Tuesday, 10th December 2024

ಆ ಸನ್ನಿವೇಶದಲ್ಲಿ ಅವರನ್ನು ನಿರೀಕ್ಷಿಸಿರಲಿಲ್ಲ

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ನಾನು ಇಂಗ್ಲೆಂಡ್‌ನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುವಾಗ, ಪ್ರಮುಖ ರಾಜಕಾರಣಿಯೊಬ್ಬರನ್ನು ಭೇಟಿ ಮಾಡಿ ಸಂದರ್ಶಿಸುವ ಅಸೈನ್ ಮೆಂಟ್ ನೀಡಿದ್ದರು. ನಾನು ಜೆಫ್ರಿ ಹೋವ್ ಅವರನ್ನು ಸಂದರ್ಶಿಸಲು ನಿರ್ಧರಿಸಿದ್ದೆ. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿದ್ದ ಇವರು ಹದಿನಾಲ್ಕು ತಿಂಗಳುಗಳ ಕಾಲ ಬ್ರಿಟನ್
ಉಪಪ್ರಧಾನಿಯಾಗಿದ್ದರು.

ಅಷ್ಟೇ ಅಲ್ಲ, ಇವರು ಬ್ರಿಟನ್ ಹಣಕಾಸು ಹಾಗೂ ವಿದೇಶಾಂಗ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ನಾನು ಭೇಟಿ ಮಾಡುವ ಸಂದರ್ಭದಲ್ಲಿ ಇವರು ಮಾಜಿಯಾಗಿದ್ದರು ಹಾಗೂ ತಮ್ಮ ಹುಟ್ಟೂರಾದ ವೇಲ್ಸ್‌ನ ಕಾರ್ಡಿಫ್’ನಲ್ಲಿ ನೆಲೆಸಿದ್ದರು. ಹಾಗೆಂದು ಇವರು ನಿವೃತ್ತ ಜೀವನ ಸಾಗಿಸುತ್ತಿರಲಿಲ್ಲ. ‘ರಾಯಿಟರ‍್ಸ್’ ಸುದ್ದಿಸಂಸ್ಥೆ, ಪ್ರತಿಷ್ಠಿತ ಥಾಮ್ಸನ್ ಫೌಂಡೇಶನ್ ಸೇರಿದಂತೆ ಹತ್ತಾರು ಸಂಸ್ಥೆಗಳ ನಿರ್ದೇಶಕರು, ಧರ್ಮದರ್ಶಿಗಳಾಗಿದ್ದರು.

ನಿಗದಿತ ಸಮಯಕ್ಕಿಂತ ಐದು ನಿಮಿಷ ಮುಂಚಿತವಾಗಿ ಅವರ ನಿವಾಸಕ್ಕೆ ಹೋದಾಗ, ಗಾರ್ಡನ್‌ನಲ್ಲಿ ನೀರು ಹಾಕುತ್ತಿದ್ದ ವ್ಯಕ್ತಿಯನ್ನು ಕರೆದು, ‘ನನಗೆ ಮಿಸ್ಟರ್ ಹೋವ್ ಜತೆಗೆ ಸಂದರ್ಶನಕ್ಕೆ ಸಮಯ ನಿಗದಿಯಾಗಿದೆ. ದಯವಿಟ್ಟು ನಾನು ಬಂದ ವಿಷಯವನ್ನು ಅವರಿಗೆ ತಿಳಿಸಬಹುದಾ?’ ಎಂದು ಹೇಳಿದೆ. ಅದಕ್ಕೆ ಆ ವ್ಯಕ್ತಿ ತಕ್ಷಣ, ’’Very nice to meet you, I am Geoffrey Howe. I am waiting for you’ ಎಂದು ಕೈಕುಲುಕಿದರು.

ನನಗೆ ನಂಬಲಾಗಲೇ ಇಲ್ಲ. ನಾನು ಅವರನ್ನು ಅಲ್ಲಿ, ಆ ಸನ್ನಿವೇಶದಲ್ಲಿ ನಿರೀಕ್ಷಿಸಿರಲಿಲ್ಲ. ಅದೇ ಹುಲ್ಲು ಹಾಸಿನ ಮೇಲೆ ಮಾತಾಡೋಣವಾ ಎಂದು ಕೇಳಿದರು. ನಾನು ಆಗಬಹುದು ಎಂದೆ. ಅವರೇ ಎರಡು ಆರಾಮ ಕುರ್ಚಿ ಹಾಗೂ ಟೀಪಾಯ್ ಎತ್ತಿಕೊಂಡು ತಂದಿಟ್ಟರು. ಒಂದು ನಿಮಿಷ ಕುಳಿತಿರಿ ಎಂದು ಮನೆಯೊಳಗೆ ಹೋಗಿ, ತಾವೇ ಎರಡು ಕಪ್ ಬಿಸಿಬಿಸಿ ಕಾಫಿ ಮಾಡಿ ಟೀಪಾಯ್ ಮೇಲೆ ತಂದಿಟ್ಟರು. ಸಂದರ್ಶನ ಮುಗಿದ ನಂತರ ಅವರ ಪತ್ನಿ ಹೊರಹೋಗಲು ಸಿದ್ಧರಾಗಿ ಬಂದರು. ಹೋವ್ ನನಗೆ ಅವರನ್ನು ಪರಿಚಯಿಸಿದರು. ಆನಂತರ ಪತ್ನಿಯೊಂದಿಗೆ ತಾವೇ ಡ್ರೈವ್ ಮಾಡಿಕೊಂಡು ಹೊರಟೇಬಿಟ್ಟರು!

ನನಗೆ ನಂಬಲಾಗಲೇ ಇಲ್ಲ. ಮೂವತ್ತು ವರ್ಷಗಳ ಕಾಲ ಬ್ರಿಟಿಷ್ ರಾಜಕಾರಣದಲ್ಲಿ ಕ್ರಿಯಾಶೀಲರಾಗಿದ್ದ, ಉಪಪ್ರಧಾನಿ ಸೇರಿದಂತೆ ಹಲವು ಪ್ರಮುಖ ಹುದ್ದೆ ಗಳಲ್ಲಿ ಕೆಲಸ ಮಾಡಿದ ವ್ಯಕ್ತಿಯ ಮನೆಯಲ್ಲಿ ಒಬ್ಬ ಆಳು, ಸೇವಕನೂ ಇರಲಿಲ್ಲ. ಅವರಿಗೆ ಮಾಜಿ ಉಪಪ್ರಧಾನಿ ಎಂಬ ಯಾವ ಸಣ್ಣ ಪೊಗರೂ ಇರಲಿಲ್ಲ. ಅದು ಯಾರಂತೆ ಊರವರಂತೆ ಎಲ್ಲರ ಮನೆಯಂತಿತ್ತು. ಅವರು ಡ್ರೈವ್ ಮಾಡಿಕೊಂಡು ಹೋದ ಕಾರೂ ಸಹ ಲಕ್ಸುರಿಯಾಗಿರಲಿಲ್ಲ. ಈ ಎಲ್ಲ ಸಂಗತಿಗಳನ್ನು ನಾನು ನನ್ನ ಸಂದರ್ಶನದಲ್ಲಿ ಬರೆದಿದ್ದೆ. ಅದನ್ನು ಓದಿದ ನಮ್ಮ ಮೇಷ್ಟ್ರು-‘ಅವೆಲ್ಲ ಬೋರಿಂಗ್ ಮಾಹಿತಿ.

ನಮ್ಮ ದೇಶದಲ್ಲಿ ರಾಜಕಾರಣಿಗಳು ಇರೋದೇ ಹಾಗೆ. ಅದರಲ್ಲಿ ಹೆಚ್ಚುಗಾರಿಕೆಯೇನಿಲ್ಲ’ ಎಂದು ಆರಂಭದ ನಾಲ್ಕು ಪ್ಯಾರಾಗಳನ್ನು ಕತ್ತರಿಸಿ(ಎಡಿಟ್) ಕಸದ ಬುಟ್ಟಿಗೆ ಬಿಸಾಡಿದ್ದರು. ಅಲ್ಲಿ ರಾಜಕಾರಣಿಗಳು ಇರೋದೇ ಹಾಗೆ. ಡೆವಿಡ್ ಕೆಮರೂನ್ ಬ್ರಿಟನ್ ಪ್ರಧಾನಿಯಾಗಿದ್ದಾಗ, ಒಮ್ಮೆ ಅವರಿಗೆ ತುರ್ತಾಗಿ ಒಂದು ಸಭೆಗೆ ಹೋಗಬೇಕಿತ್ತು. ಆದರೆ ತಮ್ಮ ಕಾರಿನಲ್ಲಿ ಪ್ರಯಾಣಿಸಿದರೆ ತಡವಾಗಬಹುದೆಂದು ಅನಿಸಿತು. ದೇಶದ ಪ್ರಧಾನಿಯಾಗಿ ಅವರು ‘ಜೀರೋ ಟ್ರಾಫಿಕ್’ ಮಾಡಿ ಕೊಂಡು ನಿಗದಿತ ಸಮಯಕ್ಕೆ ಹೋಗಬಹುದಿತ್ತು. ಹಾಗೆ ಮಾಡಿದರೆ, ಜನನಿಬಿಡ ಲಂಡನ್ ಬೀದಿಗಳಲ್ಲಿರುವ ಲಕ್ಷಾಂತರ ಜನರಿಗೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಅವರು ಅಂಡರ್‌ಗ್ರೌಂಡ್ ರೈಲಿನಲ್ಲಿ ಪ್ರಯಾಣಿಸಲು ನಿರ್ಧರಿಸಿದರು.

ಕೆಮರೂನ್ ಏರಿದ ಬೋಗಿಯಲ್ಲಿ ಸೀಟುಗಳು ಖಾಲಿ ಇರಲಿಲ್ಲ. ತಾನು ಪ್ರಧಾನಿ, ತನಗೆ ಸೀಟು ಬಿಟ್ಟುಕೊಡಿ ಎಂದು ಅವರು ಕೇಳಲೂ ಇಲ್ಲ. ಕೆಲವು ಪ್ರಯಾಣಿಕ ರಿಗೆ ತಮ್ಮೊಂದಿಗಿರುವ ಸಹಪ್ರಯಾಣಿಕ ತಮ್ಮ ಪ್ರಧಾನಿ ಎಂದು ಗೊತ್ತಾದರೂ, ಅವರೇನು ಮುಗಿಬೀಳಲಿಲ್ಲ. ಒಂದಿಬ್ಬರು ತಮ್ಮ ಸೀಟುಗಳನ್ನು ತೆರವು ಮಾಡಿ ಕೊಡಲು ಮುಂದಾದರೂ ಕೆಮರೂನ್ ಅದನ್ನು ವಿನಯಪೂರ್ವಕವಾಗಿ ತಿರಸ್ಕರಿಸಿದರು. ಅವರ ಜತೆ ಭದ್ರತಾ ಸಿಬ್ಬಂದಿ ದಂಡೂ ಇರಲಿಲ್ಲ. ದೇಶದ ಪ್ರಧಾನಿ ಸುಮಾರು ಅರ್ಧ ಗಂಟೆ ನಿಂತು, ಪೇಪರ್ ಓದುತ್ತಾ, ಸಹಪ್ರಯಾಣಿಕರೊಂದಿಗೆ ಮಾತಾಡುತ್ತಾ, ತಾವು ಇಳಿಯಬೇಕಾದ ನಿಲ್ದಾಣ ಬರುತ್ತಿದ್ದಂತೆ, ಯಾರಂತೆ ಊರವರಂತೆ ಸುಮ್ಮನೆ ಇಳಿದು ಹೋದರು!

ಈ ರೀತಿ ಒಂದೆರಡು ಸಲ ಅಲ್ಲ, ಅನೇಕ ಬಾರಿ ಅವರು ರೈಲಿನಲ್ಲಿ ಹೋಗಿದ್ದುಂಟು! ಪ್ರಧಾನಿಯಾಗಿದ್ದಾಗ ಅವರು ಬೆಳಗ್ಗೆ ಆಫೀಸಿಗೆ ಹೋಗುವ ಮುನ್ನ ಅವರ ನಿವಾಸದಲ್ಲಿನ ಅಡುಗೆ ಮನೆಯಲ್ಲಿ ಸ್ವತಃ ಅವರೇ ಉಪಾಹಾರ ಸಿದ್ಧಪಡಿಸಿಕೊಳ್ಳುತ್ತಿದ್ದರು.ಅವರ ನಿವಾಸದಲ್ಲೆಲ್ಲಾ ಕೈಗೆ ಕಾಲಿಗೆ ಆಳು-ಕಾಳುಗಳು ಸಹ ಇರಲಿಲ್ಲ. ಉಪಾಹಾರ ತಯಾರಿಸಿ, ಕಾಫಿ ಸಿದ್ಧಪಡಿಸಿ ಸೇವಿಸಿದ ನಂತರ, ತಾವೇ ಪಾತ್ರೆ ತೊಳೆಯುವ ದೃಶ್ಯ ನೋಡಿ ಲಕ್ಷಾಂತರ ಮಂದಿ ಜಗತ್ತಿನೆಲ್ಲೆಡೆಯಿಂದ ಅವರಿಗೆ ಪ್ರಶಂಸೆ ಸುರಿಮಳೆಗೈದಿದ್ದರು.

ಕೆಮರೂನ್ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ‘ಟೆನ್ ಡೌನಿಂಗ್ ಸ್ಟ್ರೀಟ್’ನಲ್ಲಿರುವ ತಮ್ಮ ಅಧಿಕೃತ ನಿವಾಸ ಖಾಲಿ ಮಾಡುವ ಸಂದರ್ಭ ಬಂದಾಗ, ಮನೆ ಸಾಮಾನು-ಸರಂಜಾಮುಗಳನ್ನು ಪ್ಯಾಕ್ ಮಾಡಿ ವಾಹನಕ್ಕೆ ತಾವೇ ಎತ್ತಿ ತುಂಬುತ್ತಿರುವ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಾಗಿ ಹರಿದಾಡಿತ್ತು. ಇಂದಿಗೂ ಅವರ ಮನೆ ಯಲ್ಲಿ ಮಾಜಿ ಪ್ರಧಾನ ಮಂತ್ರಿಯ ಯಾವ ಲವ-ಲೇಶವನ್ನೂ ಕಾಣಲು ಸಾಧ್ಯವಿಲ್ಲ. ಈಗಲೂ ಅವರನ್ನು
ಲಂಡನ್‌ನ ಗಿಜಿಗುಡುವ ಟ್ರೇನ್‌ನಲ್ಲಿ ಆಗಾಗ ಕಾಣಬಹುದು. ಕಲವು ವರ್ಷಗಳ ಹಿಂದೆ, ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ ಡಿಡಿಯನ್ ಬರ್ಕಾಲ್ಟರ್ ರೈಲಿಗೆ ಕಾಯುತ್ತಾ ನಿಲ್ದಾಣದಲ್ಲಿ ನಿಂತು ಸ್ಮಾರ್ಟ್ ಫೋನ್‌ನಲ್ಲಿ ಮೆಸೇಜ್‌ಗಳನ್ನು ಓದುತ್ತಿದ್ದರು. ರೈಲು ಬರಲು ಕೆಲವು ನಿಮಿಷಗಳಿದ್ದವು.

ರೈಲಿಗಾಗಿ ಹಲವು ಮಂದಿ ಕಾಯುತ್ತಿದ್ದರು. ಅವರಾರಿಗೂ ತಮ್ಮ ಪಕ್ಕದಲ್ಲಿ ಆ ರಾಷ್ಟ್ರದ ಅಧ್ಯಕ್ಷ ರೈಲಿಗಾಗಿ ಬರಹಾಯುತ್ತಿದ್ದಾರೆಂಬುದೂ ಗೊತ್ತಿರಲಿಲ್ಲ. ಕಾರಣ ಅಧ್ಯಕ್ಷನ ಜತೆ ಅಂಗರಕ್ಷಕರೂ ಇರಲಿಲ್ಲ.(ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷ ಬಂದರೆ ಅವರ ಸುತ್ತ ಭದ್ರತಾ ಸಿಬ್ಬಂದಿ, ಹತ್ತಾರು ವಾಹನಗಳು ಸುತ್ತುವರಿ
ದಿರುತ್ತವೆ.) ಈ ದೃಶ್ಯವನ್ನು ‘ಲೀ ಟೆಂಪ್ಸ್’ ಪತ್ರಿಕೆಯ ವರದಿಗಾರ ಸೆರ್ಜ್ ಜುಬಿನ್ ಎಂಬಾತ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು, ಟ್ವೀಟ್ ಮಾಡಿದಾಗಲೇ ಗೊತ್ತಾಗಿದ್ದು!

ಇತ್ತೀಚೆಗೆ ಡಚ್ (ನೆದರ್‌ಲ್ಯಾಂಡ್) ಪ್ರಧಾನಿ ಮಾರ್ಕ್ ರುಟ್ ಅವರು ನೆಲದ ಮೇಲೆ ಚೆಲ್ಲಿದ ಕಾಫಿಯನ್ನು ಸ್ವತಃ ಒರೆಸಿದ್ದು ವಿಶ್ವದೆಲ್ಲೆಡೆ ಭಾರೀ ವೈರಲ್ ಆಯಿತು. ಹೇಗ್‌ನಲ್ಲಿ ಆರೋಗ್ಯ ಖಾತೆಯಿರುವ ಬಿಲ್ಡಿಂಗ್‌ನಲ್ಲಿ ಮೀಟಿಂಗ್‌ಗೆಂದು ರುಟ್ ಅವರು ಅವಸರದಲ್ಲಿ ಹೊರಟಿದ್ದರು. ಒಂದು ಕೈಯಲ್ಲಿ ಫೈಲುಗಳನ್ನು ಹಿಡಿದಿದ್ದರು. ಮತ್ತೊಂದು ಕೈಯಲ್ಲಿ ಕಾಫಿ ಇತ್ತು. ಆ ಕಪ್ ಅಚಾನಕ್ ಆಗಿ ಕೈಯಿಂದ ಕೆಳಗೆ ಬಿದ್ದಿತು. ನೆಲದ ಮೇಲೆಲ್ಲ ಕಾಫಿ ಚೆಲ್ಲಿತು. ತಕ್ಷಣ ಪ್ರಧಾನಿ ರುಟ್ ಪಕ್ಕದಲ್ಲಿಯೇ ಇದ್ದ ನೆಲ ಒರೆಸುವ ಕೈಹಿಡಿ(Mop)ಯಿಂದ ಚೆಲ್ಲಿದ ಕಾಫಿಯನ್ನು ಒರೆಸಿದರು. ದೇಶದ ಪ್ರಧಾನಿಯಾಗಿ ಅವರು ಹಾಗೇ ಹೋಗಬಹುದಾಗಿತ್ತು. ಆದರೆ ಅದರಿಂದ
ನೆಲ ಕೊಚ್ಚೆಯಾಗುತ್ತಿತ್ತು. ಬೇರೆಯವರು ಕಾಲಿಟ್ಟು ಬೀಳುವ ಸಾಧ್ಯತೆಯೂ ಇತ್ತು.

ಒಬ್ಬ ಪ್ರಧಾನಿಯಾಗಿ ಅವರು ನೆಲ ಒರೆಸಬೇಕೆಂದು ಯಾರೂ ನಿರೀಕ್ಷಿಸಿರಲಿಲ್ಲ. ನೆಲ ಒರೆಸದೇ ಹಾಗೇ ಹೋಗಿದ್ದಿದ್ದರೆ ಯಾರೂ ಏನೂ ಅಂದುಕೊಳ್ಳುತ್ತಿರಲಿಲ್ಲ. ಆದರೆ ರುಟ್ ತಾವೇ ನೆಲ ಒರೆಸಿದರು. ನಮ್ಮ ದೇಶದಲ್ಲಿ ಹೀಗಾಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಬಹುದು. ನೆದರ್‌ಲ್ಯಾಂಡ್ ಸುಮಾರು ಒಂದು ಕೋಟಿ ಎಪ್ಪತ್ತು ಲಕ್ಷ ಜನಸಂಖ್ಯೆ ಇರುವ ಪುಟ್ಟ ದೇಶ. ಕಳೆದ ವರ್ಷ ಯಾವುದೇ ಪಕ್ಷಕ್ಕೂ ಬಹುಮತ ಬರದೇ ರಾಜಕೀಯ ಗೊಂದಲ, ಅನಿಶ್ಚಿತತೆಯುಂಟಾಗಿತ್ತು. ಆನಂತರ ಮಾರ್ಕ್ ರುಟ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿತು. ಪ್ರಧಾನಿಯಾದ ಹೊಸತರಲ್ಲಿ ರುಟ್ ಅವರು ಕಿಂಗ್ ವಿಲಿಯಂ ಅಲೆಕ್ಸಾಂಡರ‍್ಸ್
ಅರಮನೆಯಲ್ಲಿ ‘ಡಚ್ ಹೆಡ್ ಆಫ್ ದಿ ಸ್ಟೇಟ್’ ಅವರನ್ನು ಕಾಣಲು ಹೋಗಿದ್ದರು.

ಅಲ್ಲಿಗೆ ಹೋಗುವಾಗ ತಮ್ಮ ಬೆಂಗಾವಲು ಪಡೆ, ಗುಂಡು ನಿರೋಧಕ ವಾಹನದ ಬದಲಿಗೆ ಬೈಸಿಕಲ್‌ನ್ನು ಏರಿ ಹೋಗಿದ್ದರು! ರಾಜನನ್ನು ನೋಡಲು ಪ್ರಧಾನಿ ಸೈಕಲ್‌ನಲ್ಲಿ ! ಅರಮನೆ ಮುಂದೆ ಸೈಕಲ್‌ಗೆ ಬೀಗ ಹಾಕಿ ಒಳ ನಡೆದಿದ್ದರು! ನೀವು ಜೋಸ್ ‘ಪೆಪ’ ಮುಜಿಕಾ ಅವರ ಹೆಸರನ್ನು ಕೇಳಿರಬಹುದು, ಇವರು ಉರುಗ್ವೆ ದೇಶದ ಅಧ್ಯಕ್ಷರಾಗಿದ್ದರು. ಅವರು ‘ಜಗತ್ತಿನ ಅತ್ಯಂತ ಬಡ ಅಧ್ಯಕ್ಷ’ ಎಂದೇ ಪ್ರಸಿದ್ಧ.

ಮೂಲತಃ ಗೆರಿ ಫೈಟರ್ ಆಗಿದ್ದ ಮುಜಿಕಾ ಹದಿನಾಲ್ಕು ವರ್ಷ ಜೈಲಿನಲ್ಲಿದ್ದರು. ಅತ್ಯಂತ ಘನಘೋರ ಶಿಕ್ಷೆಯನ್ನು ಅನುಭವಿಸಿದರು. 2009 ರಲ್ಲಿ ಉರುಗ್ವೆ ಅಧ್ಯಕ್ಷ ನಾಗಿ ಆಯ್ಕೆಯಾದಾಗ, ಅರಮನೆಯಂಥ ವಿಲಾಸಿ ಅಽಕೃತ ನಿವಾಸದಲ್ಲಿ ಉಳಿಯುವ ಬದಲು ತನ್ನ ಪತ್ನಿಯೊಂದಿಗೆ ಸಾಮಾನ್ಯ ಗುಡಿಸಲಿನಲ್ಲಿ ವಾಸಿಸಲು ಆರಂಭಿಸಿದರು. ಅರಮನೆಯಲ್ಲಿ ಅಧ್ಯಕ್ಷರ ಸೇವೆಗೆಂದು ಅರವತ್ತೈದು ಸೇವಕರಿದ್ದರು.

ಅವರೆಲ್ಲರನ್ನು ಬೇರೆ ಬೇರೆ ಕೆಲಸಗಳಿಗೆ ವರ್ಗ ಮಾಡಿದರು. ಅಗತ್ಯವಿದ್ದಾಗ ಮಾತ್ರ ಕರೆಯುವುದಾಗಿ ಹೇಳಿದರು. ಅಧ್ಯಕ್ಷನಾಗಿದ್ದ ಅವಽಯಲ್ಲಿ ಪಡೆದ ಸರಕಾರಿ ಸಂಬಳದ ಶೇ.90 ರಷ್ಟು ಹಣವನ್ನು ದಾನ ಮಾಡಿದರು. ಅವರ ಬಳಿಯಿದ್ದ ಏಕಮಾತ್ರ ಲಕ್ಸುರಿ ಅಂದರೆ ವೋಲ್ಕ್ಸ್ ವಾಗೆನ್ ಬೀಟಲ್ ಕಾರು. ಅದನ್ನು ಅವರು 1987 ರಲ್ಲಿ ಖರೀದಿಸಿದ್ದರು. ಸರಕಾರಿ ಖರ್ಚಿನಲ್ಲಿ ದುಂದು ವೆಚ್ಚ ಮಾಡುವ ಜಾಗತಿಕ ನಾಯಕರನ್ನು ಬಹಿರಂಗವಾಗಿಯೇ ಟೀಕಿಸಿದ ಮುಜಿಕಾ, ಜನರ ಹಣದಲ್ಲಿ ಮೋಜು ಉಡಾಯಿಸಲು ಅಧ್ಯಕ್ಷರಿಗೆ ಅಥವಾ ಪ್ರಧಾನಿಗಳಿಗೆ ನೈತಿಕ ಹಕ್ಕಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದರು.

ಕೆಲವು ವರ್ಷಗಳ ಹಿಂದೆ ನಾನು ಆಫ್ರಿಕಾದ ರವಾಂಡಾ ದೇಶಕ್ಕೆ ಹೋದಾಗ, ಅಲ್ಲಿನ ರಾಜತಾಂತ್ರಿಕ ಅಧಿಕಾರಿಯೊಬ್ಬರು ಹೇಳಿದ ಪ್ರಸಂಗವಿದು. ಆಫ್ರಿಕಾದಲ್ಲಿ ಮಲಾವಿ ಎಂಬ ಪುಟ್ಟ ದೇಶವಿದೆ. 2012 ರಿಂದ ಎರಡು ವರ್ಷಗಳ ಕಾಲ ಆ ದೇಶವನ್ನು ಜಾಯ್ಸ್ ಬಂಡಾ ಎಂಬಾಕೆ ಅಧ್ಯಕ್ಷೆಯಾಗಿದ್ದರು. ಆಕೆ ಅಧ್ಯಕ್ಷೆ ಯಾಗುತ್ತಲೇ, ಅಧ್ಯಕ್ಷರು ಮಾತ್ರ ಬಳಸುತ್ತಿದ್ದ ಜೆಟ್ ವಿಮಾನ ಮಾರಿಬಿಟ್ಟಳು. ವಿಮಾನದಲ್ಲಿ ಪ್ರಯಾಣ ಮಾಡುವ ಪ್ರಸಂಗ ಬಂದಾಗ ಪ್ಯಾಸೆಂಜರ್ ವಿಮಾನ ದಲ್ಲಿ ಹೋಗುತ್ತಿದ್ದಳು. ವಿದೇಶ ಪ್ರವಾಸದಲ್ಲೂ ಸಾರ್ವಜನಿಕ ವಿಮಾನವನ್ನೇ ಬಳಸುತ್ತಿದ್ದಳು.

ಅಧ್ಯಕ್ಷರು ವಿವಿಧ ಸಂದರ್ಭ, ಸನ್ನಿವೇಶಗಳಲ್ಲಿ ಬಳಸುತ್ತಿದ್ದ ಅರವತ್ತು ಬೆಂಜ್ ಕಾರುಗಳನ್ನು ಸಹ ಮಾರಾಟ ಮಾಡಿ ಬಿಟ್ಟಳು. ವಿಮಾನ ಮತ್ತು ಕಾರುಗಳನ್ನು ಮಾರಿದ್ದರಿಂದ ಬಂದ ಹಣವನ್ನು ಬಡವರ ಭೋಜನ ಯೋಜನೆಗೆ ನಿಯೋಜಿಸುವಂತೆ ಹೇಳಿದಳು. ಇದರಿಂದ ಹತ್ತು ಲಕ್ಷ ಜನರಿಗೆ ಮಧ್ಯಾಹ್ನದ ಬಿಸಿಯೂಟ ಸಿಗುವಂತಾಯಿತು. ಅಷ್ಟು ಜನರ ಉಪವಾಸಕ್ಕೆ ಕಾರಣವಾದ ಐಷಾರಾಮಿ ಜೀವನ ತನಗೆ ಬೇಡ ಎಂದು ಆಕೆ ಎಲ್ಲವನ್ನೂ ತಿರಸ್ಕರಿಸಿದಳು. ನಾನು 2015 ರ ಡಿಸೆಂಬರ್‌ನಲ್ಲಿ ನೇಪಾಳದ ಕಟ್ಮಂಡುವಿನಲ್ಲಿ ಆ ದೇಶದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರನ್ನು ಭೇಟಿ ಮಾಡಿದ್ದೆ.

ಅವರು ಪ್ರಧಾನಿ ಪಟ್ಟದಿಂದ ಕೆಳಗಿಳಿದು ಕೇವಲ ಒಂದು ತಿಂಗಳಾಗಿತ್ತು. ಅವರಿಗೆ ತಮ್ಮದೆನ್ನುವ ಒಂದು ಮನೆಯೂ ಇರಲಿಲ್ಲ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದಕ್ಕಿಂತ ಮುನ್ನ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲ ಕಾಲ ಬಾಡಿಗೆ ಹಣ ಹೊಂದಿಸಲಾಗದೆ ಅವರು ತಮ್ಮ ಸಹೋದರನ ಮನೆ ಯಲ್ಲಿ ವಾಸಿಸುತ್ತಿದ್ದರು. ನಾನು ಕಟ್ಮಂಡುವಿನಲ್ಲಿ ಇದ್ದ ಸಂದರ್ಭ ದ ಒಂದು ಸುದ್ದಿ ಪ್ರಕಟವಾಗಿತ್ತು. ಅದೇನೆಂದರೆ, ಸುಶೀಲ್ ಕೊಯಿರಾಲ ಅವರ ಆಸ್ತಿ ಗಳೆಂದರೆ ಮೂರು ಮೊಬೈಲ್ ಫೋನುಗಳು ಮಾತ್ರ ಎಂದು.

‘ಸರಕಾರದ ಹಣ ಬಳಸುವುದೆಂದರೆ ಹಂಗಿನ, ನಂಜಿನ ಹಣ ಬಳಸಿದಂತೆ. ನಾನು ಜನರ ಹಣ ಬಳಸುವುದಿಲ್ಲ. ನನಗಾಗಿ ಸರಕಾರ ಏನನ್ನೂ ಖರ್ಚು ಮಾಡ ಬೇಕಿಲ್ಲ. ನನಗೆ ಜನ ಅಧಿಕಾರ ಕೊಟ್ಟಿರುವುದು ದರ್ಪ ಮೆರೆಯಲು ಅಲ್ಲ’ ಎಂದು ಅವರು ಹೇಳುತ್ತಿದ್ದರು. ರಾಜಮನೆತನದವರ ಹೊರತಾಗಿ ಬೇರೆ ಯಾರೂ ಅಧಿಕಾರಕ್ಕೇರಲು ಅಸಾಧ್ಯ, ಪ್ರಧಾನಮಂತ್ರಿ ಹುದ್ದೆ ಹಣವಂತರಿಗೆ ಮಾತ್ರ ಮೀಸಲು ಎಂಬ ಸ್ಥಾಪಿತ ನಿಯಮವನ್ನು ಕಿತ್ತೆಸೆದು ಪ್ರಧಾನಿಯಾಗಿದ್ದ ಕೊಯಿರಾಲ
ಕೊನೆ ತನಕ ಹಾಗೇ ಇದ್ದರು.

ಇತ್ತೀಚೆಗೆ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದ ಆರ್ಡರ್ನ್ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಕಳೆದ ಮೂವತ್ತು ವರ್ಷಗಳಲ್ಲಿ ಅಧಿಕಾರದಲ್ಲಿರುವಾಗಲೇ ಹಡೆದವ ಳೆಂಬ ಪ್ರಖ್ಯಾತಿಗೆ ಒಳಗಾದ ಆರ್ಡರ್ನ್, ಹೆರಿಗೆ ಬೇನೆ ಶುರುವಾಗುತ್ತಿದ್ದಂತೆ ಆಯ್ದುಕೊಂಡಿದ್ದು ಸರಕಾರಿ ಆಸ್ಪತ್ರೆಯನ್ನು. ಅವಳು ಯಾವ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಬಹುದು ಎಂಬ ಬಗ್ಗೆ ತೀವ್ರ ಕುತೂಹಲವಿತ್ತು. ಪ್ರಧಾನಿಯಾಗಿ ಆಕೆ ಖಾಸಗಿ ಆಸ್ಪತ್ರೆಯನ್ನು ಆಯ್ದುಕೊಳ್ಳ ಬಹುದಿತ್ತು. ಆದರೆ ಆಯ್ದು ಕೊಂಡಿದ್ದು ಸರಕಾರಿ ಆಸ್ಪತ್ರೆಯನ್ನು. ನಮ್ಮ ದೇಶದಲ್ಲಿ ಪ್ರಧಾನಿ ಬಿಡಿ, ಒಬ್ಬ ಶಾಸಕ ಅಥವಾ ಕಾರ್ಪೊರೇಟರ್ ಕೂಡ ತನ್ನ ಹೆಂಡತಿಯನ್ನು ಸರಕಾರಿ ಆಸ್ಪತ್ರೆಗೆ ಸೇರಿಸು ತ್ತಾನಾ? ಸಾಧ್ಯವೇ ಇಲ್ಲ.

ಜೆಫ್ರಿ ಹೋವ, ಡೇವಿಡ್ ಕೆಮರೂನ, ಡಿಡಿಯರ್ ಬರ್ಕಾಲ್ಟರ್, ಮಾರ್ಕ್ ರುಟ, ಸ್ವಿಟ್ಜರ್ಲ್ಯಾಂಡ್ ಪ್ರಧಾನಿ, ಉರುಗ್ವೆ ಅಧ್ಯಕ್ಷ, ಮಲಾವಿ ಅಧ್ಯಕ್ಷೆ, ನ್ಯೂಜಿಲ್ಯಾಂಡ್ ಪ್ರಧಾನಿ… ಅವರೆಲ್ಲ ಜ್ಞಾಪಕಕ್ಕೆ ಬಂದರು!