ವರ್ತಮಾನ
maapala@gmail.com
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಪ್ರಯತ್ನಿಸಿ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಕೈಸುಟ್ಟುಕೊಂಡಿದ್ದ ಕಾಂಗ್ರೆಸ್, ೨೦೧೩ರ ವಿಧಾಸಭೆ ಆ ಆರೋಪದಿಂದ ತಕ್ಕ ಮಟ್ಟಿಗೆ ದೂರವಾಗಿತ್ತು. ಇದೀಗ ಜಾತಿ ಗಣತಿ ಹೆಸರಿನಲ್ಲಿ ಲಿಂಗಾಯತರಿಂದ ವ್ಯಕ್ತವಾಗುತ್ತಿರುವ ಪ್ರತಿರೋಧ ಕಡಿಮೆ ಮಾಡಲು ಶರಣ ಸಂಸ್ಕೃತಿಯನ್ನು ಇನ್ನಷ್ಟು ಪ್ರಚುರಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಅದರಲ್ಲೂ ವಿಶ್ವಗುರು ಬಸವಣ್ಣ ಹೆಸರಿನಲ್ಲಿ ನಡೆಸುತ್ತಿರುವ ಅಭಿಯಾನ ಬೇರೆಯದ್ದೇ ರಾಜಕೀಯ
ಲೆಕ್ಕಾಚಾರಗಳನ್ನು ಹೇಳುತ್ತಿದೆ.
೧೯೯೦ರಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರು ಪಾರ್ಶವಾಯು ಪೀಡಿತರಾದಾಗ ವಿಮಾನ ನಿಲ್ದಾಣದಲ್ಲಿ ಆದೇಶ ನೀಡಿ ಏಕಾಏಕಿ ಅವರನ್ನು
ಅಧಿಕಾರದಿಂದ ಕೆಳಗಿಳಿಸಿದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಈವರೆಗೂ ಆ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. ಈ ಮಧ್ಯೆ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಬೆಳೆದ ಮೇಲೆ, ಅದರಲ್ಲೂ ೧೯೯೯ರ ಬಳಿಕ ಲಿಂಗಾಯತರು ಬಿಜೆಪಿಯನ್ನು ಅಪ್ಪಿಕೊಂಡರು. ಕರಾವಳಿ, ಮಲೆನಾಡು ಹಾಗೂ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಬಿಜೆಪಿ ಗೆದ್ದಿದೆ ಮತ್ತು ಗೆಲ್ಲುತ್ತಿದೆ ಎಂಬುದಕ್ಕೆ ಪ್ರಮುಖ ಕಾರಣ ಲಿಂಗಾಯತ ಮತಬ್ಯಾಂಕ್. ೨೦೦೮ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕವಂತೂ ಅದು ಮತ್ತಷ್ಟು ಬಲವರ್ಧ ನೆಗೊಂಡಿತು.
೨೦೧೩ರಲ್ಲಿ ಅವರು ಪ್ರತ್ಯೇಕ ಪಕ್ಷ ಸ್ಥಾಪಿಸಿದಾಗ ಸಮುದಾಯದ ಒಂದು ಬಣ ಯಡಿಯೂರಪ್ಪ ಅವರನ್ನು ಮತ್ತು ಇನ್ನೊಂದು ಬಣ ಬಿಜೆಪಿಯನ್ನು ಬೆಂಬಲಿಸಿತೇ ಹೊರತು ಬೇರೆ ಪಕ್ಷದತ್ತ ಹೋಗಲಿಲ್ಲ. ಅದು ೨೦೧೯ರ ಚುನಾವಣೆಯಲ್ಲಿ ಮತ್ತೆ ಸಾಬೀತಾಯಿತು. ಮತ್ತೊಂದೆಡೆ ಲೋಕಸಭೆ ಚುನಾವಣೆಯಲ್ಲಂತೂ ೧೯೯೯ರಿಂದ ಸತತವಾಗಿ ಈ ಸಮುದಾಯ ಬಿಜೆಪಿಯ ಬೆನ್ನಿಗೆ ನಿಂತಿದೆ ಎಂಬುದಕ್ಕೆ ಬಂದಿರುವ ಫಲಿತಾಂಶಗಳೇ ಸಾಕ್ಷಿ. ಈ ಸಿಟ್ಟಿನಿಂದಲೋ ಏನೋ, ೨೦೧೩-೧೮ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುಂದಾಯಿತು. ಅದಕ್ಕಾಗಿ ನಿರ್ಣಯ ಕೈಗೊಂಡು ಪ್ರಸ್ತಾವನೆಯನ್ನು ಕೇಂದ್ರಕ್ಕೂ ಕಳುಹಿಸಿಕೊಟ್ಟಿತ್ತು. ಆದರೆ, ಕೇಂದ್ರ ಸರಕಾರ ಅದನ್ನು ತಿರಸ್ಕರಿಸಿತ್ತು. ಹೀಗಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಸಾಧ್ಯವಾಗಿರಲಿಲ್ಲ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಽಕಾರ ಕಳೆದುಕೊಳ್ಳಲು ಬಿಜೆಪಿಯ ಹಿಂದುತ್ವದ ಮಂತ್ರದ ಜತೆಗೆ ಇದೂ ಒಂದು ಕಾರಣವಾಗಿತ್ತು.
ನಂತರದಲ್ಲಿ ಮೈತ್ರಿ ಸರಕಾರ ರಚನೆ, ವರ್ಷದಲ್ಲೇ ಈ ಸರಕಾರ ಪತನಗೊಂಡು ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಮುಂತಾದ ರಾಜಕೀಯ ಬೆಳವಣಿಗೆಗಳು ನಡೆದವು. ಈ ಮಧ್ಯೆ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕಾರಣಕ್ಕೆ ಲಿಂಗಾಯತರು ಬೇಸರಗೊಂಡಿದ್ದರು. ಅದರಲ್ಲೂ ೨೦೨೩ರ ವಿಧಾನಸಭೆ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದಾಗ ಪಕ್ಷವು ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡಲಾಯಿತು.
ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಿದ ಕಾಂಗ್ರೆಸ್ ಲಿಂಗಾಯತ ಬೆಲ್ಟ್‌ನಲ್ಲೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ೨೦೧೯ರಲ್ಲಿದ್ದ ಲಿಂಗಾಯತ ವಿರೋಧಿ ಹಣೆಪಟ್ಟಿಯಿಂದ ಹೊರಬಂತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಜಾತಿ ಗಣತಿ ವಿಚಾರದಲ್ಲಿ ಮತ್ತೆ ಲಿಂಗಾಯತರ ವಿರೋಧ ಕಟ್ಟಿಕೊಳ್ಳು ವಂತಾಗಿದೆ. ಮತ್ತೊಂದೆಡೆ ಬಿಜೆಪಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂದು ಹೇಳಲಾದ ಬಿ.ಎಸ್.ಯಡಿಯೂರಪ್ಪ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಲಿಂಗಾಯತರು ಮತ್ತೆ ಬಿಜೆಪಿಯನ್ನು ಅಪ್ಪಿಕೊಳ್ಳಲಾರಂಭಿಸಿದ್ದಾರೆ.
ಹೀಗಾಗಿ ನಾವು ಲಿಂಗಾಯತ ವಿರೋಧಿಗಳಲ್ಲ ಎಂದು ನಿರೂಪಿಸಬೇಕಾದ ಪರಿಸ್ಥಿತಿ ಕಾಂಗ್ರೆಸ್ ಮತ್ತು ಪಕ್ಷದ ಸರಕಾರಕ್ಕೆ ಬಂದಿದೆ. ಈ ಕಾರಣಕ್ಕಾಗಿಯೇ ಸರಕಾರ ಶರಣ ಸಂಸ್ಕೃತಿಯ ಮೊರೆ ಹೋಗುತ್ತಿದೆ. ಜಗಜ್ಯೋತಿ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಅಳವಡಿಸಲಾಗುತ್ತಿದೆ. ಅಷ್ಟೇ ಅಲ್ಲ, ಬಸವಣ್ಣನವರ ಕಾಲ ದಲ್ಲಿದ್ದ ಮತ್ತು ನಂತರದ ಕಾಯಕ ಶರಣರ ಜಯಂತಿಗಳನ್ನು
ವಿಶೇಷ ಮುತುವರ್ಜಿಯಿಂದ ಆಚರಿಸಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಾಯಕ ಶರಣರ ಪ್ರತಿಮೆ, ಪುತ್ಥಳಿಗಳನ್ನು ಸ್ಥಾಪಿಸಲು ಯೋಚಿಸುತ್ತಿದೆ. ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಅವರ ಹೆಸರು ನಾಮಕರಣ ಮಾಡಲಾಗಿದೆ. ಬಜೆಟ್‌ನಲ್ಲೂ ವಿಶ್ವಗುರು ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯ ಅಭಿವೃದ್ಧಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಬಸವಣ್ಣನವರ ಬದುಕು, ಸಂದೇಶ, ಚಿಂತನೆಯನ್ನು ಪ್ರಚುರಪಡಿಸಲು ಬಸವ ಜಯಂತಿಯಂದು ಸರ್ವ ಧರ್ಮ ಸಂಸತ್ ಆಯೋಜನೆ, ಬಸವಣ್ಣ ಹಾಗೂ ಇತರ ಶರಣರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ವಚನ ಸಂಗ್ರಹಾಲಯ ಅಥವಾ ವಚನ ಮಂಟಪ ಸ್ಥಾಪನೆ ಮತ್ತಿತರ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.
ಈ ಪೈಕಿ ಅತ್ಯಂತ ಮಹತ್ವದ್ದೆಂದರೆ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವುದು ಮತ್ತು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜಕೀಯ ದಾಳವನ್ನೂ ಉದುರಿಸಿದೆ. ಜಗಜ್ಯೋತಿ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಸಂದರ್ಭದಲ್ಲಿ ‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ ಎಂಬ ಘೋಷವಾಕ್ಯವನ್ನು ಸಿದ್ಧಪಡಿಸಿರುವುದು. ಅಷ್ಟೇ ಅಲ್ಲ, ಇದೀಗ ‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ ಎಂಬ ಘೋಷವಾಕ್ಯವನ್ನು ರಾಜ್ಯಾದ್ಯಂತ ಮೊಳಗಿಸಲು ನಿರ್ಧರಿಸಿದೆ. ಬಸವಣ್ಣನವರನ್ನು ವಿಶ್ವಗುರು ಎಂದು ಮೊದಲಿನಿಂದಲೂ ಕರೆಯಲಾಗುತ್ತಿದೆ.
ಇದರ ಜತೆಗೆ ಅವರಿಗೆ ಭಕ್ತಿ ಬಂಡಾರಿ, ಕಾಯಕ ಯೋಗಿ, ಜಂಗಮಪ್ರಾಣಿ, ದಲಿತೋದ್ಧಾರಕ, ಅನುಪಮ ದಾಸೋಹಿ, ವಿಚಾರ ಕ್ರಾಂತಿಯ ನಿರ್ಮಾಪಕ. ಮಹಾ ಮಾನವತಾವಾದಿ, ಸಮಾನತೆಯ ಹರಿಕಾರ, ಪ್ರಥಮ ಪ್ರಮತಾಚಾರ್ಯ, ವಿಶ್ವದ ಶ್ರೇಷ್ಠ ದಾರ್ಶನಿಕ, ಮಹಾತ್ಮ ಹೀಗೆ ನಾನಾ ಉಪಾಧಿಗಳಿಂದ ಕರೆಯ ಲಾಗುತ್ತದೆ. ಅಷ್ಟೇ ಅಲ್ಲ, ಈ ಹಿಂದೆಯೇ ಅವರನ್ನು ಕನ್ನಡದ ಸಾಕ್ಷಿ ಪ್ರಜ್ಞೆ, ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಹೇಳಲಾಗುತ್ತಿತ್ತು. ಇದೀಗ ಕಾಂಗ್ರೆಸ್ ನಾಯಕ ಬಸವಣ್ಣ ಅವರಿಗೆ ಸಾಂಸ್ಕೃತಿಕ ನಾಯಕ ಎಂಬ ಬಿರುದನ್ನು ಅಧಿಕೃತಗೊಳಿಸುವುದರೊಂದಿಗೆ ಅದಕ್ಕೆ ಮೊದಲು ವಿಶ್ವಗುರು ಎಂಬ ಪದವನ್ನೂ ಸೇರಿಸಿದೆ. ಬಸವಣ್ಣ ನವರಿಗೆ ವಿಶ್ವಗುರು ಎಂಬ ಬಿರುದು ಅನ್ವರ್ಥವಾಗಿದೆ.
ಅಷ್ಟೇ ಅಲ್ಲ, ಅದಕ್ಕೆ ಅವರು ಅರ್ಹರೂ ಹೌದು. ಏಕೆಂದರೆ, ಸಮಾನತೆಯ ತತ್ವವನ್ನು ಪ್ರತಿಪಾದಿಸಿ, ಬ್ರಾಹ್ಮಣರಿಗೆ ಮಾತ್ರ ಮೀಸಲಾಗಿದ್ದ ಲಿಂಗಪೂಜೆಯನ್ನು ಎಲ್ಲಾ ಜಾತಿಯವರಿಗೂ ಹೇಳಿಕೊಟ್ಟು ಜಾತಿ-ಭೇದ ಹೋಗಲಾಡಿಸಲು ಪ್ರಯತ್ನಿಸಿಅವರು ವಿಶ್ವಕ್ಕೆ ದಾರಿ ತೋರಿಸಿದವರು. ಆದರೆ, ರಾಜ್ಯ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಾಗ ‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ ಎಂಬ ಘೋಷವಾಕ್ಯವನ್ನು ಅಧಿಕೃತ ಗೊಳಿಸುವುದರ ಹಿಂದೆ ಬಿಜೆಪಿಗೆ ಠಕ್ಕರ್ ನೀಡುವ ಉದ್ದೇಶವೂ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗುತ್ತಿದೆ. ಏಕೆಂದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭಾರತವನ್ನು ವಿಶ್ವಗುರುವಾಗಿ ಮಾಡಲು ನಿರ್ಧರಿಸಿದೆ. ಮುಂದಿನ ಐದು ವರ್ಷದಲ್ಲಿ ಭಾರತವನ್ನು ವಿಶ್ವಗುರುವಾಗಿ ಮಾಡುತ್ತೇನೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿದ್ದಾರೆ.
ಕರ್ನಾಟಕದ ಬಿಜೆಪಿ ನಾಯಕರು, ಭಾರತವನ್ನು ವಿಶ್ವಗುರುವಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಗುರು ಬಸವಣ್ಣನವರೇ ಪ್ರೇರಣೆ ಎಂದು ಹೇಳುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ನರೇಂದ್ರ ಮೋದಿ ಅವರನ್ನೇ ವಿಶ್ವಗುರು ಎಂದು ಬಣ್ಣಿಸಲಾರಂಭಿಸಿದ್ದಾರೆ. ಸದ್ಯದಲ್ಲೇ ಲೋಕಸಭೆ ಚುನಾವಣೆ ನಡೆಯಲಿರುವು ದರಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ಇದು ಅತ್ಯಂತ ಮಹತ್ವದ್ದಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ೧೩೬ ಸ್ಥಾನಗಳೊಂದಿಗೆ ಭರ್ಜರಿಯಾಗಿ ಗೆದ್ದಿದ್ದ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ತೋರಿದರೆ ಒಂದು ವರ್ಷದಲ್ಲೇ ಸರಕಾರ ಜನಪ್ರಿಯತೆ ಕಳೆದುಕೊಂಡಿದೆ ಎಂಬ ಅಪಖ್ಯಾತಿಗೆ ಒಳಗಾಗಬೇಕಾಗುತ್ತದೆ. ಮೇಲಾಗಿ ಹೈಕಮಾಂಡನ್ನು ಮೆಚ್ಚಿಸಲು ಲೋಕಸಭೆ ಚುನಾವಣೆಯಲ್ಲಿ ಕನಿಷ್ಟ ನಾಲ್ಕೈದು ಸ್ಥಾನಗಳನ್ನು ಗೆಲ್ಲಲೇ ಬೇಕಾಗಿದೆ.
ಅದಕ್ಕಾಗಿಯೇ ಬಸವಣ್ಣನವರ ಹೆಸರಿನ ಜತೆ ವಿಶ್ವಗುರು ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬಿಜೆಪಿಗೆ ತಿರುಗೇಟು ನೀಡುವುದು ಇದರ ಪ್ರಮುಖ ಉದ್ದೇಶ. ಭಾರತವನ್ನು ವಿಶ್ವಗುರು ಮಾಡಲು ಹೊರಟ ಪ್ರಧಾನಿ ನರೇಂದ್ರ ಮೋದಿಯವರನ್ನೇ ವಿಶ್ವಗುರು ಎಂದು ಬಿಜೆಪಿಯವರು ಬಿಂಬಿಸಿದರೆ, ಬಸವಣ್ಣನವರ ವಿಶ್ವಗುರು ಪಟ್ಟವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವ ಮೂಲಕ ಬಿಜೆಪಿ ಬಸವಣ್ಣನವರಿಗೆ ಅವಮಾನ ಮಾಡಿದೆ ಎಂದು ಬಿಂಬಿಸಿ ಅವರ ಅನುಯಾಯಿಗಳನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಲು ಒಂದೊಳ್ಳೆಯ ಅಸ ಕಾಂಗ್ರೆಸ್‌ಗೆ ಸಿಕ್ಕಿದಂತಾಗುತ್ತದೆ. ಇದರ ಜತೆಗೆ ಕಾಯಕ ಶರಣರಿಗಾಗಿ ಕಾಂಗ್ರೆಸ್ ಸರಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಹೆಚ್ಚು ಪ್ರಚಾರ ಮಾಡಿದರೆ ಲಿಂಗಾಯತರು ಸ್ವಲ್ಪ ಮಟ್ಟಿಗಾದರೂ ಕಾಂಗ್ರೆಸ್ ಬೆಂಬಲಿಸಬಹುದು. ಏಕೆಂದರೆ, ಬಿಜೆಪಿ-ಜೆಡಿಎಸ್ ಮೈತ್ರಿ
ಆಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಇರುವುದು ಉತ್ತರ ಕರ್ನಾಟಕ ಭಾಗದಲ್ಲಿ. ಅದರಲ್ಲೂ ಲಿಂಗಾಯತ ಸಮಾಜದವರು
ಹೆಚ್ಚಾಗಿರುವ ಕ್ಷೇತ್ರಗಳಲ್ಲಿ.
ಹೀಗಾಗಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಕಾಂಗ್ರೆಸ್‌ನ ತಂತ್ರಗಾರಿಕೆ ಲೋಕಸಭೆ ಚುನಾವಣೆಯಲ್ಲಿ ಅದಕ್ಕೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡ ಬಹುದು ಎಂಬುದಕ್ಕೆ ಫಲಿತಾಂಶ ಬರುವವರೆಗೆ ಕಾಯಬೇಕು. ಆದರೆ, ರಾಜ್ಯ ಕಾಂಗ್ರೆಸ್‌ನ ಈ ತಂತ್ರಗಾರಿಕೆಯ ಶಕ್ತಿ ರಾಷ್ಟ್ರೀಯ ನಾಯಕರಿಗೆ ಇಲ್ಲದಿರುವುದೇ ಸದ್ಯದ ಕೊರಗು.
ಲಾಸ್ಟ್ ಸಿಪ್: ಸೈನಿಕರು ಎಷ್ಟೇ ಗಟ್ಟಿಮುಟ್ಟಾಗಿದ್ದರೂ ಸೇನಾಽಪತಿ ಮತ್ತು ರಾಜ ಸರಿ ಇಲ್ಲದಿದ್ದರೆ ಯುದ್ಧ ಗೆಲ್ಲುವುದು ಅಸಾಧ್ಯ.