Friday, 13th December 2024

ಅತಿ ಬುದ್ಧಿವಂತ: ಅಂತ್ಯ ಮಾತ್ರ ದುರಂತ

ನಾಡಿಮಿಡಿತ

ವಸಂತ ನಾಡಿಗೇರ

vasanth.nadiger@gmail.com

ಮೆಕಫೀ..ಜಾನ್ ಮೆಕಫೀ.. ಹೀಗೆ ಹೇಳಿದರೆ ಸರಿಯಾಗಿ ಗೊತ್ತಾಗಲಿಕ್ಕಿಲ್ಲ. ಆದರೆ ಎಲ್ಲೊ ಕೇಳಿದ ಹಾಗಿದೆ ಎಂದೆನಿಸುತ್ತದೆ. ಈಗ ಎಲ್ಲೆಡೆ ಕರೋನಾ, ಕೋವಿಡ್ ಲಸಿಕೆಯದೇ ಧ್ಯಾನ, ಚಡಪಡಿಕೆ. ಹಾಗೆ ನೋಡಿದರೆ ಜಗತ್ತಿನಲ್ಲಿ ಕಾಲಕಾಲಕ್ಕೆ ಕಾಡುವ ಹಲವಾರು ರೋಗಗಳಿಗೆ ಲಸಿಕೆ ಕಂಡು ಹಿಡಿಯ ಲಾಗಿದ್ದು ಈಗ
ಕರೋನಾ ವೈರಸ್ ತಂದಿರುವ ಕೋವಿಡ್‌ಗೂ ಲಸಿಕೆಗಳು ಬಂದಿವೆ. ಆದರೆ ಮನುಷ್ಯರಿಗೆ ಮಾತ್ರವಲ್ಲದೆ ಕಂಪ್ಯೂಟರ್‌ಗಳಿಗೂ ವೈರಸ್ ದಾಳಿ ಮಾಡುತ್ತವೆ.
ಇದನ್ನು ಆಗಾಗ ಕೇಳುತ್ತಿರುತ್ತೇವೆ. ಈ ವೈರಸ್‌ಗಳಿಗೆ ಕೂಡ ಆಂಟಿ ವೈರಸ್‌ಗಳಿವೆ.

ಇಂಥ ಆಂಟಿವೈರಸ್‌ನ ಹರಿಕಾರ, ಜನಕನೇ ಈ ಜಾನ್ ಮೆಕಫೀ. ಅಂದರೆ ಮೆಕಫೀ ಸಾಫ್ಟ್’ವೇರ್ ಬಳಸಿರುವವರಿಗೆ ಈಗ ಥಟ್ಟಂತ ನೆನಪಾಗಬಹುದು. ಆದರೆ ಈ ವ್ಯಕ್ತಿಯ ಪ್ರಸ್ತಾಪ ಈಗೇಕೆ ಎಂದಿರಾ? ಈತ ಈಚೆಗಷ್ಟೇ ಸ್ಪೇನ್‌ನ ಬಾರ್ಸಿಲೋನಾ ನಗರದ ಜೈಲಿನಲ್ಲಿ ಮೃತಪಟ್ಟ. ಅದು ಸರಿ. ಆತ ಸಾಯುವುದಕ್ಕೂ ಈ ಲೇಖನಕ್ಕೂ ಏನು ಸಂಬಂಧ ಎಂಬುದು ಮುಂದಿನ ಪ್ರಶ್ನೆಯಾಗಿರಬಹುದು. ಅದಕ್ಕೂ ಉತ್ತರವಿದೆ. ಅಮೆರಿಕದ ಈ ವ್ಯಕ್ತಿ ಸ್ಪೇನ್‌ಗೆ ಬಂದಿದ್ದೇಕೆ? ಅಲ್ಲಿ ಜೈಲು ಸೇರಿದ್ದೇಕೆ ಎಂಬ ಸಂಗತಿ ತಿಳಿದರೆ ಎಲ್ಲವೂ ಸ್ಪಷ್ಟವಾಗಬಹುದು.

ಜಾನ್ ಮೆಕಫೀಯನ್ನು ಸ್ಪೇನ್ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಅಲ್ಲಿನ ನ್ಯಾಯಾಲಯವು ಆತನನ್ನು ಅಮೆರಿಕಕ್ಕೆ ಒಪ್ಪಿಸಬೇಕು ಎಂದು ಆದೇಶ ನೀಡಿತ್ತು. ತೀರ್ಪು ಹೊರಬಿದ್ದ ಬೆನ್ನಲ್ಲೇ ಮೆಕಫೀ ಸಾವಿಗೀಡಾಗಿದ್ದಾನೆ. ಒಂದು ವೇಳೆ ಅಮೆರಿಕಕ್ಕೆ ಒಪ್ಪಿಸಿದ್ದರೆ, ತೆರಿಗೆಗಳ್ಳತನ ಮತ್ತಿತರ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಬೇಕಿತ್ತು. ಆರೋಪ ಸಾಬೀತಾದ ಪಕ್ಷದಲ್ಲಿ ಕನಿಷ್ಠ 30 ವರ್ಷ ಜೈಲುಶಿಕ್ಷೆ ಅನುಭವಿಸ ಬೇಕಾಗಿತ್ತು. ಇದರಿಂದ ಪಾರಾಗಲು ಸ್ಪೇನ್‌ಗೆ ಬಂದರೂ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿಬಿದ್ದು ಕೋರ್ಟ್ ಆದೇಶದ ಪರಿಣಾಮವಾಗಿ ಮತ್ತೆ ಅಮೆರಿಕಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕೊನೆಗೆ ಬೇರೆ ದಾರಿ ಇಲ್ಲದೆ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಆದರೆ ತಾನು ಅದು ಆತ್ಮಹತ್ಯೆಯಲ್ಲ, ಕೊಲೆ ಎಂದು ಮೊದಲಿನಿಂದಲೂ ಮೆಕಫೀ ಹೇಳುತ್ತಿದ್ದುದುಂಟು. ಇದೇ ರೀತಿಯ ಬರಹವನ್ನು ತನ್ನ ತೋಳಿನ ಮೇಲೆ ಹಚ್ಚೆ
ಥರ ಹಾಕಿಸಿಕೊಂಡಿದ್ದ. ಸಾವಿಗೆ ಕೆಲ ದಿನಗಳ ಹಿಂದಷ್ಟೇ ಅವನ ಪತ್ನಿ ಮಾಡಿದ್ದ ಟ್ವೀಟ್‌ನಲ್ಲಿ ಇದೇ ವಿಷಯ ಪ್ರಸ್ತಾಪಿಸಿದ್ದಳು. ‘ನಿರ್ಭಿಡೆ, ನಿರ್ಭೀತಿಯಿಂದ
ಮಾತನಾಡಿದ ತಪ್ಪಿಗೆ ತನ್ನ ಗಂಡ ಶಿಕ್ಷೆ ಅನುಭವಿಸುವಂತಾಗಿದೆ. ಆತ ಜೈಲಿನಲ್ಲೇ ಸಾಯಬೇಕೆಂಬುದು ಅಮೆರಿಕ ಸರಕಾರದ ಅಭಿಲಾಷೆ’ ಎಂದು ಅದರಲ್ಲಿ ತಿಳಿಸಿದ್ದಳು. ಹೀಗೆ ತನ್ನ ೭೨ನೇ ವಯಸ್ಸಿನಲ್ಲಿ ದುರಂತ ಸಾವು ಕಂಡ ಜಾನ್ ಮೆಕಫೀ ಆಂಟಿವೈರಸ್‌ನ ಹರಿಕಾರ, ಜಗಳಗಂಟ, ಉದ್ಯಮಿ, ವಿಕ್ಷಿಪ್ತ ಮನುಷ್ಯ
ಎಂಬಿತ್ಯಾದಿ ನಾನಾ ಬಗೆಯ ಬಿರುದು ಮತ್ತು ಕಳಂಕ ಹೊತ್ತು ಇಹಲೋಕ ಯಾತ್ರೆ ಮುಗಿಸಿದ್ದಾನೆ.

ಜಗತ್ತಿನಲ್ಲಿ ಜಾಣರಿರುತ್ತಾರೆ. ಬುದ್ಧಿವಂತರಿರುತ್ತಾರೆ. ಅತಿಬುದ್ಧಿವಂತರಿರುತ್ತಾರೆ. ಮೇಧಾವಿಗಳಿರುತ್ತಾರೆ. ಜಾಣತನದ ಜತೆಗೆ ಕ್ರಿಮಿನಲ್ ಬುದ್ಧಿಯನ್ನು ಹೊಂದಿ ದವರೂ ಇರುತ್ತಾರೆ. ಮೆಕಫೀ ಕೊನೆಯ ವರ್ಗಕ್ಕೆ ಸೇರಿದವನು. ಅಸಾಧ್ಯ ಬುದ್ಧಿವಂತನಾದರೂ ಸಲ್ಲದ ಕಾರಣಕ್ಕೆ ಸುದ್ದಿಯಾಗಿದ್ದೇ ಹೆಚ್ಚು. ಪ್ರತಿಭಾ ವಂತರು
ತಮ್ಮ ಪ್ರತಿಭೆಯನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡು ಸಮಾಜಕ್ಕೆ ಉಪಕಾರ ಮಾಡುತ್ತಾರೆ. ಸೇವೆ ಸಲ್ಲಿಸುತ್ತಾರೆ. ಸನ್ಮಾರ್ಗದಲ್ಲಿ ನಡೆದು ಹೆಸರುವಾಸಿ ಯಾಗುತ್ತಾರೆ. ಆದರೆ ಮೆಕಫೀ ಯಂಥ ಕೆಲವರು ಅಗಾಧ ಪ್ರತಿಭೆಯನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸಿ ತಮಗೂ, ಬೇರೆಯವರಿಗೂ ಸಮಸ್ಯೆ ತಂದುಕೊಳ್ಳು ತ್ತಾರೆ. ಮೆಕಫೀ ಜೀವನದ ಉದ್ದಕ್ಕೂ ನಮಗೆ ಇದೇ ನೆರಳು ಕಾಣುತ್ತದೆ.

ಆ ನಿಟ್ಟಿನಲ್ಲಿ ಆತನ ಜೀವನ ಕುತೂಹಲಕರವಾಗಿದೆ. ಜಾನ್ ಮೆಕಫೀ ಜೀವನ ಎಂದಿಗೂ ಸರಳ, ಸುಸೂತ್ರವಾಗಿದ್ದೇ ಇಲ್ಲ. ಅದು ಸದಾ ವಕ್ರ ರೇಖೆಯಲ್ಲೆ
ಸಾಗಿದ್ದು. ಇದಕ್ಕೆ ಆತ ಸ್ವತಃ ವಕ್ರನಾಗಿರುವುದೇ ಕಾರಣವಾಗಿರಬಹುದು. ಮೆಕಫೀ ಹುಟ್ಟಿದ್ದು ಬ್ರಿಟನ್ನಿನಲ್ಲಿ. ಬೆಳೆದಿದ್ದು (ಪ್ರಗತಿ ಹೊಂದಿದ್ದು ಎಂಬ ಅರ್ಥವೂ ಸೇರಿ) ಅಮೆರಿಕದಲ್ಲಿ. ತಂದೆ ಅಮೆರಿಕನ್. ಸೇನಾಪಡೆಯ ಉದ್ಯೋಗಿ. ಬ್ರಿಟನ್ನಿನಲ್ಲಿ ಕೆಲಸಕ್ಕೆ ನಿಯೋಜಿತರಾಗಿದ್ದರು. ತಾಯಿ ಬ್ರಿಟನ್ನಿನವಳು. ಗ್ಲೌಸೆಸ್ಟರ್‌ಶೈರ್‌ ನಲ್ಲಿ 1945ರಲ್ಲಿ ಮೆಕಫೀ ಜನನ ವಾಗುತ್ತದೆ. 15ನೇ ವಯಸ್ಸಿಗೇ ತಂದೆ ತೀರಿಹೋದ ಬಳಿಕ ಅಮೆರಿಕಕ್ಕೆ ಹೊರಟು ನಿಲ್ಲುತ್ತಾನೆ. ಅಲ್ಲಿನ ಕಾಲೇಜೊಂದರಲ್ಲಿ ಗಣಿತದಲ್ಲಿ ಪದವಿ ಗಳಿಸುತ್ತಾನೆ. ಡಾಕ್ಟೊರೇಟ್ ಪದವಿಗೆ ಅಭ್ಯಾಸ ಮಾಡುತ್ತಿದ್ದಾಗ ಕಾಲೇಜಿನ ವಿದ್ಯಾರ್ಥಿಯೊಬ್ಬಳ ಜತೆ ಸಂಬಂಧ ಬೆಳೆಸಿದ್ದಕ್ಕಾಗಿ ಉಚ್ಚಾಟನೆ ಶಿಕ್ಷೆ. ಇದು ಆತನ ಹಲವು ಹುಚ್ಚಾಟಗಳಲ್ಲಿ ಮೊದಲನೆಯದು. ಆದರೆ ಕೊನೆಗೆ ಅದೇ ವಿದ್ಯಾರ್ಥಿನಿಯನ್ನು ಮದುವೆಯಾಗುತ್ತಾನೆ. ಮುಂದೆ ಉದ್ಯೋಗಬೇಟೆ.

ನಾಸಾದಲ್ಲಿ ಪ್ರೋಗ್ರಾಮರ್ ಕೆಲಸ. ಬಳಿಕ ಯುನಿವಾಕ್, ಜೆರಾಕ್ಸ್ ಮುಂತಾದ ಹಲವಾರು ಕಂಪನಿಗಳಲ್ಲಿ ಸಾಫ್ಟ್’ವೇರ್ ಎಂಜಿನಿಯರ್ ಆಗಿ ನೌಕರಿ. ಲಾಕ್‌ ಹೀಡ್ ಎಂಬ ಕಂಪನಿಯಲ್ಲಿ 1982ರಲ್ಲಿ ಕೆಲಸ ಮಾಡುತ್ತಿದ್ದಾಗ ‘ಬ್ರೇನ್’ ಎಂಬ ಕಂಪ್ಯೂಟರ್ ವೈರಸ್ ಎದುರಾಗುತ್ತದೆ. ಇದಕ್ಕೆ ಆಂಟಿ ವೈರಸ್ ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಕಾರ್ಯ ಆಗ ಆರಂಭವಾಗುತ್ತದೆ. 1987ರಲ್ಲಿ ಈ  ನಿಟ್ಟಿನಲ್ಲಿ ಯಶಸ್ಸು ದೊರೆತೇ ಬಿಟ್ಟಿತು. ಇದರ ಫಲವಾಗಿ ಮೆಕಫೀ ಅಸೋಸಿಯೇಟ್ಸ್ ಎಂಬ ಕಂಪನಿಯನ್ನು ಡೆಲ್ ವೇರ್‌ನಲ್ಲಿ ಸ್ಥಾಪಿಸಿ ಅದರ ಮೂಲಕ ಆಂಟಿ ವೈರಸ್ ಸಾಫ್ಟ್ವೇರ್ ಮಾರಾಟ ಆರಂಭಿಸುತ್ತಾನೆ. ಹೀಗಾಗಿ ಮೆಕಫೀಯೇ ವಾಣಿಜ್ಯ ಉದ್ದೇಶದ ಮೊದಲ ಆಂಟಿ ವೈರಸ್ ಸಾಫ್ಟ್’ವೇರ್ ಎಂಬ ಹೆಗ್ಗಳಿಕೆ ಪಡೆಯುತ್ತದೆ.

ಜಾನ್ ಮೆಕಫೀಯೇ ಇದರ ಹರಿಕಾರ, ರೂವಾರಿ ಎಂಬ ಗೌರವಕ್ಕೆ ಪಾತ್ರನಾಗುತ್ತಾನೆ. ಆದರೆ 1993ರಲ್ಲಿ ಕಂಪನಿಯ ಸಿಇಒ ಪದವಿಯಿಂದ ಕೆಳಗಿಳಿಯುತ್ತಾನೆ.
ಅನಂತರ ಕಂಪನಿಯಿಂದಲೂ ಹೊರಬರುತ್ತಾನೆ. ಈ ಕಂಪನಿ ಕೈ ಬದಲಾಯಿಸುತ್ತ ಕೊನೆಗೆ 2010ರಲ್ಲಿ ಇಂಟೆಲ್ ತೆಕ್ಕೆಗೆ ಹೋಗುತ್ತದೆ. ಮೆಕಫೀ ಸಂಬಂಽತ
ಉತ್ಪನ್ನಗಳು ಇಂಟೆಲ್ ಸೆಕ್ಯುರಿಟಿ ಹೆಸರಿನಲ್ಲಿ ಲಭ್ಯ ಎಂದು ಇಂಟೆಲ್ ಪ್ರಕಟಿಸುತ್ತದೆ. ಆದರೆ ಈ ಹೆಸರಿನಲ್ಲಿ ಅದು ಓಡುವುದಿಲ್ಲ ಎಂಬುದು ಗೊತ್ತಾದ ಮೇಲೆ ಮತ್ತೆ ಮೆಕಫೀ ಹೆಸರಿನಲ್ಲೆ ಮಾರಾಟ ಆರಂಭಿಸುತ್ತದೆ. ಆದರೆ ಇದಕ್ಕೆ ಮೆಕಫೀ ತೀವ್ರ ತಕರಾರು ಮತ್ತು ಆಕ್ಷೇಪ ವ್ಯಕ್ತಪಡಿಸುತ್ತಾನೆ.

ಕೋರ್ಟ್ ಕಟ್ಟೆ ಏರುತ್ತಾನೆ. ಇದರ ಮಧ್ಯೆ ಇನ್ನೂ ಹತ್ತು ಹಲವು ಕಂಪನಿಗಳ್ನು ಮೆಕಫೀ ಹುಟ್ಟುಹಾಕುತ್ತಾನೆ. ಆದರೆ ಮಹಾ ಆರ್ಥಿಕ ಹಿಂಜರಿತದ ಪರಿಣಾಮ ೨೦೦೯ರಲ್ಲಿ ಆತನ ಆಸ್ತಿ ೧೦೦ ಶತಕೋಟಿ ಡಾಲರ್‌ನಿಂದ 40 ಲಕ್ಷ ಡಾಲರ್‌ಗೆ ಕುಸಿಯಿತು. ಅಮೆರಿಕದಲ್ಲಿ ಮ್ಯಾನ್ಷನ್‌ಗಳನ್ನು ಕಟ್ಟಿಸಿದನಾದರೂ ಆ ಪೈಕಿ ಹಲವಾರು ಬಂಗಲೆಗಳು ಮಾರಾಟವಾಗದೆ ಉಳಿದು ಅಪಾರ ನಷ್ಟ ಉಂಟಾಯಿತು. ಅದೇ ರೀತಿ 2010ರಲ್ಲಿ ಬಲೀಜ್ ದೇಶದಲ್ಲಿ ಗಿಡಮೂಲಿಕೆ ಔಷಧ ತಯಾರಿಕೆ ಕಂಪನಿಯನ್ನು ಪ್ರಾರಂಭಿಸಿದ. ಅದೂ ಕೈಹಿಡಿಯಲಿಲ್ಲ. ಬದಲಾಗಿ ಅಲ್ಲಿ ಮಾದಕವಸ್ತು ವ್ಯವಹಾರ ನಡೆದಿದೆ ಎಂಬ ಗುಮಾನಿಯಿಂದ ಆತನ
ಮೇಲೆ ದಾಳಿ ಆಗುತ್ತದೆ. ಇದಾದ ಬಳಿಕ ಎಂಜಿಟಿ ಕ್ಯಾಪಿಟಲ್ ಎಂಬ ಕಂಪನಿಯ ಸಿಇಒ ಆಗಿ ಕಾರ್ಯಾರಂಭ ಮಾಡಿದ.

ಅಲ್ಲಿದ್ದಾಗ, ‘ಆಂಟಿ ವೈರಸ್ ಸಾಫ್ಟ್’ವೇರ್ ಸತ್ತುಹೋಗಿದೆ, ಅದರಿಂದ ಉಪಯೋಗ ಇಲ್ಲ. ಹ್ಯಾಕರ್‌ಗಳು ತಮ್ಮ ಕೈಚಳಕ ತೋರಿಸದಂತೆ ಮೊದಲೇ ತಡೆಯ ಬೇಕಾದುದು ಈಗಿನ ಅಗತ್ಯ ಎಂದ. ಡಿ-ಸೆಂಟ್ರಲ್ ಎಂ ಹೆಸರಿನ ಸುರಕ್ಷಿತ ಕಂಪ್ಯೂಟರ್ ನೆಟ್ ವರ್ಕ್ ಒದಗಿಸುವುದಾಗಿ ಪ್ರಕಟಿಸಿದ್ದಾಯಿತು. ಆದರೆ ಅದು ಮೇಲೇಳಲೇ ಇಲ್ಲ. ಸ್ಮಾರ್ಟ್ಫೋನ್‌ಗಳನ್ನು ಬಳಸಬೇಡಿ ಎಂದು ಲಾಸ್ ವೇಗಸ್‌ನಲ್ಲಿ ನಡೆದ ಸಮಾವೇಶದಲ್ಲಿ ಕರೆಕೊಡುವ ಮೂಲಕ ಮೆಕಫೀ ಸಂಚಲನ ಉಂಟು ಮಾಡಿದ್ದೂ ಹೌದು. ಒಪ್ಪಂದ ಇತ್ಯಾದಿ ವಿವರಗಳನ್ನು ಗ್ರಾಹಕರು ಓದದೇ ಎಲ್ಲದಕ್ಕೂ ಒಪ್ಪಿಗೆ ಕೊಡುವುದರಿಂದ ಎಲ್ಲ ವಿವರಗಳು ಕಂಪನಿಗಳ ಕೈಸೇರುತ್ತವೆ. ಹೀಗಾಗಿ ತಮ್ಮ ಮೇಲೆ ಗೂಢಚರ್ಯೆ ನಡೆಸಲು ಜನರು ತಾವೇ ತಾವಾಗಿ ಕಂಪನಿಗಳಿಗೆ ಅವಕಾಶ ನೀಡುತ್ತಾರೆ’ ಎಂದು ಹೇಳಿದ.

ತಾನು ಆಂಡ್ರಾಯ್ಡ್ ಫೋನ್‌ಗಳನ್ನು ಹ್ಯಾಕ್ ಮಾಡಬಲ್ಲೆ ಎಂದೂ ಬಡಾಯಿ ಕೊಚ್ಚಿಕೊಂಡ. ಇದರ ನಡುವೆ ತನ್ನ ಕಂಪನಿಯ ಗಮನವನ್ನು ಬಿಟ್ ಕಾಯಿನ್
ವ್ಯವಹಾರದತ್ತ ಹೆಚ್ಚು ತೊಡಗಿಸಿದ. ಕೊನೆಗೆ ಆ ಕಂಪನಿಯನ್ನು ತೊರೆದು, ಬಿಟ್ ಕಾಯಿನ್ ವಹಿವಾಟಿನತ್ತ ಸಂಪೂರ್ಣ ಗಮನಹರಿಸುವುದಾಗಿ ಹೇಳಿದ. ಹೀಗೆ, ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಮೆಕಫೀ ಮಾಡದ ಕೆಲಸವಿಲ್ಲ ಎಂದರೂ ಅಡ್ಡಿ ಇಲ್ಲ. ಆದರೆ ಎಲ್ಲೂ ಹೆಚ್ಚು ಹೊತ್ತು ಉಳಿಯುತ್ತಿರಲಿಲ್ಲ. ಯಾವುದಕ್ಕೂ ಅಂಟಿಕೊಳ್ಳುತ್ತಿರಲಿಲ್ಲ. ಕ್ಷಣಚಿತ್ತ ಕ್ಷಣಪಿತ್ತ ಅಂತಾರಲ್ಲ ಆ ಥರ. ಇಷ್ಟು ಸಾಲದೆಂಬಂತೆ ಅಮೆರಿಕದ ರಾಜಕೀಯ ಕ್ಷೇತ್ರದಲ್ಲೂ ಮೆಕಫೀ ಕೈಯಾಡಿಸಿದ್ದುಂಟು.

2016 ಹಾಗೂ 2020ರ ಚುನಾವಣೆಯಲ್ಲಿ ಲಿಬರ್ಟೇರಿಯನ್ ಪಾರ್ಟಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ. ಆದರೆ ಎರಡು
ಬಾರಿಯೂ ಹಿಂದೆ ಸರಿದ. ಇಲ್ಲೂ ಕೂಡ ಆತನ ಅನಿಶ್ಚಿತ ಹಾಗೂ ಅಸ್ಥಿರ ನಿರ್ಧಾರಗಳ ದರ್ಶನವಾಯಿತು. ಏಕೆಂದರೆ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದು
ಹುಡುಗಾಟವಲ್ಲ. ಅದಕ್ಕೆ ಹಣಬೆಂಬಲ, ಜನಬೆಂಬಲ, ಪಕ್ಷದ ಬೆಂಬಲ ಬೇಕು. ಆದರೆ ಯಾವ ಪಕ್ಷವಾದರೂ ಆದೀತು. ಇಲ್ಲದಿದ್ದರೆ ಸ್ವತಂತ್ರವಾಗಿಯಾದರೂ
ಸ್ಪಽಸಿಯೇ ಸಿದ್ಧ ಎಂಬುದು ಆತನ ಹಠ. ಇದೇ ಹಠದಿಂದ ಎರಡು ಬಾರಿ ಸ್ಪರ್ಧೆಗೆ ಧುಮುಕಿ ಅನಂತರ ಅರ್ಧಕ್ಕೆ ಹಿಂಜರಿದ, ಹಿಂದೆ ಸರಿದ.

ಕ್ರಿಪ್ಟೊ ಕರೆನ್ಸಿಯ ಪರವಾಗಿ ಆತ ಸದಾ ವಕಾಲತ್ತು ವಹಿಸುತ್ತಿದ್ದುದುಂಟು. ಅದಕ್ಕಿಂತ ಹೆಚ್ಚಾಗಿ ಬೇರೆ ಬೇರೆ ವಿಷಯಗಳಲ್ಲಿ ಆತನ ದೃಷ್ಟಿಕೋನಗಳೇ ವಿಚಿತ್ರ.
ಮಾದಕವಸ್ತು ಹೊಂದುವುದು ಅಪರಾಧ ಎಂಬ ಕಾನೂನು ರದ್ದುಪಡಿಸಬೇಕು ಎಂದು ಪ್ರತಿಪಾದಿಸುತ್ತಿದ್ದ. ಸ್ವತಃ ಮಾದಕವಸ್ತುಗಳನ್ನು ಸೇವಿಸುತ್ತಿದ್ದ. ರಸಿಕ
ಶಿಕಾಮಣಿಯೂ ಆಗಿದ್ದ. ಕಾಲೇಜಿನಲ್ಲಿದ್ದಾಗಲೇ ವಿದ್ಯಾರ್ಥಿನಿಯನ್ನು ಪ್ರೀತಿಸಿದ್ದಕ್ಕಾಗಿ ಹೊರಹಾಕಿಸಿ ಕೊಂಡಿದ್ದರೂ ಆಕೆಯನ್ನೇ ಕೈಹಿಡಿದಿದ್ದ. ಇವಳೂ ಸೇರಿ
ಮೂವರನ್ನು ಮದುವೆ ಆಗಿದ್ದ. ತನಗೆ 47 ಮಕ್ಕಳು ಎಂದು ಹೇಳಿಕೊಳ್ಳುತ್ತಿದ್ದ. ಸೈಬರ್ ಜಾಗೃತಿಗೆ ಹೆಚ್ಚು ಒತ್ತು ಕೊಡಬೇಕು ಎನ್ನುತ್ತಿದ್ದ. ಇವನ್ನೆಲ್ಲ ಟ್ವಿಟರ್‌ನಲ್ಲಿ
ಬಲವಾಗಿ ಪ್ರತಿಪಾದಿಸುತ್ತಿದ್ದ. ಟ್ವಿಟರ್‌ನಲ್ಲಿ 10 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದ. ತೆರಿಗೆ ವಿಧಿಸುವುದೇ ಅಕ್ರಮ ಎನ್ನುತ್ತಿದ್ದ.

ತನ್ನ ವಿಚಿತ್ರ ನಡವಳಿಕೆಗಳು ಹಾಗೂ ವಿವಾದಗಳಿಂದಾಗಿ ಮೆಕಫೀ ಸದಾ ಮಾಧ್ಯಮಗಳ ಕಣ್ಣಲ್ಲೂ ಇರುತ್ತಿದ್ದ. ಈತನ ಕುರಿತು ‘ದಿ ಡೇಂಜರಸ್ ಲೈಫ್ ಆಫ್
ಜಾನ್ ಮೆಕಫೀ’ ಎಂಬ ಶೀರ್ಷಿಕೆಯಲ್ಲಿ ಒಂದು ಸಾಕ್ಷ್ಟಚಿತ್ರ 2016ರಲ್ಲಿ ಹೊರಬಂದಿತು. ಇದರಲ್ಲಿ ಬಲೀಜ್ ದೇಶದಲ್ಲಿ ಆತನ ಹರಕತ್ತುಗಳ ವಿವರ ಗಳಿದ್ದವು.
ಆದರೆ ಬಲೀಜ್‌ನಂಥ ದೇಶದಲ್ಲಿ ಯಾರು ಬೇಕಾದರೂ ಹೋಗಿ ಏನು ಬೇಕಾದರೂ ಮಾಡಬಹುದು. ಈ ಚಿತ್ರದಲ್ಲಿರುವುದೆಲ್ಲ ಸುಳ್ಳು ಎಂದು ಮೆಕಫೀ ಅನಂತರ
ಹೇಳಿದ್ದುಂಟು. ೨೦೧೭ರಲ್ಲಿ ಮೆಕಫೀ ಬಗ್ಗೆ ಚಿತ್ರವೊಂದನ್ನು ಮಾಡುವ ಬಗ್ಗೆ ಸಿದ್ಧತೆ ನಡೆಯಿತಾದರೂ ಅದು ಸೆಟ್ಟೇರಲಿಲ್ಲ. ಆತ ನೀಡಿದ ಸಂದರ್ಶನಗಳಿಗಂತೂ
ಲೆಕ್ಕವೇ ಇಲ್ಲ.

ಎಂಟು ವರ್ಷಗಳಿಂದ ಸ್ವತಃ ತೆರಿಗೆ ಕಟ್ಟಿಲ್ಲ ಎಂದು ರಾಜಾರೋಷವಾಗಿ ಹೇಳುತ್ತಿದ್ದ. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡರು ಎನ್ನುವಂತೆ ಮೆಕಫೀ ಸದಾ
ಒಂದಲ್ಲ ಒಂದು ಜಗಳ, ರಗಳೆ, ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದ. ಬಲೀಜ್‌ನಲ್ಲಿದ್ದಾಗ ಅಕ್ರಮ ವ್ಯವಹಾರ ನಡೆಸುತ್ತಿದ್ದಾನೆ ಎಂಬ ಆರೋಪ
ದಲ್ಲಿ ಆತನ ಮನೆ ಮೇಲೆ ದಾಳಿ ನಡೆಸಲಾಯಿತು. ಇನ್ನೊಮ್ಮೆ ಪಕ್ಕದ ಮನೆಯವನ ಕೊಲೆ ಆಪಾದನೆ ಕೇಳಿಬಂದಿತಾದರೂ ಸಾಬೀತಾಗಲಿಲ್ಲ. ಆದರೆ ಎರಡೂ
ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದು ಹೌದು.

ಕ್ರಿಪ್ಟೊ ಕರೆನ್ಸಿ, ತೆರಿಗೆ ವಂಚನೆ ಪ್ರಕರಣಗಳಲ್ಲಿ ಮೆಕಫೀ ಅಮೆರಿಕದಾದ್ಯಂತ ಹಲವೆಡೆ, ಹಲವು ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಇವುಗಳಿಂದ
ಪಾರಾಗಲು ದೇಶ ದೇಶಗಳನ್ನು ಅಲೆಯುತ್ತಿದ್ದ. ಆದರೆ ಅಲ್ಲಿಯೂ ಕೂಡ ಒಂದಲ್ಲ ಒಂದು ಕಿರಿಕ್ ಮಾಡಿಕೊಳ್ಳುತ್ತಿದ್ದ. ಹೀಗೆ ಆತನಿಗೆ ಕೋರ್ಟ್ ಕೇಸ್,
ಕಾನೂನು ಸಮರ, ಜೈಲು ಇವೆಲ್ಲ ಜೀವನದ ಅವಿಭಾಜ್ಯ ಅಂಗವಾಗಿದ್ದಂತೆ ತೋರುತ್ತಿತ್ತು. ಕೊನೆ ಕೊನೆಗೆ ಕೋರ್ಟ್ ಕೇಸ್‌ಗಳು ಆತನ ಕಂಗೆಡಿಸಿದ್ದವು. ಬಂಧನ, ವಿಚಾರಣೆ ತಪ್ಪಿಸಿಕೊಳ್ಳಲು ದೇಶದಿಂದ ದೇಶಕ್ಕೆ ಹೋಗುತ್ತಿದ್ದ. ವಿಚಾರಣೆ ನಡೆದು ತೀರ್ಪು ಬಂದರೆ ಮೂವತ್ತು ವರ್ಷಗಳಷ್ಟು ಕಾಲ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ ಎಂಬ ಸಂಗತಿ ಚೆನ್ನಾಗಿ ಗೊತ್ತಿತ್ತು. ಈ ಕಾರಣಕ್ಕಾಗಿಯೇ ಪೊಲೀಸರ ಕಣ್ತಪ್ಪಿಸಿ ಬೇರೆ ಬೇರೆ ಕಡೆ ಓಡಾಡುತ್ತಿದ್ದ. ಆದರೆ ಈ ಬಾರಿ ಸ್ಪೇನ್
ನಲ್ಲಿ ಅದೃಷ್ಟ ಕೈಕೊಟ್ಟಿತ್ತು. ಬಂಧನವೂ ಆಯಿತು.

ಗಡಿಪಾರಿನ ತೀರ್ಪೂ ಬಂತು. ಅಮೆರಿಕಕ್ಕೆ ಹೋದರೂ ಅದೇ ಗತಿ ಎಂಬುದನ್ನು ಅರಿತ ಆತ ತನ್ನ ಜೀವನವನ್ನೇ ಕೊನೆ ಗೊಳಿಸುವ ನಿರ್ಧಾರಕ್ಕೆ ಬಂದ. ಆ ಪ್ರಕಾರ ನೇಣಿಗೆ ಶರಣಾದ. ಇದು ಮೆಕಫೀ ಎಂಬ ಅತಿ ಬುದ್ಧಿವಂತನ ಜೀವನ ವೃತ್ತಾಂತ. ಆತ ತನ್ನ ಜಾಣತನವನ್ನು ಸರಿಯಾದ ರೀತಿಯಲ್ಲಿ ಬಳಸಿದ್ದರೆ ಇನ್ನೂ ಏನೇನೆಲ್ಲವನ್ನೂ ಸಾಧಿಸಬಹುದಿತ್ತು. ಆದರೆ ವಕ್ರ ಮತ್ತು ವಿಕ್ಷಿಪ್ತ ಮನಸ್ಸಿನ ಆತ ಅಡ್ಡಕಸುಬಿ ಕೆಲಸಗಳನ್ನು ಮಾಡಿದ್ದೇ ಹೆಚ್ಚು. ಹೀಗಾಗಿ ಈ ರೀತಿಯ ದುರಂತ ಅಂತ್ಯ ಕಾಣಬೇಕಾಯಿತು. ಆದರೆ ಹೀಗೆಲ್ಲ ಮಾಡದೆ ತನ್ನ ಪಾಡಿಗೆ ಇದ್ದಿದ್ದರೆ ಈ ಪಾಟಿ ಪ್ರಚಾರ ಮೆಕಫೀಗೆ ಸಿಗುತ್ತಿತ್ತೋ ಇಲ್ಲವೋ ಎಂಬುದು ಸಂಶಯವೇ. ಒಟ್ಟಾರೆ ಮೆಕಫೀ ಮಾತ್ರ ಅಸಾಧ್ಯ ಮತ್ತು ಅಸಾಧಾರಣ ಮನುಷ್ಯ ಎಂಬುದನ್ನಂತೂ ಎಲ್ಲರೂ ಒಪ್ಪಬಹುದು.

ನಾಡಿಶಾಸ್ತ್ರ
ತಲೆ ಇದ್ದರೆ ಮನುಷ್ಯನಿಗೆ ಬೆಲೆ, ನೆಲೆ
ಆದರೆ ಮದ ತಲೆಗೇರಿದರೆ ಕೋಟಲೆ
ಇರಲಾದರೆ ಇರುವೆ ಬಿಟ್ಟುಕೊಂಡರೇನು ಸುಖ
ಜೀವನದಲ್ಲಿ ಅನುಭವಿಸಬೇಕಾದೀತು ದುಃಖ