ಅಮೆರಿಕದಲ್ಲಿಯೂ ೨೦೨೪ರ ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಡೆಮೊಕ್ರಾಟಿಕ್ ಪಕ್ಷದಿಂದ ಪುನರಾಯ್ಕೆ ಬಯಸುತ್ತಿದ್ದರೂ, ಅವರೇ ಆ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಗೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಉಳಿದಿದೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್‌ಗೆ ಅವಕಾಶ ಸಿಗುವುದು ಬಹುತೇಕ ಖಚಿತವೆನಿಸುತ್ತಿದೆ. ಟ್ರಂಪ್‌ರನ್ನು ಕಾನೂನಿನ ತೊಡಕು ಗಳಲ್ಲಿ ಸಿಕ್ಕಿಸುವ ಪ್ರಯತ್ನಗಳು ನಡೆದಿವೆ, ನಡೆಯುತ್ತಲೂ ಇವೆ. ಇವೆಲ್ಲವನ್ನೂ ಜಯಿಸಿ, ‘ಅಬ್ ಕಿ ಬಾರ್, ಫಿರ್ ಟ್ರಂಪ್ ಸರ್ಕಾರ್’ ಆಗುವ ಲಕ್ಷಣಗಳೇ ಕಾಣಿಸುತ್ತಿವೆ. ವಿಶ್ವದೆಲ್ಲೆಡೆಯ ಭೂರಾಜಕೀಯದಲ್ಲಿ ಮೂಗು ತೂರಿಸಿ ಪಂಚಾಯಿತಿ ಮಾಡಿಸುವಲ್ಲಿ ಅತೀವ ಆಸಕ್ತಿ ತೋರಿಸುವ ದೊಡ್ಡಣ್ಣ, ಇತ್ತೀಚೆಗೆ ಹಲವು ನಿರ್ಧಾರಗಳಲ್ಲಿ ಎಡವಿದ್ದು ನಿಜವಾದರೂ, ಅದನ್ನೊಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಅಧ್ಯಕ್ಷರು ಹೊಸ ತಲೆಮಾರು ಗಳನ್ನು ಪ್ರತಿನಿಧಿ ಸುವವರಾಗಬೇಕು ಎಂಬ ಅಭಿಲಾಷೆ ಜನರಿಗಿದ್ದರೂ, ಸದ್ಯಕ್ಕೆ ಅಮೆರಿಕನ್ನರಿಗಿರುವುದು ೮೧ರ ಬೈಡನ್ ಮತ್ತು ೭೭ರ ಟ್ರಂಪ್ ನಡುವಿನ ಆಯ್ಕೆಯೇ ಎನಿಸುತ್ತಿದೆ.
ಣದುಬ್ಬರ, ನಿರುದ್ಯೋಗದ ಸಮಸ್ಯೆಗಳು, ಕೋವಿಡ್ ನಂತರ ಪುಟಿದೇಳದ ಆರ್ಥಿಕತೆ, ಹೆಚ್ಚುತ್ತಿರುವ ಮಾದಕ ವ್ಯಸನಿಗಳು, ಬಿಗಡಾಯಿಸುತ್ತಿರುವ ವಸತಿರಹಿತರು/ನಿರಾಶ್ರಿತರ ಸಮಸ್ಯೆಯ ಜತೆಗೆ ನಿತ್ಯ ನಿರಂತರವೆನಿಸಿರುವ ಅಕ್ರಮ ವಲಸಿಗರ ಸಮಸ್ಯೆಗಳ ದುಷ್ಪರಿಣಾಮಗಳು ಅಮೆರಿಕದಲ್ಲಿ ಕಾಣಿಸತೊಡಗಿವೆ. ಮುಂಚೆ ದೊಡ್ಡ ನಗರಗಳಿಗೆ ಸೀಮಿತವೆನಿಸಿದ್ದ ಕಳ್ಳತನ, ಮನೆರಹಿತರ ಸಮಸ್ಯೆ ಗಳು, ಈಗೀಗ ಸಣ್ಣ ಊರುಗಳಲ್ಲೂ ಕಾಣಿಸ ತೊಡಗಿವೆ.
ಸ್ವೇಚ್ಛೆ, ಸ್ವಾತಂತ್ರ್ಯದ ಬುನಾದಿಯ ಮೇಲೆ ಬೆಳೆದು ನಿಂತ ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿ-ರ್ನಿಯಾದಂಥ ಕೆಲ ರಾಜ್ಯಗಳಲ್ಲಿ ೯೫೦ ಡಾಲರ್‌ಗಿಂತ ಕಡಿಮೆ ಮೌಲ್ಯದ ಕಳ್ಳತನಗಳನ್ನು ಗಂಭೀರವಲ್ಲದ ಅಪರಾಧವೆಂದೇ ಪರಿಗಣಿಸಲಾಗುತ್ತಿದೆ! ಮೇಲಾಗಿ, ಅಂಗಡಿಗಳಿಂದ ಕದ್ದೊಯ್ಯುವ ಕಿಡಿಗೇಡಿಗಳನ್ನು ತಡೆದು ನಿಲ್ಲಿಸುವುದು ಕಾನೂನು ಬಾಹಿರವೆನ್ನುವ ಮಸೂದೆಗಳೂ ಜಾರಿಗೊಂಡಿವೆ. ಬಂದೂಕು ಸುಲಭವಾಗಿ ಸಿಗುತ್ತದೆ, ಬಹುತೇಕರು ಇಟ್ಟುಕೊಂಡಿರುತ್ತಾರೆ ಕೂಡ. ಹಾಗಾಗಿ, ಅಂಗಡಿಯಿಂದ ಕದ್ದೊಯ್ಯುತ್ತಿರುವವರನ್ನು ತಡೆಯ ಹೋದ ನೌಕರರು ಬಂದೂಕಿನ ದಾಳಿಗೆ ತುತ್ತಾಗಿ ಜೀವ ಕಳೆದುಕೊಂಡ ನಿದರ್ಶನಗಳೂ ಸಾಕಷ್ಟಿವೆ.
ಅಂಗಡಿ ಕಳ್ಳತನದ ಜತೆಗೆ, ಕಾರಿನ ಗಾಜು ಒಡೆದು ವಸ್ತುಗಳನ್ನು ದೋಚುವುದು ಸ್ಯಾನ್ ಫ್ರಾನ್ಸಿಸ್ಕೊ, ಲಾಸ್ ಏಂಜಲೀಸ್‌ನಂಥ ಮಹಾನಗರಗಳಲ್ಲಿ ಸರ್ವೇಸಾಮಾನ್ಯವೆನಿಸಿದೆ. ವ್ಯವಸ್ಥೆಯು ಹಳಿ ತಪ್ಪಿ ಈ ಹಂತವನ್ನು ತಲುಪುವಲ್ಲಿ ಅಕ್ರಮ ವಲಸೆ/ವಲಸಿಗರ ಪಾಲೂ ದೊಡ್ಡದಿದೆ. ಒಂದು ಅಂದಾಜಿನ ಪ್ರಕಾರ, ೧೭ ದಶಲಕ್ಷದಷ್ಟು ಅಕ್ರಮ ವಲಸಿಗರು ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣ ಸುಮಾರು
ಶೇ.೫ಕ್ಕಿಂತ ಹೆಚ್ಚಿದೆ. ೨೦೨೩ರ ವರ್ಷವೊಂದರಲ್ಲೇ, ಗಡಿಭದ್ರತಾ ಪಡೆಗಳ ಕಣ್ಣುತಪ್ಪಿಸಿ ನುಸುಳಿ ಬಂದ ಅಕ್ರಮ ವಲಸಿಗರ ಸಂಖ್ಯೆ ಸುಮಾರು ೮.೬ ಲಕ್ಷಕ್ಕೂ ಅಽಕವೆಂಬುದು ಸಾರ್ವಜನಿಕ ಮಾಹಿತಿ.
ಅರಿಜೋನಾ ಮತ್ತು ಟೆಕ್ಸಾಸ್ ರಾಜ್ಯಗಳಲ್ಲಿನ ಗಡಿಗಳಲ್ಲಿ ಬೇಲಿ ನುಸುಳಿ ಅಮೆರಿಕ ತಲುಪುವ ಅಕ್ರಮ ವಲಸಿಗರ ಸಂಖ್ಯೆ ಕೆಲವೊಮ್ಮೆ ದಿನವೊಂದಕ್ಕೆ ೧೦ ಸಾವಿರಕ್ಕೂ ಹೆಚ್ಚಿರುತ್ತದಂತೆ! ಹೀಗಿದ್ದೂ, ವಿಶ್ವ ದೆಲ್ಲೆಡೆ ಮದ್ದು-ಗುಂಡು ಮಾರಿಕೊಂಡು ನ್ಯಾಯ ಪಂಚಾಯಿತಿಗೆ ಮುಂದಾಗುವ ಅಮೆರಿಕಕ್ಕೆ ಇದನ್ನು ನಿಯಂತ್ರಿಸಲಾಗುತ್ತಿಲ್ಲವೇಕೆ? ಇದನ್ನು ಕೆದಕಿದಾಗ ಕಾಣಿಸುವುದು ಆಘಾತಕಾರಿ ರಾಜಕಾರಣ ಮತ್ತು ಮತಬೇಟೆಯ ಹೆಜ್ಜೆಗುರುತುಗಳು!
ಬದುಕು ಕಟ್ಟಿಕೊಳ್ಳುವ ಆಸೆಯಿಂದ ದಕ್ಷಿಣ ಅಮೆರಿಕ ಭಾಗದಿಂದ ನುಸುಳುತ್ತಿರುವ ಅಕ್ರಮ ವಲಸಿಗರನ್ನು ಕಂಡೂಕಾಣದಂತೆ ಬಿಟ್ಟುಕೊಳ್ಳಲಾಗುತ್ತಿದೆ. ಮಾನವೀಯ ನೆಲೆಗಟ್ಟಿನಲ್ಲಿ ಸಕ್ರಮಗೊಂಡ ಕುಟುಂಬಗಳು ಇದನ್ನು ತಲೆತಲಾಂತರಗಳಲ್ಲೂ ಸಾಧ್ಯವಾಗಿಸಿದ ರಾಜಕೀಯ ಪಕ್ಷಕ್ಕೆ ಋಣಿಯಾಗಿರುತ್ತವೆ ಎಂಬ ಮತದಾಸೆ, ಅಧಿಕಾರದ ಲಾಲಸೆಯೇ ಇದರ ಹೂರಣ! ಈ ಒಳನೋಟವನ್ನು ಬಿಟ್ಟು ಕೊಟ್ಟಿದ್ದೂ ಆಡಳಿತದ ಚುಕ್ಕಾಣಿಯಲ್ಲಿರುವ ಡೆಮೊ ಕ್ರಾಟಿಕ್ ಪಕ್ಷದ ರಾಜಕಾರಣಿಗಳೇ! ಮನೆಯೇ ಮುರಿದು ಬೀಳುತ್ತಿದ್ದರೂ ಸಹಿಸಿ, ಮತದಾಸೆಗೆ ಭಾಗ್ಯ ಒದಗಿಸುವ ರಾಜಕಾರಣಿಗಳು ಇಲ್ಲೂ ಇದ್ದಾರೆ!
ನುಸುಳುವಿಕೆ ನಡೆಯುತ್ತಿದ್ದುದು ಇವತ್ತು ನಿನ್ನೆಯಿಂದಲ್ಲ. ರಿಪಬ್ಲಿಕನ್ ಆಡಳಿತವಿರುವ ಟೆಕ್ಸಾಸ್ ಪ್ರದೇಶವು ಮುಂಚೆಯೆಲ್ಲ ಈ ಅಕ್ರಮ ವಲಸಿಗರ ನಿರ್ವಹಣೆ ತನ್ನಿಂದ ಸಾಧ್ಯವಿಲ್ಲವೆಂದು ಕೈಚೆಲ್ಲಿತ್ತು. ಆಗೆಲ್ಲ ಒಳಬಂದ/ಬರಿಸಿಕೊಂಡ ಅಕ್ರಮ ವಲಸಿಗರನ್ನು ಡೆಮೊಕ್ರಾಟಿಕ್ ಆಡಳಿತವಿರುವ ನ್ಯೂಯಾರ್ಕ್, ಫಿಲಡೆಲಿಯಾ ಪ್ರದೇಶಗಳಿಗೆ ಬಸ್ಸುಗಳಲ್ಲಿ ಕಳುಹಿಸಿಕೊಡಲಾಗಿತ್ತು. ಟೆಕ್ಸಾಸ್ ಸರಕಾ ರದ ‘ಆಪರೇಷನ್ ಲೋನ್ ಸ್ಟಾರ್’ ಎಂಬ ಕಾರ್ಯಾಚರಣೆಯಲ್ಲಿ ೫೦ ಸಾವಿರಕ್ಕೂ ಹೆಚ್ಚಿನ ಅಕ್ರಮ ವಲಸಿಗರನ್ನು ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ಶಿಕಾಗೊ, ಡೆನ್ವರ್, ಫಿಲಡೆಲಿಯಾ, ಲಾಸ್
ಏಂಜಲೀಸ್‌ನಂಥ ನಗರಗಳಿಗೆ ಬಸ್ಸು, ವಿಮಾನಗಳಲ್ಲಿ ಕಳುಹಿಸಲಾಗಿದೆ.
ಅಗತ್ಯವಿರುವ ನೆಮ್ಮದಿ ಕೇಂದ್ರಗಳನ್ನೂ ಸರಕಾರದ ಖರ್ಚಿನಲ್ಲಿ ತೆರೆಯಲಾಗಿದೆ. ಕೆಲವೊಮ್ಮೆ ಅಂಥ ವ್ಯವಸ್ಥೆಗಳು ಮುಗಿದ ನಂತರವೋ ಅಥವಾ ಮುಂಚೆಯೋ, ಅಲ್ಲಿಂದ ತಪ್ಪಿಸಿಕೊಂಡು ಹಲವರು ಹೊರಬಿದ್ದಿದ್ದಾರೆ. ಇಂಥ ಬಹುತೇಕರು ಉದ್ಯಾನ, ರೈಲು ನಿಲ್ದಾಣ, ಪಾರ್ಕಿಂಗ್ ತಾಣಗಳಲ್ಲಿ ಟೆಂಟ್ ಹಾಕಿ ದಿನ ಕಳೆಯುತ್ತಿರುವ ದೃಶ್ಯಗಳು ಹೆಚ್ಚಾಗಿವೆ. ಅಮೆರಿಕದ ಪೂರ್ವ ಕರಾವಳಿಯಲ್ಲಿ ಕಾಣಬರುವ ವಿಪರೀತ ಚಳಿಯ ಸಮಯದಲ್ಲಿಯೇ, ಭೂಮಿಯಡಿಯಲ್ಲಿ ಚಲಿಸುವ ರೈಲುಗಳ ಹೊಗೆ ಬರುವಲ್ಲಿಯೇ ಟೆಂಟ್ ಹಾಕಿಕೊಂಡು ಚಳಿಯಿಂದ ರಕ್ಷಣೆ ಪಡೆಯಲು ಹರಸಾಹಸ ಪಡುವವರದ್ದು
ದುರಂತದ ಪಾಡೇ ಸರಿ. ವಾಷಿಂಗ್ಟನ್ ಡಿಸಿಯಲ್ಲಿರುವ ಅಮೆರಿಕದ ಸಂಸತ್ ಭವನದ ಕೂಗಳತೆಯಲ್ಲೇ ನಿರಾಶ್ರಿತರು ಕಾಣಿಸುತ್ತಿರುವುದು, ಮತಗಳ ಹಿಂದೆ ಬಿದ್ದು ನಿರ್ಲಜ್ಜತನ ಪ್ರದರ್ಶಿಸುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗಗಳ ಸಾಧನೆಯಾಗಿಬಿಟ್ಟಿದೆ.
ಇದೊಂದು ದೊಡ್ಡ ವಿಪರ್ಯಾಸ. ಪ್ರಸ್ತುತ ಟೆಕ್ಸಾಸ್ ರಾಜ್ಯ ಮತ್ತು ಅಮೆರಿಕದ ಕೇಂದ್ರೀಯ ಸರಕಾರ ಗಳ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಈ ರಾಜ್ಯದ ಗಡಿಭಾಗದಲ್ಲಿ ನುಸುಳಿ ಬರುತ್ತಿರುವ ಅಕ್ರಮ ವಲಸಿಗರನ್ನು ಸೀಮಾ ಸುರಕ್ಷಾ ಪಡೆಗಳು ತಡೆಯುತ್ತಿಲ್ಲವಾದ್ದರಿಂದ, ರಾಜ್ಯದ ಪಡೆಗಳನ್ನು ಬಳಸಿ ಅಕ್ರಮ ನಿಲ್ಲಿಸುವ ಪ್ರಯಾಸ ರಿಪಬ್ಲಿಕನ್ ಆಡಳಿತವಿರುವ ಟೆಕ್ಸಾಸ್ರಾಜ್ಯದ್ದು. ಇದೊಂದು ರೀತಿ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯ ಮತ್ತು ಕೇಂದ್ರದ ನಡುವಿನ ತಿಕ್ಕಾಟ. ಕೇಂದ್ರ ಸರಕಾರವು, ‘ಟೆಕ್ಸಾಸ್ ರಾಜ್ಯ ನನ್ನ ಸೀಮಾ ಸುರಕ್ಷೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಯುಂಟುಮಾಡುತ್ತಿದೆ’ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ನಲ್ಲಿ ವ್ಯಾಜ್ಯ ಹೂಡಿದೆ. ಪ್ರಪಂಚದ ಬಲಿಷ್ಠ ಪ್ರಜಾಪ್ರಭುತ್ವ ಎನಿಸಿಕೊಂಡ ಅಮೆರಿಕೆಯಲ್ಲಿನ ಅಕ್ರಮ ವಲಸಿಗರ ಜೀವನವಂತೂ ನರಕ ಸದೃಶ. ಬದುಕು ಕಟ್ಟಿಕೊಳ್ಳುವ ಬಯಕೆ ತಪ್ಪಲ್ಲ; ಆದರೆ ಅದರ ಆಸು ಪಾಸಿನಲ್ಲಿರುವ ಅಪಾಯಗಳ ಅರಿವು ಮೂಡಿ ಸುವ ಕೆಲಸವನ್ನು ಸರಕಾರಗಳೂ, ಮಾಧ್ಯಮಗಳೂ ಮಾಡದಿರುವುದು ದುರಂತ.
ದಾಸವರೇಣ್ಯರು ಇಂದೇನಾದರೂ ಇರುತ್ತಿದ್ದರೆ, ‘ಎಲ್ಲರೂ ಮಾಡು ವುದು ವೋಟಿಗಾಗಿ, ತಮ್ಮ ಸೀಟಿಗಾಗಿ’ ಎನ್ನುತ್ತಿದ್ದರೋ ಏನೋ?!!
(ಲೇಖಕರು ಹವ್ಯಾಸಿ ಬರಹಗಾರರು)