ರಾಮರಥ
ಯಗಟಿ ರಘು ನಾಡಿಗ್
ರಾಕ್ಷಸರಾಜ ರಾವಣನಿಂದ ಅಪಹರಿಸಲ್ಪಟ್ಟಿದ್ದ ಪತ್ನಿ ಸೀತೆಯನ್ನು ಬಿಡಿಸಿಕೊಂಡು ಬರುವ ಕಾರ್ಯಭಾರದ ಅಂಗವಾಗಿ ಶ್ರೀರಾಮನು ಕಪಿಸೇನೆ ಯೊಂದಿಗೆ ಬೀಡುಬಿಟ್ಟಿದ್ದ ಭೂಭಾಗದಿಂದ (ಅಂದರೆ ಈಗಿನ ರಾಮೇಶ್ವರಂ ಪ್ರದೇಶದಿಂದ) ಲಂಕೆಗೆ ಸಮುದ್ರ ಮುಖೇನ ಸೇತುವೆಯನ್ನು ಕಟ್ಟಿಸಬೇಕಾಗಿ ಬಂದಿದ್ದರ ಅನಿವಾರ್ಯವನ್ನು ನಿನ್ನೆಯ ಸಂಚಿಕೆಯಲ್ಲಿ ಓದಿದ್ದೀರಿ. ಇದಕ್ಕೂ ಮುನ್ನ ಜರುಗಿದ ಘಟನೆಯೊಂದನ್ನು ಇಲ್ಲಿ ಹೇಳಬೇಕು. ಇದು ಕಲ್ಯಾಣ ರಾಮನ ಮತ್ತೊಂದು ಮುಖದ ಅನಾವರಣವೂ ಹೌದು.
ಸಾಕ್ಷಾತ್ ಭಗವಂತನೇ ಆಗಿದ್ದು ಭೂಮಂಡಲದ ಅಧಿಪತಿಯೇ ಆಗಿದ್ದ ಶ್ರೀರಾಮನಿಗೆ, ಸದರಿ ಸೇತುನಿರ್ಮಾಣ ಕಾರ್ಯಕ್ಕೆ ಮಿಕ್ಕೆಲ್ಲರಿಗೂ ನೇರವಾಗಿ ಆದೇಶಿಸಿ ಅವರನ್ನು ಈ ಕಾರ್ಯಭಾರದಲ್ಲಿ ತೊಡಗಿಸುವುದು ಅಸಾಧ್ಯವೇನೂ ಆಗಿರಲಿಲ್ಲ; ಹಾಗಂತ ರಾಮ ನೇರವಾಗಿ ಅಧಿಕಾರವನ್ನು ಚಲಾಯಿಸಲು ಹೋಗಲಿಲ್ಲ. ಅದಕ್ಕೆ ಕಾರಣ, ಅವನು ಪ್ರತಿನಿಧಿಸುತ್ತಿದ್ದ ‘ಮಾನವ ಅವತಾರ’. ಮನುಷ್ಯನಾಗಿ ಹುಟ್ಟಿದ ಮೇಲೆ ಹಾದುಹೋಗಬೇಕಾದ ಸ್ಥಿತ್ಯಂತರಗಳು,
ಇದ್ದ ಇತಿಮಿತಿಗಳು, ಅನುಸರಿಸಬೇಕಾದ ನಿಯಮಗಳು ಹಾಗೂ ಅಧಿಕಾರಶಾಹಿ ವಿಷಯದಲ್ಲಿ ತೋರಬೇಕಾದ ಗೌರವಗಳು ರಾಮನಿಗೆ ಚೆನ್ನಾಗಿ ಗೊತ್ತಿದ್ದವು.
ಹೀಗಾಗಿ ಸಮುದ್ರ ಮಾರ್ಗವಾಗಿ ಕಪಿಸೇನೆಯನ್ನು ಕೊಂಡೊಯ್ಯುವುದಕ್ಕೂ ಮೊದಲು, ಅದಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸಮುದ್ರರಾಜನನ್ನು ಪ್ರಾರ್ಥಿಸಿ ಒಲಿಸಿಕೊಳ್ಳಲು ನಿರಂತರ ಮೂರು ದಿವಸ ಉಪವಾಸ ಮಾಡಿ ಪೂಜೆ ಸಲ್ಲಿಸುತ್ತಾನೆ ರಾಮ. ಆ ಘಟ್ಟದಲ್ಲಿ ರಾಮನಲ್ಲಿ ಸೌಜನ್ಯ ಮನೆ ಮಾಡಿರುತ್ತದೆ. ಆದರೆ ಈ ‘ಸೌಜನ್ಯ’ವನ್ನು ‘ದೌರ್ಬಲ್ಯ’ ವೆಂದು ಪರಿಗಣಿಸುವ ಸಮುದ್ರರಾಜನು ಶ್ರೀರಾಮನನ್ನು ಲಘುವಾಗಿ ಕಾಣುವುದರ ಜತೆಗೆ ಅವನ ಕೋರಿಕೆಯನ್ನು ತಿರಸ್ಕರಿಸಿ ಅಟ್ಟಹಾಸ ಮೆರೆಯುತ್ತಾನೆ.
ಆಗ, ತನ್ನ ಸಹಜ ಸ್ವಭಾವಕ್ಕೆ ಅಪರೂಪವೆಂಬಂತೆ ಕೋಪದ ಜ್ವಾಲಾಮುಖಿಯಾಗುವ ಶ್ರೀರಾಮನು ಸಮುದ್ರರಾಜನನ್ನು ಉದ್ದೇಶಿಸಿ, ‘ನಿನ್ನ ಮಡಿಲಲ್ಲಿ ರುವ ನೀರೆಲ್ಲ ಈಗಿಂದೀಗಲೇ ಆವಿಯಾಗಿ ಹೋಗಲಿ’ ಎಂದು ಶಪಿಸಿ ಬತ್ತಳಿಕೆಯಿಂದ ಬಾಣವೊಂದನ್ನು ಹೊರಸೆಳೆದು ಸಮುದ್ರದ ಮಡಿಲಿಗೆ ಪ್ರಯೋಗಿ ಸಲು ಮುಂದಾಗುತ್ತಾನೆ. ಸಮುದ್ರರಾಜನಿಗೆ ಆಗ, ತನ್ನೆದುದುರು ನಿಂತಿರುವುದು ‘ಶ್ರೀಸಾಮಾನ್ಯ’ ಅಲ್ಲ, ‘ಶ್ರೀರಾಮ’ ಎಂಬುದು ಅರಿವಾಗುತ್ತದೆ.
ಸಮುದ್ರರಾಜನಿಗೆ ತಾನೀಗ ಮಾತನಾಡುತ್ತಿರುವುದು ಸಾಕ್ಷಾತ್ ಭಗವಂತನ ಜತೆ ಎಂಬ ಪುಳಕ ಒಂದು ಕಡೆ, ಇಂಥ ದೇವರಿಗೇ ತಡೆ ಒಡ್ಡಿದೆನಲ್ಲಾ
ಎಂಬ ಭಯ ಮತ್ತೊಂದು ಕಡೆ! ಈ ಮಿಶ್ರಭಾವದಲ್ಲೇ ಶ್ರೀರಾಮನಿಗೆ ಕೈಮುಗಿದು, ‘ನನ್ನ ಮಡಿಲಲ್ಲಿ ಸೇತುವೆ ನಿರ್ಮಿಸುವುದಕ್ಕೆ ನನಗ್ಯಾವ ಅಭ್ಯಂತ ರವೂ ಇಲ್ಲ; ನಾನೂ ನಿಮ್ಮೊಂದಿಗೆ ಸಹಕರಿಸುವೆ. ನನ್ನ ಮೇಲ್ಮೈಗೆ ಬಂದು ಬೀಳುವ ಸೇತುವೆಯ ಒಂದೊಂದು ಕಲ್ಲನ್ನೂ ನಿಭಾಯಿಸುವ ಹೊಣೆ ನನ್ನದು’ ಎಂದು ಭರವಸೆ ನೀಡುತ್ತಾನೆ ಸಮುದ್ರರಾಜ. ರಾಮನ ಕೋಪ ಶಮನಗೊಂಡು ಸಮುದ್ರರಾಜನಿಗೆ ಅಭಯಹಸ್ತ ತೋರುತ್ತಾನೆ.
ಇದಾದ ತರುವಾಯ, ಸೇತುವೆಯ ವಾಸ್ತವಿಕ ನಿರ್ಮಾಣ ಕಾರ್ಯ ಶುರುವಾಗುವುದಕ್ಕೂ ಮುನ್ನ ಶ್ರೀರಾಮನನ್ನು ಭೇಟಿಯಾಗುವ ಋಷಿಯೊಬ್ಬರು, ‘ಪ್ರಭೂ, ಈ ನಿರ್ಮಾಣ ಕಾರ್ಯ ಸುಸೂತ್ರವಾಗಿ ನೆರವೇರಲು ನಿಮ್ಮ ಕಪಿಸೇನೆಯ ಸತತ ಪರಿಶ್ರಮ ಅತ್ಯಗತ್ಯ; ಆ ಪರಿಶ್ರಮವು ವ್ಯರ್ಥವಾಗ ಬಾರದೆಂದರೆ ನೀವು ಮತ್ತೊಂದು ಸಂಕಲ್ಪಕ್ಕೂ ಮುಂದಾಗಬೇಕು. ಅದೆಂದರೆ, ಈ ಕಾರ್ಯಭಾರದ ಯಶಸ್ಸಿಗೆ ನೀವು ವಿಜಯ ಏಕಾದಶಿ ಉಪವಾಸವನ್ನು ಆಚರಿಸ ಬೇಕು’ ಎಂದು ಸಲಹೆ ನೀಡುತ್ತಾರೆ. ರಾಮ ಆ ಸಲಹೆಯನ್ನು ಶಿರಸಾವಹಿಸಿ ಪಾಲಿಸುತ್ತಾನೆ.
ರಾಮನ ಈ ನಡೆಗಳನ್ನು ಕೊಂಚ ವಿಶ್ಲೇಷಿಸೋಣ. ಆತ ಬತ್ತಳಿಕೆಯಿಂದ ಬಾಣವನ್ನು ಹೊರಸೆಳೆದು ಪ್ರಯೋಗಿಸಿ ಒಂದಿಡೀ ಸಮುದ್ರವನ್ನೇ ಇಂಗಿಸಿ ಬಿಟ್ಟಿದ್ದಿದ್ದರೆ, ಸೇತುವೆಯನ್ನು ಕಟ್ಟಲೇಬೇಕೆಂಬ ಮತ್ತು ಅದಕ್ಕಾಗಿ ಕಪಿಸೇನೆಯನ್ನು ನೆಚ್ಚಲೇಬೇಕೆಂಬ ಅನಿವಾರ್ಯಗಳು ಎದುರಾಗುತ್ತಿರಲಿಲ್ಲ.
ಆದರೆ, ಯಾವುದೇ ರೀತಿಯಲ್ಲಿ ನಿಯಮೋಲ್ಲಂಘನೆ ಆಗ ಬಾರದು ಎಂಬುದು ರಾಮನ ಆಶಯವಾಗಿತ್ತು. ಹೀಗಾಗಿಯೇ ಆತ ಸೇತುಬಂಧ ಕಾರ್ಯವು ಅಧಿಕೃತವಾಗಿ ಶುರುವಾಗುವುದಕ್ಕೂ ಮೊದಲು ಸಮುದ್ರರಾಜನನ್ನು ವಿಹಿತವಾಗಿಯೇ, ವಿನಯಪೂರ್ವಕವಾಗಿಯೇ ಪ್ರಾರ್ಥಿಸಿದ.
ಇದು ರಾಮನಲ್ಲಿದ್ದ ‘ನಿಯಮವನ್ನು ಗೌರವಿಸುವ’ ಗುಣಕ್ಕೆ ಸೂಚಕ; ಆದರೆ ಅದೇ ಸಮುದ್ರರಾಜನು ರಾಮನನ್ನು ಲಘುವಾಗಿ ಕಂಡು ಅವನ ಮನವಿಯನ್ನು ತಿರಸ್ಕರಿಸಿದಾಗ ಮಾತ್ರವೇ ಆತ ಸಮುದ್ರದ ನೀರನ್ನು ಇಂಗಿಸಲೆಂದು ಬಾಣ ಹೂಡಲು ಹೊರಟಿದ್ದು. ಇಲ್ಲಿ ರಾಮನ ಕೋಪವು ಅಭಿವ್ಯಕ್ತವಾಗುತ್ತದೆಯಾದರೂ ಅದು, ನೆರವನ್ನು ಅಪೇಕ್ಷಿಸಿ ಬರುವವರ ‘ಸೌಜನ್ಯ’ವನ್ನು ‘ದೌರ್ಬಲ್ಯ’ ಎಂಬುದಾಗಿ ಪರಿಗಣಿಸಬಾರದು ಎಂಬ ಎಚ್ಚರಿಕೆಯ ದ್ಯೋತಕವೂ ಆಗುತ್ತದೆ. ಇನ್ನು, ಸೇತುನಿರ್ಮಾಣ ಕಾರ್ಯವು ಯಶಸ್ವಿಯಾಗಲು ಋಷಿಯೊಬ್ಬರ ಸಲಹೆಯಂತೆ ಏಕಾದಶಿ ಉಪವಾಸ ಕೈಗೊಳ್ಳಲು ಮುಂದಾಗುವ ರಾಮನ ನಡೆಯೂ ಶ್ಲಾಘನೀಯವೇ; ಏಕೆಂದರೆ, ‘ಕಪಿಸೇನೆಯ ಪರಿಶ್ರಮ ವ್ಯರ್ಥವಾಗಬಾರದು’ ಎಂಬ ಮಾತಿಗೆ ಋಷಿ
ಒತ್ತುನೀಡಿದ್ದು ಅವನನ್ನು ಹಿಡಿದಿಟ್ಟುಕೊಳ್ಳುತ್ತದೆ.
‘ಉದ್ದೇಶಿತ ಕಾರ್ಯವೊಂದು ಯಶಸ್ವಿಯಾಗಬೇಕಾದರೆ, ಅದರ ಹಿಂದಿರುವ ‘ಸಂಕಲ್ಪ’ವು ಅದೆಷ್ಟೇ ಗಟ್ಟಿಯಾಗಿದ್ದರೂ, ಹಲವು ದಿಕ್ಕುಗಳಿಂದ ಶುಭ ಹಾರೈಕೆ-ಹರಕೆಗಳು ಹರಿದುಬರಬೇಕಾಗುತ್ತದೆ. ಹೃದಯಾಂತರಾಳದ ಪ್ರಾರ್ಥನೆಗೆ ಅಂಥದೊಂದು ಶಕ್ತಿಯಿದೆ; ಸಂಕಲ್ಪಿತ ವ್ಯಕ್ತಿಯು ಎಷ್ಟೇ ದೂರ ದಲ್ಲಿದ್ದರೂ ಇಂಥ ಹರಕೆ-ಹಾರೈಕೆ-ಪ್ರಾರ್ಥನೆಗಳು ಅವರನ್ನು ತಲುಪಿ ಫಲ ನೀಡುತ್ತವೆ’ ಎಂಬುದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅನೂ ಚಾನವಾಗಿ ಬೆಳೆದು ಬಂದಿರುವ ನಂಬಿಕೆ.
ಇದಕ್ಕೆ ಇಂಬುಕೊಡಲೆಂದೇ, ಪ್ರಾರ್ಥನೆ ಮತ್ತು ವ್ರತಾಚರಣೆಗಳಿಗಿರುವ ಮಹತ್ವವನ್ನು ಸಾರಲೆಂದೇ ಭಗವಂತ ಶ್ರೀರಾಮ ಸ್ವತಃ ಉಪವಾಸ ವ್ರತವನ್ನು ಆಚರಿಸುತ್ತಾನೆ. ಈ ಎಲ್ಲ ಉಪಕ್ರಮಗಳ -ಲವಾಗಿ ಸೇತುಬಂಧಕ್ಕೆ ಬೇಕಾದ ಸಾಮಗ್ರಿ-ಸಲಕರಣೆಗಳೆಲ್ಲಾ ಕೈ ಅಳತೆಯಲ್ಲೇ ಸಿಗುತ್ತಾ ಹೋಗುತ್ತವೆ. ದೊಡ್ಡ ಗಾತ್ರದ ಕಲ್ಲುಗಳನ್ನು ಮಾತ್ರವಲ್ಲದೆ, ಮರದ ಕಾಂಡ, ದಪ್ಪನೆಯ ಕೊಂಬೆಗಳು, ಅಗಲವಾಗಿರುವ ಎಲೆಗಳು ಮತ್ತು ಪೊದೆ-ಸಸ್ಯಗಳನ್ನು ಕೂಡ ಬಳಸಿ ಕೊಂಡು ನಳ ಮತ್ತು ನೀಲರ ಮೇಲುಸ್ತುವಾರಿಯಲ್ಲಿ ಕಪಿಗಳು ಸೇತುವೆಯನ್ನು ಕಟ್ಟೇಬಿಡುತ್ತವೆ.
ವಿಜ್ಞಾನವು ಇಷ್ಟೊಂದು ಮುಂದುವರಿದಿರುವ ಹಾಗೂ ಆಧುನಿಕ ನಿರ್ಮಾಣ ತಂತ್ರಜ್ಞಾನಗಳು ಲಭ್ಯವಿರುವ ಈಗಿನ ಕಾಲಘಟ್ಟದಲ್ಲಿ ಪುಟ್ಟದೊಂದು ಸೇತುವೆ ನಿರ್ಮಿಸುವುದಕ್ಕೂ ಸಾಕಷ್ಟು ದಿನಗಳು ಹಿಡಿಯುತ್ತವೆ ಅಲ್ಲವೇ? ಆದರೆ ಸುಮಾರು ೪೮ ಕಿ.ಮೀ.ನಷ್ಟು ಉದ್ದವಿರುವ ಈ ಸೇತುವೆಯ ನಿರ್ಮಾಣ ಸಂಪನ್ನಗೊಂಡಿದ್ದು ಕೇವಲ ೫ ದಿನಗಳಲ್ಲಿ! ಈ ಪರಿಯ ಸಾಧನೆ ಕೈಗೂಡಲು ಶ್ರೀರಾಮ ಬೀರಿದ ಕೃಪಾಕಟಾಕ್ಷ, ಸಮುದ್ರರಾಜ ನೀಡಿದ ಸಹಕಾರ,
ನಿರ್ಮಾಣದ ವೇಳೆ ಕಪಿಸೇನೆಯು ತೋರಿದ ಉತ್ಸಾಹ, ಶ್ರದ್ಧೆ ಮತ್ತು ವೇಗ ಯಾವ ಮಟ್ಟಿಗಿತ್ತು ಎಂಬುದನ್ನು ಊಹಿಸಿ ಕೊಳ್ಳುವುದು ನಿಮಗೆ ಬಿಟ್ಟಿದ್ದು!
(ಲೇಖಕರು ಪತ್ರಕರ್ತರು)