ಶಿಶಿರ ಕಾಲ
ಶಿಶಿರ್ ಹೆಗಡೆ, ನ್ಯೂಜೆರ್ಸಿ
ಅದು ಇಂಗ್ಲೀಷರು ಜಗತ್ತನ್ನೇ ಲೂಟಿ ಹೊಡೆಯುತ್ತಿದ್ದ ಸಮಯ. ಚಪಾತಿಯ ತುಂಡಿನಂತಿರುವ ಇಂಗ್ಲೆಂಡ್‌ನಲ್ಲಿ ಶ್ರೀಮಂತ
ರಾಗಬೇಕೆನ್ನುವ ಅತಿಯೆನ್ನಿಸುವಷ್ಟು ಆಸೆ ಎಲ್ಲರಲ್ಲೂ ಇತ್ತು.
ದುಡ್ಡು ಮಾಡಬೇಕೆಂದರೆ ಬ್ರಿಟೀಷರ ಎದುರಿಗಿದ್ದುದು ಮೊದಲ ಮಾರ್ಗ – ದೇಶ ಬಿಟ್ಟು ಹಡಗಲ್ಲಿ ಹೋಗಬೇಕು. ಅದಾಗಲೇ ಲೂಟಿಗೆ ಮಾಡಿಟ್ಟ ಹಾದಿಯನ್ನು ತುಳಿಯಬೇಕು. ಇಂಗ್ಲೆಂಡಿನಲ್ಲಿ ಇರುವ ಸಂಪನ್ಮೂಲಕ್ಕೆ ಒಂದು ಮಿತಿಯಿತ್ತು. ಇಂಗ್ಲೆಂಡಿ ನಿಂದ ಎಲ್ಲ ದಿಕ್ಕುಗಳಿಗೂ ಜನರು ಹಡಗು ಹತ್ತಿ ಹೋಗುವುದು ಮತ್ತು ಅಲ್ಲಿ ಲೂಟಿ ಮಾಡಿ ವಾಪಸ್ (ಬದುಕಿ) ಬಂದರೆ ಆಮೇಲೆ ಜೀವಮಾನ ಪೂರ್ತಿ ಕೂತು ಉಣ್ಣಬಹುದು.
ಶ್ರೀಮಂತರಾಗಬೇಕು ಎನ್ನುವುದು ಅಂದಿನ ಅಲ್ಲಿನ ಮಾಸ್ ಮೂಡ್. ಅಲ್ಲಿನ ಮತ್ತು ಯುರೋಪ್‌ನ ಇತರ ದೇಶಗಳ ರಾಜರಿಗೆ ಇದೇ ಸ್ಪರ್ಧೆ. ಶ್ರೀಮಂತರಾಗುವುದೆಂದರೆ ಹೆಚ್ಚಿಗೆ ವಸ್ತುಗಳನ್ನು, ಚಿನ್ನವನ್ನು ಹೊಂದುವುದು. ಲೂಟಿಯೊಂದೇ ಮಾರ್ಗವೆನ್ನುವ ಪರಿಸ್ಥಿತಿ – ಮನಸ್ಥಿತಿ. ಹೀಗೆ ಹಡಗಲ್ಲಿ ಹತ್ತಿ ಜೀವ ಕಳೆದುಕೊಳ್ಳುವ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದವರು ದೇಶದಲ್ಲಿ ಲೂಟಿಗಿಳಿಯುತ್ತಿದ್ದರು.
ಪ್ರತಿಯೊಂದು ಮನೆಯಿಂದಲೂ ದುಡಿಯುವ ಗಂಡಸು ಹಡಗು ಹತ್ತಿ ಹೋಗುತ್ತಿದ್ದ. ಹಡಗು ಹತ್ತದೇ ಹಿಂದೆ ಉಳಿದುಕೊಂಡ ಗಂಡಸರು ಈ ಗಂಡಸಿಲ್ಲದ ಮನೆಗಳನ್ನು ಲೂಟಿ ಮಾಡುತ್ತಿದ್ದರು. ಅತ್ತ ದೇಶವೇನೋ ಹೊರದೇಶದಲ್ಲಿ ಮಾಡುತ್ತಿದ್ದ ಲೂಟಿ ಯಿಂದಾಗಿ ಶ್ರೀಮಂತವಾಗುತ್ತಿತ್ತು. ಆದರೆ ದೇಶದ ಒಳಗೆ ಕ್ರಿಮಿನಲ್‌ಗಳ ಸಂಖ್ಯೆ ಕೂಡ ಅಲ್ಲಿನ ದೊಡ್ಡ ತಲೆಬಿಸಿಯ ವಿಚಾರ ವಾಯಿತು. ಆಗ ಇಂಗ್ಲೆಂಡ್ ಒಂದು ಹೊಸ ಯೋಜನೆಯನ್ನು ರೂಪಿಸಿತು.
ಈ ಕ್ರಿಮಿನಲ್‌ಗಳನ್ನು ಹನ್ನೊಂದು ಹಡಗುಗಳಲ್ಲಿ ತುಂಬಿಸಿಕೊಂಡು ಆದಾಗತಾನೇ ಅವಿಷ್ಕಾರವಾಗಿದ್ದ ಹೊಸ ನೆಲ ನ್ಯೂ ಸೌತ್ ವೇಲ್ಸ – ಇಂದಿನ ಆಸ್ಟ್ರೇಲಿಯಾಕ್ಕೆ ಒಯ್ಯಲಾಯಿತು. ಅಲ್ಲಿ ಈ ಕ್ರಿಮಿನಲ್‌ಗಳನ್ನು ಕೆಲಸಕ್ಕೆ ಹಚ್ಚಿ ಕೃಷಿ, ಗಣಿಗಾರಿಕೆ ಮಾಡಿಸುವು ದು ಈ ಯೋಜನೆಯ ಮುಖ್ಯ ಭಾಗ. ಆಸ್ಟ್ರೇಲಿಯಾದಲ್ಲಿ ಮೊದಲೇ ಅಲ್ಲಿನ ಮೂಲ ನಿವಾಸಿಗಳ ಜನಸಂಖ್ಯೆ ತೀರಾ ಕಡಿಮೆ. ದೊಡ್ಡ ಜಾಗ, ಅಪರಿಮಿತ ಪ್ರಮಾಣದಲ್ಲಿ ಖನಿಜ ನಿಕ್ಷೇಪ. ಗಣಿ ಸಾಧ್ಯತೆ.
ಆಗಿನ ಕಾಲದಲ್ಲಿ ಇಂಗ್ಲೆಂಡಿನಿಂದ ಆಸ್ಟ್ರೇಲಿಯಾಕ್ಕೆ ಹೋಗುವುದೆಂದರೆ ಇಂದಿನ ಕಾಲದಲ್ಲಿ ಮಂಗಳ ಗ್ರಹಕ್ಕೆ ಹೋದಂತೆ. ಅಷ್ಟೇ ಅನಿಶ್ಚಿತತೆ. ಕಳಿಸಿದ್ದು ಅಪರಾಧಿಗಳನ್ನು – ನೆಗೆದು ಬಿದ್ದರೆ ಯಾರಿಗೂ ನಷ್ಟವಿಲ್ಲ. ಹೀಗೆ ಶುರುವಾಗಿದ್ದು ಸ್ಟ್ರೇಲಿಯಾದ ಲೂಟಿ.
ಹದಿನೆಂಟನೇ ಶತಮಾನ ಆಸ್ಟ್ರೇಲಿಯಾದಲ್ಲಿ ದೊಡ್ಡ ಚಿನ್ನದ ನಿಕ್ಷೇಪ ಪತ್ತೆಯಾಗಿತ್ತು. ಹೀಗೆ ಮೊದಲು ಹೋದ ಕ್ರಿಮಿನಲ್‌ಗಳ ಜತೆ ಗಣಿ ಕೆಲಸದವರೂ ಸೇರಿಕೊಂಡರು. ಈ ಚಿನ್ನದ ಗಣಿಯಲ್ಲಿ ಕೆಲಸ ಮಾಡುವವರಿಗೆ ಅಲ್ಲಿನ ಚಿನ್ನವೇ ದಿನಗೂಲಿ. ತಿಂಗಳಿಗೆ ಇಂತಿಷ್ಟು ಚಿನ್ನವನ್ನು ಅವರಿಗೆ ಸಂಬಳ ರೂಪದಲ್ಲಿ ಕೊಡಲಾಗುತ್ತಿತ್ತು. ಇದೊಂದು ಹೆಚ್ಚಿನ ಹಣ, ಲಾಭ ತರುವ ಉದ್ಯೋಗ. ದೇಹದಾರ್ಢ್ಯವೆ ಮಾಪಕ.
1859 – ಹೀಗೆ ಗಣಿಗಾರಿಕೆಯಿಂದ ತೆಗೆದ ಚಿನ್ನವನ್ನು ತುಂಬಿಸಿಕೊಂಡು ಜತೆಗೆ ಸುಮಾರು 450 ಗಣಿ ಕೆಲಸಗಾರರನ್ನು ಹೊತ್ತು ರಾಯಲ್ ಚಾರ್ಟರ್ ಹಡಗು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಿಂದ ಇಂಗ್ಲೆಂಡಿನ ಲಿವರ್ಪೂಲ್‌ಗೆ ಹೊರಟಿತು. ಗಣಿ ಕೆಲಸಗಾರರು ತಾವು ಅಲ್ಲಿ ದುಡಿದ ಚಿನ್ನವನ್ನು ಕಳ್ಳತನವಾಗಬಹುದೆನ್ನುವ ಕಾರಣದಿಂದ ಮೈ ಕೈಗೆ, ಬೆಲ್ಟಿಗೆ ಕಟ್ಟಿಕೊಂಡೇ ಹಡಗಲ್ಲಿ ಕುಳಿತಿದ್ದರು. ಹಡಗು ಇಂಗ್ಲೆಂಡಿನ ಏಂಜೆಲಿಸ್ ಹತ್ತಿರವಿದ್ದಾಗ ಒಮ್ಮಿಂದೊಮ್ಮೆಲೆ ಮಳೆ ಬಿರುಗಾಳಿ ಶುರುವಾಯಿತು.
ಕ್ಯಾಪ್ಟನ್ ನಿಲ್ಲಲಿಲ್ಲ – ಅಲ್ಲಿಂದ ಲಿವರ್ಪೂಲ್ ನತ್ತ ಹೊರಟ. ಹಡಗು ಮಗುಚಿತು. ಗಣಿ ಕೆಲಸದವರೆಲ್ಲ ಸಮುದ್ರಕ್ಕೆ ಬಿದ್ದರು. ಮೈಕೈ ಗೆ ಕಟ್ಟಿಕೊಂಡಿದ್ದ ಮಣಭಾರದ ಚಿನ್ನ. ಈಜಲು ಸಾಧ್ಯವೇ ಆಗಲಿಲ್ಲ. ಬದುಕಬೇಕೆಂದರೆ ಚಿನ್ನವನ್ನು ಎಸೆಯಬೇಕಿತ್ತು – 350 ಜನ ಗಣಿ ಕಾರ್ಮಿಕರಲ್ಲಿ ಕೇವಲ ಇಪ್ಪತ್ತು ಮಂದಿ ಚಿನ್ನವನ್ನು ಎಸೆದರು. ಉಳಿದ 330 ಮಂದಿ ಚಿನ್ನ ಬಿಡಲಿಲ್ಲ – ಜೀವ ಬಿಟ್ಟರು.
ಈ ಇಡೀ ಘಟನೆಯನ್ನು ಗಮನಿಸಿ. ಅವರೆಲ್ಲ ಬದುಕಬಹುದಿತ್ತು. ಈಜು ಬಲ್ಲವರಾಗಿತ್ತು, ಈಜಿ ದಡ ಸೇರಬಹುದಿತ್ತು. ಜೀವಕ್ಕಿಂತ ದುಡಿದು ತಂದ ಚಿನ್ನವೇ ಹೆಚ್ಚಿಗೆಯೆಂದು ಭಾವಿಸಿ ಜೀವ ಕಳೆದುಕೊಂಡರು. ಮನುಷ್ಯ ತನ್ನ ವಸ್ತುವನ್ನು ಕಳೆದುಕೊಳ್ಳುವ ಸಮಯ ಬಂದಾಗ ಅದೆಷ್ಟು ಆಭಾಗಲಬ್ಧವಾಗಿ – ಅತಾರ್ಕಿಕವಾಗಿ ವ್ಯವಹರಿಸುತ್ತಾನೆ ಎನ್ನುವುದಕ್ಕೆ ಇದೊಂದು ಅತ್ಯುತ್ತಮ
ಉದಾಹರಣೆ.
ಇಲ್ಲಿ ಹಾಗೆ ನೋಡಿದರೆ ಚಿನ್ನ ಎನ್ನುವುದು ಒಂದು ವಸ್ತು, ಲೋಹ. ಅದಕ್ಕೆ ಸಮಾಜದಲ್ಲಿ ಇರುವ ಬೆಲೆ ಮನುಷ್ಯ ತನ್ನ ಜೀವಕ್ಕಿಂತ ಜಾಸ್ತಿ ಎಂದು ವಿಚಾರ ಮಾಡಿದ್ದು. ಒಮ್ಮೆ ನೀವು ಕುಳಿತ ಸುತ್ತಲಿರುವ – ನೀವು ಹೊಂದಿದ ವಸ್ತುಗಳನ್ನು ಗ್ರಹಿಸಿ. ಷೋಕೇಸ್ ಇದ್ದರೆ ಅಂದಿಷ್ಟು ವಸ್ತುಗಳು – ಎಲ್ಲಿಯೋ ಹೋದಾಗ ತಂದ, ಯಾರೋ ಗಿ- ಕೊಟ್ಟ, ಅದೆಲ್ಲಿಯೋ ಪಡೆದುಕೊಂಡ ಪ್ರಶಸ್ತಿ ಹೀಗೆ.
ನಾಗಂದಿಕೆ – ರ‍್ಯಾಕ್‌ನ ಮೇಲೊಂದಿಷ್ಟು ವರ್ಷಕ್ಕೊಮ್ಮೆ ಅಥವಾ ಮುಂದೆಂದೂ ಬಳಸದ ವಸ್ತುಗಳು. ನಿಮ್ಮ ಜೀವನ ಶೈಲಿ – ಆರ್ಥಿಕ ಸ್ಥಿತಿ ಏನೇ ಇದ್ದರೂ ಮನೆಯ ಸುತ್ತಲೂ ಕನಿಷ್ಠ ಇಂಥ ಬೇಡದ ಆದರೆ ಎಸೆಯದ ವಸ್ತುಗಳಿರುತ್ತವೆ. ಕೊಮೆಡಿಯನ್ ಜಾರ್ಜ್ ಕಾಲಿನ್ಸ್‌ನ ಒಂದು ಮಾತು ಯಾವತ್ತೂ ತಲೆಯಲ್ಲಿ ಕೊರೆಯುತ್ತಿರುತ್ತದೆ. ಆತ ಮನೆಯನ್ನು ಹೊಂದುವ ಮುಖ್ಯ ಉದ್ದೇಶವನ್ನು ಪ್ರಶ್ನಿಸುತ್ತಾನೆ.
ಜಗತ್ತಿನ ಎಲ್ಲರ ಜೀವನದ ಮುಖ್ಯ ಉದ್ದೇಶವೇ ಸ್ವಂತಕ್ಕೆ ಒಂದು ಮನೆಯನ್ನು ಹೊಂದುವುದು. ಮನೆ ಎಂದರೆ ಏನು? ಮನೆಯೆಂದರೆ ನಿಮ್ಮ ವಸ್ತುಗಳನ್ನು ಇಡುವ ಒಂದು ಜಾಗ. ನಿಮ್ಮಲ್ಲಿ ಅಷ್ಟು ಜಾಸ್ತಿ ವಸ್ತುಗಳಿಲ್ಲ ಎಂದಾದರೆ ಅಷ್ಟು ದೊಡ್ಡ ಮನೆಯೇ ಬೇಕಾಗುವುದಿಲ್ಲ. ಮನೆಯೆಂದರೆ ಮೇಲ್ಚಾವಣಿಯಿರುವ ವಸ್ತುಗಳ ರಾಶಿ ಅಷ್ಟೇ. ಅಲ್ಲಿರುವ ವಸ್ತುಗಳನ್ನು ಬಳಸಲು ಪ್ರತಿಯೊಬ್ಬರೂ ಮನೆಗೆ ದಿನಾ ಬರುತ್ತಾರೆ.
ನಾವು ಮನೆಯಲ್ಲಿರುವ ಜನರಿಗಿಂತ ಅಲ್ಲಿನ ವಸ್ತುಗಳಿಗೆ ಹೆಚ್ಚಿಗೆ ಕನೆಕ್ಟ್ ಆಗಿರುತ್ತೇವೆ. ಮನೆಯಲ್ಲಿ ಎಷ್ಟೇ ಸಾಮಾನಿದ್ದರೂ ಮತ್ತೊಂದಿಷ್ಟು ಖರೀದಿಸಿ ತರುತ್ತೇವೆ. ಮತ್ತೊಂದಿಷ್ಟು ವಸ್ತುಗಳ ಜತೆ ಅರಿವಿಗೆ ಬಾರದಂತೆ ಕನೆಕ್ಟ್ ಆಗಿಬಿಡುತ್ತೇವೆ. ಇಲ್ಲಿ
ಕೊಳ್ಳುಬಾಕತನದ ಬಗ್ಗೆ ಹೇಳಲು ಹೊರಟಿಲ್ಲ. ವಸ್ತುಗಳನ್ನು ತಂದು ಮನೆಸೇರಿಸಿಕೊಳ್ಳುವ ಮನಸ್ಥಿತಿಯ ಗ್ರಹಿಸಬೇಕಾದದ್ದು. ಮನೆ ಸೇರಿತೆಂದರೆ ಆ ವಸ್ತು ಮನಸ್ಸಿಗೆ ಹತ್ತಿರವಾದಂತೆ.
ಅಂದು ಅಲಿಖಿತ ಸಂಬಂಧ ಏರ್ಪಟ್ಟಿರುತ್ತದೆ. ಈ ಹೊಸ ಹೊಸ ವಸ್ತುಗಳ ಸಂಬಂಧದ ಹಪಹಪಿಯೇ ವಸ್ತುಗಳನ್ನು ಖರೀದಿಸು ವಂತೆ ಮಾಡುತ್ತದೆ. ಇದಕ್ಕೆ ಯಾರೊಬ್ಬರೂ ಹೊರತಲ್ಲ. ವಸ್ತುಗಳು ಬೇಕೋ ಬೇಡವೋ ನಂತರದ್ದು. ಎಲ್ಲರ ಮನಸ್ಸಿನ ಆಳದ ಇನ್ನಷ್ಟು ಖರೀದಿಸು ಎನ್ನುವ ರಾಕ್ಷಸ ಈ ಎಲ್ಲ ಕೆಲಸವನ್ನು ಮಾಡುತ್ತಿರುತ್ತಾನೆ. ಕೆಲವರಿಗೆ ಎಲೆಕ್ಟ್ರಾನಿಕ್ ವಸ್ತುಗಳು, ಕೆಲವರಿಗೆ ಚಿನ್ನ, ಇನ್ನು ಕೆಲವರಿಗೆ ಮತ್ತಿನ್ನೇನೋ.
ಒಳಗಿರುವ ರಾಕ್ಷಸನಿಗೆ ವಸ್ತುವಿನೊಂದಿಗಿನ ಸಂಬಂಧದ ಹಪಾಹಪಿ. ಹೀಗೆ ಸಂಬಂಧ ಬೆಳೆಸಿಕೊಂಡ ವಸ್ತುಗಳನ್ನು ಎಸೆಯಲು
ಎಂದೂ ಮನಸ್ಸಾಗುವುದೇ ಇಲ್ಲ. ಅವು ಮನೆಯ ಮೂಲೆ ಮೂಲೆಯಲ್ಲಿ ಧೂಳು ತಿನ್ನುತ್ತಾ ಕೂರುತ್ತವೆ. ಅಮೆರಿಕಾದಲ್ಲಿ ಕಂಡಕಂಡಲ್ಲ ಸೆಲ ಸ್ಟೋರೇಜ್ ‘ಫೆಸಿಲಿಟಿ’ಗಳು ಕಾಣಿಸುತ್ತವೆ. ಒಂದು ದೊಡ್ಡ ಜಾಗದಲ್ಲಿ ಹತ್ತು / ಆರಡಿಯ ನೂರುಗಟ್ಟಲೆ ಚಿಕ್ಕ ಚಿಕ್ಕ ಗೋದಾಮುಗಳು. ಇದನ್ನು ಬಾಡಿಗೆ ಪಡೆದು ಅಲ್ಲಿ ಮನೆಯಲ್ಲಿ ಬೇಡದ ಸಾಮಾನುಗಳನ್ನು ಇಡಬಹುದು.
ಮೊದಲು ನೋಡಿದಾಗ ಇದು ಎಷ್ಟೊಳ್ಳೆ ವ್ಯವಸ್ಥೆ ಎಂದೆನಿಸಿತ್ತು. ಪ್ರತಿ ಸೆಲ ಸ್ಟೋರೇಜ್ ಫೆಸಿಲಿಟಿಗಳಲ್ಲಿ ಏನಿಲ್ಲವೆಂದರೆ ನೂರಿನ್ನೂರು ಇಂಥ ಚಿಕ್ಕ ಚಿಕ್ಕ ಗೋದಾಮುಗಳು. ಇಂಥ ಐವತ್ತು ಸಾವಿರ ಫೆಸಿಲಿಟಿಗಳು ಅಮೆರಿಕಾದ ಉದ್ದಗಲಕ್ಕಿವೆ. ಇಷ್ಟು ಸಂಖ್ಯೆಯಲ್ಲಿ ಅಮೆರಿಕಾದಲ್ಲಿ ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟುಗಳಿಲ್ಲ. ಇದ್ದಬದ್ದ ಸಮಾನನ್ನೆಲ್ಲ ಖರೀದಿಸುವುದು ಆಮೇಲೆ
ಜಾಗವಿಲ್ಲದೇ ಅದನ್ನು ಗೋಡಾನ್‌ನಲ್ಲಿ ಇಡುವುದು.
ಬೇಡದ ಸಮಾನಾಗಿದ್ದರೆ ಗೋಡಾನ್‌ನಲ್ಲಿ ಏಕಿಡಬೇಕು? ಒಮ್ಮೆ ಸ್ನೇಹಿತನ (ಅಮೆರಿಕನ್) ಜತೆ ಆತನ ಈ ರೀತಿಯ ಸ್ವಂತ ಗೋದಾಮಿಗೆ ಹೋಗಿದ್ದೆ – ಏನಿದೆ ಎಂದು ನೋಡಲು. ಇಡೀ ಗೋಡಾನ್‌ನಲ್ಲಿ ಕಾಲಿಡಲು ಜಾಗವಿಲ್ಲ. ಆತನ ಮುತ್ತಜ್ಜ ಮಾಡಿದ ಖುರ್ಚಿಯಿಂದ ಹಿಡಿದು ಆತನ ಮಗ ಆಡಿ ಬಿಟ್ಟ ಆಟಿಕೆಯ ಸಾಮಾನಿನವರೆಗೆ ಎಲ್ಲವೂ ಅಲ್ಲಿದ್ದವು. ಇವೆಲ್ಲ ಏಕೆ ಬೇಕು? ಬೇಕೆಂದಾದರೆ ಇಕೆ ಇಡಬೇಕು? ಇಲ್ಲಿ ಇಟ್ಟಿದ್ದು ಎಂದರೆ ಬೇಡವೆಂದೇ ಅಲ್ಲವೇ ಎಂದೆಲ್ಲ ನನ್ನ ಪ್ರಶ್ನೆಗಳು. ಅಲ್ಲಿದ್ದದ್ದು ವಸ್ತುವಿನ
ಮೇಲಿರುವ ವ್ಯಾಮೋಹ, ನೆನಪು ಇತ್ಯಾದಿ ಇತ್ಯಾದಿ.
ಒಂದೊಂದು ವಸ್ತುವನ್ನು ಇಟ್ಟುಕೊಳ್ಳಲು ಒಂದೊಂದು ಕಾರಣ. ಇದು ಅಮೆರಿಕಾವೊಂದರ ಸ್ಥಿತಿಯಷ್ಟೇ ಅಲ್ಲ. ಬಹುತೇಕ ಮುಂದುವರಿದ ರಾಷ್ಟ್ರಗಳೆಲ್ಲ ಈ ರೀತಿ ಗೋದಾಮುಗಳನ್ನು – ಅದರಲ್ಲಿ ಅಲ್ಲಿನ ಜನರು ತಮಗೆ ಬೇಡದ ಮತ್ತು ಎಸೆಯಲಾಗದ ವಸ್ತುಗಳನ್ನು ಕೂಡಿಡುವುದು ನೋಡಬಹುದು. ನಮ್ಮ ಭಾರತದಲ್ಲಿ ಮನೆಯ ಒಂದು ಭಾಗ ಇಂಥ ಗೋಡಾನ್ ಆಗಿರುತ್ತದೆ
ಅಷ್ಟೆ.
ಕೆಲವು ವಸ್ತುಗಳನ್ನು ಸಂಗ್ರಹಿಸುವುದನ್ನು ಹಾಬಿ ಹವ್ಯಾಸ) ಎನ್ನುವುದಿದೆ. ಮ್ಯೂಸಿಕ್ ಕೆಸೆಟ್, ಸಿಡಿ, ಹಾಡುಗಳನ್ನು ಮೊಬೈಲ್ ನಲ್ಲಿ ಸಂಗ್ರಹಿಸುವುದು ಹೀಗೆ. ನಾನು ಹೈಸ್ಕೂಲ್‌ಗೆ ಹೋಗುವಾಗ ಕ್ರಿಕೆಟ್ ಕಾರ್ಡ್‌ಗಳನ್ನು ಸಂಗ್ರಹಿಸುವ ಟ್ರೆಂಡ್ ಇತ್ತು. ಅದನ್ನ ಕ್ರಿಕೆಟ್ ಟ್ರಂಪ್ ಕಾರ್ಡ್ ಅಂತ ಕರೆಯೋದು. ಇಸ್ಪೀಟ್ ಕಾರ್ಡ್ ನಂತಿರುತ್ತಿದ್ದ ಕಾರ್ಡಿನ ಮೇಲೆ ಕ್ರಿಕೆಟ್ ಆಟಗಾರರ ಚಿತ್ರ
ಮತ್ತು ಅವರ ಕ್ರಿಕೆಟ್ ಸ್ಕೋರ್, ಪಡೆದ ವಿಕೆಟ್ ಇತ್ಯಾದಿ ಸಂಖ್ಯೆಗಳು ಒಂದು ಚಿಕ್ಕ ಚೌಕದೊಳಗೆ ಇರುತ್ತಿತ್ತು.
ಅದನ್ನು ಸಂಗ್ರಹಿಸುವುದೇ ಕೆಲಸ. ಯಾರ ಬಳಿ ಹೆಚ್ಚಿಗೆ ಇದೆಯೋ ಆತನ ಹಮ್ಮೇ ಬೇರೆ. ಕೆಲವರು ತಾರೆಯರ ಪೋಸ್ಟರ್ ಗಳನ್ನು, ಸನ್ ಗ್ಲಾಸ್‌ಗಳನ್ನು, ಚಪ್ಪಲಿಗಳನ್ನು, ಸೀರೆ, ಶರ್ಟ್, ವಾಚ್ – ಇನ್ನೂ ಸ್ವಲ್ಪ ಶ್ರೀಮಂತರಾದರೆ ಕಾರುಗಳು, ಮನೆಗಳು ಹೀಗೆ. ಅವಶ್ಯಕತೆಗೂ ಸಂಗ್ರಹಕ್ಕೂ ಸಂಬಂಧ ವಿರುವುದೇ ಇಲ್ಲ. ಇನ್ನು ಈ ರೀತಿಯ ಸಂಗ್ರಹಿಸುವ ವಸ್ತುಗಳು ನಿಜವಾದ ಭೌತಿಕ ವಸ್ತುಗಳಾಗಿರಬೇಕೆಂದೇನಿಲ್ಲ. ನೀವು ಕಂಪ್ಯೂಟರ್ ಗೇಮರ್ ಆಗಿದ್ದರೆ ನಿಮಗಿದು ಗೊತ್ತಿದ್ದದ್ದೇ. ಅಲ್ಲಿ ಆಟಗಳಲ್ಲಿ ಅಭೌತಿಕ ವಸ್ತುಗಳನ್ನು ಮಾರಾಟಮಾಡಲಾಗುತ್ತದೆ.
ಉದಾಹರಣೆಗೆ ಶೂಟಿಂಗ್ ಗೇಮ್ ಆಗಿದ್ದಲ್ಲಿ ನೀವು ದುಡ್ಡು ಕೊಟ್ಟು ಸ್ಕ್ರೀನ್ ಆಟದಲ್ಲಿ ಹೊಸ ನಮೂನೆಯ ಗನ್‌ಗಳನ್ನು ಖರೀದಿಸಬಹುದು. ಸ್ಕ್ರೀನ್‌ನ ಆಟದೊಳಗಿನ ನಿಮಗೆ ಬೇಕಾದ ಅಂಗಿ ಚಡ್ಡಿ, ಬುಲೆಟ್ ಪ್ರೂಫ್ ವೆಸ್ಟ್ ಇವನ್ನೆಲ್ಲ ಖರೀದಿಸಬಹುದು.
ಗೇಮಿಂಗ್ ಕಂಪನಿಗಳು ಬಿಲಿಯನ್ ಗಟ್ಟಲೆ ದುಡ್ಡುಮಾಡುವುದೇ ಇದರಿಂದ. ವಸ್ತುಗಳೆಂದರೆ ಮನುಷ್ಯನಿಗೆ ಬರೀ ವಸ್ತುಗಳಲ್ಲ.
ಅಂದು ಎಮೋಷನ್. ತೀರಿಕೊಂಡ ಅಜ್ಜ, ಮುತ್ತಜ್ಜ, ಪ್ರೀತಿ ಪಾತ್ರರು ಬಳಸಿದ ವಸ್ತುಗಳನ್ನು ಕಸದ ಬುಟ್ಟಿಗೆ ಎಸೆಯುವುದೆಂದರೆ ಅವರನ್ನೇ ಎಸೆದಂತೆ. ಇನ್ನು ನಾವು ಬಾಲ್ಯದಲ್ಲಿ ಬಳಸಿದ ವಸ್ತುಗಳ ಬಗ್ಗೆ ಈ ರೀತಿ ಭಾವನಾತ್ಮಕವಾಗಿ ಅಂಟಿಕೊಳ್ಳುವುದು ಜಾಸ್ತಿ. ನನ್ನ ಬಾಲ್ಯದಲ್ಲಿ ಬಳಸುತ್ತಿದ್ದ ಚಾದರ ನಾನು ಕೆಲಸಕ್ಕೆ ಸೇರಿದಾಗಲೂ ನನ್ನಲ್ಲಿತ್ತು.
ಅದು ಕೆಲವು ದೇಶಗಳನ್ನು ಕೂಡ ಸುತ್ತಿ ಬಂದಿತ್ತು. ಆಗ ಬಳಸುತ್ತಿದ್ದ ಕೋಣೆಗಳಿರುವ ಬಟ್ಟಲು ಇಂದಿಗೂ ನನ್ನ ಹತ್ತಿರ ಇದೆ. ಅದರಲ್ಲಿ ಊಟ ಮಾಡುವುದೆಂದರೆ ಒಂಥರಾ ಏನೋ ಸಮಾಧಾನ. ಅದೇ ನಡವಳಿಕೆಯನ್ನು ನನ್ನ ಮಗಳಲ್ಲಿಯೂ ನೋಡಿ ದ್ದೇನೆ. ಗೊಂಬೆಗಳು, ಆಟದ ಸಾಮಾನು ಎಂದರೆ ಏನೋ ಒಂದು ಭಾವನಾತ್ಮಕ ಅನುಬಂಧ. ಬೇಡದ ಆಟಿಕೆಯ ಸಾಮಾನನ್ನು ಎಸೆಯಬೇಕೆಂದರೆ ಕಣ್ಣು ತಪ್ಪಿಸಿಯೇ ಎಸೆಯಬೇಕು.
ಇಲ್ಲವೆಂದರೆ ಕಸದಬುಟ್ಟಿಯಿಂದಲೇ ಎತ್ತಿಕೊಂಡು ಬರುತ್ತಾಳೆ. ಇ ವಸ್ತುಗಳು ನಮ್ಮ ಗುರುತಾಗಿರುತ್ತವೆ. ಐಡೆಂಟಿಟಿಯ ಜತೆಗೆ ಒಂದಾಗಿಬಿಡುತ್ತದೆ. ಆ ವಸ್ತುಗಳನ್ನು ಕಳೆದುಕೊಳ್ಳುವುದೆಂದರೆ ನಮ್ಮನ್ನೇ, ನಮ್ಮ ಒಂದು ಭಾಗವನ್ನೇ ಕಳೆದುಕೊಂಡಂತೆ. ನಾವು ನಮ್ಮ ವಸ್ತುಗಳಿಗೆ ನಮಗರಿವಿಲ್ಲದಂತೆ ಜೀವವನ್ನು ಆರೋಪಿಸುತ್ತಿರುತ್ತೇವೆ. ಮನೆ, ಕಾರು ಇವನ್ನೆಲ್ಲ ಮಾರಾಟ ಮಾಡುವುದು ಹಿಂಸೆ ಎನ್ನಿಸುವುದೇ ಅದಕ್ಕೆ.
ಒಂದು ವಸ್ತುವನ್ನು ಖರೀದಿಸಿದಾಕ್ಷಣ ಆ ವಸ್ತುವಿನ ಬೆಲೆ ಒಮ್ಮಿಂದೊಮ್ಮೆಲೆ ನಮ್ಮ ಕಣ್ಣಿಗೆ ಹೆಚ್ಚುತ್ತದೆ. ಇದನ್ನು
Endowment Effect ಎನ್ನಲಾಗುತ್ತದೆ. ನಾವು ಖರೀದಿಸಿದ ಬೈಕ್ ಅಥವಾ ಇನ್ನೊಂದು ವಸ್ತುವಿರಬಹುದು, ಅದರ ಬಗೆಗಿನ ಮೋಹ ಷೋರೂಮ್ – ಅಂಗಡಿಯಿಂದ ತಂದಾಕ್ಷಣ ಹೆಚ್ಚಿ ಬಿಡುತ್ತದೆ. ಅಮೆರಿಕಾದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಹೋದಲ್ಲಿ ಶೋರೂಮ್ ನವರು ಆ ಕಾರನ್ನು ಒಂದೆರಡು ದಿನ ಪುಕ್ಸಟ್ಟೆ ಇಟ್ಟುಕೊಳ್ಳಲು ಕೊಡುವುದುಂಟು. ಈ ರೀತಿ ಕೊಟ್ಟ ಕಾರ್ ಹೆಚ್ಚಿನಂಶ ಮಾರಾಟವಾಯಿತೆಂದೇ ಅರ್ಥ.
ನೀವು ಆಭರಣ ಅಂಗಡಿಗೆ ಅಥವಾ ವಾಚ್ ಅಂಗಡಿಗೆ ಹೋದಲ್ಲಿ ಒಮ್ಮೆ ಅದನ್ನು ಧರಿಸಲು ಅಂಗಡಿಕಾರ ಒತ್ತಾಯಿಸುವುದು ಆಮೇಲೆ ನೀವು ಅದನ್ನು ಖರೀದಿಸುವುದು ಕೂಡ ಇದೇ. ಮಕ್ಕಳು ಸಾಮಾನ್ಯವಾಗಿ ಆಟಿಕೆ ಸಾಮಾನನ್ನು ಅಂಗಡಿಯಲ್ಲಿ ಕಂಡಾಕ್ಷಣ ಅದನ್ನು ಮುಟ್ಟಿದ ಕೂಡಲೇ ಈ ರೀತಿಯ ಭಾವನಾತ್ಮಕವಾಗಿ ಕನೆಕ್ಟ್ ಆಗಿಬಿಟ್ಟಾಗ ರಚ್ಚೆ ಹಿಡಿಯುವುದುಂಟು.
ಇನ್ನು ಲಕ್ಷುರಿ – ದುಬಾರಿ ವಸ್ತುಗಳನ್ನು ಹೊಂದುವುದು ಇನ್ನೊಂದು ವಿಚಾರ. ಅತ್ಯಂತ ಬೆಲೆಬಾಳುವ ವಸ್ತುಗಳನ್ನು, ಪರ್ಸ್, ವಾಚ್, ಅಂಗಿ ಹೀಗೆ ತುಟ್ಟಿಯ ವಸ್ತುಗಳನ್ನು ಹೊಂದುವ ಖಯಾಲಿ. ಇಲ್ಲಿ ವ್ಯಕ್ತಿ ಈ ವಸ್ತುಗಳನ್ನು ಹೊಂದುವ ಮೂಲಕ ಅದರಿಂದ ಪಡೆಯಬಹುದಾದ ಸ್ಟೇಟಸ್ ಅನ್ನು ಹಂಬಲಿಸುವುದು. ಐಫೋನ್ ಮಾಡುವ ಕೆಲಸವನ್ನೇ ಇನ್ನೊಂದು ಫೋನ್ ಕೂಡ ಮಾಡಬಲ್ಲದು – ಆದರೂ ಐಫೋನ್ ಬೇಕು. ಸ್ಟೀಲ್ ಲೋಟ, ಚಮಚದ ಕೆಲಸವನ್ನೇ ಬೆಳ್ಳಿಯ ತಟ್ಟೆ, ಚಮಚ ಮಾಡುತ್ತದೆ.
ಆಫ್ಟರ್ ಆಲ, ಎರಡೂ ಲೋಹವೇ. ಆದರೂ ಬೆಳ್ಳಿಯ ತಟ್ಟೆಗೆ ವಿಶೇಷ ಸ್ಥಾನ. ವಸ್ತುವನ್ನು ವ್ಯಕ್ತಿ ತನ್ನ ಸೂಚಕವಾಗಿ ಬಳಸುವ ಮನಸ್ಥಿತಿಯದು. ಆ ಕಾರಣಕ್ಕೇ ಇಂದು ಅತ್ಯಂತ ದುಬಾರಿ ಬ್ರಾಂಡ್ ಇಂದು 1.2 ಟ್ರಿಲಿಯನ್ ಡಾಲರ್ ವಾರ್ಷಿಕ ವ್ಯವಹಾರ ಮಾಡುವುದು. ಇದನ್ನು conspicuous consumptionಎನ್ನಲಾಗುತ್ತದೆ. ಇಲ್ಲಿ ಇನ್ನೊಂದು ಸೂಕ್ಷ್ಮವನ್ನು ಗ್ರಹಿಸುವು ದಾದರೆ ಈ ರೀತಿ ದುಬಾರಿ ವಸ್ತುಗಳನ್ನು ಬಳಸುವಾಗ ಮನುಷ್ಯನ ವರ್ತನೆ ಕೂಡ ಬದಲಾಗುತ್ತದೆ. ವ್ಯಕ್ತಿ ದುಬಾರಿ ಬಟ್ಟೆ, ವಸ್ತುವನ್ನು ಧರಿಸು ವಾಗ ಆತನಲ್ಲಿನ ನಡವಳಿಕೆ ಉಳಿದ ಸಮಯಕ್ಕಿಂತ ಬೇರೆಯದಾಗಿರುತ್ತದೆ.
ಸಾಮಾನ್ಯ ಬಟ್ಟೆ ಧರಿಸುವ ವ್ಯಕ್ತಿ ಸೂಟ್ ಧರಿಸಿದಾಗ ಇನ್ನಷ್ಟು ಸಭ್ಯನಾಗಿಬಿಡುತ್ತಾನೆ. ಇಲ್ಲಿ ವ್ಯಕ್ತಿತ್ವವನ್ನೇ ಹೊಂದಿದ ವಸ್ತುಗಳು ನಿರ್ದೇಶಿಸುತ್ತವೆ. ಇದಕ್ಕೆ ತದ್ವಿರುದ್ಧವಾದದ್ದು Inconspicuous consumption. ಉದಾಹರಣೆ : ಒಬ್ಬ ಕೋಟ್ಯಽಪತಿ ಸರಳ ಬಟ್ಟೆ ಧರಿಸಿ ರಸ್ತೆಗೆ ಬರುವುದು. ಇಲ್ಲಿ ಕೂಡ ಆತ ಉಳಿದವರಿಗಿಂತ ತಾನು ಸರಳ, ಪ್ರತ್ಯೇಕ ಎನ್ನುವುದನ್ನು ತಾನು ಧರಿಸಿದ ಬಟ್ಟೆ,
ಬಳಸುವ ವಸ್ತುಗಳಿಂದ ಸಿಗ್ನಲ್ ಮಾಡುತ್ತಾನೆ. ಒಟ್ಟಾರೆ, ವಸ್ತುಗಳನ್ನು ಹೊಂದುವಾಗ ಇರುವ ಮುಕ್ತತೆ ಆಮೇಲೆ ಇರುವುದಿಲ್ಲ. ನಾವು ಕಟ್ಟಿಕೊಂಡ ಸಮಾಜದಲ್ಲಿ ವಸ್ತುಗಳೇ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಮನುಷ್ಯನನ್ನು ಆತ ಹೊಂದಿರುವ ವಸ್ತುಗಳ ಮೇಲೆ ಅಳೆಯುವ ಅಲ್ಪತೆ ಇರುವವರೆಗೆ ಮತ್ತು ತನ್ನ ಎಲ್ಲ ಸಮಸ್ಯೆಗಳಿಗೆ ವಸ್ತುವಿನ ಖರೀದಿಯೇ ಉತ್ತರವೆನ್ನುವ
ಮನಸ್ಥಿತಿಯಿರುವವರೆಗೆ ಇದೆಲ್ಲ ಹಾಗೆಯೇ ಇರುತ್ತದೆ. ಮನುಷ್ಯನ ವಸ್ತುಗಳೆಡೆಗಿನ ವ್ಯಾಮೋಹದ ಸುತ್ತ ಕೆಲ ಆಯಾಮಗಳನ್ನು ನಿಮ್ಮ ಮುಂದಿಟ್ಟು ಆ ಮೂಲಕ ಒಂದಿಷ್ಟು ವಿಚಾರಕ್ಕೆ ಹಚ್ಚಿಸುವುದು ಈ ಲೇಖನದ ಉದ್ದೇಶ.
ಕೊನೆಯಲ್ಲಿ: ಈ ತನ್ನದೆನ್ನುವ ಭಾವನೆಯನ್ನು ಸಮಾಜ ಸರಿಯಾಗಿ ಬಳಸಿಕೊಂಡಷ್ಟು ಒಳ್ಳೆಯದು. ಸಾರ್ವಜನಿಕ ಸ್ವತ್ತು ತನ್ನ ಸ್ವತ್ತು ಎನ್ನುವ ಅರಿವು ಮೂಡಿಸುವುದು ಇದೇ ವಸ್ತುಗಳೆಡೆಗಿನ ಒಡೆತನದ ಉತ್ಕಟತೆಗೆ ಇನ್ನೊಂದು ದಿಶೆ ಕೊಡುವ ಕೆಲಸ. ಒಡೆತನ ಎಂದರೆ ಸ್ವೇಚ್ಚಾಚಾರಕ್ಕೆ ಅನುಮತಿಯಲ್ಲ ಎನ್ನುವ ಅರಿವು ಸಮಾಜದಲ್ಲಿ ಮೂಡಬೇಕು. ಸಾರ್ವಜನಿಕ ವಸ್ತುಗಳು ಹಾಳಾದಾಗ ಅದು ತನ್ನದೇ ನಷ್ಟ ಎಂದು ಭಾವಿಸುವಂತಾಗಬೇಕು.
ಲಕ್ಷ ಸಂಖ್ಯೆಯಲ್ಲಿ ಐತಿಹಾಸಿಕ ಸ್ಮಾರಕಗಳುಳ್ಳ, ಅತ್ಯಂತ ಸುಂದರ ತಾಣಗಳು, ನೈಸರ್ಗಿಕ ಸಂಪತ್ತುಳ್ಳ ನಮ್ಮ ದೇಶದಲ್ಲಿ
ಅದೇಕೋ ತನ್ನದೆನ್ನುವ ಭಾವನೆಯ ಕೊರತೆ ತುಂಬಾ ಇದೆ. ಅಥವಾ ಅದೇ ವಿಕೃತವಾಗಿ, ಒಂದು ಹೆಜ್ಜೆ ಮುಂದಕ್ಕೆ ಹೋಗಿ
ಏನು ಬೇಕಾದರೂ ಮಾಡಬಹುದು ಎಂದಾಗಿರುವುದು ಬೇಸರದ ವಿಚಾರ. ಈ ವಸ್ತುಗಳೆಡೆಗಿನ ವ್ಯಾಮೋಹವನ್ನು ಸರಿಯಾಗಿ ಚಾನೆಲ್ ಮಾಡುವುದು ಭ್ರಷ್ಟಾಚಾರ ಮತ್ತು ಉಳಿದ ಸಾಮಾಜಿಕ ಸಮಸ್ಯೆಗಳಿಗೆ ಕೂಡ ಪರಿಹಾರ.
ಇದು ಅಧ್ಯಾತ್ಮಿಕ, ಸತ್ವಯುತ ಶಿಕ್ಷಣದಿಂದ ಮಾತ್ರ ಸಾಧ್ಯ. Possess things, but don’t be possessed by them
– Osho.