Saturday, 14th December 2024

ಕಾಂತಾರ ಎಂಬ ದಂತಕಥೆಯನ್ನು ಕಣ್ತುಂಬಿಕೊಳ್ಳಿ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ರಾವಣನಂಥ ಪಾತ್ರಗಳನ್ನು ಬಾಲಿವುಡ್ ಪ್ರಭೃತಿಗಳು ವಿಕಾರವಾಗಿ ತೋರಿಸುತ್ತಿರುವಾಗ, ತುಳುನಾಡಿನ ಕಾಡುಗಳಲ್ಲಿರುವ ಜನರ ಬದುಕು-ಬವಣೆ-ಭಾವನೆ, ಸಂಸ್ಕೃತಿ, ಪದ್ಧತಿ, ಆಚರಣೆ, ನಂಬಿಕೆ ಹಾಗೂ ಮನುಷ್ಯರ ನಡುವಿನ ಸಂಬಂಧ ಇತ್ಯಾದಿ ಗಳನ್ನು ಅತ್ಯದ್ಭುತವಾಗಿ ತೋರಿಸಿರುವ ರಿಷಭ್ ಶೆಟ್ಟಿ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಮುಂಬೈ ವಿಮಾನ ನಿಲ್ದಾಣದಲ್ಲಿ ನಟರೊಬ್ಬರು ಕಾಣುತ್ತಿದ್ದಂತೆ ಧಾವಿಸಿ ಬಂದ ಮಹಿಳೆಯೊಬ್ಬಳು ಷೂ ಧರಿಸಿದ್ದ ಅವರ ಕಾಲಿಗೆ ಹಣೆ ಹಚ್ಚಿ ನಮಸ್ಕ ರಿಸಿ ಸಾಕ್ಷಾತ್ ದೇವರನ್ನು ಕಂಡಂತೆ ಪುನೀತಳಾಗುತ್ತಾಳೆ.

ಆ ನಟ ಅರುಣ್ ಗೋವಿಲ್. ದೂರದರ್ಶನದಲ್ಲಿ ಬಿತ್ತರವಾದ ರಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಅವರು ಶ್ರೀರಾಮನ ಪಾತ್ರ ವಹಿಸಿ 35 ವರ್ಷಗಳೇ ಕಳೆದಿದ್ದರೂ, ಜನರು ಆ ಪಾತ್ರಧಾರಿಯನ್ನು ಈಗಲೂ ದೇವರಂತೆ ಕಾಣುವುದಿದೆಯಲ್ಲಾ, ಒಬ್ಬ ಕಲಾವಿದನ ಧನ್ಯತೆಯೇ ಅದು. ಪಾತ್ರಗಳಿಗೆ ಮಹತ್ವ-ಮೌಲ್ಯಗಳನ್ನು ತುಂಬಬಲ್ಲ ನಿರ್ದೇಶಕರು ಇದ್ದಾಗ ಮಾತ್ರವೇ ಇದು ಸಾಧ್ಯ.

ಇಂಥ ನಿರ್ದೇಶಕರಲ್ಲಿ ಭಾರತೀಯ ಸಂಸ್ಕೃತಿ-ಪರಂಪರೆ-ಸಂಸ್ಕಾರಗಳು ಹರಳುಗಟ್ಟಿದ್ದರೆ ಮಾತ್ರವೇ ಈ ರೀತಿಯ ದೃಶ್ಯ ಕಾವ್ಯಗಳನ್ನು ಚಿತ್ರಿಸಲು ಸಾಧ್ಯ. ಅದಿಲ್ಲದಿದ್ದರೆ ಮಾತ್ರವೇ ಹಿಂದೂಧರ್ಮವನ್ನು ಅವಮಾನಿಸುವ ಖಾನ್‌ಗಳು, ಬೆರಕೆಗಳು ಚಿತ್ರರಂಗದಲ್ಲಿ ಹುಟ್ಟಿಕೊಳ್ಳುತ್ತಾರೆ.

‘ಆದಿಪುರುಷ್’ ಎಂಬ ಹಿಂದಿ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಹಿಂದೂ ದೈವಗಳ ಆರಾಧಕ ಗುಲ್ಷನ್ ಕುಮಾರ್ ಕುಟುಂಬ ಈ ಚಿತ್ರವನ್ನು ನಿರ್ಮಿಸಿದ್ದರೆ, ‘ಲೋಕಮಾನ್ಯ ತಿಲಕ್’, ‘ತಾನ್ಹಾಜಿ’ಯಂಥ ದೇಶಭಕ್ತಿಯ ಚಿತ್ರಗಳನ್ನು ಕಟ್ಟಿಕೊಟ್ಟ ಓಂ ರಾವತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಮಾಯಣ ಆಧರಿತ ‘ಆದಿ ಪುರುಷ್’ ಚಿತ್ರದಲ್ಲಿ ತೆಲುಗು ನಟ ಪ್ರಭಾಸ್‌ಗೆ ಶ್ರೀರಾಮನ ಪಾತ್ರ ನೀಡಲಾಗಿದೆ. ಆದರೆ ಕೆಲ ಪಾತ್ರಗಳ ವಿನ್ಯಾಸವು ವಿಕಾರಶೈಲಿಯಲ್ಲಿದೆ.

ಜಿಹಾದಿ ಮನಸ್ಥಿತಿಯ ಸೈಫ್ ಅಲಿಖಾನ್ ಎಂಬ ನಟನಿಗೆ ರಾವಣನ ಪಾತ್ರ ಕೊಟ್ಟು ಅತಿಯಾದ ಗ್ರಾಫಿಕ್ಸ್ ಬಳಸಿ ‘ಇಸ್ಲಾಮಿಕ್’ ರಾವಣನಂತೆ ತೋರಿಸಿದ್ದರೆ, ಮೀಸೆ ಬೋಳಿಸಿ ಗಡ್ಡ ಬಿಟ್ಟಿರುವ ಮುಸ್ಲಿಂ ಮೌಲ್ವಿಯೊಬ್ಬ ಹನುಮಂತನ ಪಾತ್ರವನ್ನು ನಿರ್ವಹಿಸಿ ದಂತಿದೆ. ಇಂಥ ಟೀಸರ್ ಅನ್ನು ಕಂಡ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ರೊಚ್ಚಿಗೆದ್ದು, ರಾವಣನ ಪಾತ್ರದ ಸೈಫ್ ಅಲಿ ಖಾನ್ ಇಲಿ ಪಾಷಾಣ ಮಾರುವವನಂತಿದ್ದಾನೆಂದು ಟ್ರೋಲ್ ಮಾಡಿ ‘ಬಾಯ್ಕಾಟ್ ಆದಿ ಪುರುಷ್’ ಅಭಿಯಾನ ವನ್ನೂ ಆರಂಭಿಸಿದ್ದಾರೆ.

ಇದರ ಪರಿಣಾಮ ಎಷ್ಟಿದೆಯೆಂದರೆ, ಖುದ್ದು ಪ್ರಭಾಸ್ ಕುಪಿತರಾಗಿ ನಿರ್ದೇಶಕ ಓಂ ರಾವತ್‌ಗೆ ಎಚ್ಚರಿಸಿದ್ದಾರೆ. ಈ ಚಿತ್ರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಧ್ಯಪ್ರದೇಶ ಸರಕಾರದ ಗೃಹಸಚಿವರೂ ಹೇಳಿದ್ದಾರೆ. ಒಟ್ಟಿನಲ್ಲಿ, ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಈ ಸಿನಿಮಾ, ಟೀಸರ್‌ನಲ್ಲೇ ‘ಅಂತಿಮ್ ಪುರುಷ್’ ಆಗುವ ಸಾಧ್ಯತೆಗಳಿವೆ. ಆದರೆ, ಇತ್ತೀಚೆಗೆ ಬಿಡುಗಡೆಯಾಗಿರುವ ‘ಕಾಂತಾರ’ ಕನ್ನಡ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಬೇಕು. ಈ ಚಿತ್ರ ಬರಿಯ ಮನರಂಜನೆ ಯಾಗಿ ಮಾತ್ರ ಉಳಿದಿಲ್ಲ; ನಮ್ಮ ನಾಡು-ನುಡಿ, ಸಂಸ್ಕೃತಿ, ದೈವ, ಭಕ್ತಿ, ನಂಬಿಕೆ, ಆಚರಣೆ ಇವೆಲ್ಲದರ ಹದವಾದ ಪಾಕದಲ್ಲಿ ಹೂರಣ ಮಾಡಿ ನವರಾತ್ರಿಯ ಹೋಳಿಗೆಯಾಗಿ ಕನ್ನಡ ಚಿತ್ರ ರಸಿಕರಿಗೆ ಉಣಬಡಿಸಿದ್ದಾರೆ ಪ್ರತಿಭಾವಂತ ನಟ- ನಿರ್ದೇಶಕ ರಿಷಭ್ ಶೆಟ್ಟಿ.

‘ಕಾಂತಾರ’ ಕುರಿತು ಹೇಳುವ ಮೊದಲು ತುಳು ಸಿನಿಮಾಗಳ ಬಗ್ಗೆ ಹೇಳಲೇಬೇಕು. ಒಂದು ಕಡೆ ಕನ್ನಡ ಚಿತ್ರರಂಗ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡುತ್ತಿದ್ದರೂ, ಅದರ ಕೂಸಿನಂತಿರುವ ತುಳು ಸಿನಿಮಾಗಳು ಮಲೆನಾಡು ಮಂಗಳೂರನ್ನು ಬಿಟ್ಟು ಆಚೆ ಬಂದಿದ್ದಿಲ್ಲ. ಆಗೊಂದು ಈಗೊಂದು ಪ್ರಶಸ್ತಿ ಘೋಷಣೆಯಾದಾಗ ಮಾತ್ರವೇ ತುಳು ಭಾಷೆಯ ಚಲನಚಿತ್ರವೂ ಇದೆಯೆಂಬುದು ಅರಿವಾಗುತ್ತಿತ್ತಷ್ಟೇ. ಒಂದು ರೀತಿಯಲ್ಲಿ ಅವು ಲೋಕಲ್ ಪತ್ರಿಕೆಗಳಂತೆ ಇದ್ದು ರಾಜ್ಯಮಟ್ಟದ ಪತ್ರಿಕೆಗಳ ಮುಂದೆ ಎಲೆಮರೆಯಲ್ಲಿದ್ದವು. ತುಳುವಿನಲ್ಲಿ ಅದೆಂಥ ಅದ್ಭುತ ಚಿತ್ರಗಳು ಇದ್ದರೂ ಒಟ್ಟಾರೆ ಕನ್ನಡಿಗರಿಗೆ ಅವು ‘ಪರಭಾಷಾ’ ಚಿತ್ರಗಳಂತೆಯೇ ಭಾಸವಾಗುತ್ತಿದ್ದವಲ್ಲದೆ, ಗಾಂಧಿ ನಗರದ ಪಾಲಿಗೆ ‘ಅಸ್ಪೃಶ್ಯ’ ಚಿತ್ರಗಳೂ ಆಗಿದ್ದವು ಎಂದರೆ ತಪ್ಪಾಗ ಲಾರದು.

ಇದು ತುಳು ಕಲಾವಿದರಿಗೂ ಅನ್ವಯಿಸುವ ಮಾತು. ತುಳುನಾಡಿನಿಂದ ಬಂದ ಜಯಮಾಲಾ, ಪ್ರಕಾಶ್ ರೈ ಅವರಂಥ ಕೆಲ ಕಲಾವಿದರು ಕಪ್ಪೆಚಿಪ್ಪಿನಿಂದ ಹೊರಬಂದು ಬಹು ಭಾಷಾ ಕಲಾವಿದರಾಗಿದ್ದು ಬಿಟ್ಟರೆ, ಅಲ್ಲಿನ ಪ್ರತಿಭೆಗಳು ಅಖಂಡ ಕರ್ನಾಟಕವನ್ನು ತಲುಪಿದ್ದು ಕಮ್ಮಿ ಎಂದೇ ಹೇಳಬೇಕು.

ಆದರಿಂದು, ತುಳುನಾಡಿನ ಪ್ರತಿಭಾವಂತ ‘ಆರ್‌ಆರ್‌ಆರ್’ಗಳು (ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ) ಇದ್ದಾರಲ್ಲಾ ಇವರು ತುಳು ನಾಡಿನ ಸಂಸ್ಕೃತಿ, ಪ್ರತಿಭೆ, ತಾಕತ್ತು ಏನೆಂಬುದನ್ನು ಇಡೀ ಭಾರತೀಯ ಚಿತ್ರರಂಗಕ್ಕೆ ತೋರಿಸಿಕೊಡು ತ್ತಿದ್ದಾರೆ. ಅದರ ಒಂದು ಭಾಗವೇ- ‘ಕಾಂತಾರ’. ದಕ್ಷಿಣ ಭಾರತದ ಚಿತ್ರಗಳಲ್ಲಿ ರಾವಣನಂಥ ದುಷ್ಟನ ಪಾತ್ರಕ್ಕೂ ಗೌರವಾರ್ಹ ಆಯಾಮವಿರುತ್ತದೆ; ಅಷ್ಟಿಲ್ಲದಿದ್ದರೆ ರಾವಣ, ಹಿರಣ್ಯಕಶಿಪು, ಮಹಿಷಾಸುರನಂಥ ಉಗ್ರಪಾತ್ರಗಳನ್ನು ‘ಅಣ್ಣಾವ್ರು’ ನಿರ್ವಹಿಸು ತ್ತಿದ್ದರೇ? ಹೀಗೆ ಭಾರತೀಯರ ಕಣ್ಣಿಗೆ ಕಟ್ಟಿದಂತಿರುವ ರಾವಣನಂಥ ಪಾತ್ರಗಳನ್ನು ಬಾಲಿವುಡ್ ಪ್ರಭೃತಿಗಳು ವಿಕಾರವಾಗಿ ತೋರಿಸುತ್ತಿರುವಾಗ, ಕನ್ನಡಿಗರಿಗೇ ಅಷ್ಟಾಗಿ ಅರಿವಿಲ್ಲದ, ತುಳುನಾಡಿನ ಕಾಡುಗಳಲ್ಲಿ ವಾಸಿಸುವ ಜನರ ಬದುಕು-ಬವಣೆ-ಭಾವನೆ, ಜಾನಪದ, ಸಂಸ್ಕೃತಿ, ಪದ್ಧತಿ, ಆಚರಣೆ, ನಂಬಿಕೆ ಹಾಗೂ ಮನುಷ್ಯರ ನಡುವಿನ ಸಂಬಂಧ ಇತ್ಯಾದಿಗಳನ್ನು ಅತ್ಯದ್ಭುತ ವಾಗಿ ತೋರಿಸಿರುವ ರಿಷಭ್ ಶೆಟ್ಟಿ ಅವರ ಪ್ರಯತ್ನ ನಿಜಕ್ಕೂ ಕನ್ನಡಿಗರ ಮತ್ತು ಕನ್ನಡ ಚಿತ್ರರಂಗದ ಹೆಮ್ಮೆಯೇ ಸರಿ.

ತುಳುನಾಡಿನ ಜಾನಪದದ ಕುರಿತು ಇಲ್ಲಿ ಒಂದಿಷ್ಟು ಹೇಳಲೇಬೇಕು. ಅಲ್ಲಿನವರ ನಂಬಿಕೆಯ ‘ಪಂಜುರ್ಲಿ’ (ಪಂಜಿ = ಹಂದಿ) ದೈವ ಮತ್ತು ಗುಳಿಗ ದೈವಾರಾಧನೆ ಪ್ರತಿಯೊಬ್ಬರಲ್ಲೂ ಭಯ ಭಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಅಲ್ಲಿನ ಪ್ರತಿಯೊಂದು ಮನೆ-ಮನಗಳಲ್ಲೂ ಪಂಜುರ್ಲಿ- ಗುಳಿಗ ದೈವದ ಮಹಿಮಾನ್ವಿತ ಶಕ್ತಿ ಸ್ಥಾಪಿತವಾಗಿದೆ. ನಂಬಿದವರನ್ನು ಪೊರೆಯುವ, ಅಭೀಷ್ಟ ಗಳನ್ನು ಪೂರೈಸುವ ಪಂಜುರ್ಲಿ ದೈವಕ್ಕೆ ಅಲ್ಲಿ ಅಪಾರ ಗೌರವವಿದೆ. ಕುಟುಂಬದ ಮುಖ್ಯಸ್ಥನ ಸ್ಥಾನವನ್ನು ಪಂಜುರ್ಲಿ ದೈವಕ್ಕೆ ನೀಡಿ, ಮನೆಯ ಚಾವಡಿಯಲ್ಲಿ ಅಥವಾ ಮನೆಯೊಳಗೆ ಮನೆಮಂಚ (ಪೀಠ)ವನ್ನು ಮಾಡಿ ಪೂಜಿಸಲಾಗುತ್ತದೆ.

ಗುಳಿಗ ದೈವ ರೋಷಾವೇಶದ ದೈವವಾಗಿದ್ದು ಗುಡ್ಡಗಳಲ್ಲಿ ಕಲ್ಲಿನ ರೂಪದಲ್ಲಿ ಅದನ್ನು ಆರಾಧಿಸಲಾಗುತ್ತದೆ. ಭಕ್ತರನ್ನು ಪಂಜುರ್ಲಿ ದೈವ ರಕ್ಷಣೆ ಮಾಡಿದರೆ, ಗುಳಿಗ ಕ್ಷೇತ್ರಪಾಲಕನಾಗಿ ಪ್ರದೇಶವನ್ನು ಕಾಪಾಡುತ್ತಾನೆ ಎಂಬ ನಂಬಿಕೆಯಿದೆ. ತುಳುನಾಡಿನ ರಾಜನೊಬ್ಬ ವ್ಯವಸಾಯಕ್ಕೆ ಕಂಟಕವಾಗಿದ್ದ ಕಾಡುಹಂದಿಯನ್ನು ಬೇಟೆಯಾಡಿ ಕೊಲ್ಲುತ್ತಾನೆ. ದೈವೀ ರೂಪದ ವರಾಹವನ್ನು ಕೊಂದಬಳಿಕ ಅದು ‘ಪಂಜುರ್ಲಿ’ ದೈವವಾಯಿತೆಂಬ ಕಥೆಗಳಿವೆ. ಹೀಗೆ ದೈವಸಂಭೂತ ಪಂಜುರ್ಲಿ ಗ್ರಾಮದಲ್ಲಿ ಭಯಭಕ್ತಿಯ ಪ್ರತೀಕವಾಗುತ್ತದೆ.

ಇಂಥ ಪಂಜುರ್ಲಿ ದೈವವು ಧರ್ಮಸ್ಥಳದಲ್ಲಿ ಅಣ್ಣಪ್ಪ ಸ್ವಾಮಿಯಾಗಿ, ಬೇರೆ ಬೇರೆ ಕ್ಷೇತಗಳಲ್ಲಿ ವಿವಿಧ ರೂಪಗಳಲ್ಲಿ ಆರಾಧಿಸಲ್ಪಡುತ್ತದೆ. ಕುಟುಂಬದೊಳಗಿನ ವ್ಯಾಜ್ಯಗಳಾಗಲಿ, ನ್ಯಾಯಾಲಯದಲ್ಲಿ ಬಗೆಹರಿಯದ ಸಮಸ್ಯೆಗಳಾಗಲಿ ಪಂಜುರ್ಲಿ ದೈವಕ್ಕೆ ಮೊರೆ ಹೋದಾಗ ಬಗೆಹರಿದ ಸಾವಿರಾರು ಉದಾಹರಣೆಗಳಿವೆ. ಇನ್ನು ಪ್ರಧಾನದೈವ ಗುಳಿಗ ಕ್ಷುದ್ರ ದೈವವಾಗಿದ್ದು, ಮಗು ತಾಯಿಯ ಹೊಟ್ಟೆಯಿಂದ ಸಹಜವಾಗಿ ಜನಿಸಿದರೆ, ಗುಳಿಗ ದೈವ ಮಾತ್ರ ಹೊಟ್ಟೆಯನ್ನೇ ಬಗೆದು ಹೊರಬಂದಿತೆಂಬ ಕಥೆಗಳಿವೆ.

ಗುಳಿಗ ಸದಾ ಹಸಿವಿನಿಂದ ಕೂಡಿದ್ದು, ಇದಕ್ಕೆ ಕೋಳಿಯನ್ನು ಬಲಿಕೊಡುವ ಸಂಪ್ರದಾಯವಿದೆ. ಗುಡ್ಡ ಪ್ರದೇಶ ಅಥವಾ ಮನೆ ಯಂಗಳದಲ್ಲಿ ಕಲ್ಲು ಪ್ರತಿಷ್ಠಾಪನೆ ಮಾಡಿ ಗುಳಿಗ ದೈವವನ್ನು ಆರಾಧಿಸಲಾಗುತ್ತದೆ. ಹೀಗೆ ಪಂಜುರ್ಲಿ ದೈವನರ್ತನ ಮಾಡುವ ವ್ಯಕ್ತಿಗಳು ಪಾರಂಪರಿಕವಾಗಿ ದಲಿತರಾಗಿದ್ದು, ಅವರ ಮೇಲೆ ದೈವ ಆವಾಹನೆಯಾದಾಗ ಮೇಲು-ಕೀಳು ಎನ್ನದೆ ಎಲ್ಲ ಜಾತಿಯ ಜನರೂ ಕಾಲಿಗೆ ಬಿದ್ದು ಶರಣಾಗುವುದು ಇಲ್ಲಿನ ಸಂಪ್ರದಾಯದ ಹಿರಿಮೆ.

ಇದನ್ನೇ ‘ಕಾಂತಾರ’ ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ತಟ್ಟುವಂತೆ ತೋರಿಸಿದ್ದು, ಅದು ಕನ್ನಡ ಸಿನಿಪ್ರಿಯರಿಗೆ ಭಕ್ತಿಯ ಉನ್ಮಾದದ ಅನುಭವ ನೀಡುತ್ತಿದೆ. ಬಹುಶಃ ರಾಜಣ್ಣನವರ ‘ಭಕ್ತ ಪ್ರಹ್ಲಾದ’ ಚಿತ್ರದ ಕ್ಲೈಮ್ಯಾಕ್ಸ್ ನಂತರ ಭಕ್ತಿಯ ಪರಾಕಾಷ್ಠೆ, ರೋಮಾಂಚನವನ್ನು ಪರಿಣಾಮಕಾರಿ ಯಾಗಿ ಕಟ್ಟಿಕೊಟ್ಟಿರುವ ಚಿತ್ರ ‘ಕಾಂತಾರ’ವೇ ಇರಬೇಕು. ಟಿಪಿಕಲ್ ‘ಸ್ಟಾರ್’ ಸಿನಿಮಾ ಗಳ ಸೂತ್ರದಂತೆ ನಾಯಕನನ್ನು ಬಾಲಿಶ ಸಾಹಸಗಳಿಂದ ವೈಭವೀಕರಿಸದೆ, ನಾಯಕಿಯನ್ನೂ ಗ್ಲಾಮರಸ್ ಆಗಿ ಬಿಂಬಿಸದೆ, ಕಥೆಯ ಕಾಲಘಟ್ಟಕ್ಕೆ ಅನುಗುಣವಾಗಿ ಪಾತ್ರಗಳನ್ನು ರೂಪಿಸಿರುವುದರಲ್ಲಿ ನಿರ್ದೇಶಕರ ನೈಪುಣ್ಯ ಎದ್ದು ಕಾಣುತ್ತದೆ.

ಜತೆಗೆ ಅರವಿಂದ ಕಶ್ಯಪ್ ಛಾಯಾಗ್ರಹಣ, ಪ್ರಕಾಶ್-ಪ್ರತೀಕ್ ಶೆಟ್ಟಿಯವರ ಸಂಕಲನ, ಅಜನೀಶ್‌ರ ಹಿನ್ನೆಲೆ ಸಂಗೀತ ಹೀಗೆ ಎಲ್ಲ ವಿಭಾಗಗಳೂ ತಾಳಮೇಳೈಸಿ ಉತ್ಕೃಷ್ಟ ಉತ್ಪನ್ನ ಹೊರಹೊಮ್ಮಿದೆ. ಪ್ರತಿಯೊಂದು ಪಾತ್ರಕ್ಕೂ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಪ್ರಸ್ತುತಿಯನ್ನು ನೈಜವಾಗಿಸಲಾಗಿದೆ. ಅಭಿನಯದಲ್ಲೂ ಸೈ ಎನಿಸಿಕೊಂಡಿರುವ ರಿಷಭ್ ಶೆಟ್ಟಿ ಚಿತ್ರಕಥೆಯಲ್ಲಿ ಅದೆಷ್ಟು ಎಚ್ಚರಿಕೆ ವಹಿಸಿ ಬದ್ಧತೆ ತೋರಿದ್ದಾರೆಂದರೆ, ಕಥೆಯಲ್ಲಿ ಅಂತಿಮವಾಗಿ ಸರಕಾರದ ಕ್ರಮಗಳನ್ನೂ ಸಕಾರಾತ್ಮಕವಾಗಿ ಹೇಳಿದ್ದಾರೆ.

ಒಟ್ಟಾರೆ ಹಿಂದೂಧರ್ಮದ ಒಂದು ಜನಾಂಗದ ಸಂಸ್ಕೃತಿಯನ್ನು ಹೆಮ್ಮೆಪಡುವಂತೆ ತೋರಿಸಿ ಗೆದ್ದಿರುವುದು ಮಂಗಳೂರು ಕನ್ನಡಿಗರ ಹೆಮ್ಮೆ. 1987ರಲ್ಲೇ, ಕರಾವಳಿಯ ಬೆಸ್ತ ಸಮುದಾಯದವರ ಇಂಥದ್ದೇ ಕಥಾಹಂದರವನ್ನಿಟ್ಟುಕೊಂಡು ಡಾ. ರಾಜ್‌ರಂಥ ಮೇರುನಟರ ಅಭಿನಯದಲ್ಲಿ ಮಿಂಚಿನ ಪ್ರತಿಭೆ ಶಂಕರ್‌ನಾಗ್ ಅವರು ತಮ್ಮ 33ನೇ ವಯಸ್ಸಿಗೇ ‘ಒಂದು ಮುತ್ತಿನ ಕಥೆ’ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಅಣ್ಣಾವ್ರು ಅತೀವ ಹಿಂಸೆಗೆ ಒಳಗಾಗುವ ದೃಶ್ಯಗಳನ್ನು ಒಳಗೊಂಡಿದ್ದ ರಿಂದಲೋ ಏನೋ ಈ ಚಿತ್ರ ನಿರೀಕ್ಷಿತ ಸಾಧನೆ ಮಾಡಲಿಲ್ಲ.

ರಿಷಭ್ ಶೆಟ್ಟರಿಗೆ ಬರುತ್ತಿರುವ ಹೊಗಳಿಕೆಗಳ ಮಧ್ಯೆ ಕೆಲ ಅತೃಪ್ತ ಆತ್ಮಗಳ ಅಸಮಾಧಾನಗಳೂ ಹೊರಹೊಮ್ಮಿವೆ. ಪಂಜುರ್ಲಿ ಪಾತ್ರವನ್ನು ನಿಗದಿತ ಜಾತಿ ಹೊರತುಪಡಿಸಿ ಅನ್ಯಜಾತಿಗಳವರು ಮಾಡುವಂತಿಲ್ಲ ಎಂಬುದು ಅವುಗಳಲ್ಲೊಂದು. ಪಾತ್ರಗಳಿಗೂ ಜಾತಿಯನ್ನು ಅರ್ಹತೆಯ ಮಾನ ದಂಡವಾಗಿಸುವ ಪ್ರಯತ್ನಗಳಾಗುತ್ತಿವೆ. ಹಾಗೆ ನೋಡಿದರೆ ರಾಜಣ್ಣನವರು ‘ಮಂತ್ರಾಲಯ ಮಹಾತ್ಮೆ’ ಚಿತ್ರದಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರವಲ್ಲದೆ ಅನೇಕ ದೈವಪಾತ್ರಗಳನ್ನು ನಿರ್ವಹಿಸುವಾಗ ಆ ದಿನಗಳಲ್ಲಿ ವ್ರತನೇಮಗಳನ್ನು ಪಾಲಿಸಿ, ಆಹಾರ ಪದ್ಧತಿಗಳನ್ನು ಬದಲಿಸಿಕೊಂಡು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದರು.

ಹಾಗೆಯೇ ರಿಷಭ್ ಶೆಟ್ಟಿಯವರೂ ‘ಕಾಂತಾರ’ ಚಿತ್ರದಲ್ಲಿನ ದೈವದ ಪಾತ್ರಕ್ಕೆ ಬೇಕಾದ ಸಿದ್ಧತೆಯಲ್ಲಿ ವಾರಗಳ ಕಾಲ ಸಸ್ಯಾಹಾರಿಯಾಗಿ, ಬರಿಗಾಲಿನಲ್ಲಿ ವ್ರತನೇಮ ಆಚರಿಸಿ, ಭಯಭಕ್ತಿಯಿಂದ ಅಭಿನಯಿಸಿರುವುದಾಗಿ ತಿಳಿದುಬಂದಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಯೋಗ್ಯ ಕಥೆ-ಚಿತ್ರಕಥೆ, ನಿರ್ದೇಶಕರ ತಾಕತ್ತನ್ನು ‘ಮೌಲ್ಯಮಾಪನ’ ಮಾಡಿ ಸ್ಪಷ್ಟಹೆಜ್ಜೆ ಇಡುತ್ತಿರುವುದರಿಂದಲೇ ಅವರು ಮುಟ್ಟಿದ್ದೆಲ್ಲ ಚಿನ್ನವಾ ಗುತ್ತಿದೆ.

ಇನ್ನು ಭಾಷೆಗಳ ವಿಚಾರವನ್ನೂ ಎತ್ತಿಕೊಂಡು ‘ಶೆಟ್ಟರ ಗ್ಯಾಂಗು’ ಎಂದು ಕೆಲ ಅವಿವೇಕಿಗಳು ಕೊಂಕು ತೆಗೆದಿದ್ದಾರೆ. ಕರ್ನಾ ಟಕದಲ್ಲಿ ಪ್ರತಿ 100 ಮೈಲುಗಳಿಗೆ ಸ್ಥಳೀಯ ಭಾಷೆ, ಪದಗಳು, ಸಂಸ್ಕೃತಿ, ಬದಲಾಗುವ ಜೀವನಶೈಲಿಗಳಿರುವ ವೈವಿಧ್ಯ ಮಯ ಸಂಸ್ಕೃತಿ ನಮ್ಮದು. ಗಂಡುಭೂಮಿ ಉತ್ತರ ಕರ್ನಾಟಕದ ಶೈಲಿ ಒಂದಾದರೆ, ಕರಾವಳಿ, ಮಲೆನಾಡು, ಹಳೇ ಮೈಸೂರು ಭಾಗದ್ದು ಮತ್ತೊಂದು ತೆರನಾದ ಶೈಲಿ.

ಹಾಗೆಯೇ ಕೊಡವ, ಕೊಂಕಣಿ, ತುಳುನಾಡಿನ ಪರಂಪರೆಯೂ. ನಾಡಿನ ಸಾಂಸ್ಕೃತಿಕ ಪರಂಪರೆಯ ಒಂದು ಭಾಗವಾಗಿರುವ ಇಂಥ ಚಿತ್ರಗಳ ಪರವಾಗಿ ಹಿಂದೂಪರ ಸಂಘಟನೆಗಳು ಪ್ರಚಾರಕ್ಕೆ ನಿಲ್ಲಬೇಕಿದೆ. ಬನ್ನಿ, ಬಾಲ್ಕನಿ 120 ರುಪಾಯಿ, ಸೆಕೆಂಡ್ ಕ್ಲಾಸ್ 100 ರುಪಾಯಿ ಮಾತ್ರ! ಪೈರಸಿ, ಓಸಿ ಪ್ರತಿಗಳಿಗಾಗಿ ಕಾಯದೆ ‘ಕಾಂತಾರ’ ಚಿತ್ರವನ್ನು ಚಿತ್ರಮಂದಿರ ಗಳಲ್ಲೇ ಕಣ್ತುಂಬಿಕೊಳ್ಳೋಣ. ತನ್ಮೂಲಕ, ಈ ದೇಶದ ಸಂಸ್ಕೃತಿ-ಪರಂಪರೆ ಯನ್ನು ಗೌರವಿಸಿರುವ ಪ್ರತಿಭಾವಂತರ ತಂಡವನ್ನು ಪ್ರೋತ್ಸಾಹಿಸಿ ಬೆಳೆಸೋಣ, ಅವರಿಂದ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಿಸೋಣ!