ನ್ಯಾಯದ ಗಂಟೆ
ಪಿ.ಟಿ.ಮೇದಪ್ಪ
ಇದು ಚರ್ವಿತಚರ್ವಣ ಎನಿಸಬಹುದು, ಆದರೆ ಹೇಳದೆ ವಿಧಿಯಿಲ್ಲ. ಬಹಳ ಹಿಂದೆಯೇ ರೆಡ್ ಇಂಡಿಯನ್ ಒಬ್ಬ ಹೇಳಿದ ಈ ಮಾತುಗಳು ಸಾರ್ವಕಾಲಿಕ ಸತ್ಯವೆನಿಸಿವೆ: ‘ನಾವು ಈ ಭೂಗೋಳವನ್ನು ನಮ್ಮ ಮುಂದಿನ ತಲೆಮಾರಿನವರಿಂದ ಸಾಲವಾಗಿ ಪಡೆದಿದ್ದೇವೆ; ಅದನ್ನು ಬಡ್ಡಿಸಹಿತ ಅವರಿಗೆ ಹಿಂದಿರು ಗಿಸುವುದು ನಮ್ಮ ಆದ್ಯ ಕರ್ತವ್ಯ’.
ಆದರೆ ಈಗಿನ ಘಟನೆಗಳನ್ನು ನೋಡಿದರೆ ಆತಂಕ ಮಾತ್ರವಲ್ಲ ಗಾಬರಿಯೂ ಆಗುತ್ತದೆ. ಕೇರಳ ಸರಕಾರ ತಾನು ಯೋಜಿಸಿಕೊಂಡಿರುವಂತೆ ಮುಂದು ವರಿಯುವ ಪ್ರಯತ್ನವನ್ನು ಇನ್ನಿಲ್ಲದಂತೆ ಮಾಡುತ್ತಿರುವುದು ಎಲ್ಲ ಪರಿಸರವಾದಿಗಳ ನಿದ್ದೆಗೆಡಿಸಿದೆ. ನನ್ನ ಪರಿಚಯದ ಸೀಮಾ ಖಲೀಲ್ ಅವರು ಸುಪ್ರಸಿದ್ಧ ಪರಿಸರವಾದಿ. ಪರಿಸರದ ಬಗ್ಗೆ ನಾವು ಅನೇಕ ಬಾರಿ ಚರ್ಚಿಸುತ್ತಿದ್ದೆವು. ಆಗ ನಾನು, ‘ಮೇಡಂ, ನಾವು ಯುದ್ಧದಲ್ಲಿ ಸೋಲುತ್ತಿದ್ದೇವೆ’ ಎಂದೆ. ಅದಕ್ಕೆ ಅವರು, ‘ನೀವಿನ್ನೂ ಎಲ್ಲಿದ್ದೀರಿ ಸರ್? ನಾವು ಈಗಾಗಲೇ ಯುದ್ಧವನ್ನು ಸೋತಾಗಿದೆ’ ಎಂದರು. ಅವರ ಮಾತು ಎಷ್ಟು ನಿಜ!
ಕೇರಳ ಸರಕಾರಕ್ಕೆ ಪಶ್ಚಿಮ ಘಟ್ಟಗಳ ಸಂರಕ್ಷಣೆ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂಬುದು ನಿತ್ಯನೂತನ ಸತ್ಯ. ಕೊಡಗಿನ ನಿತ್ಯಹರಿದ್ವರ್ಣ ಕಾಡನ್ನು ಬಗೆದು ತಲಶ್ಶೇರಿಯಿಂದ ಬೆಂಗಳೂರಿಗೆ ರೈಲುಮಾರ್ಗ ಸ್ಥಾಪಿಸಲು ಕೇರಳ ಇನ್ನಿಲ್ಲದಂತೆ ಪ್ರಯತ್ನಿಸಿತು. ಅದರ ವಿರುದ್ಧ ಕೊಡಗು ಮತ್ತು ಕೇರಳದಲ್ಲಿ
ಬೃಹತ್ ಪ್ರತಿಭಟನೆಗಳಾದ ಹಿನ್ನೆಲೆಯಲ್ಲಿ ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ಈಗ ನೋಡಿದರೆ, ಕರ್ನಾಟಕದ ಅರಣ್ಯ ಇಲಾಖೆ ಮಂತ್ರಿಗಳು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಣಾ ಯೋಜನೆಯ ವ್ಯಾಪ್ತಿಗೆ ಒಳಪಟ್ಟ ಬಂಡೀಪುರ ಅರಣ್ಯಕ್ಕೆ ಭೇಟಿಕೊಟ್ಟು, ಅಲ್ಲಿ ರಾತ್ರಿ ಪ್ರಯಾಣಿಕರು ತುರ್ತು
ಪರಿಸ್ಥಿತಿಗಳಲ್ಲಿ ಓಡಾಡುವುದರಿಂದ ವನ್ಯಮೃಗಗಳಿಗೆ ಏನಾದರೂ ತೊಂದರೆಯಾಗುತ್ತದಾ ಇಲ್ಲವಾ ಎಂದು ತಿಳಿಯಬಯಸಿದ್ದಾರಂತೆ ಎಂದೂ ತಿಳಿದು ಬಂತು. ಅಲ್ಲದೆ ಅಂಥ ಪ್ರಯತ್ನಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎಂದೂ ಗೊತ್ತಾಯಿತು.
ಒಂದು ವೇಳೆ ಕರ್ನಾಟಕ ಸರಕಾರ ಅದಕ್ಕೆ ಅವಕಾಶ ಕೊಟ್ಟರೆ, ಅದರಿಂದಾಗುವ ಪರಿಣಾಮಗಳನ್ನು ನೆನೆದು ನನಗೆ ಸಣ್ಣಗೆ ನಡುಕ ಹುಟ್ಟಿತು. ಅಗತ್ಯ ಎನ್ನುವ ನೆಪದಲ್ಲಿ ಏನೇನು ಅವ್ಯವಹಾರಗಳು, ಅಕ್ರಮಗಳು ನಡೆಯಬಹುದೆಂಬುದನ್ನು ಊಹಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುವುದು ಖಂಡಿತ ಎಂದೂ ಅರಿವಾಯಿತು. ಶಿಸ್ತಿಗೆ, ಕಾನೂನು ಪರಿಪಾಲನೆಗೆ ಎಳ್ಳಷ್ಟೂ ಬೆಲೆ ಕೊಡದ ಜನರಿಂದ ತುಂಬಿರುವ ನಮ್ಮ ಸಮಾಜವು ಇದನ್ನು ಎಷ್ಟರಮಟ್ಟಿಗೆ ದುರುಪಯೋಗ ಪಡಿಸಿಕೊಳ್ಳಬಹುದು ಎಂಬುದನ್ನು ಊಹಿಸಿಯೇ ಭಯ ಹುಟ್ಟಿತು. ಇದರ ನಡುವೆ, ಇದನ್ನು ಉಪಯೋಗಿಸಲು ಹಣ ಯಾವ ರೀತಿ ಯಲ್ಲಿ ತನ್ನ ಪಾತ್ರವನ್ನು ಮೆರೆಯಬಹುದು ಎಂದು ಊಹಿಸಲು ಸಾಧ್ಯವಾಗದಂಥ ವಾತಾವರಣವನ್ನು ನಿರ್ಮಿಸುತ್ತದೆ ಎಂಬ ಆತಂಕವೂ ಎದುರಾ ಯಿತು.
ನನ್ನ ಕಾರ್ಯಾಲಯದ ಹಿಂದಿನ ಸಹಯೋಗಿಯೊಬ್ಬರು ಒಂದು ದೃಷ್ಟಾಂತವನ್ನು ಹೇಳಿದ್ದು, ಅದು ಈಗಲೂ ನನ್ನ ನೆನಪಿನಲ್ಲಿದೆ. ಕೊಡಗಿನ ಕುಟ್ಟ, ಕಾನೂರು, ಪೊನ್ನಂಪೇಟೆ ಮೂಲಕ ಮೈಸೂರಿಗೆ ವಾಹನಗಳಲ್ಲಿ ಸಾಗುವ ಏರ್ಪಾಡು ಅಬಾಧಿತವಾಗಿ ಮುಂದುವರಿದಿತ್ತು. ಅವರ ಮನೆ ರಸ್ತೆಯ
ಪಕ್ಕದಲ್ಲಿದ್ದು ಮಧ್ಯರಾತ್ರಿ ೨ ಅಥವಾ ೩ ಗಂಟೆಗೆ ಬಸ್ಸುಗಳಲ್ಲಿ ಬರುವ ಕೇರಳದ ಪ್ರಯಾಣಿಕರು, ಅವುಗಳಲ್ಲಿ ಧ್ವನಿವರ್ಧಕ ಹಾಕಿಕೊಂಡು ತಡೆಯ ಲಾರದ ಶಬ್ದದೊಂದಿಗೆ ಸಾಗುತ್ತಿದ್ದಾಗ ಅವರಿಗೆ ಗುಂಡು ಹೊಡೆಯಬೇಕು ಎಂದು ಇವರಿಗೆ ಅನ್ನಿಸುತ್ತಿತ್ತಂತೆ.
ಹೀಗೆ ಸಾಗುತ್ತಿದ್ದ ವಾಹನಗಳು ಒಂದು ಎರಡಲ್ಲ, ದಶಕಗಳ ಸಂಖ್ಯೆಯಲ್ಲಿ ಇದ್ದವು. ಮನುಷ್ಯನ ಗತಿಯೇ ಹೀಗಾಗಿರುವಾಗ ನಾಗರಹೊಳೆ ಅರಣ್ಯದಲ್ಲಿ, ಅಂದರೆ ತಿತಿಮತಿ ಮತ್ತು ಅಳ್ಳೂರು ನಡುವೆ ಹೀಗೆ ವಾಹನಗಳು ಕರ್ಕಶ ಶಬ್ದದೊಂದಿಗೆ ಸಾಗಿಹೋದಾಗ ಅಲ್ಲಿನ ಪ್ರಾಣಿ- ಪಕ್ಷಿಗಳು ಅದೆಷ್ಟರ ಮಟ್ಟಿಗೆ ಕಿರಿಕಿರಿಗೆ ಒಳಗಾಗಿರಬೇಕು? ಮತ್ತೊಂದು ಅತಿಮುಖ್ಯ ವಿಷಯವನ್ನು ಅನೇಕರು ಮರೆತಂತಿದೆ. ಅದೇನೆಂದರೆ, ಈ ನೀಲಿಗ್ರಹ ಬರಿಯ ಮನುಷ್ಯನ
ಉಪಯೋಗಕ್ಕಾಗಿ ಇರುವಂಥದ್ದಲ್ಲ; ಬದಲಾಗಿ ಜಗತ್ತಿನ ಪ್ರಾಣಿ-ಪಕ್ಷಿ-ಕೀಟ ಸಂಕುಲ, ವೃಕ್ಷಸಮೂಹ ಅಲ್ಲದೆ ಉರಗ ಸಂತತಿ ಮುಂತಾದ ಸಮಸ್ತ ಜೀವಿಗಳಿಗೂ ಸೇರಿದೆ. ಇದನ್ನು ಮರೆತೇಬಿಟ್ಟಿರುವ ಮನುಷ್ಯ ಎಲ್ಲವೂ ತನಗಾಗಿಯೇ ಇದೆ ಮತ್ತು ಎಲ್ಲವನ್ನೂ ತಾನೇ ಬಾಚಿಕೊಳ್ಳಬೇಕು ಎಂಬ ಹಪಹಪಿ
ಯಲ್ಲಿ ತನ್ನ ಬುಡಕ್ಕೆ ತಾನೇ ಕೊಡಲಿ ಇಟ್ಟುಕೊಳ್ಳುತ್ತಿದ್ದಾನೆ.
ಈ ಜಗತ್ತನ್ನು ಸೃಷ್ಟಿಸಿದ ಪ್ರಭುವಿಗೆ ಕಿಂಚಿತ್ ಗೌರವ ಕೊಡಲೂ ಆತ ಸಿದ್ಧನಿಲ್ಲ; ಎಲ್ಲವೂ ತನ್ನ ತಾಳಕ್ಕೆ ತಕ್ಕಂತೆ ಕುಣಿಯಬೇಕು ಎಂಬ ಹುಚ್ಚು ಅವನ ತಲೆಗೇರಿದೆ. ಕಾಡು ತನ್ನ ಆಸ್ತಿಯಲ್ಲ, ಅಲ್ಲಿಗೆ ತಾನು ಅತಿಥಿ ಮಾತ್ರ ಎಂಬ ದಿವ್ಯಸೂಚನೆಯನ್ನು ಆತ ತಿರಸ್ಕಾರ ಮಾಡಿದ್ದಾನೆ. ಕಾಡಿಗೆ ಕೊಡಬೇಕಾದ ಕನಿಷ್ಠ ಮರ್ಯಾದೆಯನ್ನು ಕೊಡದೆ ನಿರಂಕುಶ ಪ್ರಭುವಿನಂತೆ ವರ್ತಿಸುತ್ತಿದ್ದಾನೆ. ದಟ್ಟಕಾಡುಗಳ ಹೃದಯವನ್ನು ಬಗೆದು ಅಲ್ಲಿಯೂ ತನ್ನ ಸಾಮ್ರಾಜ್ಯ ವನ್ನು ವಿಸ್ತರಿಸುವ ದುಷ್ಟ ಆಲೋಚನೆ ಆತನಲ್ಲಿದೆ. ನಮ್ಮ ದೇಶದ ವಿಷಯಕ್ಕೆ ಬರುವುದಾದರೆ, ಪಶ್ಚಿಮ ಘಟ್ಟಗಳೇ ದಕ್ಷಿಣ ಭಾರತದ ಹೃದಯ ಸಾಮ್ರಾಜ್ಯ ಎಂಬುದನ್ನು ಆತ ನಿರ್ಲಕ್ಷಿಸುತ್ತಿದ್ದಾನೆ.
ಇದರ ಪರಿಣಾಮ ಎಷ್ಟು ಘೋರವಾಗಬಹುದು ಎಂಬ ಮುನ್ನರಿವು ಕೂಡ ಅವನಿಗಿಲ್ಲ. ಕೆಲವಾರು ಸಾಮಾಜಿಕ ಘಟನೆಗಳನ್ನು ಇಲ್ಲಿ ವಿಶ್ಲೇಷಿಸುತ್ತಿ
ದ್ದೇನೆ: ಹೆಗ್ಗಡದೇವನ ಕೋಟೆಯ ಮೂಲಕ ಮಾನಂದ ವಾಡಿಯನ್ನು ತಲುಪಲು ಕಾಡಿನ ಮೂಲಕವೇ ಸಾಗಬೇಕು. ಅಲ್ಲಿ ಒಮ್ಮೆ ಟ್ರಕ್ ಒಂದು ತನ್ನ ಪ್ರದೇಶವಲ್ಲವೆಂದು ತಿಳಿದಿದ್ದರೂ ಅತಿವೇಗದಿಂದ ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಆನೆಗಳ ಗುಂಪೊಂದು ರಸ್ತೆಯನ್ನು ದಾಟಲು ಬಂದಿತು. ದೊಡ್ಡ
ಆನೆಗಳು ಅದರಲ್ಲಿ ಯಶಸ್ವಿಯಾದರೂ ಪುಟ್ಟ ಮರಿಯೊಂದಕ್ಕೆ ಸಾಧ್ಯವಾಗಲಿಲ್ಲ. ಪರಿಣಾಮ ಟ್ರಕ್ ಆ ಮರಿಯಾನೆಯ ಮೇಲೆ ದಪಕ್ಕನೆ ಕುಳಿತು ಕೊಂಡಿತು.
ಚಾಲಕನ ಅತೀವ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಬಿಡಿಸಿ ಹೇಳಬೇಕಿಲ್ಲ. ಆ ಟ್ರಕ್ ಮರಿಯಾನೆಯ ಶವವನ್ನು ದಾಟಿ ಮುಂದೆ ನಿಂತಿತು. ಅಷ್ಟರಲ್ಲಿ, ರಸ್ತೆ ದಾಟಿದ ಉಳಿದ ಆನೆಗಳು ಮರಳಿ, ಮರಿಯ ಶವದ ಸುತ್ತ ವೃತ್ತಾಕಾರವಾಗಿ ನಿಂತು ೨-೩ ಗಂಟೆಯವರೆಗೆ ಗೋಳಾಡಿದ್ದಲ್ಲದೆ ಹತ್ತಿರಕ್ಕೆ ಯಾರನ್ನೂ ಬರಗೊಡಲಿಲ್ಲ. ಮತ್ತೊಂದು ಉದಾಹರಣೆ: ಹುಣಸೂರು, ಅಳ್ಳೂರಿನಿಂದಿ, ತಿತಿಮತಿಯವರೆಗೆ ನಾಗರಹೊಳೆ ಅರಣ್ಯ ಪಸರಿಸಿದೆ. ೧೯೮೦ರ ದಶಕದಲ್ಲಿ ನಾನು ಮೋಟಾರ್ ಬೈಕ್‌ನಲ್ಲಿ ಮೈಸೂರಿನಿಂದ ಹೋಗುತ್ತಿದ್ದಾಗ, ಆನೆ, ತೋಳ, ಚಿರತೆ, ಕಾಡುಕೋಣ, ಕಡವೆ, ಜಿಂಕೆಗಳ ಸಮೂಹವನ್ನೇ ನೋಡು ತ್ತಿದ್ದೆ.
ಉರಗಗಳು ಆಗಾಗ ರಸ್ತೆ ದಾಟುತ್ತಿದ್ದುದರಿಂದ ಅತ್ಯಂತ ನಿಧಾನವಾಗಿ ಚಲಿಸಬೇಕಾಗಿತ್ತು. ಈಗ ನೋಡಿದರೆ, ಕಾಡುಪ್ರಾಣಿಗಳಿರಲಿ ಇಲಿಯೂ ಕಾಣ ಸಿಗುವುದಿಲ್ಲ. ಬದಲಿಗೆ, ಕ್ಷುದ್ರ ಮನುಷ್ಯನ ಓಡಾಟಕ್ಕೆ ಅನುಕೂಲವಾಗಲೆಂದು ರಸ್ತೆಯ ಎರಡೂ ಬದಿಯಲ್ಲಿದ್ದ ಮರಗಳ ಸಮೂಹವನ್ನೇ ಕತ್ತರಿಸಿ ಹಾಕಲಾಗಿದೆ. ಸಾಲದೆಂಬಂತೆ, ಅತಿವೇಗದಿಂದ ಸಾಗುವ ವಾಹನಗಳ ಆರ್ಭಟ ಹೇಳತೀರದು. ಹೀಗಾಗಿ ಮೇಲೆ ಹೇಳಿದ ಎಲ್ಲ ಸಂಕುಲಗಳು, ಈ ಸ್ವಾರ್ಥಿ ಮನುಷ್ಯನ ಸಹವಾಸವೇ ಬೇಡ ವೆಂದು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವುದೇ ಇಲ್ಲ. ಅವುಗಳಿಗೆ ಬಂದ ಬುದ್ಧಿ ಮನುಷ್ಯನಿಗೆ ಬಂದಿಲ್ಲವೆಂಬ ಖೇದ ಪರಿಸರವಾದಿಗಳಿಗೆ.
ಹಿಂದೊಮ್ಮೆ ಸಂಸದರನ್ನು ಭೇಟಿಯಾಗಿದ್ದಾಗ, ನಾಗರಹೊಳೆಯಲ್ಲಿ ಎಲ್ಲ ಕಡೆಗಳಲ್ಲಿಯೂ ಮೇಲ್ಸೇತುವೆ ನಿರ್ಮಿಸಬೇಕೆಂಬ ಪ್ರಸ್ತಾಪವನ್ನು ಅವರ ಮುಂದಿಟ್ಟಿದ್ದೆ. ಅದನ್ನವರು ತಮ್ಮ ಡೈರಿಯಲ್ಲಿ ಗುರುತು ಹಾಕಿಕೊಂಡರು. ನಂತರದ ಬೆಳವಣಿಗೆಯೇನು ಎಂಬುದು ತಿಳಿಯಲಿಲ್ಲ. ಕುಶಾಲನಗರದಿಂದ ಮಡಿಕೇರಿಗೆ ಹೋಗುವ ದಾರಿಯಲ್ಲಿ ಸುಮಾರು ೨೦೦೦ ಎಕರೆಯಷ್ಟಿದ್ದ ಆನೆಕಾಡು ಎಂಬ ಕಾಡಿನಲ್ಲಿ ಆನೆಯಾಗಲೀ, ಅಲ್ಲೊಂದು ಕಾಡು ಇತ್ತು ಎಂಬ ಕುರುಹು ಗಳಾಗಲೀ ಗೋಚರಿಸುವುದಿಲ್ಲ. ಕಾಟಾಚಾರಕ್ಕೆ ಒಂದಷ್ಟು ಮರಳನ್ನು ಮಾತ್ರ ಬಿಡಲಾಗಿದೆ. ಮಡಿಕೇರಿಯಿಂದ ಸಂಪಾಜೆಗೆ ಹೋಗುವ ದಾರಿಯಲ್ಲಿ ಕೊಯ್ನಾಡು ಸಿಗುತ್ತದೆ. ಅಲ್ಲಿ ಒಂದು ಕಾಲಕ್ಕೆ ದಟ್ಟವಾದ ಕಾಡು ಇತ್ತು. ಈಗ ಅಲ್ಲಿನ ಮರಗಳನ್ನೆಲ್ಲ ಬುಡಸಮೇತ ಬೀಳಿಸಿ ರಬ್ಬರ್ ಕೃಷಿ
ಮಾಡಲಾಗಿದೆ. ಅದನ್ನು ಮಾಡಿದವರಿಗೆ ಲೀಸ್ ಕೊಟ್ಟಿದ್ದು ಯಾವ ಸರಕಾರ? ಅಲ್ಲೂರಿನಿಂದ ಆನೆಚೌಕೂರಿಗೆ ಹೋಗುವ ದಾರಿಯಲ್ಲಿ ಫರ್ಲಾಂಗ್ ಗಟ್ಟಲೆ ಬಿದಿರು ಮೆಳೆಗಳಿದ್ದವು. ೧೯೬೦ರ ದಶಕದಲ್ಲಿ ಇದ್ದಕ್ಕಿದ್ದಂತೆ ಕೆಲವೇ ತಿಂಗಳಲ್ಲಿ ಆ ಮೆಳೆಗಳು ಮಾಯವಾದವು.
ಆನೆಗಳ ಮುಖ್ಯ ಆಹಾರವಾದ ಬಿದಿರು ಖಾಲಿಯಾದ ಮೇಲೆ ಆನೆಗಳಿಗೆ ಇನ್ನೇನು ಕೆಲಸ? ಅವೂ ಸ್ಥಳದಿಂದ ಮಾಯವಾದವು. ವಿಚಾರಿಸಿದಾಗ ತಿಳಿಯಿತು, ಸದರಿ ಬಿದಿರನ್ನು ಹರಿಹರದಲ್ಲಿನ ಬಿರ್ಲಾ ಪಾಲಿ-ಬರ್ಸ್ ಕಂಪನಿಗೆ ಕಾಗದ ತಯಾರಿಕೆಗೆ ಕಡಿಯಲು ಅನುಮತಿ ಕೊಡಲಾಗಿದೆ ಅಂತ. ನಾಗರಹೊಳೆ ಮತ್ತು ವಯನಾಡು ಅರಣ್ಯಗಳ ಮಧ್ಯೆ ೩೦೦೦ ಎಕರೆಯ ಹಚ್ಚ ಹಸುರಿನ ಕಾಡೊಂದಿತ್ತು. ಅದರ ಮೂಲಕ ವನ್ಯಪ್ರಾಣಿಗಳು ಒಂದು
ಕಾಡಿನಿಂದ ಇನ್ನೊಂದಕ್ಕೆ ಸ್ವಚ್ಛಂದವಾಗಿ ಓಡಾಡುತ್ತಿದ್ದವು.
ಅದನ್ನು ಬ್ರಿಟಿಷರ ಕಾಲದಲ್ಲಿ ಕಾಫಿತೋಟವನ್ನಾಗಿ ಪರಿವರ್ತಿಸಲಾಯಿತು. ಇದರಿಂದಾದ ಪರಿಣಾಮ ಘೋರ- ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಇಷ್ಟಬಂದಂತೆ ಸಂಚರಿಸಿ ವಿಹರಿಸುತ್ತಿದ್ದ ಪ್ರಾಣಿಗಳು ತಾವಿದ್ದಲ್ಲಿಯೇ ಬಂದಿಯಾದವು. ಈಗ ಕೇರಳ ಸರಕಾರಕ್ಕೆ ಬೇಕಾಗಿರುವುದು ಇಷ್ಟೇ- ತನ್ನ ರಾಜ್ಯದ ಜನರು ಅಡೆತಡೆಯಿಲ್ಲದೆ ಬೇರೆ ರಾಜ್ಯಗಳಿಗೆ ಹೋಗಿ-ಬಂದು ಮಾಡಬೇಕು. ಅದಕ್ಕಾಗಿ ಎಂಥ ಬಲಿದಾನವನ್ನಾದರೂ ಕೇಳಲು ಅದು ಸಿದ್ಧವಾಗಿದೆ. ಪಶ್ಚಿಮ ಘಟ್ಟಗಳು ಉಳಿದರೆಷ್ಟು ಬಿಟ್ಟರೆಷ್ಟು! ಈಗ ಹೇಳಿ, ಮನುಷ್ಯನ ಮುಕ್ತಸಂಚಾರಕ್ಕೆ ರಕ್ಷಿತಾರಣ್ಯಗಳ ನಡುವೆ ಓಡಾಡಲು ಅವಕಾಶ ಕೊಡಬೇಕೇ?
(ಲೇಖಕರು ನ್ಯಾಯವಾದಿ ಮತ್ತು ಪರಿಸರವಾದಿ)