಶ. ಬೋಗಿ, ದೂಪ, ಕಾಟು ಮಾವು ಮತ್ತಿತರ ಮರಗಳಿದ್ದ ಆ ಹಾಡಿಯು ಮಂಗಗಳ ನೆಚ್ಚಿನ ತಾಣ. ಮರಗಳ ನೆರಳಿನಲ್ಲೇ ಸಾಗುವ ಅಲ್ಲಿನ ದಾರಿಯು, ಕೆಲವೇ ನೂರು ಮೀಟರ್ ದೂರದಲ್ಲಿ, ದರೆಯೊಂದರ ಪ್ರಪಾತದ ಪಕ್ಕದಲ್ಲೇ ಸಾಗಿ, ಕೊರಕಲು ದಾರಿಯಲ್ಲಿ ಕೆಳಗಿಳಿದು, ಒಂದು ತೋಡಿನ ಬಳಿ ಬರುತ್ತದೆ. ಆ ಸಣ್ಣ ತೋಡಿಗೆ ಇನ್ನೊಂದು ಮರದ ಸಂಕ. ಅದರ ಮೇಲೆ ನಡೆದು, ಗದ್ದೆಯೊಂದನ್ನು
ದಾಟಿದರೆ, ನಮ್ಮ ದಾರಿಗಡ್ಡಲಾಗಿ ಮೂರನೆಯ ತೋಡು ಮತ್ತು ಸಂಕ ಎದುರಾಗುತ್ತದೆ.
ಮತ್ತೊಮ್ಮೆ ಮರದ ಸಂಕದ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆದು ದಾಟಿದರೆ, ಗದ್ದೆಯ ಪಕ್ಕದಲ್ಲೇ ಸಾಗುವ ದಾರಿ. ಈ ತೋಡುಗಳ ಪಕ್ಕದಲ್ಲೆಲ್ಲಾ ನಾನಾ ರೀತಿಯ ಮರಗಳು, ಗಿಡಗಳು, ಬಳ್ಳಿಗಳು. ಮುಂದೆ ಸಾಗುವ ಗದ್ದೆಯಂಚಿನ ದಾರಿಯ
ಪಕ್ಕದಲ್ಲೇ ಒಂದು ಗುಮ್ಮಿ. ಸದಾ ನೀರಿನಿಂದ ತುಂಬಿರುತ್ತಿದ್ದ ಆ ಗುಮ್ಮಿಯಲ್ಲಿ ಪುಟಾಣಿ ತಾವರೆಯ ರೂಪದ ಕೋಳ್ ಹೂಗಳು ನೀರಿನ ಮೇಲೆ ಅರಳಿ, ನಸುನಗುತ್ತಾ ನಳನಳಿಸುತ್ತಿದ್ದವು. ಆ ಗುಮ್ಮಿಯ ನೀರೆಂದರೆ, ಕಪ್ಪೆಗಳಿಗೆ, ಒಳ್ಳೆ ಹಾವುಗಳಿಗೆ ಬಹು ಇಷ್ಟ. ಒಳ್ಳೆ ಹಾವುಗಳು ಕಪ್ಪೆ ಹಿಡಿಯಲು ನಡೆಸುತ್ತಿರುವ ಪ್ರಯತ್ನವನ್ನು ನೋಡುತ್ತಾ, ಗುಮ್ಮಿಯ ನೀರಿಗೆ ನಾವು ಜಾರಿ ಬೀಳದಂತೆ ಜಾಗ್ರತೆ ವಹಿಸಿ, ಮುಂದೆ ಸಾಗಿದರೆ, ಒಂದು ಸಣ್ಣ ತೋಟ, ಗುಡಿ ದೇವಸ್ಥಾನ ಎಂಬ ಪುಟ್ಟ ಗುಡಿ.
ಅದರ ಪಕ್ಕದ ಓಣಿಯಲ್ಲಿ ನಡೆದು, ಒಂದು ತೊಡಮೆ ದಾಟಿದರೆ, ಖಾಲಿ ಜಾಗದಲ್ಲಿ ಗುಡಿಸಲೊಂದು ಕಾಣಿಸುತ್ತದೆ. ಅದೇ ನಮ್ಮ ಶಾಲೆ. ಏಕೋಪಾಧ್ಯಾಯ ಮತ್ತು ಏಕಕೊಠಡಿಯ ಆ ಶಾಲೆಗೆ ಹುಲ್ಲಿನ ಛಾವಣಿ. ಶಾಲೆ ಮಕ್ಕಳು ತಂದ ಓಲಿಕೊಡೆಗಳು ಅರ್ಧ ಶಾಲೆಯ ಭಾಗವನ್ನು ತುಂಬಿರುವುದು ಮಳೆಗಾಲದ ಸಾಮಾನ್ಯ ದೃಶ್ಯ. ಶಾಲೆ ಎದುರು ಸ್ವಲ್ಪ ಖಾಲಿ ಜಾಗ. ಅದರಾಚೆ ದಟ್ಟವಾದ ಹಾಡಿ. ಆ ಹಾಡಿಯಲ್ಲೇ ಮುಂದೆ ಸಾಗಿದರೆ, ನನ್ನ ಸಹಪಾಠಿ ಉದಯ ಹಾಲಂಬಿಯ ಮನೆ. ಇತ್ತ ಚೇರಿಕೆಯಿಂದ ಬರುವ ಗೌರೀಶ ಉಪ್ಪೂರ, ಗೋಪಾಲ ಆಚಾರ್ಯ, ವಿಠಲ, ದುಗ್ಗ ನಾಯಕ, ಕೊಡಿಗೆಯ ಪ್ರಭಾಕರ ಇವರೆಲ್ಲರೂ ನನ್ನ ಸಹಪಾಠಿಗಳೇ.
ಪ್ರತಿದಿನ ಸ್ಲೇಟಿನಲ್ಲಿ ಕನ್ನಡ ಕಾಪಿ ಬರೆಯುವುದು ನಮ್ಮ ಪ್ರಮುಖ ಅಸೈನ್ ಮೆಂಟ್. ಸ್ಲೇಟು ಅಳಿಸಲು ಸೋಣೆ ಹೂವುಗಳ
ಕಾಂಡದ ನೀರಿನ ಬಳಕೆ. ಮಧ್ಯಾಹ್ನದ ಊಟಕ್ಕೆ ಅದೇ ಕಾಡುದಾರಿಯಲ್ಲಿ ನಡೆದು, ಮನೆ ತಲುಪಿ ಊಟ ಆಡಿ, ಪುನಃ ಒಂದು ಕಿ.ಮೀ. ನಡೆದು ಶಾಲೆಗೆ ಹಾಜರಾಗುತ್ತಿದ್ದ ಆ ಪರಿಯನ್ನು ನೆನಪಿಸಿಕೊಂಡರೆ ಇಂದಿಗೂ ವಿಸ್ಮಯ!
ಒಂದು ದಿನ ಸಂಜೆ ಶಾಲೆ ಮುಗಿಸಿಕೊಂಡು, ಮಾಮೂಲಿ ದಾರಿಯ ಬದಲು, ಮುಡಾರಿಯ ಹಾಡಿ ದಾರಿಯನ್ನು ಹಿಡಿದೆವು. ಕಾಟುಮಾವಿನ ಹಣ್ಣನ್ನು ಹೆಕ್ಕುವುದು ನೆಪ. ಈ ದಾರಿಯಲ್ಲಿ ಬಂದರೆ ದಟ್ಟವಾದ ಹಾಡಿ ಸಿಗುತ್ತದೆ. ಸಂಜೆಗತ್ತಲು ಅದಾಗಲೇ ಕವಿಯತೊಡಗಿತ್ತು. ಹಾಡಿಯ ಮಧ್ಯ ದಲ್ಲಿ ನಡೆಯುವಾಗ, ಒಂದು ದೊಡ್ಡ ದೂಪದ ಮರದಿಂದ ಏನೋ ಹಾರಿದಂತಹ ಸದ್ದು. ಆ ಹಾರಾಟದ ಶೈಲಿ, ಮರದ ಕೊಂಬೆಗಳು ಮತ್ತು ಎಲೆಗಳು ಅಲುಗಿದ ರೀತಿ ಇವೆಲ್ಲವನ್ನೂ ಕಂಡು, ಮಂಗವೊಂದು ಮರದಿಂದ ಮರಕ್ಕೆ ಹಾರಿರಬಹುದು ಎಂದು ಅಂದುಕೊಂಡೆ.
ಆದರೆ ನನ್ನ ಜತೆಯಲ್ಲಿದ್ದ ಹುಡುಗರು ‘ಏ ಅಲ್ಲಿ ಕಾಣು, ಭೂತ’ ಎಂದು ಬೆದರಿ ಆ ಮರವನ್ನೇ ನೋಡಿ, ಬೇಗ ಬೇಗನೆ ಮನೆಚಿತ್ತ ದಾಪುಗಾಲು ಹಾಕತೊಡಗಿದರು. ಅದು ಭೂತವಲ್ಲ, ಮಂಗ ಮರದಿಂದ ಮರಕ್ಕೆ ಹಾರಿದ್ದು ಎಂದು ನಾನೆಂದರೆ ಅವರು
ಕೇಳಲು ತಯಾರಿರಲಿಲ್ಲ! ಮನೆಗೆ ಬಂದು ನಮ್ಮ ಅಮ್ಮಮ್ಮನ ಬಳಿ ಈ ಘಟನೆಯನ್ನು ಹೇಳಿದಾಗ, ‘ಹೌದು, ಅದು ಮಂಗ. ಅಲ್ಲೆಲ್ಲೂ ಭೂತ ಇಲ್ಲ’ ಎಂದು ಧೈರ್ಯ ತುಂಬಿದರು.
ನಮ್ಮ ಆ ಗುಡಿಸಲು ಶಾಲೆಯಲ್ಲಿ ಟಾಯಿಲೆಟ್ ಇರಲಿಲ್ಲ! ಶಾಲೆಯಿಂದ ತುಸು ದೂರವಿದ್ದ ಒಂದು ಕಾಸಾನು ಮರದ ಬುಡವೇ ಅಂತಹ ಕೆಲಸಕ್ಕೆ ಸೂಕ್ತ ಜಾಗ. ಪ್ರತಿದಿನ ಕಾಸಾನು ಮರದ ಬುಡದಲ್ಲಿ ಬೆಳೆದಿದ್ದ ಪೊದೆಗಳ ಮೇಲೆ ಉಪ್ಪು ನೀರು ಹಾರಿಸಿ,
ಎಷ್ಟು ದಿನಗಳಲ್ಲಿ ಆ ಗಿಡಗಳ ಎಲೆಗಳು ಕರಟಿ, ಒಣಗಿ ಹೋಗುತ್ತವೆ ಎಂದು ಲೆಕ್ಕ ಹಾಕುವುದು ಸಸ್ಯಶಾಸದ ಪ್ರಾಯೋಗಿಕ ಪಾಠವಲ್ಲವೆ? ಗೋರಾಜಿ ಶಾಲೆಯ ಹಿಂಭಾಗದಲ್ಲಿ ತುಸು ದೂರ ನಡೆದರೆ, ವಿಶಾಲವಾದ ಗದ್ದೆ. ಬತ್ತದ ಕೊಯ್ಲು ಮುಗಿದಿದ್ದರೆ, ಅದು ನಮ್ಮ ಆಟದ ಬಯಲು.
ಅದನ್ನು ಬಿಟ್ಟರೆ, ಶಾಲೆಯ ಮುಂಭಾಗದಲ್ಲಿದ್ದ ಖಾಲಿ ಜಾಗದಲ್ಲಿ ಆಟವಾಡುವ ಅವಕಾಶವಿತ್ತು. ಆದರೆ, ಆ ಗುಡಿಸಲು ಶಾಲೆಗೆ ಹೋಗುತ್ತಿದ್ದ ಅವಧಿಯಲ್ಲಿ ಯಾವುದೇ ಆಟವಾಡಿದ ನೆನಪಾಗುತ್ತಿಲ್ಲ. ಅಷ್ಟು ಸಣ್ಣ ಶಾಲೆಯಾಗಿದ್ದರೂ, ರಜಾ ದಿನಗಳಲ್ಲಿ ಪಠ್ಯವಲ್ಲದ ಇತರ ಪುಸ್ತಕಗಳನ್ನು ಓದುವಂತೆ ನಮ್ಮ ಅಧ್ಯಾಪಕ ಸುಬ್ರಾಯ ಭಟ್‌ರು ಪ್ರೇರೇಪಿಸುತ್ತಿದ್ದುದು ಇನ್ನೂ ನೆನಪಿದೆ! ಅವರು ಪುಸ್ತಕ ಕೊಟ್ಟು ಓದಿಸಿದ ಒಂದು ಕಥೆಯಲ್ಲಿ ತೋಳಗಳು ಮನುಷ್ಯನನ್ನು ಹಿಡಿಯಲು ಹೊಂಚುಹಾಕುವ ವಿವರಗಳಿದ್ದವು. ಸುಬ್ರಾಯ ಭಟ್‌ರು ಸ್ವತಃ ಕವಿ; ಕವನ ರಚನೆಯಲ್ಲಿ ಆಸಕ್ತಿ. ಅವರು ಅಂದು ಪ್ರೇರೇಪಿಸಿದ ಪುಸ್ತಕ ಪ್ರೀತಿಯು, ಗೋರಾಜಿ
ಶಾಲೆಯ ಅನುಪಮ ನೆನಪಾಗಿ ನನ್ನಲ್ಲಿ ಉಳಿಸಿಕೊಂಡಿದೆ.