Friday, 13th December 2024

ನಾವು ಬದಲಾಗಲು ಆರು ಸಾವಿರ ವರ್ಷ ತೆಗೆದುಕೊಂಡಿದ್ದೇವೆ !

ನೂರೆಂಟು ವಿಶ್ವ

vbhat@me.com

ಯೋಗಿ ದುರ್ಲಭಜೀ ಮೌನವ್ರತ ಮುರಿದಿದ್ದಾರೆ. ಅವರು ಆ ವ್ರತಕ್ಕೆ ಜಾರುವುದು ಹಾಗೂ ಮುರಿಯುವುದು ಇದ್ದಿದ್ದೇ. ಸತತ ಎರಡು ದಿನಗಳಾದರೂ, ಅವರು ಫೋನ್ ಕಾಲ್ ರಿಸೀವ್ ಮಾಡಲಿಲ್ಲ ಅಂದ್ರೆ ಅದು ಮೌನವ್ರತದ ಮುನ್ಸೂಚನೆ. ಮುಂದಿನ ಎರಡು ತಿಂಗಳು ಯೋಗೀಜಿ ಎಲ್ಲಿಗೋ ಹೋಗಿ ಬಿಡುತ್ತಾರೆ. ಅವರು ಎಲ್ಲಿದ್ದಾರೆಂಬುದು ಯಾರಿಗೂ ಗೊತ್ತಾಗುವುದಿಲ್ಲ. ಮೌನ ಅಸಹನೀಂiವಾದಾಗಲೇ ಅವರು ಮಾತಿಗೆ ಮುನ್ನುಡಿ ಹಾಕುವುದು.

ಕೆಲವೊಮ್ಮೆ ಅವರಿಗೆ ಅದು ಅಸಹನೀಯವಾಗುವುದೇ ಇಲ್ಲ. ಅದನ್ನು ಇಷ್ಟ ಪಡಲಾರಂಭಿಸುತ್ತಾರೆ. ಆಗ ನನ್ನಂಥವರು ಆ ಮೌನವ್ರತವನ್ನು ಮುರಿ ಯಲು ಅಕಲು ಹಾಕುತ್ತೇವೆ. ಕಾರಣ ನಮಗೆ ನಮ್ಮ ಮಾತು ಅಸಹನೀಯ ವೆನಿಸಲಾರಂಭಿಸಿರುತ್ತದೆ. ಆಗ ಯೋಗೀಜೀ ಮಾತುಗಳಿಗೆ ತವಕಿಸಲಾ ರಂಭಿಸುತ್ತೇವೆ. ಯೋಗೀಜೀ, ನೀವು ಮೌನವ್ರತ ಆಚರಿಸಿದರೆ, ನಿಮ್ಮಂತೆ ತರರೂ ಅಂಥ ಕ್ರಮ ಕೈಗೊಂಡರೆ, ಮೊಬೈಲು ಕಂಪನಿಗಳು ಏನು ಮಾಡಬೇಕು?’ ಎಂದು ಕೇಳಿದೆ.

‘ಭಾರತದಂಥ Talking Nation ಮತ್ತೊಂದಿಲ್ಲ. ಎಲ್ಲರೂ ಮಾತು, ಮೆಸೇಜುಗಳಲ್ಲಿ ತಲ್ಲೀನರಾಗಿದ್ದಾರೆ. ಎಲ್ಲರಿಗೂ ಮೌನದ ಅಗತ್ಯವಿದೆ. ಕಾರಣ ಮಾತು ಅರ್ಥ ಕಳೆದುಕೊಳ್ಳುತ್ತಿದೆ. ನಮ್ಮೊಳಗೆ ಸೃಷ್ಟಿಸಿಕೊಂಡ ಮೌನದಲ್ಲಿ ಹುಟ್ಟುವ ಮಾತುಗಳಿಗೆ ಮಾತ್ರ ಅರ್ಥ. ಉಳಿದುವೆಲ್ಲ ಅರ್ಥಹೀನ. ಮಾತು ಬರೀ ದನಿಯಾಗುತ್ತಿದೆ. ಆ ಕಾರಣದಿಂದ ಗದ್ದಲವಾಗುತ್ತಿದೆ. ಹೀಗಾಗಿ ಮೌನವ್ರತ ಆಪ್ತವಾಗುತ್ತದೆ. ಕಳೆದು ಹೋದ ನನ್ನನ್ನು ಈ ಮೌನದಲ್ಲಿ ಹುಡುಕುತ್ತೇನೆ’ ಎಂದ ಯೋಗೀಜೀ ಸುಮ್ಮನಾದರು.

ಮುಂದಿನ ಒಂದು ನಿಮಿಷ ನಮ್ಮ ನಡುವೆ ಮೌನ. ಯೋಗೀಜೀ ಅವರನ್ನು ಬೇರೆ ವಿಷಯದತ್ತ ವಾಲಿಸಬೇಕೆಂದೆನಿಸಿತು. ಇಲ್ಲದಿದ್ದರೆ ಅವರು ಮೌನದ ಗುಂಗಿನಿಂದ ಹೊರ ಬರುವುದಿಲ್ಲ. ತಕ್ಷಣ ವಿಷಯಾಂತರ ಮಾಡಿದೆ. ‘ಯೋಗೀಜೀ, ಬೇಕಾದಾಗ ನೂರಾರು ಕೋಟಿ ರು. ಸಂಪಾದಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದೀರಲ್ಲ.

ಅದನ್ನು ನನಗೂ ಹೇಳಿಕೊಡಿ’ ಎಂದೆ. ‘ಕೆಲ ವರ್ಷಗಳ ಹಿಂದೆ ನಾನು ‘”How to earn million dollars in one month’ ಎಂಬ ಪುಸ್ತಕ ಓದಿದ್ದೆ. ಅದನ್ನು ಬರೆದ ಲೇಖಕನ ಬಗ್ಗೆ ಮರುಕ ಉಂಟಾಯಿತು. ಆ ಪುಸ್ತಕ ಮಾರಾಟದಿಂದ ಮಿಲಿಯನ್ ಡಾಲರ್ ಗಳಿಸಿದ್ದರೆ ಸಂತಸವಾಗುತ್ತಿತ್ತು. ಅದೂ ಇಲ್ಲ. ಹಾಗೆಲ್ಲ ಒಂದು ತಿಂಗಳಲ್ಲಿ ಅಷ್ಟೊಂದು ಹಣ ಗಳಿಸುವುದು ಸಾಧ್ಯವಾಗಿದ್ದರೆ, ಈ ಜಗತ್ತಿನಲ್ಲಿ ಬಡವರೇ ಇರುತ್ತಿರಲಿಲ್ಲ’ ಎಂದರು ಯೋಗೀಜೀ.

‘ಅದ್ಸರಿ ಯೋಗೀಜೀ. ಆದರೆ ನೀವು ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ’ ಅಂದೆ. ಜೋರಾಗಿ ನಕ್ಕರು. ಮಾತಿನ ನಡುವೆ ಯೋಗೀಜೀ, ‘ನಮಗ್ಯಾರಿಗೂ ಏನು ಬೇಕೆಂಬುದು ಗೊತ್ತಿಲ್ಲ. ಅದೇ ನಮ್ಮ ಸಮಸ್ಯೆ’ ಎಂದರು. ಈ ಮಾತಿಗೆ ಅವರು ಹೇಳಿದ ಒಂದು ಪ್ರಸಂಗ ಸ್ವಾರಸ್ಯಕರವಾಗಿತ್ತು. ಒಮ್ಮೆ ಜಾರ್ಜ್ ಬರ್ನಾರ್ಡ್ ಷಾ ಲಂಡನ್‌ನಿಂದ ಯಾವುದೋ ಊರಿಗೆ ರೈಲಿನಲ್ಲಿ ಹೋಗುತ್ತಿದ್ದರು. ಟಿಕೆಟ್ ಕಲೆಕ್ಟರ್ ಆಗಮಿಸುತ್ತಿದ್ದಂತೆ, ಬರ್ನಾರ್ಡ್ ಷಾ ಟಿಕೆಟ್‌ಗಾಗಿ ಕೋಟು, ಶರ್ಟ್, ಪ್ಯಾಂಟಿನ ಜೇಬನ್ನು
ತಡಕಾಡತೊಡಗಿದರು.

ಅದು ಸಿಗದಿದ್ದಾಗ ಸೂಟ್ಕೇಸನ್ನು ತೆರೆದರು. ಟಿಕೆಟ್‌ನ್ನು ಎಲ್ಲಿ ಇಟ್ಟಿರಬಹುದೆಂದು ತಲೆ ಕೆರೆದುಕೊಂಡು ಪುನಃ ಕೋಟಿನ ಎಲ್ಲ ಜೇಬುಗಳನ್ನು ಶೋಧಿಸಲಾರಂಭಿಸಿದರು. ಬರ್ನಾರ್ಡ್ ಷಾ ಅವರ ತಾಕಲಾಟವನ್ನು ಗಮನಿಸುತ್ತಿದ್ದ ಟಿಕೆಟ್ ಕಲೆಕ್ಟರ್, ‘ಸಾರ್, ನೀವು ಯಾರೆಂಬುದು ಗೊತ್ತು. ನೀವು ಲೋಕಪ್ರಸಿದ್ಧರು. ನಿಮ್ಮಂಥ ಗಣ್ಯ ವ್ಯಕ್ತಿಗಳು ಟಿಕೆಟ್ ಇಲ್ಲದೇ ಪ್ರಯಾಣಿ ಸುವುದಿಲ್ಲ ಎಂಬುದೂ ಗೊತ್ತು. ಟಿಕೆಟ್ ಎಲ್ಲಾ ಇರುತ್ತದೆ ಬಿಡಿ. ಎಲ್ಲಿಟ್ಟಿದ್ದೀರೆಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ. ದಯವಿಟ್ಟು ಗಾಬರಿಯಾಗಬೇಡಿ. ಟಿಕೆಟ್ ಸಿಕ್ಕಿದ ನಂತರ ಕೊಡಿ. ಒಂದು ವೇಳೆ ಅದು ಸಿಗದಿದ್ದರೆ ಚಿಂತೆಬೇಡ. ಪರವಾಗಿಲ್ಲ. ಆರಾಮ ವಾಗಿ ಕುಳಿತುಕೊಳ್ಳಿ’ ಎಂದು ಸಮಾಧಾನ ಹೇಳಿದ.

ಅದಕ್ಕೆ ಬರ್ನಾರ್ಡ್ ಷಾ ಟಿಕೆಟ್ ಕಲೆಕ್ಟರ್‌ಗೆ ಹೇಳಿದರು-‘ನಿಮಗೆ ನನ್ನ ಸಮಸ್ಯೆ ಅರ್ಥವಾಗುತ್ತಿಲ್ಲ. ನಾನು ನಿಮಗೆ ತೋರಿಸು ವುದಕ್ಕಾಗಿ ಟಿಕೆಟ್‌ಗೆ ಹುಡುಕಾಡುತ್ತಿಲ್ಲ. ಆದರೆ ಟಿಕೆಟ್ ಇಲ್ಲದೇ ನಾನು ಪ್ರಯಾಣ ಮಾಡುವಂತಿಲ್ಲ. ಕಾರಣ ನೀವು ಆಕ್ಷೇಪ ವ್ಯಕ್ತಪಡಿಸುತ್ತೀರಿ ಎಂದಲ್ಲ. ನಾನು ಎಲ್ಲಿಗೆ ಹೊರಟಿದ್ದೇನೆಂಬುದು ನನಗೆ ಗೊತ್ತಿಲ್ಲ. ಈ ಕಾರಣಕ್ಕಾಗಿ ಟಿಕೆಟ್ ಬೇಕೇ ಬೇಕು. ಟಿಕೆಟ್ ಸಿಗದಿದ್ದರೆ ನಾನು ಎಲ್ಲಿಗೆ ಹೋಗ ಬೇಕೆಂಬುದೇ ತಿಳಿಯುವುದಿಲ್ಲ.

ನಾನು ನಿಮಗೆ ತೋರಿಸುವುದಕ್ಕಾಗಿ ಟಿಕೆಟ್‌ಗೆ ಹುಡುಕಾಡುತ್ತಿದ್ದೇನೆಂದು ತಿಳಿದಿರೇನು? ಟಿಕೆಟ್ ಸಿಗದ ಸಂದರ್ಭದಲ್ಲಿ ನಾನು ಎಲ್ಲಿಗೆ ಹೋಗಲು ನಿರ್ಧರಿಸಿದ್ದೆ ಎಂಬುದನ್ನು ಹೇಳುತ್ತೀರಾ?’ ಟಿಕೆಟ್ ಕಲೆಕ್ಟರ್ ತಬ್ಬಿಬ್ಬಾಗಿ ಹೋದ. ‘ಅಲ್ಲ, ನಾನು ನಿಮಗೆ ಸಹಾಯ ಮಾಡಬೇಕೆಂದು ನೋಡಿದರೆ, ನೀವು ಈ ರೀತಿ ವಿಚಿತ್ರವಾಗಿ ವರ್ತಿಸುತ್ತೀರಲ್ಲ. ಅದಿರಲಿ. ಈಗ ಒಂದು ಕೆಲಸ ಮಾಡಿ. ಈ ರೈಲು ಈಗ ಹೊರಟಿದೆ. ಮಧ್ಯದಲ್ಲಿ ನಿಲ್ಲಿಸುವುದು ಅಸಾಧ್ಯ. ಆದ್ದರಿಂದ ರೈಲು ನಿಲ್ದಾಣ ತಲುಪುವವರೆಗೂ ಯೋಚಿಸಿ ಹೇಳಿ. ಅಲ್ಲಿ ತನಕ ಗೊತ್ತಾಗದಿದ್ದರೆ, ರೈಲು ನಿಲ್ದಾಣದಲ್ಲಿ ಕುಳಿತು ಯೋಚಿಸಿ.

ನೀವು ಯಾವ ಊರಿಗೆ ಹೋಗಲು ಬಯಸಿದ್ದೀರಿ ಎಂಬುದನ್ನು ನಾನು ಹೇಗೆ ಹೇಳಲಿ?’ ಆ ಮಾತಿಗೆ ತಲೆದೂಗಿದ ಬರ್ನಾರ್ಡ್ ಷಾ ರೈಲಿನಲ್ಲಿ ಕುಳಿತು ಪ್ರಯಾಣ ಮುಂದುವರಿಸಿದರು. ಅವರಿಗೆ ಏನನಿಸಿತೋ ಏನೋ? ಟಿಕೆಟ್ ಕಲೆಕ್ಟರ್‌ನನ್ನು ಕರೆದು,
ಒಂದು ವೇಳೆ ರೈಲು ನಿಲ್ದಾಣ ತಲುಪಿದ ನಂತರವೂ ನಾನು ಯಾವ ಊರಿಗೆ ಹೋಗಬೇಕೆಂದಿದ್ದೆ ಎಂಬುದು ಹೊಳೆ ಯದಿದ್ದರೆ ಏನು ಮಾಡಲಿ?’ ಎಂದು ಕೇಳಿದರು.

ವಾಪಸ್ ಇದೇ ರೈಲಿನಲ್ಲಿ ಹೋಗಿ. ಎಲ್ಲಿಂದ ಬಂದಿದ್ದೀರೋ ಅಲ್ಲಿಗೆ ಹೋಗುತ್ತೀರಿ. ಆದರೆ ಎಲ್ಲಿಗೆ ಹೋಗಲು ನಿರ್ಧರಿಸಿ ದ್ದೀರೋ ಅಲ್ಲಿಗೆ ಹೋಗಬೇಕೆಂದರೆ, ನಿಮಗೆ ಆ ಊರಿನ ಹೆಸರು ನೆನಪಾಗಬೇಕು. ರೈಲು ವಾಪಸ್ ಹೋಗಲು ಇನ್ನೂ ಸಾಕಷ್ಟು ಸಮಯವಿದೆ. ಅಲ್ಲಿ ತನಕ ಯೋಚಿಸುತ್ತಲೇ ಇರಿ. ನೀವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೀರಿ (ಯೋಚಿಸು ತ್ತಿದ್ದೀರಿ) ಎಂದು ನನಗನಿಸುತ್ತಿದೆ.’ ಎಂದ ಟಿಕೆಟ್ ಕಲೆಕ್ಟರ್.

ಮುಂದೆ ಏನಾಯಿತು? ಬರ್ನಾರ್ಡ್ ಷಾ ತಲುಪಬೇಕಾದ ಊರನ್ನು ತಲುಪಿದರಾ? ಅದೇ ರೈಲಿನಲ್ಲಿ ಎಷ್ಟು ಸಲ ಅತ್ತಿಂದಿತ್ತ, ಇತ್ತಿಂದಿತ್ತ ಚಲಿಸಿದರು? ಈ ಯಾವ ಸಂಗತಿಗಳೂ ಗೊತ್ತಾಗಲಿಲ್ಲ. ಯೋಗಿ ದುರ್ಲಭಜೀ ಹೇಳಿದರು- ‘ನಾವೂ ಒಂಥರಾ
ಬರ್ನಾರ್ಡ್ ಷಾನಂತೆ. ಟಿಕೆಟ್ ಖರೀದಿಸಿದ್ದೇವೆ. ಆದರೆ ಎಲ್ಲಿಗೆ ಹೋಗಬೇಕೆಂಬುದು ಗೊತ್ತಿಲ್ಲ. ನಮಗೆ ಏನು ಬೇಕೆಂಬುದು ಗೊತ್ತಿಲ್ಲ. ನಮಗೂ ಪ್ರಾಮಾಣಿಕ ಅಂತ ಕರೆಯಿಸಿಕೊಳ್ಳುವ ಆಸೆಯಿದೆ.

ಆದರೆ ಲಂಚ, ಎಂಜಲು ಕಾಸಿಗೆ ಕೈಯೊಡ್ಡುತ್ತೇವೆ. ನಾನೂ ಸಾಧಕನಾಗಬೇಕು, ಶ್ರೀಮಂತನಾಗಬೇಕು ಎಂದು ಬಯಸುತ್ತೇವೆ. ಆದರೆ ಲಾಟರಿ ಹೊಡೆಯಲಿ ಎಂದು ನಿರೀಕ್ಷಿಸುತ್ತೇವೆ ಅಥವಾ ಬೇಗನೆ ಹಣ ಮಾಡುವ ವಾಮಮಾರ್ಗ ಅನುಸರಿಸುತ್ತೇವೆ. ಸಿನಿಮಾ ನಟರಂತೆ ಒಳ್ಳೆಯ ಫಿಗರ್ ಹೊಂದಬೇಕೆಂದು ಆಸೆಪಡುತ್ತೇವೆ. ಆದರೆ ಊಟಕ್ಕೆ ಕುಳಿತಾಗ ಗಡದ್ದಾಗಿ ತಿನ್ನುತ್ತೇವೆ. ನಮ್ಮ ಮನೆಯನ್ನು ಚೆನ್ನಾಗಿಟ್ಟುಕೊಳ್ಳುತ್ತೇವೆ.

ಆದರೆ ಬೀದಿ, ವಠಾರವನ್ನು ಹೊಲಸು ಮಾಡುತ್ತೇವೆ. ಮಾತೃಭಾಷೆ ನಶಿಸುತ್ತಿದೆಯೆಂದು ಕಳವಳ ವ್ಯಕ್ತಪಡಿಸುತ್ತೇವೆ. ಆದರೆ ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳಿಸಿ, ಅವರ ಬಾಯಲ್ಲಿ ಇಂಗ್ಲಿಷ್ ನುಲಿಯುವುದನ್ನು ಕಂಡು ಸಂತಸಪಡು ತ್ತೇವೆ. ದೇಶಕ್ಕಾಗಿ ಪ್ರಾಣ ಕೊಡುವ ಶಿವಾಜಿಯಂಥವರು ಹುಟ್ಟಬೇಕು ಎಂದು ಶಿಸುತ್ತೇವೆ. ಆದರೆ ಆತ ಪಕ್ಕದ ಮನೆಯಲ್ಲಿ ಹುಟ್ಟಲಿ ಅಂದುಕೊಳ್ಳುತ್ತೇವೆ. ಕಾರಿನ ಹಾರ್ನ್ ಕರ್ಕಶ ಎಂದು ಬೈದುಕೊಳ್ಳು ತ್ತೇವೆ.

ನಾವು ಸ್ಟೇರಿಂಗ್ ಹಿಂದೆ ಕುಳಿತಾಗ ಹಾರ್ನನ್ನು ಅದುಮಿ ಹಿಡಿದುಕೊಂಡಿರುತ್ತೇವೆ. ಈ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆಯೆಂದು ಹುಯಿಲೆಬ್ಬಿಸುತ್ತೇವೆ. ಮುಂದೆ ಹೊಸ ಸರಕಾರ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರದಲ್ಲಿ ಹಿಂದಿನ ಸರಕಾರವನ್ನು ಮೀರಿಸುತ್ತದೆ. ನಮ್ಮ ನಡವಳಿಕೆಗಳೇ ಹೀಗೆ. ಹೇಳುವುದೊಂದು, ಮಾಡುವುದು ಇನ್ನೊಂದು.
ಈಗ ಹೇಳಿ ನಮಗೂ, ರೈಲಿನಲ್ಲಿ ಕುಳಿತ ಬರ್ನಾರ್ಡ್ ಷಾ ಅವರಿಗೂ ಏನು ವ್ಯತ್ಯಾಸವಿದೆ? ನಮಗೆ ಏನು ಬೇಕೆಂಬುದು
ತಿಳಿದಿಲ್ಲ. ತಿಳಿದಿದ್ದರೆ ಈ ರೀತಿ ವರ್ತಿಸುತ್ತಿರಲಿಲ್ಲ. ಒಂದು ವೇಳೆ ಸ್ವಚ್ಛ ನಗರ, ಶುದ್ಧಗಾಳಿ, ನೀರು ಬೇಕೆಂದಿದ್ದರೆ, ನಾವು
ನಮ್ಮ ಪರಿಸರವನ್ನು ಇಷ್ಟು ಹೊಲಸು ಎಬ್ಬಿಸುತ್ತಿದ್ದೆವಾ? ನಮಗೆ ನಮ್ಮನ್ನು ಆಳುವವರು ಯೋಗ್ಯರಿರಬೇಕು ಅಂತಿದ್ದರೆ ಲಫಂಗರು, ಕೊಲೆಗಡುಕರು, ಭ್ರಷ್ಟರನ್ನು ನಮ್ಮ ಪ್ರತಿನಿಧಿಗಳನ್ನಾಗಿ ಆರಿಸುತ್ತಿದ್ದೆವಾ? ನಮಗೆ ಸಲ್ಮಾನ್ ಖಾನ್ ಥರಾ ಕಾಣಬೇಕು. ಆದರೆ ಮೈ ತುಂಬಾ ಬಟ್ಟೆ ಹಾಕಿಕೊಳ್ಳಬೇಕು ಅಂದ್ರೆ ಹೇಗೆ? ಬಟ್ಟೆ ಹಾಗೂ ಸಲ್ಮಾನ್ ಪರಸ್ಪರ ವಿರುದ್ಧ ಪದಗಳು ಎಂಬುದು ಅರ್ಥವಾಗುವುದಿಲ್ಲ.

ನಮ್ಮ ಈ ಸಮಸ್ಯೆಗಳಿಗೆ ಈ ವೈರುಧ್ಯಗಳೇ ಕಾರಣ. ನಮ್ಮ ದ್ವಂದ್ವವೇ ನಮ್ಮನ್ನು ಕಿತ್ತು ತಿನ್ನುತ್ತಿರುವುದು. ಹೆಜ್ಜೆ ಹೆಜ್ಜೆಗೂ
ರಾಜಿ ಮಾಡಿಕೊಳ್ಳುತ್ತೇವೆ. ಕಾನೂನು ಉಲ್ಲಂಘಿಸುವ ಪ್ರಸಂಗ ಬಂದರೆ ಸುರಕ್ಷಿತ ಮಾರ್ಗವನ್ನು ಅನುಸರಿಸುತ್ತೇವೆ. ಶ್ರಾದ್ಧದ ದಿನ ಉಪವಾಸಕ್ಕೆ ಅನ್ನ ತಿನ್ನಬಾರದೆಂದು ನಿಯಮ ರೂಪಿಸಿ, ಅಂಬೊಡೆ, ಕಡುಬು, ಹೋಳಿಗೆ, ಶಿರಾ ಮಾಡಿಸಿಕೊಂಡು ಬಾಳೆಲೆಯನ್ನು ಸಪಾಟು ಮಾಡಿ ಎದ್ದು ಬರುತ್ತೇವೆ’.

ಯೋಗೀಜೀ ಒಂದು ಕ್ಷಣ ಮಾತು ನಿಲ್ಲಿಸಿದರು. ಪುನಃ ಸಾವರಿಸಿಕೊಂಡು ಮುಂದುವರಿಸಿದರು- ‘ಜಗತ್ತಿನ ಯಾವ ದೇಶದಲ್ಲೂ ಇಂಥ ನೈತಿಕ ದಿವಾಳಿತನ ಇಲ್ಲ. ಈ ದೇಶದಲ್ಲಿ ಏನು ಬೇಕಾದರೂ ಮಾಡಬಹುದು. ಮಾಡಿ ಗೆದ್ದು ಬರಬಹುದು. ಹಣ, ಅಧಿಕಾರವಿದ್ದರೆ ಎಂಥ ನೀಚ ಕೆಲಸವನ್ನಾದರೂ ಮಾಡಿ ಜಯಿಸಿಕೊಂಡು ಬರಬಹುದು. ಸಿಂಗಾಪುರದಂಥ ದೇಶದಲ್ಲಿ ಬೀದಿಯಲ್ಲಿ ಮಲಮೂತ್ರ ವಿಸರ್ಜಿಸುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ. ಎಂಥ ವಿಚಿತ್ರ ಅಂದ್ರೆ ನಮ್ಮ ದೇಶದಲ್ಲಿ ಅದು ಸಹಜ, ಸರ್ವೇ ಸಾಮಾನ್ಯ.

ರಾಷ್ಟ್ರಪತಿ ಭವನದ ಮುಂದೆ ನಿಂತು ಮೂತ್ರ ವಿಸರ್ಜಿಸಬಹುದು. ಇಂಥ ಸ್ವಾತಂತ್ರ್ಯ ಜಗತ್ತಿನ ಯಾವ ದೇಶದಲ್ಲಿದೆ? ಸಿಂಗಾಪುರದಲ್ಲಿ ಎಂಜಲು ಉಗುಳಿದರೂ ಶಿಕ್ಷೆ ತಪ್ಪಿದ್ದಲ್ಲ. ಕೆಲ ವರ್ಷಗಳ ಹಿಂದೆ, ನನ್ನ ಸ್ನೇಹಿತರೊಬ್ಬರು ಅನಾರೋಗ್ಯದಿಂದ ಸಿಂಗಾಪುರದ ಬೀದಿಯಲ್ಲಿ ವಾಂತಿ ಮಾಡಿಕೊಂಡರು. ಕ್ಷಣಾರ್ಧದಲ್ಲಿ ಪೊಲೀಸರು ಬಂದು ನನ್ನ ಸ್ನೇಹಿತರಿಂದಲೇ ಅದನ್ನು ಸ್ವಚ್ಛಗೊಳಿಸಿದರು. ಆನಂತರ ಅನಾರೋಗ್ಯಪೀಡಿತ ನನ್ನ ಸ್ನೇಹಿತನಿಗೆ ವೈದ್ಯಕೀಯ ನೆರವು ಕೊಡಿಸಿದರೆನ್ನಿ. ನಮ್ಮ ಬಸ್ಸು, ರೈಲಿನಲ್ಲಿ ಸಂಚರಿಸುವಾಗ ಅಲ್ಲಲ್ಲಿ ವಾಂತಿ ಮಾಡಿಕೊಂಡಿರುವುದು ಕಾಣಿಸುತ್ತದೆ.

ಆದರೆ ವಾರವಾದರೂ ಯಾರೂ ತೊಳೆದು ಸ್ವಚ್ಛಗೊಳಿಸುವುದಿಲ್ಲ. ನಮ್ಮಲ್ಲಿ ಹೊಣೆಗಾರಿಕೆಯೂ ಇಲ್ಲ, ಉತ್ತರದಾಯಿತ್ವವೂ ಇಲ್ಲ. ಅದಕ್ಕಿಂತ ಹೆಚ್ಚಾಗಿ ಹೇಳಬೇಕೆಂದರೆ ಸಾರ್ವಜನಿಕವಾಗಿ ಮರ್ಯಾದೆ, ನಾಚಿಕೆ ಬಿಟ್ಟವರೆಂದರೆ ಭಾರತೀಯರು. ನಾನು ಹೀಗೆ ಹೇಳಿದಾಗ ಅನೇಕರಿಗೆ ಬೇಸರವಾಗುತ್ತದೆ. ಕೆಲವರು ನನ್ನ ಜತೆ ಜಗಳ ಕಾದಿzರೆ. ಪರವಾಗಿಲ್ಲ. ಯಾರು ಬೇಸರ
ಮಾಡಿಕೊಂಡಿzರೋ, ಜಗಳ ಕಾದಿದ್ದಾರೋ, ಅಂಥವರು ಬೀದಿಯಲ್ಲಿ ನಿಂತು ಉಚ್ಚೆ ಹೊಯ್ಯುವುದನ್ನು, ಪಾನ್ ಅಗಿದು ದಾರಿಯಲ್ಲಿ ಉಗುಳುವುದನ್ನು, ಕಾರಿನಲ್ಲಿ ಚಿ ತಿಂದು ಪ್ಯಾಕೆಟ್ ರಸ್ತೆಗೆ ಎಸೆಯುವುದನ್ನು ನಾನು ನೋಡಿದ್ದೇನೆ. ಆದರೆ ಭಾರತೀಯರಿಗೆ ಸಾರ್ವಜನಿಕ ಮರ್ಯಾದೆಯಿಲ್ಲ ಅಂದ್ರೆ ಸಂಕಟವಾಗುತ್ತದೆ.

ಆದರೆ ರಸ್ತೆಯಲ್ಲಿ ಎಂಜಲು ಉಗುಳು ವಾಗ ಸಂಕಟ ಆಗುವುದಿಲ್ಲ. ಸಾರ್ವಜನಿಕ ಸ್ವಚ್ಛತೆಗೆ ಭಂಗ ತರುತ್ತಿದ್ದೇವೆಂಬ ಸಣ್ಣ
ಬೇಸರವೂ ಆಗುವುದಿಲ್ಲ. ಇಲ್ಲಿ ಹೊಲಸು ಮಾಡಬೇಡ ಎಂದು ನಾವು ಯಾರನ್ನೂ ಗದರುವುದಿಲ್ಲ. ಕಾರಣ ನಾಳೆ ನಾನು ಹೀಗೆ ಮಾಡಿದಾಗ ಮತ್ಯಾರೋ ಬಂದು ನನ್ನನ್ನು ಹೀಗೆ ಗದರಿದರೆ ಎಂಬ ಆತಂಕ. ಹೀಗಾಗಿ ಎಲ್ಲಿ ಬೇಕಾದರೂ ಹೊಲಸು ಮಾಡಲು ಪರವಾನಗಿ ಪಡೆದವರೆಂದರೆ ಭಾರತೀಯರು.

ಹಾಗೆಂದು ವಿದೇಶಗಳಿಗೆ ಹೋದಾಗ ಇದೇ ಜನ ವರ್ತಿಸುವುದನ್ನು ಕಂಡರೆ ಇವರು ಅವರೇನಾ ಎಂಬ ಸಂದೇಹ ಮೂಡುತ್ತದೆ. ಅಷ್ಟು ಕ್ಲೀನು. ಅವರ ಆಡಂಬರ, ಕಾನೂನು ಪಾಲನೆ ನೋಡ ಬೇಕು. ಇದನ್ನು ನಾನು Pಟoಠಿಜಿಠ್ಠಿಠಿಜಿಟ್ಞಜಿoZಠಿಜಿಟ್ಞ ಟ್ಛ Pಚ್ಝಿಜ್ಚಿ ಔಜ್ಛಿಛಿ ಅಂತ ಕರೆಯುತ್ತೇನೆ. ಬೀದಿಯಲ್ಲಿ ಹಾದರ ಮಾಡಿ ಮನೆಗೆ ಬಂದು
ಶುದ್ಧ ಗರತಿಯಂತೆ ಪೋಸು ನೀಡುವ ಮೆಂಟಾಲಿಟಿ. ಇದು ಅನೇಕರಿಗೆ ಇಷ್ಟವಾಗೊಲ್ಲ. ಯೋಗೀಜೀ ನಿಮ್ಮ ಬಾಯಿಂದ
ಇಂಥ ಮಾತುಗಳಾ? ಅಂತಾರೆ.

ಅಲ್ಲ ಸ್ವಾಮಿ, ನೀವು ಮಾಡುವುದು ಇದಕ್ಕಿಂತ ನೀಚ ಕೆಲಸ. ಕಾರಣ ಯಾವ ಹೆಂಗಸೂ ಬಯಸಿ ಆ ವೃತ್ತಿಗಿಳಿಯುವುದಿಲ್ಲ. ಪರಿಸ್ಥಿತಿಯ ಅನಿ ವಾರ್ಯ, ಒತ್ತಡಗಳಿಂದ ಆ ಕೆಲಸಕ್ಕೆ ಮುಂದಾಗುತ್ತಾಳೆ. ಆದರೆ ನಿಮಗೆ ಯಾರ ಒತ್ತಡ, ಎಂಥ ಅನಿವಾರ್ಯ? ಹೇಳಿ, ನಾವು ನಮ್ಮ ಸಾರ್ವಜನಿಕ ಜೀವನವನ್ನು ವೇಶ್ಯಾಗಾರಿಕೆಯನ್ನಾಗಿ ಮಾಡಿಲ್ಲವಾ? ಈ ಪದ ಪ್ರಯೋಗ ಮಾಡಿದಾಗ ಆಗುವ ಬೇಸರ, ಸ್ವತಃ ಅಂಥ ಕೆಲಸವನ್ನು ಮಾಡುವಾಗ ಆಗುವುದಿಲ್ಲ ಏಕೆ?’ ನಾನು ಮಾತು ಮಾತಿಗೆ ಹೂಂ ಹೂಂ ಅನ್ನುತ್ತಿದ್ದೆ. ಅವರು ಹೇಳುತ್ತಿದ್ದುದರಲ್ಲಿ ಯಾವ ತಪ್ಪೂ ಇರಲಿಲ್ಲ.

ಆದರೆ ಯೋಗೀಜೀ ಎಂದಿಗಿಂತ ಖಡಕ್ ಆಗಿದ್ದರು. ಅವರ ಮಾತಿನಲ್ಲಿ ಸಾತ್ವಿಕ ಸಿಟ್ಟಿತ್ತು. ಇವನ್ನೆಲ್ಲ ಎಷ್ಟು ದಿನ ಅಂತ
ನೋಡಿ ಸಹಿಸಿಕೊಳ್ಳುವುದು ಎಂಬ ಅಸಹನೆಯಿತ್ತು. ನಾವು ನಮ್ಮ ನಗರವನ್ನು ಇಟ್ಟುಕೊಂಡಿರುವ ರೀತಿ ನೋಡಿದರೆ ನಮ್ಮ ದೇಶದ ಭವಿಷ್ಯ ಇನ್ನು ಎಷ್ಟು ವರ್ಷ ಎನಿಸುತ್ತದೆ. ನಾವು ವಾಸಿಸುವ ನಗರ ಕೊಳೆಗೇರಿಗಳಿಗಿಂತ ಹೇಗೆ ಭಿನ್ನ? ನನಗಂತೂ ಎ ನಗರಗಳೂ ಉಸಿರುಗಟ್ಟಿ ಸಾಯುತ್ತಿರುವಂತೆ ಭಾಸವಾಗುತ್ತಿದೆ.

ನಾವೇನಾದರೂ ಸ್ಮಶಾನದಲ್ಲಿ ಜೀವಿಸುತ್ತಿದ್ದೇವಾ ಎಂಬ ಆತಂಕ ಕಾಡುತ್ತದೆ. ಆದರೆ ಇದ್ದುದರಲ್ಲಿ ಸ್ಮಶಾನವೇ ವಾಸಿ. ಕಾರಣ ಅಲ್ಲಿ ಮೌನವಿದೆ. ನಗರಕ್ಕಿಂತ ಹೆಚ್ಚು ಸ್ವಚ್ಛವಿದೆ. ಸತ್ತವರ‍್ಯಾರೂ ಎದ್ದುಬರೋಲ್ಲ ಎಂಬ ಖಾತ್ರಿಯಿದೆ. ಆದರೆ ನಗರದಲ್ಲಿ ಹಾಗಲ್ಲ. ದುರಂತ ಅಂದ್ರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರಳಯವಾದರೆ ಯಾರೂ ಬದುಕಿರೋಲ್ಲ, ಎಲ್ಲರೂ
ಸಾಯಲಿ, ನಾನೊ ಬ್ಬನೇ ಬದುಕಿ ಏನು ಮಾಡಲಿ ಎಂಬುದು ಎಲ್ಲರ ಯೋಚನೆಯಾದರೆ ಯಾರು ಏನು ಮಾಡಬಹುದು? ಹೀಗಾಗಿ ಎಲ್ಲರೂ ಸಾಮೂಹಿಕ ಸಾವಿಗೆ ಮಾನಸಿಕವಾಗಿ ಸಿದ್ಧರಾಗುತ್ತಿರಬಹುದಾ ಎಂದೂ ಅನಿಸುತ್ತದೆ.

ನಾನು ಸಿನಿಕನಾಗಿ ಹೀಗೆ ಹೇಳುತ್ತಿಲ್ಲ. ಹೀಗೆ ಹೇಳುವಾಗ ಹೆಚ್ಚು ವಾಸ್ತವವಾದಿ ಯಾಗಿದ್ದೇನೋ ಎಂದೆನಿಸುತ್ತದೆ’ ಎಂದರು ಯೋಗೀಜೀ. ಯೋಗೀಜೀ, ‘ನಾವು ಅಷ್ಟು ಬೇಗ ಬದಲಾಗುತ್ತೇವೆ ಎಂಬ ಆಸೆ ಇಟ್ಟುಕೊಳ್ಳಬೇಡಿ. ಕಾರಣ ಇಂದಿನ ಈ ಸ್ಥಿತಿಗೆ
ಬರಲು ನಾವು ಆರು ಸಾವಿರ ವರ್ಷ ತೆಗೆದುಕೊಂಡಿದ್ದೇವೆ’ ಎಂದು ಹೇಳೋಣ ಅಂದುಕೊಂಡೆ. ಆದರೆ ನಾನು ನಿರಾಶಾವಾದಿ ಎಂದು ಬಿಂಬಿಸಿಕೊಳ್ಳಲು ಮನಸ್ಸಾಗಲಿಲ್ಲ.