Saturday, 23rd November 2024

ಇಂದಿನ ಯುದ್ದಗಳೇಕೆ ಮುಗಿಯುವುದೇ ಇಲ್ಲ ?

ಶಿಶಿರ ಕಾಲ

shishirh@gmail.com

ಈ ಲೇಖನ ಓದುವ ಬಹುತೇಕರಿಗೆ ಯುದ್ಧ ಎಂದರೆ ಕೇವಲ ಕಲ್ಪನೆ, ಊಹೆ ಮಾತ್ರ. ಬರೆಯುತ್ತಿರುವ ನನಗೆ ಕೂಡ. ಟಿವಿಯಲ್ಲಿ ಕಂಡಷ್ಟು. ನಾವು ನೋಡಿಕೊಂಡಷ್ಟು. ಬೇಕೆನ್ನಿಸಿ ಅನುಭವಿಸಿದಷ್ಟು, ನಮಗೇನಾಗುವುದಿದೆ ಎಂದು ಅಲಕ್ಷಿಸಿದಷ್ಟು. ನಮಗ್ಯಾರಿಗೂ ನಾವಿರುವ ಊರು, ಕೇರಿ, ಗಲ್ಲಿಗಳೇ ಯುದ್ಧ ಭೂಮಿಯಾಗಿಬಿಡುವ ಭೀಕರತೆಯ ಕಲ್ಪನೆಯಿಲ್ಲ.

ಆಪ್ತರು, ಮುಖಪರಿಚಯದವರು, ನಮ್ಮ ಮಕ್ಕಳ ಸಹಪಾಠಿ, ಅಪ್ಪ ಅಮ್ಮಂದಿರು ಮನೆಯ ಗೇಟಿನ ಎದುರು ಹೆಣವಾಗಿ ಬಿದ್ದು ಕೊಳೆಯುವ ಸ್ಥಿತಿಯನ್ನು ಊಹಿಸಿಕೊಳ್ಳಲಿಕ್ಕೂ ನಮಗೆ ಸಾಧ್ಯವಿಲ್ಲ. ಎಲ್ಲಿಯೋ ಕೂತು ಯುದ್ಧವನ್ನು ಅಂದಾಜಿಸುವುದು ಅಸಾಧ್ಯ. ‘ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ನೋಡಿ ಕಂಡದ್ದೇ ಇಷ್ಟಾದರೆ, ಕಾಣದಿದ್ದದ್ದು ಇನ್ನೆಷ್ಟು?’ ಅಂತ ಊಹಿಸಬಹುದು ಅಷ್ಟೇ. ಯುದ್ಧವು ಪತ್ರಕರ್ತರಿಗೆ ಕೂಡ ಸುಲಭಕ್ಕೆ ದಕ್ಕುವು ದಿಲ್ಲ. ಆಫ್ಘಾನ್ ಯುದ್ಧ ಆರಂಭವಾದಾಗ ಕನ್ನಡದ ಟ್ಯಾಬ್ಲಾಯ್ಡ್ ಪತ್ರಕರ್ತರೊಬ್ಬರು ಸುದ್ದಿ ಮಾಡಲಿಕ್ಕೆ ಅಲ್ಲಿಗೆ ಹೋಗಿದ್ದರು. ಅವರ ವರದಿಗಳು ಅಂದು ರಂಜಿಸಿದ್ದವು.

ಆದರೆ ಅವರು ಕಾಬುಲ್‌ನ ಹೋಟೆಲ್ ರೂಮ್ ಹೊಕ್ಕವರು ಹೊರಗೆ ಬಂದಿದ್ದರೋ, ಇಲ್ಲವೋ ಎಂಬ ಬಗ್ಗೆ ಅನುಮಾನ ಈಗ ಕಾಡುತ್ತದೆ. ಏಕೆಂದರೆ ಅವರು ಹೋಗಿಬಂದ ನಂತರದ ದಿನಗಳಲ್ಲಿ ಬಂದ ಪುಂಖಾನುಪುಂಖ ಯುದ್ಧ ಕಥೆಗಳು, ಲೇಖನಗಳು, ಪುಸ್ತಕ ಇವೆಲ್ಲ ಇಂದು ನಮ್ಮ ಮುಂದಿರುವ ಸತ್ಯಕ್ಕೆ ಹೊಂದಿಕೆಯೇ ಆಗುವುದಿಲ್ಲ. ಅವರಿಗೆ ಒಂದೋ ಯುದ್ಧದ ಅಸಲಿಯತ್ತು ಕಾಣಿಸಲಿಲ್ಲ ಅಥವಾ ಅವರದು ಕಲ್ಪಿತ ಪೋಕಳೆ ಬರಹ.

ಅವಶೇಷಗಳನ್ನು ವರದಿ ಮಾಡುವ ಎಲ್ಲಾ ಸುದ್ದಿ ಮಾಧ್ಯಮಗಳು ಯುದ್ಧದ ಭೀಕರತೆಯ ಒಂದಂಶ ಮನದಟ್ಟು ಮಾಡುವಲ್ಲಿಯೇ ಸೋಲುತ್ತವೆ. ನೆಲ ಸಮವಾದ ಬಿಲ್ಡಿಂಗುಗಳು ಎಷ್ಟು ಮಾತನಾಡಿಯಾವು? ಇಂದು ಅದೆಲ್ಲದರ ನಡುವೆ ಫೇಕ್ ವಿಡಿಯೋಗಳ ಕಲಬೆರಕೆಯಿಂದಾಗಿ ಸೋಷಿಯಲ್ ಮೀಡಿಯಾವನ್ನು ಕೂಡ ನಂಬಲಾರದ ಸ್ಥಿತಿಯಿದೆ. ಯುದ್ಧಕ್ಕೆ ಕಾರಣ, ಇತಿಹಾಸ, ರಾಜಕೀಯ ಇವೆಲ್ಲ ಚರ್ಚೆ ಮತ್ತು ವಾದಕ್ಕೆ. ಅದು ಬಿಟ್ಟರೆ ಅದರಾಚೆ ಯುದ್ಧ ಶಾಂತಿಯುತವಾಗಿ ಬದುಕುತ್ತಿರುವವರಿಗೆ ದಕ್ಕುವುದಿಲ್ಲ, ಊಹೆಗೂ ಸಿಕ್ಕುವುದಿಲ್ಲ.

ಅದೊಂದು ಕಾಲವಿತ್ತು, ಬಹಳ ಹಿಂದೇನಲ್ಲ. ಆಗ ದೂರದರ್ಶನದ ವಾರ್ತೆಯೇ ನಮಗೆಲ್ಲ ತಾಲೂಕಿನ ಆಚೆ ಕೂಡ ಮನುಷ್ಯ ಸಂಕುಲವಿದೆ ಎಂಬು ದನ್ನು ತಿಳಿಸುವ ಮಾಧ್ಯಮವಾಗಿತ್ತು. ನಮ್ಮ ಮನೆಯಲ್ಲಂತೂ ಸಂಜೆ ೭ ಗಂಟೆಯ ವಾರ್ತೆಯನ್ನು ಮನೆಯವರೆಲ್ಲ ಸೇರಿ ನೋಡಬೇಕೆಂಬ ಕಟ್ಟಾಜ್ಞೆ ಅಪ್ಪನದು. ಆ ಸಮಯದಲ್ಲಿ ಮಿಕ್ಸರ್, ಕುಕ್ಕರ್ ಯಾವುದೂ ಶಬ್ದಮಾಡುತ್ತಿರಲಿಲ್ಲ. ಆದರೆ ನನಗೆ ದೂರದರ್ಶನದ ವಾರ್ತೆ ಕ್ರಮೇಣ ಬೋರ್ ಹೊಡೆಸತೊಡಗಿತು. ಅವರ ಸುದ್ದಿಯ ವ್ಯಾಪ್ತಿ ಯಾವತ್ತೂ ಕರ್ನಾಟಕ ದಾಟುತ್ತಿರಲಿಲ್ಲ.

ಬಹುತೇಕ ಸುದ್ದಿಗಳು ಬೆಂಗಳೂರು, ವಿಧಾನಸೌಧ, ವರ್ಷಕ್ಕೊಮ್ಮೆ ಕಾವೇರಿ, ತಮಿಳುನಾಡು, ಯಾವತ್ತೋ ಒಂದೆರಡು ಬಾರಿ ಲೋಕಸಭೆ, ಆಗೀಗ ವೀರಪ್ಪನ್. ಆಗ ಬಂದ ‘ಉದಯ ಟಿವಿ ವಾರ್ತೆ’ ಹೊಸ ಪ್ರಕಾರದ್ದು. ಅವರು ಕೊನೆಯ ೧೦ ನಿಮಿಷ ಅಂತಾರಾಷ್ಟ್ರೀಯ ಸುದ್ದಿ ಕೊಡುತ್ತಿದ್ದರು. ವಾರಕ್ಕೊಮ್ಮೆ ‘ಪ್ರಪಂಚ ಪರ್ಯಟನೆ’ ಎಂಬ ಕಾರ್ಯಕ್ರಮವೊಂದಿತ್ತು. ಚೆಚೆನ್ಯಾ ಬಂಡುಕೋರರು, ಗಾಜಾ ಪಟ್ಟಿ, ಇಸ್ರೇಲ್, ಪ್ಯಾಲೆಸ್ತೀನ್ ಇತ್ಯಾದಿ ಶಬ್ದಗಳನ್ನು ಮೊದಲು ಕೇಳಿದ್ದೇ ಆಗ, ಉದಯ ಟಿವಿಯಲ್ಲಿ. ಎಲ್ಲಿಯೋ ತಿಂಗಳಿಗೊಮ್ಮೆ ಯುದ್ಧವೆಂಬ ಶಬ್ದ ಕೇಳುತ್ತಿದ್ದೆವು.

ಯುದ್ಧ ಅಜ್ಞಾತವಾಗಿಯೇ ಇತ್ತು. ಅದು ತೀರಾ ಮನೆಯ ಬಾಗಿಲಿಗೆ ಬಂದು ನಿಂತಂತೆ ಅನ್ನಿಸಿದ್ದು ಕಾರ್ಗಿಲ್ ಯುದ್ಧದ ಸಮಯದಲ್ಲಿ. ಆಗ ಯುದ್ಧದ ಕೆಲವೇ ದೃಶ್ಯಗಳು ಟಿವಿಯಲ್ಲಿ ಕಾಣಿಸಿಕೊಳ್ಳಲು ಶುರುವಾದವು, ಆದರೆ ರಕ್ತ ಕಾಣಿಸಲಿಲ್ಲ (ಸದ್ದಾಂ ಹುಸೇನ್ ಕಾಲಘಟ್ಟದಲ್ಲಿ ಗಲ್ ಯುದ್ಧ ನಡೆದಾಗ ‘ಸ್ಕಡ್’ ಕ್ಷಿಪಣಿಗಳು ತೂರಿಬಂದು ಅಪ್ಪಳಿಸುವ ದೃಶ್ಯಾವಳಿಯನ್ನು ರಾಷ್ಟ್ರೀಯ ವಾಹಿನಿಯಲ್ಲಿ ತೋರಿಸಿದ್ದುಂಟು ಅನ್ನಿ). ಅದೇ ವಾಸಿ. ಅದಕ್ಕಿಂತ ಹಿಂದೆ ಒಂದಿಡೀ ಯುದ್ಧವನ್ನು ಪತ್ರಿಕೆಗಳಲ್ಲಿ ಬರುತ್ತಿದ್ದ ನಾಲ್ಕಾರು ಪ್ಯಾರಾಗಳಲ್ಲಿಯೇ ಅಂದಾಜಿಸಿಕೊಳ್ಳಬೇಕಿತ್ತು. ಈಗ ಇಂಟರ್ನೆಟ್, ಆಧುನಿಕ ೨೪೭ ಲೈವ್ ಮೀಡಿಯಾಗಳು ಬಂದ ನಂತರ ನಾವು ಯುದ್ಧಗಳಿಗೆ ಇನ್ನಷ್ಟು ಹತ್ತಿರವಾಗಿದ್ದೇವೆ, ತೆರೆದುಕೊಂಡಿದ್ದೇವೆ. ಎಲ್ಲಿಯೇ ಯುದ್ಧ ನಡೆಯಲಿ, ಭಾವನಾತ್ಮಕವಾಗಿ ಅನುಭವಿಸಲು, ಕನೆಕ್ಟ್ ಆಗಲು ಶುರುಮಾಡಿದ್ದೇವೆ.

ಪ್ರತಿಯೊಬ್ಬರ ಪ್ರತಿಕ್ರಿಯೆಗೆ ಅವಕಾಶವನ್ನು ಸೋಷಿಯಲ್ ಮೀಡಿಯಾ ಕೊಟ್ಟಿದೆ. ಯುದ್ಧ ದೃಶ್ಯಗಳ ತೀವ್ರತೆ, ಅವು ಹುಟ್ಟಿಸುವ ಭಯ ಅನುಕಂಪಗಳು ಎಲ್ಲ ದೇಶ, ಭಾಷೆ, ಧರ್ಮದವರ ಭಾವನೆಯನ್ನು ಎಲ್ಲಿಲ್ಲದಷ್ಟು ಕದಡುತ್ತವೆ. ಯಾವ ಕ್ರೀಡೆಗೂ ಇಲ್ಲದಷ್ಟು ಟಿಆರ್‌ಪಿ ಯುದ್ಧಕ್ಕಿದೆ, ಎಲ್ಲ ದೇಶದಲ್ಲಿಯೂ. ಇಂದು ಯುದ್ಧ ಆರಂಭವಾಯಿತೆಂದರೆ ಯಥೇಚ್ಛ ಪ್ರಮಾಣದ ವಿದೇಶಿ ಮೀಡಿಯಾಗಳನ್ನು ಎರಡೂ ಕಡೆಯವರು ಮೊದಲು
ಒಳಬಿಟ್ಟುಕೊಳ್ಳುತ್ತಾರೆ.

ಯುದ್ಧದ ಸುದ್ದಿಗಳು ಎಲ್ಲೆಡೆ ಹರಡುವುದು, ದೇಶದೇಶಗಳ ಜನಸಾಮಾನ್ಯರಿಗೆ ತಲುಪುವುದು ಕೂಡ ಇಂದಿನ ಯುದ್ಧದ ಪ್ರಾಶಸ್ತ್ಯ, ಅಜೆಂಡಾಗಳಲ್ಲಿ ಒಂದು. ಭಯೋತ್ಪಾದಕ ಸಂಘಟನೆಗಳು ಕೂಡ ಸೋಷಿಯಲ್ ಮೀಡಿಯಾ ವಿಂಗ್ ಹೊಂದಿವೆ. ಸೋಷಿಯಲ್ ಮೀಡಿಯಾ ನವಯುಗದ ಯುದ್ಧವನ್ನು ಬದಲಿಸಿದೆ. ಮೊದಲೆಲ್ಲ ಒಂದು ದೇಶದ ನಿಲುವನ್ನು ಆ ದೇಶದ ಕೆಲವೇ ನಾಯಕರು ನಿರ್ಧರಿಸುತ್ತಿದ್ದರು. ಪ್ರಧಾನಿಯು ‘ನಾವು ಇವರತ್ತ’ ಎಂದರೆ ದೇಶ
ದವರೆಲ್ಲ ಅವರತ್ತ. ‘ನಮ್ಮದು ನಿರ್ಲಿಪ್ತ ನೀತಿ’ ಎಂದರೆ ಸಮಸ್ತ ನಾಗರಿಕರದ್ದೂ ಅದೇ ನಿಲುವು. ಜಾಸ್ತಿ ತಂಟೆ ತಕರಾರಿಲ್ಲದ ದಿನಗಳವು. ಆದರೆ ಈಗ ಹಾಗಲ್ಲ. ಇಂದು ದೇಶದ ಜನರ ನಿಲುವು, ಒಲವನ್ನು ಜನರು ಸೋಷಿಯಲ್ ಮೀಡಿಯಾದ ಮೂಲಕ ಹೊರಹಾಕುತ್ತಾರೆ.

ಇಂದು ನಾಯಕ, ದೇಶ ತನಗನ್ನಿಸಿದಂತೆ ಯುದ್ಧದಲ್ಲಿ ಪಾರ್ಟಿ ವಹಿಸುವಂತಿಲ್ಲ, ದೇಶದ ಸೋಷಿಯಲ್ ಮೀಡಿಯಾ ಟ್ರೆಂಡ್‌ನಂತೆ ವ್ಯವಹರಿಸಬೇಕು. ಅದನ್ನು ಜನರು ಪರೋಕ್ಷವಾಗಿ ನಿರ್ಧರಿಸುತ್ತಾರೆ, ಜನರೆಲ್ಲರ ಸಾಮೂಹಿಕ ಅಭಿಪ್ರಾಯದ ವಿರುದ್ಧ ನಾಯಕರು, ದೇಶ ಹೋಗುವಂತಿಲ್ಲ. ಈ ಕಾರಣಕ್ಕೇ ಯುದ್ಧ ಸುದ್ದಿಯಾಗಬೇಕೆಂದು ಪರಸ್ಪರ ಹೊಡೆದಾಡುವವರು ಬಯಸುವುದು, ಅದೇ ಸಮಯದಲ್ಲಿ ಅವರೇ ಅಪಪ್ರಚಾರಕ್ಕೂ ಇಳಿಯುವುದು. ಒಂದು ದೇಶದಲ್ಲಿ ಎರಡೂ ಕಡೆ ಸೆಂಟಿಮೆಂಟ್ ಇದೆ ಎಂದಾದರೆ ಅಂಥ ದೇಶಗಳಿಗೆ ಫೇಕ್‌ನ್ಯೂಸ್ ತಲುಪುವ ಪ್ರಮಾಣವೂ ಜಾಸ್ತಿ.

ಇಂದು ದೇಶಗಳು ಯುದ್ಧ ನೆಲದಲ್ಲಷ್ಟೇ ಅಲ್ಲ, ಹೊರಗಡೆ-ಎಲ್ಲೆಡೆ, ಇವೆಲ್ಲವನ್ನೂ ಸಂಭಾಳಿಸಿಕೊಂಡು ಹೋಗಬೇಕು. ಇಂದು ಯುದ್ಧವೆಂದರೆ ಕೇವಲ ಮದ್ದು ಗುಂಡು, ಬಿಲ್ಡಿಂಗು, ಸಾವು-ನೋವು ಇವಕ್ಕಷ್ಟೇ  ಸೀಮಿತವಾಗಿಲ್ಲ. ಇತ್ತೀಚಿನ ಯುದ್ಧಗಳಲ್ಲಿ ಒಂದನ್ನು ಗ್ರಹಿಸಬೇಕು. ಯುದ್ಧ ಶುರುವಾಗಿ ಬಿಡುತ್ತದೆ, ಆದರೆ ಸುಲಭಕ್ಕೆ ಕೊನೆಯಾಗುವುದಿಲ್ಲ. ಯಾರೂ ಊಹಿಸದಷ್ಟು ಕಾಲ ನಡೆಯುತ್ತ ಹೋಗುತ್ತದೆ. ಮೊನ್ನೆ ಮೊನ್ನೆ ಶುರುವಾಗಿದೆ ಎಂಬಂತಿದೆ ಉಕ್ರೇನ್-ರಷ್ಯಾ ಯುದ್ಧ. ಆರಂಭದಲ್ಲಿ ಒಂದೆರಡು ತಿಂಗಳು ನಡೆಯಬಹುದು ಎಂದೆಲ್ಲ ಲೆಕ್ಕಾಚಾರವಿತ್ತು. ಆದರೆ ನೋಡನೋಡುತ್ತಲೇ ೨೦ ತಿಂಗಳು ಕಳೆದಿವೆ. ಇಂದಿಗೂ ಯುದ್ಧ ಮುಗಿಯುವ ಯಾವುದೇ ಲಕ್ಷಣಗಳಿಲ್ಲ.

ಮಾಧ್ಯಮಗಳು ಯುದ್ಧೋತ್ಸಾಹದಲ್ಲಿಯೇ ಈ ಯುದ್ಧವನ್ನು ಮೊದಲೆಲ್ಲ ತೋರಿಸಿದವು, ಚರ್ಚೆ ಮಾಡಿದವು ಇತ್ಯಾದಿ. ಈಗ ಮಾಧ್ಯಮಕ್ಕೂ ಬೇಸರ ಬಂದಿದೆ, ಜನರಿಗೂ ಕೇಳಿಕೇಳಿ ಜಾಡ್ಯ ಹುಟ್ಟಿದೆ. ಈಗ ಆ ಯುದ್ಧ ಯಾವುದೇ ಸೆನ್ಸೇಷನ್ ಅನ್ನಿಸದ ಸ್ಥಿತಿಗೆ ತಲುಪಿದೆ. ಆದರೆ ಯುದ್ಧ ನಡೆಯುತ್ತಲೇ ಇದೆ.
ಇದೊಂದೇ ಅಲ್ಲ ಅಥವಾ ಈಗ ಜಗತ್ತಿನಲ್ಲಿ ನಡೆಯುತ್ತಿರುವುದು ಕೇವಲ ಈ ಎರಡೇ ಯುದ್ಧಗಳಲ್ಲ, ಹಲವು. ಕೆಲವು ಯುದ್ಧಗಳು ದೇಶದೇಶಗಳ ನಡುವೆ, ಇನ್ನು ಕೆಲವು ಭಯೋತ್ಪಾದಕ ಗುಂಪು ಮತ್ತು ಆಡಳಿತ ಸರಕಾರಗಳ ನಡುವೆ.

ಕೆಲವು ಅಂತರ್ಯುದ್ಧಗಳು, ಇನ್ನು ಕೆಲವು ಜನಾಂಗೀಯ ಯುದ್ಧ ಅಥವಾ ಡ್ರಗ್ ವಾರ್‌ಗಳು. ಸದ್ಯ ಜಗತ್ತಿನಲ್ಲಿ ಎಷ್ಟು ಕಡೆ ಯುದ್ಧ ಸನ್ನಿವೇಶವಿದೆ ಗೊತ್ತೇ? ಬರೋಬ್ಬರಿ ೩೨ ದೇಶಗಳಲ್ಲಿ. ಅದೂ ಜಗತ್ತಿನ ಶೇ.೧೭ರಷ್ಟು ದೇಶಗಳಲ್ಲಿ. ಅಮೆರಿಕ ಹಿಂದಿನ ವರ್ಷ ಮುಗಿಸಿದ ಯುದ್ಧ ಬರೋಬ್ಬರಿ ೨೦ ವರ್ಷ ನಡೆಯಿತು. ಅದೆಷ್ಟೋ ಮಂದಿ ಯುದ್ಧ ಆರಂಭ ವಾದ ದಿನ ಹುಟ್ಟಿ, ಬೆಳೆದು, ಮುಗಿಯುವುದರೊಳಗೆ ಯುದ್ಧಕ್ಕೆ ಆಹುತಿಯಾದರು. ಅಷ್ಟು ಕಾಲ ನಡೆಸಿಕೊಂಡು ಹೋಗಲಾಯಿತು.

ಅಮೆರಿಕ ಯುದ್ಧ ನಿಲ್ಲಿಸಿದಾಕ್ಷಣ ಅಲ್ಲಿ ರಕ್ತಪಾತ, ಯುದ್ಧಸದೃಶ ಬದುಕು ಮುಗಿದಿಲ್ಲ. ಇಂದಿಗೂ ಗುಂಪುಗಳ ನಡುವೆ ರಕ್ತ ಹರಿಯುತ್ತಲೇ ಇದೆ. ಅಲ್ಗೇರಿಯಾ, ಬೆನಿನ್, ಬುರ್ಕಿನೋ -ಸೊ, ಕ್ಯಾಮರೂನ್, ಚಾಡ್, ಕಾಂಗೋ, ಘಾನಾ, ಐವರಿ ಕೋಸ್ಟ್, ನೈಜರ್ ಮತ್ತು ನೈಜೀರಿಯಾ ಹೀಗೆ ಆಫ್ರಿಕಾದ ಬಹುತೇಕ ರಾಷ್ಟ್ರಗಳಲ್ಲಿ ನೆಲದೊಳಕ್ಕೇ ಇಸ್ಲಾಮಿಕ್ ಭಯೋತ್ಪಾದಕರು ಮತ್ತು ಸೈನ್ಯದ ನಡುವೆ ಯುದ್ಧ ನಿರಂತರ ನಡೆಯುತ್ತಿದೆ. ಮಾಲಿ, ಲಿಬಿಯಾ ಇಲ್ಲೆಲ್ಲಾ ಆಂತರಿಕ ಯುದ್ಧಗಳು ಭೀಕರವಾಗಿಯೇ ಇದೆ. ಈ ಎಲ್ಲಕಡೆ ಯುದ್ಧದಿಂದಾಗಿ ಸಾವಿರದ ಲೆಕ್ಕದಲ್ಲಿಯೇ ಜನರು ಸಾಯುತ್ತಿದ್ದಾರೆ.

ಆದರೆ ಇವೆಲ್ಲ ಚಿಕ್ಕಪುಟ್ಟ ಯುದ್ಧಗಳೆಂಬ ಕಾರಣಕ್ಕೆ, ಬಡದೇಶಗಳೆಂಬ ಕಾರಣಕ್ಕೆ ಅಷ್ಟಾಗಿ ಸುದ್ದಿಯಲ್ಲಿರುವುದಿಲ್ಲ, ಕೆಲವೊಮ್ಮೆ ಸುದ್ದಿಯೇ ಆಗುವುದಿಲ್ಲ. ಆದರೆ ಈ ಎಲ್ಲ ೩೨ ದೇಶದ ಸ್ಥಿತಿಯು ಯುದ್ಧಸದೃಶವಾಗಿ ಸುಮಾರು ದಶಕದ ಆಸುಪಾಸಿಗೆ ಬಂದು ನಿಂತಿದೆ. ಇದೆಲ್ಲ ನೋಡಿದಾಗ, ಯುದ್ಧ ಇಷ್ಟು ಕಾಲ ನಡೆಯಲು ಯಾವುದೋ ಒಂದು ಶಕ್ತಿ ನಿರಂತರ ಒಳಗೊಳಗೇ ಕೆಲಸಮಾಡುತ್ತಿದೆ ಅನ್ನಿಸದಿರದು. ಒಬ್ಬ ಬಲಿಷ್ಠನ ಮುಂದೆ ಇಬ್ಬರು ಕೃಶಕಾಯದವರು ಹೊಡೆದಾಡಿದರೆ ಬಲಿಷ್ಠ ನಾದವನು ಏನು ಮಾಡುತ್ತಾನೆ? ಹೊಡೆದಾಟ ನಿಲ್ಲಿಸುತ್ತಾನೆ ಅಲ್ಲವೇ? ಆದರೆ ಈ ಎಲ್ಲ ೩೨ ಸದ್ಯದ ಯುದ್ಧಗಳಲ್ಲಿ ಯಾವುದೇ ಬಲಿಷ್ಠ ರಾಷ್ಟ್ರ ಯುದ್ಧ ನಿಲ್ಲಿಸಲಿಕ್ಕೆ ಪ್ರಯತ್ನಿಸುತ್ತಿಲ್ಲ.

ಅದೇಕೆ? ಯುದ್ಧ ಮನುಷ್ಯನಿಗೆ ಅಷ್ಟು ಅನಿವಾರ್ಯವೇ? ಯುದ್ಧ ಆಧುನಿಕ ಬದುಕಿನ ಸಹಜತೆಯೇ ಹಾಗಾದರೆ? ಏಕೆ ಈ ಕಾನ್‌ಫ್ಲಿಕ್ಟ್‌ಗಳು ಮುಗಿಯು ವುದೇ ಇಲ್ಲ? ಒಂದು ಮುಗಿಯುವುದರೊಳಗೆ ಇನ್ನೊಂದು, ಅದು ಕೊನೆಯಾಯಿತೋ, ಮೊದಲನೆಯದರ ಪುನರಾರಂಭ. ಎಲ್ಲೆಡೆಯಲ್ಲದಿದ್ದರೂ ಬಹುತೇಕ ಕಡೆ ಇದೆಲ್ಲ ಯುದ್ಧ-ವೈಮನಸ್ಸಿನ ಹಿಂದೆ ಅದನ್ನು ಜೋಪಾನವಾಗಿ ಕಾಪಾಡುವ, ನಡೆಸಿಕೊಂಡು ಹೋಗುವ ಒಂದು ‘ಅಜ್ಞಾತ ಶಕ್ತಿ’ ಕೆಲಸಮಾಡುತ್ತದೆ ಎಂದು ನಿಮಗೆ ಯಾವತ್ತಾದರೂ ಅನ್ನಿಸಿದೆಯೇ? ನಿಮಗೆ ಆಧುನಿಕ ಜಗತ್ತಿನ Military-Industrial Complex ಬಗ್ಗೆ ಹೇಳಬೇಕು.

ಈ ಜಗತ್ತಿನಲ್ಲಿ ಯುದ್ಧ ಸಲಕರಣೆಗಳನ್ನು, ಶಸಾಸ್ರಗಳನ್ನು ತಯಾರಿಸುವ ಸುಮಾರು ೧೦೦ ದೊಡ್ಡ ಕಂಪನಿಗಳಿವೆ. ಅವುಗಳಲ್ಲಿ ಮೊದಲ ೫೦ ಕಂಪನಿ
ಗಳ ವಾರ್ಷಿಕ ವಹಿವಾಟು, ವ್ಯವಹಾರ ೧೦,೦೦೦ ಕೋಟಿ ರುಪಾಯಿಗಿಂತ ಜಾಸ್ತಿ. ಲಾಕ್ ಹೆಡ್ ಮಾರ್ಟಿನ್, ರೇಥಿಯನ್, ನೊರ್ತ್ರೋಪ್ ಗುಮ್ಮನ್, ಜನರಲ್ ಡೈನಾಮಿಕ್ಸ್ ಮೊದಲಾದ ಕಂಪನಿಗಳ ಹೆಸರನ್ನು ಯಾವತ್ತಾದರೂ ಕೇಳಿದ್ದೀರಾ? ಅವೆಲ್ಲ ಅಮೆರಿಕದ ಶಸಾಸ ತಯಾರಿಕಾ ಕಂಪನಿಗಳು. ಅವುಗಳ ಆಯವ್ಯಯ ಇನೋಸಿಸ್‌ಗಿಂತ ಹತ್ತಾರು ಪಟ್ಟು ಜಾಸ್ತಿ.

ಲಾಕ್ ಹೆಡ್ ಮಾರ್ಟಿನ್ ಶಸಾಸ ಕಂಪನಿಯ ವಾರ್ಷಿಕ ವ್ಯವಹಾರ ಎಷ್ಟು ಗೊತ್ತಾ? ೪ ಲಕ್ಷ ಕೋಟಿ ರುಪಾಯಿ. ಶಸಾಸ ತಯಾರಿಕಾ ಕಂಪನಿಗಳಲ್ಲಿ ಮೊದಲ ೫ ಅಮೆರಿಕದವು. ನಂತರದ ಐದಾರು ಚೀನಾದ್ದು. ಅದರ ನಡುವೆ ಬ್ರಿಟನ್‌ನ ಒಂದು ಕಂಪನಿ. ಫ್ರಾನ್ಸ್ , ಇಸ್ರೇಲಿನದು ಒಂದೆರಡು. ಇವೆಲ್ಲ ಪಬ್ಲಿಕ್ ಲಿಮಿಟೆಡ್ ಕಂಪನಿಗಳು. ಆದರೆ ಆಯಾ ಸರಕಾರದ ಹಿಡಿತದಲ್ಲಿಯೇ ಇರುವಂಥವು. ಅವು ಗಳಿಗೆ ಷೇರುದಾರರಿದ್ದಾರೆ, ಅವುಗಳಿಗೆ ವಾರ್ಷಿಕ ಆದಾಯದ ಗುರಿಯಿರುತ್ತದೆ, ಉಳಿದ ಕಂಪನಿಗಳಂತೆ. ಆದರೆ ಅವು ಕೇಳಿದವರಿಗೆಲ್ಲ ಬೇಕಾಬಿಟ್ಟಿ ಶಸಾಸ ಮಾರಾಟಮಾಡುವಂತಿಲ್ಲ.

ಅಲ್ಲದೆ ಇದನ್ನು ಉಪ್ಪು, ಟೂತ್‌ಪೇಸ್ಟ್‌ನಂತೆ ಜಾಹೀರಾತು ಕೊಟ್ಟು ಮಾರಾಟ ಹೆಚ್ಚಿಸಿಕೊಳ್ಳುವಂತಿಲ್ಲವಲ್ಲ. ಸರಕಾರ ಹೇಳಿದಷ್ಟು ತಯಾರಿಸಿ ಕೊಂಡಿರಬೇಕು. ಮೊದಲೆಲ್ಲ ಈ ಅಮೆರಿಕನ್ ಶಸಾಸ ಕಂಪನಿಗಳು ತಮ್ಮದೇ ಸರಕಾರಕ್ಕೆ ಶಸ್ತ್ರಾಸ್ತ್ರ ಮಾರಿಕೊಂಡು ಇದ್ದವು. ಆದರೆ ಕಾಲ ಕಳೆದಂತೆ ಅವುಗಳ ಆದಾಯದ ಟಾರ್ಗೆಟ್‌ಗಳು ಹೆಚ್ಚಿದವು. ಕ್ರಮೇಣ ಈ ಕಂಪನಿಗಳು ಸರಕಾರಿ ವ್ಯವಸ್ಥೆಯನ್ನು ಹೇಗೆ ಬದಲಾಯಿಸಿ ಕೊಂಡರೆ ತಮಗೆ ಲಾಭ ವಾಗಬಹುದು ಎಂದು ಯೋಚಿಸಲು ಶುರುಮಾಡಿದವು. ನಿಧಾನಕ್ಕೆ ಪೆಂಟಗನ್‌ನಲ್ಲಿ ವಶೀಲಿತನಕ್ಕೆ ಇಳಿದವು. ಸೈನ್ಯದ ವಾರ್ಷಿಕ ಬಜೆಟ್ ಹೆಚ್ಚುವಂತೆ ನೋಡಿ ಕೊಂಡವು. ನಂತರ ಈ ಕಂಪನಿಗಳ ದಾಹ ಅಷ್ಟಕ್ಕೇ ತಣಿಯಲಿಲ್ಲ.

ಅವು ಕ್ರಮೇಣ ರಾಜಕಾರಣಿಗಳನ್ನು ವಶೀಲಿತನದಿಂದ, ಲಂಚ ಕೊಟ್ಟು ಅಮೆರಿಕ ಸರಕಾರದ ನಿಲುವನ್ನು ನಿರ್ದೇಶಿಸುವಷ್ಟು ಬೆಳೆದವು. ಅದಕ್ಕನು ಗುಣವಾಗಿ ಎಲ್ಲಿಯೇ ಯುದ್ಧ ನಡೆದರೂ ಅಮೆರಿಕ ಒಂದು ಪಾರ್ಟಿ ವಹಿಸಿ ಆ ಮೂಲಕ ಶಸ್ತ್ರಾಸ್ತ್ರ ವ್ಯಾಪಾರ ಮಾಡಲು ವ್ಯವಸ್ಥೆಯಾಯಿತು.
ಕೆಲವೊಂದಿಷ್ಟು ಸನ್ನಿವೇಶದಲ್ಲಿ ಎರಡೂ ಕಡೆಗೆ ಈ ಅಮೆರಿಕನ್ ಕಂಪನಿಗಳೇ ಶಸಾಸ ವನ್ನು ಸರಬರಾಜು ಮಾಡಿದ ಉದಾಹರಣೆಗಳಿವೆ. ಈ ಕಂಪನಿಗಳು ಇಂದು ಅದೆಷ್ಟು ಬೆಳೆದು ನಿಂತುಬಿಟ್ಟಿವೆಯೆಂದರೆ ಅಮೆರಿಕದ ಬಲಿಷ್ಠ ರಾಜತಾಂತ್ರಿಕ ನಡೆಯನ್ನು ನಿರ್ದೇಶಿಸುವಷ್ಟು. ಇವುಗಳಿಗೆ ನಿರಂತರ ಯುದ್ಧ, ಸಂಘರ್ಷವಿರಲೇಬೇಕು, ಅವು ನಿಲ್ಲಬಾರದು, ಶಾಂತವಾಗಬಾರದು.

ಆಗ ಮಾತ್ರ ಕಂಪನಿ ಹೆಚ್ಚಿನ ಲಾಭ ಮಾಡಲು ಸಾಧ್ಯ. ಇದು ಕೇವಲ ಅಮೆರಿಕ ವ್ಯವಸ್ಥೆಯೊಂದರದ್ದೇ ಕಥೆಯಲ್ಲ. ಫ್ರಾನ್ಸ್, ಬ್ರಿಟನ್, ಇಸ್ರೇಲ್, ಜರ್ಮನಿ, ಸ್ವೀಡನ್ ಇಲ್ಲಿಯೂ ಆಯಾ ದೇಶದ ಶಸ್ತ್ರಾಸ್ತ್ರ ಕಂಪನಿಗಳು ದೇಶದ ಆಡಳಿತವನ್ನು ನಿರ್ದೇಶಿಸುವಷ್ಟು ಪ್ರಬಲವಾಗಿವೆ. ಇದು ಒಂದು ಕಡೆ. ಬಹುತೇಕ ಮುಂದುವರಿದ ರಾಷ್ಟ್ರ ಗಳು, ಅದರಲ್ಲಿಯೂ ಪ್ರಜಾಪ್ರಭುತ್ವ ವ್ಯವಸ್ಥೆ ಇರುವಲ್ಲಿ ಹೀಗೆ. ಇನ್ನೊಂದು ಕಡೆ ಚೀನಾ, ರಷ್ಯಾ ಮೊದಲಾದ ದೇಶಗಳಲ್ಲಿ ಸ್ವಲ್ಪ ವಿಭಿನ್ನ. ಅಲ್ಲಿ ಶಸ್ತ್ರಾಸ್ತ್ರ ಕಂಪನಿಗಳನ್ನು ಸರಕಾರವೇ ನೇರವಾಗಿ ನಡೆಸುತ್ತದೆ. ಜಗತ್ತಿನ ಮೊದಲ ೧೦ ಶಸ್ತ್ರಾಸ್ತ್ರ ಕಂಪನಿಗಳಲ್ಲಿ ೫ ಚೀನಾದವ ರದ್ದು ಎಂದೆನಲ್ಲ, ಅವೆಲ್ಲವೂ ಷಿ ಜಿಂಗ್‌ಪಿಂಗ್ ಅಡಿಯಲ್ಲಿಯೇ ಇವೆ.

ಇನ್ನು ರಷ್ಯಾದ ಕಂಪನಿ ಪುಟಿನ್-ಒಲಿಗಾರ್ಕಿಗಳ ಕೈಯಲ್ಲಿ. ಹೀಗಾಗಿ ಈ ದೇಶಗಳದಂತೂ ನಿಲುವು-ಒಲವು, ಸಹಾಯ-ವ್ಯಾಪಾರ ಇವೆಲ್ಲ ಶಸ್ತ್ರಾಸ್ತ್ರ  ವ್ಯವಹಾರದ ಅವಕಾಶಕ್ಕೆ ಅನುಗುಣವಾಗಿಯೇ ಇರುತ್ತವೆ. ಈ ಒಂದೇ ಕಾರಣಕ್ಕೆ ಯಾವುದೇ ಬಲಿಷ್ಠ ರಾಷ್ಟ್ರಕ್ಕೆ ಇಂದು ಯುದ್ಧ ನಿಲ್ಲಿಸುವ ಆಸಕ್ತಿ, ಇಚ್ಛೆಗಳಿಲ್ಲ. ಇದ್ದರೂ ಈ ಕಂಪನಿಗಳು ಹಾಗಾಗಲು ಬಿಡುವುದಿಲ್ಲ. ಜಗತ್ತಿನ ಒಟ್ಟೂ ಲಂಚದಲ್ಲಿ ಶೇ.೭೦ಕ್ಕಿಂತ ಜಾಸ್ತಿ ಲಂಚ ಇರುವುದು ಮಿಲಿಟರಿ-ಶಸ್ತ್ರಾಸ್ತ್ರ ವ್ಯವಹಾರದಲ್ಲಿ. ನೀವು ಒಂದು ಆಸ್ಪತ್ರೆಯನ್ನು ಆರಂಭಿಸುತ್ತಿದ್ದೀರೆಂದುಕೊಳ್ಳಿ.

ನಮಗೆ ಈಗ ಏನು ಬೇಕು? ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು. ಹೋಟೆಲ್ ಆರಂಭಿಸಿದರೆ ಅಲ್ಲಿ ಬಂದು ತಿನ್ನುವವರು ಬೇಕು. ಗೆಸ್ಟ್‌ಹೌಸ್ ಗೆ ಬಂದು ಉಳಿಯುವವರು ಬೇಕು. ಹೀಗೆ ಎಲ್ಲ ವ್ಯಾಪಾರ-ವ್ಯವಹಾರಕ್ಕೂ ಗ್ರಾಹಕರ ನಿರಂತರ ಹರಿವು ಬೇಕು ಅಲ್ಲವೇ? ಹಾಗೆಯೇ ಇದು. ಶಸ್ತ್ರಾಸ್ತ್ರ ತಯಾರಿಸಿ ಒಮ್ಮೆ ಮಾರಾಟ ಮಾಡಿ, ಅದನ್ನು ಗ್ರಾಹಕರು ಬಳಸದಿದ್ದರೆ ಕಂಪನಿ ಮುಚ್ಚಿಕೊಂಡು ಹೋಗಬೇಕಾಗುತ್ತದೆ. ಹಾಗಾಗಿ ಈ ಎಲ್ಲ ನೂರಾರು ಬಿಲಿಯನ್ ಡಾಲರ್ ವ್ಯವಹಾರದ ಕಂಪನಿಗಳು ಬೆಳೆದು ಹೀಗೆ ಒಗ್ಗಿಕೊಂಡಿವೆ.

ಈ ವಿಚಾರವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಯುದ್ಧ ಗಳನ್ನು, ದೇಶಗಳ ಸಂಬಂಧಗಳನ್ನು ನೋಡಿದಾಗ ಮಾತ್ರ ಪೂರ್ಣ ಚಿತ್ರಣದ ಗ್ರಹಿಕೆ ಸಾಧ್ಯ ವಾಗುತ್ತದೆ. ಬಹುತೇಕ ಬಾರಿ ಸ್ನೇಹ, ವೈಷಮ್ಯಕ್ಕೆ ಕೇವಲ ಶಸ್ತ್ರಾಸ್ತ್ರ ವ್ಯವಹಾರವೇ ಕಾರಣವಾಗಿರುತ್ತದೆ ಎಂಬುದು ಕೂಡ ಸ್ಪಷ್ಟವಾಗುತ್ತದೆ. ನಾವು
ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಲು ಮುಂದಾದಾಗ ಅಮೆರಿಕವು ಪಾಕಿಸ್ತಾನದ ಬೆನ್ನಿಗೆ ನಿಂತದ್ದಕ್ಕೆ ಕಾರಣ ಯೋಚಿಸಿ. ಎಲ್ಲ ಬಲಿಷ್ಠ ರಾಷ್ಟ್ರಗಳು ಯುದ್ಧವನ್ನು ನಿಲ್ಲಿಸುವುದರ ಬದಲು ಪೋಷಿಸಲು ಮುಂದಾಗುವುದಕ್ಕೆ ಕೂಡ ಇದೇ ವ್ಯವಸ್ಥೆಯ ಅವಸ್ಥೆ ಕಾರಣ. ಭಾರತವೂ ಸೇರಿದಂತೆ ಕೆಲವೊಂದು
ದೇಶಗಳಲ್ಲಿ ಇರುವ ದೇಶಿ ಸರಕಾರಿ ಶಸಾಸ ಕಂಪನಿಗಳು ದಶದಶಕಗಳೇ ಕಳೆದರೂ ಉದ್ಧಾರವಾಗಲಿಲ್ಲ.

ಅದಕ್ಕೆ ಕಾರಣವೇನು? ಅದು ನಿಮ್ಮ ಊಹೆಗೆ. ಒಂದಂತೂ ಸ್ಪಷ್ಟ. ದೇಶ ಶಸಾಸ ತಯಾರಿಕೆಗೆ, ಮಾರಾಟಕ್ಕೆ ಇಳಿದರೆ ಆ ದೇಶ ಅಲಿಪ್ತ, ನಿರ್ಲಿಪ್ತವಾಗಿ ಮುಂದುವರಿಯಲಿಕ್ಕೆ ಅಸಾಧ್ಯ. ಕ್ರಮೇಣ ಅಲ್ಲಿ ಯುದ್ಧದಾಹ ಹುಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಇದಕ್ಕೆ ಅಮೆರಿಕ, ಚೀನಾ, ಫ್ರಾನ್ಸ್,
ಬ್ರಿಟನ್, ಇಟಲಿ ಇವೆಲ್ಲ ಉದಾಹರಣೆಗಳು.