Keshava Prasad B Column: ವಾರೆನ್ ಬಫೆಟ್ ಬರೆದ ಕೊನೆಯ ಪತ್ರದಲ್ಲಿ ಏನಿದೆ?
ಷೇರುದಾರರಿಗೆ ಕಿವಿಮಾತುಗಳನ್ನೂ ಹೇಳಿದ್ದಾರೆ. “ಹಳೆಯ ಪ್ರಮಾದಗಳನ್ನೇ ನೆನಪಿಸಿಕೊಂಡು ಕೊರಗದಿರಿ. ಅವುಗಳಿಂದ ಪಾಠಗಳನ್ನು ಕಲಿತುಕೊಂಡು ಮಂದುವರಿ ಯಿರಿ. ಹಣ ಅಥವಾ ಖ್ಯಾತಿಗಿಂತಲೂ ದಯೆ, ಸೌಜನ್ಯ, ಸಮಗ್ರತೆಯೇ ವ್ಯಕ್ತಿತ್ವವನ್ನು ರೂಪಿಸುತ್ತವೆ. ನಿಜವಾದ ಯಶಸ್ಸು ಸಾವಿರಾರು ಜನರಿಗೆ ಸಹಾಯ ಮಾಡುವುದರಿಂದ ಸಿಗುತ್ತದೆಯೇ, ಹೊರತು ಅಧಿಕಾರದ ಹಿಂದೆ ಬೀಳುವುದರಿಂದ ಅಲ್ಲ.
-
ಮನಿ ಮೈಂಡೆಡ್
ಅಮೆರಿಕದ ವಿಶ್ವವಿಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ತಮ್ಮ 95ನೇ ವಯಸ್ಸಿನಲ್ಲಿ ವಾಲ್ ಸ್ಟ್ರೀಟ್ ಗೆ ಶುಭ ವಿದಾಯ ಹೇಳಿದ್ದಾರೆ. 60 ವರ್ಷಗಳಿಂದ ತಮ್ಮ ಬರ್ಕ್‌ಶೈರ್ ಹಾಥ್ ವೇ ಕಂಪನಿಯ ಷೇರುದಾರರಿಗೆ ಅವರು ಪ್ರತಿ ವರ್ಷವೂ ತಪ್ಪದೆ ಪತ್ರ ಬರೆಯು ತ್ತಿದ್ದರು.
ಜಗತ್ತಿನ ನಂ.೧ ಹೂಡಿಕೆದಾರನ ಪತ್ರವನ್ನು ಓದಲು ಕಾರ್ಪೊರೇಟ್ ವಲಯದ ಮಂದಿ ಕೂಡ ಕುತೂಹಲದಿಂದ ಕಾಯುತ್ತಿದ್ದರು. ಇದು ಅಮೆರಿಕದ ಕಾರ್ಪೊರೇಟ್ ಇತಿಹಾಸದ ಮಹತ್ವದ ಪರಂಪರೆಯಾಗಿತ್ತು. ಈಗ ವಯೋಸಹಜ ಕಾರಣದಿಂದ ತಮ್ಮ ಷೇರು ಸಾಮ್ರಾಜ್ಯದ ಚುಕ್ಕಾಣಿಯನ್ನು ಉತ್ತರಾಧಿಕಾರಿಗೆ ವಹಿಸಿ, ಬಫೆಟ್ ಅವರು ವಾಲ್ ಸ್ಟ್ರೀಟ್ ನಿಂದ ಈ ವರ್ಷಾಂತ್ಯದಲ್ಲಿ ನಿರ್ಗಮಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಕೊನೆಯ ಹೃದಯಸ್ಪರ್ಶಿ ಪತ್ರ ಬರೆದು ಪೆನ್ನು ಕೆಳಗಿಟ್ಟಿದ್ದಾರೆ. ಸಾಮಾನ್ಯವಾಗಿ ಬಫೆಟ್ ಪತ್ರದಲ್ಲಿ ಮಾರುಕಟ್ಟೆಯ ಟ್ರೆಂಡ್, ಹೂಡಿಕೆಯ ಕಾರ್ಯತಂತ್ರಗಳು, ಮುನ್ನೋಟ ಇರುತ್ತಿದ್ದವು. ಹಣಕಾಸು ವಿವೇಕ ಮತ್ತು ನೈತಿಕ ಸ್ಪಷ್ಟತೆ ಅವರ ನಿಲುವು ಆಗಿರುತ್ತಿದ್ದವು. ಅಂತಿಮ ಪತ್ರದಲ್ಲಿ ವ್ಯಾವಹಾರಿಕ ಚರ್ಚೆಗಿಂತಲೂ, ತಮ್ಮ ಜೀವನದ ಹಿನ್ನೋಟ, ಮಕ್ಕಳು, ಅರ್ಥಪೂರ್ಣ ಜೀವನ, ಸಾರ್ಥಕತೆ, ಮೌಲ್ಯಗಳ ಬಗ್ಗೆ ಅವರು ನಮುಟ್ಟುವಂತೆ ವಿವರಿಸಿದ್ದಾರೆ.
ಇದನ್ನೂ ಓದಿ: Keshava Prasad B Column: ಹಣ ಉಳಿತಾಯ ಒಂದೇ ಸಾಲದು, ಹೂಡಿಕೆ ಮರೆಯದಿರಿ !
ಷೇರುದಾರರಿಗೆ ಕಿವಿಮಾತುಗಳನ್ನೂ ಹೇಳಿದ್ದಾರೆ. “ಹಳೆಯ ಪ್ರಮಾದಗಳನ್ನೇ ನೆನಪಿಸಿ ಕೊಂಡು ಕೊರಗದಿರಿ. ಅವುಗಳಿಂದ ಪಾಠಗಳನ್ನು ಕಲಿತುಕೊಂಡು ಮಂದುವರಿ ಯಿರಿ. ಹಣ ಅಥವಾ ಖ್ಯಾತಿಗಿಂತಲೂ ದಯೆ, ಸೌಜನ್ಯ, ಸಮಗ್ರತೆಯೇ ವ್ಯಕ್ತಿತ್ವವನ್ನು ರೂಪಿಸು ತ್ತವೆ. ನಿಜವಾದ ಯಶಸ್ಸು ಸಾವಿರಾರು ಜನರಿಗೆ ಸಹಾಯ ಮಾಡುವುದರಿಂದ ಸಿಗುತ್ತದೆಯೇ, ಹೊರತು ಅಧಿಕಾರದ ಹಿಂದೆ ಬೀಳುವುದರಿಂದ ಅಲ್ಲ.
ನಿಮಗೆ ಸಿಗುವ ಶ್ರದ್ಧಾಂಜಲಿಯ ನುಡಿನಮನಗಳು ಹೇಗೆ ಇರಬೇಕು ಎಂದು ಭಾವಿಸಿಕೊಳ್ಳಿ ಹಾಗೂ ಅದಕ್ಕೆ ತಕ್ಕಂತೆ ಬದುಕಲು ಆರಂಭಿಸಿ. ಅಂಥ ದಾರಿಯಲ್ಲಿ ಹೆಜ್ಜೆಗಳನ್ನು ಇಡಿ" ಎಂದು ಸಲಹೆ ನೀಡಿದ್ದಾರೆ. ಅದರ ಹೈಲೈಟ್ಸ ಅನ್ನು ಅವರದ್ದೇ ಮಾತಿನಲ್ಲಿ ನೋಡೋಣ: “ನನ್ನ ಆತ್ಮೀಯ ಷೇರುದಾರರೇ, ನಾನಿನ್ನು ಬರ್ಕ್‌ಶೈರ್ ನ ವಾರ್ಷಿಕ ವರದಿಯನ್ನು ಓದುವುದಿಲ್ಲ ಅಥವಾ ಸುದೀರ್ಘ ಸಭೆಯಲ್ಲಿ ಮಾತನಾಡುವುದಿಲ್ಲ. ಬ್ರಿಟಿಷರು ಹೇಳು ವಂತೆ ’ಐಯಾಮ್ ಗೋಯಿಂಗ್ ಕ್ವೈಟ್’ (ಸದ್ದಿಲ್ಲದೆ ಹೋಗುತ್ತಿದ್ದೇನೆ)" ಎಂದು ಬಫೆಟ್ ಪತ್ರವನ್ನು ಆರಂಭಿಸಿ ಹೀಗೆ ಮುಂದುವರಿಸಿದ್ದಾರೆ: ವರ್ಷಾಂತ್ಯಕ್ಕೆ ಗ್ರೇಗ್ ಅಬೆಲ್ ಅವರು ಕಂಪನಿಯ ಬಾಸ್ ಆಗಲಿದ್ದಾರೆ.
ಅವರೊಬ್ಬ ಗ್ರೇಟ್ ಮ್ಯಾನೇಜರ್. ದಣಿವೇ ಅರಿಯದ ದುಡಿಮೆಗಾರ. ಪ್ರಾಮಾಣಿಕ ಸಂವಹನಕಾರ. ಬರ್ಕ್‌ಶೈರ್‌ನ ಷೇರುದಾರರು ಎಂದರೆ ಉದಾರಿಗಳು, ಗುಣ ವಿಶೇಷ ಹೊಂದಿರುವವರು. ದುರ್ಬಲರಿಗೆ ನೆರವಿನ ಹಸ್ತ ಚಾಚುವವರು. ನಿಮ್ಮೊಂದಿಗೆ ಸಂವಹನ ನಡೆಸುವ ಅವಕಾಶವನ್ನು ನಾನು ಎಂದಿಗೂ ತಪ್ಪಿಸಿಕೊಂಡವನಲ್ಲ.
ನನ್ನ ಬರ್ಕ್‌ಶೈರ್ ಷೇರುಗಳನ್ನು ಹಂಚುವ ವಿವರಗಳನ್ನೂ ನಿಮ್ಮ ಮುಂದಿಡುತ್ತೇನೆ. ನನ್ನ ಕೆಲ ಬಿಸಿನೆಸ್ ಒಳನೋಟಗಳನ್ನೂ, ಅಭಿಪ್ರಾಯವನ್ನೂ ವಿನಿಮಯ ಮಾಡಿ ಕೊಳ್ಳುತ್ತಿದ್ದೇನೆ. 95ರ ವಯಸ್ಸಿನಲ್ಲಿ ಬದುಕುತ್ತಿರುವುದು ನನ್ನ ಸೌಭಾಗ್ಯ. ನನ್ನ ಎಳೆಯ ವಯಸ್ಸಿನಲ್ಲಿ ಅಂದುಕೊಂಡಿರಲಿಲ್ಲ.
ಬಾಲ್ಯದಲ್ಲಿ ಒಮ್ಮೆ ಸಾವಿನ ಸನಿಹವೂ ಹೋಗಿ ಬಂದಿದ್ದೆ. 1938ರಲ್ಲಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದೆ. ಒಂದು ವಾರದ ಚಿಕಿತ್ಸೆ ಯ ಬಳಿಕ ಚೇತರಿಸಿಕೊಂಡಿದ್ದೆ. ಆಗ ಸಣ್ಣ ಪಟ್ಟಣವಾಗಿದ್ದ ಒಮಾಹದಲ್ಲಿ 1930ರಲ್ಲಿ ಜನಿಸಿದ್ದೆ. ಅಮೆರಿಕದಲ್ಲಿ ಜನಿಸಿರುವುದೂ ನನ್ನ ಅದೃಷ್ಟ. ನನ್ನ ಸಹೋ ದ್ಯೋಗಿ ಚಾರ್ಲೆ ಮುಂಗರ್‌ನನ್ನು ಅನುದಿನವೂ ನೆನೆಯುವೆ. ಆತ ನನಗಿಂತ ೬ ವರ್ಷ ಹಿರಿಯ. 64 ವರ್ಷ ಗಳ ಕಾಲ ನನ್ನ ಜತೆಗೆ ಕೆಲಸ ಮಾಡಿದ್ದ. ನಾನು ನನ್ನ ತಾತನ ದಿನಸಿ ಅಂಗಡಿಯಲ್ಲಿ 1940 ರಲ್ಲಿ ದಿನಕ್ಕೆ 10 ಗಂಟೆ ಕೆಲಸ ಮಾಡುತ್ತಿದ್ದೆ.
ಎರಡು ಡಾಲರ್ ಸಿಗುತ್ತಿತ್ತು. ಆಪ್ತ ಸ್ನೇಹಿತ ಚಾರ್ಲೆ ಮುಂಗರ್ ನನ್ನ ಮೇಲೆ ಭಾರಿ ಪ್ರಭಾವ ಬೀರಿದ್ದಾನೆ. ನನ್ನ ಹಿರಿಯಣ್ಣನಂತಿದ್ದ. ನಮ್ಮ ಬಳಿ ಭಿನ್ನಾಭಿಪ್ರಾಯ ಇದ್ದರೂ, ವಾದ ಮಾಡುತ್ತಿರಲಿಲ್ಲ, ಗೆಳೆತನಕ್ಕೆ ಇನಿತೂ ಚ್ಯುತಿಯಾಗಿರಲಿಲ್ಲ. ’ನಾನು ನಿನಗೆ ಹಾಗೆ ಹೇಳಿದ್ದೆ’ ಎಂಬ ಪದ ಚಾರ್ಲೆಯ ಪದಕೋಶದ ಇರಲಿಲ್ಲ...
1958ರಲ್ಲಿ ನಾನು ನನ್ನ ಮೊದಲ ಮತ್ತು ಏಕೈಕ ಮನೆಯನ್ನು ಖರೀದಿಸಿದೆ. ಇದು ಸಹಜ ವಾಗಿ ತವರು ಒಮಾಹಾದಲ್ಲಿದೆ. ನಾನು ಹುಟ್ಟಿ ಬೆಳೆದ ಸ್ಥಳದಿಂದ ಎರಡು ಮೈಲಿ ದೂರ ದಲ್ಲಿದೆ. 64 ವರ್ಷಗಳ ಕಚೇರಿಗೆ ಆರೇಳು ನಿಮಿಷಗಳ ಪ್ರಯಾಣ ಸಾಕು. ನಾನು ಹದಿಹರೆ ಯದಲ್ಲಿ ಇದ್ದಾಗ ಕೆಲ ವರ್ಷಗಳನ್ನು ವಾಷಿಂಗ್ಟನ್‌ನಲ್ಲಿ ಕಳೆದಿದ್ದೆ.
1954ರಲ್ಲಿ ಮ್ಯಾನ್ ಹಟ್ಟನ್‌ನಲ್ಲಿ ಕೆಲಸಕ್ಕೆ ಸೇರಿದ್ದೆ. ಅಲ್ಲಿ ಹಲವಾರು ಮಂದಿ ಗೆಳೆಯರು ಸಿಕ್ಕಿದರು. ಬೆನ್ ಗ್ರಹಾಂ ಮತ್ತು ಜೆರ್ರಿ ನ್ಯೂಮನ್ ಜೀವನದುದ್ದಕ್ಕೂ ಮಿತ್ರರಾದರು. ನ್ಯೂಯಾರ್ಕಿನಲ್ಲೂ ಕೆಲ ಕಾಲ ಕಳೆದು ಒಮಾಹಾಕ್ಕೆ ಹಿಂತಿರುಗಿದೆ... ನನ್ನ ಮೂವರೂ ಮಕ್ಕಳು ಮತ್ತು ಮೊಮ್ಮಕ್ಕಳೂ ಸಾರ್ವಜನಿಕ ಶಾಲೆಗಳಲ್ಲಿಯೇ ಓದಿದವರು.
ನಮ್ಮ ದೇಶದಲ್ಲಿ ಶ್ರೇಷ್ಠ ಕಂಪನಿಗಳು ಇವೆ. ಅತ್ಯುತ್ತಮ ಶಾಲೆಗಳು ಇವೆ. ಆಸ್ಪತ್ರೆಗಳು ಇವೆ. ಆದರೆ ಸಣ್ಣ ವಯಸ್ಸಿನ ಅತ್ಯುತ್ತಮ ಗೆಳೆಯರು ನನಗೆ ಸಿಕ್ಕಿರುವುದು ಅದೃಷ್ಟ. ನನ್ನ ಮಕ್ಕಳು ಸಾಮಾನ್ಯ ನಿವೃತ್ತಿಯ ವಯಸ್ಸಿಗಿಂತ ಮೇಲಿದ್ದಾರೆ. 72, 70 ಮತ್ತು 67ರ ಹಿರಿಯ ವಯಸ್ಸು ಅವರದ್ದು. ಎಲ್ಲರೂ ತಮ್ಮ ಜವಾಬ್ದಾರಿಗಳ ಉತ್ತುಂಗದಲ್ಲಿದ್ದಾರೆ.
ಮಕ್ಕಳು ನಡೆಸುತ್ತಿರುವ ಮೂರು ಪ್ರತಿಷ್ಠಾನಗಳಿಗೆ ನನ್ನ ಜೀವಮಾನದ ಕೊಡುಗೆಯನ್ನು ನೀಡಲು ಉದ್ದೇಶಿಸಿದ್ದೇನೆ. ಅನುಭವ ಮತ್ತು ವಿವೇಕ ಎರಡರಲ್ಲೂ ಮಕ್ಕಳು ಪ್ರಾಜ್ಞರಾಗಿ ದ್ದಾರೆ. ನಾನು ನನ್ನ ಮಕ್ಕಳಿಗೆ ಹೇಳುವುದಿಷ್ಟೇ: ಬದುಕಿನಲ್ಲಿ ಯಾವುದೇ ಪವಾಡದ ಅಗತ್ಯ ಇಲ್ಲ, ಸೋಲಿನ ಭೀತಿಯೂ ಬೇಡ. ನಿರಾಶೆಯನ್ನೂ ಪಡಬೇಕಿಲ್ಲ. ಇವುಗಳೆಲ್ಲ ಬಂದು ಹೋಗುತ್ತಿರುತ್ತವೆ. ನಾನು ನನ್ನ ಪಾಲನ್ನು ನೀಡಿರುವೆ. ಅದನ್ನು ಸುಧಾರಿಸಿದರೆ ಸಾಕು. ಸಂಪತ್ತಿನ ಮರುಹಂಚಿಕೆಗೆ ತೊಡಗಿಸಿದರೆ ಆಯಿತು.
ಮೂವರೂ ಮಕ್ಕಳು ಇತರರಿಗೆ ಸಹಾಯ ಮಾಡಲು ತಮ್ಮದೇ ಮಾರ್ಗದಲ್ಲಿ ಗಂಟೆಗಟ್ಟಲೆ ದುಡಿಯುತ್ತಾರೆ. ಮತ್ತೊಂದು ಕಡೆ ಬರ್ಕ್‌ಶೈರ್ ಕಂಪನಿಯ ಆಶೋತ್ತರಗಳನ್ನು ಉತ್ತರಾಧಿ ಕಾರಿಯಾದ ಗ್ರೇಗ್ ಅಬೆಲ್ ನೆರವೇರಿಸಲಿದ್ದಾರೆ. ನಿರೀಕ್ಷೆಗೂ ಮೀರಿದ ಸಾಧನೆಯ ಪರಿಣಾಮ ಬರ್ಕ್‌ಶೈರ್ ಕಂಪನಿ ಈಗ ಇಂಡಸ್ಟ್ರಿಯಲ್ಲಿ ಅಮೂಲ್ಯ ರತ್ನವಾಗಿದೆ.
ಮುಂದಿನ ಒಂದೆರಡು ದಶಕಗಳಲ್ಲಿ ಇಂಥ ಮತ್ತಷ್ಟು ಕಂಪನಿಗಳೂ ಬರಬಹುದು. ಬರ್ಕ್ ಶೈರ್ ಸದಾ ತನ್ನ ಷೇರುದಾರರ ಹಿತಾಸಕ್ತಿಯನ್ನು ಪರಿಗಣಿಸುತ್ತದೆ. ಕಳೆದ 60 ವರ್ಷಗಳ ಇತಿಹಾಸದಲ್ಲಿ ಕಂಪನಿಯ ಷೇರು ಮೂರು ಸಲ ಮಾತ್ರ ಶೇ.50ಕ್ಕಿಂತ ಹೆಚ್ಚು ಇಳಿಕೆ ಯಾಗಿದೆ. ಉಳಿದಂತೆ ಉತ್ತಮ ರಿಟರ್ನ್ ಅನ್ನು ಷೇರುದಾರರಿಗೆ ಕೊಟ್ಟಿದೆ... ಕೊನೆಯದಾಗಿ ಒಂದಷ್ಟು ಅನಿಸಿಕೆಗಳನ್ನು ಹೇಳುತ್ತೇನೆ- ನಾವು ಆತ್ಮಾವಲೋಕನ ಮಾಡಿಕೊಳ್ಳ ಬೇಕು. ನನ್ನ ಬದುಕಿನ ಮೊದಲರ್ಧಕ್ಕಿಂತಲೂ ದ್ವಿತೀಯಾರ್ಧ ಚೆನ್ನಾಗಿತ್ತು.
ಜೀವನದಲ್ಲಿ ಕಲಿಕೆ ಮತ್ತು ಸುಧಾರಣೆಗೆ ತಡ ಎಂಬುದೇ ಇಲ್ಲ. ಸರಿಯಾದ ಹೀರೋಗಳನ್ನು ಎಚ್ಚರಿಕೆಯಿಂದ ಹುಡುಕಿ, ಅವರ ಮೌಲ್ಯಮಾಪನ ಮಾಡಿಕೊಳ್ಳಿ. ಅನುಕರಿಸಿ. ನೀವು ಪರಿಪೂರ್ಣ ಅಲ್ಲದಿರಬಹುದು, ಆದರೆ ಸದಾ ಸುಧಾರಣೆಗೆ ಯತ್ನಿಸಿ. ಆಲ್ ಫ್ರೆಡ್ ನೊಬೆಲ್ ಅವರನ್ನು ನೆನಪಿಸಿಕೊಳ್ಳಿ. ಅವರ ಸೋದರ ಮೃತಪಟ್ಟಾಗ ಪತ್ರಿಕೆಯೊಂದು ಪ್ರಮಾದ ವಶಾತ್ ಆಲ್ ಫ್ರೆಡ್ ನೊಬೆಲ್ ಅವರೇ ಮೃತಪಟ್ಟಿರುವುದಾಗಿ ಶ್ರದ್ಧಾಂಜಲಿಯ ನುಡಿ ನಮನವನ್ನು ಪ್ರಕಟಿಸಿತ್ತು. ಅದನ್ನು ಓದಿದ ಆಲ್ಫ್ರೆಡ್ ನೊಬೆಲ್‌ಗೆ ಆಘಾತ ಕಾದಿತ್ತು. ತಾನು ಸತ್ತ ಮೇಲೆ ಜಗತ್ತು ಯಾವ ರೀತಿ ತನ್ನನ್ನು ಗುರುತಿಸಲಿದೆ ಎಂಬ ವಾಸ್ತವ ಗೊತ್ತಾದ ಬಳಿಕ, ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಿದರು.
ತನ್ನ ಬದುಕಿನಲ್ಲಿ ಮಹತ್ವದ ಪರಿವರ್ತನೆ ತಂದರು. ಸುದ್ದಿಮನೆಯ ಅವಾಂತರಗಳಿಗೆ ಕಾಯದಿರಿ. ನಿಮ್ಮ ಶ್ರದ್ಧಾಂಜಲಿ ಹೇಗಿರಬೇಕು ಎಂಬುದನ್ನು ನೀವೇ ನಿರ್ಧರಿಸಿ. ಅದಕ್ಕೆ ತಕ್ಕಂತೆ ಬದುಕಿ ತೋರಿಸಿ. ನಗದು ಹಣವನ್ನು ಸುಮ್ಮನೆ ಖಾತೆಯಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ. ಆದರೆ ಉನ್ನತ ಮೌಲ್ಯವಿರುವ ಬಿಸಿನೆಸ್‌ನಲ್ಲಿ ಅದನ್ನು ಹೂಡಿಕೆ ಮಾಡಬೇಕು.
ನಿಮಗೆ ಅರ್ಥವಾಗದಿರುವ, ಗೊತ್ತೇ ಇಲ್ಲದ ಬಿಸಿನೆಸ್‌ನಲ್ಲಿ ಹೂಡಿಕೆ ಮಾಡುವುದೇ ಬೇಡ. ಜತೆಗೆ ಉತ್ಪಾದಕ ಅಸೆಟ್ ಗಳಲ್ಲಿ ಇನ್ವೆಸ್ಟ್ ಮಾಡಬೇಕು. ದೀರ್ಘಕಾಲೀನ ಹೂಡಿಕೆಯಿಂದ ಚಕ್ರಬಡ್ಡಿಯ ಲಾಭ ಪಡೆಯಬಹುದು. ಷೇರು ಹೂಡಿಕೆದಾರರಿಗೆ ತಾಳ್ಮೆ ಮತ್ತು ಸ್ಥಿರತೆ ಅಗತ್ಯ" ಎನ್ನುತ್ತಾರೆ ಬಫೆಟ್.
ವ್ಯಾಪಾರದಲ್ಲಿ ದ್ರೋಹ ಇರಕೂಡದು. ವಿಶ್ವಾಸವೇ ಗ್ರಾಹಕರನ್ನು ತಂದುಕೊಡುತ್ತದೆ. ಅತ್ಯುತ್ತಮ ಗುಣಮಟ್ಟವೇ ಬ್ರ್ಯಾಂಡ್‌ಗಳ ಮೇಲೆ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಕಂಪನಿಗಳಲ್ಲಿ ಸಿಇಒಗಳಿಗೆ ಭಾರಿ ಸಂಬಳವನ್ನು ಅತಿಯಾಗಿ ಏರಿಸುವುದನ್ನೂ ನಾರಾಯಣಮೂರ್ತಿಯವರಂತೆ ವಾರೆನ್ ಬಫೆಟ್ ಕೂಡ ವಿರೋಧಿಸುತ್ತಿದ್ದರು. ಅದರ ಬದಲಿಗೆ ಪಾರದರ್ಶಕ ಆಡಳಿತ ಮತ್ತು ದೂರದೃಷ್ಟಿಯ ಚಿಂತನೆ ಮುಖ್ಯ ಎನ್ನುತ್ತಿದ್ದರು.
ವಾರೆನ್ ಬಫೆಟ್ ಕಳೆದ 60 ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡು ತ್ತಿದ್ದರೂ, ಕಳೆದ 10 ವರ್ಷಗಳಲ್ಲಿ ಅವರ ಸಂಪತ್ತು ಗಣನೀಯವಾಗಿ ವೃದ್ಧಿಸಿದೆ. 2016ರಲ್ಲಿ ಅವರ ಸಂಪತ್ತು 60 ಶತಕೋಟಿ ಡಾಲರ್‌ನಷ್ಟಿದ್ದರೆ, 2025ರ ವೇಳೆಗೆ 150 ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ವಾರೆನ್ ಬಫೆಟ್ ಆದರ್ಶವಾಗಿ ಕಾಣಿಸುವುದು ಅವರ ದಾನ ಧರ್ಮದ ಗುಣದಲ್ಲಿ. ಕಳೆದ ೨೦ ವರ್ಷಗಳ ಅವಽಯಲ್ಲಿ ಅವರು ೬೦ ಶತಕೋಟಿ ಡಾಲರ್ ಹಣವನ್ನು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ದಾನವಾಗಿ ನೀಡಿದ್ದಾರೆ. ರುಪಾಯಿ ಲೆಕ್ಕದಲ್ಲಿ ೫ ಲಕ್ಷದ ೩೪ ಸಾವಿರ ಕೋಟಿಗೂ ಹೆಚ್ಚು! ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬಂತೆ ತಾವು ಗಳಿಸಿದ ಅಪಾರ ಸಂಪತ್ತನ್ನು ಸಮಾಜದ ಹಿತಕ್ಕೆ ಅರ್ಪಿಸಿರುವುದು ಅವರ ಔದಾರ್ಯವನ್ನು ಬಿಂಬಿಸಿದೆ. ಎರಡನೆಯದಾಗಿ ತಮ್ಮ ಬಹುರಾಷ್ಟ್ರೀಯ ಹೋಲ್ಡಿಂಗ್ ಕಂಪನಿಯಾದ ಬರ್ಕ್‌ಶೈರ್ ಹಾಥ್‌ವೇಯ ಉತ್ತರಾಧಿಕಾರವನ್ನು ಮೂವರು ಮಕ್ಕಳಿ ದ್ದರೂ, ಅವರಿಗೆ ಕೊಡಲಿಲ್ಲ!
ಬದಲಿಗೆ ಕುಟುಂಬದ ಹೊರಗಿನವರಾದ ಗ್ರೇಗ್ ಅಬೆಲ್ ಅವರಿಗೆ ಪಟ್ಟ ಕಟ್ಟಿದ್ದಾರೆ! ಹೊಸ ವರ್ಷದಿಂದ ಬಫೆಟ್ ಅವರ ಮಕ್ಕಳು ಕಂಪನಿಯ ಚುಕ್ಕಾಣಿ ಹಿಡಿಯುವುದಿಲ್ಲ. ಕಂಪನಿಯ ನಾಯಕತ್ವಕ್ಕೆ ಪ್ರತಿಭೆಯೇ ಮಾನದಂಡವೇ ಹೊರತು, ರಕ್ತಸಂಬಂಧವಲ್ಲ ಎನ್ನುವುದು ಬಫೆಟ್ ಅವರ ಅಚಲವಾದ ನಂಬಿಕೆ. ಮಕ್ಕಳೇ ಇರಬಹುದು, ಅವರಿಗೆ ಕಂಪನಿ ನಡೆಸುವ ಅರ್ಹತೆ ಇದ್ದರೆ ಮಾತ್ರ ಸಂಸ್ಥೆಯು ಬೆಳೆಯಬಹುದು, ಇಲ್ಲದಿದ್ದರೆ ಎಂಥ ಸಾಮ್ರಾಜ್ಯ ಬೇಕಾದರೂ ಪತನವಾಗಬಹುದು ಎನ್ನುತ್ತಾರೆ ವಾರೆನ್ ಬಫೆಟ್!
ಜತೆಗೆ ತಮ್ಮ ಮಕ್ಕಳಿಗೆ ನಾನೇನೂ ಕೊರತೆ ಮಾಡಿಲ್ಲ. ಆದರೆ ಅವರು ಸಂಪತ್ತಿನ ಮರು ಹಂಚಿಕೆ ಅಥವಾ ದಾನ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು, ಅವರಿಗೆ ಕಾರ್ಪೊ ರೇಟ್ ಆಡಳಿತದ ಜವಾಬ್ದಾರಿ ಬೇಡ ಎಂಬುದು ಬಫೆಟ್ ಅವರ ಸ್ಪಷ್ಟ ಚಿಂತನೆ. ಅದಕ್ಕೆ ಮಕ್ಕಳೂ ಒಪ್ಪಿದ್ದರು!