Saturday, 23rd November 2024

Thimmanna Bhagwat Column: ಗುರಾಣಿಯನ್ನು ಅಸ್ತ್ರವಾಗಿ ಬಳಸುವುದು ಸಲ್ಲ

ನ್ಯೂನ ಕಾನೂನು

ತಿಮ್ಮಣ್ಣ ಭಾಗ್ವತ್

ಮಹಿಳೆಯರ ಅಸಹಾಯಕ ಪರಿಸ್ಥಿತಿಯನ್ನು ಅನುಲಕ್ಷಿಸಿ ಮಾಡಲಾಗಿರುವ ಒಂದಷ್ಟು ಕಾಯ್ದೆಗಳ ಸ್ಥೂಲ ವಿವರ‌ ಗಳನ್ನು ನಿನ್ನೆಯ ಸಂಚಿಕೆಯಲ್ಲಿ ನೀಡಲಾಗಿತ್ತು. ಈ ಎಲ್ಲ ಕಾಯ್ದೆಗಳು ಪ್ರಾಮಾಣಿಕವಾಗಿ ಅನುಷ್ಠಾನ ಗೊಂಡರೆ, ಸಮಾಜಕ್ಕೆ ಅದರಿಂದ ಒಳಿತು ಮತ್ತು ಮಹಿಳೆಯರ ರಕ್ಷಣೆ ಸಾಧ್ಯ. ಆದರೆ, ಸ್ವಾಭಾವಿಕವಾಗಿ ಮಹಿಳೆಯರ ಪರವಿ ರುವ ಹಾಗೂ ಗಂಡ ಮತ್ತು ಅವನ ಸಂಬಂಧಿಗಳು ಅಪರಾಧಿಗಳೇ ಆಗಿರುತ್ತಾರೆ ಎಂಬ ಪೂರ್ವಕಲ್ಪನೆಯನ್ನು ಅನುಮೋದಿಸುವ ಈ ಕಾಯ್ದೆಗಳು, ಮುಗ್ಧ ಆಪಾದಿತರನ್ನು ಸಂಕಷ್ಟಕ್ಕೀಡುಮಾಡುವ ಅನೇಕ ಅವಕಾಶಗಳನ್ನು ಒದಗಿಸುತ್ತವೆ.

ಈ ಕಾಯ್ದೆಯ ದುರುಪಯೋಗದ ಅನೇಕ ಪ್ರಕರಣಗಳು ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾ ಲಯದ ಮುಂದೆ ವಿಚಾರಣೆಗೆ ಬಂದವು. ಐಪಿಸಿ ಸೆಕ್ಷನ್ 498-ಎ ಮತ್ತು ಕೌಟುಂಬಿಕ ದೌರ್ಜನ್ಯದ ಕಾಯ್ದೆಗಳು ಅತಿಹೆಚ್ಚು ದುರುಪಯೋಗವಾದಂಥವು. ಸುಪ್ರೀಂ ಕೋರ್ಟ್ (ಬಾರ್ ಆಂಡ್ ಬೆಂಚ್ ವರದಿ 12.09.2024) ನ್ಯಾಯ ಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠವು ವೈವಾಹಿಕ ವ್ಯಾಜ್ಯ ಪ್ರಕರಣವೊಂದರ ವಿಚಾರಣೆ ನಡೆಸಿ ಆದೇಶ ನೀಡುವಾಗ ಈ ಅವಲೋಕನವನ್ನು ಮಾಡಿತು. ದಂಪತಿಗಳು ಒಂದು ದಿನ ಕೂಡ ಒಟ್ಟಿಗೆ ವಾಸಿಸದಿದ್ದರೂ, ಗಂಡನು ಹೆಂಡತಿಯಾಗಿದ್ದವಳಿಗೆ 50 ಲಕ್ಷ ರುಪಾಯಿಗಳನ್ನು ನೀಡಬೇಕಾಗಿ ಬಂದ ಹಿಂದಿನ ಪ್ರಕರಣವೊಂದನ್ನು ನ್ಯಾಯಮೂರ್ತಿ ಗವಾಯಿ ಉಲ್ಲೇಖಿಸುತ್ತಾ, ‘498-ಎ ಕಲಂ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾನೂನು ಅತಿ ಹೆಚ್ಚು ದುರುಪಯೋಗವಾದ ಕಾನೂನುಗಳಲ್ಲಿ ಒಂದು ಎಂದು ನಾನು ತೆರೆದ ನ್ಯಾಯಾಲಯದಲ್ಲಿ ಹೇಳಿದ್ದೇನೆ’ ಎಂದರು.

ಐಪಿಸಿ ಕಲಂ 498-ಎ ಅಡಿಯಲ್ಲಿ ಮಹಿಳೆಯು ತನ್ನ ಗಂಡ ಮತ್ತು ಅತ್ತೆ-ಮಾವಂದಿರ ಮೇಲೆ ಮೇಲೆ ಸುಳ್ಳು
ಆಪಾದನೆಗಳನ್ನು ಮಾಡಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ ಅನೇಕ ನಿದರ್ಶನಗಳಿದ್ದು, ದೇಶಾದ್ಯಂತ ಈ ಕುರಿತು ಕಳವಳ ವ್ಯಕ್ತವಾಗಿದೆ. ಮುಂಬೈ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದ ಪ್ರಕರಣವೊಂದರಲ್ಲಿ, ವಯಸ್ಸಾದ ಮತ್ತು ಅಸ್ವಸ್ಥ ವ್ಯಕ್ತಿಗಳ ಮೇಲೆ ಕೂಡ ಸುಳ್ಳು ಆಪಾದನೆ ಮಾಡಿ, ವಿಚಾರಣೆಗೆ ಅಲೆದಾಡಿಸಿದ ವಿಷಯ ಕೋರ್ಟಿನ ಗಮನಕ್ಕೆ ಬಂತು. ದೂರುದಾರರು ಇರುವ ಪ್ರದೇಶದಿಂದ ಬಹಳ ದೂರವಿರುವ ಸಂಬಂಧಿಕರು ಮತ್ತು ವಿದೇಶ ದಲ್ಲಿರುವವರನ್ನೂ ಆಪಾದಿತರನ್ನಾಗಿ ಮಾಡಿ ಪ್ರಕರಣ ಎದುರಿಸುವಂತೆ ಮಾಡಿದ ಘಟನೆಗಳನ್ನೂ ನ್ಯಾಯಾಲಯ ಉಲ್ಲೇಖಿಸಿತು. ಐಪಿಸಿಯ 498-ಎ ಕಲಮನ್ನು ವೈವಾಹಿಕ ವ್ಯಾಜ್ಯ ಪ್ರಕರಣಗಳಲ್ಲಿ ನ್ಯಾಯ ಪಡೆಯುವ ಸಲುವಾಗಿ ಉಪಯೋಗಿಸುವ ಬದಲು, ಗಂಡನ ಮತ್ತು ಅವನ ಕುಟುಂಬದ ಸದಸ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಬಳಸಿ ಕೊಳ್ಳುತ್ತಿರುವ ಕುರಿತು ಕೇರಳ ಹೈಕೋರ್ಟು ಮೇ 2023ರ ಪ್ರಕರಣವೊಂದರಲ್ಲಿ ಕಳವಳ ವ್ಯಕ್ತಪಡಿಸಿತು. ಐಪಿಸಿಯ 498-ಎ ಕಲಂನ ಹೂರಣವು, ಇತ್ತೀಚೆಗೆ ಬದಲಿಯಾಗಿ ರೂಪುಗೊಂಡ ಭಾರತೀಯ ನ್ಯಾಯಸಂಹಿತೆಯ ಕಲಂ 85 ಮತ್ತು 86ರಲ್ಲಿ ಅಡಕವಾಗಿದೆ.

ಅರ್ನೇಶ್‌ಕುಮಾರ್ ವರ್ಸಸ್ ಬಿಹಾರ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಆಪಾದಿತರ ಬಂಧನದ ವಿಷಯದಲ್ಲಿ ಮುಂದೆ ನೀಡಲಾಗಿರುವ ಕೆಲವು ಮಾರ್ಗಸೂಚಿಗಳನ್ನು ನೀಡಿತು:

1) ಪೊಲೀಸ್ ಅಧಿಕಾರಿಗಳು, 498-ಎ ಕಲಮಿನ ಅಡಿಯಲ್ಲಿ ಪ್ರಕರಣ ದಾಖಲಾದ ಕೂಡಲೇ ಆಪಾದಿತರನ್ನು ಬಂಧಿಸಬಾರದು; ಬದಲಿಗೆ ಸಿಆರ್ ಪಿಸಿಯ 41ನೇ ಕಲಂ ಪ್ರಕಾರ ಬಂಧನದ ಅವಶ್ಯಕತೆ ಇದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

೨) ಪೊಲೀಸರು ಸದರಿ ಕಲಮಿನ ಎಲ್ಲಾ ನಿಬಂಧನೆಗಳನ್ನು ಪೂರೈಸಿದ ನಂತರವಷ್ಟೇ ಮ್ಯಾಜಿಸ್ಟ್ರೇಟರು
ಬಂಧನದ ವಿಸ್ತರಣೆಗೆ ಅನುಮತಿಸಬೇಕು.
೩) ಪೊಲೀಸರು ಅಥವಾ ನ್ಯಾಯಾಧೀಶರು ಈ ಆದೇಶಗಳನ್ನು ಪಾಲಿಸಲು ವಿಫಲರಾದರೆ, ಸೂಕ್ತ ಕ್ರಮಗಳಿಗೆ ಬಾಧ್ಯಸ್ಥರಾಗುತ್ತಾರೆ.

ರಾಜೇಶ್ ಶರ್ಮ ವರ್ಸಸ್ ಉತ್ತರಪ್ರದೇಶ ಸರಕಾರ ಮತ್ತು ಮಾನವ ಅಧಿಕಾರ ಸಾಮಾಜಿಕ ಕ್ರಿಯಾವೇದಿಕೆ ವರ್ಸಸ್ ಭಾರತ ಸರಕಾರ, ಚಂದ್ರಬಾನ್ ವರ್ಸಸ್ ಉತ್ತರಪ್ರದೇಶ ಸರಕಾರ- ಈ ಪ್ರಕರಣಗಳಲ್ಲಿ ಸದರಿ ಕಾಯ್ದೆಯ ದುರುಪ ಯೋಗ ಆಗಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಸುಪ್ರೀಂಕೋರ್ಟು, ಅಂಥ ದುರುಪಯೋಗವನ್ನು ತಡೆಯಲು ಅನೇಕ ಸೂಚನೆಗಳನ್ನು ನೀಡಿದೆ.

ಇಂಥ ಮತ್ತಷ್ಟು ಪ್ರಕರಣಗಳು ಹೀಗಿವೆ-

ಸರಿತಾ ವರ್ಸಸ್ ಆರ್.ರಾಮಚಂದ್ರನ್: ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು, “ಸುಶಿಕ್ಷಿತ ಮಹಿಳೆಯರು ವಿನಾಕಾರಣ ತಮ್ಮ ಅತ್ತೆ- ಮಾವಂದಿರ ಹಾಗೂ ಪತಿಯ ವಿರುದ್ಧ ಪ್ರಕರಣ ದಾಖಲಿಸುವ ವ್ಯತಿರಿಕ್ತವಾದ ಪ್ರವೃತ್ತಿ ಕಂಡುಬರುತ್ತಿದೆ. ಈ ಪ್ರಕರಣದಲ್ಲಿ, ಅಪೀಲು ಮಾಡಿದ ಮಹಿಳೆಯು ಕಾಯ್ದೆಯನ್ನು ದುರುಪಯೋಗ ಪಡಿಸಿ ಕೊಂಡು, ತನ್ನನ್ನು ಮದುವೆಯಾದ ಪಾಪಕ್ಕಾಗಿ ತನ್ನ ಗಂಡನನ್ನು ಹಾಗೂ ಅವನ ಕುಟುಂಬದ ಸದಸ್ಯರನ್ನು ಕಿರುಕುಳ ನೀಡಿ ಶೋಷಿಸುವ ಉದ್ದೇಶದಿಂದ ಮೊಕದ್ದಮೆಯನ್ನು ದಾಖಲಿಸಿರುವುದು ಕಂಡುಬರುತ್ತದೆ.

ಭಾರತದ ಕಾನೂನು ಆಯೋಗ ಮತ್ತು ಸಂಸತ್ತು ಈ ಕುರಿತು ಗಮನಹರಿಸಿ, ಈ 498-ಎ ಕಲಮನ್ನು ನಾನ್-ಕಾಗ್ನಿಜೇಬಲ್ (ಗುರುತಿಸಲಾರದ) ಮತ್ತು ಜಾಮೀನು ಇರುವ ಅಪರಾಧವೆಂದು ತಿದ್ದುಪಡಿ ಮಾಡಬೇಕೆಂದು
ನಾವು ಅಭಿಪ್ರಾಯಪಡುತ್ತೇವೆ” ಎಂದು ಆದೇಶಿಸಿತು.

ಸುಶೀಲ್‌ಕುಮಾರ್ ಶರ್ಮಾ ವರ್ಸಸ್ ಭಾರತ ಸರಕಾರ: ಈ ಪ್ರಕರಣದಲ್ಲಿ ಸುಪ್ರೀಂಕೋರ್ಟು, “ಸುಳ್ಳು ಆರೋಪ ಗಳಿಂದ ಕೂಡಿದ ನಕಲಿ ಪ್ರಕರಣಗಳಲ್ಲಿ ಆಪಾದಿತರನ್ನು ನಿರ್ದೋಷಿ ಎಂದು ಪರಿಗಣಿಸಿದ ಮಾತ್ರಕ್ಕೆ, ಅದರಿಂದಾದ ಅವಮಾನವನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಅಪ್ರಾಮಾಣಿಕ, ನಿರ್ಲಜ್ಜ ಮನಸ್ಥಿತಿ ಹೊಂದಿದ ಜನರು ತಮ್ಮ ವೈಯಕ್ತಿಕ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಈ ಕಾನೂನನ್ನು ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ತಡೆಯಲು ಶಾಸಕಾಂಗವು ಸೂಕ್ತ ಪರಿಹಾರ ಕ್ರಮಗಳನ್ನು ರೂಪಿಸಬೇಕು. ಅಲ್ಲಿಯವರೆಗೆ ಕೋರ್ಟುಗಳೇ ಈ ಕುರಿತು ಕಾಳಜಿ ವಹಿಸಬೇಕು” ಎಂದು ಅಭಿಪ್ರಾಯಪಟ್ಟಿತು.

ಅಚಿನ್ ಗುಪ್ತಾ ವರ್ಸಸ್ ಹರಿಯಾಣ ಸರಕಾರ ಮತ್ತು ಇತರರು (3ನೇ ಮೇ 2024ರ ಆದೇಶ): ಈ ಪ್ರಕರಣದಲ್ಲಿ ಸುಪ್ರೀಂಕೋರ್ಟು, 14 ವರ್ಷಗಳ ಹಿಂದೆ ಪ್ರೀತಿ ಗುಪ್ತಾ ವರ್ಸಸ್ ಜಾರ್ಖಂಡ್ ಸರಕಾರ ಪ್ರಕರಣದಲ್ಲಿ ತಾನು ಮಾಡಿದ ಸಲಹೆಗಳನ್ನು ಉಲ್ಲೇಖಿಸಿತು. ಸದರಿ ೪೯೮-ಎ ಕಲಮು ವ್ಯಾಪಕವಾಗಿ ದುರುಪಯೋಗವಾಗುತ್ತಿರುವು ದರಿಂದ, ಸರಕಾರ ಮತ್ತು ಶಾಸಕಾಂಗಗಳು ಈ ಕಲಮಿಗೆ ಸೂಕ್ತ ತಿದ್ದುಪಡಿ ಮಾಡುವತ್ತ ಗಂಭೀರವಾಗಿ ಗಮನ ಹರಿಸಬೇಕು ಮತ್ತು ಸದರಿ ಆದೇಶದ ಪ್ರತಿಯನ್ನು ಕೇಂದ್ರ ಸರಕಾರದ ಕಾನೂನು ಇಲಾಖೆಗೆ ಕಳುಹಿಸಬೇಕು ಎಂದು ಅದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವ ಕುರಿತು ಸುಪ್ರೀಂಕೋರ್ಟು ಈ ಆದೇಶದಲ್ಲಿ ಅವಲೋಕನ ಮಾಡಿತು ಮತ್ತು ಸದರಿ ಭಾರತೀಯ
ನ್ಯಾಯಸಂಹಿತೆಯನ್ನು ಜಾರಿಮಾಡುವ ಮೊದಲು ಈ ಕುರಿತಾಗಿ ಗಂಭೀರ ಚಿಂತನೆ ನಡೆಸುವಂತೆ ಸರಕಾರ ಮತ್ತು ಶಾಸಕಾಂಗವನ್ನು ಕೋರಿತು.

ಹಾಗಾದರೆ ಪರಿಹಾರವೇನು?
೪೯೮-ಎ ಕಲಂ ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಗಳ ದುರುಪಯೋಗ ಗಾಳಿಸುದ್ದಿಯಲ್ಲ, ಅದು ನ್ಯಾಯಾ ಲಯಗಳು ಒಪ್ಪಿರುವ ಸಂಗತಿ. ಕಾನೂನು ಪರಿಪಾಲನೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಜತೆಗೆ ಅಂಥ ಪ್ರಕರಣ ಗಳಿಂದಾಗುವ ಸಮಸ್ಯೆಗಳನ್ನು ನಿಭಾಯಿಸುವ ಅನಿವಾರ್ಯತೆ ಅಂಥ ದುರ್ದೈವಿ ಆಪಾದಿತರಿಗೆ ಅನಿವಾರ್ಯ.

ನಕಲಿ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮುಗ್ಧರಿಗೆ ರಕ್ಷಣೆ ನೀಡಿರುವ ಅನೇಕ ನಿದರ್ಶನಗಳಿವೆ. ಸೂಕ್ತ ನ್ಯಾಯವಾದಿಗಳ ಸಹಾಯದಿಂದ ಆಪಾದನೆಗಳಿಂದ ಖುಲಾಸೆಗೊಳ್ಳಲು ಪ್ರಯತ್ನಿಸುವುದರ ಜತೆಗೆ, ಮುಂದೆ ವಿವರಿಸಲಾಗಿರುವ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶಗಳಿವೆ:

) ಮಾನಹಾನಿ ಖಟ್ಲೆ: ನಕಲಿ ಆಪಾದನೆಗಳಿಗಾಗಿ ದೂರುದಾರರ ವಿರುದ್ಧ ಐಪಿಸಿ 500 (ಬಿಎಸ್‌ಎನ್
356) ಅಡಿಯಲ್ಲಿ ಮಾನಹಾನಿ ಖಟ್ಲೆಯನ್ನು ದಾಖಲಿಸಬಹುದು.

೨) ನಾಗರಿಕ ಪ್ರಕ್ರಿಯಾ ಸಂಹಿತೆಯ (ಸಿಪಿಸಿ) ಕಲಂ ೯ರ ಅಡಿಯಲ್ಲಿ, ನಕಲಿ ಪ್ರಕರಣಗಳಿಂದಾದ ಹಾನಿಯನ್ನು ಭರಿಸಲು ಗಂಡನು ಪತ್ನಿಯ ವಿರುದ್ಧ ಕೇಸ್ ದಾಖಲಿಸಬಹುದು.

೩) ನ್ಯಾಯಾಲಯಕ್ಕೆ ನಕಲಿ ಸಾಕ್ಷ್ಯ ಮತ್ತು ಪುರಾವೆಗಳನ್ನು ಒದಗಿಸಿದ ಅಪರಾಧಕ್ಕೆ ಭಾರತೀಯ ನ್ಯಾಯಸಂಹಿತೆ 2023ರ ಸೆಕ್ಷನ್ 182ರ ಅಡಿಯಲ್ಲಿ 6 ತಿಂಗಳವರೆಗಿನ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶಗಳಿವೆ. ಕೋರ್ಟುಗಳು ಅಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತವೆ.

ಕೌಟುಂಬಿಕ ಸಲಹಾ ಕೇಂದ್ರಗಳು ದಂಪತಿಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸಮಸ್ಯೆಯ ಶಾಂತಿಯುತ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ತೀರಾ ಇತ್ತೀಚಿನ ಪ್ರಕರಣವೊಂದರಲ್ಲಿ ಹೈಕೋರ್ಟ್ ನ್ಯಾಯಾಧೀಶರು, ಮಠವೊಂದರ ಸ್ವಾಮೀಜಿಗಳ ಸಲಹೆ ಪಡೆಯುವಂತೆ ದಂಪತಿಗಳಿಗೆ ಸೂಚಿಸಿರುವುದು ಉಲ್ಲೇಖ ನೀಯ. ಇಂಥ ದುರುಪಯೋಗ ತಡೆಯಲು ಮಹಿಳಾ ಸಂಘಟನೆಗಳು ಸಂಘಟಿತ ಪ್ರಯತ್ನ ನಡೆಸಬೇಕು.

ನಕಲಿ ಪ್ರಕರಣಗಳಲ್ಲಿ ದೂರುದಾರ ಮಹಿಳೆಯ ಗಂಡನ ಮನೆಯಲ್ಲಿರುವ ಇತರ ನಿರ್ದೋಷಿ ಮಹಿಳೆಯರು ಕೂಡ ಆರೋಪಿತರಾಗಿ ಕಿರುಕುಳಕ್ಕೆ ಒಳಗಾಗುವುದರಿಂದ, ವೈವಾಹಿಕ ಜೀವನದ ಸಣ್ಣಪುಟ್ಟ ಜಗಳದ ವಿಷಯಗಳಲ್ಲಿ ಕೂಡ ದೂರು ಕೊಡುವ ಪ್ರವೃತ್ತಿಯನ್ನು ತಡೆಯಬೇಕು.

ಹೀಗಾದಲ್ಲಿ ಒಳ್ಳೆಯದು ತ್ವರಿತ ಸಮಯದಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಲು ನ್ಯಾಯವಾದಿಗಳು ಮತ್ತು
ನ್ಯಾಯಾಂಗ ವ್ಯವಸ್ಥೆ ಸಹಕರಿಸಬೇಕು. ಆಗ ನಕಲಿ ಪ್ರಕರಣಗಳಿಂದ ತೊಂದರೆಗೊಳಗಾ ದವರಿಗೆ ಸ್ವಲ್ಪ ಮಟ್ಟಿಗಿನ ಪರಿಹಾರ ದೊರಕಿದಂತಾಗುತ್ತದೆ.

ನಾನ್-ಕಾಗ್ನಿಜೇಬಲ್ (ಗುರುತಿಸಲಾರದ) ಅಪರಾಧವೆಂದು 498-ಎ ಕಲಮಿಗೆ ತಿದ್ದು ಪಡಿ ತರಬೇಕು ಮತ್ತು ಈ ಪ್ರಕರಣಗಳಲ್ಲಿ ಜಾಮೀನು ಮಂಜೂರಿಗೆ ಕೆಳಹಂತದ ಕೋರ್ಟುಗಳಿಗೆ ವಿವೇಚನಾಧಿಕಾರವನ್ನು ನೀಡಬೇಕು.
498-ಎ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸುವ (ಕಂಪೌಂಡಬಲ್) ಅವಕಾಶವಿರುವಂತೆ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು.

ನಕಲಿ ಪ್ರಕರಣ ದಾಖಲಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಅಂಥವರ ಜತೆ ಕೈಜೋಡಿ ಸುವ ಅಧಿಕಾರಿಗಳ ವಿರುದ್ಧ ಕೂಡ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು. ಈ ಎಲ್ಲ ಕ್ರಮಗಳ ನೆರವನ್ನು ಪಡೆದುಕೊಳ್ಳುವ ಮೂಲಕ, ಅಮಾಯಕ ಮತ್ತು ನಿರ್ದೋಷಿ ಆಪಾದಿತರನ್ನು ರಕ್ಷಿಸುವುದಕ್ಕೆ ಮುಂದಾದಲ್ಲಿ, ಉತ್ತಮ ಉದ್ದೇಶಕ್ಕಾಗಿ ಅನುಷ್ಠಾನಕ್ಕೆ ಬಂದ ಕಾಯ್ದೆಯೊಂದು ಕ್ರೂರ ಆಕ್ರಮಣದ ವಿರುದ್ಧ ಗುರಾಣಿಯಾಗುವ ಬದಲು ಸ್ವತಃ ಅಸ್ತ್ರವಾಗಿ ಅಮಾಯಕರ ವಿರುದ್ಧ ದುರ್ಬಳಕೆಯಾಗುವುದನ್ನು ತಡೆಯಬಹುದು. ಶಾಸನಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ನಮ್ಮ ಸಂಸತ್ ಸದಸ್ಯರು ಮತ್ತು ಶಾಸಕರು ಈ ಅಂಶಗಳನ್ನು ಅಭ್ಯಸಿಸಿ ಸೂಕ್ತಕ್ರಮ ಕೈಗೊಳ್ಳುತ್ತಾರೆ ಎಂಬ ಆಶಯವೊಂದೇ ಉಳಿದಿರುವುದು.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)

ಇದನ್ನೂ ಓದಿ: Women’s T20 WC: ಮಹಿಳಾ ಟಿ20 ವಿಶ್ವಕಪ್‌ ವಿಜೇತರಿಗೆ ದಾಖಲೆಯ ಬಹುಮಾನ ಮೊತ್ತ ಘೋಷಿಸಿದ ಐಸಿಸಿ