Saturday, 14th December 2024

Vishweshwar Bhat Column: ನಮ್ಮಲ್ಲಿರುವ ಓದದ ಪುಸ್ತಕಗಳ ಸಂಗ್ರಹಕ್ಕೆ ಏನೆಂದು ಕರೆಯುವುದು ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

vbhat@me.com

ಯಾವತ್ತೂ ನಮ್ಮ ಸಂಗ್ರಹದಲ್ಲಿ ನಾವು ಓದಿದ್ದಕ್ಕಿಂತ, ಓದದೇ ಇರುವ ಪುಸ್ತಕಗಳ ಸಂಖ್ಯೆಯೇ ಹೆಚ್ಚು ಇರುತ್ತ
ದಂತೆ. ಪುಸ್ತಕದ ಅಂಗಡಿಗೆ ಖುದ್ದಾಗಿ ಹೋಗಿ, ಆಸೆಪಟ್ಟು ಪುಸ್ತಕ ಖರೀದಿಸಿ ತಂದಿರುತ್ತೇವೆ. ಅದನ್ನು ಓದಬೇಕೆಂದು ಹಾಸಿಗೆಯ ಪಕ್ಕದ ಸೈಡ್ ಟೇಬಲ್ ಮೇಲೆ ಇಟ್ಟಿರುತ್ತೇವೆ. ಅದು ಎರಡು ತಿಂಗಳುಗಳಿಂದ ಅಲ್ಲಿಯೇ ಇದ್ದರೂ, ಒಮ್ಮೆಯೂ ಅದನ್ನು ಕೈಗೆತ್ತಿಕೊಂಡಿರುವುದಿಲ್ಲ.

ಹಾಗೆಯೇ ಆಸೆಪಟ್ಟು ಆನ್‌ಲೈನ್‌ನಲ್ಲಿ ಪುಸ್ತಕವನ್ನು ಆರ್ಡರ್ ಮಾಡಿ ತರಿಸಿಕೊಂಡಿರುತ್ತೇವೆ. ಮರುದಿನವೇ ಆ ಪುಸ್ತಕ ಬಂದಿದ್ದರೂ, ಅದರ ಮೇಲಿನ ಪ್ಲಾಸ್ಟಿಕ್ ಕವರನ್ನು ಸಹ ತೆಗೆದಿರುವುದಿಲ್ಲ. ಇಂದು ಓದಿದರಾಯಿತು, ನಾಳೆ ಓದಿದರಾಯಿತು ಎಂದು ಹಾಗೆಯೇ ಇಟ್ಟಿರುತ್ತೇವೆ. ಒಂದು ದಿನ ಆ ಪುಸ್ತಕದ ಮೇಲಿನ ಪ್ಲಾಸ್ಟಿಕ್ ಕವರನ್ನು ತೆಗೆದು ಒಂದು ಕ್ಷಣ ಅದರ ಮೇಲೆ ಕಣ್ಣಾಡಿಸಿ, ಇಂದಿನಿಂದ ಓದಬೇಕು ಎಂದು ಅಂದುಕೊಂಡಿರುತ್ತೇವೆ, ಆದರೆ ಓದಲು ಆರಂಭಿಸಿರುವುದಿಲ್ಲ. ನಮ್ಮ ಟೇಬಲ್ ಮೇಲೆ ಓದದೇ ಇರುವ ಪುಸ್ತಕಗಳ ಸಂಖ್ಯೆ ಹೀಗೆ ಜಾಸ್ತಿಯಾಗುತ್ತಾ ಹೋಗು ತ್ತದೆ.

ಈ ಮಧ್ಯೆ ಹೊಸ ಹೊಸ ಪುಸ್ತಕಗಳು ಈ ಸಂಗ್ರಹವನ್ನು ಸೇರುತ್ತಾ ಹೋಗುತ್ತವೆ. ಪ್ರತಿ ಹೊಸ ಪುಸ್ತಕ ಬಂದಾಗಲೂ,
ಈಗಾಗಲೇ ಇರುವ ಪುಸ್ತಕವನ್ನು ಓದದೇ ಇರುವ ಸಾಧ್ಯತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಕೊನೆಗೆ ನಮ್ಮ ಸಂಗ್ರಹ ದಲ್ಲಿ ಓದಿದ ಪುಸ್ತಕಗಳಿಗಿಂತ ಓದದೇ ಇರುವ ಪುಸ್ತಕಗಳೇ ತುಂಬಿ ಹೋಗುತ್ತವೆ. ಇಷ್ಟಾಗಿಯೂ ಹೊಸ ಪುಸ್ತಕ ತರುವ ಖಯಾಲಿ ನಿಂತಿರುವುದಿಲ್ಲ.

ನಮ್ಮ ಸಂಗ್ರಹದಲ್ಲಿರುವ ‘ಓದದೇ ಇರುವ ಪುಸ್ತಕ’ಗಳನ್ನು ಏನಂತ ಕರೆಯುವುದು? ಕನ್ನಡದಲ್ಲಿ ಇದಕ್ಕೆ ಸೂಕ್ತ ವಾದ ಪದವಿಲ್ಲ. ಪ್ರಾಯಶಃ ಕನ್ನಡಿಗರು ತಾವು ಖರೀದಿಸಿದ ಪುಸ್ತಕಗಳನ್ನು ಓದುವುದರಿಂದ, ಓದದೇ ಇರುವ ಪುಸ್ತಕಗಳನ್ನು ಬಣ್ಣಿಸಲು ಸೂಕ್ತವಾದ ಪದದ ಅಗತ್ಯ ಮನಗಾಣದಿರಬಹುದು ಎಂದು ಸಮರ್ಥನೆ ನೀಡಬಹುದು. ಆದರೂ ಎಲ್ಲ ಪುಸ್ತಕಪ್ರೇಮಿಗಳಲ್ಲೂ, ಓದದೇ ಇರುವ ಪುಸ್ತಕಗಳಂತೂ ಇದ್ದೇ ಇರುತ್ತವೆ.

ಓದದ ಪುಸ್ತಕಗಳ ಸಂಗ್ರಹಕ್ಕೆ ಸಮನಾದ ಪದ ಕನ್ನಡದಲ್ಲಂತೂ ಇಲ್ಲ. ಇಂಗ್ಲಿಷಿನಲ್ಲೂ ಅಂಥ ಪದ ಇಲ್ಲವಂತೆ. ಆದರೆ ಜಪಾನಿ ಭಾಷೆಯಲ್ಲಿ ಅದನ್ನು ಬಣ್ಣಿಸಲು ಒಂದು ಪದವಿದೆ. ಅದು ಸುಂಡೋಕು (Tsundoku).

ಜಗತ್ತಿನ ಯಾವುದೇ ಭಾಷೆಯದ್ದಾದರೂ ಆಗಿರಬಹುದು, ಪದಗಳನ್ನು ಕದಿಯುವುದರಲ್ಲಿ ಇಂಗ್ಲಿಷರು ನಿಸ್ಸೀಮರು. ಅವರು ತಮ್ಮ ಭಾಷೆಯನ್ನು ಸಮೃದ್ಧ ಮತ್ತು ಶ್ರೀಮಂತಗೊಳಿಸಿದ್ದೇ ಹಾಗೆ. ಪದಗಳನ್ನು ಸೇರಿಸಿಕೊಳ್ಳುವುದರಲ್ಲಿ ಅವರಿಗೆ ಮಡಿವಂತಿಕೆ ಇಲ್ಲವೇ ಇಲ್ಲ. ಸುಂಡೋಕು ಈಗಾಗಲೇ ಇಂಗ್ಲಿಷ್ ಪದಕೋಶ ಸೇರಿದೆ ಮತ್ತು ಬಳಕೆಗೂ ಬಂದಿದೆ. Tsundoku ಅಂದ್ರೆ ಇಂಗ್ಲಿಷ್ ಪದಕೋಶದಲ್ಲಿ Tsundoku is a Japanese term that refers to the practice of buying and collecting reading materials but never reading them ಎಂಬ ಅರ್ಥ ವ್ಯಾಖ್ಯಾನವನ್ನು ನೀಡಲಾ ಗಿದೆ. ಅದನ್ನು ವಾಕ್ಯದಲ್ಲಿ I want a stylish bookcase for my tsundoku (books) ಎಂದು ಹೇಳಬಹುದು.

2007ರಲ್ಲಿ ‘”The Black Swan’ ಕೃತಿ ರಚಿಸಿದ ನಸ್ಸಿಂ ನಿಕೋಲಸ್ ತಾಲಿಬ್ ಸುಂಡೋಕು ಪದಕ್ಕೆ ಸಮನಾಗಿ
antilibrary ಎಂಬ ಪದವನ್ನು ಹುಟ್ಟು ಹಾಕಿದರು. ಆದರೆ ಸಾಹಿತ್ಯವಲಯದಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು ಸುಂಡೋಕು. 2014ರಲ್ಲಿ ‘ಓಪನ್ ಕಲ್ಚರ್’ ಮ್ಯಾಗಜಿನ್‌ನಲ್ಲಿ Are you a book hoarder? There’s a word for that ಎಂಬ ಲೇಖನ ಪ್ರಕಟವಾಗಿತ್ತು. ಓದಿದ ಪುಸ್ತಕಗಳಿಗಿಂತ ಓದದೇ ಇರುವ ಪುಸ್ತಗಳು ಏಕೆ ಮುಖ್ಯ ಎಂಬ ಬಗ್ಗೆ ಮಾರಿಯ ಪೋಪೊವಾ ಬರೆದ ಲೇಖನದಲ್ಲಿ ಸುಂಡೋಕು ಪದದ ಮಹತ್ವವನ್ನು ವಿವರಿಸಿದ್ದರು.

ಅನೇಕರಿಗೆ ತಾವು ಮಲಗುವುದಕ್ಕಿಂತ ಮುನ್ನ, ಪುಸ್ತಕಗಳನ್ನು ತಿರುವಿ ಹಾಕುವ ಅಭ್ಯಾಸ. ನಿದ್ದೆ ಬರುವ ತನಕ ಪುಸ್ತಕಗಳನ್ನು ಓದುತ್ತಾರೆ. ಕಣ್ಣೊಳಗೆ ನಿದ್ದೆ ಇಳಿಯುತ್ತಿರುವಂತೆ, ಪುಸ್ತಕವನ್ನು ಪಕ್ಕದ ಟೇಬಲ್ ಮೇಲಿಟ್ಟು ಮಲಗುತ್ತಾರೆ. ಇನ್ನು ಕೆಲವರಿಗೆ ಹಾಸಿಗೆ ಮೇಲೆಯೇ ಪುಸ್ತಕ ಓದುವ ಹವ್ಯಾಸ. ನಾವು ಚಿಕ್ಕವರಿದ್ದಾಗ ಹಿರಿಯರು ‘ಹಾಸಿಗೆಯಲ್ಲಿ ಓದಬಾರದು. ಅದು ಒಳ್ಳೆಯ ಅಭ್ಯಾಸ ಅಲ್ಲ. ಅದು ದರಿದ್ರದ ಸಂಕೇತ. ಹಾಸಿಗೆ ಇರುವುದು ಮಲಗುವುದಕ್ಕೆ. ಓದಲು-ಬರೆಯಲು ಅಲ್ಲ.

ಎದ್ದು ಕುಳಿತು ಚಕ್ಕಳಪಟ್ಲೆ (ಚಕ್ಕಳ-ಮಕ್ಕಳ) ಹಾಕಿ (ಪದ್ಮಾಸನದಲ್ಲಿ) ಓದಿ’ ಎಂದು ಗದರುತ್ತಿದ್ದರು. ಅಂದರೆ ಹಾಸಿಗೆಯಲ್ಲಿ ಪುಸ್ತಕ ಓದುವುದು ನಮ್ಮ ಸಂಸ್ಕಾರ-ಸಂಸ್ಕೃತಿ ಅಲ್ಲ. ಹೀಗಾಗಿ ಕನ್ನಡದಲ್ಲಿ ಹಾಸಿಗೆಯಲ್ಲಿ ಓದುವ ಅಭ್ಯಾಸಕ್ಕೆ ಸಮನಾದ ಪದ ಇಲ್ಲ. ಆದರೆ ಈಗಲೂ ಇಟಲಿಯಲ್ಲಿ ಪುಸ್ತಕಗಳನ್ನು ಹಾಸಿಗೆಯಲ್ಲಿ ಓದುವ ಕ್ರಮವಿದೆ. ಪುಸ್ತಕ ಓದಲು ಅತ್ಯಂತ ಪ್ರಶಸ್ತ ಸ್ಥಳ ಅಂದ್ರೆ ಹಾಸಿಗೆ ಎಂದು ಅಲ್ಲಿನ ಜನ ಭಾವಿಸಿದ್ದಾರೆ.

ಹಾಸಿಗೆಯಲ್ಲಿ ಓದುವ ಕ್ರಮಕ್ಕೆ ಇತಿಹಾಸವಿದೆ. ಅದು ಅಲ್ಲಿನ ಪದ್ಧತಿ. ವರ್ಷದ ಹೆಚ್ಚಿನ ದಿನ ಅಲ್ಲಿ ಚಳಿಗಾಲ ವಿರುವುದರಿಂದ, ಬೆಚ್ಚಗೆ ಹಾಸಿಗೆಯಲ್ಲಿ ಕುಳಿತು ಓದುವ ಪರಿಪಾಠ ಬೆಳೆದುಬಂದಿದೆ. ಅಲ್ಲಿ ಚಕ್ಕಳ-ಮಕ್ಕಳ ಹಾಕಿ ಓದುವುದಂತೂ ಸಾಧ್ಯವೇ ಇಲ್ಲ. ಹಾಗೆ ಓದುವುದು ಶಿಕ್ಷೆಗೆ ಸಮ.

ಹೀಗಾಗಿ ಲ್ಯಾಟಿನ್ ಭಾಷೆಯಲ್ಲಿ ಹಾಸಿಗೆಯಲ್ಲಿ ಮಲಗಿ ಅಥವಾ ಕುಳಿತು ಓದುವುದಕ್ಕೆ ಒಂದು ಪದವಿದೆ. ಹಾಸಿಗೆ ಯಲ್ಲಿ ಓದುವವನಿಗೆ Librocubicularist ಅಂತಾರೆ. ಹಾಗಂದರೆ a person who enjoys reading in bed ಎಂದರ್ಥ. ಆ ಭಾಷೆಯಲ್ಲಿ liber ಅಂದರೆ ಪುಸ್ತಕ ಮತ್ತು cubiculum ಅಂದರೆ ಬೆಡ್ ರೂಮ್ ಎಂದರ್ಥ. ಈ ಪದವನ್ನೂ ಇಂಗ್ಲಿಷ್ ಭಾಷೆ ತನ್ನದನ್ನಾಗಿ ಮಾಡಿಕೊಂಡಿದೆ. 1919ರಲ್ಲಿಯೇ ಕ್ರಿಸ್ಟೋ-ರ್ ಮೋರ್ಲೆಯ್ ತನ್ನ The Haunted Bookshop ಕಾದಂಬರಿಯಲ್ಲಿ ಆ ಪದ (Your grandfather is such a librocubicularist! He keeps me up all night with that bedside lamp and loud page-turning) ವನ್ನು ಬಳಸಿದ್ದ.

ಎಂಜಲು ತಾಗಿಸಿ ನೋಟುಗಳನ್ನು ಎಣಿಸುವವರು ಪುಸ್ತಕದ ಪುಟಗಳನ್ನೂ ಹಾಗೆಯೇ ಸರಿಸುತ್ತಾರೆ. ಇದೊಂದು ಕೆಟ್ಟ ಅಭ್ಯಾಸ. ಪುಸ್ತಕ ಓದುವವರ ಇನ್ನೊಂದು ದುರಭ್ಯಾಸವಿದೆ. ಅದೇನೆಂದರೆ ತಾವು ಎಲ್ಲಿಯ ತನಕ ಓದಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಲು ಬುಕ್ ಮಾರ್ಕ್ ಅಥವಾ ಪೋ ಕಾರ್ಡ್, ದಪ್ಪನೆಯ ಕಾಗದ ಬಳಸುವ ಬದಲು, ತಾವು ಓದುತ್ತಿರುವ ಪುಟದ ಅಂಚನ್ನು ಮಡಚು (ಫೋಲ್ಡ್ ಮಾಡುವುದು) ವುದು. ಕೆಲವರಂತೂ ಇಡೀ ಪುಟವನ್ನು ಅರ್ಧಕ್ಕೆ ಇಸಿ ಮಾಡಿದವರಂತೆ ಮಡಚುತ್ತಾರೆ. ಇದು ಶಾಶ್ವತವಾಗಿ ಪುಸ್ತಕದ ಅಂದವನ್ನು ಹಾಳುಗೆಡವಿದಂತೆ.

ಒಂದು ಪುಸ್ತಕವನ್ನು ಓದುತ್ತಿರುವಾಗ, ಬೇರೆ ಕೆಲಸ ಬಂದಾಗ, ಎಲ್ಲಿ ತನಕ ಓದಿದ್ದೇವೆ ಎಂಬುದನ್ನು ನೆನಪಿಟ್ಟು ಕೊಳ್ಳಲು ‘ಬುಕ್ ಮಾರ್ಕ್’ ಬಳಸುವುದು ಒಳ್ಳೆಯ ಅಭ್ಯಾಸ. ಇಲ್ಲದಿದ್ದರೆ ಪುಟ ಸಂಖ್ಯೆಯನ್ನು ನೆನಪಿಟ್ಟು ಕೊಳ್ಳಬೇಕು. ಅಷ್ಟು ಸಣ್ಣ ಸಂಗತಿಯನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗದಿದ್ದರೆ, ಪುಸ್ತಕದಲ್ಲಿ ಓದಿದ ವಿಷಯ‌ ಗಳನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆ? ಅದರ ಬದಲು ಅನೇಕರು ತಕ್ಷಣ ಓದುತ್ತಿರುವ ಪುಟವನ್ನು ಮಡಚಿಡುತ್ತಾರೆ. ಇದನ್ನು ನಿಜವಾದ ಪುಸ್ತಕ ಪ್ರೇಮಿಗಳು ಇಷ್ಟಪಡುವುದಿಲ್ಲ. ಇದನ್ನು ಪುಸ್ತಕಕ್ಕೆ ಮಾಡಿದ ಗಾಯ ಅಂತ ಭಾವಿಸು ತ್ತಾರೆ. ಈ ಕಾರಣದಿಂದ ಪುಸ್ತಕವನ್ನು ಎರವಲು ಕೊಡುವುದಿಲ್ಲ. ಒಂದು ವೇಳೆ ಅಂಥ ಪ್ರಸಂಗ ಬಂದರೆ ’ಬುಕ್ ಮಾರ್ಕ್’ ಅನ್ನು ಪುಸ್ತಕದೊಳಗಿಟ್ಟು ಕೊಡುತ್ತಾರೆ.

ಇಂಗ್ಲಿಷಿನಲ್ಲಿ ಪುಸ್ತಕ ಮಡಚುವುದಕ್ಕೆ Dog’s Ear ಅಂತಾರೆ. ಇದಕ್ಕೆ ಇಂಗ್ಲಿಷ್ ಪದಕೋಶದಲ್ಲಿ A dog ear is a
folded down corner of a book page ಎಂಬ ಅರ್ಥವನ್ನು ನೀಡಿದ್ದಾರೆ. ಹದಿನೇಳನೆ ಶತಮಾನದಲ್ಲಿಯೇ ವಿಲಿಯಮ್ ಹಾಕಿನ್ಸ್ (For one whole yeere thou‌ must smooth out the dogs eares of all thy fellowes bookes)

ಈ ಪದವನ್ನು ಬಳಸಿದ್ದ. ಸುಮಾರು ಒಂಬತ್ತು ವರ್ಷಗಳ ಹಿಂದೆ, ಲಂಡನ್‌ನ ‘ದಿ ಗಾರ್ಡಿಯನ’ ಪತ್ರಿಕೆಯಲ್ಲಿ Bookmarks versus Dog ear: How you keep track of your reading ಎಂಬ ಸ್ವಾರಸ್ಯಕರ ಲೇಖನ ಪ್ರಕಟವಾಗಿತ್ತು.

ಆತ್ಮಹತ್ಯೆ (Suicide) ಇದ್ದ ಹಾಗೆ, ಪುಸ್ತಕಹತ್ಯೆ ಇದೆಯಾ? ಆದರೆ libricide ಎಂಬ ಪದವಂತೂ ಇದೆ. ಪುಸ್ತಕವನ್ನು ನಾಶಪಡಿಸುವುದಕ್ಕೆ, ಪುಸ್ತಕದ ಮುಖಪುಟವನ್ನು ಕಿತ್ತು, ಒಳಪುಟಗಳನ್ನು ಹರಿದು, ಪುಟಗಳನ್ನು ಬೇಕಾಬಿಟ್ಟಿ ಮಡಚಿ, ತೋಚಿದ್ದನ್ನೆಲ್ಲ ಗೀಚಿ, ಘಾಸಿಗೊಳಿಸಿ ವಿರೂಪಗೊಳಿಸುವುದಕ್ಕೆ biblioclasm ಅಥವಾ libricide ಎಂದು ಹೇಳುತ್ತಾರೆ. ಪುಸ್ತಕವನ್ನು ಸುಡುವ ಮತ್ತು ನಾಶಪಡಿಸುವ ಸಂಪ್ರದಾಯ ಪುಸ್ತಕದ ಹುಟ್ಟಿನಷ್ಟೇ ಹಳೆಯದು.

ಐರ್ಲ್ಯಾಂಡ್‌ನ ಡಬ್ಲಿನ್ ನಗರದಲ್ಲಿ ಪ್ರಸಿದ್ಧ ಟ್ರಿನಿಟಿ ಕಾಲೇಜ್ ಲೈಬ್ರರಿಯಿದೆ. ಅಲ್ಲಿ ಕಾಲಿಡುವುದಕ್ಕಿಂತ ಸುಮಾರು ಐವತ್ತು ಮೀಟರ್ ದೂರದಿಂದಲೇ ಹಳೆಯ ಪುಸ್ತಕಗಳ ವಾಸನೆ ಮೂಗಿಗೆ ಅಪ್ಪಳಿಸುತ್ತದೆ. ಜಗತ್ತಿನಲ್ಲಿಯೇ ಅತ್ಯಂತ ಪುರಾತನ ಪುಸ್ತಕಗಳ ಸಂಗ್ರಹ ಅಲ್ಲಿನ ಲೈಬ್ರರಿಯಲ್ಲಿದೆ. ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ನಿಂತ ಅನುಭವವಾಗುತ್ತದೆ. ಕೆಲವು ವರ್ಷಗಳ ಹಿಂದೆ, ನಾನು ಆ ಲೈಬ್ರರಿಗೆ ಹೋಗಿದ್ದೆ. ಅಲ್ಲಿಗೆ ಹೋಗುವುದು ನನ್ನ ಉದ್ದೇಶ ಆಗಿರಲಿಲ್ಲ. ಕಾಲೇಜಿನ ಆವರಣದಲ್ಲಿ ಓಡಾಡುವಾಗ, ಹಳೆ ಪುಸ್ತಕಗಳ ವಾಸನೆ ತೇಲಿ ಬಂದಾಗ, ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿತು.

ಪ್ರತಿ ಪುಸ್ತಕಕ್ಕೂ ಅದರದೇ ಆದ ವ್ಯಕ್ತಿತ್ವ ಇರುವಂತೆ, ಪ್ರತಿ ಪುಸ್ತಕಕ್ಕೂ ಅದರದ್ದೇ ಆದ ಒಂದು ವಾಸನೆ ಇರುತ್ತದೆ. ಈ ಎಲ್ಲ ಪುಸ್ತಕಗಳನ್ನು ಒಂದೆಡೆ ಇಟ್ಟರೆ ಅದರ ಮಿಶ್ರಣವಾಗಿ ಒಂದು ವಿಶೇಷ ವಾಸನೆ ಹೊರಹೊಮ್ಮುತ್ತಿರುತ್ತದೆ. ಅಂದು ಆ ಕಾಲೇಜಿನ ಗ್ರಂಥಾಲಯದಲ್ಲಿ ಅಂಥ ವಾಸನೆ ಹೀರಿದ ನೆನಪು ಈಗಲೂ ಇದೆ. ಅಲ್ಲಿಗೆ ಹೋದಾಗ, ಇನ್ನೊಂದು ವಿಷಯ ತಿಳಿಯಿತು. ಅದೇನೆಂದರೆ, ಡಬ್ಲಿನ್ ಸಮೀಪ ಒಂದು ಐರಿಷ್ ಊರು ಇದೆಯಂತೆ. ಅಲ್ಲಿನ ಬೀದಿಗಳಲ್ಲಿ ಓಡಾಡುವಾಗ ಹಳೆ ಪುಸ್ತಕಗಳ ವಾಸನೆ ಹೊರಸೂಸುವುದನ್ನು ಅನುಭವಿಸಬಹುದಂತೆ. ನಿಮಗೆ ಈ ಅಭ್ಯಾಸ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನಂತೂ ಯಾವುದೇ ಪುಸ್ತಕವನ್ನು ಖರೀದಿಸಿದಾಗ, ಅದರ ವಾಸನೆ ಯನ್ನು ಪದೇ ಪದೆ ಹೀರುತ್ತೇನೆ. ಪುಟಗಳನ್ನು ಸರಿಸುತ್ತ ಬೇರೆ ಬೇರೆ ಪುಟಗಳಲ್ಲಿ ಹುದುಗಿರುವ ವಾಸನೆಯನ್ನು ಎಳೆದುಕೊಳ್ಳುತ್ತೇನೆ. ಕಾಗದ, ಇಂಕ್, ಅಂಟಿನ (ಗಮ) ಮಿಶ್ರಣದಿಂದ ಒಂದು ವಿಶೇಷ ಪರಿಮಳ ಪುಸ್ತಕದಿಂದ ಹೊರಹೊಮ್ಮುತ್ತಿರುತ್ತದೆ. ಇದಕ್ಕೊಂದು ವಿಶೇಷ ಪದವಿದೆ ಎಂಬುದು ಸಂಸದ ಶಶಿ ತರೂರ್ ಅವರ ಅಂಕಣ ಓದುವ ತನಕ ಗೊತ್ತಿರಲಿಲ್ಲ. ಪುಸ್ತಕದ ವಾಸನೆ ಹೀರುವ ಕ್ರಿಯೆಗೆ Bibliosmia (the act of smelling books) ಅಂತಾರೆ.

ಗಣ್ಯ ವ್ಯಕ್ತಿಗಳನ್ನು ಬೆನ್ನಟ್ಟಿ ಫೊಟೋ ತೆಗೆಯುವ ಪಾಪರಾಜ್ಜಿಗಳಂತೆ, ತಾವು ಓದುವ ಪುಸ್ತಕಗಳ ಫೋಟೋ
ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಬೂಕರಾಜ್ಜಿ (Bookarazzi)ಗಳೂ ಇದ್ದಾರಂತೆ. ಅವರು
ಇzರೆ ಎನ್ನುವುದಕ್ಕೆ ಆ ಪದವೇ ನಿದರ್ಶನ. ಕನ್ನಡದಲ್ಲಿ ಸಹ ಪುಸ್ತಕ ಪ್ರೀತಿಯನ್ನು ಹೇಳುವ ಇಂಥ ಪದಗಳನ್ನು ಟಂಕಿಸುವ ಅಗತ್ಯವಿದೆಯೆಂದು ಅನಿಸುವುದಿಲ್ಲವಾ?

ಬೆಂಗಳೂರಿಗೂ ಬಂತು ತಂಬುಳಿ

ಕಳೆದ ಎರಡು ತಿಂಗಳುಗಳಿಂದ, ರಾಜರಾಜೇಶ್ವರಿನಗರದಲ್ಲಿರುವ ನಮ್ಮ ಆಫೀಸಿಗೆ ಹೋಗುವಾಗ ‘ತಂಬುಳಿಮನೆ’ ಬೋರ್ಡು ಕಣ್ಣಿಗೆ ಬೀಳುತ್ತಲೇ ಇತ್ತು. ಆದರೆ ಹೋಗಲು ಆಗಿರಲಿಲ್ಲ.

ತಂಬುಳಿ ಮಲೆನಾಡಿನ ಅದರಲ್ಲೂ ವಿಶೇಷವಾಗಿ, ಉತ್ತರಕನ್ನಡ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಗಳಲ್ಲಿ ತೀರಾ ಪರಿಚಿತವಾದ ಪಾನೀಯ. ಇದನ್ನು ಕುಡಿಯಬಹುದು ಮತ್ತು ಅನ್ನಕ್ಕೆ ಕಲಸಿಕೊಂಡು ಉಣ್ಣಬಹುದು. ಬೇರೆ ಬೇರೆ ಸೊಪ್ಪನ್ನು ಅರೆದು, ಮಜ್ಜಿಗೆಯೊಂದಿಗೆ ಬೆರೆಸಿ, ಉಪ್ಪು, ಒಗ್ಗರಣೆ ಹಿತಮಿತವಾಗಿ ಹಾಕಿದರೆ ತಂಬುಳಿ ಸಿದ್ಧ. ಹಳ್ಳಿ ಗಳಲ್ಲಿ ಊಟದ ಹೊತ್ತಿಗೆ ಅತಿಥಿಗಳು ಆಕಸ್ಮಿಕವಾಗಿ ಬಂದರೆ ಹತ್ತು ನಿಮಿಷಗಳಲ್ಲಿ ಸುಲಭವಾಗಿ ತಯಾರಿಸುವ ಪದಾರ್ಥಗಳಲ್ಲಿ ತಂಬುಳಿಯೂ ಒಂದು. ಬೇಸಿಗೆಯಲ್ಲಿ ಊಟದಲ್ಲಿ ಪದಾರ್ಥವಾಗಿ, ಬಾಯಾರಿ ಬಂದವರಿಗೆ ಪಾನೀಯವಾಗಿ ತಂಬುಳಿ ಜನಪ್ರಿಯ. ತಂಬುಳಿ ಗೊತ್ತಿಲ್ಲದ ಮಲೆನಾಡಿಗರು ಸಿಗಲಿಕ್ಕಿಲ್ಲ. ಅಂಥ ತಂಬುಳಿ ಬೆಂಗಳೂ ರಿಗೆ ಹರಿದು ಬಂದಿದೆಯಲ್ಲ ಎಂದು ಸಂತಸ ಮತ್ತು ಅಚ್ಚರಿ ಆಗಿತ್ತು. ಬಹಳ ದಿನಗಳಿಂದ ‘ತಂಬುಳಿಮನೆ’ಗೆ ಹೋಗಬೇಕು ಎಂದು ಅಂದುಕೊಳ್ಳುತ್ತಿದ್ದೆ.

ಮೊನ್ನೆ ಬೆಂಗಳೂರಿನ ಬನಶಂಕರಿ ಆರನೇ ಹಂತದಲ್ಲಿ ‘ತಂಬುಳಿಮನೆ’ ಬೋರ್ಡ್ ಕಂಡಾಗ ಅಲ್ಲಿಗೆ ಹೋಗದೇ ಇರಲು ಆಗಲಿಲ್ಲ. ಕಾಳುಮೆಣಸಿನ ಸಾರನ್ನು ಕುಡಿಯುವಾಗ, ‘ತಂಬುಳಿಮನೆ’ ಹಿಂದಿನ ವ್ಯಕ್ತಿ ಬಗ್ಗೆ ಕೌಂಟರಿನಲ್ಲಿದ್ದ ಹುಡುಗರನ್ನು ವಿಚಾರಿಸಿದೆ. ‘ನೀವು ಬಯಸಿದರೆ ಅವರನ್ನು ಭೇಟಿ ಮಾಡಬಹುದು, ಅವರು ಇಲ್ಲಿಯೇ ಇzರೆ’ ಎಂದು ಅವರು ಹೇಳಿದರು. ಮುಂದಿನ ಕ್ಷಣದಲ್ಲಿ ‘ತಂಬುಳಿಮನೆ’ ರೂವಾರಿ ಕಾರ್ತಿಕ್ ಎಚ್.ಶ್ರೀಧರ ಅವರ ಭೇಟಿಯಾ ಯಿತು. ಮೊದಲ ಭೇಟಿಯಲ್ಲಿಯೇ ಆತ್ಮೀಯರಾದ ಅವರು ‘ತಂಬುಳಿಮನೆ’ ಹಿಂದಿನ ಕಥೆಯನ್ನು ವಿವರಿಸಿದರು. ಮೂಲತಃ ಸಾಗರದವರಾದ ಕಾರ್ತಿಕ್ ಶ್ರೀಧರ ಬಿಟ್ಸ್ ಪಿಲಾನಿಯಲ್ಲಿ ಓದಿ, ವಿಪ್ರೋದಲ್ಲಿ ಹತ್ತಾರು ವರ್ಷ ಕೆಲಸ ಮಾಡಿ, ನಂತರ ಡ್ಯೂಯಿಷ್ ಬ್ಯಾಂಕ್ ಸೇರಿ, ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು, ಈಗ ತಮ್ಮ ಸ್ನೇಹಿತ ಪ್ರಶಾಂತ ಅವರೊಂದಿಗೆ ಸೇರಿ, ‘ತಂಬುಳಿಮನೆ’ ಆರಂಭಿಸಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಮೂರು ಔಟ್ಲೆಟ್ (ರಾಜರಾಜೇಶ್ವರಿನಗರ, ಜೆ.ಪಿ.ನಗರ ಮತ್ತು ಬನಶಂಕರಿ ಆರನೇ
ಹಂತ) ತೆರೆದಿದ್ದಾರೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದನ್ನು ಗಮನಿಸಿ, ಫ್ರಾಂಚೈಸಿಯನ್ನು ನೀಡಲು ನಿರ್ಧರಿಸಿದ್ದು, ಈಗಾಗಲೇ ಏಳು ಶಾಖೆಗಳನ್ನು ತೆರೆಯಲು ಜನ ಮುಂದೆ ಬಂದಿದ್ದಾರೆ.

ಸದ್ಯದಲ್ಲಿಯೇ ‘ತಂಬುಳಿಮನೆ’ ಬೆಂಗಳೂರಿನ ಎಲ್ಲ ಕಡೆಗಳಲ್ಲಿ ಪಸರಿಸಿದರೆ ಅಚ್ಚರಿಯಿಲ್ಲ. ಮಲೆನಾಡಿನಲ್ಲಿ ಮಾತ್ರ
ಲಭ್ಯವಿರುವ ಹಲವು ಸೊಪ್ಪು, ಬೇರುಗಳನ್ನು ಅಲ್ಲಿಂದಲೇ ತರಿಸಿ, ಸಂಸ್ಕರಿಸಿ, ಸೆಂಟ್ರಲೈಜ್ಡ್ ಕಿಚನ್‌ನಲ್ಲಿ ತಂಬುಳಿ ತಯಾರಿಸಿ, ಎಲ್ಲ ಶಾಖೆಗಳಿಗೆ ವಿತರಿಸಲಾಗುತ್ತಿದೆ. ‘ತಂಬುಳಿಮನೆ’ಯಲ್ಲಿ ಮಧ್ಯಾಹ್ನ ಅಪ್ಪಟ ಮಲೆನಾಡಿನ ಭೋಜನ ವ್ಯವಸ್ಥೆಯೂ ಇದೆ. ಬನಶಂಕರಿ ಆರನೇ ಹಂತದಲ್ಲಿರುವ ಶಾಖೆಯಲ್ಲಿ ಮಧ್ಯಾಹ್ನ ಬಾಳೆ ಎಲೆ ಊಟವೂ ಲಭ್ಯ.

ಮಲೆನಾಡಿನ ‘ತಂಬುಳಿ’ಗೆ ಕಾರ್ತಿಕ್ ಮತ್ತು ಅವರ ಸ್ನೇಹಿತರ ಪ್ರಯತ್ನದಿಂದಾಗಿ ಶುಕ್ರದೆಸೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ‘ತಂಬುಳಿಮನೆ’ ಒಂದು ಜನಪ್ರಿಯ ಬ್ರ್ಯಾಂಡ್ ಆದರೆ ಅಚ್ಚರಿಯಿಲ್ಲ. ಕಾರಣ ತಂಬುಳಿಗೆ ಜನರ ಬಾಯಿಚಪಲ ಗೆಲ್ಲುವ ತಾಕತ್ತಿದೆ. ತಂಬುಳಿ ಬರೀ ಪಾನೀಯ ಮಾತ್ರ ಅಲ್ಲ, ಅದಕ್ಕೆ ಔಷಽಯ ಗುಣವೂ ಇದೆ. ಆರೋಗ್ಯಕ್ಕೂ ಒಳ್ಳೆಯದು. ಯಾವುದೇ ಅಡ್ಡ ಪರಿಣಾಮವಂತೂ ಇಲ್ಲವೇ ಇಲ್ಲ. ‘ತಂಬುಳಿಮನೆ’ ಘೋಷವಾಕ್ಯ ‘ನಮ್ಮ ಅಜ್ಜಿ ಹೇಳಿಕೊಟ್ಟಿದ್ದು’ (My Grandma’s Recipe) ಅಂತಿದೆ. ಇದು ‘ತಂಬುಳಿ ಮನೆ’ಯ ಅಥೆಂಟಿಸಿಟಿಯನ್ನು ಹೆಚ್ಚಿಸಿದೆ. ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿನ ಕೆಲಸವನ್ನು ಬಿಟ್ಟು ‘ತಂಬುಳಿಮನೆ’ ಆರಂಭಿಸಿರುವ ಕಾರ್ತಿಕ್ ಮತ್ತು ಅವರ ಸ್ನೇಹಿತರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಅಜ್ಜಿಯೊಂದಿಗೇ ಕಾಲಗರ್ಭ ಸೇರಿ ಹೋಗುತ್ತಿದ್ದ ತಂಬುಳಿಗೆ ಕಾಯಕಲ್ಪ ನೀಡುವ ಅವರ ಪ್ರಯತ್ನವನ್ನು ಬೆಂಬಲಿಸಬೇಕಿದೆ. ಬಾಯಾರಿದ ಬೆಂಗಳೂರಿಗರಿಗೆ ‘ತಂಬುಳಿ ಮನೆ’ ಹೊಸ ಜಾಯಿಂಟ್ ಆಗುವುದರಲ್ಲಿ ಸಂದೇಹವಿಲ್ಲ. ಸಾಧ್ಯವಾದರೆ ಒಮ್ಮೆ ‘ತಂಬುಳಿಮನೆ’ಗೆ ಹೋಗಿ ಬನ್ನಿ, ನಾನು ಅದರ ಬಗ್ಗೆ ಬರೆದಿದ್ದು ಏನೇನೂ ಅಲ್ಲ ಎಂಬುದು ನಿಮಗೆ ಮನವರಿಕೆಯಾದೀತು.

ಇದನ್ನೂ ಓದಿ: Vishweshwar Bhat Column: ವಿಮಾನ ಸಂಚಾರ ನಿಯಂತ್ರಣ