Wednesday, 11th December 2024

ನೃತ್ಯರೂಪಕ, ಚಲನಚಿತ್ರ, ಮತ್ತೆರಡು ನಾಟಕ: ವೀಕೆಂಡ್ ಧಮಾಕಾ !

ತಿಳಿರು ತೋರಣ

srivathsajoshi@yahoo.com

‘ಒಮ್ಮೆ ಮಂಡೇ ಬಂದರೆ ಸಾಕಪ್ಪಾ… ಮಂಡೆಬಿಸಿ ಇಲ್ಲದೆ ಹಾಯಾಗಿರಬಹುದು!’ ಎಂದು ಸ್ಯಾಟರ್‌ಡೇ ಸಂಡೇಗಳಂದು ಅಂದು ಕೊಳ್ಳಬೇಕಾದ ಪರಿಸ್ಥಿತಿ. ಹಾಗಂತ ಇವ್ಯಾವುದು ಇಲ್ಲದಿದ್ದರೆ ಲೈಫು ಅದೆಷ್ಟು ಘನಘೋರ ಬೋರಿಂಗ್ ಅನಿಸು ತ್ತಿತ್ತು ಎಂದು ಊಹಿಸುವುದೂ ಕಷ್ಟವೇ. ಆದ್ದರಿಂದ ಇಷ್ಟೆಲ್ಲ ‘ಬಿಜಿ’ನೆಸ್‌ನ ಗೌಜಿ ಗದ್ದಲ ಇದ್ದರೇನೇ ಗಮ್ಮತ್ತು. ಇದುವೇ ಜೀವ ಇದು ಜೀವನ.

ಅಮೆರಿಕದಲ್ಲಿ ವಲಸಿಗರ ಜೀವನ ಶೈಲಿಯಲ್ಲಿ ವೀಕೆಂಡ್ ಗಳೆಂದರೆ ಸಿಕ್ಕಾಪಟ್ಟೆ ಬಿಜಿ. ಅದರಲ್ಲೂ, ದೊಡ್ಡ ನಗರಗಳಲ್ಲಿ, ಸಾವಿ ರಾರು ಸಂಖ್ಯೆಯಲ್ಲಿ ಭಾರತೀಯ ಕುಟುಂಬಗಳು ನೆಲೆಸಿರುವಲ್ಲಿ ಇದು ಅಕ್ಷರಶಃ ಸತ್ಯ. ಈಗಿನ್ನು ಸಮ್ಮರ್ ಸೀಸನ್‌ನಲ್ಲಂತೂ ಕೇಳೋದೇ ಬೇಡ. ಗ್ರಾಜ್ಯುವೇಷನ್ ಪಾರ್ಟಿಗಳು, ಪಿಕ್‌ನಿಕ್, ಗೆಟ್-ಟುಗೆದರ್‌ಗಳು, ಸತ್ಯನಾರಾಯಣ ಪೂಜೆ, ಗೃಹಪ್ರವೇಶ ಮುಂಜಿ ಮದುವೆ ಆರತಕ್ಷತೆ ಸೀಮಂತ, ಅರವತ್ತರ ಶಾಂತಿ, ಎಪ್ಪತ್ತರ ಶಾಂತಿಯೇ ಮೊದಲಾಗಿ ಖಾಸಗಿ ಸಮಾರಂಭಗಳು, ಭರತನಾಟ್ಯ ರಂಗಪ್ರವೇಶಗಳು, ಹೆತ್ತವರು/ಅತ್ತೆ-ಮಾವ ಇಲ್ಲಿಗೆ ಬಂದಿದ್ದರೆ ಅವರೊಡನೆ ಹೊರ ಸಂಚಾರಗಳು, ಪ್ರವಾಸಗಳು, ಕ್ರಿಕೆಟ್ ಟೂರ್ನ ಮೆಂಟ್‌ಗಳು, ಕನ್ನಡ ಕೂಟಗಳಂಥ ಭಾಷೆ-ಸಂಸ್ಕೃತಿ ಚೌಕಟ್ಟಿನ ಕಾರ್ಯಕ್ರಮಗಳು, ಸ್ಥಳೀಯ ಮಟ್ಟದ್ದು ಸಾಲ ದೆಂಬಂತೆ ಅಕ್ಕ/ನಾವಿಕ ರೀತಿಯ ರಾಷ್ಟ್ರೀಯ ಸಂಘಟನೆಗಳ ‘ಜಾತ್ರೆ’ಗಳು, ಮತ್ತು ಅದರ ಪೂರ್ವಭಾವಿ ತಯಾರಿಗಳು… ಎಲ್ಲದಕ್ಕೂ ವಾರಾಂತ್ಯದ ಎರಡು ದಿನಗಳೇ ಒದಗಿಬರಬೇಕಾದ ಅನಿವಾರ್ಯತೆ.

ತಮಾಷೆ ಎನಿಸಬಹುದು ಆದರೂ ವಾಸ್ತವ ಸಂಗತಿ-‘ಒಮ್ಮೆ ಮಂಡೇ ಬಂದರೆ ಸಾಕಪ್ಪಾ… ಮಂಡೆಬಿಸಿ ಇಲ್ಲದೆ ಹಾಯಾಗಿರ ಬಹುದು!’ ಎಂದು ಸ್ಯಾಟರ್‌ಡೇ ಸಂಡೇಗಳಂದು ಅಂದುಕೊಳ್ಳಬೇಕಾದ ಪರಿಸ್ಥಿತಿ. ಹಾಗಂತ ಇವ್ಯಾವುದು ಇಲ್ಲದಿದ್ದರೆ ಲೈಫು ಅದೆಷ್ಟು ಘನಘೋರ ಬೋರಿಂಗ್ ಅನಿಸುತ್ತಿತ್ತು ಎಂದು ಊಹಿಸುವುದೂ ಕಷ್ಟವೇ. ಆದ್ದರಿಂದ ಇಷ್ಟೆಲ್ಲ ‘ಬಿಜಿ’ನೆಸ್‌ನ ಗೌಜಿ ಗದ್ದಲ ಇದ್ದರೇನೇ ಗಮ್ಮತ್ತು. ಇದುವೇ ಜೀವ ಇದು ಜೀವನ.

ಇದನ್ನೇಕೆ ಹೇಳಿದೆನೆಂದರೆ ಕಳೆದ ವಾರಾಂತ್ಯ(ಮಾರ್ಚ್ ೩೦, ೩೧) ನನ್ನ ವೀಕೆಂಡ್ ಹೇಗಿತ್ತು ಎಂಬುದನ್ನು ನಿಮಗೆ ತಿಳಿಸಬೇಕು. ನನ್ನ ಡೈರಿಯ ಪುಟಗಳಿಂದ ‘ನೀವೂ ಓದಬಹುದಾದ ಭಾಗ’ವನ್ನಷ್ಟೇ ಪ್ರತ್ಯೇಕಿಸಿ ಇಲ್ಲಿ ದಾಖಲಿಸಿದರೆ ನಿಮಗದು ಅಂದಾಜಾ ಗುತ್ತದೆ. ಇಂದಿನ ಅಂಕಣದಲ್ಲಿ ನಾನೀಗ ಅದನ್ನೇ ಮಾಡುವವನಿದ್ದೇನೆ.

ಶನಿವಾರ, ೩೦ ಮಾರ್ಚ್ ೨೦೨೪ ಈ ದಿನ ಇಲ್ಲಿ ರಾಕ್‌ವಿಲ್‌ನ ಬೆಂಡರ್ ಜ್ಯೂವಿಶ್ ಕಮ್ಯುನಿಟಿ ಸೆಂಟರ್‌ನ ಸಭಾಗೃಹದಲ್ಲಿ ‘ರೂಪ ವಿರೂಪ’ ಎಂಬ ನೃತ್ಯರೂಪಕದ ಪ್ರಸ್ತುತಿ ಇತ್ತು. ವಾಷಿಂಗ್ಟನ್ ಡಿಸಿ ಪ್ರದೇಶದ ಸಕ್ರಿಯ ಕನ್ನಡಿತಿ, ಮಣಿ ಶ್ರೀನಿವಾಸ್ ನೇತೃತ್ವದ ಕಾರುಣ್ಯ ಆರ್ಟ್ಸ್ ಸಂಸ್ಥೆ ಇದನ್ನು ಏರ್ಪಡಿಸಿತ್ತು. ಕರ್ನಾಟಕದಿಂದ ಬಂದಿರುವ ಖ್ಯಾತ ನೃತ್ಯಕಲಾವಿದ/ಗುರು ಡಾ. ಸಂಜಯ ಶಾಂತಾರಾಮ್ ಮತ್ತು ಅವರ ಶಿಷ್ಯೆ ಅಂಜಲಿ ಶ್ರೀಕಾಂತ್, ಹಾಗೂ ಮಣಿ ಶ್ರೀನಿವಾಸ್‌ರ ಮಗಳು ಅನಘಾ ಶ್ರೀನಿವಾಸ್ ಈ ನೃತ್ಯರೂಪಕದ ಪ್ರಧಾನ ಭೂಮಿಕೆಯಲ್ಲಿದ್ದವರು.

ಅವರೊಂದಿಗೆ ವಿವಿಧ ವಯೋಮಾನದ ೬೦ಕ್ಕೂ ಹೆಚ್ಚು ಸ್ಥಳೀಯ ಕಲಾಭ್ಯಾಸಿ ಕನ್ನಡಿಗರು ಭಾಗವಹಿಸಿದ್ದರು. ಪ್ರಸಿದ್ಧ ಫೇರಿ ಟೇಲ್ ‘ಬ್ಯೂಟಿ ಏಂಡ್ ದ ಬೀಸ್ಟ್’ಅನ್ನು ಆಧರಿಸಿದ ನೃತ್ಯರೂಪಕ ರೂಪ ವಿರೂಪ. ಸಂಜಯ ಶಾಂತಾರಾಮ್ ಇದನ್ನು ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಐವತ್ತಕ್ಕೂ ಹೆಚ್ಚು ಸಲ ಪ್ರದರ್ಶಿಸಿದ್ದಾರಂತೆ. ಅತ್ಯಾಕರ್ಷಕ ಕಾಸ್ಟ್ಯೂಮ್ಸ್, ನೃತ್ಯ-ಸಂಗೀ
ತ-ಅಭಿನಯ-ಸಂಭಾಷಣೆಗಳ ಹದವಾದ ಹೂರಣ, ಸ್ಕ್ರೀನ್ ಪ್ರಾಜೆಕ್ಟರ್ ಮೂಲಕ ರಂಗದ ಹಿಂದಿನ ಪರದೆಯ ಮೇಲೆ ಸುಂದರ
ದೃಶ್ಯಾವಳಿ, ಬ್ರಾಡ್‌ವೇ ಶೋಗಳಿಗಿಂತ ಯಾವುದೇ ರೀತಿಯಲ್ಲಿ ಕಮ್ಮಿಯಿಲ್ಲದ ವರ್ಚಸ್ಸು. ಇದರ ವೀಕ್ಷಣೆ ಒಂದು ಅಮೋಘ
ಅನುಭವ. ಸಂಜಯ ಶಾಂತಾರಾಮ್ ಮತ್ತು ಅಂಜಲಿ ಶ್ರೀಕಾಂತ್ ರ ಪ್ರತಿಭೆ ಮೇರುಮಟ್ಟದ್ದೆಂದು ಗೊತ್ತೇ ಇದೆ.

ನನಗೆ ಅಚ್ಚರಿಯಾಗುವುದು ಇಲ್ಲೇ ಹುಟ್ಟಿಬೆಳೆದ ಅನಘಾ ಶ್ರೀನಿವಾಸ್ ಇಷ್ಟು ಚಿಕ್ಕ ವಯಸ್ಸಿನಲ್ಲಿ ಭರತನಾಟ್ಯ ಮತ್ತು ಕಥಕ್ ಎರಡರಲ್ಲೂ ಅಪ್ರತಿಮ ಸಾಧನೆ ತೋರಿ, ಇಂತಹ ಮೆಗಾಪ್ರಾಜೆಕ್ಟ್‌ಗಳ ನಿರ್ಮಾಣ, ನಿರ್ದೇಶನ, ಕೊರಿಯೊಗ್ರಫಿ ಜವಾಬ್ದಾರಿ ಯನ್ನೆಲ್ಲ- ಕಾಲೇಜ್ ವಿದ್ಯಾಭ್ಯಾಸದ ನಡುವೆಯೂ- ಹೆಗಲ ಮೇಲೆ ಹೊತ್ತುಕೊಂಡು ಸಲೀಸಾಗಿ ನಿಭಾಯಿಸುವ ರೀತಿ!

ಸ್ಪ್ರಿಂಗ್‌ಬ್ರೇಕ್‌ನ ಒಂದು ವಾರದಲ್ಲಷ್ಟೇ ತಾಲೀಮು ನಡೆಸಿ ಅತ್ಯದ್ಭುತ ಪ್ರದರ್ಶನ ನೀಡಿದ ಸ್ಥಳೀಯ ಕಿರಿ-ಹಿರಿಯ ಹವ್ಯಾಸಿಗಳ ಆಸಕ್ತಿ- ಉತ್ಸಾಹಗಳನ್ನೂ ಮೆಚ್ಚಬೇಕಾದ್ದೇ. ನೃತ್ಯರೂಪಕದ ಪ್ರಿ-ರೆಕಾರ್ಡೆಡ್ ಆಡಿಯೊ ಟ್ರ್ಯಾಕ್‌ನಲ್ಲಿ ಹಾಡುಗಳೆಲ್ಲ ಕನ್ನಡದಲ್ಲಿದ್ದವು; ಸಂಭಾಷಣೆಗೆ ಮಾತ್ರ ಇಂಗ್ಲಿಷ್ ಆಯ್ದುಕೊಂಡರೇಕೋ ಗೊತ್ತಾಗಲಿಲ್ಲ. ಶಾಸ್ತ್ರೀಯ ಸಂಗೀತಾಧಾರಿತ ಹಾಡುಗಳೆಲ್ಲ ಇಂಪಾಗಿದ್ದವು. ಸಭೆಯಲ್ಲಿ ನನ್ನ ಪಕ್ಕದಲ್ಲಿ ಕೂತಿದ್ದ ಡಾ.ಮೈ.ಶ್ರೀ.ನಟರಾಜ್ ಎಲ್ಲ ಹತ್ತಿಪ್ಪತ್ತು ರಾಗಗಳನ್ನೂ ತತ್‌ಕ್ಷಣ ಗುರುತಿಸಿ ನನ್ನಲ್ಲಿ ಹೇಳುತ್ತಿದ್ದರು.

ನನಗೆ ಗುರುತಿಸಲಿಕ್ಕಾದದ್ದು ಮೋಹನ ಮತ್ತು ಹಿಂದೋಳ ಮಾತ್ರ. ನೃತ್ಯರೂಪಕಕ್ಕೆ ಮೊದಲು ಸಂಜಯ ಶಾಂತಾರಾಮ್,
ಅಂಜಲಿ ಶ್ರೀಕಾಂತ್, ಮತ್ತು ಅನಘಾ ಶ್ರೀನಿವಾಸ್ ಸೇರಿ ಕೆಲ ನೃತ್ಯ ಭಾಗಗಳನ್ನು ಪ್ರಸ್ತುತಪಡಿಸಿದ್ದು ಕೂಡ ತುಂಬ ಚೆನ್ನಾಗಿತ್ತು. ಅರ್ಧ ನಾರೀಶ್ವರ, ಗಂಗಾವತರಣ, ರಾಮಾಯಣದಲ್ಲಿ ಶಬರಿ, ಜಟಾಯು, ರಾವಣಮೋಕ್ಷ ಸನ್ನಿವೇಶಗಳ ನಿರೂಪಣೆ, ರಾವಣನು
ತನ್ನ ಕರುಳನ್ನೇ ಹೊರತೆಗೆದು ರುದ್ರವೀಣೆಯನ್ನಾಗಿಸಿ ನುಡಿಸುವ ದೃಶ್ಯ ಮೈನವಿರೇಳಿಸುವಂತಿತ್ತು. ಒಟ್ಟಿನಲ್ಲಿ ಸೊಗಸಿನ ರಸದೌತಣ. ಕಾರ್ಯಕ್ರಮ ಅಪರಾಹ್ನ ಮೂರಕ್ಕೆ ಆರಂಭವಾಗಿ ಅರ್ಧ ಗಂಟೆಯ ಮಧ್ಯಾಂತರವೂ ಸೇರಿ ಸಂಜೆ ಆರೂವರೆಗೆ ಮುಗಿಯಿತು.

ಮೂರಕ್ಕೆ ಆರಂಭವಾಗುವ ಕಾರ್ಯಕ್ರಮಕ್ಕೆ ಎಲ್ಲರನ್ನೂ ೧:೩೦ಕ್ಕೇ ಬರಲು ಹೇಳಿ ಸಭಾಂಗಣದ ಹೊರಗೆ ಕಾಯುವಂತೆ ಮಾಡಿದ್ದು ಬೇಕಿರಲಿಲ್ಲ. ಅಲ್ಲದೇ ಟಿಕೆಟ್‌ಗಳೆಲ್ಲ ಒಂದು ವಾರ ಮೊದಲೇ ಸೋಲ್ಡ್ ಔಟ್ ಆಗಿದ್ದುವಂತೆ. ಹಾಗೆ ಬೇಗ ಬರಲಿಕ್ಕೆ
ಹೇಳಿರದಿದ್ದರೆ ಇಂಡಿಯನ್ ಸ್ಟ್ರೆಚೆಬಲ್ ಟೈಮ್ ಅಂದ್ಕೊಂಡು ಕೆಲವರು ತಡವಾಗಿ ಬಂದು ಸೀಟ್ ಹುಡುಕುವ ಪೊರಪಾಟಿನಲ್ಲಿ
ಮಿಕ್ಕವರಿಗೆಲ್ಲ ರಸಭಂಗ ಮಾಡುತ್ತಿದ್ದರೆನ್ನುವುದೂ ನಿಜವೇ. ಇನ್ನೊಂದು ಖುಷಿಯ ಸಂಗತಿಯೆಂದರೆ ಟಿಕೆಟ್ ಕಲೆಕ್ಷನ್‌ನ ಬಹುಭಾಗವು ಇಲ್ಲೊಂದಿಷ್ಟು ಕನ್ನಡಿಗರೇ ಸೇರಿ ನಡೆಸುತ್ತಿರುವ ‘ಅನ್ನಸುಧಾ’ ಚಾರಿಟಿ ಯೋಜನೆಗೆ ಹೋಗುತ್ತದೆನ್ನುವುದು. ಮಣಿ ಶ್ರೀನಿವಾಸ್ ಗೆ ಮನದಾಳದಿಂದ ಥ್ಯಾಂಕ್ಸ್.

ನೃತ್ಯರೂಪಕ ವೀಕ್ಷಣೆ ಮುಗಿಸಿ ಮನೆಗೆ ಬಂದು ಒಂಚೂರು ಊಟ ಮಾಡುವಷ್ಟೇ ಪುರುಸೊತ್ತು. ಸ್ವಾತಂತ್ರ್ಯವೀರ ಸಾವರ್ಕರ್ ಚಲನಚಿತ್ರ ವೀಕ್ಷಣೆಗೆ ರಾತ್ರಿಯ ಪ್ರದರ್ಶನಕ್ಕೆ ಎಡ್ವಾನ್ಸ್ ಬುಕಿಂಗ್ ಮಾಡಿ ಆಗಿತ್ತು. ಈಹಿಂದೆ ನಾನು ‘ಕಾಂತಾರ’ ನೋಡಿದ್ದ ಸಿನಿಮಾ ಕಾಂಪ್ಲೆಕ್ಸ್‌ನಲ್ಲೇ- ಅಂದರೆ ನಮ್ಮನೆಗೆ ಕಾಲುಗಂಟೆ ಡ್ರೈವಿಂಗ್ ದೂರದಲ್ಲಿ. ಎಂಟೂಮುಕ್ಕಾಲಕ್ಕೆ ಜಾಹಿರಾತುಗಳು ಆರಂಭವಾಗಿ ಒಂಬತ್ತಕ್ಕೆಲ್ಲ ಮೂವಿ ಶುರುವಾಗಿ ನಡುವೆ ಹತ್ತು ನಿಮಿಷಗಳ ಇಂಟರ್‌ಮಿಷನ್ ಸೇರಿ, ಮುಗಿದಾಗ ಮಧ್ಯರಾತ್ರಿ. ಭಾರತ ಸ್ವಾತಂತ್ರ್ಯಸಂಗ್ರಾಮದಲ್ಲಿ ದೇಶಭಕ್ತಿಯ ಉತ್ಕಟ ರೂಪವನ್ನು ತೋರಿದ ವಿನಾಯಕ ದಾಮೋದರ ಸಾರ್ವಕರರಿಗೆ ನಾವೆಲ್ಲ ನತಮಸ್ತಕರಾಗುವಂತೆ, ಅವರ ಜೀವನಗಾಥೆಯನ್ನು ಬೆಳ್ಳಿಪರದೆಯ ಮೇಲೆ ಇಷ್ಟು ಪರಿಣಾಮಕಾರಿಯಾಗಿ ತೋರಿಸಿದ ರಣದೀಪ್ ಹೂಡಾಗೆ ಕೂಡ ಬಿಗ್ ಸೆಲ್ಯೂಟ್ ಸಲ್ಲಲೇಬೇಕು.

ಅದೂ ಬೇರಾರದೋ ನಿರ್ಮಾಣ-ನಿರ್ದೇಶನದಲ್ಲಿ ಆರಂಭವಾಗಿದ್ದ ಪ್ರಾಜೆಕ್ಟು ಅವರೆಲ್ಲ ನಡುನೀರಿನಲ್ಲಿ ಕೈಕೊಟ್ಟು ಓಡಿದ ಮೇಲೆ ಎಲ್ಲವನ್ನೂ ತನ್ನ ಹೆಗಲಮೇಲೇ ವಹಿಸಿಕೊಂಡು ಅಚ್ಚುಕಟ್ಟಾಗಿ ಮಾಡಿಮುಗಿಸಿದ ರಣದೀಪ್‌ನ ತಾದಾತ್ಮ್ಯಕ್ಕೆ ತಲೆಬಾಗಲೇಬೇಕು. ಕಾಲಾಪಾನಿ ಎಂಬ ಪದವೊಂದೇ ಸಾಕು ಮೈಯೆಲ್ಲ ನಡುಕ ನಮಗೆ. ಆ ನರಕವನ್ನು ಪದೇ ಪದೇ ಅನುಭವಿಸಿ ಹೊರಬಂದ ಆತ್ಮ ಅದೆಷ್ಟು ಗಟ್ಟಿಯಾಗಿರಬೇಡ! ಆದರೆ ಅಂತಹ ಯೋಧನನ್ನೂ ಅನುಮಾನದಿಂದ ನೋಡುವ, ಅವಮಾ ನಿಸುವ ಜನರು ಈಗಲೂ ಇದ್ದಾರೆ, ತಿಂದುಂಡು ಅಬ್ಬೇಪಾರಿಗಳಾಗಿ ಕೃತಘ್ನತೆಯ ಮೂರ್ತರೂಪರಾಗಿ ಬದುಕುತ್ತಿದ್ದಾರೆ ಎಂದರೆ ಅಸಹ್ಯವೆನಿಸುತ್ತದೆ.

ಭಾರತೀಯ ಭಾಷೆಗಳ ಚಿತ್ರಗಳಿಗೆ ಇಲ್ಲಿನ ಚಿತ್ರಮಂದಿರಗಳು ಸಾಮಾನ್ಯವಾಗಿ ಖಾಲಿ ಹೊಡೆಯುತ್ತಿರುತ್ತವೆ. ಆದರೆ ಇಂದು ತಡರಾತ್ರಿಯ ಶೋ ಸಹ ಹೌಸ್‌ಫುಲ್ ಆಗಿತ್ತೆನ್ನುವುದು ವಿಶೇಷ. ಪ್ರೇಕ್ಷಕರಲ್ಲಿ ‘ಮರಾಠಿ ಮಾಣೂಸ್’ ಬಹುಸಂಖ್ಯೆಯಲ್ಲಿದ್ದರೆಂದು ಅವರ ಮಾತಿನಲ್ಲಿ ಗೊತ್ತಾಗುತ್ತಿತ್ತು. ಸಾವರ್ಕರರ ಸಾಹಸಗಾಥೆ ಇಂದಿನ ತಲೆಮಾರಿನವರ ತಲೆಯೊಳಗೆ ಸರಿಯಾಗಿ ಇಳಿಯಲಿ ಎಂಬುದೇ ನನ್ನ ಹಾರೈಕೆ.

ಭಾನುವಾರ, ೩೧ ಮಾರ್ಚ್ ೨೦೨೪ ಈ ದಿನ ಇಲ್ಲಿ ಆರ್ಲಿಂಗ್ಟನ್‌ನ ಸಿನೆಟಿಕ್ ಥಿಯೇಟರ್‌ನಲ್ಲಿ ರಂಗವರ್ತುಲ ತಂಡದವರಿಂದ ಕನ್ನಡ ನಾಟಕೋತ್ಸವ ಇತ್ತು. ೩೫ಕ್ಕೂ ಹೆಚ್ಚು ಸಂಖ್ಯೆಯ ಮಕ್ಕಳು ಸೇರಿ ಅಭಿನಯಿಸಿದ ‘ಅಳಿಲು ರಾಮಾಯಣ’, ಮತ್ತು ಇಲ್ಲಿನ ಹವ್ಯಾಸಿ ರಂಗಕಲಾವಿದರಿಂದ ಡಾ.ಗಿರೀಶ ಕಾರ್ನಾಡರ ‘ಹಯವದನ’ ನಾಟಕಗಳ ಪ್ರದರ್ಶನ. ಎರಡೂ ನಾಟಕಗಳ ನಿರ್ದೇಶನ- ಅಪ್ರತಿಮ ರಂಗಕಲಾವಿದ ಮತ್ತು ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ನಮ್ಮೆಲ್ಲರ ಹೆಮ್ಮೆಯ ನೀತೀಶ್ ಶ್ರೀಧರ್. ಅವರ ಪ್ರತಿಭೆ, ಉತ್ಸಾಹ, ಕ್ರಿಯಾಶೀಲತೆಗಳನ್ನು ಪ್ರಶಂಸಿಸಲು ಪದಗಳು ಸಿಗುತ್ತಿಲ್ಲ. ಸ್ವತಃ ಅತ್ಯುತ್ತಮ ನಟನೂ ಆಗಿರುವ ನೀತೀಶ್ ನನಗೊಂದು ವಿಶೇಷ ಅಚ್ಚರಿಯಾಗಿ ಭಾಸವಾಗುವುದು ನಿರ್ದೇಶಕರಾಗಿ. ಅವರೊಬ್ಬ ಪರಮಕೌಶಲವುಳ್ಳ ಕುಂಬಾರ ಎಂದು ನಾನಂದುಕೊಳ್ಳು ತ್ತೇನೆ.

ಸಾಮಾನ್ಯ ಕುಂಬಾರನಾದರೋ ಒಳ್ಳೆಯ ಆವೆಮಣ್ಣು ಸಿಕ್ಕರೆ ಚಂದದ ಮಡಕೆಗಳನ್ನು ತಯಾರಿಸಬಲ್ಲ. ಈ ನೀತೀಶ್ ಎಂಬ ರಂಗಕುಂಬಾರ ಯಾವುದೇ ಮಣ್ಣಿನಹೆಂಟೆಯನ್ನು ಕೊಟ್ಟರೂ ಅದರಿಂದ ಸುಂದರ ಕಲಾಕೃತಿ ಮೂಡಿಸಬಲ್ಲ! ಎರಡೂ ನಾಟಕಗಳಲ್ಲಿ ಸರಿಸುಮಾರು ಅರ್ಧದಷ್ಟು ಪಾತ್ರಧಾರಿಗಳದು ಇದೇ ಮೊದಲಸಲ ಸ್ಟೇಜ್ ಎಪ್ಪಿಯರೆನ್ಸ್ ಇರಬಹುದು.
ಆದರೆ ಪ್ರೇಕ್ಷಕರಾಗಿ ನಮಗೆ ಅದರ ಯಾವ ಸುಳಿವೂ ಕಾಣಲಿಲ್ಲ! ಎಲ್ಲ ವೃತ್ತಿಪರರಂತೆ ವರ್ಷಗಟ್ಟಲೆ ಪಳಗಿದವರೇನೋ ಅಂದುಕೊಳ್ಳಬೇಕು. ‘ಅಳಿಲು ರಾಮಾಯಣ’ ಪ್ರಸ್ತುತಪಡಿಸಿದ ಪುಟಾಣಿಗಳೆಲ್ಲರೂ ಚುರುಕಿನ ಅಭಿನಯದೊಂದಿಗೆ ಅಚ್ಚಕನ್ನಡ ದಲ್ಲಿ ಸಂಭಾಷಣೆಯನ್ನೊಪ್ಪಿಸಿದ ರೀತಿ ಪ್ರೇಕ್ಷಕರನ್ನೆಲ್ಲ ನಿಬ್ಬೆರಗಾಗಿಸಿತ್ತು. ಅಲ್ಲದೇ ಪೌರಾಣಿಕ ನಾಟಕವೆಂದಮೇಲೆ ಮತ್ತಷ್ಟು ತೂಕದ, ಶುದ್ಧ ಶ್ರೀಮಂತ ಕನ್ನಡ! ಕೆಲವು ಮಕ್ಕಳು ಎರಡೆರಡು ಪಾತ್ರಗಳನ್ನು ನಿಭಾಯಿಸಿದರೂ ಡೈಲಾಗ್ ಡೆಲಿವರಿ ಎಲ್ಲೂ
ತಪ್ಪಲಿಲ್ಲ. ನಿಜ, ಆ ಮಕ್ಕಳನ್ನೆಲ್ಲ ನಾಟಕಕ್ಕೆ ‘ತಯಾರು ಮಾಡುವುದರಲ್ಲಿ’ ಹೆತ್ತವರು ಮತ್ತು ಇಲ್ಲಿನ ಕನ್ನಡ-ಕಲಿಯೋಣ ಶಾಲೆಯ ಶಿಕ್ಷಕವರ್ಗದವರದೂ ಕೊಡುಗೆಯಿದೆ. ಆದರೂ ಅದೆಂಥ ನಿರರ್ಗಳ ಮಾತುಗಾರಿಕೆ! ನಾಟಕದ ಆರಂಭದಲ್ಲಿ ಸೂತ್ರ ಧಾರನು ರಾಮಾಯಣ ಕಾವ್ಯದ ಬಗ್ಗೆ ಹೇಳುವ ಮಾತೊಂದಿದೆ ‘ಇದು ಆತ್ಮಾವಲೋಕನಕ್ಕೆ ಹಿಡಿದ ಕಾವ್ಯಕನ್ನಡಿ’ ಎಂದು.

ನನಗನಿಸಿದ್ದೇನೆಂದರೆ ಅಮೆರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಈ ಚಿಲ್ಟಾರಿಗಳು ಅಳಿಲು ರಾಮಾಯಣ ನಾಟಕದಲ್ಲಿ ಆಡಿದ ಕನ್ನಡವನ್ನು ‘ಬೆಂಗ್ಳೂರ್ ಕನ್ನಡಿಗ’ರಿಗೊಮ್ಮೆ ಕೇಳಿಸಬೇಕು. ಆತ್ಮಾವಲೋಕನ ಮಾಡಬೇಕಾದ್ದು, ಮಾಡಿ ತಲೆತಗ್ಗಿಸಬೇಕಾದ್ದು ಅವರು! ‘ಅಳಿಲು ರಾಮಾಯಣ’ ಎಂಬ ಹೆಸರಿನದೇ ನಾಟಕ ಎಚ್.ಎಸ್. ವೆಂಕಟೇಶಮೂರ್ತಿಯವರು ಬರೆದು ಬಿ.ವಿ.ಕಾರಂತರು ಜನಪ್ರಿಯಗೊಳಿಸಿದ್ದೊಂದಿದೆ. ಕಥೆಗಾರ್ತಿ ವೈದೇಹಿ ಬರೆದ ‘ಅಳಿಲು ರಾಮಾಯಣ’ ನಾಟಕ ಸಹ ಬೇರೆಯೇ ಒಂದಿದೆ. ಆದರೆ ನೀತೀಶ್ ಆಯ್ದುಕೊಂಡಿದ್ದು ವೆಂಕಟರಮಣ ಐತಾಳರು ಬರೆದ ಕನ್ನಡ ರಾಮಾಯಣ ನಾಟಕವಂತೆ.

ಅದಕ್ಕೊಂದಿಷ್ಟು ಚಿಕ್ಕಪುಟ್ಟ ಮಾರ್ಪಾಡು, ಮಕ್ಕಳಿಂದ ಅಭಿನಯಕ್ಕೆ ಯೋಗ್ಯವಾಗುವ ರೀತಿಯಲ್ಲಿ ಅವರೇ ಮಾಡಿದ್ದಂತೆ. ಪುಟ್ಟಪುಟ್ಟ ಅಳಿಲುಗಳೇ ಕಥೆ ಹೇಳಿದುವೇನೋ ಎಂಬಂತೆ ಇಡೀ ರಾಮಾಯಣದ ಕಥೆ. ಮಂಥರೆ, ಶಬರಿ, ಮಾರೀಚ, ವಾಲಿ-ಸುಗ್ರೀವ, ಹನುಮ, ರಾವಣ, ಮಂಡೋದರಿ, ವಿಭೀಷಣ, ಕುಂಭಕರ್ಣ ಮುಂತಾದವರೆಲ್ಲ ಬರುತ್ತಾರೆ. ಮುದ್ದಾಗಿ ಕಾಣಿಸುತ್ತಿದ್ದ ಸೀತೆಯ ಸ್ವಯಂವರ ದೃಶ್ಯವಂತೂ ಹೃದಯಂಗಮ. ಪೋಷಾಕುಗಳು, ರಂಗಸಜ್ಜಿಕೆ, ಬೆಳಕು ಎಲ್ಲವೂ ಒಪ್ಪಓರಣ. ವೈಷ್ಣವಿ, ವಿಶಾಖ್, ಪ್ರಣವದತ್ತ್ ಮತ್ತು ಅರುಣ್ ತಂಡದ ಲೈವ್ ಹಿನ್ನೆಲೆ ಸಂಗೀತದಿಂದ ನಾಟಕದ ಮೆರುಗು ದ್ವಿಗುಣ.

ಮುಗಿದಾಗ ಪ್ರೇಕ್ಷಕರು ಎದ್ದುನಿಂತು ಕರತಾಡನ. ಜೈ ಶ್ರೀರಾಮ್ ಎಂದು ಭಾವಪರವಶ ಘೋಷಣ. ನಾಟಕದ ಸಾಫಲ್ಯಕ್ಕೆ ಬೇರೇನು ಬೇಕು ಪುರಾವೆ! ‘ಹಯವದನ’ ನಾನು ನೋಡಿದ ಗಿರೀಶ ಕಾರ್ನಾಡರ ಮೂರನೆಯ ನಾಟಕ. ತುಂಬ ವರ್ಷಗಳ ಹಿಂದೆ ಮುಂಬೈಯಲ್ಲಿ ದ್ದಾಗ ಅಲ್ಲಿನ ರಂಗಮಂದಿರವೊಂದರಲ್ಲಿ ಸಿ.ಆರ್.ಸಿಂಹ ನಿರ್ದೇಶಿಸಿ ಅಭಿನಯಿಸಿದ್ದ, ಚಿತ್ರನಟ ಲೋಕೇಶ್ ಸಹ ಇದ್ದ ‘ತುಘಲಕ್’ ನಾಟಕ ನೋಡಿದ್ದೆ. ‘ಒಬ್ಬ ಅಗಸ ತೊಳೆದಷ್ಟು ಕೊಳೆಯನ್ನು ಜಗತ್ತಿನ ಯಾವ ಧರ್ಮಗುರುವೂ ತೊಳೆದಿಲ್ಲ!’ ಡೈಲಾಗ್ ಈಗಲೂ ಕಿವಿಗಳಲ್ಲಿ ರಿಂಗಣಿಸುತ್ತಿದೆ.

ಮುಂದೆ ಅಮೆರಿಕಕ್ಕೆ ಬಂದ ಹೊಸದರಲ್ಲಿ ಶಿಕಾಗೊದಲ್ಲಿದ್ದಾಗ ವಾಷಿಂಗ್ಟನ್ ಡಿಸಿ.ಯಿಂದ ಮನೋಹರ ಕುಲಕರ್ಣಿ (ಈಗವರು ನಮ್ಮೊಂದಿಗಿಲ್ಲ) ನಿರ್ದೇಶನದ ತಂಡದವರು ಅಲ್ಲಿಗೆ ಬಂದು ಪ್ರದರ್ಶಿಸಿದ ‘ಯಯಾತಿ’ ನೋಡಿ ಬೆಕ್ಕಸಬೆರಗಾಗಿದ್ದೆ. ಅದರ ಸಂಭಾಷಣೆಗಳು ತುಂಬ ಇಷ್ಟವಾಗಿ ಆಮೇಲೆ ಯಯಾತಿ ನಾಟಕವನ್ನು ಪುಸ್ತಕರೂಪದಲ್ಲಿ ಓದಿದ್ದೆ. ಗಿರೀಶ ಕಾರ್ನಾಡ್ ಒಬ್ಬ ವ್ಯಕ್ತಿಯಾಗಿ ನಮಗಿಷ್ಟವಾಗದ ನಿಲುವಿನವರಿರಬಹುದು, ಆದರೆ ಒಬ್ಬ ನಾಟಕಕಾರನಾಗಿ ಅವರ ಪ್ರತಿಭೆ ಖಂಡಿತ ಮೆಚ್ಚ ಬೇಕಾದ್ದೇ.

ಹಯವದನ ಸಹ ಇದಕ್ಕೆ ಹೊರತಲ್ಲ. ಗಣೇಶನ ಪ್ರಾರ್ಥನೆಯಲ್ಲೇ ಆತನ ಅಪೂರ್ಣತೆ ದೇಹವೈಚಿತ್ರ್ಯವನ್ನು ಪ್ರಶ್ನಿಸುತ್ತ ಆರಂಭವಾಗುವ ನಾಟಕ, ಹಯವದನನೊಬ್ಬ ಬಂದು ತನ್ನ ಕಥೆ ಹೇಳುವ ರೀತಿಯಲ್ಲಿ ಸಾಗುತ್ತದೆ. ಆ ಕಥೆಯಲ್ಲಿ ಮುಖ್ಯ ಪಾತ್ರಗಳು ಮೂರು ಮಾತ್ರ. ದೇವದತ್ತ, ಕಪಿಲ ಮತ್ತು ಪದ್ಮಿನಿ. ಆದರೆ ಮೇಳದವರು ಮತ್ತು ಇಬ್ಬರು ಭಾಗವತರು ಸೇರಿ ಒಂಥರದಲ್ಲಿ ಅವರೂ ನಾಟಕದೊಳಗಿನ ನಾಟಕದ ಪ್ರೇಕ್ಷಕರೂ ಹೌದು ಪಾತ್ರಧಾರಿಗಳೂ ಹೌದು. ಪ್ರಾಣಸ್ನೇಹಿತರಾಗಿದ್ದ ದೇವದತ್ತ ಮತ್ತು ಕಪಿಲ; ಕಪಿಲನ ನೆರವಿಂದಲೇ ಪದ್ಮಿನಿಯೊಡನೆ ದೇವದತ್ತನ ಮದುವೆ; ಆಕೆಗೆ ಅದುಹೇಗೋ ಕಪಿಲನಲ್ಲೂ ಆಕರ್ಷಣೆ; ಶಪಥ ಈಡೇರಿಸಲು ದೇವದತ್ತ ತನ್ನ ಶಿರ ಕಡಿದುಕೊಂಡಾಗ ದುಃಖ ತಡೆಯದಾದ ಕಪಿಲನಿಂದಲೂ ತಲೆ ಸಮರ್ಪಣೆ; ದೇವಿಯ ಆಣತಿಯಂತೆ ಅವರಿಬ್ಬರ ರುಂಡ-ಮುಂಡಗಳನ್ನು ಅವರವರಿಗೇ ಜೋಡಿಸಬೇಕಿದ್ದ ಪದ್ಮಿನಿಯಿಂದ ಅಚಾತುರ್ಯದ ಜೋಡಣೆ; ಆಮೇಲೆ ಅದಲುಬದಲು ಕಂಚಿಕದಲು ಇವರಬಿಟ್ಟು ಇವರುಯಾರು ಎಂದು ಗೊಂದಲ; ಬಿಡಿಸಲಾಗದ ಕಗ್ಗಂಟು.

ನಾಟಕ ಮತ್ತಷ್ಟು ಥಾಟ್ ಪ್ರವೊಕಿಂಗ್ ಆಗುತ್ತದೆ. ಅದಕ್ಕೆ ತಕ್ಕಂತೆ ಕಾರ್ನಾಡ್ ಖದರಿನ ಖಡಕ್ ಸಂಭಾಷಣೆ. ದೇವದತ್ತ ಪಾತ್ರ ವನ್ನು ನಿರ್ವಹಿಸಿದ್ದ ನೀತೀಶ್‌ರನ್ನೂ ಮೀರಿಸಿದ ಎಕ್ಸಲೆಂಟ್ ಪರ್ಫಾರ್ಮೆನ್ಸ್ ಕಪಿಲ ಪಾತ್ರದ ಸಚಿನ್ ಮತ್ತು ಪದ್ಮಿನಿ ಪಾತ್ರದ ಸ್ವಾತಿ (ನಿಜಜೀವನದಲ್ಲಿ ಗಂಡಹೆಂಡತಿ) ಅವರಿಂದ. ಪದ್ಮಿನಿಗೆ ಹುಟ್ಟಿದ ಮಗು ಯಾರದು? ಹಯವದನನ ಬೆನ್ನ ಮೇಲೆ ಆ ಕುಮಾರನು ಸವಾರಿ ಮಾಡಿದಾಗ ಕುದುರೆಗೂ ಕುಮಾರನಿಗೂ ಪರಿಪೂರ್ಣತೆ ಹೇಗೆ ಬಂತು? ಕಥೆಯ ತಿರುಳು ಎಲ್ಲರಿಗೂ ಸುಲಭವಾಗಿ ಅರ್ಥವಾಗಿರಲಿಕ್ಕಿಲ್ಲ. ನಾಟಕ ನೋಡಿ ವಾರ ಕಳೆದ ಮೇಲೂ ಅದರ ಗುಂಗು ತಲೆಯಿಂದಿಳಿದಿರಲಿಕ್ಕಿಲ್ಲ.

ನಾಟಕದಲ್ಲಿದ್ದ ಅವಳಿ ಗೊಂಬೆಗಳು(ನಿರ್ವಹಿಸಿದ ಶ್ರೇಯಾ ಮತ್ತು ಸಿರಿ ನಿಜವಾಗಿಯೂ ಅವಳಿಗಳೇ, ಅಲ್ಲದೇ ಅವರಿಬ್ಬರು ಅಳಿಲು ರಾಮಾಯಣ ನಾಟಕದಲ್ಲೂ ಇದ್ದವರೇ!) ದೇವದತ್ತ-ಪದ್ಮಿನಿ-ಕಪಿಲರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಂತೆ ತಾವೂ ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಬೇಕಿತ್ತಲ್ಲ ಅಂತ ಪ್ರೇಕ್ಷಕರೆಲ್ಲ ಅಂದುಕೊಳ್ಳದಿರಲಿಕ್ಕಿಲ್ಲ. ಟಿಕೆಟ್ಸ್ ಸೋಲ್ಡ್ ಔಟ್ ರೀತಿಯಲ್ಲಿ ಪ್ರದರ್ಶಿತಗೊಂಡ ನಾಟಕಕ್ಕೆ ಅದೂ ಸಾರ್ಥಕ್ಯದ ಒಂದು ಮಾನದಂಡವೇ.

ಹಯವದನ ನಾಟಕದಲ್ಲಿ ರಂಗದ ಮೇಲೆ ಕಾಣಿಸಿಕೊಂಡ ಸುಮಾ ಮುರಳೀಧರ್, ಶೈಲಜಾ ಗುಂಡೂರಾವ್, ಮೀನಾ ರಾವ್, ರವಿ ಹರಪ್ಪನಹಳ್ಳಿ, ಜಯಂತ ಕಣ್ಣನೂರ್, ಗಿರೀಶ್ ತುಂಬಪುರ ಮುಂತಾದವರೆಲ್ಲ ಡ್ರಾಮಾ ವೆಟರನ್ಸ್. ಅವರೆಲ್ಲ ನೀತೀಶ್ ಯೋಜನೆ ಗಳಿಗೆ ಮುಖ್ಯ ಆಧಾರಸ್ತಂಭಗಳು. ಜೊತೆಗೆ ಪತ್ನಿ ಮೇಘನಾ. ಅಂತಹ ರಂಗಾಸಕ್ತರು ಸೇರಿ ಕರ್ನಾಟಕದ  ರಂಗವರ್ತುಲ’ದ ಅಮೆರಿಕ ಶಾಖೆಯನ್ನು ಕಳೆದ ವರ್ಷ ಇಲ್ಲಿ ಆರಂಭಿಸಿದರು.

ಇದೀಗ ಎರಡನೆಯ ವರ್ಷದಲ್ಲೇ ತಮ್ಮ ಮೂಲ ಧ್ಯೇಯೋದ್ದೇಶದ ಎರಡೂ ಕವಲುಗಳನ್ನು- ಪ್ರಸಿದ್ಧ ಕನ್ನಡ ನಾಟಕಗಳ ಪ್ರದರ್ಶನ, ಮತ್ತು ಇಲ್ಲಿ ಹೊಸಹೊಸ ರಂಗಪ್ರತಿಭೆಗಳ ಅನ್ವೇಷಣೆ ಪಾಲನೆ ಪೋಷಣೆ- ಅನುಕ್ರಮವಾಗಿ ಹಯವದನ ಮತ್ತು
ಅಳಿಲು ರಾಮಾಯಣ ನಾಟಕಗಳ ಯಶಸ್ವಿ ಪ್ರದರ್ಶನದಿಂದ ಬಲಪಡಿಸಿದಂತಾಗಿದೆ. ಕಳೆದ ವರ್ಷ ಕಂಬಾರರ ‘ಕರಿಮಾಯಿ’ ನಾಟಕ ಪ್ರದರ್ಶನ, ಮಂಡ್ಯ ರಮೇಶ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿ ಅವರಿಗೆ ರಂಗಸಿರಿ ಪ್ರಶಸ್ತಿಗೌರವ ಅರ್ಪಿಸಿದ್ದರೆ ಈಬಾರಿ ರಂಗಸಿರಿ ಪ್ರಶಸ್ತಿಯ ಗೌರವ ಅಮೆರಿಕದಲ್ಲಿ ಕಳೆದ ನಾಲ್ಕೈದು ದಶಕಗಳಲ್ಲಿ ಕನ್ನಡ ನಾಟಕಗಳನ್ನು ಬರೆದು ನಿರ್ದೇಶಿಸಿ ನಟಿಸಿ ಸಾಕಷ್ಟು ಕೃಷಿ ಮಾಡಿರುವ ಹಿರಿಯ ಪ್ರತಿಭೆ ಡಾ. ಮೈ. ಶ್ರೀ. ನಟರಾಜರಿಗೆ.

ಇಂತಹ ಅರ್ಥಪೂರ್ಣ ಕನ್ನಡ ಕೆಲಸಗಳು ಹೊರದೇಶಗಳಲ್ಲಿ ಸದ್ದಿಲ್ಲದೆ ನಡೆಯುತ್ತಿವೆಯೆನ್ನುವುದನ್ನು ತಾಯಿ ಭುವನೇಶ್ವರಿ ಗಮನಿಸದೇ ಇರಲಾರಳು. ಇದೇನಿದು, ಅಂಕಣಬರಹದೊಳಗೊಂದು ಡೈರಿಯ ಪುಟದೊಳಗೊಂದು ನಾಟಕವಿಮರ್ಶೆ ಯೊಳಗೊಂದು ಅನಿವಾಸಿ ಕಲರವದಲ್ಲೊಂದು… ಎಂದನಿಸಿತೇ? ಹಯವದನ ವೀಕ್ಷಣೆಯ ಪ್ರಭಾವವಿರಬಹುದು ಅಂತೀರಾ?