Wednesday, 24th April 2024

ಅಷ್ಟಕ್ಕೂ ಮತದಾನ ಯಾಕೆ ಮಾಡಬೇಕು ?

ಅಭಿಮತ

ಡಾ.ಮುರಲಿ ಮೋಹನ್ ಚೂಂತಾರು

ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಚುನಾವಣೆ ಎನ್ನುವುದು ಹಬ್ಬವಿದ್ದಂತೆ. ಈ ಹಬ್ಬದಲ್ಲಿ ವಿಜೃಂಭಣೆಯಿಂದ ಪ್ರತಿಯೊಬ್ಬ ಮತದಾರರೂ
ಪಾಲ್ಗೊಳ್ಳ ಬೇಕು. ಮತದಾನ ಎನ್ನುವುದು ಪ್ರಜಾ ಪ್ರಭುತ್ವವಾದಿ ದೇಶದ ಜೀವನಾಡಿ ಇದ್ದಂತೆ. ಪ್ರಜಾಪ್ರಭುತ್ವ ಅಡಿಪಾಯವೇ ಪ್ರಜೆಗಳು. ಇಲ್ಲಿ ಪ್ರಜೆಗಳೇ ಪ್ರಭುಗಳು.

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವಂಥ ಆಡಳಿತ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನುತ್ತಾರೆ. ಇಲ್ಲ ಯಾವುದೇ ಜಾತಿ, ಮತ, ಧರ್ಮ, ಬಡವ, ಬಲ್ಲಿದ, ಕುಂಟ, ಹೆಳವ ಮೂಗ, ಅಂಗವಿಕಲ, ಹೀಗೆ ಯಾವುದೇ ಭೇದ ಭಾವವಿಲ್ಲದ, ಮೇಲು ಕೀಳು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಮತದಾನ ಮಾಡಲು ಸಮಾನ ಅವಕಾಶವಿರುತ್ತದೆ. ಮತದಾನ ಎನ್ನುವದು ಕೇವಲ ನಮ್ಮ ಹಕ್ಕು ಆಗಿರದೆ ನಮ್ಮ ಶಕ್ತಿಯೂ ಆಗಿರುತ್ತದೆ. ಚುನಾವಣೆಗೆ ಸ್ಪಂದಿಸುವ ವ್ಯಕ್ತಿಗಳ ಗುಣ, ನಡತೆ, ಚಾರಿತ್ರ್ಯ, ವಿದ್ಯಾಭ್ಯಾಸ, ಸಾಮಾಜಿಕ ಕಳಕಳಿ, ದೇಶಭಕ್ತಿ ಮತ್ತು ಸಾರ್ವಜನಿಕ ಸಹಭಾಗಿತ್ವ ಇವೆಲ್ಲವನ್ನೂ, ಅಳೆದು ತೂಗಿ, ಆತನಿಂದ ದೇಶಕ್ಕೆ ಏನಾದರೂ ಸಹಾಯ ಆಗಬಹುದು ಎಂಬುದನ್ನು ಸಾಕಷ್ಟು ವಿಮರ್ಶಿಸಿ ಮತದಾನ ಮಾಡಬೇಕಾದ ಅನಿವಾರ್ಯ ಕಾಲ ಘಟ್ಟದಲ್ಲಿ ನಾವಿಂದು ಬಂದು ನಿಂತಿದ್ದೇವೆ.

ಇದನ್ನು ಬಿಟ್ಟು ಅಭ್ಯರ್ಥಿಗಳಿಂದ ಹಣ, ಹೆಂಡ, ಸಾರಾಯಿ ಉಡುಗೊರೆ ಪಡೆದು ಮತವನ್ನು ಮಾರಿಕೊಂಡರೆ ಅದೊಂದು ರೀತಿಯ ವ್ಯಭಿಚಾರ ಎಂದರೂ ತಪ್ಪಾಗಲಾರದು. ಪ್ರಜಾ ಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಪ್ರಜೆಗಳಿಗೆ ಮತದಾನದ ಮುಖಾಂತರ ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ, ತಮ್ಮ ವೈಯಕ್ತಿಕವಾದ ಅಭಿಪ್ರಾಯ ವನ್ನು ಸಾರ್ವಜನಿಕವಾಗಿ ಮಂಡಿಸಲು ಅವಕಾಶವಿರುತ್ತದೆ. ಒಬ್ಬ ವ್ಯಕ್ತಿ ತಾನು ಮತದಾನ ಮಾಡುವ ಮೂಲಕ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರ ಮಾಡುವುದರ ಜೊತೆಗೆ, ಆ ಅಭ್ಯರ್ಥಿಯನ್ನು ತಾನು ಮಾಡುವ ಕೆಲಸಗಳಿಗೆ ಜವಾಬ್ದಾರರನ್ನಾಗಿ ಮಾಡುತ್ತದೆ.

ತಾವು ನಂಬಿದ ತತ್ವ ಆದರ್ಶ, ಮತ್ತು ದೃಷ್ಟಿಕೋನಗಳಿಗೆ ಗೌರವ ನೀಡುವ ವ್ಯಕ್ತಿಯನ್ನು ಆರಿಸುವ ಹಕ್ಕು ಮತದಾರರಿಗೆ ಇರುತ್ತದೆ. ಪ್ರಜಾಪ್ರಭುತ್ವದ ಪ್ರತಿ
ಯೊಂದು ಮತವೂ ಅತ್ಯಮೂಲ್ಯ. ಈ ಕಾರಣದಿಂದಲೇ, ಕೋವಿಯಿಂದ ಸಿಡಿಯುವ ಗುಂಡಿಗಿಂತಲೂ ಮತದಾರರು ನೀಡುವ ಮತ ಬಹಳ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಒಂದು ವೋಟಿನಿಂದಾಗಿ ಸರ್ಕಾರವೇ ಬಿದ್ದು ಹೋದ ನಿದರ್ಶನಗಳು ನಮ್ಮ ಮುಂದೆ ಇದೆ. ಈ ಕಾರಣ ಕ್ಕಾಗಿಯೇ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಚುನಾವಣಾ ಆಯೋಗ, ಪ್ರತಿ ವರ್ಷ ಜನವರಿ ೨೫ ರಂದು ‘ರಾಷ್ಟ್ರೀಯ ಮತದಾನ ದಿನ’
ಎಂಬ ಆಚರಣೆಯನ್ನು, ೨೦೧೧ ಜನವರಿ ೨೫ ರಿಂದ ಜಾರಿಗೆ ತಂದಿತು.

ಜನವರಿ ೨೫ರಂದು ಚುನಾವಣಾ ಆಯೋಗವನ್ನು ಸ್ಥಾಪಿಸಿದ ದಿನದ ನೆನಪಿಗಾಗಿ ಮತ್ತು ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ನಾಗರಿಕನೂ ಕಡ್ಡಾಯವಾಗಿ ಮತದಾನ ಮಾಡಬೇಕು. ಹಾಗೆಂದ ಮಾತ್ರಕ್ಕೆ ಯಾರೊಬ್ಬರನ್ನು ಮತದಾನ ಮಾಡಲೇಬೇಕು ಎಂದು ಒತ್ತಾಯಿಸಿ, ಬೆದರಿಸಿ ಮತದಾನ ಮಾಡಿಸಬಾರದು. ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಮತದಾನ ಮಾಡಿದಲ್ಲಿ ಸೂಕ್ತ ಅಭ್ಯರ್ಥಿ ಗೆಲುತ್ತಾರೆ. ಆಂಗ್ಲಭಾಷೆಯಲ್ಲಿ ಒಂದು ಮಾತು ಇದೆ. Bad Politician are created by good people who do not vote ಒಳ್ಳೆಯ ವ್ಯಕ್ತಿಗಳು ನಿರ್ಲಕ್ಷ್ಯ ವಹಿಸಿ ಮಾತದಾನ ಮಾಡದಿದ್ದರೆ, ಕೆಟ್ಟವ್ಯಕ್ತಿಗಳು ಅಥವಾ ರಾಜಕಾರಣಿಗಳು ಗೆದ್ದು ಪ್ರಜಾಪ್ರಭುತ್ವದ ಪದಕ್ಕೆ ಅಪಚಾರವಾಗುತ್ತದೆ. ಈ ಕಾರಣದಿಂದಲೇ ಪ್ರತಿಯೊಬ್ಬರು ಈ ಚುನಾವಣಾ ಹಬ್ಬದಲ್ಲಿ ಪಾಲುಗೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸ ಬೇಕು.

ಇಲ್ಲವಾದಲ್ಲಿ, ನಾಳೆಯ ದಿನ ಏನಾದರೂ ತೊಂದರೆಗಳು ಆದಲ್ಲಿ ಅಥವಾ ಸರಿಯಾದ ಆಡಳಿಕೆ ನೀಡಲು ಗೆದ್ದ ವ್ಯಕ್ತಿಗಳು ವಿಫಲವಾದಲ್ಲಿ ಅವರನ್ನು ಪ್ರಶ್ನಿಸುವ ಮತ್ತು ಕೇಳುವ ನೈತಿಕ ಹಕ್ಕನ್ನು ನಾವು ಮತದಾರರು ಕಳೆದುಕೊಳ್ಳುತ್ತೇವೆ. ಒಬ್ಬ ಮತದಾರ ನಿರ್ಲಕ್ಷ್ಯದಿಂದಾಗಿ ಪ್ರಜಾಪ್ರಭುತ್ವದ ಅಡಿಪಾ ಯವೇ ಕುಸಿಯುವ ಸಾಧ್ಯತೆ ಇದೆ. ಅಂಥ ಹಲವಾರು ನಿದರ್ಶನಗಳು ಇತಿಹಾಸದಲ್ಲಿ ಹಲವಾರು ಬಾರಿ ಮರುಕಳಿಸಿದೆ. ಸಾಮಾನ್ಯ ಜನರಲ್ಲಿ ಚುನಾವಣೆ ಎನ್ನುವುದು ನಮಗೆ ಸಂಬಂಧಿಸಿದ ವಿಚಾರವಲ್ಲ ಎಂಬ ತಪ್ಪು ಕಲ್ಪನೆ ಇದೆ. ಇಂಥ ಧೋರಣೆ ಬಹಳ ಅಪಾಯಕಾರಿ ಚುನಾವಣೆ ಎನ್ನುವುದು
ಪ್ರತಿಯೊಬ್ಬ ಪ್ರಜೆಗೂ ಸಂಬಂಧಿಸಿದ ಮೊದಲ ಆದ್ಯತೆಯ ವಿಚಾರ ಆಗಿರುತ್ತದೆ. ಇನ್ನೊಂದು ಬಹುದೊಡ್ಡ ಕಳವಳಕಾರಿ ವಿಚಾರವೆಂದರೆ ನಾವು ಮತದಾನ ಮಾಡದಿದ್ದಲ್ಲಿ ಅಯೋಗ್ಯರು ಆಯ್ಕೆಯಾಗಿ, ನಾವು ನಮ್ಮ ದೇಶವನ್ನು ಅಯೋಗ್ಯರ ಕೈಗೆ ನೀಡಿದ ದೊಡ್ಡ ತಪ್ಪು ನಮ್ಮದಾಗುತ್ತದೆ.

ನೆನಪಿರಲಿ :
೧. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಮತದಾರನು ರಾಜನೇ. ಇಲ್ಲಿ ಪ್ರಜೆಗಳೇ ಪ್ರಭುಗಳು.

೨. ಯಾವುದೇ ಸಂಕೋಚ, ಭೀತಿ, ಆಮಿಷಗೊಳಗಾಗದೆ ನಿಮ್ಮ ಮತವನ್ನು ನಿರ್ಭೀತಿಯಿಂದ ಚಲಾಯಿಸಿ ನಿಮ್ಮ ಮತಕ್ಕೆ ನೀವೇ ಯಜಮಾನರು ಮತ್ತು ಹೊಣೆಗಾರರು.

೩. ಯಾವುದೇ ಜಾತಿ, ಮತ, ಧರ್ಮ, ಪಂಗಡ, ಆಸ್ತಿ, ಅಂತಸ್ತು, ಅನುಕಂಪ, ಇದರ ಆದರದ ಮೇಲೆ ಮತದಾನ ಅವಲಂಬಿತವಾಗದಿರಲಿ. ನಮ್ಮ ದೇಶದ ಹಿತದೃಷ್ಟಿಯಿಂದ, ನಮ್ಮ ಊರಿಗೆ ನಮ್ಮ ಗ್ರಾಮಕ್ಕೆ, ನಮ್ಮ ನಾಡಿಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಹಿತವನ್ನು ಉಂಟು ಮಾಡುವ ಅಭ್ಯರ್ಥಿಗಳಿಗೆ ಮತ್ತು ಪಕ್ಷಗಳಿಗೆ ಮತದಾನ ಮಾಡಿ. ನನ್ನ ತಾತ, ಮುತ್ತಾತ ಅಪ್ಪಂದಿರ ಕಾಲದಿಂದಲೂ ನಾವು ಒಂದೇ ಪಕ್ಷಕ್ಕೆ ಮತ ಹಾಕುವುದು ಎಂಬ ತತ್ವಕ್ಕೆ ಜೋತು ಬಿದ್ದಲ್ಲಿ, ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿ ಕೊಂಡಂತಾಗಬಹುದು. ಪಕ್ಷಗಳ ಸಿದ್ಧಾಂತ, ಆದರ್ಶಗಳು ಪ್ರಣಾಳಿಕೆಗಳು ಮತ್ತು ದೇಶದ ಭದ್ರತೆ ಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮತವನ್ನು ಚಲಾಯಿಸಿ.

೪. ಯಾವುದೇ ಕಾರಣಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ಮತವನ್ನು ಮಾರಿಕೊಂಡರೆ ಅಥವಾ ಒಂದು ರೀತಿಯ ಸಾಮಾಜಿಕ ಅತ್ಯಾಚಾರ, ಅಥವಾ ವ್ಯಭಿಚಾರ ಆಗುತ್ತದೆ. ನಾವು ಮಾಡುವ ತಪ್ಪಿನಿಂದ ಉಳಿದವರೂ ಕಷ್ಟ ಅನುಭವಿಸುವಂತಾಗುತ್ತದೆ. ನೆನಪಿರಲಿ ದಾಕ್ಷಿಣ್ಯಕ್ಕೆ ಬಸಿರಾದರೆ ಪ್ರಸವಿಸಲು ಜಾಗ ಸಿಗದು.

೫. ಮತದಾನ ಎನ್ನುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕು ಮತ್ತು ಅದು ನಿಮ್ಮ ಶಕ್ತಿ ಕೂಡ. ನೀವು ನಿಮ್ಮ ಹಕ್ಕನ್ನು ಅಧಿಕಾರಯುತವಾಗಿ ಚಲಾಯಿಸಿದಲ್ಲಿ ಮಾತ್ರ ನೀವು ಮತ್ತುಷ್ಟು ಶಕ್ತಿಶಾಲಿಯಾಗುತ್ತಿರಿ ಮತ್ತು ಸರಕಾರದಲ್ಲಿ ಧನಾತ್ಮಕವಾಗಿ ತೊಡಗಿಸಿಕೊಳ್ಳಲು ನಿಮಗೆ ನೈತಿಕ
ಹಕ್ಕನ್ನು ನೀಡುತ್ತದೆ.

೬. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಸಾಮಾನ್ಯ ಮತದಾರನಿಗೂ ದೇಶದ ಭವಿಷ್ಯವನ್ನು ಬದಲಾಯಿಸಬಲ್ಲ ಮಹಾನ್ ಶಕ್ತಿ ಇದೆ. ಅದುವೇ ‘ಮತದಾನ’ ಎಂಬ ಪ್ರಕ್ರಿಯೆ. ಮತದಾನ ಎಂಬುವುದು ಬಹಳ ಪವಿತ್ರವಾದ ಮತ್ತು ಹೊಣೆಗಾರಿಕೆಯುಳ್ಳ ಪ್ರಕ್ರಿಯೆ ಯಾಗಿರುವುದರಿಂದ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ಇದರಲ್ಲಿ ಪಾಲ್ಗೊಂಡು, ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು.

೭. ನಾನೊಬ್ಬ ಮತದಾನ ಮಾಡದಿರುವುದರಿಂದ ಏನೂ ವ್ಯತ್ಯಾಸವಾಗದು, ನಾನ್ಯಾಕೆ ಬಿಸಿಲಲ್ಲಿ ಒಣಗಿಕೊಂಡು ಸರತಿ ಸಾಲಿನಲ್ಲಿ ನಿಂತು ಅಯೋಗ್ಯ ರಾಜಕಾರಣಿಗಳಿಗೆ ಮತದಾನ ನೀಡಬೇಕು ಎಂಬ ಋಣಾತ್ಮಕ ಧೋರಣೆಯಿಂದ ದೇಶಕ್ಕೆ ಬಹುದೊಡ್ಡ ಕಂಟಕ ಆಗಲೂಬಹುದು.

ನೀವು ಮತದಾನ ಮಾಡದಿದ್ದಾಗ, ಅಯೋಗ್ಯ ವ್ಯಕ್ತಿಗಳು ಆಯ್ಕೆಯಾಗಿ ದೇಶವು ಸ್ವಾರ್ಥ, ಸ್ವಂತ ಹಿತಾಸಕ್ತಿ ಹೆಚ್ಚಾಗಿರುವ ಮರುಳ ರಾಜಕಾರಣಿಗಳ ಕೈಗೆ ಸಿಕ್ಕಿ ಹಾಕಿಕೊಂಡು ದೇಶಕ್ಕೆ ಬಹು ದೊಡ್ಡ ಅಪಾಯ ಉಂಟಾಗಬಹುದು. ದೂರದೃಷ್ಟಿ ಉಳ್ಳ ನಿಸ್ವಾರ್ಥ ಮನೋಭಾವದ ಪ್ರಾಮಾಣಿಕ ವ್ಯಕ್ತಿಗಳು ಸೋತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕುತ್ತು ಬರಬಹುದು. ಹಣ ಬಲ, ಹೆಂಡ ಬಲ ಮತ್ತು ಅಽಕಾರದ ಬಲದಿಂದ ಅಯೋಗ್ಯರೇ ಆಯ್ಕೆಯಾಗಿ ದೇಶ ಅಯೋಗ್ಯರ ಕೈಗೆ ಸಿಲುಕಿ ನಲುಗಬಹುದು.

೮. ಒಬ್ಬ ಮತದಾರನ ಹೊಣೆಗೇಡಿತನ, ಲಜ್ಜೆತನ ಮತ್ತು ನಿರ್ಲಕ್ಷ್ಯದಿಂದಾಗಿ ದೇಶದ ಎಲ್ಲ ಜನರು ಕಷ್ಟ ಅನುಭವಿಸುವಂತಾಗಬಾರದು. ಹಾಗಾಗಿ ಎಲ್ಲರೂ ತಮ್ಮ ಮತದಾನವನ್ನು ಪ್ರಾಮಾಣಿಕವಾಗಿ ಮಾಡಬೇಕು ಮತ್ತು ಪ್ರಜಾಪ್ರಭುತ್ವದ ಹಬ್ಬವೆಂದು ಚುನಾವಣೆಯಲ್ಲಿ ಸಂಭ್ರಮದಿಂದ ಪಾಲ್ಗೊಳ್ಳ ಬೇಕು.

 
Read E-Paper click here

error: Content is protected !!