Sunday, 13th October 2024

ಪಶ್ಚಿಮದ ಸಂಸ್ಕೃತಿಯಿಂದ ಮುಕ್ತಿಯಿಲ್ಲವೆ ?

ದಾಸ್ ಕ್ಯಾಪಿಟಲ್‌

dascapital1205@gmail.com

ಮತ್ತೊಂದು ಹೊಸ ವರ್ಷದ ಸಂಭ್ರಮಕ್ಕೆ ಜಗತ್ತು ಕಾಲಿಡುತ್ತಿದೆ. ಪ್ರತಿವರ್ಷದಂತೆ ಈ ಸಂದರ್ಭ ಸನ್ನಿವೇಶದಲ್ಲಿ ವಿಶ್ವದ ಜೊತೆ ಭಾರತವು ಪ್ರತಿ ವರ್ಷವೂ ಸೇರಿಕೊಳ್ಳುತ್ತದೆ. ಡಿಸೆಂಬರ್ ೩೧ರ ಮಧ್ಯರಾತ್ರೆ ೧೨ ಗಂಟೆಯ ಮರುಕ್ಷಣವೇ ಹೊಸವರ್ಷ ಎಂದು ಸಂಭ್ರಮಿಸುವುದು ಎಷ್ಟರಮಟ್ಟಿಗೆ ಪ್ರಾಕೃತಿಕವಾದುದು ಮತ್ತು ಅರ್ಥವತ್ತಾದುದು? ಈ ತಿಳಿವಳಿಕೆ ಅಥವಾ ಕಲ್ಪನೆಯು ಕ್ಯಾಲೆಂಡರ್ ಪ್ರಕಾರ ಸರಿಯೆನಿಸಬಹುದೇ ಹೊರತು ಭಾರತೀಯತೆಯ ಮೂಲದಿಂದಲ್ಲ.

ಆದ್ದರಿಂದ ವಾಸ್ತವದಲ್ಲಿ ಇದು ಹೊಸ ವರ್ಷ ಅಂತಾಗುವುದು ಅಪ್ರಾಕೃತಿಕ ಮತ್ತು ಅರ್ಥಹೀನವಾದ ಕಲ್ಪನೆಯಿದ್ದಾಗ ಮಾತ್ರ. ಯಾವ ಪಲ್ಲಟಗಳು ಪ್ರಕೃತಿಯಗಲೀ ಮನುಷ್ಯನಗಲೀ ಸಂಭವಿಸದೆ ಹೊಸತದರ ಭಾವವಾದರೂ ಹೇಗೆ ಮೂಡಲು ಸಾಧ್ಯ? ಸಂವತ್ಸರ ಅಥವಾ ಯುಗವೊಂದರ ಪಲ್ಲಟಗಳಿಗೆ ಪ್ರಕೃತಿಯ ಕೂಸಾದ ಮಾನವ ಕುಲದ ಒಟ್ಟೂ ಮನೋಧರ್ಮದಗುವ ಪರಿವರ್ತನೆಯೇ ಹೊಸವರ್ಷ ಅಥವಾ ಇನ್ನೊಂದು ಯುಗಕ್ಕೆ ಆಧಾರವಾಗ ಬೇಕೆಂಬುದನ್ನು ನಮ್ಮ ಹಿರಿಯರು ಒಂದು ಕಥನದಲ್ಲಿ ನಿದರ್ಶಿಸಿ ದ್ದಾರೆ. ಏನದು?

ಕುರುಕ್ಷೇತ್ರ ಮಹಾಯುದ್ಧ ಮುಗಿದು ಹಸ್ತಿನೆಯ ಅಧಿಕಾರ ಪಾಂಡವರಿಗೆ ದೊರಕಿ ಧರ್ಮ ರಾಯ ಆಡಳಿತ ಮಾಡುತ್ತಿದ್ದ ಸಂದ ರ್ಭದಲ್ಲಿ ಆದ ಒಂದು ದೃಷ್ಟಾಂತ ಹೀಗಿದೆ: ಒಬ್ಬಾತ ಇನ್ನೊಬ್ಬನಿಂದ ಕೊಂಡುಕೊಂಡ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ನಿಧಿಯನ್ನು ಕಂಡು, ಅದು ತನ್ನದಲ್ಲ, ತನಗೆ ಜಮೀನು ಕೊಟ್ಟ ಆ ಇನ್ನೊಬ್ಬನದ್ದು ಎಂದು ಅವನಲ್ಲಿ ಹೇಳಿದನಂತೆ. ಜಮೀನು ಕೊಟ್ಟ ಆ ಇನ್ನೊಬ್ಬ, ಆ ನಿಧಿ ನಿನ್ನದು, ನಾನು ನಿನಗೆ ಮಾರಿದ್ದೇನೆಂದ ಮೇಲೆ ಅದು ಜಮೀನು ಕೊಂಡುಕೊಂಡ ನಿನ್ನ ಸ್ವತ್ತಾಗುತ್ತದೆ.

ಆದ್ದರಿಂದ ನಿಧಿ ನನಗೆ ಸೇರಿದ್ದಲ್ಲ ಎಂದನಂತೆ. ಪರಸ್ಪರ ಮಾತುಕತೆ ನಡೆಸಿದರೂ ಸಮಸ್ಯೆ ಈಡೇರದೆ ಇಬ್ಬರೂ ಧರ್ಮರಾಯನ ಬಳಿ ಬಂದು ವಿಷಯವನ್ನು ವಿಶದವಾಗಿ ವಿವರಿಸಿದರು. ಸ್ವಲ್ಪ ಸಮಯ ಆಲೋಚಿಸಿದ ಧರ್ಮರಾಯ ಅವರೀರ್ವರಿಗೆ, ‘ನೀವಿಬ್ಬರೂ ನಾಳೆ ಬನ್ನಿ, ತೀರ್ಪು ನೀಡುತ್ತೇನೆ’ ಎಂದನಂತೆ. ಆ ಮಾತಿಗೊಪ್ಪಿದ ಇಬ್ಬರೂ ಮರುದಿನ ಬೆಳಗ್ಗೆ ಧರ್ಮಜನಲ್ಲಿಗೆ
ಬಂದರು.

ಧರ್ಮರಾಯ ಇಬ್ಬರನ್ನೂ ಮತ್ತೆ ವಿಚಾರಿಸ ತೊಡಗಿದ. ಆದರೆ ಆ ಹೊತ್ತಿಗೆ ಇಬ್ಬರ ಮಾತಿನ ಧಾಟಿಯೂ ಬದಲಾಗಿತ್ತು. ಇಬ್ಬರೂ ನಿಧಿಯು ತನ್ನದೇ ಎಂದು ವಾದ ಮಾಡುತ್ತಿರುವುದನ್ನು ಗಮನಿಸಿದ ಧರ್ಮರಾಯನಿಗೆ ಅಚ್ಚರಿಯಾಯಿಯಂತೆ. ರಾತ್ರೆ ಕಳೆದು ಬೆಳಗಾಗುವುದರೊಳಗೆ ಇಬ್ಬರಲ್ಲೂ ಆದ ಬದಲಾವಣೆಗಳನ್ನು ಕಂಡು ಅಚ್ಚರಿಗೊಂಡುಕಾಲಜ್ಞಾನಿಗಳಾದ ತನ್ನ ತಮ್ಮಂದಿರಾದ ನಕುಲ- ಸಹ ದೇವರನ್ನು ಕರೆದು, ಇವರೀರ್ವರಲ್ಲೂ ಆದ ಈ ವಿಲಕ್ಷಣ ಪರಿವರ್ತನೆಗೆ ಕಾರಣವೇನೆಂದು ಕೇಳಿದ.

ಅವರೀರ್ವರು ಅಣ್ಣನಿಗೆ ಉತ್ತರಿಸಿದ್ದು ಹೀಗೆ: ದ್ವಾಪರ ಸರಿದು ಕಲಿಯುಗ ಕಾಲಿಡುತ್ತಿದೆಯಷ್ಟೆ. ಅದರ ಪ್ರಭಾವವಿದು ಎಂದು. ಹಾಗೆ ನೋಡಿದರೆ, ಅಭಿಮನ್ಯುವಿನನ್ನು ಹಿಂಬದಿಯಿಂದ ಹೊಡೆದಾಗಲೇ ಕಲಿಗಾಲ ಆರಂಭವಾಗಿತ್ತೆಂದು ಭಾರತ ವ್ಯಾಖ್ಯಾನ ಕಾರರು ಹೇಳುತ್ತಾರೆ. ಇದರಿಂದ ಸ್ಪಷ್ಟವಾಗೋದು ಏನೆಂದರೆ, ಮನುಷ್ಯನ ನಡೆನುಡಿಗಳು, ಚಿಂತನೆಗಳಲ್ಲಿ ಆಗುವ ಮನೋ ಸಹಜ ವಿಲಕ್ಷಣಗಳು ಒಂದು ಪರಿವರ್ತನೆಯ ಶಕೆಗೆ ಕಾರಣವಾಗುತ್ತದೆಯೇ ಹೊರತು ದಿನ-ದಿನಾಂಕ- ಸಮಯ ಇವುಗಳು ಕ್ಯಾಲೆಂಡರಿನಗುವ ಪರಿವರ್ತನೆಯೇ ಬಿಟ್ಟರೆ ಬೇರೆ ಯಾವ ದೊಡ್ಡ ಮಹತ್ತ್ವದ ಬೆಳವಣಿಗೆಯೂ ಆಗುವುದಿಲ್ಲ ಎಂದು.

ಈ ಯಾವ ಕಲ್ಪನೆಯೂ ಇಲ್ಲದ ಜನರಿಗೆ ಎಷ್ಟು ಹೊಸವರ್ಷ ಬಂದರೇನು, ಬಿಟ್ಟರೇನು? ಬದುಕು ಅನುಭವಿಸುವ ಕಷ್ಟಗಳಿಂದ ಬಿಡುಗಡೆ ದೊರೆತರೆ ಅದೇ ಹೊಸವರ್ಷವೆನಿಸುತ್ತದೆ. ಯುಗಾದಿ ನಮಗೆ ಹೊಸ ವರ್ಷ ಅನ್ನುವುದರಲ್ಲಿ ಅರ್ಥವಿದೆ. ನಾವು ಬದಲಾಗದಿದ್ದರೂ ಕೊನೆಯ ಪಕ್ಷ ನಮ್ಮ ಇರವಿಗೆ ಕಾರಣವಾದ ಈ ಪರಿಸರದಲ್ಲಿ ಬದಲಾವಣೆಗಳಾಗುತ್ತವೆ. ಅವು ನಿತ್ಯದ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಈ ಭಾರತೀಯ ಪ್ರಜ್ಞೆಗೆ
ಹೊರತಾದವರು ಪಶ್ಚಿಮದವರು.

ಭಾರತೀಯ ಪ್ರಜ್ಞೆಯನ್ನು ದಮನ ಮಾಡುವ ಅವರ ಧೋರಣೆಯಿಂದಲೇ ನಮ್ಮ ಅಧ್ಯಾತ್ಮಿಕ, ತಾತ್ವಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ಸಂಪತ್ತಿಗೆ ಗ್ರಹಣ ಹಿಡಿದಿದ್ದು. ಅಥವಾ ನಾವು ಹಿಡಿಸಿಕೊಂಡಿದ್ದು! ರಾತ್ರೆ ೧೨ ಗಂಟೆಗೆ ಆಚರಣೆ ಮಾಡುವವರು, ‘ಜಗತ್ತು ಹೀಗೆಯೇ ಇದೆ. ಅದಕ್ಕೆ ನಾವೂ ಹೀಗೆ ಇರುತ್ತೇವೆ’ ಎಂದು ಸಮರ್ಥನೆ ಮಾಡುವುದು ತೀರಾ ತಲೆಯಿದ್ದವರು ಮಾಡುವ ವಾದವಾಗುವುದಿಲ್ಲ. ಅವರು ಹೊಸವರ್ಷಕ್ಕೆ ಪ್ರತಿಬಾರಿಯೂ ಆ ರಾತ್ರೆ ಕಾಯುವಾಗ ನಾವು ಅವರೊಂದಿಗೆ ಕಾಯುವುದು ಶುದ್ಧ
ಮೂರ್ಖತನ.

ಆ ಹೊಸವರ್ಷದ ಸಂಭ್ರಮ ಅವರಿಗೆ ಮಜಾ, ಮೋಜು, ಮಸ್ತಿಯಲ್ಲಿ ಆಧುನಿಕತೆಯ ಗುಂಗಿನಲ್ಲಿ ಆಚರಣೆಯಾಗುವಂತದ್ದು. ನಮ್ಮದು ಹಾಗಲ್ಲವೇ ಅಲ್ಲ. ರಾತ್ರೆ ಆಚರಣೆ ಮಾಡೋದು ನಮ್ಮ ಪರಂಪರೆಯದ್ದಲ್ಲ. ಅದಕ್ಕೆ ಸಾಕ್ಷಿಯಾಗಬಲ್ಲ ಬೇರೆಯದೇ ಸಂಭ್ರಮ ನಮ್ಮಲ್ಲಿವೆ. ನಮ್ಮ ಪೂರ್ವಜರ ಕಲ್ಪನೆಗೆ ವಿರುದ್ಧವಾದ ಪೂರ್ತಿಯಾಗಿ ಪಶ್ಚಿಮದವರು ಸೃಷ್ಟಿಸಿದ ಕಾಲಕಲ್ಪನೆಯಲ್ಲಿ ನಾವು ಹೊಸವರ್ಷವನ್ನು ಆಚರಣೆ ಮಾಡೋದು ನಮ್ಮಲ್ಲಿ ಇಂದೂ ಇದ್ದು ಮುಂದೂವರೆದಿರುವ ಮನೋದಾಸ್ಯವನ್ನು ಸೂಚಿಸುತ್ತದೆ.

ನಮ್ಮ ನಮ್ಮ ಜೀವನಕ್ರಮ, ಜೀವನಶ್ರದ್ಧೆ, ಬಹುರೂಪಿ ಸಂಸ್ಕೃತಿಗಳುಳ್ಳ ಏಕರೂಪತೆಯ ಸ್ವಾತಂತ್ರ್ಯವನ್ನು ಕಾಲಕ್ರಮೇಣ ಮೊಟಕುಗೊಳಿಸಬಹುದಾದ ಹುನ್ನಾರ ಮೊಳಕೆಯೊಂದು ಚಿಗುರೊಡೆದು ಬೆಳೆಯುತ್ತಿರುವುದು ಇಂಥ ಆಚರಣೆಯಲ್ಲಿಡಗಿದೆ ಯೆಂಬ ಅರಿವು ನಮಗಾಗಬೇಕು. ಅನ್ಯ ಆಚರಣೆಯೊಂದರ ನಂಬಿಕೆಯನ್ನು ನಾವಿಷ್ಟು ಗಾಢವಾಗಿ ಒಳಬಿಟ್ಟುಕೊಳ್ಳುವುದು, ಅನುಸರಿಸುವುದು ಹಿತವಲ್ಲ.

ಸಮರ್ಥನೀಯವೂ ಅಲ್ಲ. ಹೊಸವರ್ಷದ ಆಚರಣೆಯೆಂದರೆ ಕೇವಲ ತಿನ್ನುವುದು -ಕುಡಿಯುವುದು- ಉಡುವುದು- ಕೂಡುವುದೇ? ಶಿಷ್ಟತೆ-ಸಭ್ಯತೆ-ಸದಭಿರುಚಿಗಳ ಪ್ರಜ್ಞೆ ಬೇಡವೇ? ನಪ್ರಮದಿತವ್ಯಂ-ಇದನ್ನು ದಾಟಬಾರದು ಎಂಬ ಅರಿವನ್ನು ನಮ್ಮ ನಮ್ಮ ಬುದ್ಧಿ ಭಾವದಲ್ಲಿ ನಮ್ಮ ಪೂರ್ವಿಕರು ನಿರ್ದೇಶಿಸಿzರೆ ಎಂಬ ಪ್ರಜ್ಞೆ ನಮ್ಮಲ್ಲಿ ಎಚ್ಚರವಿದ್ದರೆ ಪ್ರತಿವರ್ಷ ಇಂಥ ಸಂಭ್ರಮಗಳಿಗೆ ಮನಸು ಹದಗೊಳ್ಳಲು ಹಿಂಜರಿದೀತು.

ಯಾವ ಬಗೆಯಲ್ಲೂ ಹೊಸತನವನ್ನು ಸೃಜಿಸಿದ ಈ ಕ್ಯಾಲೆಂಡರ್ ಬದಲಾಗುವ ಹೊಸವರ್ಷದ ಆಚರಣೆಯಿಂದ ದೇಹ, ಮನಸ್ಸು, ಮಾತು, ಚಿಂತನೆಗಳಲ್ಲಿ ಮತ್ತಷ್ಟು ಮಾಲಿನ್ಯವನ್ನು ಆಹ್ವಾನಿಸಿಕೊಂಡು ಬದುಕುವ ಹಂಗು ಮತ್ತು ಸಂಭ್ರಮ
ನಮಗೇಕೆ ಬೇಕು? ಬಹುಬೇಗ ಸ್ವಂತಿಕೆ, ಸಂಸ್ಕೃತಿಯನ್ನು ನಾಶಗೊಳಿಸುವ ಈ ಸಂಭ್ರಮ ಯಾವ ಸತ್ತ್ವವನ್ನೂ ಭವಿಷ್ಯದಲ್ಲಿ
ಉಳಿಸದೇ ಹಾಳುಗೆಡುವುತ್ತಿದೆ ಎಂಬುದು ನಮಗೆ ಅರ್ಥವಾಗುವುದು ಯಾವಾಗ? ಪಶ್ಚಿಮದ ಇಂಥ ಆಚರಣೆಗಳಿಗೆ ಬಡತನದ ಇರುವ ನಮ್ಮ ಹಳ್ಳಿಗಳೂ ಸಂಭ್ರಮಿಸುತ್ತವೆಯೆಂದರೆ ಸಾಂಸ್ಕೃತಿಕವಾದ ಆಕ್ರಮಣದ ವೇಗ ಎಷ್ಟಿರಬಹುದೆಂಬುದನ್ನು ಊಹಿಸಬಹುದು!

ಇಂಥ ಸಮ್ಮೋಹನದ ಹಿಂದೆ ಕುಟಿಲತೆಯಿದೆ. ಕುಹಕವಿದೆ. ನಮ್ಮದ್ದನ್ನು ನಿರ್ಮೂಲನಗೊಳಿಸುವ ಸಂಚಿದೆ. ನಮ್ಮನ್ನು ಅಸ್ಥಿರಗೊಳಿಸುವ ಹುನ್ನಾರವಿದೆ. ಈ ಜಗತ್ತಿನೊಂದಿಗೆ ಬದುಕುವ ನಾವು ಬದಲಾದ ದಿನಾಂಕ, ಸಮಯಗಳುಳ್ಳ ಕ್ಯಾಲೆಂಡರಿಗಷ್ಟೇ
ಸೀಮಿತವಾಗಿ ಅವಲಂಬಿತವಾದರೆ ಸಾಕು. ಆಚರಣೆಯ ಅಗತ್ಯವಿಲ್ಲ, ಆವಶ್ಯಕತೆಯಿಲ್ಲ. ನಮ್ಮ ಜೀವನಶೈಲಿ, ಜೀವ ಕ್ರಮದಲ್ಲಿ ಅವರ ಆಚರಣೆಯ ಛಾಪಿನ ಅನುಕರಣೆ ಬೇಡ. ಇಂಗ್ಲಿಷ್, ಗ್ರೆಗೋರಿಯನ್, ಕ್ರೈಸ್ತ ಕ್ಯಾಲೆಂಡರಿನ ಪ್ರಕಾರದ ಈ ಹೊಸ ವರ್ಷಾಚರಣೆಗೆ ನಾವು ಸಂಭ್ರಮಿಸುವುದಾದರೂ ಎಷ್ಟು ಅಪ್ರಬುದ್ಧ ಮತ್ತು ಅಸಮಂಜಸವೆಂದು ತಿಳಿದರೆ ಹಾಸ್ಯಾಸ್ಪದ ವೆನಿಸುತ್ತದೆ.

ಖಂಡಿತವಾಗಿಯೂ ಬದಲಾಗುವ ಕ್ಯಾಲೆಂಡರ್ ಅನ್ನು ನಾವು ಅನುಸರಿಸೋಣ. ಆದರೆ, ನಮ್ಮ ಆಚರಣೆಗಳನ್ನು ಅದು ನಿರ್ಧರಿಸುವುದು ಬೇಡ. ಅವರ ಆಚರಣೆಗಳನ್ನು ನಾವು ಸಂಭ್ರಮಿಸುವುದೂ ಬೇಡ. ಅವರದ್ದೆಲ್ಲವೂ ಅವರ ಸ್ಥಳೀಯತೆಯ ಸತ್ತ್ವದಿಂದ ಹುಟ್ಟಿರುವಂತದ್ದು. ಹಾಗೆ ಸ್ವೀಕರಿಸೋಣ. ತಪ್ಪಿಲ್ಲ. ಆದರೆ ನಮ್ಮದು ಮಾತ್ರ ಅವರಿಂದ ಆಮದು ಬಂದ ಸಂಸ್ಕೃತಿಯ ಅಂಧಾನುಕರಣೆಯಾಗುವುದು ಏಕೆ? ಎಲ್ಲದಕ್ಕೂ ಅವರನ್ನೇ ಅನುಸರಿಸುತ್ತಾ ಹೋದರೆ ನಮ್ಮ ಐತಿಹಾಸಿಕ ಪ್ರಾಚೀನತೆ, ಪರಂಪರೆ, ಘನತೆ, ಔದಾರ್ಯ, ವ್ಯಾಪಕತೆಗಳ ಶ್ರೇಷ್ಠತೆಯನ್ನು ಯಾವಾಗ ನಾವು ಎತ್ತಿಹಿಡಿಯೋದು? ಇದು ನಮ್ಮ ಆತ್ಮವಿಸ್ಮೃತಿಯಲ್ಲದೆ ಇನ್ನೇನು? ಹೀಗೆ ಮುಂದುವರೆದರೆ ಭವಿಷ್ಯದ ಪೀಳಿಗೆಗೆ ನಾವು ಉಳಿಸುವ ನಮ್ಮತನವಾದರೂ ಏನು? ನಮ್ಮ ಎಲ್ಲಾ ಅಸ್ತಿತ್ವವನ್ನು ನಿಂದಿಸುತ್ತಾ, ಅವಮಾನಿಸುತ್ತಾ, ಹೀಗಳೆಯುತ್ತಾ ಬಂದ ಪಶ್ಚಿಮದವರ ಅನುಕರಣೆಗೆ ತಡೆ ಯಾವಾಗ? ಅಥವಾ ಅವರಿಂದ ಮುಕ್ತರಾಗಿ ಬದುಕುವುದಕ್ಕೆ ನಮಗೆ ಸಾಧ್ಯವಿಲ್ಲವೆ? ಅಥವಾ ಯೂರೋಪಿನಿಂದ ಆಮದಾದ ಎಡಪಂಥದ ಚಿಂತನೆಗಳಿಂದ ಹೊರಬರುವ ಆಸಕ್ತಿ, ಒಲವು ನಮಗಿಲ್ಲವೆ? ಹೀಗೆ ನಾವೆ ಯೋಚಿಸಬೇಕಾದುದು ಸದ್ಯ ಮತ್ತು
ಶಾಶ್ವತದ ಅನಿವಾರ್ಯವಾದ ಅಗತ್ಯವಾಗಿದೆ.

ನಮ್ಮ ಎಲ್ಲ ನಂಬಿಕೆ, ಧರ್ಮ, ಆಚರಣೆ, ಸಂಪ್ರದಾಯ, ಪರಂಪರೆ, ಇತಿಹಾಸ, ರಾಜಕಾರಣ, ಅರ್ಥಶಾಸ, ಕಲೆ, ವಾಸ್ತುಶಿಲ್ಪ, ವಿeನ, ಸಂಸ್ಕೃತಿ, ಮಹಾಕಾವ್ಯಗಳು, ಪುರಾಣಗಳು, ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ಬೆರಗುಗೊಳಿಸುವ ಸಿದ್ಧಿ- ಇವುಗಳ ಮೇಲೆ ಈಗಾಗಲೇ ಬೌದ್ಧಿಕ, ಸಾಂಸ್ಕೃತಿಕ ಆಕ್ರಮಣಗಳು, ದುರಾಕ್ರಮಣಗಳು ನಡೆದೇ ಹೋಗಿವೆ. ಇವುಗಳ ಮೇಲೆ ಶ್ರದ್ಧೆ, ನಿಷ್ಠೆ, ನಂಬಿಕೆ ಉಳಿಸಿಕೊಂಡು ಇರುವಷ್ಟನ್ನು ಜತನವಾಗಿಯೇ ಉಳಿಸಿ, ಬಾಳಿಸಿ ಅಂತೆಯೇ ಅಳವಡಿಸಿಕೊಂಡು ಬದುಕಿದರು, ನಮ್ಮನ್ನಗಲಿ ದವರು ನಮ್ಮ ಪೂರ್ವಜರು. ಈ ಎಲ್ಲದರ ಬಗ್ಗೆ ನಮ್ಮ ಆತ್ಮವಿಸ್ಮೃತಿ ಹುಟ್ಟಿಸುವಂತೆ ಅಪವ್ಯಾಖ್ಯಾನ, ಅಪ ಸಿದ್ಧಾಂತ ಗಳನ್ನು ಮೆರೆಯಿಸುವ, ದಿಕ್ಕೂ ತಪ್ಪಿಸುವ, ಎಲ್ಲೂ ಪ್ರಚಾರ ಮಾಡಿಸುವ, Sacred Books of the East, Orientalism  ಮುಂತಾದ ಭಾರತ ತೇಜೋವಧೆಯ ಪರಂಪರೆಯನ್ನು ಮೆಕಾಲೇ ಸಾಹೇಬ ಆರಂಭಿಸಿದ!

ಅವನದೇ ಬರೆದ ಈ ಮಾತನ್ನು ನೋಡಿ: ಯಾವ ಜನರು ತಮ್ಮ ಪ್ರಾಚೀನ ಪೂರ್ವಜರ ಸಾಧನೆ, ಸಿದ್ಧಿಗಳಲ್ಲಿ ಅಭಿಮಾನ
ತಾಳಲಾರರೋ ಅವರು ಭವಿಷ್ಯದ ಪೀಳಿಗೆಗಳು ಅಭಿಮಾನ ಪಡುವಂಥ ಯಾವ ಮಹತ್ಸಾಧನೆಗಳನ್ನು ಮಾಡಲಾರರು!
ಈಗ ನಾವು ಏನು ಮಾಡಬೇಕೆಂಬುದನ್ನು ಗಂಭೀರವಾಗೇ ಯೋಚಿಸಬೇಕಾಗಿದೆ. ಮೊದಲು ಜ್ಞಾನೋದಯವಾಗಬೇಕಿದೆ!

Read E-Paper click here