Saturday, 14th December 2024

ಹಳ್ಳಿಗಳು, ಚುನಾವಣೆ ಮತ್ತು ಅಭಿವೃದ್ದಿ

ಅಭಿವ್ಯಕ್ತಿ

ಮಹದೇವಪ್ರಸಾದ್‌ ಹೆಚ್‌.ಆರ್‌

ಹಳ್ಳಿಗಳು ದೇಶದ ಪ್ರಗತಿಗೆ ರಹದಾರಿಗಳು. ಆದರೆ ಅತಿಯಾದ ನಗರೀಕರಣದಿಂದಾಗಿ ಜನದಟ್ಟಣೆ ಅತಿಯಾಗಿ ನಗರಗಳು ನಲುಗಿ ಹೋಗಿ ದೇಶದ ಉಸಿರುಗಟ್ಟಿಸುತ್ತಿವೆ. ಇತ್ತ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ನಗರಗಳಿಂದಲೇ ಅಭಿವೃದ್ಧಿ ಸಾಧ್ಯ ಎನ್ನುವ ಹುಸಿನಂಬಿಕೆ ಹಾಗೂ ಜನಗಳಲ್ಲಿರುವ ನಗರದೆಡಗಿನ ಆಕರ್ಷಣೆ.

ಹಳ್ಳಿಗಳ ಅಭಿವೃದ್ಧಿಯಾಗದೆ ನಮ್ಮ ದೇಶವನ್ನು ಅಭಿವೃದ್ಧಿ ಸಾಲಿನಲ್ಲಿ  ನೋಡಲು ಸಾಧ್ಯವೇ ಇಲ್ಲ. ಈ ಹಳ್ಳಿಗಳೆಂಬ ರಹದಾರಿ ಯಲ್ಲಿ ನೂರೆಂಟು ಸಮಸ್ಯೆಗಳು. ಮೂಲ ಸಮಸ್ಯೆಗಳು ಒಂದೆಡೆಯಾದರೆ ಈ ರಾಜಕೀಯ ಎನ್ನುವುದು ಬಹುದೊಡ್ಡ ಸಮಸ್ಯೆ. ರಾಜಕೀಯ ಹಳ್ಳಿಗಳಿಗೆ ಕಾಲಿಟ್ಟಿದೆ ತಡ ಹಳ್ಳಿಗಳಲ್ಲಿನ ಸಾಮರಸ್ಯದ

ಜೀವನ ಕಣ್ಮರೆಯಾಯಿತು. ಜನಗಳ ಮಧ್ಯ ಇದ್ದ ಹೊಂದಾಣಿಕೆ ಎನ್ನುವುದು ತನ್ನ ಬಿಗುವು ಕಳೆದುಕೊಂಡು ಹಳ್ಳಿಗಳ ಶ್ರೀರಕ್ಷೆ ಯನ್ನು ಹೊಡೆದು ಚೂರಾಗಿಸಿತು. ಅಣ್ಣ ತಮ್ಮಂದಿರೇ ಪಕ್ಷಗಳ ಪರವಾಗಿ ನಿಂತು ತಾವು ಬಡಿದಾಡಲು ಶುರುವಿಟ್ಟರು. ಸ್ವಾತಂತ್ರ ಬಂದು ೭೦ ವರ್ಷಗಳೇ ಕಳೆದರೂ ಇಂದಿಗೂ ಎಲ್ಲರೂ ಮತ ಕೇಳಲು ಉದುರಿಸುವ ಹನಿಮುತ್ತುಗಳು ಶುದ್ಧ ಕುಡಿಯುವ ನೀರು,
ಒಳಚರಂಡಿ, ಉತ್ತಮ ಗುಣಮಟ್ಟದ ರಸ್ತೆಗಳು ಇಂಥವೇ.

ಇನ್ನೆಷ್ಟು ವರ್ಷಗಳು ಬೇಕು ಶುದ್ಧ ಕುಡಿಯುವ ನೀರು ಪೂರೈಸಲು? ಇನ್ನೆಷ್ಟು ವರ್ಷ ಕಾಯಬೇಕು ಕೊಳಕು ನೀರು ಒಳಚರಂಡಿ ಸೇರಲು? ಇನ್ನೆಷ್ಟು ಜನ ಸಾಯಬೇಕು ಗುಣಮಟ್ಟದ ರಸ್ತೆ ಕಾಣಲು? ಗುಣಮಟ್ಟದ ರಸ್ತೆಯ ಮಾತು ಆಗಿರಲಿ ಗುಂಡಿ ಮುಕ್ತ ರಸ್ತೆಗಳಾದರೂ ಬೇಡವೇ? ನಾಚಿಕೆಯಾಗಬೇಕು ಇಲ್ಲಿಯತನಕ ನಮ್ಮನ್ನಾಳಿದ ಸರಕಾರಗಳಿಗೆ, ನಾಚಿಕೆಯಾಗಬೇಕು ನಮ್ಮನ್ನಾಳುವ ಭ್ರಷ್ಟ ಜನನಾಯಕರಿಗೆ, ಅಽಕಾರಿಗಳಿಗೆ, ಅವರುಗಳನ್ನು ಬೆಂಬಲಿಸುವ ಪ್ರಜೆಗಳಿಗೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಹುದ್ದೆ ಎನ್ನುವುದು ಲಾಭದಾಯಕ ಹುದ್ದೆಯಾಗಿ ಹೋಯಿತು. ಇಲ್ಲಿ ಗೆದ್ದು ಬರುವ ಅಭ್ಯರ್ಥಿಗೆ ನಾನೆಷ್ಟು ಗಳಿಸಬುದು ಎನ್ನುವುದರತ್ತ ಚಿತ್ತವೇ ಹೊರತೂ, ನನ್ನ ಹಳ್ಳಿಗೆ, ನನ್ನ ನಾಡಿಗೆ ನಾನೇನು ನೀಡಬೇಕು ಎನ್ನುವ ಚಿಂತೆಯಿಲ್ಲ. ಅಭಿವೃದ್ಧಿಯ ಕಳಕಳಿ ಏನಾದರೂ ಇದ್ದರೆ ಅದು ಕೇವಲ ಭಾಷಣಕ್ಕೆ ಸೀಮಿತ. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನೇ ಲಕ್ಷ ಲಕ್ಷ ರುಪಾಯಿ ಮೌಲ್ಯಕ್ಕೆ ಹರಾಜು ಇಟ್ಟಿದ್ದಾರೆ. ಎಂದರೆ ಎಲ್ಲಿಗೆ ಬಂತು ನಮ್ಮ ಪ್ರಜಾಪ್ರಭುತ್ವ
ವ್ಯವಸ್ಥೆ?! ಪ್ರಜಾಪ್ರಭುತ್ವ ಹಳ್ಳಿಯ ಮಟ್ಟದ ಈ ಪರಿ ಪ್ರಪಾತಕ್ಕೆ ಜಾರಿದರೆ, ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಇನ್ನೆಷ್ಟು ಕುಲಗೆಟ್ಟು ಹೋಗಿರಬಹುದು!

ಅದು ಇನ್ನೆಷ್ಟು ಲಾಭದಾಯಕ ಹುದ್ದೆಯಾಗಿರಬೇಕು! ಭವಿಷ್ಯದಲ್ಲಿ ಇನ್ನೆಷ್ಟು ಶೋಚನೀಯ ಸ್ಥಿತಿ ತಲುಪಬಹುದು ಯೋಚಿಸ ಬೇಕಾಗಿದೆ. ಕರ್ನಾಟಕದ ಈಗಾಗಲೇ ಒಂದು ಪಕ್ಷದಿಂದ ಗೆದ್ದು ರಾಜೀನಾಮೆ ನೀಡಿ ಸರಕಾರವನ್ನು ಬೀಳಿಸಿ ಮತ್ತೊಂದು ಪಕ್ಷ ವನ್ನು ಸೇರಿದ ಬೃಹತ್ ನಾಟಕವನ್ನೇ ಜನತೆ ಕಂಡರು. ಇವರುಗಳಿಗೆ ಯಾವ ತತ್ತ್ವ, ಸಿದ್ಧಾಂತ, ಅಭಿವೃದ್ಧಿ, ಮಣ್ಣು ಮಸಿ ಏನೂ ಇಲ್ಲ. ಇರುವುದೆಲ್ಲ ಹಣ, ಅಧಿಕಾರ. ಕುರುಡು ಕಾಂಚಾಣದ ಹಿಂದಿನ ಕರಾಮತ್ತು ಇಂದಿನ ರಾಜಕೀಯದ ಪ್ರಮುಖ ಅಸ್ತ್ರ. ಇದೆ ಸಾಮಾನ್ಯ ಜನರಿಗೂ ತಿಳಿದಿದ್ದರೂ ಸಹ ಅಸಹಾಯಕವಾಗಿ ಕೈ ಕಟ್ಟಿ ನಿಂತಿರುವುದು ಮಾತ್ರ ಇದೇ ಪ್ರಜಾಪ್ರಭುತ್ವ!.

ಪ್ರಜೆಗಳಿಗೆ, ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ನಮ್ಮ ಸಂವಿಧಾನ ನೀಡಿರುವ ಅತಿಯಾದ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಮುಂದೆ ಪ್ರಜಾಪ್ರಭುತ್ವದ ಕತ್ತು ಹಿಸುಕುವುದರಲ್ಲಿ ನನಗೇಕೋ ಸಂಶಯವಿಲ್ಲ.  ಪಂಚಾಯಿತಿ ಸದಸ್ಯರಾಗ ಬಯಸುವವರೇ ಲಕ್ಷ ಲಕ್ಷ ಕೊಟ್ಟು ಆರಿಸಿಬರಲು ತಯಾರಾಗಿದ್ದಾರೆ ಎಂದರೆ ಅದು ಇನ್ನೆಂಥ ಲಾಭ ತರಬಲ್ಲದು ನೀವೇ ಯೋಚಿಸಿ.

10 ಲಕ್ಷವನ್ನೋ, 15 ಲಕ್ಷವನ್ನೋ ನೀಡಿ ಅವಿರೋಧವಾಗಿ ಆಯ್ಕೆಯಾಗಿ ಬರುವ ಒಬ್ಬ ಸದಸ್ಯ ತನ್ನ ಐದು ವರ್ಷಗಳ ಅವಧಿ ಯಲ್ಲಿ ಹಳ್ಳಿಗಳನ್ನೇಕೆ ಉದ್ಧರಿಸಬೇಕು? ಅವನಿಂದ ಅಭಿವೃದ್ಧಿ ಬಯಸುವ ಹಾಗೂ ಕೇಳುವ ಹಕ್ಕನೇ ಮತದಾರರು ಮಾರಿಕೊಂಡಿ ದ್ದಾರಲ್ಲ! ಲಕ್ಷಗಳನ್ನು ಕೊಟ್ಟು ಬರುವ ವ್ಯಕ್ತಿ ತಾನು ಹೂಡಿದ ಬಂಡವಾಳವನ್ನು ಬಡ್ಡಿ ಸಮೇತ ವಾಪಸ್ ಪಡೆಯುವುದ್ದನ್ನೇ ಯೋಚಿಸಬೇಕಲ್ಲವೇ? ನಮ್ಮೂರಿನ ಅಭಿವೃದ್ಧಿ ಮಾಡು ಎಂದು ಜನರೇಗೆ ಅವನನ್ನು ಕೇಳಬಲ್ಲರು!

ಈಗಾಗಲೇ ಅವರು ಅವರ ಊರಿನ ಅಭಿವೃದ್ಧಿ ಹಾಗೂ ಅವರ ಹಕ್ಕು ಎರಡನ್ನೂ ಮಾರಿಕೊಂಡು ಆಗಿದೆಯಲ್ಲ. ಇನ್ನೂ ಐದು ವರ್ಷಗಳ ಕಾಲ ಅವರೇನೇ ಮಾಡಿದರೂ, ನೋಡುತ್ತಾ ಕುಳಿತುಕೊಳ್ಳುವುದೊಂದೆ ಅವರಿಗಿರುವ ಆಯ್ಕೆ!. ಕೊರತೆಗಳೇ ಇಲ್ಲದ ಒಂದೇ ಒಂದು ಹಳ್ಳಿ ಇಡೀ ಭಾರತದಲ್ಲಿ ಹುಡುಕಿದರೂ ಸಿಗುವುದಿಲ್ಲವೇನೋ! ಒಂದ ಒಂದು ಮೂಲ ಸೌಕರ್ಯಗಳ ಸಮಸ್ಯೆ
ಗಳು ಹಳ್ಳಿಯ ಮೂಲೆ ಮೂಲೆಯಲ್ಲೂ ಮಾರ್ದನಿ ಸುತ್ತಿವೆ. ಇದನ್ನು ಕೇಳುವ ಧೈರ್ಯ ಹಾಗೂ ಸ್ವಾಭಿಮಾನ ಬಹುತೇಕರಿಗೆ ಉಳಿದಿಲ್ಲ. ಅವರುಗಳ ತಮ್ಮ ಸ್ವಾಭಿಮಾನವನ್ನು ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷ, ಜಾತಿ, ಮತಗಳಿಗೆ ಮಾರಿಕೊಂಡಿzರೆ. ಪಕ್ಷಗಳ ವಕ್ತಾರಿಕೆ ಹಾಗೂ ಅವುಗಳ ಸಮರ್ಥನೆಗೆ ಇಳಿಯುತ್ತಾರೆಯೇ ಹೊರತು ತಮ್ಮ ನಡುವೆ ತಾಂಡವ ವಾಡುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದೇ ಇಲ್ಲ.

ತಾನು ಬೆಂಬಲಿಸುವ ಪಕ್ಷದ ಅಭ್ಯರ್ಥಿ ಎಂತಹ ಅಯೋಗ್ಯನಾಗಿದ್ದರೂ ಸರಿ ಅವನಿಗೆ ಪಕ್ಷವೇ ಮುಖ್ಯ ಉಳಿದದೆಲ್ಲ ಗೌಣ.
ಹಳ್ಳಿಗಳು ಅಭಿವೃದ್ಧಿ ಹೊಂದಿದ್ದರೆ ಯಾಕೆ ನಗರಗಳು ಈ ಪರಿಯ ಗೊಂದಲದ, ದಟ್ಟಣೆಯ ಗೂಡಾಗುತ್ತಿದ್ದವು? ಹಳ್ಳಿ ಎಂದರೆ ಕೇವಲ ವ್ಯವಸಾಯ ಎನ್ನುವುದಾಗಿದೆ. ಅದು ಸಹ ಲಾಭವಿಲ್ಲದ ವ್ಯವಸಾಯ. ಲಾಭವಿಲ್ಲದ ಮೇಲೆ ಅದನ್ನೇಕೆ ಮಾಡಬೇಕು, ಪಟ್ಟಣ ಸೇರು ಎನ್ನುವಂತಾಗಿದೆ ಹಳ್ಳಿಗರ ಮನಸ್ಥಿತಿ. ದೊಡ್ಡ ದೊಡ್ಡ ಕೈಗಾರಿಕೆಗಳಿಂದ ಸಣ್ಣಪುಟ್ಟ ಕೈಗಾರಿಕೆಗಳೆ ಯಾಕೆ ನಗರ ಕೇಂದ್ರೀಕೃತವಾಗಿರಬೇಕು? ಹಳ್ಳಿಗಳಿಗೆ ಅವುಗಳನ್ನು ಸಂಭಾಳಿಸುವ ಸಾಮರ್ಥ್ಯ ಇಲ್ಲವೇ? ಹಳ್ಳಿಗಳೆಂದರೆ ಕೇವಲ ಗುಡಿ ಕೈಗಾರಿಕೆಗಳು ಮಾತ್ರವೇ? ದೊಡ್ಡ ದೊಡ್ಡ ಕೈಗಾರಿಗಳನ್ನೇಕೆ ಹಳ್ಳಿ ಮಟ್ಟಕ್ಕೆ ತರಬಾರದು!

ಇದರಿಂದ ಅಭಿವೃದ್ಧಿ ಸಾಧ್ಯವಲ್ಲವೇ? ಒಂದು ಸಣ್ಣ ಉದಾಹರಣೆಯನ್ನೇ ನೋಡುವುದಾದರೆ ಒಂದು ಸಾಫ್ಟ್‌ವೇರ್ ಕಂಪನಿ ಹಳ್ಳಿಯಲ್ಲಿ ಸ್ಥಾಪಿಸಲು ಬೇಕಿರುವುದು ಉತ್ತಮ ಸಂವಹನಕ್ಕೆ ಬೇಕಾಗುವ ಅತಿವೇಗದ ಇಂಟರ್ನೆಟ್ ಸಂಪರ್ಕ, 24/7 ವಿದ್ಯುಚ್ಛಕ್ತಿ ಪೂರೈಕೆ, ಹಾಗೂ ಸಂಪರ್ಕ ರಸ್ತೆಗಳು. ಈ ವ್ಯವಸ್ಥೆಗಳನ್ನು ಹಳ್ಳಿಗಳಲ್ಲಿ ನೀಡಲು ಸರಕಾರದಿಂದ ಸಾಧ್ಯವಿಲ್ಲವೇ? ಒಂದೇ ಒಂದು ಕಂಪನಿ ಹಳ್ಳಿಯಲ್ಲಿ ಸ್ಥಾಪಿತವಾದರೆ, ಅದರಿಂದ ಆ ಹಳ್ಳಿಯ ಸಂಪೂರ್ಣ ಚಿತ್ರಣವೇ ಬದಲಾಗುತ್ತದೆ. ಆ ಹಳ್ಳಿಯ ಸಂಪರ್ಕ ರಸ್ತೆಗಳು

ತನ್ನಿಂದ ತಾನೇ ಅಭಿವೃದ್ಧಿ ಮಾರ್ಗ ಹಿಡಿಯುತ್ತವೆ, ಅಲ್ಲಿರುವ ಮನೆಗಳಿಗೆ ಬಾಡಿಗೆ ರೂಪದೊಂದಿಗೆ ಆದಾಯ ಬರಲಾರಂಭಿ ಸುತ್ತದೆ. ಹೋಟೆಲ್‌, ಅಂಗಡಿ ಮುಂಗಟ್ಟುಗಳು, ಹೀಗೆ ಅದಕ್ಕೆ ಹೊಂದಿಕೊಂಡ ಅನೇಕ ವ್ಯವಸ್ಥೆಗಳಿಗೆ ಹಳ್ಳಿಯಲ್ಲಿ ಬಾಗಿಲು ತೆಗೆಯುತ್ತದೆ. ಜತೆಗೆ ಹಳ್ಳಿಯಲ್ಲಿನ ವ್ಯವಸಾಯ ಬೆಳೆಗಳಿಗೆ ಸ್ಥಳೀಯ ಮಾರುಕಟ್ಟೆ ದೊರೆಯುತ್ತದೆ ಹಾಗೂ ನಗರಗಳಲ್ಲಿನ ಉಸಿರು
ಗಟ್ಟುವ ವಾತಾವರಣ ಬಿಟ್ಟು ಅನೇಕರು ತಮ್ಮ ಹಳ್ಳಿಗಳಿಗೆ ಹಿಂದಿರುಗುತ್ತಾರೆ. ಹಳ್ಳಿಗರ ಜೀವನ ಮಟ್ಟ ಸಹ ಸುಧಾರಿಸುತ್ತದೆ.

ಜತೆಗೆ ವ್ಯವಸಾಯದೊಟ್ಟಿಗೆ ಅವರುಗಳು ಇನ್ನೂ ಅನೇಕ ವ್ಯವಹಾರಿಕ ಪ್ರಪಂಚಕ್ಕೆ ರೈತ ತನ್ನನ್ನು ತಾನು ತೆರೆದುಕೊಳ್ಳುತ್ತಾನೆ. ಇಡೀ ದೇಶದಲ್ಲಿ ಯಾವುದಾದರೂ ಒಂದೇ ಒಂದು ಕಾರ್ಪೊರೇಟ್ ಆಫೀಸ್ ಹಳ್ಳಿಯಲ್ಲಿ ಇರುವುದೇ? ಖಂಡಿತ ಇಲ್ಲ. ಇದಕ್ಕೆ ಕಾರಣ ನಮ್ಮ ಸರಕಾರಗಳೇ. ನಮ್ಮ ಸರಕಾರಗಳ ದೂರದೃಷ್ಟಿ ಕೊರತೆ, ಇಚ್ಛಾಶಕ್ತಿಯ ಕೊರತೆ ನಮ್ಮ ದೇಶದ ಅಭಿವೃದ್ಧಿಯನ್ನು ಹಿಂದೆ ನೂಕುತ್ತಿವೆ. ಜನರ ಮನಸ್ಸು ಸಹ ಅದೇ ಮೂಲಭೂತ ಸೌಕರ್ಯಗಳೇ ದೊಡ್ಡ ಅಭಿವೃದ್ಧಿ.

ಅದನ್ನು ಹೊರತುಪಡಿಸಿ ಇನ್ನೇನೂ ಇಲ್ಲ ಎನ್ನುವ ಕಾಲ್ಪನಿಕ ಪ್ರಪಂಚದ ಮುಳುಗಿzರೆ ಹಾಗೂ ಈ ಮೂಲ ಸೌಕರ್ಯಗಳನ್ನು ಸರಕಾರಗಳೇ ನೀಡಬೇಕು ಎನ್ನುವ ಮನಸ್ಥಿತಿಯ ಬದುಕುತ್ತಿದ್ದಾರೆ. ಹಾಗಾಗಿಯೇ ಸರಕಾರ ಉಚಿತವಾಗಿ ನೀಡುವ ಮೂರು ಕೆ.ಜಿ.
ಅಕ್ಕಿಗೆ ಸರತಿ ಸಾಲಿನಲ್ಲಿ ನಿಂತು ಅದರ ಸಂತೃಪ್ತಿ ಯನ್ನು ಕಾಣುತ್ತಾರೆ. ಮತ್ತದೇ ಸಾಲಮನ್ನಾ ಯೋಜನೆಯತ್ತ ಆಸೆಗಣ್ಣಿನಿಂದ ನೋಡುತ್ತಾರೆ. ನಮ್ಮನ್ನಾಳುವ ನಾಯಕರಿಗೂ ನಮ್ಮ ಜನರ ಈ ಅಜ್ಞಾನವೇ ಬೇಕಿರುವುದು, ಅದುವೇ ಅವರಿಗೆಮೂಲಮಂತ್ರ.

ಇತ್ತ ಪಂಚಾಯಿತಿ ಸದಸ್ಯನಿಂದ, ಪ್ರಧಾನಿಯವರೆಗೆ ಎಲ್ಲರೂ ಶೌಚಗುಂಡಿಯಿಂದ ಹಿಡಿದು ಘಟಾರ ಹರಿಯುವ ಚರಂಡಿ ನಿರ್ಮಿಸುವ ದುಡ್ಡನೆ ತಿಂದು ತೇಗಿ ಅದೇ ಘಟಾರಕ್ಕೆ ಹಳ್ಳಿಗಳ ಅಭಿವೃದ್ಧಿಯನ್ನು ನೂಕುತ್ತಾರೆ. ಮತ್ತೆ ಐದು ವರ್ಷಗಳ ನಂತರ ಮತ್ತದೇ ಮೂಲ ಸೌಕರ್ಯದ ಆಮಿಷದೊಂದಿಗೆ ಹಾಜರಾಗುತ್ತಾರೆ. ಮತದಾರ ತನ್ನ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಕೊಳ್ಳುವವರೆಗೂ ಈ ವ್ಯವಸ್ಥೆ ಇನ್ನೂ ೭೦೦ ವರ್ಷಗಳೇ ಕಳೆದರೂ ಇದೇ ಮಾದರಿಯಲ್ಲಿ ನಡೆಯುತ್ತ ಇರುತ್ತದೆ.

ಅದೇ ಇರಲಿ, ಈ ಸಾರಿ ಪಂಚಾಯಿತಿ ಚುನಾವಣೆ ಬೇರೆ ಬಂತು ನನ್ನದು ಆ ಪಕ್ಷ ನಿನ್ನದು ಯಾವುದು? ಒಂದು ಮತಕ್ಕೆ ಎಷ್ಟು ಕೊಡುತ್ತಾರೆ?