Wednesday, 11th December 2024

Vinayaka Mathapathy Column: ರಾಜಕೀಯ ಸುಳಿಯಲ್ಲಿ ಸಿಲುಕಿದ ಪ್ರತಿಮೆಗಳು

ರಾಜಬೀದಿ

ವಿನಾಯಕ ಮಠಪತಿ

ಭಾರತದ ರಾಜಕೀಯ ಇತಿಹಾಸದಲ್ಲಿ ಮಹಾತ್ಮರು ಹಾಗೂ ದಾರ್ಶನಿಕರ ಪ್ರತಿಮೆಗಳ ಪಾತ್ರ ಬಹುಮುಖ್ಯವಾಗಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜಕೀಯ ಲಾಭ ಪಡೆಯುವ ನಿಟ್ಟಿನಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು ಪ್ರತಿಮೆ ಗಳನ್ನು ಅಸ್ತ್ರವಾಗಿ ಬಳಸಿಕೊಂಡಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಒಂದು ಚುನಾವಣೆಯ ವಿಷಯವಾಗಿಯೂ ಪ್ರತಿಮೆ ಗಳು ತಮ್ಮ ಜೀವಂತಿಕೆ ಉಳಿಸಿಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಸಿಂಧುದುರ್ಗದ ಮಾಲ್ವಾನ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೩೫ ಅಡಿ ಎತ್ತರದ ಪ್ರತಿಮೆ ಉರುಳಿ ಬಿದ್ದ ಕಾರಣಕ್ಕೆ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಭಾರತೀಯರ ಮುಂದೆ ತಲೆಬಾಗಿ ಕ್ಷಮೆ ಕೇಳಬೇಕಾಯಿತು. ಇದೇ ಪಕ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿರೋಧಪಕ್ಷದ ಮಹಾ ವಿಕಾಸ್ ಅಘಾಡಿಯ ನಾಯಕರು ಆಡಳಿತಾರೂಢ ಪಕ್ಷದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಸಧ್ಯದಲ್ಲಿ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದ ಪ್ರತಿಮೆ ಉರುಳಿ ಬಿದ್ದ ಪ್ರಕರಣ ವಿಪಕ್ಷಗಳಿಗೆ ಒಂದು ಅಸ್ತ್ರವಾಗಿದ್ದು ಸುಳ್ಳಲ್ಲ.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನೆಲಕ್ಕುರುಳಿದ್ದೇ ತಡ ವಿರೋಧಪಕ್ಷಗಳು ಆಡಳಿತಾರೂಢ ಬಿಜೆಪಿ ಮೈತ್ರಿ ಕೂಟದ ವಿರುದ್ಧ ಮುಗಿಬಿದ್ದಿವೆ. ಹೇಳಿ ಕೇಳಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಈ ವಿವಾದವನ್ನು ಯಾರು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಹೇಳಿ. ಈ ಜಾಗದಲ್ಲಿ ಬಿಜೆಪಿ ಇದ್ದರೂ ಇದೇ ಕೆಲಸ ಮಾಡುತ್ತಿತ್ತಲ್ಲವೇ? ಇಂತಹ ಅನೇಕ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಸಧ್ಯ ಮಹಾರಾಷ್ಟ್ರ ರಾಜಕಾರಣದಲ್ಲಿ ವಿಚಿತ್ರ ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ಶಿವಸೇನೆ ಹಾಗೂ ಎನ್‌ಸಿಪಿ ಪಕ್ಷಗಳು ಇಬ್ಭಾಗವಾಗಿದ್ದು, ಒಂದೇ ಪಕ್ಷದಲ್ಲಿ ಜೋಡಿ ನಾಯಕರು ಹುಟ್ಟಿಕೊಂಡಿದ್ದಾರೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷ ಗಳಿಗೆ ನೀರು ಕುಡಿಸುವಲ್ಲಿ ಮಹಾ ವಿಕಾಸ್ ಅಘಾಡಿ ಯಶಸ್ವಿಯಾಗಿದೆ. ಇಂತಹ ಹಲವಾರು ಚುನಾವಣಾ ವಿಷಯ ವಿದ್ದರೂ ಪ್ರತಿಮೆಯನ್ನು ಚುನಾವಣಾ ಅಸವಾಗಿ ಮುನ್ನಲೆಗೆ ತಂದಿರುವುದರ ಹಿಂದೆ ಬಲವಾದ ಕಾರಣ ಇದೆ.

ಮಹಾರಾಷ್ಟ್ರದಲ್ಲಿ ಕಳೆದ ೮ ತಿಂಗಳ ಹಿಂದೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಸ್ತದಿಂದ ಮಾಲ್ವಾನಿನ ಕೋಟೆ ಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೩೫ ಅಡಿ ಎತ್ತರದ ಪ್ರತಿಮೆ ಉದ್ಘಾಟನೆ ಮಾಡಲಾಗಿತ್ತು. ಲೋಕೋಪ ಯೋಗಿ ಇಲಾಖೆ ಹಾಗೂ ನೌಕಾಪಡೆ ಸಹಯೋಗದೊಂದಿಗೆ ಪ್ರತಿಮೆ ನಿರ್ಮಾಣ ಮಾಡಲಾಗಿತ್ತಾದರೂ ಕಳಪೆ ಕಾಮಗಾರಿ ಕಾರಣಕ್ಕೆ ಗಾಳಿ, ಮಳೆಗೆ ಇದು ನೆಲಕ್ಕುರಿಳಿದೆ. ಸಧ್ಯ ವಿಪಕ್ಷಗಳು ಮೋದಿ ವಿರುದ್ಧ ಬೊಟ್ಟು ಮಾಡುತ್ತಿವೆ. ಪ್ರಧಾನಿ ಕ್ಷಮೆ ಕೇಳಿದರೂ ಬಿಡುತ್ತಿಲ್ಲ.

ಹಾಗಾದರೆ ರಾಜಕೀಯ ಪಕ್ಷಗಳು ಪ್ರತಿಮೆ ವಿಚಾರವನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಲು ಕಾರಣ ಏನೆಂದರೆ ಜನರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವುದು. ಇದೇ ವಿಷಯವನ್ನು ಕೆದಕಿ ಮತಗಳನ್ನಾಗಿ ಪರಿವರ್ತನೆ ಮಾಡುವ ಚಾಣಾಕ್ಷತನ. ಇದೇ ಕಾರಣಕ್ಕೆ ಪ್ರತಿಮೆಗಳು ಭಾರತದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದ್ದು. ಪ್ರತಿಮೆ ರಾಜಕಾರಣದಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಗುಜರಾತ್‌ನಲ್ಲಿ ನಿರ್ಮಾಣವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ.

ಅಷ್ಟೇ ಏಕೆ, ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆಯ ನಿರ್ಮಾಣದ ಹಿಂದಿನ ಉದ್ದೇಶ, ಒಕ್ಕಲಿಗ ಸಮುದಾಯದ ಮತ ಸೆಳೆಯುವುದೇ ಆಗಿತ್ತು. ಹಾಗೆಯೇ ಇದೇ ಸಂದರ್ಭ ದಲ್ಲಿ ತೀವ್ರ ಸ್ವರೂಪ ಪಡೆದಿದ್ದ ಉರಿಗೌಡ ಹಾಗೂ ನಂಜೇಗೌಡ ಎಂಬುವವರ ಪ್ರತಿಮೆಯನ್ನು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಿರ್ಮಾಣ ಮಾಡುತ್ತೇವೆ ಎಂದು, ಅಂದಿನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಮತ್ತದೇ ರಾಜಕೀಯ ಲಾಭಕ್ಕೆ ಎಂಬುದು ಸ್ಪಷ್ಟ.

ಅಷ್ಟೇ ಅಲ್ಲದೆ ಉಡುಪಿ ಜಿಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ
ನಿರ್ಮಾಣ ವಿಷಯವೂ ರಾಜಕೀಯ ಸ್ವರೂಪದ ಪಡೆದುಕೊಂಡಿತ್ತು. ಈಗಲೂ ಈ ಕುರಿತು ರಾಜಕೀಯ ಆರೋಪ
ಪ್ರತ್ಯಾರೋಪ ಕೇಳಿಬರುತ್ತವೆ.

ಇನ್ನೂ ಪ್ರತಿಮೆ ವಿಚಾರಕ್ಕೆ ದೇಶದ ಅತ್ಯಂತ ಸೂಕ್ಷ್ಮ ಜಿಲ್ಲೆ ಬೆಳಗಾವಿ ಎಂದರೆ ತಪ್ಪಾಗಲಾರದು. ಕನ್ನಡ ಹಾಗೂ ಮರಾಠಿ ಭಾಷಿಕರನ್ನು ಒಳಗೊಂಡಿರುವ ಪ್ರದೇಶವಾಗಿದ್ದು. ಇಲ್ಲಿ ಕೇವಲ ಪ್ರತಿಮೆಗಳ ವಿಷಯಕ್ಕೆ ನಗರವೇ ಹೊತ್ತಿ ಉರಿಯುತ್ತದೆ. ಕಳೆದ ಮೂರು ವರ್ಷಗಳ ಹಿಂದೆ ಬೆಳಗಾವಿಯ ಪಿರನವಾಡಿ ಪ್ರದೇಶದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಾಗಿ ಇಡೀ ರಾಜ್ಯದ ಪ್ರತಿಭಟನೆಗಳು ನಡೆದವು. ಅಸಂಖ್ಯಾತ ಕನ್ನಡಿಗರು ರಾಜ್ಯದ ನಾನಾ ಭಾಗಗಳಿಂದ ಬೆಳಗಾವಿಗೆ ಭೇಟಿ ನೀಡಿ ಪ್ರತಿಮೆ ಪರ ನಿಂತುಕೊಂಡರು.

ಪ್ರತಿಮೆಗಳ ವಿಚಾರದಲ್ಲಿ ನಮ್ಮ ಜನ ಬಹಳಷ್ಟು ಸೂಕ್ಷಜೀವಿಗಳು. ರಾಜಕಾರಣಿಗಳಿಂದ ಎಷ್ಟೇ ಮೋಸವಾದರು ಜನ ಗಂಭೀರವಾಗಿ ತೆಗೆದುಕೊಳ್ಳುವು ದಿಲ್ಲ. ಆದರೆ ಪ್ರತಿಮೆಗಳ ವಿಚಾರಕ್ಕೆ ಬಹಳಷ್ಟು ಜಾಗೃತ. ಸ್ವಲ್ಪ ಅವಘಡ ಸಂಭವಿಸಿದರೂ ಆಳುವ ಸರಕಾರಗಳ ವಿರುದ್ಧ ಹೋರಾಟಗಳೇ ನಡೆಯುತ್ತವೆ. ಸಾಲು ಸಾಲು ಪ್ರತಿಭಟನೆಗಳ ಮೂಲಕ ಜನ ಆಕ್ರೋಶ ಹೊರಹಾಕುತ್ತಾರೆ. ಇದೇ ಕಾರಣಕ್ಕೆ ಭಾರತೀಯ ರಾಜಕಾರಣದಲ್ಲಿ ಪ್ರತಿಮೆಗಳ ಪಾತ್ರ ಬಹು ಮುಖ್ಯವಾದದ್ದು.

ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಸಾಕು ಭವಿಷ್ಯದಲ್ಲಿ ತಮ್ಮ ಪಕ್ಷ ಗಟ್ಟಿಗೊಳಿಸಿ ಚುನಾವಣೆ ಗೆಲ್ಲುವ ರಣತಂತ್ರ ಹೆಣೆಯುವ ಲೆಕ್ಕಾಚಾರದಲ್ಲಿ ತೊಡಗುತ್ತವೆ. ಆಯಾ ಸಮುದಾಯದ ಮತ ಸೆಳೆಯಲು ಪ್ರತಿಮೆ ಎಂಬ ಅಸ ಪ್ರಯೋಗ ಮಾಡುತ್ತವೆ. ಇದಕ್ಕೆ ಮತ್ತೊಂದು ಉದಾಹರಣೆ ಉತ್ತರ ಪ್ರದೇಶದ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಆಡಳಿತಾವಧಿ. ೨೦೦೭ ರಿಂದ ೨೦೧೨ ರ ಅವಧಿಯಲ್ಲಿ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಬರೋಬ್ಬರಿ ೨ ಸಾವಿರ ಕೋಟಿ ರು. ವೆಚ್ಚದಲ್ಲಿ ಪ್ರತಿಮೆ ಹಾಗೂ ಸ್ಮಾರಕ ನಿರ್ಮಾಣಕ್ಕೆ ಹಣ ವ್ಯಯಿಸಿದ್ದರು. ಬಡತನ ಹಾಗೂ ಪೌಷ್ಠಿಕ ಆಹಾರದ ಕೊರತೆಯಿಂದ ಯುಪಿ ಮಕ್ಕಳು ಬಳಲುತ್ತಿದ್ದ ಸನ್ನಿವೇಶ ದಲ್ಲಿಯೂ ಮಾಯಾವತಿ ಪ್ರತಿಮೆಗೆ ಸಾಕಷ್ಟು ಮಹತ್ವ ನೀಡಿದ್ದರು.

ಉತ್ತರ ಪ್ರದೇಶದಲ್ಲಿ ನಿರ್ಮಾಣವಾದ ಪ್ರತಿಮೆ ಹಾಗೂ ಉದ್ಯಾನವನದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಪ್ರಕಾರ ಮಾಯಾವತಿ ಅಧಿಕಾರ ಅವಧಿಯಲ್ಲಿ ನಿರ್ಮಾಣ ಗೊಂಡ ಸ್ಮಾರಕಗಳಲ್ಲಿ ಒಟ್ಟು ೧೧೧ ಕೋಟಿ ರು. ಅವ್ಯವಹಾರ ಕುರಿತು ತನಿಖೆ ನಡೆಸಿತ್ತು. ೨೦೧೯ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಸಾರ್ವಜನಿಕರ ತೆರಿಗೆ ಹಣವನ್ನು ಆನೆಗಳ ನಿರ್ಮಾಣಕ್ಕೆ ಬಳಸಲಾಗಿದ್ದು, ತಮ್ಮ ಜೇಬಿನಿಂದ ಹಣವನ್ನು ಸರಕಾರದ ಬೊಕ್ಕಸಕ್ಕೆ ಜಮೆ ಮಾಡಬೇಕು ಎಂದು ಆದೇಶ ನೀಡಿತ್ತು.

ಉತ್ತರ ಪ್ರದೇಶದ ಪ್ರತಿಮೆ ರಾಜಕಾರಣ ಮಾಯಾವತಿ ಕಾಲದಲ್ಲಿ ಮಾತ್ರ ನಡೆಯಲಿಲ್ಲ. ಇವರ ನಂತರ ಯುಪಿ ಗದ್ದುಗೆ ಹಿಡಿದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡ ಅನೇಕ ಪ್ರತಿಮೆಗಳನ್ನು ನಿರ್ಮಾಣ ಮಾಡಿದರು. ಇವರ ಆಡಳಿತಾವಧಿಯಲ್ಲಿಯೂ ಪ್ರತಿಮೆ ನಿರ್ಮಾಣದ ರಾಜಕಾರಣ ಜೋರಾಗಿಯೇ ನಡೆಯಿತು. ಅತ್ತ ಮಾಯಾ ವತಿ ತಮ್ಮ ಬಹುಜನ ಸಮಾಜವಾದಿ ಪಕ್ಷದ ಚಿನ್ಹೆ ಆನೆ ಹಾಗೂ ಕೆಲವು ಪ್ರಮುಖರ ಉದ್ಯಾನವನ ನಿರ್ಮಿಸಿದರೆ ಇತ್ತ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅಧಿಕಾರ ಸಿಕ್ಕ ಮರುಕ್ಷಣದಿಂದಲೇ ತಮ್ಮ ಸೈದ್ಧಾಂತಿಕ ರಾಜಕೀಯ ನಾಯಕರ ಪ್ರತಿಮೆ ನಿರ್ಮಾಣದ ರಾಜಕಾರಣ ಮಾಡಿದರು.

ಇನ್ನೂ ಬಿಹಾರ, ಮಧ್ಯ ಪ್ರದೇಶ, ಗುಜರಾತ, ಮಹಾರಾಷ್ಟ್ರ, ಕರ್ನಾಟಕ ಸೇರಿ ದೇಶದ ಭಾಗಶಃ ರಾಜ್ಯಗಳು ಪ್ರತಿಮೆ ರಾಜಕಾರಣದ ಕೇಂದ್ರಗಳಾಗಿಯೇ ಮಾರ್ಪಾಡುಗೊಂಡಿವೆ. ದೇಶದ ಮಹಾನ್ ನಾಯಕರು, ದಾರ್ಶನಿಕರು ಸೇರಿ ದಂತೆ ಪ್ರಮುಖ ವ್ಯಕ್ತಿಗಳ ಪ್ರತಿಮೆ ನಿರ್ಮಾಣದ ಅಭ್ಯಾಸ ಕೇವಲ ಭಾರತದಲ್ಲಿ ಮಾತ್ರ ಇದೆ ಎಂದಲ್ಲ. ಅಭಿವೃದ್ಧಿ ಹೊಂದಿದ ಅಮೆರಿಕ, ಬ್ರಿಟನ್ ಸೇರಿದಂತೆ ಜಗತ್ತಿನ ಬಹುಪಾಲು ದೇಶದಲ್ಲಿ ಬಾನೆತ್ತರದ ಪ್ರತಿಮೆಗಳು ನಿರ್ಮಾಣ ವಾಗಿವೆ. ೧೮೮೬ರ ಅಕ್ಟೋಬರ್ ೨೮ರಂದು ಅಮೆರಿಕದಲ್ಲಿ ೧೫೧ ಅಡಿ ಎತ್ತರದ ಸ್ಟ್ಯಾಚ್ಯೂ ಆಫ್ ಲಿಬರ್ಟಿಯನ್ನು ಪ್ರತಿಷ್ಠಾಪಿಸಲಾಯಿತು.‌

ಇದರ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆ, ಗಲಾಮಗಿರಿ ನಿರ್ಮೂಲನೆ ಜತೆಗೆ ಸಮಾನತೆಯ ಸಂಕೇತವಾಗಿಯೂ ಪ್ರತಿಮೆಯನ್ನು ಗುರುತಿಸಲಾಯಿತು. ಈಗಲೂ ಅಲ್ಲಿನ ಸರಕಾರ ಪ್ರತಿಮೆಯನ್ನು ಅಚ್ಚುಕಟ್ಟಾಗಿ ಉಳಿಸಿಕೊಂಡಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಬೆಳವಣಿಗೆ ನಡೆಯಿತು. ಕಳೆದ ಕೆಲ ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ನಡೆದ ದಂಗೆಯಲ್ಲಿ ಅವರ ದೇಶದ ವಿಮೋಚನೆಗಾಗಿ ಹೋರಾಡಿದ್ದ ಶೇಖ್ ಮುಜಿರ್ಬು ರೆಹಮಾನ್ ಅವರ ಪ್ರತಿಮೆ ಯನ್ನು ಕೆಡವಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಾಯಿತು. ಈ ಮಟ್ಟಿಗೆ ಇಡೀ ವಿಶ್ವದಲ್ಲಿ ಪ್ರತಿಮೆಗಳು ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಹಾಗೂ ಜನರ ಆಕ್ರೋಶಕ್ಕೆ ತುತ್ತಾಗುತ್ತಾ ಬಂದಿವೆ.

ಸಾಮಾನ್ಯವಾಗಿ ಪ್ರತಿಮೆಗಳ ನಿರ್ಮಾಣದ ಹಿಂದೆ ಒಂದು ಮಹತ್ವದ ಉದ್ದೇಶವಂತೂ ಅಡಗಿದೆ. ಆ ದೇಶದ ಐಕ್ಯತೆ ಗಾಗಿ ಧಾರ್ಮಿಕ ಸಮಾನತೆಗೆ ಹೋರಾಡಿದವರನ್ನು ನೆನೆಯುವ ಉದ್ದೇಶ. ತಮ್ಮ ಬದುಕನ್ನೇ ಸಮಾಜಕ್ಕೆ ಮೀಸಲಿಟ್ಟವರ ಜೀವಮಾನದ ಸಾಧನೆಯನ್ನು ಮುಂದಿನ ಪೀಳಿಗೆಗೆ ತಿಳಿಸಿ ಅವರಲ್ಲಿಯೂ ಜಾಗೃತೆ ಮೂಡಿಸುವ ಉದ್ದೇಶ. ಶತಮಾನಗಳ ಹಿಂದೆ ನಡೆದ ಘಟನೆಯ ಸೂಕ್ಷ್ಮತೆಯನ್ನು ಅರಿತು ಇತಿಹಾಸದ ಪಾಠ ಕಲಿಯುತ್ತಾ ತನ್ನ ದೇಶಕ್ಕಾಗಿ ದುಡಿಯುವ ಉದ್ದೇಶವೂ ಇದೆ.

ನಮ್ಮಲ್ಲಿಯೇ ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ರಂತಹ
ಮಹಾನ್ ವ್ಯಕ್ತಿಗಳ ಪ್ರತಿಮೆ ಮುಂದೆ ನಿಂತಾಗ ಎಂತವರಿಗಾದರೂ ಉತ್ಸಾಹ ಚಿಮ್ಮುತ್ತದೆ. ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪ್ರತಿಮೆ ಮುಂದೆ ನಿಂತಾಗ ಸಾಧನೆಯ ಹುಮ್ಮಸ್ಸು ಅರಿವಿಲ್ಲದೆ ನಮ್ಮೊಳಗೆ ಮೂಡುತ್ತದೆ. ಆದರೆ ಇದೇ ವಿಷಯಗಳು ರಾಜಕಾರಣಕ್ಕೆ ಬಳಕೆಯಾದರೆ ಪ್ರತಿಮೆಯ ಮೂಲ ಉದ್ದೇಶವೇ ಬದಿಗೆ ಸರಿದುಬಿಡುತ್ತದೆ. ಮುಂದೆಯೂ ಹೀಗಾಗದಿರಲಿ. ಪ್ರತಿಮೆಗಳನ್ನು ಸ್ವಾಭಿಮಾನದ ಸಂಕೇತವಾಗಿ ನೋಡಬೇಕು ಹೊರತು, ಚುನಾವಣಾ ತಂತ್ರದ ಭಾಗವಾಗಿ ಅಲ್ಲ.