Sunday, 13th October 2024

ಕಾಂಗ್ರೆಸ್ ಕಟ್ಟಿ ತಪ್ಪು ಮಾಡಿದೆ ಎಂದು ಗಾಂಧಿಗೆ ಅನಿಸಿದಾಗ

ಗಾಂಧಿಯನ್ನು ನಾವು ಹಿಡಿಯಲಿಲ್ಲವೆಂದು ಸರಕಾರದವರು ಜಂಭ ಬಡಿಯುತ್ತಾರೆ. ಅವನು ಕಾಯಿದೆಯನ್ನು ಮುರಿಯುತ್ತಾನೆ; ಸರಕಾರಕ್ಕೆ ಬೈಯುತ್ತಾನೆ. ಹೀಗಿದ್ದೂ ದಂಡ ಕಟ್ಟಿಕೊಂಡು ಕುಳಿತ ಸರಕಾರವು ಸುಮ್ಮನೆ ಕುಳಿತಿದೆ. ಮೂಗಿಲ್ಲದ ಚಂದಗೇಡಿ ಎರಡನೆಯವರೆದುರಿಗೆ ಹೋಗಿ, ಅವರಿಗೆ ಅಪಶಕುನ ಮಾಡಿದೆನೆಂದು ಡೌಲು ಬಡಿಯುತ್ತಿತ್ತಂತೆ. ಆದರೆ ತನಗೆ ಮೂಗಿಲ್ಲದ್ದು ಮರೆತಿತ್ತು. ಅದರಂತೆ ಸರಕಾರದ ಸ್ಥಿತಿಯಾಗಿದೆ. ಗಾಂಧಿಯನ್ನು ಹಿಡಿಯುವ ಧೈರ್ಯವಿಲ್ಲ.

ಕೆಲ ವರ್ಷದ ಹಿಂದೆ ಹಿಂದೆ ಬೆಂಗಳೂರಿನ ತರಗುಪೇಟೆಯಲ್ಲಿರುವ ರದ್ದಿ ಅಂಗಡಿಗೆ ಹೋದಾಗ, ಮಾಣಿಕ್ಯ ಸಿಕ್ಕಂತೆ, ಸುಮಾರು ನೂರಾ ಒಂದು ವರ್ಷ ಹಿಂದಿನ ‘ಕರ್ನಾಟಕ ವೈಭವ’ ಪತ್ರಿಕೆ ಸಿಕ್ಕಿತು. ಪತ್ರಿಕೆ ಧೂಳು ತಿಂದು ಮಣ್ಣು ಬಣ್ಣಕ್ಕೆ ತಿರುಗಿತ್ತು. ಯಾವನೋ ಪುಣ್ಯಾತ್ಮ ಇಷ್ಟು ವರ್ಷಗಳ ಕಾಲ ಆ ಪತ್ರಿಕೆಯ ಸಂಚಿಕೆಗಳನ್ನು ಜತನದಿಂದ ಕಾಪಾಡಿಕೊಂಡು, ಇನ್ನು ಪ್ರಯೋಜನ ಇಲ್ಲವೆಂದು ರದ್ದಿ ಅಂಗಡಿಗೆ ತಂದು ತೂಕಕ್ಕೆ ಹಾಕಿದ್ದಿರಬೇಕು.

ಇನ್ನೇನು ಕೆಲ ದಿನಗಳಲ್ಲಿ ಆ ರದ್ದಿ ಅಂಗಡಿಯಲ್ಲಿದ್ದ ‘ಕರ್ನಾಟಕ ವೈಭವ’ ಪತ್ರಿಕೆಯ ಸಂಚಿಕೆಗಳೆಲ್ಲ ಶಿವಕಾಶಿಗೆ ಹೋಗಿ ಪಟಾಕಿಯೊಳಗೆ ಸೇರಿ, ‘ಢಮ್’ ಎಂದು ಸ್ಫೋಟಿಸಿ ಬೂದಿಯಾಗುತ್ತದೆ. ‘ಕರ್ನಾಟಕ ವೈಭವ’ಕ್ಕೆ ಭವ್ಯ ಇತಿಹಾಸವಿದೆ. ಆ ಪತ್ರಿಕೆಯನ್ನು 1892ರಲ್ಲಿ ಎಸ್.ಎನ್. ಪಾಟೀಲ ಎಂಬು ವವರು ವಿಜಯಪುರದಲ್ಲಿ ಆರಂಭಿಸಿದರು. ಅವರೇ ಅದರ ಮೊದಲ ಸಂಪಾದಕರು. ಆಗ ಅದು ವಾರಪತ್ರಿಕೆಯಾಗಿತ್ತು. ಪತ್ರಿಕೆಯ ಬೆಲೆ ಎರಡು ಪೈಸೆ. ಆನಂತರ ಈ ಪತ್ರಿಕೆಯನ್ನು ವೆಂಕಟೇಶ ಬಿ. ನಾಯಕ ಮತ್ತು ಮೊಹರೆ ಹಣಮಂತರಾಯರು ಖರೀದಿಸಿದರು.

ಮೊಹರೆಯವರು ಸಂಪಾದಕರಾದರು. ಮೊಹರೆಯವರು ಸುಮಾರು ಎರಡೂವರೆ ದಶಕಗಳ ಕಾಲ ಈ ಪತ್ರಿಕೆಯನ್ನು
ಯಶಸ್ವಿಯಾಗಿ ನಡೆಸಿದರು. ‘ಕರ್ನಾಟಕ ವೈಭವ’ದ ಅನುಭವವೇ ಅವರಿಗೆ ಮುಂದೆ ‘ಸಂಯುಕ್ತ ಕರ್ನಾಟಕ’ ದೈನಿಕ,
‘ಕರ್ಮವೀರ’ ವಾರಪತ್ರಿಕೆ ಮತ್ತು ‘ಕಸ್ತೂರಿ’ ಮಾಸಪತ್ರಿಕೆ ಆರಂಭಿಸಲು ಪ್ರೇರಣೆ ನೀಡಿತು ಎಂಬುದು ದೊಡ್ಡ ಕತೆ. ನನಗೆ ಸಿಕ್ಕ ‘ಕರ್ನಾಟಕ ವೈಭವ’ ಪತ್ರಿಕೆಯ ಮುಖಪುಟದಲ್ಲಿ ಥಟ್ಟನೆ ಕಣ್ಣಿಗೆ ಬಿದ್ದಿದ್ದು ‘ಅಪ್ಪಾಭಟ್ಟನ ಹೊತ್ತಿಗೆ’ ಎಂಬ ಅಂಕಣ.

ಇದನ್ನು ಬರೆಯುತ್ತಿದ್ದವರು ಮೊಹರೆ ಹಣಮಂತರಾಯರು. ಒಂದು ಕಾಲಕ್ಕೆ ಇದು ಅತ್ಯಂತ ಜನಪ್ರಿಯ ಅಂಕಣವಾಗಿತ್ತು ಎಂದು ಖ್ಯಾತ ಪತ್ರಕರ್ತರಾಗಿದ್ದ ದಿವಂಗತ ಕೆ. ಶಾಮರಾಯರು ಹೇಳುತ್ತಿದ್ದರು. ‘ಅಪ್ಪಾಭಟ್ಟನ ಹೊತ್ತಿಗೆ’ ಅಂಕಣದ
ಬಗ್ಗೆ ಕನ್ನಡದ ಖ್ಯಾತ ಅಂಕಣಕಾರರಾಗಿದ್ದ ಹಾ.ಮಾ. ನಾಯಕ ಅವರು ಸುಮಾರು ಮೂವತ್ತು ವರ್ಷಗಳ ಹಿಂದೆ ‘ಪ್ರಜಾವಾಣಿ’ ಯಲ್ಲಿ ಬರೆದಿದ್ದನ್ನು ಓದಿದ ನೆನಪು.

ಈ ಅಂಕಣದಲ್ಲಿನ ‘ಅಪ್ಪಾಭಟ್ಟ’ ಒಬ್ಬ ಕಾಲ್ಪನಿಕ ವ್ಯಕ್ತಿ. ಆತ ಒಬ್ಬ ಜ್ಯೋತಿಷಿ ಅರ್ಥಾತ್ ಭವಿಷ್ಯ ಹೇಳುವವ. ಅವನಲ್ಲಿ ಭವಿಷ್ಯ ಕೇಳಲು ದಿನವೂ ನೂರಾರು ಜನ ಬರುತ್ತಿದ್ದರು. ಅವರು ವೈಯಕ್ತಿಕ ಪ್ರಶ್ನೆಗಳಲ್ಲದೇ, ಸಾಮಾಜಿಕ , ರಾಜಕೀಯ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದಕ್ಕೆ ಅಪ್ಪಾ ಭಟ್ಟ ವಿಡಂಬನಾತ್ಮಕವಾಗಿ,
ನವಿರಾದ ಹಾಸ್ಯದ ಮೂಲಕ ಉತ್ತರ ಹೇಳುತ್ತಿದ್ದ. ಅಪ್ಪಾಭಟ್ಟ ಯಾರು ಎಂಬ ಬಗ್ಗೆ ಓದುಗರಲ್ಲಿ ತೀವ್ರ ಜಿಜ್ಞಾಸೆ ಇತ್ತು. ತಮಗೆ
ಹೇಳಲು ಸಾಧ್ಯವಾಗದ್ದನ್ನು ಮೊಹರೆಯವರು ಅಪ್ಪಾಭಟ್ಟನ ಮೂಲಕ ಹೇಳಿಸುತ್ತಿದ್ದರು.

ಈ ಅಂಕಣದ ಮೂಲಕ ಅವರು ಎಲ್ಲರನ್ನೂ ಟೀಕಿಸುತ್ತಿದ್ದರು. ಮೊಹರೆಯವರು ಒಂದು ಅಂಕಣದಲ್ಲಿ ನಾಲ್ಕು ವಿಷಯಗಳನ್ನು ಬರೆಯುತ್ತಿದ್ದರು. ‘ಕರ್ನಾಟಕ ವೈಭವ’ದ (ಫೆಬ್ರವರಿ 12, 1920) ಸಂಚಿಕೆಯಲ್ಲಿ ಅಪ್ಪಾ ಭಟ್ಟ ಹೀಗೆ ಬರೆಯುತ್ತಾನೆ – ಗಾಂಧಿ ಯನ್ನು ನಾವು ಹಿಡಿಯಲಿಲ್ಲವೆಂದು ಸರಕಾರದವರು ಜಂಭ ಬಡಿಯುತ್ತಾರೆ. ಅವನು ಕಾಯಿದೆಯನ್ನು ಮುರಿಯುತ್ತಾನೆ; ಸರಕಾರಕ್ಕೆ ಬೈಯುತ್ತಾನೆ. ಹೀಗಿದ್ದೂ ದಂಡ ಕಟ್ಟಿಕೊಂಡು ಕುಳಿತ ಸರಕಾರವು ಸುಮ್ಮನೆ ಕುಳಿತಿದೆ. ಮೂಗಿಲ್ಲದ ಚಂದಗೇಡಿ
ಎರಡನೆಯವರೆದುರಿಗೆ ಹೋಗಿ, ಅವರಿಗೆ ಅಪಶಕುನ ಮಾಡಿದೆನೆಂದು ಡೌಲು ಬಡಿಯುತ್ತಿತ್ತಂತೆ. ಆದರೆ ತನಗೆ ಮೂಗಿಲ್ಲದ್ದು ಮರೆತಿತ್ತು. ಅದರಂತೆ ಸರಕಾರದ ಸ್ಥಿತಿಯಾಗಿದೆ.

ಗಾಂಧಿಯನ್ನು ಹಿಡಿಯುವ ಧೈರ್ಯವಿಲ್ಲ. ಮೇಲೆ ಗಾಂಧಿಯು ಸೋತನೆಂದು ಹೇಳುತ್ತದೆ. ಭಟ್ಟರ ಪಂಚಾಂಗದಲ್ಲಿ ಸರಕಾರಕ್ಕೆ ಹತ್ತಿದ ಈ ಗ್ರಹಕ್ಕೆ ಹೆಸರಿಲ್ಲ. ಈ ಅಂಕಣದ ಇನ್ನೊಂದು ವಿಷಯ – ಕಾಂಗ್ರೆಸಿಗೆ ಸೇರಿ ದೊಡ್ಡ ಮನುಷ್ಯರಾಗಬೇಕಾದರೆ ಬಹಳ ಕಠಿಣವಿಲ್ಲ. ಮುಸಲ್ಮಾನನಾಗಬೇಕು ಅಥವಾ ಬ್ರಾಹ್ಮಣೇತರ ಆಗಬೇಕು. ಲಿಂಗಾಯತರಿದ್ದಾರೆ ನೆಟ್ಟಗೆ ಮೊದಲು ಕಾಂಗೆಸನ್ನು ಬೈದು, ಹಿಂದಗಡೆ ಕಾಂಗ್ರೆಸನ್ನು ಸೇರಬೇಕು. ಇಲ್ಲದಿದ್ದರೆ ಕನಿಷ್ಠ ಪಕ್ಷಕ್ಕೆ ವಕೀಲನಾಗಲಿ ಅಥವಾ ಶ್ರೀಮಂತರ ಮಗನಾಗಲಿ ಇರಬೇಕು. ಆಗ ತಕ್ಷಣ ಕಾಂಗ್ರೆಸ್ ಮುಖಂಡನಾಗುತ್ತಾನೆ. 20-25 ವರುಷ ಏಕನಿಷ್ಠೆಯಿಂದ ಕಾಂಗ್ರೆಸ್ ಪಕ್ಷದ ಕೆಲಸ ಮಾಡುವವನನ್ನು ದುಡ್ಡಿಲ್ಲದಿದ್ದರೆ ಯಾರು ಕೇಳುವರು? ಕಾಂಗ್ರೆಸ್ ಪಕ್ಷದಲ್ಲಿ ದುಡ್ಡೇ ದೊಡ್ಡಪ್ಪ ಎಂದು ಭಟ್ಟರಿಗೆ ತಿಳಿಯಿತು.’

ಅಪ್ಪಾಭಟ್ಟ ಕಾಂಗ್ರೆಸಿನ ಸ್ಥಿತಿ – ಗತಿ ಬಗ್ಗೆ ಹೀಗೆ ಹೇಳುತ್ತಾನೆ – ‘ಈ ಕಾಂಗ್ರೆಸ್ ನಾಯಕರು ದೇಶವನ್ನು ಬ್ರಿಟಿಷರಿಂದ ಬಿಡುಗಡೆ ಮಾಡುತ್ತೇವೆಂದು ಹೇಳುತ್ತಾರೆ. ಆದರೆ ಈ ನಾಯಕರಿಂದ ಬಿಡುಗಡೆ ಆದರೆ ಸಾಕು ಎಂದು ಅನಿಸಲಾರಂಭಿಸಿದೆ. ಗಾಂಧಿ ಯವರು ಈ ಎಲ್ಲ ನಾಯಕರನ್ನು ತಮ್ಮ ಸಂಗಡ ಹೇಗೆ ಕರೆದೊಯ್ಯುತ್ತಾರೆ ಎಂಬುದೇ ನನಗೆ ಜಿಜ್ಞಾಸೆ. ಗಾಂಧಿಯವರು
ಮುಂದೆ ಮುಂದೆ ನಡೆಯುತ್ತಿದ್ದರೆ ಕಾಂಗ್ರೆಸ್ ನಾಯಕರು ಅವರನ್ನು ತಳ್ಳಿ ಬಿಡಬಹುದು ಎಂದು ಅನಿಸುತ್ತಿದೆ. ಗಾಂಧಿ ಯವರನ್ನು ಅವರ ಬೆನ್ನ ಹಿಂದೆ ಟೀಕಿಸುವವರು ಅವರನ್ನು ಬೆನ್ನ ಹಿಂದಿನಿಂದ ತಳ್ಳಲಾರರು ಎಂದು ಹೇಗೆ ಹೇಳುವುದು?
ಗಾಂಧಿಯವರನ್ನು ನೋಡಿದರೆ ನನಗೆ ಮರುಕವಾಗುತ್ತದೆ.

ಅವರು ತಾವೊಬ್ಬರೇ ದೇಶ ಉದ್ಧಾರ ಮಾಡುತ್ತೇನೆ ಎಂದು ಹೋಗುತ್ತಿದ್ದಾರೆ. ಆದರೆ ಅವರ ಸುತ್ತ ತಮ್ಮನ್ನು ಉದ್ಧಾರ
ಮಾಡಿಕೊಳ್ಳುವವರೇ ಸೇರಿದ್ದಾರೆ. ಈ ಗಾಂಧಿಯವರನ್ನು ಕನಿಷ್ಠ ಪಕ್ಷ ಅವರ ಪಾಡಿಗೆ ಅವರ ಆಶ್ರಮದಲ್ಲಿ ಬದುಕಲು
ಬಿಡುತ್ತಾರಾ ಎಂಬ ಸಂಶಯ ಕಾಡುತ್ತಿದೆ. ಕಾಂಗ್ರೆಸ್ ಪಕ್ಷ ಕಟ್ಟಿ ತಾನು ತಪ್ಪು ಮಾಡಿದೆ ಎಂದು ಗಾಂಧಿಗೆ ಅನಿಸಿದರೆ, ಆಗ
ಸಮಯ ಮೀರಿರುತ್ತದೆ. ಗಾಂಧಿಯವರು ಎಲ್ಲವನ್ನೂ ಸುಮ್ಮನೆ ನೋಡುತ್ತಿರಬೇಕು. ಅವರ ಸುತ್ತಮುತ್ತ ಇರುವ ಜನರನ್ನು
ನೋಡಿದರೆ ಗಾಂಧಿ ಅವರ ಬಗ್ಗೆ ಕನಿಕರ ಆಗುತ್ತದೆ. ಆದರೂ ಅವರ ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು. ನೂರು ವರ್ಷಗಳ ಹಿಂದೆ ಅಪ್ಪಾ ಭಟ್ಟ ಬರೆದಿದ್ದು ಇಂದಿಗೂ ಸತ್ಯ !

ಊರಿನ ಹೆಸರು ಮತ್ತು ಉಚ್ಚಾರ!
ಕೆಲವು ವರ್ಷಗಳ ಹಿಂದೆ ಜಾರ್ಜಿಯಾದ ರಾಜಧಾನಿ ಟಿಬಿಲಿಸಿಯಲ್ಲಿ ಹಿಂಸಾಚಾರವಾದಾಗ, ಕನ್ನಡದ ಪತ್ರಿಕೆಗಳು ವರದಿ ಮಾಡುವಾಗ, ಟಿಬಿಲಿಸಿ ಹೆಸರನ್ನು ಒಂದೊಂದು ಒಂದೊಂದು ರೀತಿಯಲ್ಲಿ ಬರೆದಿದ್ದವು. ಇದಕ್ಕೆ ಕಾರಣ ಟಿಬಿಲಿಸಿ ಸ್ಪೆಲ್ಲಿಂಗ್-Tbilisi!

ಯಾರಿಗೇ ಆಗಲಿ, ಇದನ್ನು ಹೇಗೆ ಉಚ್ಚರಿಸಬೇಕು ಎಂಬುದು ಗೊತ್ತಾಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಥರ ಹೇಳುತ್ತಾರೆ. ಕೆಲವರು ‘ಟಿ’ ಸೈಲೆಂಟ್ ಎಂದು ಭಾವಿಸಿ ‘ಬಿಲಿಸಿ’ ಅಂತಾರೆ. ಕೆಲವೊಮ್ಮೆ ಟೈಪ್ ಮಾಡಿದ್ದನ್ನು ನೋಡದಿದ್ದರೆ
ಅಥವಾ ಆಟೋ ಕರೆಕ್ಟ್‌ನಿಂದಾಗಿ ‘ಬೀಳಿಸಿ’ ಎಂದಾಗುವುದೂ ಉಂಟು. ಇನ್ನು ಕೆಲವರು ಬಿ ಸೈಲಂಟ್ ಎಂದು ಭಾವಿಸಿ ‘ತಿಲಿಸಿ’ ಎಂದು ಹೇಳುವುದುಂಟು.

ಅದು ಆಟೋ ಕರೆಕ್ಟ್‌ನಿಂದಾಗಿ ‘ತಿಳಿಸಿ’ ಎಂದಾಗುವುದೂ ಉಂಟು. ಒಟ್ಟಾರೆ ಟಿಬಿಲಿಸಿ ಒಂದಷ್ಟು ಗೊಂದಲವನ್ನು ಉಂಟು ಮಾಡುವುದಂತೂ ನಿಜ. ಇದ್ಯಾವುದೂ ಬೇಡ ಎಂದು ಮಹಾಗುರು ‘ಗೂಗಲ್’ ಮೊರೆ ಹೋಗಿ ನನ್ನ ಸಂದೇಹವನ್ನು ನಿವಾರಿಸಿ ಕೊಂಡೆ. ಅದರ ಪ್ರಕಾರ, ಟಿಬಿಲಿಸಿ ಎಂಬುದು ಸರಿಯಾದ ಉಚ್ಚಾರ. ಕೆಲ ವರ್ಷಗಳ ಹಿಂದೆ ಅಲ್ಲಿಗೆ ಹೋಗಿ ಓಡಾಡುವಾಗ ಸ್ಥಳೀಯರು ಹೇಳುವುದನ್ನು ಕೇಳಿ ಪಕ್ಕಾ ಮಾಡಿಕೊಂಡೆ. Tbilisi ಯಲ್ಲಿ ಯಾವ ಅಕ್ಷರವೂ ಸೈಲೆಂಟ್ ಆಗಿಲ್ಲ. ಹೀಗಾಗಿ ಬರೆದಂತೆ ಓದಬೇಕು.

ಆಫ್ರಿಕಾದ ಪಶ್ಚಿಮದಲ್ಲಿ ಒಂದು ದೇಶವಿದೆ. ಸಿಯಾರ ಲಿಯೋನ್, ಲಿಬೇರಿಯಾ, ಬುರ್ಕಿನೋ -ಸೊ, ಟೋಗೊ ಮುಂತಾದ ದೇಶಗಳ ಗಡಿಗೆ ತಾಕಿಕೊಂಡಿರುವ ಅದರ ಹೆಸರನ್ನು ಇಲ್ಲಿಯ ತನಕ (ಮೊದಲು ನನ್ನನ್ನು ಸೇರಿಸಿದಂತೆ) ಯಾರೂ ಸರಿಯಾಗಿ ಹೇಳಿದ್ದನ್ನು ಕೇಳಿಲ್ಲ. ಕೆಲವರಿಗಂತೂ ಆ ದೇಶದ ಹೆಸರು ನಾಲಗೆಯಲ್ಲಿ ಹೊರಳುವುದೇ ಇಲ್ಲ. ‘ಅದ್ಯಾವುದೋ
ದೇಶ ಇದೆಯಲ್ಲ …ಅದರ ಹೆಸರು ವಿಚಿತ್ರವಾಗಿದೆ..’ ಅಂತಾನೆ ಹೇಳುತ್ತಾರೆ. ಆ ದೇಶದ ಹೆಸರಿನ ಸ್ಪೆಲ್ಲಿಂಗ್ ಹೀಗಿದೆ- Cote d Ivoire! ಇದನ್ನು ಸಹ ಬೇಕಾಬಿಟ್ಟಿ ಉಚ್ಚರಿಸುತ್ತಾರೆ.

ಇದರ ಸರಿಯಾದ ಉಚ್ಚಾರ-ಕೋಟ್ ಡಿವೋರ್. ಕೊನೆಯ ಎರಡು ಅಕ್ಷರಗಳನ್ನು ಒಳಬಾಯಲ್ಲಿ ವೋ ..ರ್’ ಎಂದು ತುಸು
ಕಷ್ಟಪಟ್ಟು ಹೇಳಬೇಕು. ಆ ದೇಶದ ರಾಜಧಾನಿಯ ಹೆಸರೂ (Yamoussoukro) ಹಾಗೇ ಕಷ್ಟಪಟ್ಟು ಹೇಳಬೇಕು. ಟಿಬಿಲಿಸಿ ಯಲ್ಲಿ ಜನರ ಹೆಸರನ್ನು ಸುಲಭವಾಗಿ ಹೇಳಬಹುದು ಆದರೆ ಊರಿನ ಹೆಸರನ್ನು ಕೇಳುವುದು ಕಷ್ಟವೇ. ಊರಿನ ಮಧ್ಯದಲ್ಲಿ Mtkvari  ಎಂಬ ನದಿ ಹರಿಯುತ್ತದೆ. ಇದರ ಹೆಸರನ್ನು ಹೇಳುವುದು ಹೇಗೆ ಎಂದು ಕೇಳಿ ತಿಳಿದುಕೊಳ್ಳ ಬೇಕಾಯಿತು. ಅಂದ ಹಾಗೆ ಟಿಬಿಲಿಸಿ ಅಂದರೆ ಜಾರ್ಜಿಯನ್ ಭಾಷೆಯಲ್ಲಿ ಆಪ್ತವಾದ ಊರು ಅಥವಾ ಸ್ಥಳ ಎಂದರ್ಥ.

ಕ್ಲೀಷೆಗಳೆಂದರೆ ವೃದ್ಧ ನಟಿಯಿದ್ದಂತೆ!
ನೀವು ಏನು ಹೇಳಲಿದ್ದೀರಿ ಎಂಬುದು ವಾಕ್ಯದ ಆರಂಭದ ಗೊತ್ತಾಗಬಾರದಂತೆ. ಹಾಗಂತ ವಾಕ್ಯ ಮುಗಿದಾಗ ಗೊತ್ತಾಗಲೇ ಬೇಕಂತೆ. ಕೆಲವರು ಬರೆದರೆ ಅವರ ವಾಕ್ಯ ರಚನೆ ಹೀಗೆ ಆರಂಭವಾಗಿ, ಹೀಗೇ ಕೊನೆಗೊಳ್ಳುತ್ತದೆ ಎಂದು ಗೊತ್ತಾಗುತ್ತ ದಂತೆ. ಅಂಥವರು ಕ್ಲೀಷೆಗಳನ್ನು ಹೆಚ್ಚು ಬಳಸುತ್ತಾರಂತೆ. ಕ್ಲೀಷೆಗಳೆಂದರೆ (cliche) ಸವಕಲು ಪದಗಳು. ಆರಂಭದಲ್ಲಿ ಕ್ಲೀಷೆಗಳೂ ಸೊಗಸಾಗಿಯೇ ಇದ್ದವು. ಎಲ್ಲರೂ ಬಳಸಿ, ಬಳಸಿ ಅವು ಸವಕಲಾಗಿವೆ. ಇಂಥ ಪದಗಳನ್ನು ವಾಕ್ಯಗಳಲ್ಲಿ ಹೆಚ್ಚು ಬಳಸಿದರೆ ಬರಹ ಸಪ್ಪೆಯೆನಿಸುತ್ತದೆ. ಓದು ನೀರಸವೆನಿಸುತ್ತದೆ.

ಜೇಮ್ಸ್ ರೋಜರ್ಸ್ ಎಂಬಾತ ಇಂಗ್ಲಿಷಿನಲ್ಲಿ The Dictionary Of Cliches ಎಂಬ ಸೊಗಸಾದ ಪುಸ್ತಕವನ್ನು ಬರೆದಿ  ದ್ದಾನೆ. ಸುಮಾರು 370 ಪುಟಗಳ ಈ ಪುಸ್ತಕವನ್ನು ಓದಿದರೆ, ಎಲ್ಲ ಪದಗಳೂ ಕ್ಲೀಷೆಗಳೇನೋ ಎಂಬ ಅನುಮಾನ
ಕಾಡತೊಡಗುತ್ತದೆ. ಕ್ಲೀಷೆಗಳೆಂದರೆ ತಿಗಣೆಗಳಿದ್ದಂತೆ, ಅವು ವಾಕ್ಯದ ಸತ್ವವನ್ನೇ ಹೀರಿಬಿಡುತ್ತವೆ ಎಂದು ಆತ ಬರೆಯುತ್ತಾನೆ.
ಈ ಕೃತಿಯಲ್ಲಿ ರೋಜರ್ಸ್, By Word Of Mouth , By Leaps and bounds, Eagle Eye , Days are
numbered , Believe it or not ಪದಗಳನ್ನೂ ಕ್ಲೀಷೆ ಎಂದು ಪಟ್ಟಿ ಮಾಡಿದ್ದಾನೆ. ಈ ಎಲ್ಲ ಪದಗಳನ್ನೂ ಬಳಸಲೇ
ಬೇಡಿ ಎಂದು ತಾಕೀತು ಮಾಡಿದ್ದಾನೆ. You have to avoid cliches like plagueಎಂಬುದು ಸಹ ಕ್ಲೀಷೆಯೇ.

ಕ್ಲೀಷೆಗಳೆಂದರೆ ವೃದ್ಧ ನಟಿಯಿದ್ದಂತೆ. ಒಂದು ಕಾಲದಲ್ಲಿ ಅವಳು ಸುಂದರಿಯಾಗಿದ್ದಳು. ಎಲ್ಲರೂ ಅವಳನ್ನೇ ಬಯಸುತ್ತಿದ್ದರು. ವಯಸ್ಸಾಗುತ್ತಿದ್ದಂತೆ ಅವಳ ವರ್ಚಸ್ಸು ಕುಂದುತ್ತಾ ಅನಾಕರ್ಷಣೀಯವಾದಂತೆ ಈ ಕ್ಲೀಷೆಗಳು. ವೃದ್ಧ ನಟಿಗೆ ನಾಯಕಿ ಪಾತ್ರ ಕೊಡಲು ಸಾಧ್ಯವೇ? ಹಾಗೆ ಈ ಕ್ಲೀಷೆಗಳು! ಕೆಲವು ಪದಗಳಿಗೂ, ವಾಕ್ಯಗಳಿಗೂ expiry dates ಇರುತ್ತವೆ. ಆದರೂ ನಾವು ಅವನ್ನು ಬಳಸುತ್ತಿರುತ್ತೇವೆ.

ನಿಜಲಿಂಗಪ್ಪ ಮತ್ತು ಪತ್ನಿ ಅಗಲಿಕೆ
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರ ಪತ್ನಿ ತೀರಿಕೊಂಡಿದ್ದಳಂತೆ. ಗಣ್ಯರು ಬಂದು ಸಂತಾಪ
ಸೂಚಿಸಿ ಹೋಗುತ್ತಿದ್ದರಂತೆ. ನಿಜಲಿಂಗಪ್ಪನವರು ಮ್ಲಾನವದನರಾಗಿ ಸುಮ್ಮನೆ ಕುಳಿತಿದ್ದರಂತೆ. ಅವರನ್ನು ನೋಡಲು ಜೆ.ಎಚ್. ಪಟೇಲರು ಹೋದರಂತೆ. ಪಟೇಲರು ಆಗಮಿಸುತ್ತಿದ್ದಂತೆ ನಿಜಲಿಂಗಪ್ಪನವರು ಸ್ವಲ್ಪ ಸಾವರಿಸಿಕೊಂಡು, ‘ಬನ್ನಿ, ಬನ್ನಿ, ಪಟೇಲರೇ’ ಎಂದು ಕರೆದರಂತೆ. ಪಟೇಲರು ನಿಜಲಿಂಗಪ್ಪನವರ ಪಕ್ಕದಲ್ಲಿಯೇ ಹೋಗಿ ಕುಳಿತರಂತೆ.

ಏನು ಮಾತಾಡಬೇಕೆಂಬುದು ತಿಳಿಯದೇ, ಕೆಲ ಕಾಲ ಪಟೇಲರು ಸುಮ್ಮನೆ ಕುಳಿತಿದ್ದರಂತೆ. ಬಂದಿದ್ದಕ್ಕೆ ಏನಾದರೂ
ಸಾಂತ್ವನದ ಮಾತುಗಳನ್ನು ಹೇಳಲೇಬೇಕಲ್ಲ. ಪಟೇಲರು ನಿಧಾನವಾಗಿ ಸಾವರಿಸಿಕೊಂಡು, ‘ಈ ವಯಸ್ಸಿನಲ್ಲಿ ಪತ್ನಿಯ
ಸಾವನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟ, ಇನ್ನು ಮುಂದೆ ನೀವು ಹೇಗೆ ಜೀವನ ಸಾಗಿಸುತ್ತೀರೋ?’ ಎಂದು ಪಟೇಲರು
ನಿಜಲಿಂಗಪ್ಪನವರಿಗೆ ಹೇಳಿದರಂತೆ.

ಅದಕ್ಕೆ ನಿಜಲಿಂಗಪ್ಪನವರು, ‘ಪಟೇಲರೇ, ಮೊದಲಾಗಿದ್ದರೆ ನನ್ನ ಪತ್ನಿ ಮನೆಯಲ್ಲಿ ಎಲ್ಲಿ ಇರುತ್ತಿದ್ದಳೋ, ಅಲ್ಲಿ ಮಾತ್ರ ಕಾಣಿಸುತ್ತಿದ್ದಳು. ಈಗ ಹಾಗಲ್ಲ, ಅವಳ ನಿಧನದ ನಂತರ, ನನಗೆ ಮನೆಯಲ್ಲಿ ಎಲ್ಲಿ ನೋಡಿದರೂ ಅವಳೇ ಕಾಣುತ್ತಾಳೆ. ಅವಳು ಇಲ್ಲ ಎಂದು ಅನಿಸುತ್ತಲೇ ಇಲ್ಲ’ ಎಂದು ಹೇಳಿದರಂತೆ. ಎಂಥ ಮಾತು! ಪಟೇಲರು ಅಚ್ಚರಿಯಿಂದ ಕೆಲ ಕಾಲ ನಿಜಲಿಂಗಪ್ಪ ಅವರ ಮುಖವನ್ನೇ ದಿಟ್ಟಿಸುತ್ತಿದ್ದರಂತೆ.

ಸಮಾಧಿ ಸಾಹಿತ್ಯ
ಇದೇನಿದು ಸಮಾಧಿ ಸಾಹಿತ್ಯ ಎಂದು ನಿಮಗೆ ಅನಿಸಬಹುದು. ನಿಧನರಾದವರ ಸಮಾಧಿಯ ಮೇಲೆ ಕಲ್ಲಿನಲ್ಲಿ ಬರೆದಿರುತ್ತಾ ರಲ್ಲ, ಅದಕ್ಕೆ epitaph literature ಅರ್ಥಾತ್ ಸಮಾಧಿ ಸಾಹಿತ್ಯ ಅಂತಾರೆ. ಕೇವಲ ಒಂದೆರಡು ಸಾಲಿನಲ್ಲಿ ಸತ್ತ ವ್ಯಕ್ತಿ ಯನ್ನು ಬಣ್ಣಿಸುವುದು ನಿಜಕ್ಕೂ ಸೃಜನಶೀಲ ಸಾಹಿತ್ಯ ಗುಣವೇ. ಲಂಡನ್ನಿನಲ್ಲಿ ಈ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ವಾಗಿದೆ. ಪ್ರತಿವರ್ಷ ಲಂಡನ್ನಿನ ಪತ್ರಿಕೆಗಳು ಅತ್ಯುತ್ತಮ ಸಮಾಧಿ ಸಾಹಿತ್ಯ ಇದು ಎಂದು ಪ್ರಶಸ್ತಿ ಕೊಡುತ್ತವೆ.

ಲಂಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆ ಇತ್ತೀಚೆಗೆ ಸಮಾಧಿಯ ಮೇಲೆ ಬರೆದ ಕೆಲವು ಸಾಲುಗಳನ್ನು ಪ್ರಕಟಿಸಿತ್ತು. ಒಬ್ಬ ವ್ಯಕ್ತಿ ವಿಪರೀತ ಕುಡಿಯುತ್ತಿದ್ದ. ನಡೆಯಲಾಗದಷ್ಟು ಕುಡಿದು ರಸ್ತೆಯ ಮೇಲೆ ಬೀಳುತ್ತಿದ್ದ. ಆ ವ್ಯಕ್ತಿ ಸತ್ತು ಹೋದ. ಅವನ ಸಮಾಧಿ ಮೇಲೆ ಕಲ್ಲನ್ನಿಟ್ಟು ಅದರ ಮೇಲೆ ಬರೆದಿದ್ದರು- Here lies John Watson Pardon Me For Not Rising.

ಸಮುದ್ರದಲ್ಲಿ ಮುಳುಗಿ ಒಬ್ಬ ವ್ಯಕ್ತಿ ಸತ್ತುಹೋದ. ಅವನ ಮೃತದೇಹವೂ ಸಿಗಲಿಲ್ಲ. ಆದರೆ ಅವನ ಫೋಟೋವನ್ನು ಸಮಾಧಿ ಮಾಡಿ ಅಂದು ಕಲ್ಲನ್ನು ಇಟ್ಟು ಅದರ ಮೇಲೆ ಹೀಗೆ ಬರೆದರು – Here lies the body Jonathan Ground, who was lost at sea and never found. ಟಿಮ್ಮಿ ಎಂಬಾತ ಮೃತಪಟ್ಟ. ಆತ ಮಹಾ ಕಂಜೂಸು. ಹಣ ಖರ್ಚಾಗುವು ದೆಂದು ಊಟ ಮಾಡದೇ ಇರುತ್ತಿದ್ದ. ಅಂಥ ಮಹಾನುಭಾವ ಒಂದು ದಿನ ಸತ್ತು ಹೋದ.

ಅವನ ಸ್ನೇಹಿತರೆಲ್ಲ ಸೇರಿ ಅವನನ್ನು ಸಮಾಧಿ ಮಾಡಿ ಅಂದು ಕಲ್ಲನ್ನು ನೆಟ್ಟು ಅದರ ಮೇಲೆ ಹೀಗೆ ಬರೆದರು- Here lies
poor stingy Timmy Wyatt, who died at noon and saved a dinner by it. ಎಂಬಾತ ತೀರಿಹೋದ. ಅವನ ಸಮಾಧಿ ಮೇಲೆ ಹೀಗೆ ಬರೆಯಲಾಗಿತ್ತು:

Here lies a man that was Knott born, His father was Knott before him
He lived Knott, and did Knott die, Yet underneath this stone doth lie