Wednesday, 11th December 2024

‌Vishweshwar Bhat Column: ಮೂತ್ರ ವಿಸರ್ಜಿಸಿ ರಾಣಿ ಸೇತುವೆಯನ್ನು ಉದ್ಘಾಟಿಸಬಹುದೇ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಎಲ್ಲಿಯ ತನಕ ಮನುಷ್ಯ ಬರೆಯುವುದನ್ನು ಮುಂದುವರಿಸುತ್ತಾನೋ, ಅಲ್ಲಿಯ ತನಕ ಮುದ್ರಣದೋಷ
(Misprint) ಗಳು ಮುಂದುವರಿಯುತ್ತವೆ. ಈ ಮಾತನ್ನು ಪತ್ರಿಕೆಗಳಿಗೆ ಅನ್ವಯಿಸುವುದಾದರೆ, ಎಲ್ಲಿಯ ತನಕ
ಪತ್ರಿಕೆಗಳು ಅಕ್ಷರಗಳನ್ನು ಮುದ್ರಿಸುವುದನ್ನು ಮುಂದುವರಿಸುವವೋ, ಅಲ್ಲಿಯ ತನಕ ಮುದ್ರಣದೋಷ ಆಗುವುದನ್ನು ತಪ್ಪಿಸಲು ಆ ಭಗವಂತನಿಂದಲೂ ಸಾಧ್ಯವಿಲ್ಲ. ಕಂಪ್ಯೂಟರಿನಲ್ಲಿ ‘ಸ್ಪೆಲ್ ಚೆಕ್’ ಸೌಲಭ್ಯ ಬಂದ ನಂತರ, ಮುದ್ರಣದೋಷ ಸ್ಥಗಿತಗೊಳ್ಳಬಹುದು ಎಂದು ಆಶಿಸಲಾಗಿತ್ತು.

ಆದರೆ ಅದು ಇನ್ನಷ್ಟು ಜಾಸ್ತಿಯಾಗಿದ್ದು ವಿಪರ್ಯಾಸ! ಬ್ರಿಟನ್‌ನಲ್ಲಿ ಸುಮಾರು 20 ವರ್ಷಗಳ ಹಿಂದೆ, ಪತ್ರಕರ್ತರು
ಮತ್ತು ಬರಹಗಾರರು ಸೇರಿ, ‘ಮುದ್ರಣದೋಷ ನಿವಾರಣೆ’ಗಾಗಿ ದುಂಡು ಮೇಜಿನ ಸಭೆಯನ್ನು ಕರೆದಿದ್ದರು. ಖ್ಯಾತ ನಾಮ ಸಾಹಿತಿಗಳು, ಸಂಪಾದಕರು, ಭಾಷಾವಿeನಿಗಳು, ವಿದ್ವಾಂಸರು, ಚಿಂತಕರು ಆ ಸಭೆಯಲ್ಲಿ ಭಾಗ ವಹಿಸಿದ್ದರು. ಎರಡು ದಿನಗಳ ಕಾಲ ನಡೆದ ಆ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದು, ‘ಮುದ್ರಣದೋಷವನ್ನು ಇಲ್ಲವೆನ್ನು ವಷ್ಟು ಕಮ್ಮಿ ಮಾಡುವುದು ಸಾಧ್ಯವಿದೆಯೇ ಹೊರತು ಅದನ್ನು ಸಂಪೂರ್ಣ ನಿರ್ಮೂಲನೆ ಮಾಡು ವುದು ಸಾಧ್ಯವಿಲ್ಲ.

ಕರಡು ತಿದ್ದುವಿಕೆ ಕೂಡ ಭಾಷೆಯ ಒಂದು ಅವಿಭಾಜ್ಯ ಅಂಗ. ಅದನ್ನೂ ಬರಹದ ಭಾಗವಾಗಿ ಪರಿಗಣಿಸಬೇಕು’ ಎಂಬ ನಿರ್ಣಯಕ್ಕೆ ಬಂದಿದ್ದರು. ಎಲ್ಲಿಯ ತನಕ ಮನುಷ್ಯ ಬರೆಯುವುದನ್ನು ಮುಂದುವರಿಸುತ್ತಾನೋ,
ಅಲ್ಲಿಯ ತನಕ ಕರಡು ತಿದ್ದುವುದು (ಪ್ರೂಫ್ ರೀಡಿಂಗ್)‌ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು. ಪತ್ರಿಕೆ ಗಳಲ್ಲಿ ಮುದ್ರಣದೋಷವನ್ನು ನಿಲ್ಲಿಸಲು ಸಾಧ್ಯವೇ ಇಲ್ಲ.

ನಡೆಯುವವನು ಜಾರಿ ಬೀಳುವಂತೆ, ಬರೆಯುವವನು ತಪ್ಪುಗಳನ್ನು ಮಾಡದೇ ಇರಲು ಸಾಧ್ಯವಿಲ್ಲ. 2003ರಲ್ಲಿ ಷೇಕ್ಸ್ ಪಿಯರ್ ಹುಟ್ಟೂರಿನಲ್ಲಿ ರಾಯಲ್ ಷೇಕ್ಸ್‌ಪಿಯರ್ ಥಿಯೇಟರ್, ಆ ಶ್ರೇಷ್ಠ ನಾಟಕಕಾರನ ಎಲ್ಲ ನಾಟಕಗಳ ಪ್ರದರ್ಶನವನ್ನು ಏರ್ಪಡಿಸಿತ್ತು. ಅದರ ಅಂಗವಾಗಿ, ಷೇಕ್ಸ್‌ಪಿಯರ್ 1590ರಲ್ಲಿ ಬರೆದಿದ್ದಾನೆನ್ನಲಾದ ಪ್ರಸಿದ್ಧ ಕಾಮಿಡಿ The Taming of the Shrew ಕೂಡ ಒಂದಾಗಿತ್ತು. ‘ದಿ ಗಾರ್ಡಿಯನ್’ ಪತ್ರಿಕೆ ಈ ನಾಟಕದ ಹೆಸರನ್ನು ಹೆಡ್‌ಲೈನ್‌ನಲ್ಲಿ The Taming of the Screw ಎಂದು ಮುದ್ರಿಸಿ ಯಡವಟ್ಟು ಮಾಡಿಬಿಟ್ಟಿತ್ತು.

ಐರಿಷ್ ಉಗ್ಗುವವರ ಸಂಘ (Irish Stammerer’s Association) ಉಗ್ಗುವವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು, ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಅವರಿಗೆ ಬೇಕಾದ ವೈದ್ಯಕೀಯ ನೆರವು ನೀಡುವುದೂ ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಸುದ್ದಿಯನ್ನು ‘ಐರಿಷ್ ಪೋಸ್ಟ್’ ಪತ್ರಿಕೆ ಪ್ರಕಟಿಸಿತ್ತು. ಆದರೆ ಅಪ್ರಜ್ಞಾಪೂರ್ವಕವಾಗಿ, ಉಗ್ಗುವವರನ್ನು ಅಣಕಿಸುವಂತೆ, ಕೆಲವು ಪದಗಳನ್ನು ಪುನರಾವರ್ತಿಸಿ ಆ ಪತ್ರಿಕೆ ಮುದ್ರಿಸಿಬಿಟ್ಟಿತ್ತು- The Irish Stammerer’s Association will hold a seminar will hold a seminar entitled Aids for Stammerer’s’
tonight.

ಬ್ರಿಟಿಷ್ ಪತ್ರಿಕೆಗಳ ಸುದ್ದಿಮನೆಗಳಲ್ಲಿ, ಕರಡು ತಿದ್ದುವ ಮಹತ್ವವನ್ನು ಹೇಳಲು ಒಂದು ಉದಾಹರಣೆಯನ್ನು ತಪ್ಪದೇ ಕೊಡುವುದುಂಟು. ಈ ನಿದರ್ಶನಕ್ಕೆ ಶತಮಾನಗಳ ಇತಿಹಾಸವಿದೆ. 19ನೇ ಶತಮಾನದಲ್ಲಿ ವಿಕ್ಟೋರಿಯಾ ರಾಣಿ ಹೊಸ ಸೇತುವೆಯೊಂದನ್ನು ಉದ್ಘಾಟಿಸುತ್ತಾ, ಆ ಸೇತುವೆ ಮೇಲೆ ಕೆಲ ಹೊತ್ತು ನಡೆದಾಡಿದಳು. ಆ ಸುದ್ದಿಗೆ ಉಪಸಂಪಾದಕ Queen Passes Over Bridge ಎಂಬ ಹೆಡ್‌ಲೈನ್ ಬರೆದಿದ್ದ. ಆದರೆ ಅದು ಪ್ರಿಂಟ್ ಆಗುವಾಗ, ಒಂದು ಅಕ್ಷರ ವ್ಯತ್ಯಾಸವಾಗಿ, ಮುದ್ರಣದೋಷದಿಂದ Queen Pisses Over Bridge (‘ಸೇತುವೆ ಮೇಲೆ ಮೂತ್ರ ವಿಸರ್ಜಿಸಿದ ರಾಣಿ’) ಎಂದಾಗಿ ಬಿಟ್ಟಿತು! ಅದನ್ನು ಯಾರೂ ಗಮನಿಸದಿದ್ದರಿಂದ, ಹಾಗೆಯೇ ಪ್ರಿಂಟ್ ಆಗಿಬಿಟ್ಟಿತು.

ಈ ದೋಷವನ್ನು ಬೆಳಗಿನ ಜಾವದ ಹೊತ್ತಿಗೆ ಪತ್ರಿಕೆ ಬಂಡಲ್ ಕಟ್ಟುವಾಗ ಯಾರೋ ಗಮನಿಸಿದರು. ತಕ್ಷಣ ವಿಷಯ ವನ್ನು ಸಂಪಾದಕರಿಗೆ ತಿಳಿಸಿದರು. ಪ್ರಮಾದದ ಪರಿಣಾಮವನ್ನು ಅರಿತ ಸಂಪಾದಕರು, ಯಾವ ಕಾರಣಕ್ಕೂ ಪತ್ರಿಕೆಯ ಪ್ರತಿಗಳನ್ನು ವಿತರಿಸಕೂಡದು ಮತ್ತು ಈಗಾಗಲೇ ಮುದ್ರಿತವಾದ ಪ್ರತಿಗಳನ್ನು ಯಾರ ಕೈಗೂ ಸಿಗದಂತೆ ನಾಶಪಡಿಸಿ ಎಂದು ಆದೇಶಿಸಿದರು. ಆದರೆ ಅಷ್ಟರೊಳಗೆ ನಗರದಾಚೆಗಿನ ಊರುಗಳಿಗೆ ಪತ್ರಿಕೆಯ ಕೆಲವು ಬಂಡಲ್‌ ಗಳು ರವಾನೆಯಾಗಿ ಬಿಟ್ಟಿದವು. ಅಂದು ಲಂಡನ್ ನಗರದಲ್ಲಿ ಆ ಪತ್ರಿಕೆ ಪೂರೈಕೆಯಾಗಲಿಲ್ಲ. ಆದರೆ ಕೆಲವು ಓದುಗರು ಆ ಮಹಾಪ್ರಮಾದವನ್ನು ಗುರುತಿಸಿದ್ದರು.

ಮರುದಿನ ಆ ಸಂಪಾದಕರಿಗೆ ಹೇಗಾಗಿರಬೇಡ? ಆ ಶೀರ್ಷಿಕೆ ಬರೆದ ಉಪಸಂಪಾದಕ, ಸಂಪಾದಕರನ್ನು ಹೇಗೆ
ಎದುರಿಸಿದನೋ, ಮುಂದೆ ಆತ ಏನಾದನೋ ಗೊತ್ತಾಗಲಿಲ್ಲ. ಒಂದು ವೇಳೆ ಆ ಶೀರ್ಷಿಕೆಯನ್ನು ರಾಣಿ ಓದಿದ್ದರೆ ಆಕೆಗೆ ಏನನಿಸಿರಬಹುದು? ಸ್ವಲ್ಪ ಊಹಿಸಿ. ಅಂತೂ ಇದು ಅತ್ಯಂತ ‘ಸಂಗ್ರಹ (ಅ)ಯೋಗ್ಯ ಶೀರ್ಷಿಕೆ’ ಎಂದು ಇತಿಹಾಸದಲ್ಲಿ ದಾಖಲಾಗಿ ಹೋಯಿತು.

ಈ ನಿದರ್ಶನಗಳ ಜತೆಗೆ, ಪತ್ರಿಕೆಯಲ್ಲಿ ಸಂಭವಿಸುವ ಮುದ್ರಣದೋಷಗಳು ಅದೆಂಥ ಹಾಸ್ಯವನ್ನು ಹುಟ್ಟಿಸುತ್ತವೆ
ಎಂಬ ಬಗ್ಗೆ ಸಂಸದ ಶಶಿ ತರೂರ್ ತಮ್ಮ A Wonderland of Words ಪುಸ್ತಕದಲ್ಲಿ ಬರೆದಿದ್ದಾರೆ. ಬಹಳ ವರ್ಷಗಳ
ಹಿಂದೆ, ಲಂಡನ್‌ನ ಕಾರ್ಖಾನೆಯ ಕಾರ್ಮಿಕ ನಾಯಕರು ತಮ್ಮ ಕಾರ್ಖಾನೆಯ ಸನಿಹದ ಬಾರ್‌ವೊಂದರಲ್ಲಿ ಸಭೆಯನ್ನು ಕರೆದಿದ್ದರು. ಆ ಬಾರ್ ಚಿಕ್ಕದಾದುದರಿಂದ, ಅಲ್ಲಿ ಎಲ್ಲರಿಗೂ ಆಸನ ವ್ಯವಸ್ಥೆ ಮಾಡುವುದು ಸಾಧ್ಯ ವಿರಲಿಲ್ಲ. ಈ ಸುದ್ದಿ South London Press ಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಸುದ್ದಿಯಲ್ಲಿ Bar ಎಂಬ ಪದ, ಅಕ್ಷರ ಪಲ್ಲಟವಾಗಿ Bra ಎಂದು ಪ್ರಿಂಟ್ ಆಗಿತ್ತು. ಅದು ಭಾರಿ ಯಡವಟ್ಟು ಅರ್ಥವನ್ನು ಮೂಡಿಸುವಂತಿತ್ತು- The strike leaders had called a meeting that was to have been held in a bra near the factory, but it was too small to hold them all.

ಪತ್ರಿಕೆಗಳಲ್ಲಿ ತಪ್ಪಾದಾಗ ಅದನ್ನು ಬಹಿರಂಗವಾಗಿ ಓದುಗರ ಮುಂದೆ ಒಪ್ಪಿಕೊಳ್ಳುವ ಸಂಪ್ರದಾಯವನ್ನು ಪ್ರಮುಖ ಬ್ರಿಟಿಷ್ ಮತ್ತು ಅಮೆರಿಕನ್ ಪತ್ರಿಕೆಗಳು ಆರಂಭಿಸಿದವು. ಸುಮಾರು 17 ವರ್ಷಗಳ ಹಿಂದೆ (2007ರಲ್ಲಿ), ಬ್ರಿಟನ್‌ನ ‘ದಿ ಗಾರ್ಡಿಯನ್’ ಪತ್ರಿಕೆ ತನ್ನ ಜನಪ್ರಿಯ Corrections & Clarifications ಅಂಕಣದಲ್ಲಿ ತನ್ನ ಒಂದು ವಿಚಿತ್ರ ತಪ್ಪಿಗೆ ಕ್ಷಮೆ ಯಾಚಿಸಿತ್ತು. ತಮಾಷೆ ಅಂದ್ರೆ ಆ ಅಂಕಣದಲ್ಲಿಯೇ ಪ್ರಮಾದವಾಗಿಬಿಟ್ಟಿತ್ತು- We misspelled the word
misspelled twice, as mispelled, in the Corrections & Clarifications column on September 26.

1999ರ ಜನವರಿ 26ರಂದು ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಅತ್ಯಂತ ಆಶ್ಚರ್ಯದ ಸಂಗತಿ ಎಂಬಂತೆ, ಯಾವ ಪುಟಗಳಲ್ಲೂ ಮುದ್ರಣದೋಷಗಳೇ ಕಾಣಿಸಿಕೊಳ್ಳಲಿಲ್ಲ. ಪತ್ರಿಕೆಯ Corrections & Clarifications ವಿಭಾಗದ ಮುಖ್ಯಸ್ಥ ಮತ್ತು ರೀಡರ್ಸ್ ಎಡಿಟರ್ ಇಯಾನ್ ಮೇಯಿಸ್ ಇನ್ನೊಮ್ಮೆ ಇಡೀ ಪತ್ರಿಕೆಯ ಪುಟಗಳ ಮೇಲೆ ಕಣ್ಣಾಡಿಸಿ, ಯಾವುದೇ ತಪ್ಪುಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡರು. ಎರಡನೇ ಸಲ ಓದಿದಾಗಲೂ ಅವರ ಕಣ್ಣಿಗೆ ಯಾವ ಮುದ್ರಣದೋಷ ಕಾಣಿಸಿಕೊಳ್ಳಲಿಲ್ಲ.

ಮರುದಿನ Corrections & Clarifications ಅಂಕಣದಲ್ಲಿ ಅವರು ಹೀಗೆ ಬರೆದಿದ್ದರು- The absence of corrections yesterday was due to a technical hitch rather than any sudden onset of accuracy (ನಿನ್ನೆಯ ಪತ್ರಿಕೆಯಲ್ಲಿ ಯಾವ ತಪ್ಪುಗಳೂ ಇಲ್ಲದಿರುವುದಕ್ಕೆ ತಾಂತ್ರಿಕ ತೊಡಕು ಕಾರಣವೇ ಹೊರತು ಹಠಾತ್ ಮೂಡಿದ ನಿಖರತೆ ಅಲ್ಲ). ಆರೋಗ್ಯಕ್ಕೆ ಸಂಬಂಽಸಿದ ಪುಸ್ತಕಗಳ ಪ್ರಕಾಶಕರು ಯಾವತ್ತೂ ಒಂದು ಮಾತನ್ನು ಹೇಳುತ್ತಾರೆ- Be careful about proofreading the health books, you may die of misprint.

ಪತ್ರಿಕೆಗಳಲ್ಲಿ ಪ್ರತಿದಿನವೂ ಆಗುತ್ತಿದ್ದ ಪ್ರಮಾದಗಳಿಂದ ಸಂಪಾದಕನೊಬ್ಬ ರೋಸಿಹೋದ. ಅದಕ್ಕೆ ಪೂರಕವಾಗಿ ಪತ್ರಿಕೆಯ ಮಾಲೀಕನೂ, ಸಂಪಾದಕನಿಗೆ ಆಗಾಗ ದಬಾಯಿಸುತ್ತಿದ್ದ. ಆದರೂ ಪತ್ರಿಕೆಯಲ್ಲಿ ತಪ್ಪುಗಳಾಗುತ್ತಿದ್ದವು. ಕೊನೆಗೆ ಸಂಪಾದಕ ಬೇರೆ ದಾರಿ ಕಾಣದೇ, ತಾನು ಕುಳಿತುಕೊಳ್ಳುವ ಆಸನದ ಹಿಂಬದಿಗೆ ಒಂದು ಸಾಲು ಬರೆದು ಗೋಡೆಗೆ ನೇತುಹಾಕಿದ್ದ. ಪತ್ರಿಕೆಯಲ್ಲಿ ತಪ್ಪಾದಾಗ, ಸಂಪಾದಕನನ್ನು ದಬಾಯಿಸಲು ಬರುತ್ತಿದ್ದ ಮಾಲೀಕ ಆ ಸಾಲುಗಳನ್ನು ನೋಡಿ ಸುಮ್ಮನೆ ಹೋಗುತ್ತಿದ್ದ. ಅಂದ ಹಾಗೆ, ಆತ ಗೋಡೆಯ ಮೇಲೆ ಹೀಗೆ ಬರೆಯಿಸಿದ್ದ- Knowledge rests not upon truth alone, but upon error also.

ಹೆಸರಿನ ಹವ್ಯಾಸ
ಕೆಲ ದಿನಗಳ ಹಿಂದೆ, ಕೇಂದ್ರ ಸಚಿವರೊಬ್ಬರು ಒಂದು ಕಟ್ಟಡವನ್ನು ಉದ್ಘಾಟಿಸಬೇಕಿತ್ತು. ಆದರೆ ಅವರು ಕೊನೆ ಕ್ಷಣದಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಕೈಕೊಟ್ಟರು. ಇದಕ್ಕೆ ಕಾರಣ ಕಟ್ಟಡದ ಮುಂಭಾಗದಲ್ಲಿ ಹಾಕಿದ ಕಲ್ಲಿನಲ್ಲಿ ಅವರ ಹೆಸರನ್ನು ಕೆತ್ತಿಲ್ಲದಿರುವುದು ಅವರ ಗಮನಕ್ಕೆ ಬಂದಿದ್ದು. ತಕ್ಷಣ ಕಾರ್ಯಕ್ರಮ ಸಂಘಟಕರು ಸಚಿವರನ್ನು ಭೇಟಿ ಮಾಡಿ ಆಗಿರುವ ಪ್ರಮಾದಕ್ಕೆ ಕ್ಷಮೆ ಯಾಚಿಸಿ, ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಂಡರು. ಆದರೆ ಸಚಿವರು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಅವರ ಊದಿದ ಮುಖ ಊದಿಕೊಂಡೇ ಇತ್ತು.

ಸಚಿವರ ಹೆಸರನ್ನು ಕಲ್ಲಿನಲ್ಲಿ ಕೆತ್ತಿಸದಿರಲು ಕಾರಣವೂ ಇತ್ತು. ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಕೊನೆ ಕ್ಷಣದವರೆಗೂ ಖಾತ್ರಿಪಡಿಸಿರಲಿಲ್ಲ. ತಾವು ಆ ದಿನ ಬೇರೆ ಊರಿನಲ್ಲಿರುವುದರಿಂದ, ಭಾಗವಹಿಸಲು ಸಾಧ್ಯ ವಾಗುತ್ತಿಲ್ಲ ಎಂದು ತಿಳಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಒಂದು ದಿನವಿರುವಾಗ ಬರುವುದಾಗಿ ತಿಳಿಸಿದರು. ಅಷ್ಟರೊಳಗೆ ಗಣ್ಯರ ಹೆಸರಿರುವ ಕಲ್ಲು ಸಿದ್ಧವಾಗಿತ್ತು. ‘ಕಾರ್ಯಕ್ರಮಕ್ಕೆ ಬನ್ನಿ, ಉದ್ಘಾಟನೆಯಾದರೇನಂತೆ, ನಂತರ ನಿಮ್ಮ ಹೆಸರನ್ನೂ ಕೆತ್ತಿ ಹೊಸ ಕಲ್ಲು ನೆಡುತ್ತೇವೆ’ ಎಂದು ಸಂಘಟಕರು ಹೇಳಿದರೂ, ತಮಗೆ ಅವಮಾನವಾಯಿ ತೆಂದು ಅವರು ಕಾರ್ಯಕ್ರಮದಿಂದ ದೂರವೇ ಉಳಿದರು. ಈ ಪ್ರಸಂಗವನ್ನು ನಮ್ಮ ವರದಿಗಾರರು ಹೇಳಿದಾಗ
ನನಗೆ ನೆನಪಾಗಿದ್ದು ಡಾ.ಪಾಟೀಲ ಪುಟ್ಟಪ್ಪನವರು ಸುಮಾರು 20 ವರ್ಷಗಳ ಹಿಂದೆ ಬರೆದ ‘ಹೆಸರಿನ ಹವ್ಯಾಸ’ ಎಂಬ ಲೇಖನ.

ಅವರು ಒಂದೆಡೆ ಹೀಗೆ ಬರೆಯುತ್ತಾರೆ- ತಾನು ಏನೋ ಒಂದನ್ನು ನೋಡಬೇಕು, ನೋಡಿದುದೆಲ್ಲವೂ ತನ್ನದೆನಿಸ ಬೇಕು ಎನ್ನುವ ಹಂಬಲ ಪ್ರತಿಯೊಬ್ಬ ಮನುಷ್ಯನಲ್ಲಿಯೂ, ಸಣ್ಣ ದೊಡ್ಡ ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಅದರ ಗಾತ್ರದಲ್ಲಿ ವ್ಯತ್ಯಾಸ ಇರಬಹುದು. ಆದರೆ, ಅದು ಇರುವುದೇನೂ ಸುಳ್ಳಲ್ಲ. ಮನುಷ್ಯನಲ್ಲಿರುವ ಆ ಅದಮನೀಯ ಆಸೆಯನ್ನು ಕವಿ ಶೆಲ್ಲೀ ತನ್ನ ಒಂದು ಪದ್ಯದಲ್ಲಿ ಅಜರಾಮರಗೊಳಿಸಿದ್ದಾನೆ. ‘ನಾನು ಏನು ಪರಿವೀಕ್ಷಣೆ ಮಾಡು ತ್ತಿರುವೆನೋ, ಅದೆಲ್ಲದರ ದೊರೆ ನಾನು’. ಶೆಲ್ಲಿಯ ‘ಒಝಮ್ಯಾಂಡಿಯಸ್’ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇದ್ದೇ ಇದ್ದಾನೆ. ತಾನು ಎಷ್ಟೇ ದಿನ ಇರಲಿ, ತನ್ನ ಹೆಸರಿಗೆ ಚಿರಂತನತೆ ಬರಬೇಕೆನ್ನುವ ಆಸೆ-ಆಕಾಂಕ್ಷೆ ಪ್ರತಿಯೊಬ್ಬ ನಲ್ಲಿಯೂ ಇದ್ದೇ ಇರುತ್ತವೆ.

ಮಂತ್ರಿ ಆದವರು ಸಾರ್ವಜನಿಕ ಕಾಮಗಾರಿಗಳು, ಕಟ್ಟೋಣಗಳು ತಮ್ಮಿಂದಲೇ ಆದವರಂತೆ ಅವುಗಳ ಫಲಕಗಳ
ಮೇಲೆ ತಮ್ಮ ಹೆಸರನ್ನು ಕೊರೆಸಿಕೊಳ್ಳಬೇಕೆನ್ನುತ್ತಾರೆ. ಹೆಸರಿನ ಹಪಾಹಪಿ ಅವರಿಗೆ ಹತ್ತಿಕೊಂಡಿರುತ್ತದೆ. ಅಡಿಗಲ್ಲು ಅನಾವರಣ ಎಂದರೆ ಅವರ ಹೃದಯ ಅರಳಿಕೊಳ್ಳುತ್ತದೆ. ಹೆಸರು ತಂದುಕೊಳ್ಳಬೇಕೆಂದು ಅಡಿಗಲ್ಲು ಇಡುವವರೂ ಇzರೆ. ಆಗುವ ಕೆಲಸಕ್ಕೆ ಕಲ್ಲು ಹಾಕುವವರೂ ಇದ್ದಾರೆ. ಇಂದಿರಾ ಗಾಂಧಿಯವರು ವಿಜಯನಗರ ಉಕ್ಕಿನ ಕಾರ್ಖಾನೆ ಗೋಸುಗ ಹೊಸಪೇಟೆಯ ತೋರಣಗಲ್ಲಿನಲ್ಲಿ 1971ರಲ್ಲಿ ಬಹು ಅದ್ದೂರಿಯ ಸಮಾರಂಭದಲ್ಲಿ ಅಡಿಗಲ್ಲನ್ನು ಇರಿಸಿದರು. ಅವರು ತಮಗೆ ಆಕಾಶವನ್ನೇ ತಂದುಕೊಟ್ಟರೆಂದು ಜನರು ಹುಚ್ಚೆದ್ದು ಕುಣಿದರು. ತೋರಣಗಲ್ಲಿನಲ್ಲಿ ತಾವು ಒಂದು ಬೃಹತ್ ಉಕ್ಕಿನ ಸ್ಥಾವರಕ್ಕೆ ಅಡಿಗಲ್ಲನ್ನು ಇರಿಸಿದ ಸಂಗತಿಯನ್ನು ಇಂದಿರಾ ಗಾಂಧಿ ಮರೆತೇಬಿಟ್ಟರು. ಅಮಾಯಕ ಜನರು ಮಾತ್ರ, ಅವರು ಅದನ್ನು ಮಾಡಿಯೇ ಮಾಡುತ್ತಾರೆಂದು ನಂಬಿದ್ದರು. ಜನರು ನಂಬುವಂತೆ ಮಾಡುವುದೇ ರಾಜಕಾರಣಿಯ ಮೂಲ ಬಂಡವಾಳವಾಗಿದೆ.

ಅವರು ಆ ಮಾತನ್ನು ಹೇಳಿ ತಮ್ಮ ಜನರನ್ನು ಗೆಲ್ಲಿಸಿದರು, ಅಧಿಕಾರ ಪಡೆದುಕೊಂಡರು, ಕಳೆದುಕೊಂಡರು, ಮತ್ತೆ
ಹಿಡಿದುಕೊಂಡರು. ನಂತರ ಅವರ ಮಗ ಬಂದ. ತಾಯಿ ಭರವಸೆ ನೀಡಿದುದನ್ನು ತಾನು ನೆರವೇರಿಸಿಕೊಡಬೇಕೆಂದು ಆ ಮಗನಿಗೂ ಅನಿಸಲಿಲ್ಲ. ಇಂದಿರಾ ಗಾಂಧಿಯ ಹೆಸರು ಕೊರೆದ ಆ ಕಲ್ಲು ಅಲ್ಲಿಯೇ ಬಿದ್ದುಕೊಂಡಿದೆ. ಅದರ ಉಪಯೋಗ ಯಾರಿಗೂ ಕಂಡಿಲ್ಲ. ನಾಯಿಗಳು ಮಾತ್ರ ತಿಳಿದುಕೊಂಡಿವೆ.

ಕೊನೆಗೆ, ಇಂದಿರಾ ಅಡಿಗಲ್ಲು ಇರಿಸಿದ 26 ವರ್ಷಗಳ ಬಳಿಕ, 1997ರಲ್ಲಿ ಜಿಂದಾಲ್ ಉಕ್ಕು ಕಾರ್ಖಾನೆ ಕಾರ್ಯಾ ರಂಭವಾಯಿತು!

ಪ್ರಧಾನ ಮಂತ್ರಿ ಪಿ.ವಿ.ನರಸಿಂಹರಾಯರು ಮಾಲ್ಡೀವ್ಸ್ ದ್ವೀಪರಾಷ್ಟ್ರಕ್ಕೆ ಹೋಗಿ, ಉಭಯ ದೇಶಗಳ ನಡುವಣ‌ ಸಂಬಂಧದ ಬೆಸುಗೆಯನ್ನು ಬಲಪಡಿಸಿಕೊಂಡು ಬಂದರು. ಅದೇ ಕಾಲಕ್ಕೆ ಅವರು ಅಲ್ಲಿ ಇನ್ನೊಂದು ಕೆಲಸವನ್ನೂ ಮಾಡಿದರು. ಅದು, 30 ವರ್ಷಗಳ ಹಿಂದೆ, ಜತ್ತಿ ಮಾಡಿದ ಕೆಲಸವನ್ನು ನೆನಪಿಗೆ ತಂದುಕೊಡುವಂಥದ್ದು. ಭಾರತವು ಆ ದೇಶಕ್ಕೆ ಇಂದಿರಾ ಗಾಂಧಿ ಹೆಸರಿನಲ್ಲಿ ಒಂದು ಬೃಹತ್ ಆಸ್ಪತ್ರೆಯ ಕೊಡುಗೆ ನೀಡುವುದಾಗಿ ವಚನ ಕೊಟ್ಟಿತ್ತು. 40 ಕೋಟಿ ರುಪಾಯಿ ವೆಚ್ಚದ ಆ ಸುಸಜ್ಜಿತ ಆಸ್ಪತ್ರೆಯನ್ನು ಉದ್ಘಾಟಿಸಿಯೂ ಆಗಿತ್ತು. ಆಕಾಶವಾಣಿ ಆ ಸುದ್ದಿಯನ್ನು ಬಿತ್ತರಿಸಿತು. ದೂರದರ್ಶನ ಆ ಚಿತ್ರ ತೋರಿಸಿತು.

ಪತ್ರಿಕೆಗಳು ಅದರ ಬಗೆಗೆ ಬರೆದವು. ಆದರೆ, ಬಹುತೇಕ ಪತ್ರಿಕೆಗಳು, ತಮ್ಮ ಓದುಗರಿಗೆ ಒಂದು ಸುದ್ದಿಯನ್ನು ತಿಳಿಸ ಲಿಲ್ಲ. ಅದೇನೆಂದರೆ, ಪ್ರಧಾನಿ ನರಸಿಂಹರಾಯರು ಉದ್ಘಾಟನೆ ಮಾಡಿದ ಇಂದಿರಾ ಗಾಂಧಿ ಆಸ್ಪತ್ರೆಯನ್ನು ಒಂದು ವರ್ಷದ ಹಿಂದೆಯೇ ಕೇಂದ್ರ ನಗರಾಭಿವೃದ್ಧಿ ಮಂತ್ರಿ ಶೀಲಾ ಕೌಲ್ ಉದ್ಘಾಟಿಸಿದ್ದರು. ನರಸಿಂಹರಾವ್ ಮಾಡಿದ ಕೆಲಸದ ಅನೌಚಿತ್ಯ ಹಾಗೂ ಅಸಂಬದ್ಧತೆ ತಿಳಿದ ಮೇಲೆ ಕತ್ತೆಗೆ ಕೂಡ ಜ್ವರ ಬರುವ ಸಮರ್ಥನೆಯನ್ನು ನೀಡಲಾಯಿತು.

ಯಶಸ್ವಿ ರಾಜಕಾರಣಿಯ ಬಗೆಗೆ ವಿನ್‌ಸ್ಟನ್ ಚರ್ಚಿಲ್ ಒಂದು ಮಾತು ಹೇಳಿದ್ದರು. ಇಂಥ ಒಂದು ಕೆಲಸ ರಾಜಕಾರಣಿ ಹೇಳಿದಂತೆ ಆಗದೇ ಹೋದರೆ, ಅದು ಏಕೆ ಆಗಲಿಲ್ಲ ಎನ್ನುವುದನ್ನು ನಂಬುವಂತೆ ಅವನು ಅದನ್ನು ಯಶಸ್ವಿ ರೀತಿಯಿಂದ ವಿವರಿಸಿ ಹೇಳುತ್ತಾನೆ. ಶೀಲಾ ಕೌಲ್ ಉದ್ಘಾಟಿಸಿದ್ದು ಆ ಆಸ್ಪತ್ರೆಯನ್ನು ಅಲ್ಲ. ಅದರ ಒಂದು ಭಾಗವನ್ನು ಮಾತ್ರ ಎಂಬ ಸ್ಪಷ್ಟೀಕರಣ ನೀಡಲಾಯಿತು. ಮಾಲ್ಡೀ ದೇಶದಲ್ಲಿ ಎದರೂ ಒಂದು ಕಡೆ ತಮ್ಮ ಹೆಸರು ಅಜರಾಮರವಾಗಿ ಇರಬೇಕು ಎಂದು ನರಸಿಂಹರಾಯರು ಬಯಸಿದ್ದಿರಬೇಕು. ಹೀಗಾಗಿ ಉದ್ಘಾಟನೆಯಾದ ಆಸ್ಪತ್ರೆಯನ್ನೇ ತಮ್ಮ ಹೆಸರಿನ ಚಪಲಕ್ಕೆ ಮತ್ತೊಮ್ಮೆ ಉದ್ಘಾಟನೆ ಮಾಡಿದ್ದರು.

ದೇಶ ಮತ್ತು ನದಿ
ಸಾಮಾನ್ಯವಾಗಿ ಯಾವ ದೇಶಕ್ಕೆ ಹೋದರೂ, ಯಾರೂ ಅಲ್ಲಿನ ನದಿಯನ್ನು ನೋಡದೇ ವಾಪಸ್ ಬರುವುದಿಲ್ಲ. ಅಷ್ಟಕ್ಕೂ ಎಲ್ಲಾ ದೇಶಗಳ ರಾಜಧಾನಿಗಳು ನದಿ ದಂಡೆಯ ಮೇಲೆಯೇ ನಿರ್ಮಾಣಗೊಂಡಿವೆ. ನದಿಗಳೇ ನಾಗರಿ ಕತೆಯ ತೊಟ್ಟಿಲು ತಾನೇ. ಥೇಮ್ಸ ನದಿ ಲಂಡನ್ನಿನ ಹೃದಯಭಾಗದಲ್ಲಿ ಹಾದುಹೋದರೆ, ಸಿಯೆನಾ ನದಿ ಪ್ಯಾರಿಸ್‌ನಲ್ಲಿ, ಮಾಸ್ಕೊವಾ ನದಿ ಮಾಸ್ಕೊದಲ್ಲಿ ಹಾದುಹೋಗುತ್ತವೆ. ಇದಕ್ಕೆ ದಿಲ್ಲಿಯೂ ಹೊರತಲ್ಲ. ಜೋರ್ಡಾನಿಗೆ ಹೆಸರು ಬಂದಿದ್ದೇ ಜೋರ್ಡಾನ್ ನದಿಯಿಂದ. ಆದರೆ 6 ದಿನ ಆ ದೇಶದಲ್ಲಿ ಓಡಾಡುವಾಗ, ಆ
ನದಿಯ ಅಸ್ತಿತ್ವವೇ ಅನುಭವಕ್ಕೆ ಬರಲಿಲ್ಲ. ಮದಾಬಾ ಸನಿಹದಲ್ಲಿರುವ ಮುಜೀಬ್‌ನಲ್ಲಿ ಅಣೆಕಟ್ಟೆಯೇನೋ ಕಂಡಿತು. ನಾವು ಅಲ್ಲಿಗೆ ಹೋದಾಗ, ಅದರ ಹಿಂಬದಿ ನೀರಿರಬಹುದು ಎಂದು ಯೋಚಿಸಿದರೆ, ಅಲ್ಲಿ ಹತ್ತಾರು ಕುರಿಗಳು ಮೇಯುತ್ತಿರುವುದು ಕಾಣಿಸಿತು. ಅಣೆಕಟ್ಟಿನ ಸಿಮೆಂಟು ಕುರುಹು ಇಲ್ಲದಿದ್ದರೆ ಅಂದು ನದಿಯಿತ್ತು ಎಂಬುದು ಸಹ ಗೊತ್ತಾಗುವುದಿಲ್ಲ.

ಜೋರ್ಡಾನಿನ ದಕ್ಷಿಣ ತುದಿಯಲ್ಲಿರುವ ಅಕಾಬಾ ಕೊಲ್ಲಿ ಯಿಂದ ಸಮುದ್ರ ನೀರನ್ನು ಸಿಹಿನೀರಾಗಿ (desalination) ಪರಿವರ್ತಿಸಿ, ದೇಶದ ಪ್ರಮುಖ ನಗರಗಳಿಗೆ ಸರಬರಾಜು ಮಾಡಲಾಗುತ್ತದೆ. ರಾಜಧಾನಿ ಅಮ್ಮಾನ್ ಮತ್ತು ಉತ್ತರ ತುದಿಯಲ್ಲಿರುವ ಇದ್ರಿಬ್ ನಗರಗಳಿಗೆ ಇಸ್ರೇಲ್‌ನಿಂದ ನೀರು ಪೂರೈಕೆಯಾಗುತ್ತದೆ. ಅರವತ್ತರ ದಶಕದಲ್ಲಿ ಇಸ್ರೇಲ್ -ಜೋರ್ಡಾನ್ ನಡುವಿನ ‘ಆರು ದಿನಗಳ ಯುದ್ಧ’ಕ್ಕೆ ಜೋರ್ಡಾನ್ ನದಿ ನೀರು ಹಂಚಿಕೆಯೂ ಒಂದು‌ ಕಾರಣ ವಾಗಿತ್ತು.

ಜೋರ್ಡಾನ್ ನದಿ ಇಸ್ರೇಲಿನ ಉತ್ತರದ ‘ಸೀ ಆಫ್‌ ಗೆಲೆಲಿ’ಯಲ್ಲಿ ಹುಟ್ಟಿ 251 ಕಿ.ಮೀ. ದಕ್ಷಿಣಾಭಿಮುಖವಾಗಿ
ಹರಿದು ಮೃತ ಸಮುದ್ರವನ್ನು ಸೇರುತ್ತದೆ. ಈ ನದಿಯ ಪಶ್ಚಿಮದ ದಂಡೆಯಲ್ಲಿರುವುದರಿಂದ ಪ್ಯಾಲೆಸ್ತೀನ್‌ಗೆ ‘ವೆ ಬ್ಯಾಂಕ್’ ಎಂದು ಹೆಸರು. ಇಸ್ರೇಲ್ ಕೂಡ ಈ ನದಿಯ ಪಶ್ಚಿಮಕ್ಕಿದೆ. ಜುದಾಯಿಗಳು ಮತ್ತು ಕ್ರಿಶ್ಚಿಯನ್ನರಿಗೆ ಈ ನದಿ ಪವಿತ್ರವಾದುದು. ಇಸ್ರೇಲ್, ಜೋರ್ಡಾನ್ ಮತ್ತು ಸಿರಿಯಾ ಈ ಮೂರೂ ದೇಶಗಳು ಜೋರ್ಡಾನ್ ನದಿಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ‌ ಕಾಲುವೆ ಮತ್ತು ಅಣೆಕಟ್ಟುಗಳನ್ನು ನಿರ್ಮಿಸಿಕೊಂಡಿರುವುದರಿಂದ ಆ ನದಿಯ ಮುಖಜ ಭೂಮಿಯನ್ನೇ ಹಾಳುಗೆಡವಿವೆ.

ಹೀಗಾಗಿ ಜೋರ್ಡಾನ್ ನದಿ ಜೋರ್ಡಾನಿನ ಅಲ್ಲಲ್ಲಿ ಸಣ್ಣ ತೊರೆಯಂತೆ, ಝರಿಯಂತೆ ಹರಿಯುತ್ತದೆ. ವರ್ಷದಲ್ಲಿ 3-4 ತಿಂಗಳು ಸಂಪೂರ್ಣ ಬತ್ತಿ ಹೋಗುವುದುಂಟು. ಹೀಗಾಗಿ ಜೋರ್ಡಾನ್ ದೇಶ ಅದೇ ಹೆಸರಿನ ನದಿಯ ಹೆಸರನ್ನಿಟ್ಟುಕೊಂಡು, ನೀರಿನ ಅಭಾವವನ್ನು ಎದುರಿಸುತ್ತಿರುವುದು ವಿಪರ್ಯಾಸವೇ ಸರಿ. ಅದೇ ನೀರನ್ನು ತಾನು ಸಂಪೂರ್ಣ ಬಳಸಿಕೊಂಡು, ಜೋರ್ಡಾನಿಗೆ ಇಸ್ರೇಲಿಗಳು ಆ ನೀರನ್ನು ಮಾರಾಟ ಮಾಡುತ್ತಿರುವುದು ಸಹ ವಿಪರ್ಯಾಸವೇ. ಜೋರ್ಡಾನ್ ದೇಶ ಮತ್ತು ಜೋರ್ಡಾನ್ ನದಿ ಬಗ್ಗೆ ಯೋಚಿಸಿದಾಗ, ಮಾರ್ಕ್ ಟ್ವೈನ್ ಹೇಳಿದ, ‘The Jordan river has great wisdom and whispers its secrets to the hearts of human beings’ ಎಂಬ ಮಾತು ಬತ್ತುತ್ತಿರುವ ಆ ನದಿಯ ಸೆಲೆಯಲ್ಲಿ ಆವಿಯಾಗುತ್ತಿರುವಂತೆ ಭಾಸವಾಗುತ್ತದೆ.

ಇದನ್ನೂ ಓದಿ: Vishweshwar Bhat Column: ಹೀಗಿದ್ದರು ರತನ್‌ ಟಾಟಾ