ದಾಸ್ ಕ್ಯಾಪಿಟಲ್
dascapital1205@gmail.com
ಭಾರತದ ಸಂವಿಧಾನವು ತನ್ನೆಲ್ಲ ಪ್ರಜೆಗಳಿಗೆ ವಯೋಮಾನದ ಅರ್ಹತೆಯ ಮೇಲೆ ನೀಡಿರುವ ಹಕ್ಕೆಂದರೆ- ವೋಟು
ಚಲಾಯಿಸುವುದು. ಮತ ‘ದಾನ’ವೇ ಹೊರತು ಮಾರುವುದಲ್ಲ. ಅಮೂಲ್ಯ ಮತದ ಚಲಾವಣೆಯಲ್ಲಿ ಗೌಪ್ಯತೆ ಕಾಪಾಡಿ ಕೊಳ್ಳುವ ಹಕ್ಕನ್ನೂ ಸಂವಿಧಾನ ನೀಡಿದೆ.
ಹೀಗಾಗಿ ಯಾರು ಯಾರಿಗೂ ವೋಟು ಹಾಕಬಹುದು, ಹಾಕದೆಯೂ ಇರಬಹುದು, ಯಾರಿಗೆ ಹಾಕಿದ್ದೇನೆಂದು ಹೇಳಿಕೊಳ್ಳದಿರ ಬಹುದು. ಈ ವಿಚಾರದಲ್ಲಿ ಯಾರ ಮಾತನ್ನೂ ಕೇಳಬೇಕಂತೇನೂ ಇಲ್ಲ ಮತ್ತು ಎಲ್ಲರ ಮಾತನ್ನೂ ಕೇಳಬಹುದು. ಆದರೆ ಮತಚಲಾವಣೆಯಲ್ಲಿ ಮತದಾರನದೇ ಆತ್ಯಂತಿಕ ನಿರ್ಧಾರ. ಈ ಹಕ್ಕನ್ನು ಕಳೆದುಕೊಳ್ಳಬಾರದು. ‘ಯಾರಿಗೆ ಮತಹಾಕಿ ಏನು ಪ್ರಯೋಜನ? ಯಾರು ಚುನಾಯಿತರಾಗಿ ನಮಗೇನು ಮಾಡುವುದಿದೆ? ಕೊನೆಗೆ ನಮಗೆ ನಾವೇ, ಗೋಡೆಗೆ ಮಣ್ಣೇ’ ಎನ್ನುವ ಮನಸ್ಥಿತಿಯವರೂ ವೋಟು ಹಾಕಲೇಬೇಕು ಎಂಬ ಸಿದ್ಧಾಂತ ನನ್ನದು.
‘ಸಮುದ್ರದ ನೀರಿನಲ್ಲಿ ಒಂದು ಚೊಂಬು ನೀರು ತೆಗೆದರೂ ಗೊತ್ತಾಗದು, ಹಾಕಿದರೂ ಗೊತ್ತಾಗದು. ಹೀಗಾಗಿ ನಾವು ವೋಟು ಹಾಕಿದರೆಷ್ಟು, ಬಿಟ್ಟರೆಷ್ಟು?’ ಎಂಬ ವಾದ ಅರ್ಥಹೀನ, ಅಸಂಬದ್ಧ, ಅಪ್ರಬುದ್ಧ. ಈ ದೇಶದ ಪ್ರಜೆಯಾಗಿ, ದೇಶವೇ ಕೊಟ್ಟ ಹಕ್ಕನ್ನು ತಿರಸ್ಕರಿಸಬಾರದು. ಯಾಕೆ ವೋಟು ಹಾಕಬೇಕು? ಅಧಿಕಾರಾರೂಢ ಪಕ್ಷ ಸರಿಯಾಗಿ ಆಡಳಿತ ಮಾಡದೆ ಜನೋಪ ಯೋಗಿಯಾಗದೆ ಇದ್ದಾಗ ಎಚ್ಚರಿಸುವುದಕ್ಕೆ, ದೂಷಿಸುವುದಕ್ಕೆ, ಹೀಗಳೆಯುವುದಕ್ಕೆ, ದೋಷಾ ರೋಪಣೆ ಮಾಡುವುದಕ್ಕೆ, ಸಲಹೆ-ಸೂಚನೆ ನೀಡುವುದಕ್ಕಾದರೂ ವೋಟು ಹಾಕಲೇಬೇಕು.
ಯಾರಿಗೆ ವೋಟು ಹಾಕಿದ್ದೆವೋ ಅವರನ್ನು ಹಿಡಿದು ಪ್ರಶ್ನಿಸುವುದಕ್ಕಾದರೂ, ನಮ್ಮ ಜನರ ಪರವಾಗಿ ಮಾತಾಡುವು ದಕ್ಕಾದರೂ, ಸರಕಾರದಿಂದ ನಮಗೆ ಕೆಲಸವಾಗಬೇಕಾದರೂ, ನಮ್ಮೊಳಗಿನ ನೈತಿಕಶಕ್ತಿ ಉಳಿಸಿಕೊಳ್ಳುವುದಕ್ಕಾದರೂ, ಕಡೇಪಕ್ಷ ವೋಟು ಹಾಕಿದಕ್ಕೆ ಲಗತ್ತಿಸುವ ಕೈಗುರುತನ್ನು ನಾಲ್ಕು ಜನರಿಗೆ ತೋರಿಸಲಿಕ್ಕಾದರೂ ವೋಟು ಹಾಕಲೇಬೇಕು. ವೋಟು ಹಾಕುವುದರಿಂದ ದಕ್ಕುವ ನೈತಿಕಶಕ್ತಿ ಪ್ರಜಾಪ್ರಭುತ್ವದಲ್ಲಿ ಅತಿಮುಖ್ಯ.
ನನ್ನ ಕ್ಷೇತ್ರದ ಅಭ್ಯರ್ಥಿ ನನ್ನ ವೋಟಿನಿಂದಲ್ಲವೇ ಶಾಸಕ, ಸಂಸದನಾಗುವುದು? ಸ್ಥಾನಮಾನ, ಪದವಿ, ಧೀಮಾಕು, ದೌಲತ್ತು ಗಳಿಸೋದು? ನನ್ನ ಒಂದು ವೋಟಿನಿಂದಲೇ ಅವನು ಬೆಳೆಯುವುದು. ಅಷ್ಟು ತಾಕತ್ತನ್ನು ನನ್ನ ಒಂದು ವೋಟು ಹೊಂದಿದೆ ಯೆಂದರೆ, ಅವನಿಗಿಂತ ಯಾರು ದೊಡ್ಡವ? ಗ್ರಹಿಸಿನೋಡಿ! ಮತದಾನ ನನ್ನ ಹಕ್ಕು. ಅದನ್ನು ಚಲಾಯಿಸಿ ಸರಕಾರವನ್ನು ಪ್ರಶ್ನಿಸುವ, ಒಳ್ಳೆಯದನ್ನು ಹೊಗಳುವ ನೈತಿಕ ಶಕ್ತಿಯನ್ನು ಸ್ವತಃ ಸಂಚಯಿಸಿಕೊಳ್ಳಬೇಕು. ಅದಕ್ಕಾದರೂ ನಾನು ವೋಟು ಹಾಕಬೇಕು, ಹಾಕುತ್ತೇನೆ ಕೂಡ. ಹೀಗೆಯೇ ಪ್ರತಿಯೊಬ್ಬರೂ ಯೋಚಿಸಬೇಕು.
ಆದರೆ, ನನ್ನ ವೋಟನ್ನು ಹಣಕ್ಕೆ ಮಾರಿಕೊಳ್ಳುವುದಿಲ್ಲ ಎಂದು ದೃಢವಾಗಿ ನಿರ್ಧರಿಸಬೇಕು. ನನಗೆ ಹಣದ ಅಗತ್ಯವಿದೆ, ಆದರೆ ವೋಟುಮಾರಿ ಪಡೆವ ಹಣ ನನ್ನ ಜೀವನಕ್ಕಾಗುವುದಿಲ್ಲ ಎಂಬ ಅರಿವು ಮತ್ತು ಎಚ್ಚರವೂ ನನ್ನಲ್ಲಿದೆ. ಬಂದಷ್ಟು ಹಣ ಬರಲಿ ಎಂಬ ಧೋರಣೆ ನನ್ನಲ್ಲಿಲ್ಲ. ಅಂಥ ಮನೋವೃತ್ತಿ ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಒಳ್ಳೆಯದಲ್ಲ. ಹಣ ಪಡೆದು ವೋಟುಹಾಕಿದರೆ, ನನ್ನ ಪ್ರತಿನಿಧಿಯನ್ನು ಪ್ರಶ್ನಿಸುವ ನೈತಿಕಹಕ್ಕು ನನ್ನಲ್ಲಿರುವುದಿಲ್ಲ.
ಇದೊಂಥರ ಆತ್ಮದ್ರೋಹ. ಒಂದು ಬಗೆಯಲ್ಲಿ ಆತ್ಮಹತ್ಯೆಯೇ! ಹಣಕ್ಕಾಗಿ ಯಾರಿಗೂ ಗುಲಾಮನಾಗದೆ ಧೈರ್ಯದಿಂದ ವೋಟು ಚಲಾಯಿಸಬಲ್ಲೆ; ಯಾರೂ ಹಿತವಲ್ಲ ನಿಸಿದರೆ ‘ನೋಟಾ’ಕ್ಕೆ (None Of The Above) ವೋಟು ಹಾಕುವೆ.
ಆದರೆ ‘ನೋಟಾ’ಕ್ಕೆ ಹಾಕಿದರೆ ಏನೂ ಸಾಧಿಸಿದಂತಾಗುವುದಿಲ್ಲ; ಯಾರಿಗಾದರೂ ಹಾಕಿದರಷ್ಟೇ ಏನನ್ನಾದರೂ ಸಾಧಿಸಲು
ಸಾಧ್ಯ, ಸಾಽಸಬಲ್ಲೆ. ಏನೂ ಆಗಲಿಲ್ಲವೆಂದರೆ, ಪ್ರಭುತ್ವವನ್ನು ವಿಮರ್ಶೆ ಮಾಡುವ ಹಕ್ಕಾದರೂ ನನಗಿದ್ದೇ ಇರುತ್ತದೆ, ಅಷ್ಟು
ಸಾಕು. ಇದನ್ನೇ ಕೊನೆಯ ಅಸವಾಗಿ ಬಳಸುತ್ತೇನೆ. ಇದನ್ನೂ ಸಂವಿಧಾನವು ನನಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ದಡಿಯಲ್ಲಿ ನೀಡಿದೆ.
ಇಂಥ ಸ್ವಾತಂತ್ರ್ಯವನ್ನು ವೋಟು ಹಾಕಿಯೇ ಪಡೆಯಬೇಕೆಂದಿಲ್ಲ; ಆದರೆ ವೋಟುಹಾಕಿದವನಿಗೆ ಮಾತ್ರ ಈ ಸ್ವಾತಂತ್ರ್ಯದ ಬಳಕೆಯ ನೈತಿಕಶಕ್ತಿ ಇರುತ್ತದೆ. ಈ ನೈತಿಕತೆಯು ನನ್ನಿಂದ ಮತ ಪಡೆದುಹೋದ ಜನಪ್ರತಿನಿಧಿಗಳು ಮೆರೆಯುವ
ಅಟ್ಟಹಾಸದಂತಲ್ಲ. ಅವರಿಗಾದರೋ ಆರಿಸಿಬಂದಾಗಷ್ಟೇ ಅಟ್ಟಹಾಸ ಮೆರೆಯಲು ಅವಕಾಶವಿರುತ್ತದೆ. ಇಲ್ಲವಾದಲ್ಲಿ
ಯಾರೂ ಕಣ್ಣೆತ್ತಿ ನೋಡಲಾರರು. ಬೇಕಾದರೆ ಸೋತವರನ್ನು ಕೇಳಿ ನೋಡಿ.
ಆದರೆ, ನನಗೆ ಮಾತ್ರ ಯಾವಾಗಲೂ ಅಟ್ಟಹಾಸದಿಂದ ಮೆರೆಯುವ ಅವಕಾಶವಿರುತ್ತದೆ. ಆದರೆ ಮತದಾರ ಯಾವತ್ತೂ ಅಟ್ಟಹಾಸ ಮೆರೆದಿಲ್ಲ, ಮೆರೆಯುವುದೂ ಇಲ್ಲ. ಮತಪಡೆದ ಅಭ್ಯರ್ಥಿಗಿಂತ ಮತದಾರನೇ ಯಾವತ್ತೂ ನೈತಿಕವಾಗಿ ಮೇಲ್ಮಟ್ಟ ದಲ್ಲಿರುತ್ತಾನೆ. ಅಂಥ ನೈತಿಕತೆಯ ಉಳಿವಿಗಾದರೂ ನಾನು ವೋಟುಹಾಕುತ್ತೇನೆ. ಪ್ರತಿಯೊಬ್ಬರೂ ಹೀಗೆ ಯೋಚಿಸಿ ವೋಟು ಚಲಾಯಿಸಲೇಬೇಕು.
ಚುನಾವಣೆಯಲ್ಲಿ ಜನರು ಪಾಲ್ಗೊಳ್ಳುವುದನ್ನು ಪ್ರಜಾಪ್ರಭುತ್ವವು ಅವಲಂಬಿಸಿರುವುದರಿಂದ ಮತಚಲಾವಣೆ ಮಾಡಲೇ ಬೇಕೆಂದು ಚುನಾವಣಾ ಆಯೋಗ ಆಗ್ರಹಿಸುತ್ತಲೇ ಬಂದಿದೆ. ಇರುವವರಲ್ಲಿ ಉತ್ತಮರಾದವರಿಗೆ ಮತ ಚಲಾಯಿಸಲು ಅದು ಉತ್ತೇಜಿಸುತ್ತದೆ; ಉತ್ತಮರು ಯಾರೆಂದು ಮಾತ್ರ ಅದು ಹೇಳುವುದಿಲ್ಲ. ಆದರೆ, ಮತ ಚಲಾವಣೆ ಕುರಿತಾದ ಬದ್ಧತೆಗಳು ಭಾರತದಲ್ಲಿ ಸಾರ್ವಕಾಲಿಕವಾಗಿ ಮಾನ್ಯವಾದವುಗಳೇ.
ಮತ ಚಲಾಯಿಸದಿರುವುದಕ್ಕೂ ಕಾನೂನುಬದ್ಧ ಅಧಿಕಾರವಿದೆಯೆಂಬುದು ಪ್ರಜಾಪ್ರಭುತ್ವದ ಇನ್ನೊಂದು ಅಂಶ. ಇದನ್ನೇ ‘ನೋಟಾ’ ಎನ್ನುವುದು. ಇದು ಯಾರಿಗೂ ಮತ ಚಲಾಯಿಸದೆ, ಮತ ಚಲಾವಣೆ ಮಾಡಲಿಲ್ಲವೆಂಬ ದೃಢೀಕರಣವನ್ನು ಪಡೆಯುವುದು. ಜಗತ್ತಿನ ಕೆಲವು ಭಾಗಗಳಲ್ಲಿ (ಅಮೆರಿಕದ ಕೆಲವು ಸಂಸ್ಥಾನಗಳಲ್ಲಿ, ರಷ್ಯಾದಲ್ಲಿ) ಈ ವ್ಯವಸ್ಥೆಯಿದೆ. ಅಲ್ಲಿ ಇಂಥ ಹಕ್ಕು ಸಹಜವೆಂದೂ ನ್ಯಾಯಬದ್ಧವೆಂದೂ ಸ್ವೀಕಾರಾರ್ಹವಾಗಿದೆ.
2014ರ ಮಹಾಚುನಾವಣೆಯ ನಂತರ ಭಾರತದಲ್ಲಾದ ಬೆಳವಣಿಗೆಯಿದು. ಇದು ಅಭ್ಯರ್ಥಿಗಳು ಅನರ್ಹರೆಂದು ಮಾತ್ರ ನಿರಾಕರಿಸುವುದಾಗಿದೆ. ಅಭ್ಯರ್ಥಿಯು ಅರ್ಹತೆ ಪಡೆಯಲು ಮತದಾರ ಈ ಮೂಲಕ ಒತ್ತಡ ತರುವುದಕ್ಕೂ ಇದು ಅವಕಾಶವೀಯುತ್ತದೆ. ಜನಪ್ರತಿನಿಧಿಗಳು ನಮ್ಮನ್ನು ನಿಜಾರ್ಥದಲ್ಲಿ ಪ್ರತಿನಿಽಸುವಂತೆ ಮಾಡಲು ‘ನೋಟಾ’ ಒಂದು ಸಮರ್ಪಕ ಕ್ರಮ.
ತಮಗಿರುವ ಈ ಅಧಿಕಾರದ ಅರಿವನ್ನು ಜನತೆಗೆ ಇನ್ನೂ ಸ್ಪಷ್ಟಪಡಿಸುವ ಕೆಲಸವಾಗಬೇಕಿದೆ. ಜನರನ್ನು ದಾರಿತಪ್ಪಿಸುವ
ಜನಪ್ರತಿನಿಧಿಗಳ ಕಾರ್ಯ ಇನ್ನು ಮುಂದೆ ಸಾಗದೆಂಬ ಸಂದೇಶವನ್ನು ಈ ನೋಟಾ ರವಾನಿಸುತ್ತದೆಂಬುದು ಸತ್ಯ. ಆದರೆ, ನೋಟಾದ ಬಲ ಹೆಚ್ಚಿದಂತೆ ಜನತಾ ಪರಮಾಧಿಕಾರಕ್ಕೆ ಎಲ್ಲರೂ ಶರಣಾಗಲೇಬೇಕಾಗುತ್ತದೆ. ಆದ್ದರಿಂದ ನೋಟಾವನ್ನು ಮತ್ತಷ್ಟು ಬಲಪಡಿಸಬೇಕಿದೆ. ಉಳಿದ ರಾಷ್ಟ್ರಗಳ ಪ್ರಜಾಪ್ರಭುತ್ವಕ್ಕಿಂತ ಭಾರತದ್ದು ಉತ್ತಮ, ದಕ್ಷ ಮತ್ತು ಸಂಕೀರ್ಣವಾಗಿದೆ. ಕಡ್ಡಾಯವಾಗಿ ಮತ ಚಲಾಯಿಸಬೇಕೆಂಬ ಒತ್ತಡವೂ ಭಾರತದಂಥ ರಾಷ್ಟ್ರಕ್ಕೆ ಸುಲಭವಾಗಿ ದಕ್ಕುವಂಥದ್ದಲ್ಲ, ಒಗ್ಗುವಂಥದ್ದಲ್ಲ. ಮತದಾನದ ಬಗ್ಗೆ ಜನರಲ್ಲಿ ಮೊದಲಿನಿಂದಲೂ ನಿರಾಸಕ್ತಿಯಿರುವ ಭಾರತದಲ್ಲಿ ಕಡ್ಡಾಯ ಮತದಾನವೆಂಬುದು ಒಂಥರಾ ‘ನಿರಂಕುಶಾಧಿಕಾರ’ ಆಗಿ ಬಿಡುತ್ತದೆ.
ಇದರ ಬದಲಿಗೆ ಮತದಾನದ ಅಗತ್ಯದ ಜಾಗೃತಿ ಮೂಡಿಸುವುದೇ ಸೂಕ್ತ, ಸಮರ್ಪಕ. ಭಾರತದ ಪ್ರಜೆಯಾಗಿ ತನ್ನ ಹಕ್ಕನ್ನು ಚಲಾಯಿಸಬೇಕೆಂಬ ಅರಿವನ್ನು ಪ್ರತಿ ಭಾರತೀಯನೂ ಹೊಂದಬೇಕಿದೆ. ಕಡಿಮೆ ಪ್ರಮಾಣದಲ್ಲಿ ಮತದಾನವಾದರೆ ಇರು ವವರಲ್ಲಿ ಅಸಮರ್ಥ ಅಭ್ಯರ್ಥಿಯೇ ಆಯ್ಕೆಯಾಗುವ ಅಪಾಯ/ಸಂಭವವನ್ನು ತಪ್ಪಿಸುವುದಕ್ಕಾದರೂ ಎಲ್ಲರೂ ಈ ಹಕ್ಕು ಚಲಾಯಿಸಬೇಕು. ಇದು ಸಮಷ್ಟಿಯ ಹಿತದೃಷ್ಟಿಯಿಂದಲೂ ಒಳ್ಳೆಯದು.
ಮತ ಚಲಾವಣೆ ಎಂದರೆ ಮತ‘ದಾನ’. ಕಡೇಪಕ್ಷ, ಇದನ್ನೊಂದು ದಾನವೆಂದು ತಿಳಿದು ಮಾಡಿದರೆ ದಾನಕ್ಕೆ ಸಿಗುವ
ಪುಣ್ಯವು ಲಭಿಸುತ್ತದೆ. ಹಳಬರು-ಹೊಸಬರೆಲ್ಲ ಸೇರಿ ಅಭ್ಯರ್ಥಿಯನ್ನು ಅಥವಾ ಪಕ್ಷವನ್ನು ನೋಡಿ ಮತದಾನ ಮಾಡುವು ದರಲ್ಲೇ ದೇಶದ ಒಳಿತಿದೆ. ಹೀಗಾಗಿ, ಪ್ರತಿ ಯೊಬ್ಬನೂ ತಾನು ಈ ದೇಶದ ಪ್ರಜೆಯೆಂಬ ಹೆಮ್ಮೆ- ಅಭಿಮಾನದಿಂದ ಮತದಾನ ಮಾಡಬೇಕು. ಅಷ್ಟಾದರೂ ದೇಶಪ್ರೇಮ, ದೇಶನಿಷ್ಠೆ ಅಭಿವ್ಯಕ್ತಿಸಲು ಆಗುವುದಿಲ್ಲ ಎಂದಾದರೆ, ಈ ದೇಶದ ಪ್ರಜೆಯೆಂದು ಹೇಳಿಕೊಳ್ಳುವುದಕ್ಕೆ ಅಂಥವರು ನಾಲಾಯಕ್ಕು!
ಆದ್ದರಿಂದ, ಪ್ರತಿಯೊಬ್ಬರೂ ಯೋಚಿಸಿ, ಅಳೆದು-ತೂಗಿ, ಯಾವ ಒತ್ತಡಕ್ಕೂ ಮಣಿಯದೆ ಮತದಾನ ಮಾಡುವುದರಿಂದ ದೇಶವನ್ನು ಭ್ರಷ್ಟರಿಂದ ರಕ್ಷಿಸಬಹುದು. ಏಕೆಂದರೆ ಮತದಾನವೆಂಬುದು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಬಲಿಷ್ಠಶಕ್ತಿ. ಉಪ ಯೋಗಿಸುವ ಅವಕಾಶ ಬಂದಾಗಲೆಲ್ಲ ಈ ಶಕ್ತಿಯನ್ನು ಉಪಯೋಗಿಸುವುದರಿಂದ ಅದರ ವೃದ್ಧಿಯಾಗುತ್ತದೆ. ಮತದಾನಕ್ಕೆ ಹಿಂಜರಿಯುವುದು, ಉದಾಸೀನ ಮಾಡುವುದು ಭಾರತದಂಥ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಮಾರಕವಾಗಿ ಪರಿಣಿಸುವ ಸಾಧ್ಯತೆಯೇ ಹೆಚ್ಚು.
ರಾಷ್ಟ್ರೀಯತೆಯು ಸೋರುವ ಅಪಾಯವಿರುವುದೇ ಇಲ್ಲಿ!
ಕೊನೆಯಮಾತು: ಕೆಟ್ಟ ರಾಜಕಾರಣಿಗಳು ತಯಾರಾಗುವುದು, ಒಳ್ಳೆಯವರು ಮತದಾನ ಮಾಡದಿರುವುದರಿಂದ. ಮತದಾನ ಮಾಡದವರಿಗೆ ಸರಕಾರವನ್ನು ಪ್ರಶ್ನಿಸುವ ಅರ್ಹತೆಯಿರುವುದಿಲ್ಲ. ದೇಶವು ಅಯೋಗ್ಯರ ಕೈಗೆ ಸಿಗಬಾರದು. ಮತದಾರನ ಹೊಣೆಗೇಡಿತನ, ನಿರ್ಲಕ್ಷ್ಯದಿಂದಾಗಿ ದೇಶವೇ ಸಮಸ್ಯೆಯನ್ನು, ಕಷ್ಟವನ್ನು ಅನುಭವಿಸುವಂತಾಗಬಾರದು. ಈ ಹಿನ್ನೆಲೆಯಲ್ಲಿ ಮತದಾನದ ಅರಿವು ಮೂಡಿಸುವಂಥ ಕಾರ್ಯ ಹಿಂದೆಂದಿಗಿಂತಲೂ ಚುರುಕಾಗಬೇಕಿದೆ. ಸರಕಾರ ಮತ್ತು ಚುನಾವಣಾ ಆಯೋಗದಿಂದ ಮಾತ್ರವೇ ಈ ಕಾರ್ಯ ನಡೆದರೆ ಸಾಕಾಗದು; ಸಮಾಜದ ಎಲ್ಲ ವರ್ಗದ ನಾಯಕರು, ರಾಜಕೀಯ ನೇತಾರರು, ಧಾರ್ಮಿಕ ಮುಖಂಡರು, ವಿದ್ವಾಂಸರು, ಚಿಂತಕರು, ಸಂನ್ಯಾಸಿಗಳು ಮತ್ತು ಮಾಧ್ಯಮಗಳು ಈ ಕಾರ್ಯದಲ್ಲಿ ಸಹಭಾಗಿಯಾಗಬೇಕಿದೆ.