Wednesday, 11th December 2024

ಆಧುನಿಕ ಭಾರತ ಮತ್ತು ಪುರಾತನ ಜಲ ಸಂಕಷ್ಟ

ಸುಪ್ತ ಸಾಗರ

rkbhadti@gmail.com

ಈ ಸಮಸ್ಯೆಗೆ ಕೇವಲ ಒಂದೇ ಪರಿಹಾರ ಮಂತ್ರ ಸಾಧ್ಯವಿಲ್ಲ. ಆದರೆ, ಒಂದು ಚೇತರಿಕೆಯಮಾರ್ಗದ ವಿಶಾಲ ರೂಪು ರೇಖೆಯು ಸ್ಪಷ್ಟವಿದ್ದಂತೆ ಕಾಣಿಸುತ್ತಿದೆ. ಮೊಟ್ಟ ಮೊದಲಾಗಿ ರಾಜ್ಯ ಸಂಸ್ಥೆಗಳು ಮತ್ತು ನೀರಿನ ಬಳಕೆದಾರರು ಒಟ್ಟಾಗಿ ಜಲ ವಾಪಸಾತಿಗಳನ್ನು (aquifer withdrawal) ಪುನರ್‌ಭರ್ತಿ ಮಾಡುವೆಡೆಗೆ ಕೆಲಸ ಮಾಡಬೇಕು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ, ಅಧಿಕೃತ ಮತ್ತು ಅನಧಿಕೃತ ವರದಿಗಳು ಇಂದಿನ ದಿನಗಳಲ್ಲಿ ಕಾಸಿಗೊಂದು ಕೊಸರಿಗೊಂದು ಎಂಬಂತೆ ಬರುತ್ತಿವೆ. ನಿಮಗೇನಾದರೂ ಸಮಯವಿದ್ದಲ್ಲಿ ‘India’s Water economy; Bracing for turbulent Future’ ಎಂಬ ವರದಿಯನ್ನು ಓದಿ ನೋಡಿ. ಇದನ್ನು ವಿಶ್ವಬ್ಯಾಂಕಿನ ಹಿರಿಯ ಸಲಹೆಗಾರ (ಜಲ ಸಂಪನ್ಮೂಲ) ಜನ್‌ಬೃಸ್ಕೋ ಅವರ ನೇತೃತ್ವದಲ್ಲಿ ಅವರ ತಂಡದಿಂದ ಹನ್ನೆರಡಕ್ಕೂ ಮಿಕ್ಕು ಭಾರತೀಯ ವಿದ್ವಾಂಸ ರಾದ ರಮೇಶ್ ಭಾಟಿಯಾ, ಜರ್ಜ್ ವರ್ಗೀಸ್, ತುಷಾರ್‌ಶಾಹ್, ಸೆಬಾಸ್ಟಿಯನ್ ಮೋರಿಸ್, ನಿರ್ಮಲ್‌ ಮೊಹಂತಿ ಮುಂತಾದವರ ಸಂಶೋಧನಾ ಲೇಖಗಳ ಆಧಾರದ ಮೇಲೆ ಬರೆಯಲಾಗಿದೆ.

ವಿಶ್ವ ಬ್ಯಾಂಕ್‌ನ ವೆಬ್‌ಸೈಟನ್ನು ಯಾವುದಕ್ಕಾಗಿಯೋ ತಡಕಾಡುತ್ತಿದ್ದಾಗ ಇದು ನನ್ನ ಕಣ್ಣಿಗೆ ಬಿತ್ತು. ವಾರದ ಬರವಣಿಗೆ ಅನಿವಾರ್ಯಕ್ಕಾಗಿ ಹಲವು ವಿಷಯಗಳು ಡೈರಿಯಲ್ಲಿ ನೋಟಾಗಿದ್ದರೂ ಈ ವಾರ ಇದನ್ನೇ ಆರಿಸಿಕೊಂಡಿದ್ದಕ್ಕೂ ಕಾರಣವಿದೆ. ವಿಶ್ವಬ್ಯಾಂಕ್‌ನ ಈ ವರದಿ ಯಲ್ಲಿ ಅಪರಿಮಿತ ಮಾಹಿತಿಗಳ ರಾಶಿಯೇ ಇದೆ. ಸಾಕಷ್ಟು ಅಧ್ಯಯನದ ಜೊತೆಗೆ ಅತ್ಯಂತ ಸರಳವಾಗಿ ಓದುಗರಿಗೆ ಅರ್ಥವಾಗುವಂತೆ ನಿರೂಪಿಸಲಾಗಿದೆ.

ಎಲ್ಲಕ್ಕಿಂತ ಮಿಗಿಲಾಗಿ ನಮ್ಮೆಲ್ಲರ ಅಗತ್ಯಗಳಲ್ಲಿ ಒಂದಾದ, ಆಧುನಿಕ ಯುಗದ ಸವಾಲುಗಳಲ್ಲೂ ಒಂದಾದ ನೀರಿನ
ಕುರಿತಾದ ವರದಿಯಿದು. ಮುಂಬರುವ ದಿನಗಳಲ್ಲಿ ನಮ್ಮ ಸಾಮೂಹಿಕ ಅವಗಣನೆಗೊಳಗಾಗಿ, ಭಾರತೀಯ ಸನ್ನಿವೇಶ ದಲ್ಲಂತೂ ಹಾಹಾಕಾರವೇಳುವ ಪ್ರಮೇಯ ಎದುರಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಈ ವರದಿ ಇನ್ನೂ ಹೆಚ್ಚು ಪ್ರಸ್ತುತವೆನಿಸುತ್ತದೆ.

ನಮ್ಮ ದೇಶದಲ್ಲಿ ಎಂದಿನಿಂದಲೂ ಜಲನಿರ್ವಹಣೆಯೆಂಬುದು ದೊಡ್ಡ ಸವಾಲೇ ಸರಿ. ಕಾಲೋಚಿತವಾಗಿ ಬೀಳುತ್ತಿದ್ದರೂ ಆಗುವ ಅರ್ಧದಷ್ಟು ಮಳೆ ಕೇವಲ ಹದಿನೈದು ಇಪ್ಪತ್ತು ದಿನಗಳಲ್ಲಿ ಸುರಿದು ಬಿಡುತ್ತದೆ. ಈ ವರ್ಷ ನಮ್ಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೊನ್ನೆಮೊನ್ನೆ ಕಾಡಿದ ಪ್ರವಾಹ ಪರಿಸ್ಥಿತಿಯನ್ನು ಗಮನಿಸಿದರೆ ಅರ್ಥವಾದೀತು. ಈ ಕಾರಣದಿಂದ ಶೇಕಡಾ ತೊಂಬತ್ತರಷ್ಟು ನದಿಗಳು ವರ್ಷದಲ್ಲಿ ಕೇವಲ ನಾಲ್ಕೇ ತಿಂಗಳು ಹರಿಯುತ್ತವೆ. ಈ ಪರಿಸ್ಥಿತಿಯಲ್ಲಿ ಬಿದ್ದ ಮಳೆಯನ್ನು ಹಿಡಿ ದಿಟ್ಟುಕೊಳ್ಳು ‘ಜಲ ಸಂಗ್ರಹಣಾ ವ್ಯವಸ್ಥೆ’, ಅದರ ನಿಯಂತ್ರಿತ ಪೂರೈಕೆಯ ಮೇಲೆ ಸಾವಿರಾರು ಕೋಟಿ ರು. ಯೋಜನೆ ಅನಿವಾರ್ಯವಾಗುತ್ತದೆ.

ಕಳೆದ ಶತಮಾನದಲ್ಲಿ ಬ್ರಿಟಿಷ್ ಮತ್ತು ಭಾರತೀಯ ಎಂಜಿನಿಯರುಗಳು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರೈಸಿದ್ದಾರೆ. ಒಂದೊಮ್ಮೆ ಒಣಪ್ರದೇಶವಾಗಿದ್ದ ಭಾರತದ ಪಶ್ಚಿಮೋತ್ತರ ಭಾಗಗಳಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಇದು ಸಾಕಷ್ಟು ತೀವ್ರ ಸುಧಾರಣೆಗಳನ್ನು ತಂದಿದೆ. ಆಹಾರ ಭದ್ರತೆ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ, ಅಭಿವೃದ್ಧಿಗಾಗಿ ನಡೆದ ಈ
ಹೂಡಿಕೆಗಳು ಮುಂಚೂಣಿಯಲ್ಲಿದ್ದವು. ಗ್ರಾಮೀಣಾಭಿವೃದ್ಧಿಯ ಜತೆಗೆ ಕೃಷಿಕನ ಬಡತನ ನಿರ್ಮೂಲನೆಯಲ್ಲೂ ಇವು ನಿರ್ಣಾಯಕ ಪಾತ್ರ ವಹಿಸಿದ್ದವು. ನೀರಾವರಿ ಭೂಮಿಯಲ್ಲಿ ಅಗಾಧ ಪ್ರಮಾಣದಲ್ಲಿ ರೈತ ಕಾರ್ಮಿಕರಿಗೆ ಬೇಡಿಕೆ ಯುಂಟಾದದ್ದರಿಂದ ಇದು ಸಾಧ್ಯವಾಗಿತ್ತು.

ಇವೆಲ್ಲದರ ನಡುವೆಯೂ ಭಾರತದ ಅಣೆಕಟ್ಟುಗಳು ಪ್ರತಿ ವ್ಯಕ್ತಿಗೆ ಕೇವಲ 200 ಕ್ಯೂಬಿಕ್ ಮೀಟರ್‌ಗಳಷ್ಟು ನೀರನ್ನು ಮಾತ್ರ ಸಂಗ್ರಹಿಸಲು ಶಕ್ಯವಾಗಿವೆ. ಚೈನಾ, ಮೆಕ್ಸಿಕೋ, ದಕ್ಷಿಣ ಆಫ್ರಿಕಾದಲ್ಲಿ ಇದು 1000 ಕ್ಯೂಬಿಕ್ ಮೀಟರ್‌ಗಳಷ್ಟಿದೆ. ಮುಂಬರುವ ದಿನಗಳಲ್ಲಿ ಜಗತಿಕ ಹವಾಮಾನ ಬದಲಾವಣೆಯ ಸಾಧ್ಯತೆಗಳಿಂದ ನಮ್ಮ ಸಂಗ್ರಹಣಾ ಮಟ್ಟ ಜಸ್ತಿಯಾಗಲೇ ಬೇಕು. ಹಿಮನದಿ ಗಳಿಂದ ಬರುವ ನೀರನ್ನು ನಿರ್ವಹಿಸಲೂ, ಬದಲಾಗುವ ಋತು ವೈಪರೀತ್ಯಗಳನ್ನು ನಿಭಾಯಿಸಲೂ ಇವು ಅತ್ಯಗತ್ಯ.

1990ರಲ್ಲಿ ವಿಶ್ವ ಬ್ಯಾಂಕು (ಕೆಲ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸುಧಾರಣಾ ವಿರೋಧಿ ಒಕ್ಕೂಟಗಳ ಕುಮ್ಮಕ್ಕಿ ನೊಡನೆ) ದೊಡ್ಡ ದೊಡ್ಡ ಅಣೆಕಟ್ಟುಗಳ ನಿರ್ಮಿತಿಯನ್ನು ವಿರೋಧಿಸಿದಾಗ್ಯೂ, ವಿಶ್ವ ಬ್ಯಾಂಕ್ ಅಣೆಕಟ್ಟು, ಜಲಾಶಯಗಳ ನಿರ್ಮಿತಿಗಾಗಿ ಕರೆ ನೀಡಿ ಸಂದೇಶ ನೀಡಿದ್ದು ಗಮನಾರ್ಹ. 1970ರವರೆಗೆ ಸೃಷ್ಟಿಸಲಾದ ಎಲ್ಲ ನೀರಾವರಿ ಯೋಜನೆಗಳು ನಿರ್ಮಾಣ ಹಾಗೂ ನಿರ್ವಹಣೆ ದೃಷ್ಟಿಯಿಂದ ಅತ್ಯಂತ ಕೆಟ್ಟದಾಗಿರುವುದು ಎರಡನೇ ಪ್ರಮುಖ ಸಮಸ್ಯೆ.

ಏನೇನೋ ಕಾರಣಗಳಿಂದಾಗಿ ನಿರ್ವಹಣಾ ವ್ಯವಸ್ಥೆ, ಸಾರ್ವಜನಿಕ ನೀರು ವಿತರಣಾ ವ್ಯವಸ್ಥೆ 1960ರಿಂದೀಚೆಗೆ ಒಂದೇ ಸಮನೆ, ಹಂತ ಹಂತವಾಗಿ ಕುಸಿದಿದೆ. ಬಳಕೆದಾರರಿಗೆ ವಿಧಿಸಲಾಗುವ ಅತಿ ಕಡಿಮೆ ಶುಲ್ಕ, ಸಂಬಂಧಿಸಿದವರ ಹೊಣೆ ಗೇಡಿತನ, ಸ್ಥಳೀಯ ಭ್ರಷ್ಟಾಚಾರ, ಹೆಚ್ಚಿನ ಸಿಬ್ಬಂದಿ ನೇಮಕದಿಂದ ಉಂಟಾದ ಹಣಕಾಸಿನ ಕೊರತೆ, ಅಧಿಕಾರಶಾಹಿ, ಪ್ರತಿಕ್ರಿಯಾಹೀನ ಆಡಳಿತ ವಿಧಾನ… ಹೀಗೆ ಅನೇಕ ರಗಳೆಗಳು. ಈ ರೀತಿಯ ವಿಳಂಬ ನೀತಿ ಮತ್ತು ಆಸ್ತಿಪಾಸ್ತಿ ಮುಳುಗಡೆಯ ಭಾರತೀಯ ಲ್ಲ ಯೋಜನೆಗಳು ‘ವಿವಿಧೋದ್ದೇಶ ಯೋಜನೆ’ ಎಂಬ ಸುಶಿಕ್ಷಿತ ಬಿರುದನ್ನು ಹೊಂದಿ ನಿಂತಿವೆ.
1960ರ ಕ್ರಾಂತಿಕಾರಿ ತಂತ್ರಜ್ಞಾನವಾದ, ‘ಕೊಳವೆ ಬಾವಿ’ ಗಳು ಬಾರದಿದ್ದಲ್ಲಿ ಈ ಗ್ರಾಮೀಣ ಮತ್ತು ನಗರ ಪ್ರದೇಶದ ಜಲ ಸಮಸ್ಯೆಗಳು ಪರಿಹರಿಸಲಾಗದ ದೊಡ್ಡ ಬಿಕ್ಕಟ್ಟುಗಳಾಗಿ ಬಿಟ್ಟಿರುತ್ತಿದ್ದವು.

ಸಾರ್ವಜನಿಕ ಜಲ ವಿತರಣೆಯ ಹದಗೆಟ್ಟ ವ್ಯವಸ್ಥೆಯು ರೈತರನ್ನೂ, ನಗರವಾಸಿಗಳನ್ನೂ ಕೊಳವೆ ಬಾವಿಯತ್ತ ದೊಡ್ಡ ಪ್ರಮಾಣದಲ್ಲಿ ಆಕರ್ಷಿತವಾಗುವಂತೆ ಮಾಡಿತು. ಇಂದು ವಿಶ್ವಬ್ಯಾಂಕ್‌ನ ಅಂದಾಜಿನ ಪ್ರಕಾರ ಭಾರತದಲ್ಲಿ ನೀರಾವರಿಯ ಶೇಕಡಾ 70, ಸಾಮಾನ್ಯ ಬಳಕೆಯ ಶೇಕಡಾ 80ರಷ್ಟು ನೀರು ಪೂರೈಕೆ ಅಂತರ್ಜಲದಿಂದಲೇ ನಡೆಯುತ್ತಿದೆ. ಆದರೆ, ಹದಗೆಟ್ಟ ಈ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಇದು ತಾತ್ಕಾಲಿಕ ಪರಿಹಾರವಷ್ಟೇ.

ಅಂತರ್ಜಲದ ಮಟ್ಟ ಇದರಿಂದ ಕುಗ್ಗುತ್ತಿದ್ದು, ಜಲ ಪೂರಣಗಳಂತೂ ಬತ್ತಿಯೇ ಹೋಗುತ್ತಿವೆ. ಅಂಕಿ ಅಂಶಗಳ ಪ್ರಕಾರ 15 ಶೇಕಡಾ ಜಲತಾಣಗಳು ನಿರ್ಣಾಯಕವಾಗಿಯೇ ಬತ್ತುತ್ತಿವೆ. ಈ ಅಂಕಿ ಅಂಶಗಳು ಕೆಲ ದಶಕಗಳಲ್ಲಿಯೇ ಶೇಕಡಾ 15ರಿಂದ ಶೇಕಡಾ 60ಕ್ಕೇರುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದರ ಪರಿಣಾಮಗಳು ಊಹಿಸಲೂ ಅಸಾಧ್ಯ. ಈ ಜಲ ಸಂಪನ್ಮೂಲ ಗಳು ವಸತಿದಟ್ಟಣೆಯಿರುವ ಸ್ಥಳಗಳಲ್ಲಿರುವುದರಿಂದ ಈ ಪರಿಣಾಮಗಳು ಭಯಂಕರ ರೂಪವನ್ನು ತಾಳುತ್ತವೆ.

ಸಾಮಾನ್ಯ ಭಾರತೀಯರ ‘ಹೇಗೋ ನಡೆಯುತ್ತದೆ’ ಎಂಬ ವಿಚಾರದ ಧಾಟಿ ಇಲ್ಲಿ ಉಪಯೋಗವಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿಷಯವಿದು. ದೇಶದಲ್ಲಿ ಅತಿಹೆಚ್ಚು ಮಳೆಬೀಳುವ ಪ್ರದೇಶ ಎಂದರೆ ಚಿರಾಪುಂಜಿ. ಬಹುತೇಕ ಎಲ್ಲ ವರ್ಷ ಇದೊಂದು ಪ್ರಶ್ನೆ ಇರುವುದು ಖಚಿತವೆನ್ನುವಷ್ಟು ಮಾಸ್ತರರು ಇದನ್ನು ಹೇಳಿರುತ್ತಾರೆ. ಗಿನ್ನೆಸ್ ದಾಖಲೆಯಲ್ಲಿ ಈ ಊರಿನ ಹೆಸರು
ಬಂದದ್ದು ಇಲ್ಲಿನ ರಚ್ಚೆ ಹಿಡಿದು ಹೊಯ್ಯುವ ಮಳೆಯಿಂದಲೇ. ಇಂಥ ದಾಖಲೆ ಏನೆಂದರೆ, ಆಗಸ್ಟ್ 1880 ರಿಂದ ಜುಲೈ 1881ರವರೆಗೆ ಇಲ್ಲಿ ಸುರಿದ ಮಳೆಯದ್ದು.

ಈ ಅವಧಿಯಲ್ಲಿ ೨೨೯೮೨ ಮಿ.ಮೀ. ಮಳೆ ಬಿದ್ದಿತ್ತು. ಜಗತ್ತಿನಲ್ಲಿ ಈವರೆಗೆ ಒಂದೇ ಪ್ರದೇಶದಲ್ಲಿ ಇಷ್ಟು ಮಳೆ ಸುರಿದೇ ಇಲ್ಲ. ಇನ್ನೂ ವಿಶೇಷವೆಂದರೆ ೧೯೭೪ರಲ್ಲಿ ಒಂದೇ ದಿನ ೨೪೫೫ ಮಿ.ಮೀ ಮಳೆ ಸುರಿದ ದಾಖಲೆಯೂ ಚಿರಾಪುಂಜಿಯ ತೆಕ್ಕೆಯಲ್ಲಿದೆ. ಇಂಥಾ ಚಿರಾಪುಂಜಿಗೆ ಚಿರಾಪುಂಜಿ ಇಂದು ಕುಡಿಯುವ ನೀರಿನ ದಾಹಕ್ಕೆ ತುತ್ತಾಗಿದೆ ಎಂದರೆ ನೀವು ನಂಬ
ಬೇಕು. ಹೌದು, ನೀವು ಊಹಿಸಿದಂತೆ ಅಲ್ಲಿ ಸುರಿಯುತ್ತಿದ್ದ ಮಳೆ ಅಲ್ಲಿಂದ ಕಾಲ್ತೆಗೆದಿದೆ. ಸರಾಸರಿಗಿಂತ ಶೇ. ೩೫ರಷ್ಟು ಮಳೆ ಕಡಿಮೆ ಆಗಿದೆ. ಗುವಾಹಟಿಯ ಪ್ರಾದೇಶಿಕ ಹವಾಮಾನ ಕೇಂದ್ರದ ದಾಖಲೆಗಳೇ ಇದನ್ನು ಸಾರುತ್ತಿವೆ. ಕಳೆದೆರಡು ದಶಕಗಳಲ್ಲಿ ಚಿರಾಪುಂಜಿಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ ೧೧,೦೭೦ ಮಿ.ಮೀ. ೨೦೦೬ರ ಅಂಕಿ ಅಂಶಗಳ ಪ್ರಕಾರ ಆ ವರ್ಷ ಬಿದ್ದ ಮಳೆ ಕೇವಲ ೮,೭೩೦ ಮಿ.ಮೀ. ೭೦,೦೦೦ ಜನಸಂಖ್ಯೆಯಿರುವ ಮಳೆಯ ತವರಲ್ಲಿ ಬೇಸಿಗೆಯಲ್ಲಿ ಕುಡಿಯಲೇ ನೀರಿರುವುದಿಲ್ಲ.

ಮನೆಗಳಲ್ಲಿ ಹೆಂಗಸರು ಮೈಲುಗಟ್ಟಲೆ ಕೊಡ ಹಿಡಿದು ತಿರುಗಬೇಕಾದ ಸ್ಥಿತಿ ಇದೆ. ಇಷ್ಟಕ್ಕೆಲ್ಲ ಕಾರಣ ಎಂದಿನಂತೆ ನಮ್ಮ ನಿರ್ಲಕ್ಷ್ಯ. ದಟ್ಟ ಕಾನನದಿಂದ ಆವೃತ್ತವಾಗಿದ್ದ ಚಿರಾಪುಂಜಿಯ ಬೆಟ್ಟಗಳು ಈಗ ಬೋಳಾಗಿವೆ. ಎಲ್ಲೆ ಮೀರಿ ಕಾಡನ್ನು ಕಡಿದಿದ್ದರಿಂದ ಹಲವು ಅಪರೂಪದ, ಅತ್ಯಂತ ಪುರಾತನ ಮರಗಳು ಕಣ್ಮರೆಯಾಗಿವೆ. ಹೀಗಾಗಿ ಮಳೆಯ ಪ್ರಮಾಣವೂ
ಕುಸಿದಿದೆ. ಮಾತ್ರವಲ್ಲ ಬೀಳುವ ಮಳೆಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನೂ ಅಲ್ಲಿನ ಬೆಟ್ಟ ಗುಡ್ಡಗಳು ಕಳಕೊಂಡಿವೆ. ವರ್ಷಾವಽ ಸುರಿಯುವ ಮಳೆಯ ರಭಸ ತಗ್ಗಿಸಲು ಮತ್ತು ಬಿದ್ದ ಮಳೆ ನೀರನ್ನು ಇಂಗಿಸಲು ದಟ್ಟ ಕಾನನ ನೆರವಾಗುತ್ತಿತ್ತು. ಆದರಿಂದು ಕಾಡೇ ಇಲ್ಲವಾಗಿ ತೊರೆಗಳು ಜನವರಿ, ಫೆಬ್ರವರಿಯಲ್ಲೇ ಬತ್ತುತ್ತಿವೆ.

ಹೀಗಾಗಿ ಬಿದ್ದ ಮಳೆಯಲ್ಲ ಕೆಳಗಿಳಿದು, ಗಡಿಯಲ್ಲಿ ನುಸುಳಿ ನೆರೆಯ ಬಾಂಗ್ಲಾಕ್ಕೆ ಸೇರುತ್ತಿದೆ. ನಿಜವಾದ ನುಸುಳುಕೋರ ಸಮಸ್ಯೆ ಸೃಷ್ಟಿಸಿಕೊಂಡದ್ದು ನಾವೇ ಅಲ್ಲವೇ? ನೀರಿನ ಕೊರತೆಯಿಂದ ಕೃಷಿ ಕಳೆದು ಹೋಗುತ್ತಿದೆ. ರೈತರು ಕಲ್ಲು ಕ್ವಾರಿಗಳಲ್ಲಿ ಕೂಲಿಗೆ ನಿಂತಿದ್ದಾರೆ. ಬದುಕು ದುಸ್ತರವಾಗುತ್ತಿದೆ. ವರ್ಷಕಾಲ ಚಿಲ್ಲನೆ ಚಿಮ್ಮುತ್ತಿದ್ದ ನೀರಿನ ಒರತೆಗಳು ಇಲ್ಲವಾದ ಮೇಲೆ ಇದರಿಂದ ಬಂದ ‘ಚಿರಾಪುಂಜಿ’ ಎಂಬ ಹೆಸರನ್ನಿಟ್ಟುಕೊಂಡು ಮಾಡುವುದೇನಿದೆ ಎಂಬ ತೀರ್ಮಾನಕ್ಕೆ ಬಂದ ಜನ ತಮ್ಮೂರನ್ನು ಮೊದಲಿನ ‘ಸೊಹಾರ್’ ಎಂದೇ ಕರೆಯಲಾರಂಭಿಸಿದ್ದಾರೆ.

ಇದ್ದ ಭಾಗ್ಯವನ್ನು ಕಳಕೊಂಡ ಜನ ಹಲುಬಲಾರಂಭಿಸಿದ್ದಕ್ಕೆ ಯಾರು ಹೊಣೆ? ಇದಕ್ಕಿಂತ ದುರಂತ ಮನುಕುಲಕ್ಕೆ ಇನ್ನೇನಿದ್ದೀತು? ನಾವೀಗ ಏನು ಮಾಡಬಹುದು? ಈ ಸಮಸ್ಯೆಗೆ ಕೇವಲ ಒಂದೇ ಪರಿಹಾರ ಮಂತ್ರ ಸಾಧ್ಯವಿಲ್ಲ. ಆದರೆ,
ಒಂದು ಚೇತರಿಕೆಯಮಾರ್ಗದ ವಿಶಾಲ ರೂಪುರೇಖೆಯು ಸ್ಪಷ್ಟವಿದ್ದಂತೆ ಕಾಣಿಸುತ್ತಿದೆ. ಮೊಟ್ಟ ಮೊದಲಾಗಿ ರಾಜ್ಯ
ಸಂಸ್ಥೆಗಳು ಮತ್ತು ನೀರಿನ ಬಳಕೆದಾರರು ಒಟ್ಟಾಗಿ ಜಲ ವಾಪಸಾತಿಗಳನ್ನು (aquifer withdrawal) ಪುನರ್ ಭರ್ತಿ ಮಾಡುವೆಡೆಗೆ ಕೆಲಸ ಮಾಡಬೇಕು. ಕೇವಲ ಹೊಸ ಕಾನೂನುಗಳನ್ನು, ನಿಯಮಗಳನ್ನು ಮಾಡುವುದು ಸಾಲದು.

ಅಂತರ್ಜಲವು ಸೀಮಿತವಾಗಿ ಲಭ್ಯವಿರುವುದರಿಂದ ಮೇಲ್ಮೈ ನೀರಿನ ವ್ಯವಸ್ಥೆಗಳ ಮೇಲೆ ಅವಲಂಬನೆ ಹೆಚ್ಚಬೇಕು. ಈಗಲೇ ಅಸ್ತಿತ್ವದಲ್ಲಿರುವ, ಆದರೆ ಸುಸ್ಥಿತಿ ಯಲ್ಲಿಲ್ಲದ ವ್ಯವಸ್ಥೆಗಳನ್ನು ಪುನಶ್ಚೇತನಗೊಳಿಸಬೇಕು. ಇದಕ್ಕಾಗಿ ಸಾರ್ವಜನಿಕ ಮೂಲ ಸೌಕರ್ಯಗಳಾದ ಹೊಸ ಅಣೆಕಟ್ಟು, ಕಾಲುವೆಗಳು, ಜಲ ವಿತರಣಾಜಾಲಗಳು, ಕೊಳಚೆ ನೀರಿನ ನಿರ್ವಹಣಾ ಘಟಕಗಳು ಇವೆಲ್ಲವುಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ನಡೆಯಬೇಕು.

ಎಲ್ಲಕ್ಕಿಂತ ಮಿಗಿಲಾದುದು ಮೂರನೆಯ ಕಾರಣ. ಕೈಗಾರಿಕೆ, ಮನೆಗಳಿಗೆ ಮತ್ತು ರೈತರಿಗೆ ನೀಡಲಾಗುತ್ತಿರುವ ಜಲ ಸಂಬಂಧಿ ಸಾರ್ವಜನಿಕ ಸೇವೆಗಳಲ್ಲಿ ಹೆಚ್ಚಿನ ಸುಧಾರಣೆಯ ಅವಶ್ಯಕತೆ ಇದೆ. ಸಹಕಾರಿ ವ್ಯವಸ್ಥೆಯಡಿಯಲ್ಲಿ ಜಲ ನಿರ್ವಹಣೆಯನ್ನು ತರಬೇಕಿದೆ. ಖಾಸಗಿ ಸ್ವಾಮ್ಯದ ಸಂಸ್ಥೆಗಳ ಮೇಲೆ ನಿಯಂತ್ರಣ ಅವಶ್ಯಕವಾಗಿದೆ. ಇವೆಲ್ಲದರ ಒಟ್ಟು ಧ್ವನಿ, ಬೆಲೆ ಹೆಚ್ಚಳವೆಂದು ನೀವು ಅರ್ಥೈಸಿದ್ದರೆ ಅದು ಸರಿ. ನೀರಿನಂತಹ ಅಮೂಲ್ಯ ಮತ್ತು ವಿರಳ ಸಂಪನ್ಮೂಲದ ನಿರ್ವಹಣೆ, ಹಣ ಮತ್ತು ಮಾರುಕಟ್ಟೆಯ ಅವಲಂಬನೆಯಿಲ್ಲದೆ ನಡೆಯಬಹುದೆಂದು ಕಲ್ಪಿಸುವುದು ಮೂರ್ಖತನವಾದೀತು.

ಸುಧಾರಣೆಯ ಹಾದಿಯಲ್ಲಿ ಮುನ್ನಡೆಯುವಾಗ ಬಡವರ ಹೆಸರಿನಲ್ಲಿ ಬದಲಾವಣೆಯನ್ನು ವಿರೋಧಿಸುವವರ ಬಗ್ಗೆ ಎಚ್ಚರಿಕೆ ಯಿಂದಿರಬೇಕು. ಎರಡು ವಿಷಯಗಳು ನೆನಪಿನಲ್ಲಿರಲಿ. ಮೊದಲನೆಯದು ಬೃಹತ್ ಸಬ್ಸಿಡಿಗಳನ್ನು ಶ್ರೀಮಂತ ರೈತರೂ, ನಗರ ವಾಸಿಗಳೂ (ಸುಧಾರಣೆಯ ವಿರೋಧಿಗಳೂ ಸೇರಿದಂತೆ) ಅನುಭವಿಸುತ್ತಿದ್ದಾರೆ. ಎರಡನೆಯದು ಬಡವರು, ಮಧ್ಯಮ ವರ್ಗದವರು ಎಂದಿನಂತೆ ನೀರಿನ ವ್ಯಾಪಾರಿಗಳಿಗೆ, ಮಧ್ಯವರ್ತಿಗಳಿಗೆ ಹಣ ವ್ಯಯಿಸುತ್ತಲೇ ಇದ್ದಾರೆ. ಇಲ್ಲವೇ ಮೈಲುಗಟ್ಟಲೆ ನೀರಿಗಾಗಿ ಅಲೆಯು ತ್ತಿದ್ದಾರೆ. ಅದಿಲ್ಲದಿದ್ದರೆ ಇಂದಿಗೂ ಬಡವರಿಗೆ ನೀರಿನ ಪೂರೈಕೆಯನ್ನು ಹೆಚ್ಚಿಸಿ, ಅವರಿಂದ ರಾಜಕೀಯ ಲಾಭಕ್ಕೆ ಹವಣಿಸುವ ‘ಸುಧಾರಣಾ ಯೋಜನೆ’ಗಳನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ೭೫ ವರ್ಷಗಳ ನಂತರವೂ ಜಾರಿಗೊಳಿಸಬೇಕಾದ ಅಗತ್ಯವಿರಲಿಲ್ಲ!