Wednesday, 11th December 2024

ಕಾಶ್ಮೀರದಿಂದ ಹಿಂದೂಗಳಿಗೆ ಏನು ಲಾಭ ?

ಕಹಿ ವಾಸ್ತವ

ಎಸ್.ಶ್ರೀನಿವಾಸ್

ಕೇಂದ್ರದ ಬಿಜೆಪಿ ಸರಕಾರವು ಐದು ವರ್ಷಗಳ ಹಿಂದೆ ಸಂವಿಧಾನದ ೩೭೦ ಮತ್ತು ೩೫-ಎ ವಿಧಿಗಳನ್ನು ರದ್ದುಗೊಳಿಸಿದಾಗ ನನ್ನ ಸ್ನೇಹಿತರೊಬ್ಬರು ಕರೆ
ಮಾಡಿ, ‘ಕಾಶ್ಮೀರದಿಂದ ಹಿಂದೂಗಳಿಗೆ ಏನು ಲಾಭ ಅಂತ ಕೇಳುತ್ತಿದ್ದಿರಲ್ಲ, ಈಗ ನೋಡಿ ದಾಲ್ ಸಾಗರ್ ಎದುರುಗಡೆಯೇ ನೀವೊಂದು ನಿವೇಶನವನ್ನು ಖರೀದಿಸಬಹುದು; ಅಲ್ಲದೆ, ಸ್ವಲ್ಪ ದಿನಗಳಲ್ಲೇ ಪಾಕ್ ಆಕ್ರಮಿತ ಕಾಶ್ಮೀರ ಕೂಡ ನಮ್ಮದಾಗುತ್ತೆ’ ಎಂದಿದ್ದರು.

ಇತ್ತೀಚೆಗೆ ಉಗ್ರಗಾಮಿಗಳ ಸರಣಿ ದಾಳಿಗಳಲ್ಲಿ ನಿತ್ಯ ಪ್ರಾಣ ಕಳೆದುಕೊಳ್ಳುತ್ತಿರುವ ನಮ್ಮ ಸೈನಿಕರ ಸುದ್ದಿ ಓದಿದ ನಂತರ ನಾನು ಆ ನನ್ನ ಸ್ನೇಹಿತರಿಗೆ ಕರೆಮಾಡಿ, ‘ನೋಡೀ, ಒಂದು ಒಳ್ಳೆಯ ನಿವೇಶನವಿದೆ, ಬಹಳ ಕಡಿಮೆ ದರದಲ್ಲಿ ಮಾರಾಟವಾಗ್ತಾ ಇದೆ. ನಿಮ್ಮ ಮಗಳ ಭವಿಷ್ಯಕ್ಕೆ ಒಂದು ಒಳ್ಳೆಯ ಹೂಡಿಕೆ ಆಗುತ್ತೆ’ ಅಂತ ಹೇಳಿ, ಅದರ ದರವನ್ನೂ ತಿಳಿಸಿದೆ. ಅದಕ್ಕವರು ಆಸಕ್ತಿ ತೋರಿ, ‘ನಿವೇಶನ ಎಲ್ಲಿದೆ?’ ಅಂತ ಕೇಳಿದರು. ನಾನು, ‘ಜೆ.ಜೆ. ನಗರದಲ್ಲಿ’ ಅಂದಾಗ ನಿರಾಶೆಗೊಂಡು, ‘ಏನ್ರೀ, ತಮಾಷೆ ಮಾಡ್ತೀರಾ?’ ಎಂದರು.

ಆಗ ನಾನು, ‘ಬೆಂಗಳೂರಿನಲ್ಲೇ ಒಂದು ಪ್ರದೇಶದಲ್ಲಿ ನಿವೇಶನ ಖರೀದಿಸಲು ಭಯ ಪಡೋ ನೀವು, ಇನ್ನು ಕಾಶ್ಮೀರದಲ್ಲಿ ಕೊಂಡ್ಕೊಳ್ತೀರಾ?!’ ಎಂದು ತ್ತರಿಸಿದೆ. ಈ ಲೇಖನ ಬರೆಯಲು ಈ ಸಂಭಾಷಣೆಯೇ ಸೂರ್ತಿಯಾಗಿದ್ದರಿಂದ, ಅದನ್ನಿಲ್ಲಿ ಉಲ್ಲೇಖಿಸಿರುವೆ, ಅಷ್ಟೇ. ಹಿಂದೂಗಳಿಗೆ ಯಾವ ಲಾಭವಾಗಿದೆ? ಕಳೆದ ೫ ವರ್ಷದಿಂದೀಚೆಗೆ ಎಷ್ಟು ಜನ ಪ್ರಭಾವಿ ರಾಜಕಾರಣಿಗಳು, ಸಿನಿಮಾ ತಾರೆಯರು (ಬಾಲಿವುಡ್‌ನ ಖಾನ್ ಗಳಾದರೂ) ಅಥವಾ ಉದ್ದಿಮೆದಾರರು ಕಾಶ್ಮೀರದಲ್ಲಿ ಆಸ್ತಿಯನ್ನು ಖರೀದಿಸಿದ್ದಾರೆ? ವಿದೇಶದಲ್ಲಿ ತಂತಮ್ಮ ಪಂಥದ ಮಂದಿರ- ಮಠಗಳನ್ನು ಸ್ಥಾಪಿಸಲು ಪೈಪೋಟಿ ಮಾಡುತ್ತಿರುವ ನಮ್ಮ ಕೆಲ ಮಠಾಧೀಶರು ಕಾಶ್ಮೀರದಲ್ಲಿ ತಮ್ಮ ಮಠವನ್ನು ಸ್ಥಾಪಿಸಲು ಹಿಂಜರಿಯುತ್ತಿರುವುದೇಕೆ? ಸ್ವಾಮಿನಾರಾಯಣ ಪಂಥದವರು ಭವ್ಯವಾದ ದೇವಸ್ಥಾನ ವನ್ನು ಸಂಯುಕ್ತ ಅರಬ್ ಗಣರಾಜ್ಯದಲ್ಲಿ (ಯುಎಇ) ಕಟ್ಟುವ ಬದಲು ಕಾಶ್ಮೀರದಲ್ಲೇಕೆ ಕಟ್ಟಲಿಲ್ಲ? ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಅನ್ನುವವರು ‘ಕ್ಯಾಂಪಸ್ ಆಯ್ಕೆ’ಯಲ್ಲಿ ತಮ್ಮ ಮಕ್ಕಳಿಗೆ ಕಾಶ್ಮೀರದಲ್ಲಿ ಕೆಲಸ ದೊರೆತರೆ ಅಲ್ಲಿಗೆ ತೆರಳಲು ಅನುಮತಿ ನೀಡುತ್ತಾರೋ? ಪ್ರಸ್ತುತ ಲಕ್ಷಾಂತರ ಹಿಂದೂಗಳು ಅಮೆರಿಕ, ಬ್ರಿಟನ್‌ನಲ್ಲಿ ಮತ್ತು ಯುರೋಪ್ ಖಂಡದ ಹಲವು ದೇಶಗಳಲ್ಲಿ ವಾಸಿಸುತ್ತಿದ್ದಾರೆ ಹಾಗೂ ಲಕ್ಷಾಂತರ ಭಾರತೀಯರು ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿದ್ಯಾಭ್ಯಾಸಕ್ಕಾಗಿ ಚೀನಾ ಸೇರಿ ದಂತೆ ಅನೇಕ ರಾಷ್ಟ್ರಗಳಿಗೆ ತೆರಳುವವರಿದ್ದಾರೆ. ಆದರೆ ಕಾಶ್ಮೀರ ಕಣಿವೆಯಲ್ಲಿ ಭಾರತ ಸರಕಾರವು ಸಾರ್ವಭೌಮತ್ವ ವನ್ನು ಹೊಂದಿದ್ದರೂ, ಅಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಹಿಂದೂಗಳು ಏಕೆ ಹಿಂಜರಿಯುತ್ತಾರೆ? ಇದಕ್ಕಿರುವ ಕಾರಣ ಸರಳವಾಗಿದೆ- ಅದೆಂದರೆ, ಭದ್ರತೆಯ ಕೊರತೆ ಮತ್ತು ಕಾಶ್ಮೀರದ ಮುಸಲ್ಮಾನರು ತಮ್ಮನ್ನು ಭಾರತದೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡದಿರುವುದು ಮತ್ತು ಭಾರತದ ಬಗ್ಗೆ ಅವರಿಗಿರುವ ತಿರಸ್ಕಾರದ ಮನೋಭಾವ.

೩೭೦ ಮತ್ತು ೩೫-ಎ ವಿಧಿಗಳನ್ನು ರದ್ದುಗೊಳಿಸಿದ ಕಾರಣ ಕಾಶ್ಮೀರದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಲಾಭವಾಗಿದೆ ಹಾಗೂ ಮೊನ್ನಿನ ಸಾರ್ವತ್ರಿಕ
ಚುನಾವಣೆಯಲ್ಲಿ ಹೆಚ್ಚು ಜನರು ಕಾಶ್ಮೀರದಲ್ಲಿ ಮತ ಚಲಾಯಿಸಿದರು ಎಂದು ಹಲವರು ಹಿಗ್ಗುತ್ತಾರೆ. ಪ್ರವಾಸೋದ್ಯಮದ ಚೇತರಿಕೆಯಿಂದ ಅಲ್ಲಿಯ ಮುಸಲ್ಮಾನರಿಗೆ ಲಾಭವಾಗಿದೆಯೇ ಹೊರತು ಮತ್ಯಾರಿಗೂ ಅಲ್ಲ. ಹಾಗೆಯೇ, ಹೆಚ್ಚು ಜನ ಮುಂದೆ ಬಂದು ಮತ ಚಲಾಯಿಸಿದ್ದರಿಂದ ಗೆದ್ದಿದ್ದು ಓರ್ವ ಮುಸಲ್ಮಾನ ಅಭ್ಯರ್ಥಿಯೇ ವಿನಾ, ಹಿಂದೂ ಅಭ್ಯರ್ಥಿಯಲ್ಲ. ಸಾಮಾನ್ಯವಾಗಿ ರಾಷ್ಟ್ರಗಳು ಖನಿಜ ಸಂಪನ್ಮೂಲಕ್ಕಾಗಿ, ವಸಾಹತಿನ ಉದ್ದೇಶಕ್ಕಾಗಿ ಅಥವಾ ದೇಶದ ಭದ್ರತೆಯ ದೃಷ್ಟಿಯಿಂದ ಕೆಲ ಪ್ರದೇಶಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತವೆ.

ಉದಾಹರಣೆಗೆ ರಷ್ಯಾವು ಕ್ರಿಮಿಯಾ ದ್ವೀಪವನ್ನು ಭದ್ರತಾ ಕಾರಣಕ್ಕಾಗಿ ಹಾಗೂ ಇಸ್ರೇಲ್ ದೇಶವು ವೆಸ್ಟ್ ಬ್ಯಾಂಕ್ ಪ್ರದೇಶವನ್ನು ತನ್ನ ಜನರನ್ನು ನೆಲೆಗೊಳಿಸಲು ಆಕ್ರಮಿಸಿಕೊಂಡಿವೆ. ಆದರೆ ಭಾರತ ಸರಕಾರಕ್ಕೆ ಈ ಯಾವ ಉದ್ದೇಶಗಳಿಲ್ಲ. ಹಾಗಿದ್ದಲ್ಲಿ, ಕೇವಲ ಪ್ರತಿಷ್ಠೆಗೋಸ್ಕರ ಕೋಟ್ಯಂತರ ರುಪಾಯಿಗಳನ್ನು ಭಾರತವು ವ್ಯಯ ಮಾಡುತ್ತಿರುವುದೇಕೆ ಹಾಗೂ ಸಾವಿರಾರು ಸೈನಿಕರ ಬಲಿಪಡೆದಿರುವ ಕಾಶ್ಮೀರವನ್ನು ತನ್ನ ವಶದಲ್ಲಿ ಇಟ್ಟು ಕೊಳ್ಳಲು ಪ್ರಯತ್ನಿಸುತ್ತಿರುವುದೇಕೆ? ಕಾಶ್ಮೀರ ಕಣಿವೆಯ ಮೇಲಿನ ತನ್ನ ಹಿಡಿತವನ್ನು ಕಾಪಾಡಿಕೊಳ್ಳಲು ಭಾರತ ಸರಕಾರವು ಇದುವರೆಗೂ ಕೋಟಿ ಗಟ್ಟಲೆ ರುಪಾಯಿಗಳನ್ನು ವ್ಯಯ ಮಾಡಿದೆ. ಕೇವಲ ‘ಸಿಯಾಚಿನ್’ ಎಂಬ ಪ್ರದೇಶವನ್ನು ಕಾಪಿಟ್ಟುಕೊಳ್ಳಲು ದಿನನಿತ್ಯ ೬ ಕೋಟಿ ರುಪಾಯಿಯನ್ನು ಅದು ಖರ್ಚು ಮಾಡುತ್ತಿದೆ.

ಕಾಶ್ಮೀರಕ್ಕಾಗಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಯುದ್ಧಗಳಿಂದ ಮತ್ತು ಉಗ್ರಗಾಮಿಗಳ ದಾಳಿಯಿಂದ ಸತ್ತ/ಸಾಯುತ್ತಿರುವ ನಮ್ಮ ಸೈನಿಕರ ಸಂಖ್ಯೆ ಬಹುಶಃ ಲಕ್ಷಕ್ಕೆ ಮುಟ್ಟಿರಬಹುದು. ಕಾಶ್ಮೀರದ ಅಭಿವೃದ್ಧಿಗಾಗಿ ಭಾರತ ಸರಕಾರವು ಇದುವರೆಗೂ ಕೋಟ್ಯಂತರ ರುಪಾಯಿ ಖರ್ಚುಮಾಡಿದ್ದರೂ ಅಲ್ಲಿಯ ಜನ ಭಾರತವನ್ನು ದ್ವೇಷಿಸುತ್ತಾರೆ, ಪಾಕಿಸ್ತಾನದಿಂದ ಬರುವ ಉಗ್ರಗಾಮಿಗಳಿಗೆ ಆಶ್ರಯ ಹಾಗೂ ಗುಪ್ತಮಾಹಿತಿಗಳನ್ನು ನೀಡಿ ಅವರೊಂದಿಗೆ ಸಹಕರಿಸುತ್ತಾರೆ. ಹೀಗಿರುವಾಗ ಕಾಶ್ಮೀರವನ್ನು ಯಾವ ಪುರುಷಾರ್ಥಕ್ಕಾಗಿ ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ಹಿಂದೂಗಳು ಹಪಹಪಿಸುತ್ತಿದ್ದಾರೆ?
ಪಟೇಲರಿಗೆ ಆಸಕ್ತಿ ಇರಲಿಲ್ಲ ಬೇರೆಲ್ಲಾ ರಾಜ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರು ಕಾಶ್ಮೀರ ರಾಜ್ಯದ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರಲಿಲ್ಲ.

ಇದಕ್ಕೆ ಮುಖ್ಯಕಾರಣ, ಅಲ್ಲಿನ ನಿವಾಸಿಗಳಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದು, ಇದರಿಂದ ಮುಂದೆ ಭಾರತಕ್ಕೆ ತೊಂದರೆ ಯಾಗಬಹುದು ಎಂಬುದು ಅವರ ಗ್ರಹಿಕೆ ಯಾಗಿತ್ತು. ಆದ್ದರಿಂದ, ೧೯೪೭ರ ಆಗಸ್ಟ್‌ನಲ್ಲಿ ಭಾರತ ಸ್ವತಂತ್ರವಾದಾಗ ಕಾಶ್ಮೀರವು ನವಭಾರತದ ಭಾಗವಾಗಿರಲಿಲ್ಲ. ಎರಡು
ತಿಂಗಳ ನಂತರ ಪಾಕಿಸ್ತಾನವು ಕಾಶ್ಮೀರದ ಮೇಲೆ ದಾಳಿಮಾಡಿದಾಗ, ಅದರ ಮಹಾರಾಜನು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ.

೧೯೩೩ರಲ್ಲೇ ಭಾರತದ ಮುಸಲ್ಮಾನರಿಗೆ ಒಂದು ಪ್ರತ್ಯೇಕ ರಾಜ್ಯದ ಬಗ್ಗೆ ಪರಿಕಲ್ಪನೆ ಮಾಡಿದ್ದ ರಹಮತ್ ಅಲಿ ಎಂಬುವವನು ಇದರಲ್ಲಿ ಕಾಶ್ಮೀರವನ್ನು ಸೇರಿಸಿದ್ದ. ೧೯೪೭ರಲ್ಲಿ ಬ್ರಿಟಿಷರು ಭಾರತವನ್ನು ತೊರೆಯುವ ಮೊದಲು ೫೦೦ಕ್ಕೂ ಹೆಚ್ಚಿನ ರಾಜ ಸಂಸ್ಥಾನಗಳಿಗೆ ಒಂದೋ ಭಾರತದಲ್ಲಿ ಇಲ್ಲವೇ ಪಾಕಿಸ್ತಾನದಲ್ಲಿ ವಿಲೀನಗೊಳ್ಳುವ ಆಯ್ಕೆಯನ್ನು ನೀಡಲಾಗಿತ್ತು. ಆಗ ಹೈದರಾಬಾದ್ ಸಂಸ್ಥಾನದ ನಿಜಾಮನು ಮೊದಲು ಸ್ವತಂತ್ರನಾಗಿ ಉಳಿಯಲು ನಿರ್ಧರಿಸಿ, ನಂತರದಲ್ಲಿ ತನ್ನ ಸಂಸ್ಥಾನವನ್ನು ಪಾಕಿಸ್ತಾನದೊಡನೆ ವಿಲೀನಗೊಳಿಸಲು ಮುಂದಾದ. ಆದರೆ, ಹೈದರಾಬಾದ್ ಸಂಸ್ಥಾನದ ಬಹುಪಾಲು ಜನರು ಹಿಂದೂಗಳಾಗಿದ್ದ ಕಾರಣ ಅದು ಭಾರತಕ್ಕೆ ಸೇರಬೇಕೆಂದು ಆಗ್ರಹಿಸಿದ ವಲ್ಲಭ್‌ಭಾಯಿ ಪಟೇಲರು ಸೇನೆ ಮತ್ತು ಪೊಲೀಸ್ ಬಲದ ನೆರವಿ ನೊಂದಿಗೆ ಹೈದರಾಬಾದ್ ಸಂಸ್ಥಾನವು ಭಾರತದಲ್ಲಿ ವಿಲೀನಗೊಳ್ಳುವಂತೆ ನೋಡಿಕೊಂಡರು.

ಹಾಗೆಯೇ ಜುನಾಗಢ ಸಂಸ್ಥಾನದ ನವಾಬನು ಪಾಕಿಸ್ತಾನದೊಂದಿಗೆ ವಿಲೀನಗೊಳ್ಳಲು ತೀರ್ಮಾನಿಸಿದಾಗ ಅಂದಿನ ಭಾರತ ಸರಕಾರವು ಅವನ ತೀರ್ಮಾ ನವನ್ನು ತಿರಸ್ಕರಿಸಿ ಜುನಾಗಢವನ್ನು ವಶಪಡಿಸಿಕೊಂಡಿತು. ಜುನಾಗಢದಲ್ಲಿ ಬಹುಪಾಲು ನಾಗರಿಕರು ಹಿಂದೂಗಳು ಎಂಬುದು ಈ ಕ್ರಮಕ್ಕೆ ಭಾರತ ಸರಕಾರವು ಕೊಟ್ಟ ಕಾರಣವಾಗಿತ್ತು. ಇದೇ ತರ್ಕದ ಪ್ರಕಾರ, ಕಾಶ್ಮೀರವು ತನಗೆ ಸೇರಬೇಕೆಂಬುದು ಪಾಕಿಸ್ತಾನದ ವಾದವಾಗಿತ್ತು.

ಜನಾಭಿಪ್ರಾಯ ಸಂಗ್ರಹವೇ ಪರಿಹಾರ ಭಾರತವು ತನ್ನನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಕರೆದುಕೊಳ್ಳುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಲಾಗುತ್ತದೆ. ಕಾಶ್ಮೀರಿಗಳು ಭಾರತದಲ್ಲಿಯೇ ಇರಬೇಕೋ ಅಥವಾ ಪಾಕಿಸ್ತಾನಕ್ಕೆ ಸೇರಬೇಕೊ ಅಥವಾ ಸ್ವತಂತ್ರವಾಗಿ ಉಳಿಯಬೇಕೋ ಎಂಬುದನ್ನು ನಿರ್ಧರಿಸಲು ‘ಜನಾಭಿಪ್ರಾಯ ಸಂಗ್ರಹ’ಕ್ಕೆ ಮುಂದಾಗುವುದಾಗಿ ಭಾರತವು ವಿಶ್ವಸಂಸ್ಥೆಗೆ ಭರವಸೆ ನೀಡಿತ್ತು. ಕಾರಣಾಂತರಗಳಿಂದ ಅದನ್ನು ನಡೆಸಲಾಗಲಿಲ್ಲ. ಯುಗೋಸ್ಲಾವಿಯಾ, ಜೆಕೊಸ್ಲೋವಾಕಿಯಾದಂಥ ಐರೋಪ್ಯ ರಾಷ್ಟ್ರಗಳು ಜನಾಭಿಪ್ರಾಯ ಸಂಗ್ರಹಿಸುವ ಮೂಲಕ ವಿವಿಧ ಜನಾಂಗೀಯ ಅಲ್ಪಸಂಖ್ಯಾತರಿಗೆ ಪ್ರತ್ಯೇಕವಾಗಿ ಸ್ವತಂತ್ರ ರಾಜ್ಯ/ರಾಷ್ಟ್ರಗಳನ್ನು ಸ್ಥಾಪಿಸಲು ಒಪ್ಪಿ ತಂತಮ್ಮ ಜನಾಂಗೀಯ ಸಮಸ್ಯೆಗಳನ್ನು ಬಗೆಹರಿಸಿಕೊಂಡಿವೆ.

ಪ್ರಸ್ತುತ, ಮೂಲ ಕಾಶ್ಮೀರ ಸಂಸ್ಥಾನದ ಸುಮಾರು ಮೂರನೇ ಒಂದರಷ್ಟು ಭಾಗವು ಪಾಕಿಸ್ತಾನದ ನಿಯಂತ್ರಣದಲ್ಲಿದ್ದು ಅದನ್ನು ‘ಆಜಾದ್ ಕಾಶ್ಮೀರ’ ಎಂದು ಕರೆಯಲಾಗುತ್ತದೆ. ಭಾರತದ ವಶದಲ್ಲಿರುವ ಕಾಶ್ಮೀರ ಕಣಿವೆಯಲ್ಲಿ ಶೇ.೧೦೦ ರಷ್ಟು ಮುಸ್ಲಿಮರು, ಜಮ್ಮುವಿನಲ್ಲಿ ಶೇ.೭೦ರಷ್ಟು ಹಿಂದೂಗಳು ಮತ್ತು ಶೇ.೩೦ರಷ್ಟು ಮುಸಲ್ಮಾನರು ಹಾಗೂ ಲಡಾಖ್‌ನಲ್ಲಿ ಐವತ್ತು-ಐವತ್ತು ಅನುಪಾತದಲ್ಲಿ ಮುಸಲ್ಮಾನರು-ಬೌದ್ಧರು ನೆಲೆಸಿದ್ದಾರೆ.

ಭಾರತವು ಈಗಲಾದರೂ ವಿಶ್ವಸಂಸ್ಥೆಯ ಆಶ್ರಯದಲ್ಲಿ ಮತ್ತು ಪ್ರಮುಖ ರಾಷ್ಟ್ರಗಳ ಸಮ್ಮುಖದಲ್ಲಿ ಜನಾಭಿಪ್ರಾಯ ಸಂಗ್ರಹಣೆ ಮಾಡಿ, ಬಹುಸಂಖ್ಯೆ ಯಲ್ಲಿ ಮುಸಲ್ಮಾನರಿರುವ ಕಾಶ್ಮೀರವನ್ನು ಸಂಪೂರ್ಣವಾಗಿ ಹಾಗೂ ಮುಸ್ಲಿಂ ಬಾಹುಳ್ಯದ ಜಮ್ಮುವಿನ ಕೆಲಭಾಗವನ್ನು ಪಾಕಿಸ್ತಾನಕ್ಕೆ ಕೊಟ್ಟು, ಉಳಿದ ಜಮ್ಮು ಪ್ರದೇಶವನ್ನು ಹಿಮಾಚಲ ಪ್ರದೇಶದೊಂದಿಗೆ ವಿಲೀನಗೊಳಿಸಿ, ಲಡಾಖ್ ಪ್ರದೇಶದಲ್ಲಿ ಹಿಂದೂ ಜನಸಂಖ್ಯೆ ಇಲ್ಲದ ಕಾರಣ ಅದನ್ನು ವಿಶ್ವ ಸಂಸ್ಥೆಯ ಆಡಳಿತಕ್ಕೆ ಬಿಟ್ಟುಕೊಡುವುದರಿಂದ ‘ಕಾಶ್ಮೀರ ಸಮಸ್ಯೆ’ಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದು ಮತ್ತು ಮುಂದಿನ ಪೀಳಿಗೆಗೆ ಉಗ್ರವಾದ-ಮುಕ್ತ ಭಾರತವನ್ನು ಬಳುವಳಿಯಾಗಿ ನೀಡಬಹುದು. ಲಡಾಖ್ ಅನ್ನು ಬಿಟ್ಟುಕೊಡುವ ಮುಖಾಂತರ ಚೀನಾ ದೊಂದಿಗಿನ ನಮ್ಮ ಗಡಿ ವಿವಾದವು ಬಗೆಹರಿ ದಂತಾಗುತ್ತದೆ.

ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಹಾಗೂ ಗಾಜಾದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ಶಾಂತಿಸ್ಥಾಪನೆಯ ಮಧ್ಯಸ್ತಿಕೆ ವಹಿಸುತ್ತಾರೆ ಎಂಬ ಸುದ್ದಿಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ಅವರು ತಮ್ಮ ಕಾಲಾವಧಿಯಲ್ಲಿ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಿದರೆ, ಅದು ನಿಜಾರ್ಥದಲ್ಲಿ ‘ಶಾಂತಿ ಸ್ಥಾಪನೆ’ಯ ಉಪಕ್ರಮವಾದೀತು.

(ಲೇಖಕರು ಇತಿಹಾಸಕಾರರು ಹಾಗೂ
ಸಂಶೋಧಕರು)