ಅಂತರಂಗ
ಎಂ.ಶ್ರೀನಿವಾಸ್
ಎರಡೂವರೆ ದಶಕದಿಂದ ಸ್ನೇಹಿತನಾಗಿ, ವಿಶ್ವವಾಣಿ ಪತ್ರಿಕೆಯ ಆರಂಭಕ್ಕೂ ಮೊದಲಿನಿಂದ ಹತ್ತಿರದಿಂದ ನೋಡುತ್ತಿರುವ ನನಗೆ ಇಂದು ‘ವಿಶ್ವವಾಣಿ’ ಒಂಬತ್ತರ ಸಂಭ್ರಮಕ್ಕೆ ಕಾಲಿಟ್ಟಿದೆ ಎನ್ನುವಾಗ, ನನ್ನೊಳಗಿನ ಸಂತೋಷ, ತೃಪ್ತಿ ಹಾಗೂ ವಿಶ್ವೇಶ್ವರ ಭಟ್ಟರ ಮೇಲಿನ ಅಭಿಮಾನ ನೂರ್ಮಡಿಯಾಗುತ್ತಿದೆ. ಲಕ್ಷಾಂತರ
ಓದುಗರು ಇಂದು ಓದುತ್ತಿರುವ ಪತ್ರಿಕೆಯನ್ನು ಕಟ್ಟುವುದಕ್ಕೆ ಭಟ್ಟರು ಪಟ್ಟ ಕಷ್ಟ ಕೆಲವೇ ಕೆಲವರಿಗೆ ಗೊತ್ತಿದೆ. ಅದರಲ್ಲಿ ನಾನೂ ಒಬ್ಬ ಎನ್ನುವುದಕ್ಕೆ ಹೆಮ್ಮೆಯಿದೆ.
ವಿಶ್ವೇಶ್ವರ ಭಟ್ ಹಾಗೂ ನನ್ನ ನಡುವಿನ ಸ್ನೇಹ ೨೫ ವರ್ಷಗಳ ಹಿಂದಿನದ್ದು. ಈ ಎಲ್ಲ ವರ್ಷಗಳಲ್ಲಿ ನಾನು ಅವರನ್ನು ತೀರಾ ಹತ್ತಿರದಿಂದ ನೋಡಿದ್ದೇನೆ. ನಿತ್ಯ ಒಬ್ಬರಿಗೊಬ್ಬರು ಮಾತನಾಡದೇ ದಿನ ಆರಂಭವಾಗುವುದಿಲ್ಲ ಎನ್ನುವಷ್ಟು ಆಪ್ತತೆ ನಮ್ಮಲ್ಲಿದೆ. ಈಗಲೂ ನಾವೆಲ್ಲೇ ಇರಲಿ, ಎಷ್ಟೇ ಒತ್ತಡ ದಲ್ಲಿರಲಿ ದಿನಕ್ಕೆ ಕನಿಷ್ಠ ಎರಡು ಮಾತನಾಡಿಕೊಳ್ಳದಿದ್ದರೆ ಅಂದಿನ ದಿನ ಪೂರ್ಣವಾಗುವುದಿಲ್ಲ. ಇಷ್ಟು ಹತ್ತಿರದಿಂದ ನೋಡಿರುವುದರಿಂದ ವಿಶ್ವೇಶ್ವರ ಭಟ್ಟರು ಅಥವಾ ವಿಶ್ವವಾಣಿ
ನಡೆದು ಬಂದ ಹಾದಿ ಎನ್ನುವುದಕ್ಕಿಂತ ‘ಎಡವಿ ನಡೆದು ಬಂದ ದಾರಿ’ ಎಂದು ಹೇಳುವುದು ಸೂಕ್ತ ಎನಿಸುತ್ತದೆ.
ಪ್ರಜಾವಾಣಿಯ ಸಂಪಾದಕರಾಗಿದ್ದ ಟಿ.ಎಸ್. ರಾಮಚಂದ್ರ ರಾವ್ ಅವರು ಬರೆದಿರುವ ‘ಎಡವಿ ನಡೆದು ಬಂದ ದಾರಿ’ ಎನ್ನುವ ಪುಸ್ತಕದಲ್ಲಿ ‘ಪ್ರಜಾವಾಣಿ’ಯನ್ನು ಕಟ್ಟಿದ ಬಗೆಯನ್ನು ಹೇಳಿದ್ದಾರೆ. ವಿಶ್ವೇಶ್ವರ ಭಟ್ಟರು ಸಹ ವಿಶ್ವವಾಣಿಯನ್ನು ಕಟ್ಟಿ ಬೆಳೆಸುವಲ್ಲಿ ಪಟ್ಟ ಶ್ರಮ ಸಣ್ಣಪುಟ್ಟದಲ್ಲ ಎನ್ನುವುದು ಅಷ್ಟೇ ಸತ್ಯ. ಎಂಟು ವರ್ಷ ಪೂರೈಸಿ ಒಂಬತ್ತನೇ ವರ್ಷದ ಸಂಭ್ರಮ ದಲ್ಲಿರುವ ‘ವಿಶ್ವವಾಣಿ’ ಬಗ್ಗೆ ಹೆಚ್ಚು ಹೆಮ್ಮೆ ಎನಿಸುವುದಕ್ಕೆ ಕಾರಣವಿಲ್ಲವೆಂದಲ್ಲ. ಈ ಪತ್ರಿಕೆಯನ್ನು ಆರಂಭಿಸಿದಾಗ
ಹೂಡಿಕೆದಾರರನ್ನು ನಂಬಿದ್ದ ಭಟ್ಟರಿಗೆ, ಆ ವ್ಯಕ್ತಿಗಳು ಮೋಸ ಮಾಡಿ ಹೋದಾಗ ಸಂಸ್ಥೆಯ ಭವಿಷ್ಯದ ಪ್ರಶ್ನೆಯಿತ್ತು.
ವಿಶ್ವೇಶ್ವರ ಭಟ್ಟರಲ್ಲದೇ ಬೇರೆ ಯಾರೇ ಇದ್ದರೂ, ಅಂದೇ ಹಿಂದಕ್ಕೆ ಓಡಿ ಹೋಗುತ್ತಿದ್ದರು. ಪತ್ರಕರ್ತರೊಬ್ಬರು ಇಂತಹ ಸಂಸ್ಥೆಯನ್ನು ಕಟ್ಟಿ, ಬೆಳೆಸುವುದು ಸುಲಭವಲ್ಲ. ಆದರೆ ವಿಶ್ವೇಶ್ವರ ಭಟ್ಟರು ಈ ಎಲ್ಲ ಸವಾಲುಗಳನ್ನು ಮೀರಿ, ಸಂಸ್ಥೆಯನ್ನು ಕಟ್ಟಿದ್ದಾರೆ. ಇಂದು ಆ ಸಂಸ್ಥೆ ನವೋತ್ಸಾಹದಲ್ಲಿ ನಡೆಯುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಅವರ ಆಪ್ತ ಬಳಗದಲ್ಲಿದ್ದ ಅನೇಕರು ಧೈರ್ಯ ಹೇಳಿದ್ದೇವೆ. ಆದರೆ ನಾವೇನೇ ಹೇಳಿದರೂ, ಭಟ್ಟರಲ್ಲದೇ ಬೇರೆಯಾರೇ ಆಗಿದ್ದರೂ ನಿಭಾಯಿಸಲು ಆಗುತ್ತಿರಲಿಲ್ಲ. ಆದರೆ, ಭಟ್ಟರು ತಾವು ಕಂಡ ಕನಸನ್ನು ನನಸು ಮಾಡಲು ಪಟ್ಟ ಛಲ, ಹಿಡಿದ ಕೆಲಸವನ್ನು ಮಾಡಲೇಬೇಕೆಂಬ ಹಂಬಲ ಅವರಲ್ಲಿ ನೋಡಿದ್ದೇನೆ.
ಸಂಸ್ಥೆಯನ್ನು ಕಟ್ಟಿ ಬೆಳೆಸಲು ದಿನಕ್ಕೆ ಕೇವಲ ಒಂದೆರೆಡು ಗಂಟೆ ನಿದ್ದೆ ಮಾಡಿದ ನಿದರ್ಶನವೂ ನಮ್ಮ ಮುಂದಿವೆ. ಆ ಕಾರಣಕ್ಕಾಗೇ ಇಂದು ‘ವಿಶ್ವವಾಣಿ’ ಮನೆಮಾತಾಗಿದೆ. ಸಂಸ್ಥೆ ಸದೃಢಗೊಂಡ ಬಳಿಕ ಅವರ ಬಳಿ ಹಲವು ಬಾರಿ ಪತ್ರಿಕೆಯ ಪ್ರಸರಣ ಸಂಖ್ಯೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದ್ದೆ. ಆದರೆ ಈ ಮಾತು ಹೇಳಿದಾಗಲೆಲ್ಲ, ಅವರು ಹೇಳಿದ ಒಂದೇ ಮಾತೆಂದರೆ ‘ಕ್ವಾಂಟಿಟಿಗಿಂತ, ಕ್ವಾಲಿಟಿ’ ಮುಖ್ಯ. ಕ್ವಾಲಿಟಿಯತ್ತಲೇ ಹೆಚ್ಚು ಗಮನ ಹರಿಸುತ್ತೇನೆ ಎನ್ನುವ ಮಾತನ್ನು ಹೇಳಿದ್ದರು. ಆದ್ದರಿಂದ ಪ್ರಸರಣ ಹೆಚ್ಚಿಸು ವುದಕ್ಕಿಂತ ಹೆಚ್ಚಾಗಿ ನಿತ್ಯ ಮುಂಜಾನೆ ರಾಜ್ಯದ ಓದುಗರಿಗೆ ಯಾವ ರೀತಿಯಲ್ಲಿ ಸುದ್ದಿಹೂರಣವನ್ನು ಕಟ್ಟಿಕೊಡಬಹುದು ಎನ್ನುವ ವಿಷಯದಲ್ಲಿ ಹೆಚ್ಚು ಯೋಚಿಸುತ್ತಾರೆ ಎಂದರೆ ತಪ್ಪಾಗುವುದಿಲ್ಲ.
ವಿಶ್ವೇಶ್ವರ ಭಟ್ಟರು ಹಾಗೂ ವಿಶ್ವವಾಣಿ ಬಗ್ಗೆ ನನಗೆ ಹಾಗೂ ಅಂಕಣಕಾರ, ರಮಣಶ್ರೀ ಸಮೂಹ ಸಂಸ್ಥೆಯ ಎಸ್.ಷಡಕ್ಷರಿ ಅವರಿಗೆ ಒಂದು ಆರೋಪವಿದೆ. ಇದನ್ನು ಹಲವು ಬಾರಿ ಭಟ್ಟರ ಬಳಿಯೂ ಹೇಳಿದ್ದೇವೆ. ಅದೇನೆಂದರೆ, ವಿಶ್ವವಾಣಿ ಒಂದೇ ಪತ್ರಿಕೆಯನ್ನು ಓದಲು ಕನಿಷ್ಠ ಎರಡು ಗಂಟೆ ಅಗತ್ಯವಿದೆ. ಏಕೆಂದರೆ ಪತ್ರಿಕೆಯಲ್ಲಿ ಅಷ್ಟು ಪ್ರಮಾಣದಲ್ಲಿ ಸುದ್ದಿಗಳು, ಲೇಖನಗಳು ಪ್ರಕಟವಾಗುತ್ತಿವೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಗಳನ್ನು ನೀಡುವ ವಿಶ್ವವಾಣಿಯನ್ನು ಓದುವುದಕ್ಕೆ ಒಂದು ರೀತಿಯ ಮಜಾ ಇರುತ್ತದೆ. ಯಾರೇ ಆಗಲಿ ವಿಶ್ವವಾಣಿಯನ್ನು ಓದಿ ಮುಗಿಸಿದರೆ, ಆ ದಿನ ‘ಸಂತೃಪ್ತ
ಸುದ್ದಿ’ ಓದಿದ ಅನುಭವವಾಗುವುದರಲ್ಲಿ ಅನುಮಾನವೇ ಇಲ್ಲ. ಈ ಪ್ರಮಾಣದ ಸುದ್ದಿಯನ್ನು ನೀಡುವುದರಿಂದಲೇ, ವಿಶ್ವವಾಣಿ ಓದಿದ ಬಳಿಕ ಇನ್ನುಳಿದ ೧೦ ಪತ್ರಿಕೆಗಳನ್ನು ಕೇವಲ ಅರ್ಧ ಗಂಟೆಯನ್ನು ಓದಿ ಮುಗಿಸಬಹುದು.
ಬೆಳಗ್ಗೆ ೪ರವರೆಗೆ ಅಂಕಣ ಬರೆದಿದ್ದರು ಇನ್ನು ನಾನು ಅವರು ಒಟ್ಟಿಗೆ ಸುಮಾರು ೨೫ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದೇವೆ. ಅವರು ಯಾವುದೇ ದೇಶಕ್ಕೆ ಹೋದರೂ, ವಿಶ್ವವಾಣಿಯ ಮೇಲಿನ ನಿಗಾ ಮಾತ್ರ ಒಂದು ಚೂರೂ ಕಡಿಮೆಯಾಗುವುದಿಲ್ಲ. ಕೆಲ ವರ್ಷದ ಹಿಂದೆ ಅಮೆರಿಕ ಪ್ರವಾಸದ ಸಮಯದಲ್ಲಿ, ಸ್ಥಳೀಯ ನಗರಗಳನ್ನು ಸುತ್ತಿಕೊಂಡು ರೂಮಿಗೆ ವಾಪಸಾದಾಗ ರಾತ್ರಿ ಒಂದು ಗಂಟೆ ಯಾಗಿತ್ತು. ನಾವೆಲ್ಲ ಮಲಗಲು ಸಜ್ಜಾದರೆ, ಭಟ್ಟರು ಮಾತ್ರ ತಮ್ಮ ಅಂಕಣ ಬರೆಯಲು ಸಜ್ಜಾಗಿದ್ದರು! ಬೆಳಗಿನ ಜಾವ ನಾಲ್ಕು ಗಂಟೆವರೆಗೆ ತಮ್ಮ ಅಂಕಣ ಬರೆಯುವ ಕೆಲಸವನ್ನು ಮುಗಿಸಿದ ಬಳಿಕವೇ ಅವರು ಮಲಗಿದ್ದು. ಇದು ಅವರ
ಬದ್ಧತೆಗೆ ಸಾಕ್ಷಿ. ಅವರೊಂದಿಗೆ ಹಲವು ದೇಶಗಳನ್ನು ಸುತ್ತಿದ್ದರೂ, ಅವರಷ್ಟು ದೇಶಗಳನ್ನು ಸುತ್ತಿಲ್ಲ, ‘ದೇಶ ಸುತ್ತು; ಕೋಶ ಓದು’ ಎನ್ನುವ ಮಾತು ಸರಿಯಾಗಿ ಅನ್ವಯಿಸುತ್ತದೆ.
ವಿಶ್ವೇಶ್ವರ ಭಟ್ ಅವರ ಬಗ್ಗೆ ಅಭಿಮಾನ ಹೆಚ್ಚುವುದಕ್ಕೆ ಮತ್ತೊಂದು ಕಾರಣವೆಂದರೆ, ಅವರು ನಡೆದು ಬಂದಿರುವ ಹಾದಿ. ಕಳೆದ ವಾರವಷ್ಟೇ ಅವರ ಊರಿಗೆ ಹೋಗಿದ್ದೆ. ಸ್ನೇಹಿತ ಹೊಸಬಾಳೆ ವೆಂಕಟೇಶ್ ಹೆಗಡೆ ಅವರೊಂದಿಗೆ ಹೋಗಿ ಭಟ್ಟರು ಓದಿದ ಶಾಲೆ, ಅಜ್ಜನ ಮನೆ ಎಲ್ಲವನ್ನು ನೋಡಿಕೊಂಡು ಬಂದೆ. ಅಜ್ಜನ ಮನೆಯಿಂದ ಶಾಲೆಗೆ ಸುಮಾರು ಐದು ಕಿಮೀ ದೂರವಿದ್ದು, ರಸ್ತೆಯಿಲ್ಲ. ಕಲ್ಲು-ಮುಳ್ಳಿನ ಹಾದಿಯಲ್ಲಿ ಚಪ್ಪಲಿಯಿಲ್ಲದೇ ನಿತ್ಯ ಐದು ಕಿಮೀ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದ ಬಾಲಕನಿಂದು, ಈ ಹಂತಕ್ಕೆ ಬೆಳೆದು ನಿಂತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಅವರು ಪಟ್ಟಿರುವ ಸಂಕಷ್ಟಗಳು ಹಲವಿದ್ದರೂ, ಎಂದಿಗೂ ಯಾರ
ಮುಂದೆಯೂ ಅದನ್ನು ತೋರಿಸಿಕೊಳ್ಳದೇ ನಗುಮೊಗ ದಲ್ಲಿಯೇ ಇರುತ್ತಾರೆ. ಆದರೆ ಅವರು ಕಷ್ಟವನ್ನು ಹಂಚಿಕೊಳ್ಳುವ ಏಳೆಂಟು ಸ್ನೇಹಿತರಿದ್ದಾರೆ.
ಆ ಸ್ನೇಹಿತರ ಗುಂಪಿನಲ್ಲಿ ನಾನೂ ಇದ್ದೇನೆ ಎನ್ನುವುದೇ ನನಗೆ ಹೆಮ್ಮೆಯ ಸಂಗತಿ. ಹಾಗೇ ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ಮತ್ತು ವಿಶ್ವೇಶ್ವರ ಭಟ್ಟರು ಹಲವು ಸಮಯ ಒಟ್ಟಿಗೆ ಕಳೆದಿದ್ದೇವೆ. ಭಟ್ಟರ ಪಾಂಡಿತ್ಯ ಹಾಗೂ ಸಿದ್ದರಾಮಯ್ಯ ಅವರ ರಾಜಕೀಯ ಚಾಣಕ್ಯ ನೀತಿಗಳು ಒಟ್ಟಿಗೆ ಸೇರಿದಾಗ ಯಾವೆಲ್ಲ ವಿಷಯಗಳು ಚರ್ಚೆಯಾಗಬಹುದು ಎನ್ನುವುದು ಊಹಿಸಲು ಅಸಾಧ್ಯ. ಸಿದ್ದರಾಮಯ್ಯ ಮತ್ತು ಭಟ್ಟರು ಮಾತಿಗೆ ಕೂತರೆ ಅಲ್ಲಿ, ಪತ್ರಿಕೋದ್ಯಮ, ರಾಜ
ಕೀಯ, ಸಾಹಿತ್ಯ ಸೇರಿದಂತೆ ಪ್ರತಿಯೊಂದು ವಿಷಯಗಳು ನುಸುಳಿ ಹೋಗುತ್ತದೆ.
ಇನ್ನು ವಿಶ್ವೇಶ್ವರ್ ಭಟ್ ಅವರನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ವಿಶೇಷ ಪ್ರೀತಿಯಿದೆ. ಅದಕ್ಕೆ ಕಾರಣ ಭಟ್ಟರು ಬೆಳೆದು ಬಂದ ಹಾದಿ. ಕಷ್ಟದಿಂದ ಬೆಳೆದು ಮೇಲೆ ಬಂದ ಬಳಿಕವೂ, ಅವರು ಹಳೆಯದ್ದನ್ನು ಮರೆತಿಲ್ಲ. ಈ ಕಾರಣ ಕ್ಕಾಗಿಯೇ ಸಿದ್ದರಾಮಯ್ಯ ಅವರಿಗೂ ವಿಶೇಷ ಪ್ರೀತಿ, ಗೌರವ ಹಾಗೂ ಅಭಿಮಾನ. ಆದರೆ ಒಂದು ವಿಷಯವನ್ನು ಹೇಳಲೇಬೇಕು, ವಿಶ್ವೇಶ್ವರ ಭಟ್, ನಾನು ಸಿದ್ದರಾಮಯ್ಯ ಅವರು ಆತ್ಮೀಯವಾಗಿದ್ದರೂ ಎಂದಿಗೂ ವೈಯಕ್ತಿಕ ಹಿತಾಸಕ್ತಿಗೆ ಒಬ್ಬರನ್ನು ಒಬ್ಬರು ಬಳಸಿಕೊಳ್ಳಲಿಲ್ಲ. ಭಟ್ಟರ ಪತ್ರಿಕಾ ಸ್ವಾತಂತ್ರ್ಯಕ್ಕೆ ಎಂದಿಗೂ ಸಿದ್ದರಾಮಯ್ಯ ಅವರು ಅಡ್ಡಿಯಾಗಲಿಲ್ಲ. ಅದೇ ರೀತಿ ಭಟ್ಟರು ಸಹ ಸಿದ್ದರಾಮಯ್ಯ ಅವರು
ಮುಖ್ಯಮಂತ್ರಿಯಾಗಿದ್ದಾಗಲೂ ಯಾವುದೇ ಸ್ವಂತ ಕೆಲಸಕ್ಕಾಗಿ ಭಟ್ಟರು ಅವರ ಮನೆಗೆ ಹೋಗಿದ್ದನ್ನು ನಾನು ನೋಡಲಿಲ್ಲ.
ಮೊದಲೇ ಹೇಳಿದಂತೆ ವಿಶ್ವವಾಣಿ ಪತ್ರಿಕೆಯ ಆರಂಭದ ದಿನದಲ್ಲಿ ಸಂಸ್ಥೆಗೆ ಹಲವು ಸಂಕಷ್ಟಗಳಿದ್ದವು. ಈ ಎಲ್ಲ ಸಂಕಷ್ಟ ಗಳನ್ನು ಯಾರ ಬಳಿಯೂ ಹೇಳಿಕೊಳ್ಳ ದಿದ್ದರೂ ಸಿದ್ದ ರಾಮಯ್ಯ ಅವರು ವಿಶ್ವೇಶ್ವರ ಭಟ್ಟರಲ್ಲಿರುವ ನೈಜ ಪತ್ರಕರ್ತ ನನ್ನು ನೋಡಿ, ಅಭಿಮಾನಪಟ್ಟಿದ್ದಾರೆ. ನನ್ನ ಬಳಿ ಅದನ್ನು ಅವರು ವ್ಯಕ್ತಪಡಿಸಿದ್ದಿದೆ. ಇಲ್ಲಿ ಮತ್ತೊಂದು ವಿಷಯವನ್ನು ಪ್ರಸ್ತಾಪಿಸಬೇಕು. ಭಟ್ಟರ ಇಡೀ ಪತ್ರಿಕಾ ಪಯಣದಲ್ಲಿ ಎಂದಿಗೂ ಪುಟ ತುಂಬಿಸಬೇಕು, ಲಾಭ ಮಾಡಬೇಕು ಎನ್ನುವ ಕಾರಣಕ್ಕೆ ಪತ್ರಿಕೆ ನಡೆಸಿಲ್ಲ. ಸಮಾಜಕ್ಕೆ ಪತ್ರಿಕೆಯಿಂದ ಏನಾದರೂ ಸಹಾಯ ವಾಗಲಿ ಎನ್ನುವ ಕಾರಣಕ್ಕೆ ಪತ್ರಿಕೆಯನ್ನು ಬಳಸಿಕೊಂಡಿದ್ದಾರೆ.
ಇನ್ನು ವಿಶ್ವೇಶ್ವರ ಭಟ್ ಅವರ ಮತ್ತೊಂದು ಗುಣವೆಂದರೆ ಅವರು ಎಂದಿಗೂ ಯಾರ ಮೇಲೆಯೂ ಹೊಟ್ಟೆಕಿಚ್ಚು ಪಟ್ಟು ಕೊಂಡಿರುವುದನ್ನು ನಾನು ನೋಡಿಲ್ಲ. ಅವರ ಶಿಷ್ಯಂದಿರನ್ನು ಸಿದ್ಧಪಡಿಸಿ, ಅವರನ್ನು ಬೆಳೆಸುವ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದಾರೆ. ಇಂತಹ ನಾಯಕತ್ವದಲ್ಲಿ ಹತ್ತು ಹಲವು ಹೊಸ ಯೋಜನೆಗಳನ್ನು ಆರಂಭಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಈಗಾಗಲೇ ವಿಶ್ವವಾಣಿ ವಿದ್ಯಾಪೀಠ ಆರಂಭಿಸುವ ಮೂಲಕ ಪತ್ರಿಕೋದ್ಯಮದ ‘ಬಡ್ಡಿಂಗ್ ಜರ್ನ
ಲಿಸ್ಟ್’ಗಳನ್ನು ಸರಿಯಾದ ರೀತಿಯಲ್ಲಿ ತರಬೇತಿ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಶೀಘ್ರವೇ ವಿಶ್ವವಾಣಿ ಟಿವಿ ಯನ್ನು ಆರಂಭಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇದರೊಂದಿಗೆ ಉತ್ತರ ಕನ್ನಡಕ್ಕೆ ಸೀಮಿತವಾಗಿದ್ದ ಲೋಕಧ್ವನಿ ಪತ್ರಿಕೆಯನ್ನು ರಾಜ್ಯ ಮಟ್ಟದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸುವ ಕೆಲಸಕ್ಕೆ ಕೈಹಾಕಿ ದ್ದಾರೆ. ಈ ಕಾರಣಕ್ಕಾಗಿಯೇ ನಾನು ಸದಾ ಹೇಳುವುದು, ವಿಶ್ವೇಶ್ವರ ಭಟ್ ಕೇವಲ ವ್ಯಕ್ತಿಯಾಗಿ ಉಳಿಯದೇ, ಒಂದು ಶಕ್ತಿಯಾಗಿ, ಸಂಸ್ಥೆಯಾಗಿ ಕಾಣಿಸುತ್ತಾರೆ.
ಇಂತಹ ವಿಶಿಷ್ಟ ಗುಣದ ವಿಶ್ವೇಶ್ವರ ಭಟ್ಟರ ಬತ್ತಳಿಕೆಯಲ್ಲಿ ಇನ್ನು ನೂರಾರು ಅಸಗಳಿವೆ. ಕನ್ನಡ ಪತ್ರಿಕೋದ್ಯಮ, ಕನ್ನಡ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಬತ್ತಳಿಕೆಯ ಎಲ್ಲ ಅಸ್ತ್ರಗಳು ಯಶಸ್ವಿಯಾಗಿ ಪ್ರಯೋಗವಾಗಲಿ. ಒಂಬತ್ತನೇ ವರ್ಷದ ಸಂಭ್ರಮದಲ್ಲಿರುವ ವಿಶ್ವವಾಣಿಯೂ, ಶತಸಂಭ್ರಮವನ್ನು ಆಚರಿಸಲಿ. ಭಟ್ಟರು ಮುಂದಿನ ದಿನದಲ್ಲಿ ಮಾಡಬೇಕು ಎಂದುಕೊಂಡಿರುವ ಎಲ್ಲ ಕಾರ್ಯದಲ್ಲಿಯೂ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
(ಲೇಖಕರು ವಿಧಾನಪರಿಷತ್ ಮಾಜಿ ಸದಸ್ಯರು)