Wednesday, 11th December 2024

ಅತಂತ್ರವೆಂದರೆ ಮತ್ತೊಂಥರದ ಕೆಸರೆರಚಾಟ

ಅಭಿವ್ಯಕ್ತಿ

ಹೃತಿಕ್ ಕುಲಕರ್ಣಿ

hritikulkrni@gmail.com

ರಾಜ್ಯದಲ್ಲಿ ಅತ್ಯುತ್ತಮ ಜನಪರ ಆಡಳಿತ ಕೊಟ್ಟ ಮುಖ್ಯಮಂತ್ರಿಗಳ ಪೈಕಿ ಲಿಂಗಾಯತ ನಾಯಕರಾದ ವೀರೇಂದ್ರ ಪಾಟೀಲರು ಅಗ್ರಗಣ್ಯರು ಎಂಬುದನ್ನು ಓದಿ ಬಲ್ಲೆ. ಹೇಗೆ ಬ್ರಾಹ್ಮಣ ರಾಮಕೃಷ್ಣ ಹೆಗಡೆಯವರನ್ನು ಜಾತ್ಯತೀತವಾಗಿ ಕನ್ನಡ ಜನ ಬೆಂಬಲಿಸಿದ್ದರೋ ಪಾಟೀಲರನ್ನು ಸರ್ವ ಜನಾಂಗದ, ಎಲ್ಲ ಜಾತಿಯ ಜನರೂ ಒಪ್ಪಿ ಅಪ್ಪಿದ್ದರು. ಆದರೆ ಅಂಥ ದೈತ್ಯ ಲಿಂಗಾಯತ ನಾಯಕನನ್ನು ಕಾಂಗ್ರೆಸ್ಸು ಕಿಂಚಿತ್ತೂ ದಯೆ ದಾಕ್ಷಿಣ್ಯವಿಲ್ಲದೆ ನಡೆಸಿಕೊಂಡದ್ದೀಗ ಇತಿಹಾಸ.

ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ಸಿನಿಂದ ಒಬ್ಬೇ ಒಬ್ಬ ಲಿಂಗಾಯತ ಮುಖ್ಯಮಂತ್ರಿ ಹೊರಬಂದಿಲ್ಲ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ಸಿನಲ್ಲಿ ಲಿಂಗಾಯತ ನಾಯಕರಿರಲಿಲ್ಲ ಎಂದೇನಲ್ಲ. ಕೆ.ಎಚ್.ಪಾಟೀಲ್, ಎಚ್.ವಿ. ಕೌಜಲಗಿರಂಥ ಮುತ್ಸದ್ದಿಗಳು ಅಂದೂ ಕಾಂಗ್ರೆಸ್ಸಿನಲ್ಲಿದ್ದರು. ಇಂದೂ ಇದ್ದಾರೆ. ಆದರೆ ಕಾಂಗ್ರೆಸ್ ಅವರನ್ನೆಷ್ಟು ಮುನ್ನೆಲೆಗೆ ತಂತು, ಎಷ್ಟರ ಮಟ್ಟಿಗೆ ಅವರ ರಾಜಕೀಯ ಬೆಳವಣಿಗೆಗೆ ಸಹಕಾರಿಯಾಯಿತು ಎಂಬುದು ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯದ ಜನ ವಿವೇಚನೆಯಿಂದ ಆಲೋಚಿಸಬೇಕಿರುವ ವಿಷಯ.

ಲಕ್ಷ ಲಕ್ಷ ಜಾತಿ ಉಪಜಾತಿ, ಸಾವಿರಾರು ಭಾಷೆ, ನೂರಾರು ಧರ್ಮಗಳು ಈ ಭಾರತ ನೆಲದಲ್ಲಿ ನೆಲೆಯೂರಿವೆ, ತನ್ನ ಬೇರನ್ನು ಗಟ್ಟಿಯಾಗಿ ಒಳಹೊಕ್ಕಿಸಿವೆ. ಇದಕ್ಕೆಲ್ಲ ಕಳಸಪ್ರಾ ಯದಂತೆ ಪ್ರಜಾವ್ಯವಸ್ಥೆ ಎಂಬ ವಜ್ರ ಕಿರೀಟ ಭಾರತೀಯ ರಾಜಕೀಯದ ಮುಡಿಯಲ್ಲಿದೆ. ಇಂಥ ವೈವಿಧ್ಯತೆ ವಿಶೇಷತೆಯಿಂದ ಕೂಡಿರುವ ದೇಶದಲ್ಲಿ ಜಾತಿ, ಧರ್ಮಗಳ ಆಧಾರದ ಮೇಲೆ ಚುನಾವಣೆಗಳು ನಡೆಯುವುದು, ಟಿಕೆಟ್ ಹಂಚಿಕೆಯಾಗುವುದು, ಮಂತ್ರಿ, ಮುಖ್ಯ ಮಂತ್ರಿಯ ನಿಶ್ಚಯವಾಗುವುದು ದುರದೃಷ್ಟಕರವೇ.

ಆದರೇನು ಮಾಡುವುದು ಅನೂಚಾನವಾಗಿ ನಡೆದು ಬಂದ ಪದ್ಧತಿಯಿದು. ಕಾಲಕಾಲಕ್ಕೆ ಅದು ರೂಪಾಂತರವಾಗಿ ಹೊಸ ರೂಪದಲ್ಲಿ ರಾಜಕೀಯವನ್ನಾಳುತ್ತಿದೆ ಯಷ್ಟೇ. ಭ್ರಷ್ಟಾಚಾರ, ಸೋಗಲಾಡಿತನಗಳಂತೆ ಧರ್ಮ, ಜಾತಿ, ಉಪಜಾತಿಗಳೂ ಇಂದು ರಾಜ್ಯ ವ್ಯವಸ್ಥೆಯಿಂದ ಬಿಡಿಸಲಾಗದ ಅಂಶಗಳಾಗಿವೆ. ನಾವೂ ಅದಕ್ಕೆ ಹೂಂ ಎಂದುಕೊಂಡು ಹೊಂದಿಕೊಂಡು ಅಡ್ಜಸ್ಟ್ ಆಗಿ ಹೋಗಿದ್ದೇವೆ. ಆ ವಿಷಯ ಒತ್ತಟ್ಟಿಗಿರಲಿ. ವೀರೇಂದ್ರ ಪಾಟೀಲರ ನಂತರ ಒಬ್ಬೇ ಒಬ್ಬ ಲಿಂಗಾಯತ ನಾಯಕ ನನ್ನು ಮುನ್ನೆಲೆಗೆ ತರದ ಕಾಂಗ್ರೆಸ್ಸು ಇಂದು ಬಿಜೆಪಿಯ ಮೇಲೆ ತನ್ನ ಆಪಾದನಾಸಗಳನ್ನು ಎಡೆಬಿಡದೆ ಬಿಡುತ್ತಿರುವುದನ್ನು ನೋಡಿದರೆ ಯಪ್ಪಾ ಎಂದು ತಲೆ ಮೇಲೆ ಕೈಹೊತ್ತು ಕೂರಬೇಕೆನಿಸುತ್ತದೆ. ಅಷ್ಟಕ್ಕೂ ಬಿಜೆಪಿ ಲಿಂಗಾಯತ ನಾಯಕರನ್ನು ಬೆಳೆಸಿದೆ. ಅಥವಾ ಲಿಂಗಾಯತ ನಾಯಕರು ಕರ್ನಾಟಕ ಬಿಜೆಪಿಯನ್ನು ಬೆಳೆಸಿದ್ದಾರೆ.

ರಾಜ್ಯದಲ್ಲಿ ಭಾಜಪಾ ಅಽಕಾರಕ್ಕೆ ಬಂದಾಗಲೆಲ್ಲ ಲಿಂಗಾಯತರೇ ಮುಖ್ಯಮಂತ್ರಿ ಆಗಿದ್ದಾರೆಂಬುದು ಯಾರಿಗೂ ತಿಳಿಯದ ವಿಷಯವೇನಲ್ಲ. ಅದು ಬಿಜೆಪಿಗೆ ಅನಿವಾರ್ಯವೂ ಆಗಿತ್ತೆನ್ನುವುದು ಬೇರೆ ವಿಷಯ. ಆದರೀಗ ಕಾಂಗ್ರೆಸ್ಸು ಶೆಟ್ಟರ್ ಮತ್ತು ಸವದಿಯ ಉದಾಹರಣೆಗಳನ್ನಷ್ಟೇ ಇಟ್ಟುಕೊಂಡು ಬಿಜೆಪಿ ಲಿಂಗಾಯತರನ್ನು ಕಡೆಗಣಿಸಿದೆ ಎನ್ನುತ್ತಿರುವುದು ಬಾಲಿಶತನ ಪರಮಾವಧಿಯಷ್ಟೆ.

ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲರಂಥ ಲಿಂಗಾಯತ ನಾಯಕರ ಹೆಸರು ಸಿಎಂ ಲಿಸ್ಟ್ ನಲ್ಲಿರಬಾರದೇಕೆ ಎಂದು
ಕೇಳಿದರೆನೇ ಗುರ್ ಎನ್ನುವವರನ್ನು ಕಾಂಗ್ರೆಸ್ ತನ್ನ ಮಡಿಲಲ್ಲಿಟ್ಟು ಪೋಷಿಸುತ್ತಿದೆ. ಇಂಥದ್ದರ ಮಧ್ಯೆ ಸಿಕ್ಕೆರಡು ಉದಾ  ಹರಣೆಗಳನ್ನು ಇಟ್ಟುಕೊಂಡು ಬಿಜೆಪಿಯನ್ನು ಅತ್ತಿಂದಿತ್ತ ಇತ್ತಿಂದತ್ತ ಎಳೆಯುತ್ತಿದೆ. ಅದರಿಂದ ಅತಿ ದೊಡ್ಡ ಲಾಭವಾದರೂ ಕಾಂಗ್ರೆಸ್ಸಿಗಾದೀತೆ? ಅದೂ ಶಕ್ಯವಿಲ್ಲ. ಹೀಗಿರುವಾಗ ಎತಕ್ಕೀ ವ್ಯರ್ಥ ಪ್ರಯತ್ನ.

ಕರ್ನಾಟಕ ಕಾಂಗ್ರೆಸ್ಸಿನ ಅಗ್ರ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸಿಕ್ಕಸಿಕ್ಕಲ್ಲೆಲ್ಲ ಕೈಹಾಕಿ ಕಚ್ಚಿಸಿಕೊಳ್ಳು ವಷ್ಟು ಮೂರ್ಖರಲ್ಲ. ಆದರೂ ಈ ವಿಷಯದಲ್ಲಿ ಹಿಂದೆ ಸಿದ್ದರಾಮಯ್ಯ ಮಾಡಿದ ಪ್ರಮಾದವೆಂದರೆ ವೀರಶೈವ ಲಿಂಗಾಯತ ರನ್ನು ಬೇರ್ಪಡಿಸುವ ಅರ್ಥಾತ್ ಪ್ರತ್ಯೇಕ ಲಿಂಗಾಯತ ಧರ್ಮವನ್ನು ರಚಿಸುವ ಧೂರ್ತ ಕೆಲಸಕ್ಕೆ ಕೈ ಹಾಕಿದ್ದು. ಕಾಂಗ್ರೆಸ್ಸನ್ನು ಮುಟ್ಟಿದರೆನೇ ಮೈಲಿಗೆ ಎಂಬ ಭಾವನೆಯಲ್ಲಿದ್ದ ಬಹುಸಂಖ್ಯಾತ ಲಿಂಗಾಯತರಿಗೆ ಸಿದ್ದರಾಮಯ್ಯರ ಈ ಅತಿ ಹೀನ ವಿಚಾರ ಮತ್ತಷ್ಟು ಕೆರಳಿಸಿತು, ಆಕ್ರೋಶಿತರನ್ನಾಗಿ ಮಾಡಿತು.

ಅದರ ಪರಿಣಾಮವನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವವಿಸಿದೆ, ಪ್ರಾಯಶ್ಚಿತ್ತಕ್ಕಾಗಿ ಈಗ ಕಾರ್ಯಪ್ರವೃತ್ತ ವಾಗಿದೆ. ಸಿದ್ದು, ಡಿಕೆ ಸಾಮಾನ್ಯರೇನಲ್ಲ. ಬಿಜೆಪಿಯ ವರಿಷ್ಠರು ಇಲ್ಲಿನ ಲಿಂಗಾಯತ ನಾಯಕರನ್ನು ಅದೆಷ್ಟು ತುಚ್ಛವಾಗಿ
ನಡೆಸಿಕೊಳ್ಳುತ್ತಿದ್ದಾರೆ ನೋಡಿ ಎಂದು ಬಾರಿ ಬಾರಿ ಹೇಳುತ್ತಿದ್ದಾರೆ. ಈ ವಾದ ಸಮರ್ಥನೆಗೆ ಬೇಕಾದ ಒಳ್ಳೊಳ್ಳೆ ನಿದರ್ಶನ ಗಳೂ ಅವರ ಕೈಯಲ್ಲೀಗ ಇವೆ. ಕಾಂಗ್ರೆಸ್ಸು ಅಧಿಕಾರಕ್ಕೆ ಬರಬೇಕೆಂದರೆ ಮುಖ್ಯವಾಗಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಲಿಂಗಾಯತರ ಕೃಪಾಶೀರ್ವಾದಕ್ಕಾಗಿ ಅವರ ಮುಂದೆ ಶರಣು ಎನ್ನಲೇಬೇಕು.

ಶರಣೆಂದ ಮಾತ್ರಕ್ಕೆ ಅಸ್ತು ಎನ್ನಲು ಅವರೇನು ಕಾಂಗ್ರೆಸ್ ಹೈಕಮಾಂಡೇ? ಅದಕ್ಕೇ ಈಗ ಕೈ ಪಕ್ಷ ಬಿಜೆಪಿ ಹೇಗೆ ಲಿಂಗಾಯತ ನಾಯಕರ ಕೈಗೆ ಬರೆ ಇಡುತ್ತಿದೆ ಎಂದು ಜನರಿಗೆ ಮತ್ತೆ ಮತ್ತೆ ಹೇಳಿದ್ದನ್ನೇ ಹೇಳುತ್ತಿದೆ. ಒಂದೊಮ್ಮೆ ಈ ಸ್ಟ್ರಾಟರ್ಜಿ ವರ್ಕ್ ಆದರೆ ಬಿಜೆಪಿಗೆ ಅಂಟಿಕೊಂಡಿರುವ ಅದೆಷ್ಟು ಲಿಂಗಾಯತ ಮತಗಳನ್ನು ಕಾಂಗ್ರೆಸ್ಸು ತನ್ನ ಕಡೆ ಸೆಳೆಯುತ್ತದೆ ಎಂಬುದು ಕುತೂಹಲಕಾರಿ ಸಂಗತಿ. ಕೇವಲ ಮತ ಸೆಳೆದರೂ ಸಾಲದು. ಅದರ ಪರಿಣಾಮ ಆಯಾಯಾ ಪ್ರಾಂತ್ಯಗಳಲ್ಲಿ ಅವರ ಶಾಸಕರು ಗೆದ್ದು ಬರಬೇಕು. ಆದರೆ ಇದಕ್ಕೆಲ್ಲ ಉತ್ತರ ಮೇ ೧೩ಕ್ಕೇ.

ಬಿಜೆಪಿಯ ಸೊಕ್ಕಿನ ಬಗ್ಗೆಯೂ ಒಂದಿಷ್ಟು ಹೇಳದೆ ಹೋದರೆ ಅದು ಆ ಪಕ್ಷಕ್ಕೇ ಮಾಡುವ ಅಪಮಾನ. ಯಡಿಯೂರಪ್ಪರನ್ನು ಸಿಎಂ ಗಾದಿಯಿಂದಿಳಿಸಿ ಬೊಮ್ಮಾಯಿ ಯವರನ್ನಲ್ಲಿ ಕೂರಿಸಿದಾಗ ಲಿಂಗಾಯತರು ದಿಲ್ ಖುಷ್ ಆಗಿದ್ದರು. ಅಷ್ಟಕ್ಕೂ ಮುಂಚಿ ನಿಂದಲೂ ಬಿಜೆಪಿ ಲಿಂಗಾಯತಪರ ನಿಲುವುಗಳನ್ನು, ಅವರ ಶ್ರೇಯೋಭಿವೃದ್ಧಿಗೆ ಬೇಕಾದ ಅಗತ್ಯ ಸೌಲಭ್ಯ ಸೌಕರ್ಯಗಳನ್ನು ತಕ್ಕಮಟ್ಟಿಗಾದರೂ ಒದಗಿಸುತ್ತ ಬಂದಿದೆ. ಅದಕ್ಕೇ ಕಾರಣ ಅಧಿಕಾರಕ್ಕೇರಲು ಲಿಂಗಾಯತರ ಸಹಕಾರ, ಸಹಮತ ಬಿಟ್ಟರೆ ಅವರಿಗೆ ಬೇರೆ ಗತಿಯಿಲ್ಲ ಎನ್ನುವುದು. ಅದು ತಪ್ಪೂ ಅಲ್ಲ ಬಿಡಿ.

ಆದರೆ ಇತ್ತೀಚೆಗೆ ಭಾಜಪಾ ವಲಯದಲ್ಲಿ ನಡೆದ ಕೆಲ ಘಟನೆಗಳು ಕೆಲ ಲಿಂಗಾಯತರನ್ನು ಅತೃಪ್ತಿಗೊಳಿಸಿರಲಿಕ್ಕೆ ಸಾಕು.
ಉದಾಹರಣೆಗೆ, ಬಿಎಸ್‌ವೈ ಕೆಳಗಿಳಿಸಿದ್ದು. ಅದರಿಂದಾಗಬಹುದಾದ ಡ್ಯಾಮೇಜನ್ನು ಬಹಳ ಚೆಂದವಾಗೇ ಬಿಜೆಪಿ ಮ್ಯಾನೇಜ್ ಮಾಡಿತು. ಆದರೆ ಜಗದೀಶ್ ಶೆಟ್ಟರ್ ವಿಷಯ ದಲ್ಲಿ ಅವರಾಡಿದ ಆಟ ಯಾಕೋ ಬಿಜೆಪಿಗೆ ಹೇಳಿ ಮಾಡಿಸಿದ್ದಾಗಿರಲಿಲ್ಲ ಎನಿಸುತ್ತದೆ. ಸವದಿ ಬಿಡಿ, ಸಿದ್ಧಾಂತಗೇಡಿಗಳೆಲ್ಲ ಬಿಜೆಪಿಗೆ ಲೆಕ್ಕಕ್ಕಿಲ್ಲ. ಶೆಟ್ಟರನ್ನಾದರೂ ಸ್ವಲ್ಪ ಸರಿಯಾಗಿ ನಡೆಸಿಕೊಳ್ಳ ಬಹುದಿತ್ತು. ಅವರಿಗೆ ಟಿಕೆಟ್ ನಿರಾಕರಿಸಲು ಕಾರಣವಾದರೂ ಏನಿತ್ತು? ವಯಸ್ಸೇ? ಪಾಪ ಶೆಟ್ಟರ್ (೬೭) ಇನ್ನೂ ಎಪ್ಪತ್ತೂ ಆಗದ ನವ ಯುವಕ.

ಟಿಕೆಟ್ ನಿರಾಕರಣೆಗೆ ವಯಸ್ಸೇ ಮಾನದಂಡವಾಗಿದ್ದರೆ ಶೆಟ್ಟರ್ ಗಿಂತ ವಯಸ್ಸಿನಲ್ಲಿ ಹಿರಿಯರಿರುವ ಗೋವಿಂದ ಕಾರಜೋಳ(೭೨), ಹಾಲಪ್ಪ ಆಚಾರ್(೭೦), ಎಸ್. ತಿಪ್ಪೇಸ್ವಾಮಿ (೭೪) ಇವರಿಗೆಲ್ಲ ಟಿಕೆಟ್ ನೀಡಿದ್ದು ಯಾಕೆ? ಸತತ
ಆರು ಸಲ ಗೆದ್ದಿರಿ, ಇನ್ನು ಸಾಕು ಎಂಬ ಮನೋಭಾವವೇ? ಹಾಗಿದ್ದರೆ ಅದು ವಿಶ್ವೇಶ್ವರ ಹೆಗಡೆ ಕಾಗೇರಿ, ಸುರೇಶ ಕುಮಾರ್
ಗೂ ಅನ್ವಯವಾಗಬೇಕಲ್ಲ. ಹೊಸ ಮುಖಗಳಿಗೆ ಅವಕಾಶ ಕೊಡೋ ಇಚ್ಛೆ ಇದ್ದಿದ್ದರೆ ನಿಮ್ಮ ಮನೆ ಮಂದಿಯಲ್ಲೇ ಯಾರಿ ಗಾದರೊಬ್ಬರಿಗೆ ಟಿಕೆಟ್ ಕೊಟ್ಟರಾಯಿತು ಬಿಡಿ ಶೆಟ್ರೆ ಎನ್ನುತ್ತಿರಲಿಲ್ಲ ಬಿಜೆಪಿ.

ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದು ಮಾತನಾಡೋ ಬಿಜೆಪಿಗರು ಅದೆಷ್ಟು ಕುಟುಂಬಗಳ ಸೊಸೆ, ಹೆಂಡತಿ, ಮಕ್ಕಳಿಗೆ ಟಿಕೆಟ್ ಕೊಟ್ಟಿರಿ. ಅವರಿಗ್ಯಾವ ಸೀಮೆ ರಾಜಕೀಯ ಗೊತ್ತಿತ್ತು? ನೀವು ಮಾಡೋದು ಅಧಿಕಾರಕ್ಕಾಗೇ. ಅದನ್ನು ಓಪನ್ ಆಗೇ ಮಾಡಿ ಸ್ವಾಮಿ! ಟಿಕೆಟ್ ತಪ್ಪಿಸುವಲ್ಲಿ ಕೆಲವರ ಕೈವಾಡ, ಕಾಲ್ಚಳಕ ಇದೆ ಎಂಬ ಶೆಟ್ಟರ್ ಮಾತು ಅಷ್ಟೇನು ಪ್ರಭಾವ ಬೀರಲಿಕ್ಕಿಲ್ಲ. ಒಂದೊಮ್ಮೆ ಅವರು ಪಕ್ಷೇತರ ನಿಂತಿದ್ದರೆ ಅವರಿಗೆ ಲಿಂಗಾಯತರ ಅನುಕಂಪ ಗಿಟ್ಟಿಸುವ ಚಾನ್ಸ್ ಇತ್ತೇನೋ. ಈ ಕುರಿತು ಏನೇ ಮಾತಾಡಿದರೂ, ಬರೆದರೂ ಸದ್ಯಕ್ಕದು ಅಪ್ರಸ್ತುತ. ಶೆಟ್ಟರ್ ವಿಷಯ ಸಾಕು.

ರಾಜಕೀಯಕ್ಕೆ ಕೊನೆಯಿಲ್ಲವಾದರೂ ಅಕ್ಷರಗಳಿಗೆ ಫುಲ್ ಸ್ಟಾಪ್ ಬೀಳಲೇಬೇಕು. ಈ ಸಲದ ಚುನಾವಣೆ ಹಿಂದೆಂದಿಗಿಂತ
ಇಂಟರೆಸ್ಟಿಂಗ್ ಆಗಿದೆ. ಉತ್ತರ ಕರ್ನಾಟಕದ ಬಿಜೆಪಿಯ ಲಿಂಗಾಯತ ಮತ ಬ್ಯಾಂಕ್ ಒಡೆಯುವಲ್ಲಿ ಕಾಂಗ್ರೆಸ್ ಸಫಲವಾಗಿ, ಹಳೇ ಮೈಸೂರು ಭಾಗದಲ್ಲಿ ಸಾಧ್ಯವಾದಷ್ಟು ಜೆಡಿಎಸ್ ಅನ್ನು ಮಕಾಡೆ ಮಲಗಿಸಿದ್ದೇ ಆದರೆ ಅದಕ್ಕೆ ಭವಿಷ್ಯವಿದೆ. ಬಿಜೆಪಿ ಲಿಂಗಾಯತರ ವಿಶ್ವಾಸ ಉಳಿಸಿಕೊಂಡು, ಪ.ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಜನರ ನಂಬಿಕೆಯನ್ನೂ ಗಳಿಸಿಕೊಂಡರೆ, ಜತೆಗೆ ಹಳೇ ಮೈಸೂರು ಭಾಗದಲ್ಲಿ ಕೆಲ ಸಮೀಕ್ಷೆಗಳು (12) ಹೇಳಿದಂತೆ ಸ್ಥಾನ ಗಳಿಸಿದರೆ ಅದಕ್ಕೆ ಬಹುಮತ ಸ್ಪಷ್ಟ.

ಇಲ್ಲದೆ ಹೋದರೆ- ಕರ್ನಾಟಕ ಮತ್ತೆ ಅತಂತ್ರ! ಅತಂತ್ರವೆಂದರೆ ಮತ್ತೊಂಥರದ ಕೆಸರೆರಚಾಟ, ಮತ್ತೆ ಮುಸುಡಿಯೂ ರಾಡಿ, ಆಡಳಿತವೂ ಕೊಚ್ಚೆ.