Friday, 20th September 2024

ಭಾರತ ವಿಶ್ವಗುರು ಆಗುವ ದಿನಗಳಿನ್ನು ದೂರವಿಲ್ಲ

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಭಾರತವೀಗ ಶಾಂತಿಯುತ ದಾರಿಯತ್ತ ಸಾಗುತ್ತಿದೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಸರಕಾರ ಮಾಡಿದ ಕುತಂತ್ರಗಳು ಎಳೆಎಳೆಯಾಗಿ ಹೊರ ಬರುತ್ತಿವೆ. ಆದರೆ ದೇಶದ ರಕ್ಷಣೆಗಾಗಿ ಪ್ರಧಾನಿ ಮೋದಿಯವರು ಇತ್ತ ಹಗಲಿರುಳೂ ದುಡಿಯುತ್ತಿದ್ದರೆ, ಅತ್ತ ಕಾಂಗ್ರೆಸ್ ಕುರ್ಚಿಯ ಲಾಲಸೆ ಗಾಗಿ ದೇಶವನ್ನೇ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಸಾಗಿರುವುದು ವಿಷಾದನೀಯ.

ನವಭಾರತದ ನಿರ್ಮಾಣದ ನಿಟ್ಟಿನಲ್ಲಿ ವಿಶ್ವನಾಯಕ ನರೇಂದ್ರ ಮೋದಿಯವರದ್ದು ದೂರದೃಷ್ಟಿಯ ಯೋಜನೆಗಳು ಎನ್ನಬೇಕು. ನವಭಾರತ, ವಿಶ್ವ
ಗುರು ಭಾರತ ಇತ್ಯಾದಿ ಕನಸುಗಳನ್ನು ಕಂಡಿರುವ ಮೋದಿಯವರು, ಈ ಪೈಕಿ ಒಂದೊಂದನ್ನೂ ಈಡೇರಿಸುವ ಮುಖಾಂತರ ವಿಶ್ವಕ್ಕೆ ಭಾರತದ ಶಕ್ತಿಯನ್ನು ಪರಿಚಯಿಸುತ್ತಿದ್ದಾರೆ. ‘ಭಾರತ ಬದಲಾಗುತ್ತಿದೆ’ ಎಂಬುದರ ನೈಜಚಿತ್ರಣ ದೇಶದ ಪ್ರತಿಯೊಬ್ಬ ಪ್ರಜೆಗೂ ಅರ್ಥವಾಗುತ್ತಿದೆ. ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಗೊಳಿಸಿದ್ದು ಇದಕ್ಕೊಂದು ಉತ್ತಮ ಉದಾಹರಣೆ.

ಜಮ್ಮು-ಕಾಶ್ಮೀರಕ್ಕೆ ಕಾಂಗ್ರೆಸ್ ಅವಧಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಬದಲಾವಣೆಗೆ ಹೊಸಭಾಷ್ಯ ಬರೆದದ್ದು ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಮೋದಿಯವರು. ಈ ವಿಶೇಷ ಸ್ಥಾನಮಾನ ರದ್ದಾದ ಕಾರಣ, ಕೇಂದ್ರದ ಎಲ್ಲಾ ಕಾನೂನುಗಳು ಜಮ್ಮು-ಕಾಶ್ಮೀರಕ್ಕೆ
ಅನ್ವಯಿಸುತ್ತಿವೆ. ಈ ಹಿಂದಿದ್ದ ಕಾನೂನಿನ ಅನ್ವಯ, ಬೇರೆ ರಾಜ್ಯದಿಂದ ಕಾಶ್ಮೀರಕ್ಕೆ ಬರುವ ಜನರಿಗೆ ಹೂಡಿಕೆ ಮಾಡುವುದಕ್ಕಾಗಲೀ ಉದ್ಯಮಗಳನ್ನು ಕಟ್ಟುವುದಕ್ಕಾಗಲೀ ಅವಕಾಶವಿರಲಿಲ್ಲ. ಆದರೆ ೩೭೦ನೇ ವಿಧಿ ರದ್ದಾದ ತರುವಾಯ ಅನ್ಯರಾಜ್ಯದವರೂ ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ ಮಾಡ
ಬಹುದಾಗಿದೆ ಮತ್ತು ಇಲ್ಲಿ ಬಂದು ನೆಲೆಸಿ ಮತದಾನದ ಹಕ್ಕನ್ನು ಕೂಡ ಪಡೆಯಬಹುದಾಗಿದೆ.

‘ಇಂಡಿಯಾ ಟುಡೇ’ ಮತ್ತು ‘ಸಿ-ವೋಟರ್’ ಸಂಸ್ಥೆಗಳು ಇತ್ತೀಚೆಗಷ್ಟೇ ನಡೆಸಿದ ಸಮೀಕ್ಷೆಯು, ಮೋದಿ ಸರಕಾರದ ಸಾಧನೆ ಏನೆಂಬುದರ ಬಗ್ಗೆ ಒಂದು ಚಿತ್ರಣವನ್ನು ನೀಡಿತ್ತು. ಇದರ ಪ್ರಕಾರ ಮೋದಿ ಸರಕಾರದ ಮೊದಲ ಸಾಧನೆ ಕೋವಿಡ್ ಪಿಡುಗನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದು, ಎರಡನೇ ಸಾಧನೆ ಭ್ರಷ್ಟಾಚಾರರಹಿತ ಆಡಳಿತ, ಮೂರನೆ ಯದ್ದು ೩೭೦ನೇ ವಿಧಿಯನ್ನು ರದ್ದುಗೊಳಿಸಿದ್ದು. ಜಮ್ಮು- ಕಾಶ್ಮೀರ ಸಂಬಂಧಿತ ೩೭೦ನೇ ವಿಧಿಯನ್ನು ರದ್ದುಗೊಳಿಸಿದ್ದು ಸರಿ ಎನ್ನುವ ಅಭಿಪ್ರಾಯ ದೇಶದೆಲ್ಲೆಡೆಯಿಂದ ವ್ಯಕ್ತವಾಗಿದೆ.

೩೭೦ ಮತ್ತು ೩೫ ಎ ವಿಧಿಗಳ ಅನುಸಾರ, ‘ದೇಶದ್ದೆಲ್ಲಾ ಒಂದು ಲೆಕ್ಕವಾದರೆ, ಜಮ್ಮು-ಕಾಶ್ಮೀರದ್ದೇ ಪ್ರತ್ಯೇಕ ಲೆಕ್ಕ’ ಎನ್ನುವಂಥ ವಿಶೇಷಾಧಿಕಾರ ಇದ್ದುದರ ಜತೆಗೆ ಆ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಮತ್ತು ಸಂವಿಧಾನವನ್ನು ಕೂಡ ಪಡೆದುಕೊಳ್ಳಬಹುದಾಗಿತ್ತು. ಇದು ಕಾಂಗ್ರೆಸ್‌ನ ಆಡಳಿತಾವಧಿಯಲ್ಲಿ ಮತ್ತು ಕಳೆದ ೭೫ ವರ್ಷದಿಂದ ಕಣಿವೆರಾಜ್ಯಕ್ಕೆ ಸಿಕ್ಕ ವಿಶೇಷಾಧಿಕಾರ. ಹೀಗಾಗಿ ಭಾರತೀಯ ಸಂಸತ್‌ನಲ್ಲಿ ಅನುಮೋದನೆಗೊಂಡ ವಿಧೇಯಕ ಗಳನ್ನು ತಾನು ಒಪ್ಪಿಕೊಳ್ಳಬೇಕು ಎನ್ನುವಂಥ ಯಾವ ಆದೇಶವೂ ಇಲ್ಲದೆ ಜಮ್ಮು-ಕಾಶ್ಮೀರ ಕಾರ್ಯನಿರ್ವಹಿಸುತ್ತಿತ್ತು. ಇಂಥ ಎಲ್ಲ ವಿಶೇಷಾಧಿಕಾರಗಳನ್ನೇ ಮೋದಿ ಸರಕಾರ ರದ್ದುಗೊಳಿಸಿದ್ದು.

ಹೀಗೆ ರದ್ದುಗೊಳಿಸಿದ್ದು ತಪ್ಪು ಎಂಬ ವಿಚಾರವನ್ನು ಮುಂದು ಮಾಡಿಕೊಂಡು ಕೆಲವರು ಸುಪ್ರೀಂ ಕೋರ್ಟ್‌ನ ಮೊರೆಹೋಗಿದ್ದು, ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದವು.ಈಗ ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯ ಪೀಠದಿಂದ ಅವೆಲ್ಲದರ ವಿಚಾರಣೆ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಒಂದಷ್ಟು ಅಂಕಿ-ಅಂಶಗಳನ್ನು ಒಳಗೊಂಡ ಅಫಿಡ ವಿಟ್ ಅನ್ನು ಕೇಂದ್ರ ಸರಕಾರ ಸಲ್ಲಿಸಿದೆ. ಇದರ ಪ್ರಮುಖ ಅಂಶಗಳೇ ಆಕ್ಷೇಪಣಾಕಾರರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವಂತಿವೆ: ವಿಧಿ ೩೭೦ರ ರದ್ದತಿಯ ನಂತರ ಕಾಶ್ಮೀರದಲ್ಲಿ ಶೇ.೪೫.೨ರಷ್ಟು ಉಗ್ರಕೃತ್ಯಗಳು ಕಡಿಮೆಯಾಗಿವೆ. ಪಾಕಿಸ್ತಾನ ದಿಂದ ಜಮ್ಮು-ಕಾಶ್ಮೀರದೊಳಗೆ ನುಸುಳುತ್ತಿದ್ದ ಉಗ್ರರ ಸಂಖ್ಯೆ ಶೇ.೯೦.೨ರಷ್ಟು ತಗ್ಗಿದೆ. ಈ ಹಿಂದೆ ಪ್ರತಿ ಶುಕ್ರವಾರವು ಕಾಶ್ಮೀರದ ಸೈನಿಕರ ಪಾಲಿಗೆ ತಲೆನೋವಿನ ಸಂಗತಿಯಾಗಿತ್ತು, ಕಾರಣ ನಮಾಜ್ ಮುಗಿಯುತ್ತಿದ್ದಂತೆ ಸೈನಿಕರ ಮೇಲೆ ಕಲ್ಲುತೂರಾಟಗಳು ನಡೆಯುವುದು ಸರ್ವೇಸಾಮಾನ್ಯ ವಾಗಿತ್ತು.

೨೦೧೮ರಲ್ಲಿ ಇಂಥ ೧,೭೬೭ ಪ್ರಕರಣಗಳು ದಾಖಲಾಗಿದ್ದರೆ, ವಿಧಿ ೩೭೦ರ ರದ್ದತಿಯ ನಂತರ ೨೦೨೩ರಲ್ಲಿ ಇಂಥ ಒಂದೇ ಒಂದು ಪ್ರಕರಣವೂ ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿ. ೨೦೧೮ರ ಸಂದರ್ಭದಲ್ಲಿ ಕಾಶ್ಮೀರದಲ್ಲಿ ೫೨ ದಿನ ಸಂಘಟಿತ ಬಂದ್ ನಡೆದಿತ್ತು, ಆದರೆ ೨೦೨೩ರ ವೇಳೆ ಇಂಥ ಯಾವುದೇ ಬಂದ್ ಕಾಶ್ಮೀರದಲ್ಲಿ ಸಂಭವಿಸಿಲ್ಲ. ೩೭೦ನೇ ವಿಧಿ ರದ್ದಾದಾಗ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳನ್ನು ಕೇಂದ್ರಾಡಳಿತ  ಪ್ರದೇಶವಾಗಿ ಘೋಷಿಸಲಾಗಿತ್ತು. ಈ ಪೈಕಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿಯುತ್ತದೆ ಎನ್ನಲಾಗಿದೆ. ಅಂದರೆ, ಜಮ್ಮು-ಕಾಶ್ಮೀರಕ್ಕೆ ಸದ್ಯ ಕೊಡಮಾಡಿರುವ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ತಾತ್ಕಾಲಿಕ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಇಲ್ಲೂ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಾಗಲೇ ನಿರ್ಧರಿಸಿದ್ದು, ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಸಿದ್ಧಪಡಿಸುತ್ತಿದೆ.

ಜಿಲ್ಲಾ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದ ಚುನಾವಣೆಗಳು ಈಗಾಗಲೇ ಪೂರ್ಣಗೊಂಡಿವೆ. ಲೇಹ್‌ನಲ್ಲಿ ಚುನಾವಣೆ ಮುಗಿದಿದ್ದು, ಕಾರ್ಗಿಲ್‌ನಲ್ಲಿ ಶೀಘ್ರವೇ ಚುನಾವಣೆಗೆ ತಯಾರಿ ನಡೆಸಲಾಗುವುದು. ಮಾತ್ರವಲ್ಲದೆ, ನಂತರದ ದಿನಗಳಲ್ಲಿ ಪುರಸಭೆ ಚುನಾವಣೆ ನಡೆಸಿ, ತರುವಾಯ ವಿಧಾನಸಭಾ ಚುನಾವಣೆಗೂ ಮುಂದಾಗಲಿರುವುದಾಗಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ. ವಿಧಿ ೩೭೦ರ ರದ್ದತಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಅಪಘಾತ ಶೇ.೬೬ರಷ್ಟು ಕಡಿಮೆಯಾಗಿದೆ. ಜಮ್ಮು- ಕಾಶ್ಮೀರದ ಕ್ಷಿಪ್ರ ಅಭಿವೃದ್ಧಿಗೆ ಕೇಂದ್ರ ಸರಕಾರವು ಪಣ ತೊಟ್ಟಿರುವುದರಿಂದಾಗಿ ಸ್ಥಳೀಯ ಯುವಜನರಿಗೆ ಸಾಕಷ್ಟು ಉದ್ಯೋಗ ಸೇವೆಗಳು ದೊರೆಯುತ್ತಿವೆ ಎನ್ನಲಾಗಿದೆ.

ಕಾಶ್ಮೀರದ ಅಂದಿನ ಮಹಾರಾಜ ಹರಿಸಿಂಗ್, ತಮ್ಮ ಜನರಿಗೆ ವಿಶೇಷವಾದ ಸೌಲಭ್ಯಗಳು ದೊರಕುವಂತಾಗಬೇಕು ಎನ್ನುವ ಉದ್ದೇಶದಿಂದ ಸಂವಿಧಾನಕ್ಕೆ ೩೭೦ನೇ ವಿಧಿಯನ್ನು ಸೇರಿಸಲು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಆಗ್ರಹಿಸಿ ಆ ನಿಟ್ಟಿನಲ್ಲಿ ಒಂದಷ್ಟು ಷರತ್ತುಗಳನ್ನು ವಿಧಿಸಿದ್ದರು. ನೆಹರು ಅವನ್ನು ಒಪ್ಪಿ ಸಂವಿಧಾನದ ೨೧ನೇ  ಭಾಗದಲ್ಲಿ ೩೭೦ನೇ ವಿಧಿಯನ್ನು ಸೇರ್ಪಡೆ ಮಾಡಿದರು. ೧೯೫೪ರ ವೇಳೆ ರಾಷ್ಟ್ರಪತಿ ಆಡಳಿತದ ಮೂಲಕ ಈ ವಿಧಿಯನ್ನು (ಅಂದರೆ ವಿಶೇಷಾಧಿಕಾರವನ್ನು) ಕಾಶ್ಮೀರಕ್ಕೆ ನೀಡಲಾಯಿತು.ನೆಹರುರ ಈ ಒಂದು ತಪ್ಪುಹೆಜ್ಜೆಯು ಸಹಸ್ರಾರು ಹಿಂದೂಗಳ ಮಾರಣಹೋಮಕ್ಕೆ ಕಾರಣವಾಯಿತು. ಕಾಶ್ಮೀರದಲ್ಲಿ ಎಲ್ಲಿ ನೋಡಿದರಲ್ಲಿ ಗಲಭೆ, ದಾಳಿ, ಕಲ್ಲುತೂರಾಟ, ಉಗ್ರರ ಅಟ್ಟಹಾಸ, ನಾಗರಿಕರ ಮಾರಣ ಹೋಮ ನಡೆದು ಇಡೀ ಭಾರತವನ್ನು ಬೆಚ್ಚಿಬೀಳಿಸಿತ್ತು. ಒಟ್ಟಾರೆ ಹೇಳುವುದಾದರೆ, ನೆಹರು ತಮ್ಮ ರಾಜಕೀಯ ಲಾಭಕ್ಕಾಗಿ ಮಾಡಿದ ಈ ಒಂದು
ತಪ್ಪನ್ನು ಭಾರತೀಯರು ಯಾವತ್ತೂ ಮರೆಯದಂತಾಯಿತು.

ಆದರೆ ಸಮೃದ್ಧವಾದ ಭಾರತವೀಗ ಶಾಂತಿಯುತ ದಾರಿಯತ್ತ ಸಾಗುತ್ತಿದೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಸರಕಾರ ಮಾಡಿದ ಕುತಂತ್ರಗಳು ಎಳೆಎಳೆ ಯಾಗಿ ಹೊರ ಬರುತ್ತಿವೆ. ಆದರೆ, ದೇಶದ ರಕ್ಷಣೆಗಾಗಿ ಇತ್ತ ಪ್ರಧಾನಿ ಮೋದಿಯವರು ಹಗಲಿರುಳೂ ದುಡಿಯುತ್ತಿದ್ದರೆ, ಅತ್ತ ಕಾಂಗ್ರೆಸ್ ಮಾತ್ರ ಕುರ್ಚಿಯ ಲಾಲಸೆಗಾಗಿ ದೇಶವನ್ನೇ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ದೇಶವನ್ನೇ ಹಾಳುಮಾಡಲು ಹೊರಟಿದೆ. ೩೭೦ನೇ ವಿಽಯನ್ನು ರದ್ದು
ಮಾಡಿದ್ದು ತಪ್ಪಾದ ನಿರ್ಣಯ ಎಂದು ಸಮರ್ಥಿಸಿಕೊಂಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಅಲ್ಲಿಸಿ, ಅಲ್ಲಿ ವಿತಂಡವಾದ ಮಾಡಲು ತನ್ನ ಪಕ್ಷದ ಮಾಜಿ ಸದಸ್ಯನಿಗೇ ವಕಾಲತ್ತು ವಹಿಸಿದೆ. ಭಾರತದೆಲ್ಲೆಡೆ ಮೋದಿಯವರ ನಾಯಕತ್ವದ ಬಗ್ಗೆ ಸಾಕಷ್ಟು ಜನರು ಸಂತಸವನ್ನು ವ್ಯಕ್ತಪಡಿಸುತ್ತಿದ್ದು, ಇದನ್ನು
ಸಹಿಸಲಾರದ ಕಾಂಗ್ರೆಸ್ ಮಾತ್ರ ದಿನೇ ದಿನೆ ತನ್ನ ಅನುಚಿತ ಟೀಕೆಗಳಿಂದ ಗೇಲಿಗೊಳಗಾಗುತ್ತಿದೆ.

ಕಾಂಗ್ರೆಸ್‌ನಿಂದ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ಗೆ ಬಿಜೆಪಿಯು ಸಿದ್ಧಪಡಿಸಿ ಕಳಿಸಿರುವ ವರದಿಯು ನಿಜಕ್ಕೂ ದೇಶದ ಪರವಾಗಿದೆ ಎಂಬ ಆತ್ಮವಿಶ್ವಾಸ ಪ್ರತಿಯೊಬ್ಬ ದೇಶಭಕ್ತನಲ್ಲೂ ಮೂಡಿದೆ. ಮುಂಬರುವ ದಿನಗಳಲ್ಲಿ ಜಮ್ಮು-ಕಾಶ್ಮೀರ ಕೂಡ ಭಾರತದ ಸಂವಿಧಾನದ ಅಡಿಯಲ್ಲಿ ಬರುವ ಮುಖಾಂತರ ದೇಶದ ಆರ್ಥಿಕಾಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಲಿದೆ. ರಮ್ಯ ಪ್ರವಾಸಿ ತಾಣವಾಗಿರುವ ಈ ನೆಲೆಗೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿ, ಪ್ರವಾಸೋದ್ಯಮದ ಪಾಲಿಗೆ ಒಂದೊಳ್ಳೆ ಸೇರ್ಪಡೆಯಾಗಲಿದೆ  ಈ ಕಣಿವೆರಾಜ್ಯ. ‘ದೇಶದ ಜನರ ಸೇವಕನಾಗಿ ದುಡಿದು ಜನರ ಋಣವನ್ನು ತೀರಿಸುತ್ತೇನೆ’ ಎಂದಿದ್ದರು ಪ್ರಧಾನಿ ಮೋದಿ.

ಅದರಂತೆ, ಸನಾತನ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸುವ ಮುಖಾಂತರ ಭಾರತವನ್ನು ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಿಸಲು ಅವರು ಸಿದ್ಧರಾಗಿದ್ದಾರೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿರುವ ಮೋದಿ ಸರಕಾರ, ಇದರ ಜತೆಜತೆಗೆ ‘ಒಂದು ದೇಶ, ಒಂದು ಚುನಾವಣೆ’ ಎಂಬ ತನ್ನ ಪ್ರಸ್ತಾವನೆಯನ್ನೂ ಮುಂಬರುವ ದಿನಗಳಲ್ಲಿ ನಿರ್ಣಾಯಕ ಘಟ್ಟಕ್ಕೆ ತೆಗೆದುಕೊಂಡು ಹೋಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾಧನೆಯು ಹೀಗೆಯೇ ಮುಂದು ವರಿದು ಭಾರತವು ‘ವಿಶ್ವಗುರು’ ಎನಿಸಿಕೊಳ್ಳುವ ಕನಸು ಸದ್ಯದಲ್ಲಿಯೇ ಸಾಕಾರಗೊಳ್ಳಲಿದೆ ಎಂಬುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ.