Tuesday, 10th September 2024

ಆರೋಗ್ಯಕ್ಕಾಗಿ ನೀರು- ಹೇಗೆ, ಎಷ್ಟು, ಯಾವಾಗ ?

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

ನಾವು ಆಡು ಭಾಷೆಯಲ್ಲಿ ಯಾರದ್ದಾದರೂ ಜತೆಯಲ್ಲಿ ಮಾತನಾಡುವಾಗ ಏನಾದರೂ ಸುಲಭದ ಕೆಲಸದ ಬಗ್ಗೆ ಹೇಳಬೇಕು ಅಂದರೆ ಏನಂತ ಹೇಳ್ತೀವಿ,
ಹೇಳಿ?! ಅಯ್ಯೋ, ಅದಾ, ಅದು ನೀರು ಕುಡಿದಷ್ಟು ಆರಾಮಾಗಿ ಆಯಿತು ಅಂತ. ಹಾಗಾದರೆ ನೀರು ಕುಡಿಯುವುದು ಅಷ್ಟು ಸುಲಭದ ಕೆಲಸವೇ? ಅಷ್ಟು
simple ವಿಷಯವೇ? ಖಂಡಿತ ಇಲ್ಲ. ನಿಮಗೆ ಹೇಳಿದರೆ ಆಶ್ಚರ್ಯವಾಗಬಹುದು, ನೀರು ಕುಡಿಯುವ ಹಿಂದೆ ಒಂದು ದೊಡ್ಡ ವಿಜ್ಞಾನವೇ ಇದೆ.

ಆಯುರ್ವೇದವು ನೀರಿನ ಬಗ್ಗೆ ನೂರಾರು ವಿಷಯಗಳನ್ನು ಸವಿಸ್ತಾರವಾಗಿ ಹೇಳಿದೆ. ಈ ನೂರಾರು ವಿಷಯಗಳಲ್ಲಿ ಕೆಲವನ್ನಾದರೂ ತಿಳಿದುಕೊಂಡು ಸ್ವಾಸ್ಥ್ಯದತ್ತ ಹೆಜ್ಜೆಯಿಡುವ ಪ್ರಯತ್ನ ವನ್ನು ಇಂದೇ ಆರಂಭ ಮಾಡೋಣ. ಆಯುರ್ವೇದದ ಪ್ರಕಾರ ನೀರು ಒಂದು ಆಹಾರ ದ್ರವ್ಯ. ಅಂದರೆ ಆಹಾರದ ಗುಂಪಿಗೆ ನೀರು ಸೇರುತ್ತದೆ. ಇದನ್ನು ನಾವು ದ್ರವಹಾರ ಎಂದು ಪರಿಗಣಿಸಬಹುದು. ಇದರ ಅರ್ಥವೇನೆಂದರೆ, ನೀರು ಕೂಡ ನಮ್ಮ ಜೀರ್ಣಾಂಗದಲ್ಲಿ ಜೀರ್ಣವಾಗಲೇಬೇಕು. ಜೀರ್ಣವಾಗಿಯೇ ಮುಂದೆ ಹೋಗಬೇಕು.

ಹಾಗಾಗಿ, ಇದನ್ನು ವಿವೇಚನೆಯಿಂದ ಬಳಸಬೇಕು. ಆ ವಿವೇಚನೆಯೇ ಆಯುರ್ವೇದ. ಆಯುರ್ವೇದದಲ್ಲಿ ಹೇಳಿದಂತೆ ನೀರಿನ ಗುಣ ಧರ್ಮಗಳನ್ನು
ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಸಾಮಾನ್ಯವಾಗಿ ಕುಡಿಯುವುದಕ್ಕೆ ಬಳಸುವ ನೀರಿನಲ್ಲಿ ಮೂರು ವಿಧಗಳನ್ನು ಕಾಣಬಹುದು.

೧. ಬಿಸಿನೀರು: ಬೆಂಕಿಯಿಂದ ನೇರವಾಗಿ ಕಾಯಿಸಿದ ನೀರೇ ಬಿಸಿನೀರು. ನೀರನ್ನು ಕಾಯಿಸುವುದು ಅಂದರೆ ನೀರಿನಲ್ಲಿ ಸೇರಿಕೊಂಡ ಪೃಥ್ವಿ ಮಹಾಭತ
ಹಾಗೂ ಜಲ ಮಹಾಭೂತದ ಅಣುಗಳನ್ನು ಬೇರೆ ಮಾಡಿ, ಅವುಗಳ ಸ್ಥಾನದಲ್ಲಿ ಅಗ್ನಿ ಭೂತವನ್ನು ಸೇರಿಸುವುದು. ಹಾಗಾಗಿ, ನೀರನ್ನು ಕಾಯಿಸಿದಷ್ಟು
ಸಹ ಅದು ಜೀರ್ಣಕ್ಕೆ ಲಘು. ಆಯುರ್ವೇದದ ಪ್ರಕಾರ ಹಲವಾರು ವಿಧಗಳ ಬಿಸಿನೀರನ್ನು ಕಾಣಬಹುದು. ಆದರೆ, ನಿತ್ಯೋಪಯೋಗಕ್ಕೆ ಸೂಕ್ತವಾದ
ಬಿಸಿನೀರೆಂದರೆ, ನೀರು ಚೆನ್ನಾಗಿ ಕುದ್ದು ಕಾಲು ಭಾಗಕ್ಕೆ ಇಳಿಸಲ್ಪಟ್ಟ ನೀರು. ನೊರೆ ಇಲ್ಲದ, ನಿರ್ಮಲವಾದ, ಶುಚಿಯಾಗಿರುವ ನೀರು ಉತ್ತಮವಾದ
ಬಿಸಿನೀರು. ಈ ಬಿಸಿ ನೀರನ್ನು ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಿದರೆ ಒಳಿತು. ನೀರನ್ನು ಕಾಯಿಸುವಾಗ ಮುಚ್ಚಳ ಮುಚ್ಚಬಾರದು, ಒಮ್ಮೆ
ಕುದಿಸಿ ಸಂಪೂರ್ಣ ತಣ್ಣಗಾದ ನಂತರ ಮತ್ತೆ ಕಾಯಿಸುವುದು ತಪ್ಪು. ಇದು ಅಮ್ಲಪಿತ್ತ ಮುಂತಾದ ರೋಗಗಳನ್ನು ಉಂಟುಮಾಡುತ್ತದೆ.

ರಾತ್ರಿ ಕಾಯಿಸಿ ಇಟ್ಟ ನೀರನ್ನು ಬೆಳಗ್ಗೆ ಉಪಯೋಗಿಸಬಾರದು. ಈ ನೀರು ಮೂರು ದೋಷಗಳನ್ನು ಕೆಡಿಸುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಕುದಿಸಿದ
ನಂತರ ನೀರನ್ನು ಸ್ವಲ್ಪ ಹೊತ್ತು ಅದೇ ಪಾತ್ರೆಯಲ್ಲಿ ಮುಚ್ಚಿಟ್ಟು ನಂತರ ಉಪಯೋಗಿಸಬೇಕು. ನೀರನ್ನು ಕುದಿಸಿದ್ದರೂ ಕುಡಿಯುವಾಗ ಅತಿಯಾಗಿ ಬಿಸಿ
ಇರಬಾರದು. ಜಾಸ್ತಿ ಬಿಸಿ ಕುಡಿಯುವುದರಿಂದ ಬಾಯಿ, ಗಂಟಲು ಸುಡುವುದು ಮಾತ್ರವಲ್ಲದೆ ಪಚನಾಂಗಗಳಿಗೂ ಹಾನಿಯಾಗುತ್ತದೆ. ಅಲ್ಲದೆ, ಯಾವಾಗ ಲಾದರೂ ಒಮ್ಮೆ ತಣ್ಣೀರು ಕುಡಿದರೆ ಆಗ ನೆಗಡಿ, ಗಂಟಲು ಕಟ್ಟುವುದು ಮುಂತಾದ ತೊಂದರೆಗಳು ಉಂಟಾಗುತ್ತವೆ.

ಆದ್ದರಿಂದ ವಿಶೇಷ ಸಂದರ್ಭ ಬಿಟ್ಟರೆ ಉಳಿದೆ ಸಮಯದಲ್ಲೂ ಕಾದು ಆರಿದ ನೀರೇ ಅಥವಾ ಹೂ ಬೆಚ್ಚಗಿರುವ ನೀರೇ ಕುಡಿಯಲು ಉತ್ತಮ. ಬಿಸಿ ನೀರಿನ ಔಷಧಿಯ ಗುಣಗಳೇನು? ಬಿಸಿನೀರು ಕ-ಹರ, ಮೇದಸ್ಸನ್ನು ಕಡಿಮೆ ಮಾಡುತ್ತದೆ. ವಾತಾವವನ್ನು ಶಮನ ಮಾಡುತ್ತದೆ. ಇದು ಅಗ್ನಿಯನ್ನು ವೃದ್ಧಿ ಮಾಡುತ್ತದೆ, ಅಲ್ಲದೆ ಮೂತ್ರಾಶಯ ಶೋಧಕ, ಉಬ್ಬಸ-ಜ್ವರ-ಕೆಮ್ಮು ನಿವಾರಕ. ಹಾಗೆಯೇ ಇದು ಸದಾ ಪಥ್ಯ!

೨. ಕಾದಾರಿದ ನೀರು: ನೀರನ್ನು ಕುದಿಸಿ, ಕಾಲು ಭಾಗಕ್ಕೆ ಇಳಿಸಿ, ಸಂಪೂರ್ಣವಾಗಿ ಆರಿಸಿದಾಗ ಅದು ಕಾದಾರಿದ ನೀರು. ಸಾಮಾನ್ಯವಾಗಿ ಎಲ್ಲರೂ ಬಳಸಬಹುದಾದಂತಹ ನೀರು ಇದು. ವಿಶೇಷವಾಗಿ ಮದ್ಯಪಾನ ಮಾಡುವವರು, ಮದ್ಯಪಾನ ಜನ್ಯ ವ್ಯಾಧಿಗಳಲ್ಲಿ, ಮೈಯಲ್ಲಿ ಉರಿ, ಭೇದಿ, ರಕ್ತ ದೋಷ, ಮೂರ್ಛೆ ರೋಗದಿಂದ ಬಳಲುವವರು, ಅತಿಬಾಯಾರಿಕೆ, ವಾಂತಿ, ತಲೆ ತಿರುಗುವ ತೊಂದರೆಗಳಲ್ಲಿ ಕಾದಾರಿದ ನೀರು ಉತ್ತಮ.

೩. ತಣ್ಣೀರು: ಅಗ್ನಿ ಸಂಪರ್ಕಕ್ಕೆ ಬಾರದ ನೀರು. ಹೊಸ ಮಡಿಕೆಯಲ್ಲಿ ಅಥವಾ ಪಾತ್ರೆಯಲ್ಲಿ ತುಂಬಿಸಿಟ್ಟ ನೀರು. ಖಂಡಿತ ರೆಫ್ರಿಜಿರೇಟರ್‌ನಲ್ಲಿ ಇಟ್ಟು
ತಣ್ಣಗೆ ಮಾಡಿದ ನೀರಲ್ಲ. ಸಾಮಾನ್ಯವಾಗಿ ತಣ್ಣೀರು ನೇರವಾಗಿ ಅಗ್ನಿಯನ್ನು ಹಾಳು ಮಾಡಿ, ಪಚನ ಶಕ್ತಿಯನ್ನು ಕುಗ್ಗಿಸಿ, ವಿವಿಧ ರೋಗಗಳನ್ನು ಉತ್ಪನ್ನ ಮಾಡುತ್ತದೆ. ಆದರೂ ಕೆಲವು ರೋಗಗಳಲ್ಲಿ ಇದನ್ನು ಬಳಸುತ್ತೇವೆ. ಉದಾಹರಣೆಗೆ, ಪಿತ್ತ ಪ್ರಕೃತಿಯವರು, ಉಷ್ಣತೆ ಹಾಗೂ ಉರಿ ಹೆಚ್ಚಾಗಿ ಇರುವವರು, ವಿಷ ಸೇವಿಸಿದವರಿಗೆ, ರಕ್ತ ಕೆಟ್ಟವರಿಗೆ, ಮದಾತ್ಯಯದಲ್ಲಿ, ತಲೆಸುತ್ತು ಆಯಾಸ ರೋಗಗಳಲ್ಲಿ, ವಾಂತಿ ಹಾಗೂ ರಕ್ತಸ್ರಾವ ಹೆಚ್ಚಿದ್ದಲ್ಲಿ ತಣ್ಣೀರು ಉತ್ತಮ.

ಯಾರಿಗೆ ತಣ್ಣೀರು ವರ್ಜ್ಯ? ಪಾಶ್ವಶೂಲ, ವಾತವ್ಯಾಧಿಗಳಲ್ಲಿ, ನೆಗಡಿ, ಗಂಟಲಿನ ತೊಂದರೆ, ಹೊಟ್ಟೆ ಉಬ್ಬರ, ನವಜ್ವರ, ಜಿಡ್ಡಿನ ಸೇವನೆ ಮಾಡುವವರು,
ಅಜೀರ್ಣದಿಂದ ಬಳಲುವವರು, ಮಕ್ಕಳಿಗೆ, ಬಾಣಂತಿಯರಿಗೆ, ವೃದ್ಧರಿಗೆ ತಣ್ಣೀರು ತೊಂದರೆ ಯನ್ನುಂಟು ಮಾಡಬಹುದು.

ಯಾವ ಕಾಲದಲ್ಲಿ ಯಾವ ನೀರನ್ನು ಕುಡಿಯಬೇಕು ಅನ್ನುವುದು ಮತ್ತೊಂದು ಮುಖ್ಯವಾದ ಪ್ರಶ್ನೆ. ಋತುವಿಗೆ ಅನುಸಾರವಾಗಿ- ಹೇಮಂತ- ಶಿಶಿರ ಋತುಗಳಲ್ಲಿ-ಅಂದರೆ ಚಳಿಗಾಲದಲ್ಲಿ ಬಿಸಿನೀರು ಉತ್ತಮ. ವಸಂತ ಋತುವಿನಲ್ಲೂ ಬಿಸಿ ನೀರಿನ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಇನ್ನು, ಗ್ರೀಷ್ಮ ಋತುವಿನಲ್ಲಿ ಶೀತ ಜಲವನ್ನು ಅಂದರೆ ತಣ್ಣೀರನ್ನು ಸೇವಿಸಬಹುದು. ಮುಂದೆ, ವರ್ಷಾ ಋತುವಿನಲ್ಲಿ ಬಿಸಿನೀರು ಪಥ್ಯ. ಶರತ್ ಋತುವಿನಲ್ಲಿ ಕಾದಾರಿದ ನೀರು ಅಥವಾ ತಣ್ಣೀರನ್ನು ಬಳಸಬಹುದು. ಸ್ವಸ್ಥನು ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾಗೂ ಮಳೆಗಾಲದ ನಂತರದ ಬಿಸಿಲುಗಾಲದಲ್ಲಿ
ತಣ್ಣೀರನ್ನು, ಕಾದಾರಿದ ನೀರನ್ನು, ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಬಿಸಿ ನೀರನ್ನು ಬಳಸಿದರೆ ಆರೋಗ್ಯವನ್ನು ಸುಲಭವಾಗಿ ರಕ್ಷಿಸಿಕೊಳ್ಳ ಬಹುದು.

ಇನ್ನು, ಎಷ್ಟು ನೀರು ಕುಡಿಯಬೇಕು? ನೀರಿನ ಪ್ರಮಾಣ ಏನು ಅನ್ನುವುದು ಮತ್ತೊಂದು ಮಹತ್ತರವಾದಂತಹ ಪ್ರಶ್ನೆ. ಸೇವಿಸಿದ ನೀರು ದೇಹದಲ್ಲಿ
ಎರಡು ರೀತಿಯಲ್ಲಿ ವ್ಯಯವಾಗುತ್ತದೆ. ಮೊದಲನೆಯದು ಅರಿವಿಲ್ಲದೆ, ನಮ್ಮ ಅನುಭವಕ್ಕೆ ಬರದಂತೆ ಸತತವಾಗಿ ಆರ್ದ್ರತೆಯು ಆವಿಯಾಗುತ್ತಲೇ
ಇರುತ್ತದೆ, ಶ್ವಾಸ ಹಾಗೂ ಚರ್ಮದ ಮೂಲಕ. ಮತ್ತೊಂದು, ಬೆವರು, ಮಲ, ಮೂತ್ರದ ಮೂಲಕ. ವ್ಯಾಯಾಮ ಮಾಡುವ ಶ್ರಮಜೀವಿಗಳಲ್ಲಿ,
ಕರಾವಳಿಯಲ್ಲಿ ವಾಸಿಸುವವರು ಮತ್ತು ಬೇಸಿಗೆಯಲ್ಲಿ ಬೆವರಿನ ಪ್ರಮಾಣ, ಉಸಿರಾಟ ಹಾಗೂ ಚರ್ಮದ ಮೂಲಕ ಆವಿಯಾಗುವ ದ್ರವದ ಪ್ರಮಾಣ ಜಾಸ್ತಿ. ಆಗ ನೀರಿನ ಸೇವನೆ ಹೆಚ್ಚು ಅಗತ್ಯ. ಇನ್ನು ಸದಾ ಎಸಿಯಲ್ಲಿ ಇರುವವರು, ಕುಳಿತುಕೊಂಡೇ ಕೆಲಸ ಮಾಡುವವರು, ದೈಹಿಕ ಶ್ರಮವಿಲ್ಲದವರು, ವ್ಯಾಯಾಮ ಮಾಡದವರು, ಚಳಿಗಾಲದಲ್ಲಿ ಹಾಗೂ ಶೀತ ವಲಯದಲ್ಲಿ ಆರ್ದ್ರತೆಯ ಆವಿ ಮತ್ತು ಬೆವರು ಕಡಿಮೆ.

ಆಗ ನೀರಿನ ಸೇವನೆಯೂ ಕಡಿಮೆ ಇರಬೇಕು. ಇದನ್ನೇ, ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ನಾವು ನೀರನ್ನು ಎಷ್ಟು ಸೇವಿಸುತ್ತೇವೋ ಅಷ್ಟುನ್ನು ಖರ್ಚು ಮಾಡಬೇಕು ಅಥವಾ ನಾವು ಎಷ್ಟು ವ್ಯಯ ಮಾಡುತ್ತೇವೋ ಅಷ್ಟೇ ನೀರನ್ನು ಸೇವಿಸಬೇಕು. ಸದಾ ಸ್ವಸ್ಥವಾಗಿರಲು, ಇನ್‌ಪುಟ್ ಔಟ್‌ಪುಟ್‌ಗಳ
ನ್ನು ಬ್ಯಾಲೆನ್ಸ್ ಮಾಡಬೇಕು. ಆದರೆ, ಈ ರೀತಿಯಾದಂತಹ ಲೆಕ್ಕವನ್ನು ಮಾಡಿ ಪ್ರತಿ ಬಾರಿ ನೀರು ಕುಡಿಯುವುದು ಸುಲಭದ ಕೆಲಸವಲ್ಲ. ಹಾಗಾದರೆ, ಈ
ಸಮಸ್ಯೆಗೆ ಪರಿಹಾರವೇನು? ಈ ಇನ್‌ಪುಟ್ ಮತ್ತು ಔಟ್‌ಪುಟ್‌ಗಳನ್ನು ನಾವು ಪರಿಶೀಲಿಸಿ ನೀರಿನ ಪ್ರಮಾಣವನ್ನು ನಿರ್ಧಾರ ಮಾಡುವುದು ಹೇಗೆ?
ನಮ್ಮ ಶಾರೀರಿಕ ಕ್ರಿಯೆಗಳನ್ನು ಸಮನ್ವಯಿಸಿ, ದೈಹಿಕ ಅಗತ್ಯಗಳನ್ನು ಸೂಚಿಸಲು ನಮ್ಮ ದೇಹವು ಕರೆಗಳನ್ನು ನೀಡುತ್ತದೆ. ಅವುಗಳೇ ಶಾರೀರಿಕ
ಕರೆಗಳು- ’natural urges’. ಈ ಕರೆಗಳು ಬಂದಾಗ ಪಾಲಿಸುವುದು, ಅವುಗಳನ್ನು ಪೂರೈಸುವುದು ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದು ಸುಲಭ ಉಪಾಯ.

ದೇಹದಲ್ಲಿ ದ್ರವದ ಸಂತುಲವನ್ನು ಸರಿಪಡಿಸಲು ನೀರು ಬೇಕು ಎಂದು ನಮಗೆ ಸೂಚಿಸಲು ದೇಹವು ನಮಗೆ ಬಾಯಾರಿಕೆ ಎಂಬ ಕರೆಯನ್ನು ನೀಡುತ್ತದೆ. ಹಾಗೆಯೇ ದೇಹಕ್ಕೆ ಘನಾಹಾರ ಬೇಕಾದಾಗ ಹಸಿವು ಎಂಬ ಕರೆಯನ್ನು ನೀಡುತ್ತದೆ. ಇಂತಹ ಕರೆಗಳು ಬಂದಾಗ ಅಗತ್ಯವಾದ ದ್ರವವನ್ನು/ಆಹಾರವನ್ನು ಸೇವಿಸದಿದ್ದಾಗ ತೊಂದರೆ ಖಂಡಿತ. ಹಾಗೆಯೇ, most impo-rtantly, ಈ ಕರೆಗಳು ಅಂದರೆ ಬಾಯಾರಿಕೆ, ಹಸಿವು ಇಲ್ಲದಿದ್ದಾಗ ಸೇವಿಸಿದರೂ ತೊಂದರೆ ತಪ್ಪಿದ್ದಲ್ಲ.

ಅಂತೆಯೇ, ಹಸಿವಾದಾಗ ದ್ರವವನ್ನು ಸೇವಿಸುವುದು ಮತ್ತು ಬಾಯಾರಿಕೆ ಇzಗ ಘನಾಹಾರವನ್ನು ಸೇವಿಸುವುದು ಸಹ ಅನಾರೋಗ್ಯಕರ. ಬಾಯಾರಿಕೆ ಮತ್ತು ಹಸಿವು ಇವೆರಡೂ ಜತೆ ಜತೆಯ ಕಾಣಿಸಿಕೊಳ್ಳುವುದು ವ್ಯಕ್ತಿಯ ಆರೋಗ್ಯದ ಲಕ್ಷಣವೆಂದು ಆಯುರ್ವೇದ ಹೇಳುತ್ತದೆ.

Ayurveda secret ಏನಪ್ಪ ಅಂದರೆ, ಗುಟುಕು ನೀರು ಕುಡಿಯುತ್ತಾ, ತುತ್ತು ಆಹಾರ ಸೇವಿಸುತ್ತಾ, ಬಾಯಾರಿಕೆ ಹಸಿವು ನೀಗುವಷ್ಟು, ತೃಪ್ತಿಯಾಗುವಷ್ಟು ಸೇವಿಸಿದರೆ ದೇಹದ ಅಗತ್ಯವನ್ನು ಒಂದು ಹಂತದಲ್ಲಿ ಪೂರೈಸಿದಂತಾಗುತ್ತದೆ. ಗುಟುಕು ಗುಟುಕಾಗಿ ನೀರನ್ನು ಕುಡಿಯುವ ಬದಲು ಚೊಂಬು ಅಥವಾ ಲೋಟವನ್ನು ಎತ್ತಿ ಗಟ ಗಟ ನೀರನ್ನು ಕುಡಿಯುವುದರಿಂದ, ಶರೀರಕ್ಕೆ ಅಗತ್ಯವಿಲ್ಲದಿzಗ ಅಂದರೆ ಬಾಯಾರಿಕೆ ಇಲ್ಲದೆಯೇ ನೀರನ್ನು ಕುಡಿದಾಗ, ಆಹಾರದ ಸೇವನೆಯ ಸಮಯ ದಲ್ಲಿ ಘನಾಹಾರಕ್ಕಿಂತ ನೀರನ್ನೇ ಜಾಸ್ತಿ ಕುಡಿದಾಗ, ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗದೆ ವಿವಿಧ ಅಜೀರ್ಣ ಲಕ್ಷಣಗಳು ಉಂಟಾಗುತ್ತದೆ.

ಆಯುರ್ವೇದ ಹೇಳುತ್ತೆ-ಜಠರವನ್ನು ನಾಲ್ಕು ಭಾಗವಾಗಿ ಮಾಡಿಕೊಂಡು, ಎರಡು ಭಾಗದಷ್ಟು ಘನಾಹಾರ ಸೇವಿಸಬೇಕು, ಒಂದು ಭಾಗದಷ್ಟು ದ್ರವಾಹಾ
ರವನ್ನು ತೆಗೆದುಕೊಳ್ಳಬೇಕು, ಹಾಗೆಯೇ ಒಂದು ಭಾಗದಷ್ಟು ವಾಯುವಿನ ಸಂಚಾರಕ್ಕೆ ಅಂದರೆ ಜೀರ್ಣ ಕ್ರಿಯೆಗೆ ಖಾಲಿ ಬಿಡಬೇಕು. ಸಾಮಾನ್ಯವಾಗಿ, ಸ್ವಸ್ಥರಲ್ಲಿ ಆಹಾರದ ಜತೆ, ಸರಿಯಾದ ಕ್ರಮದಲ್ಲಿ ನೀರನ್ನು ಕುಡಿದರೆ ಆಹಾರ ಕಾಲಗಳ ಮಧ್ಯೆ ಪದೇ ಪದೆ ಬಾಯಾರಿಕೆಯಾಗುವುದು ತಪ್ಪುತ್ತದೆ. ಆದರೂ, ಆಹಾರದ ಸಮಯದ ಹೊರತಾಗಿಯೂ ಬಾಯಾರಿಕೆಯಾಗುತ್ತಿದೆಯೆಂದರೆ – ಹಿಂದಿನ ಆಹಾರ ಸೇವಿಸುವಾಗ ಆಹಾರದೊಟ್ಟಿಗೆ ಜೀರ್ಣ ವಾಗಲು ಸಾಕಷ್ಟು ನೀರು ಕುಡಿದಿಲ್ಲ ಅಥವಾ ಯಾವುದೋ ಅನಾರೋಗ್ಯದ ಕಾರಣದಿಂದ ಇರಬಹುದು.

ದೇಹಕ್ಕೆ ಜೀರ್ಣಕ್ರಿಯೆ ಮಾಡಲು ನೀರು ಅಗತ್ಯ. ಒಂದು ಉದಾಹರಣೆಯೊಂದಿಗೆ ಹೇಳಬೇಕೆಂದರೆ ದೋಸೆಗೆ ಅಕ್ಕಿ ಅಥವಾ ಉದ್ದನ್ನೂ ರುಬ್ಬುವಾಗ
ಬೇಕಾದಷ್ಟು ನೀರನ್ನು ಒಂದು ಬಾರಿಯೇ ಹಾಕಿ ಬಿಟ್ಟರೆ ಏನಾಗಬಹುದು? ಬದಲಿಗೆ, ಆಗಾಗ ಸ್ವಲ್ಪ ಸ್ವಲ್ಪವಾಗಿ ಹಾಕಿ ಅರೆದರೆ ಆಗುವ ಪರಿಣಾಮವೇನು
ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ನಾವು ಸೇವಿಸಿದ ಆಹಾರವು ಸಕಾಲದಲ್ಲಿ ಜೀರ್ಣವಾಗಲು ಅವಶ್ಯಕವಾದ ಅನೇಕ ಸಹಕಾರಿ ಭಾವಗಳಲ್ಲಿ
ನೀರು ಪ್ರಧಾನವಾದದ್ದು. ಇದು ಆಹಾರದೊಡನೆ ಸೇರಿ ಹೋಗುತ್ತಿದ್ದರೆ ಆಹಾರದ ಪಚನ ಸುಲಭವಾಗುತ್ತದೆ. ಈ ಕಾರಣದಿಂದಾಗಿ ಆಹಾರ ಸೇವಿಸುವಾಗ
ಅದರೊಡನೆ ಮಧ್ಯೆ ಮಧ್ಯೆ ನೀರು ಸೇವಿಸುವುದು ಯುಕ್ತಿಯುಕ್ತವಾದದ್ದು.

ಆದರೆ ನೆನಪಿರಲಿ- ಆಹಾರ ಸೇವನೆಯಲ್ಲಿ ಘನಾಹಾರದ ಅರ್ಧದಷ್ಟು ಮಾತ್ರ ನೀರನ್ನು ಸೇವಿಸಬೇಕು ಮತ್ತು ನೀರು ಕಾದಾರಿದ ಬೆಚ್ಚಗಿರುವ ನೀರು ಅಥವಾ ಬಿಸಿನೀರು ಉತ್ತಮ. ಊಟದ ಜತೆ ಕೋಲ್ಡ ವಾಟರ್, ಕೋಲ್ಡ್ ಡ್ರಿಂಕ್ಸ್ , ರೆಫ್ರಿಜಿರೇಟೆಡ್ ವಾಟರ್ ನಿಷಿದ್ಧ! ಇನ್ನೊಂದು ವಿಷಯವೇನೆಂದರೆ, ಆಹಾರದ ಶುರುವಿನಲ್ಲಿ ನೀರನ್ನು ಹೆಚ್ಚಾಗಿ ಕುಡಿದರೆ ಜೀರ್ಣಕ್ರಿಯೆ ಕುಂದುತ್ತದೆ. ಪೋಷಣೆ ದೊರಕದೆ ದೇಹ ಸೊರಗುತ್ತದೆ. ಆಹಾರದ ನಂತರ ಕುಡಿದರೆ
ಜೀರ್ಣಕ್ರಿಯೆ ನಿಧಾನವಾಗಿ ಧಾತುಗಳ ಉತ್ಪತ್ತಿ ನಿಧಾನವಾಗಿ ದೇಹ ಸ್ಥೂಲವಾಗುತ್ತದೆ. ಆದ್ದರಿಂದ, ಆರೋಗ್ಯ ರಕ್ಷಣೆಗೆ ಎರಡರಿಂದ ಮೂರು ತುತ್ತು
ಊಟ ಮಾಡಿ, ಮಧ್ಯೆ ಸ್ವಲ್ಪನೀರು ಕುಡಿಯುವುದು ಉತ್ತಮ Health practice.

ಇನ್ನು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಒಳ್ಳೆಯದೋ ಕೆಟ್ಟದ್ದೋ? ಆಯುರ್ವೇದದ ಪ್ರಕಾರ ಈ ಆಚರಣೆ ಪ್ರತಿನಿತ್ಯ ದಿನಚರಿಯಲ್ಲಿ ಎಲ್ಲರೂ ಮಾಡುವಂತಹ practice ಅಲ್ಲ. ಇದೊಂದು ರಸಾಯನ ಚಿಕಿತ್ಸಾ ವಿಧಾನ. ಅಂದರೆ ಬೆಳಗ್ಗಿನ ನೀರು ಸೇವನೆ ಎಲ್ಲರೂ,
ಎಲ್ಲ ಕಾಲದಲ್ಲೂ, ಒಂದೇ ಪ್ರಮಾಣದಲ್ಲಿ, ಜೀವಮಾನವಿಡೀ ಮಾಡುವ ವಿಧಾನವಲ್ಲ. ಹೀಗೆ ಮಾಡಿದ್ದಲ್ಲಿ ದಿನವಿಡೀ ಜೀರ್ಣಶಕ್ತಿ ಕಡಿಮೆಯಾಗಿ,
ಕ್ರಮೇಣ ಸ್ಥೂಲಕಾಯ, ಮೂಳೆ ಸವೆತ, ಕೂದಲು ಉದುರುವಿಕೆ, ದುರ್ಬಲತೆ, ಮೈ ಭಾರ, ನೆಗಡಿ, ಮುಟ್ಟಿನ ತೊಂದರೆ, ಗಂಟಲಿನ ಸಮಸ್ಯೆ, ಹುಳಿತೇಗು, ಎದೆ ಉರಿ ಕಾಣಿಸಿಕೊಳ್ಳುತ್ತದೆ.

ಬೆಳಗ್ಗೆ ಎದ್ದಾಗ ಬಾಯಾರಿಕೆ ಇದ್ದರೆ ಮಾತ್ರ ಬೆಚ್ಚಗಿನ ನೀರನ್ನು ಸ್ವಲ್ಪ ಸೇವಿಸಬಹುದು. ಬಾಯಾರಿಗೆ ಇಲ್ಲದಿದ್ದಾಗ ಈ ಆಚರಣೆ ಅತಿಯಾಗಿ ಅನಾ ರೋಗ್ಯಕರವಾಗಬಹುದು. ಒಟ್ಟಾರೆ, ಕುಡಿಯುವ ನೀರಿನ ಪ್ರಮಾಣವೆನ್ನುವುದು ಎಲ್ಲ ಸಮಯದಲ್ಲೂ, ಎಲ್ಲ ಸಂದರ್ಭಗಳಲ್ಲೂ, ಎಲ್ಲ ವಯಸ್ಸಿ ನಲ್ಲೂ, ಎಲ್ಲ ಪ್ರದೇಶಗಳಲ್ಲೂ ಒಂದೇ ಸಮನಾಗಿರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಇದರ ವ್ಯತ್ಯಾಸವಾಗುತ್ತದೆ. ಒಬ್ಬ ವ್ಯಕ್ತಿಗೆ ದಿನಕ್ಕೆ ೩ ಲೀಟರ್ ನೀರು ಬೇಕಿದ್ದರೆ ನಿಮಗೂ ಅಷ್ಟೇ ನೀರು ಬೇಕೆಂದಲ್ಲ. ಆದ್ದರಿಂದ, ಕುಡಿಯುವ ನೀರಿನ ಪ್ರಮಾಣವನ್ನು ಅವರವರೇ ಅವರ ಬಾಯಾರಿಕೆ ಯನ್ನು ಮತ್ತು ದೇಹದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ವಿವೇಚನೆಯಿಂದ ನಿರ್ಧರಿಸಬೇಕು.

Afterall, one man’s food is other man’s poison. ನೆನಪಿರಲಿ- ದೇಹದಲ್ಲಿ ನೀರು ಕಡಿಮೆಯಾಗುವುದರಿಂದ ಉಂಟಾಗುವ ತೊಂದರೆಗಳಿಗಿಂತಲೂ ನೀರು ಜಾಸ್ತಿಯಾಗುವುದರಿಂದ ಉಂಟಾಗುವ ತೊಂದರೆಗಳೇ ಹೆಚ್ಚು ಕಷ್ಟಕರ. ಹಾಗಾಗಿ ನೀರಿನ ಬಗ್ಗೆ ಹುಷಾರಾಗಿರೋಣ. ವಿವೇಚನೆಯಿಂದ ಬಳಸೋಣ. Let us be water-wise!

Leave a Reply

Your email address will not be published. Required fields are marked *