ಅಭಿವ್ಯಕ್ತಿ
ಮಣ್ಣೆಮೋಹನ್
ಕೆಲವರು ಸಾಮಾಜಿಕ ಬದುಕಿನ ಅಂಕು – ಡೊಂಕುಗಳನ್ನು ಹಸನುಗೊಳಿಸಲೆಂದು ಹೋರಾಟದ ಅಸ್ತ್ರ ನಂಬಿಕೊಂಡು, ಕ್ರಾಂತಿ
ಮಾಡುತ್ತೇವೆಂದು ಭ್ರಮಾದೀನರಾಗಿ, ಕೆಲವೊಮ್ಮೆ ದಾರಿತಪ್ಪಿ ಸಮಾಜಕ್ಕೆ ಕಂಟಕರಾಗಿ ಜನತೆಯ ನೆಮ್ಮದಿಗೆ ಭಂಗ ತರುತ್ತಿದ್ದಾರೆ.
ಆ ಮೂಲಕ ಒಂದು ಕಾಲದಲ್ಲಿ ಹೀರೋಗಳಾಗಿ ಮೆರೆದಿದ್ದವರು, ಇಂದು ವಿಲನ್‌ಗಳಾಗಿ ಪರಿವರ್ತಿತರಾಗಿದ್ದಾರೆ. ಒಂದು ಕಾಲ ದಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ದೇಶವನ್ನು ಅಳುತ್ತಿತ್ತು. ಈ ಸಿದ್ಧಾಂತಿಗಳು ಹೇಳಿದ್ದೇ ವೇದವಾಕ್ಯ ಅಥವಾ ಅದಕ್ಕಿಂತಲೂ ಹೆಚ್ಚು. ಇವರಿಗೆ ರಾಜಮರ್ಯಾದೆ. ಇವರು ತಮ್ಮ ಚಿಂತನೆಯ ಅಣಿಮುತ್ತುಗಳನ್ನು ಉದುರಿಸುತ್ತಿದ್ದರೆ, ನೋಡುವವರಿಗೆ ದೇವಧೂತ ನಂತೆ ಭಾಸವಾಗುತ್ತಿತ್ತು.
ಇವರ ಟಾಕು – ಠೀಕು ಹೇಳಲಸಾಧ್ಯ. ಜಗತ್ತಿನ ಪರಿವರ್ತಕರು ನಾವೇ ಎಂಬ ಹಣೆಪಟ್ಟಿ. ಸಮಾಜಕಲ್ಯಾಣ ನಮ್ಮಿಂದಲೇ ಎಂಬ ಕೊರಳಪಟ್ಟಿ. ಆಗಿನ ಪ್ರಭುತ್ವವು ಇವರ ಮಾತಿಗೆ ತಲೆದೂಗುತ್ತ, ಇವರ ಹಿಂದೆ, ಮುಂದೆ, ಜೊತೆಯಲ್ಲಿ ಸಾಗುತ್ತಿತ್ತು. ಜಗತ್ತಿನ ಬದಲಾವಣೆ, ಉದ್ದಾರ ನಮ್ಮಿಂದಲ್ಲದೆ ಬೇರೆ ಯಾರಿಂದಲೂ ಸಾಧ್ಯವೇ ಇಲ್ಲವೇನೋ ಎಂಬಂತೆ ಧೀಮಾಕು. ಸ್ವಾತಂತ್ರ್ಯ ನಂತರದ ಅನೇಕ ದಶಕಗಳ ಕಾಲ ಇವರ ಮೆರವಣಿಗೆ ಅದ್ದೂರಿಯಾಗಿ ಸಾಗಿತ್ತು.
ಹೀಗಿರುವಾಗ ಒಂದುದಿನ ಇವರೆಲ್ಲರಿಗೂ ಮೆಕ್ಕಾದಂತಿದ್ದ ಕಮ್ಯುನಿಸ್ಟ್ ದೇಶ ರಷ್ಯಾದ ಕಮ್ಯುನಿಸ್ಟ್ ಸೌಧ ಕುಸಿದುಬಿತ್ತು. ಗೋರ್ಬಚೇವ್ ಎಂಬ ನಾಯಕ ಇನ್ನು ಮುಂದೆ ಕಮ್ಯುನಿಸ್ಟ್ ಸಿದ್ದಾಂತಗಳು ವರ್ತಮಾನದ ಬದುಕಿಗೆ ಅಪ್ರಸ್ತುತ ಎಂದು ತೀರ್ಮಾನಿಸಿ ಅವುಗಳನ್ನು ಮೂಲೆಗುಂಪಾಗಿಸಿದ. ಅಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತ್ತು. ಆದರೆ ನಮ್ಮ ದೇಶದ ಕಮ್ಯುನಿಸ್ಟ್‌ಗಳು ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಸಿದ್ಧಾಂತಿಗಳ ಸೈದ್ಧಾಂತಿಕತೆ ಯಾವ ಮಟ್ಟದಲ್ಲಿತ್ತೆಂದರೆ ಸರಳಜೀವಿಯಾಗಿದ್ದ, ಜನಾನುರಾಗಿಯಾಗಿದ್ದ, ಪಶ್ಚಿಮ ಬಂಗಾಳವನ್ನು ಕಾಲು ಶತಮಾನ ಆಳಿದ
ಜ್ಯೋತಿಬಸು ಅವರಿಗೆ ಒಲಿದು ಬಂದಿದ್ದ ಪ್ರಧಾನಿ ಪಟ್ಟಕ್ಕೆ ಅವಕಾಶ ನೀಡದೆ ತಿರಸ್ಕರಿಸಿದರು.
ಅದು ಇವರ ಸೈದ್ಧಾಂತಿಕ ದಿವಾಳಿತನದ ಪರಮಾವಧಿಯಾಗಿತ್ತು. ಅದಕ್ಕೆ ಆನಂತರ ತಕ್ಕ ಪ್ರತಿಫಲವನ್ನು ಉಂಡರು. ಪಶ್ಚಿಮ ಬಂಗಾಳದಿಂದ ಕಮ್ಯುನಿಸ್ಟ್ ಸಂಪೂರ್ಣ ನಿರ್ನಾಮವಾಯಿತು. ಹಾಗೆಯೇ ಹತ್ತಿರದ ತ್ರಿಪುರದಿಂದ ಕೂಡ ಕಮ್ಯುನಿಸ್ಟ್ ಧೂಳಿ ಪಟವಾಯಿತು. ಇನ್ನು ಅಲ್ಪಸ್ವಲ್ಪ ಕೇರಳದಲ್ಲಿ ಉಸಿರು ಉಳಿಸಿಕೊಂಡಿದೆ. ಅಲ್ಲಿಯೂ ಅದರ ನಿರ್ಮೂಲನೆಗೆ ಓಂಕಾರ ಬಿದ್ದಿದೆ. ಇನ್ನೆದು ವರ್ಷಗಳಲ್ಲಿ ಬರುವ ಚುನಾವಣೆಯಲ್ಲಿ ಕಮ್ಯುನಿಸ್ಟರು ಮೂಲೆ ಸೇರುವುದು ಖಚಿತವಾಗಿದೆ. ಈ ಕಮ್ಯುನಿಸ್ಟರ ಗುಂಪಿನ ಸದಸ್ಯರೆಲ್ಲ ಜಾತ್ಯಾತೀತರು, ಉಳಿದವರು ಕೋಮುವಾದಿಗಳು ಎಂಬುದು ಇವರ ಸಿಂಪಲ್ ವ್ಯಾಖ್ಯಾನ.
ಜಾತ್ಯಾತೀತತೆ ಹೆಸರಿನಲ್ಲಿ ನಮ್ಮ ದೇಶದ ಹಿರಿಮೆ ಗರಿಮೆಯನ್ನು, ಇಲ್ಲಿನ ಸಂಸ್ಕೃತಿಯ ವೈಭವವನ್ನು, ಭವ್ಯ ಇತಿಹಾಸವನ್ನು ಮುಚ್ಚಿಟ್ಟು, ಬ್ರಿಟಿಷರಂತೆಯೇ ಪಾಶ್ಚಿಮಾತ್ಯತೆಯನ್ನು ವೈಭವಿಕರಿಸುವವರು ಇವರು. ಆದ್ದರಿಂದಲೇ ಇವರಿಗೆ ಕಾಂಗ್ರೆಸ್ ಪಕ್ಷ ದವರು ಏನುಮಾಡಿದರೂ ಜಾಣ ಕುರುಡು. ಆದರೆ ಬಿಜೆಪಿಯವರ ಮೇಲೆ ಇವರಿಗೆ ಬಲು ದ್ವೇಷ. ಅವರು ಮಾಡಿದ್ದೆಲ್ಲವನ್ನೂ ವಿರೋಧಿಸುವ ಚಾಳಿ ಇವರದು.
ಹೀಗಾಗಿ ಒಂದು ಕಾಲದ ಹೀರೋಗಳಾಗಿದ್ದ ಇವರೆಲ್ಲ ಇಂದು ಅಪ್ರಸ್ತುತರಾಗಿ ವಿಲನ್ ಗಳಾಗಿ ಕಾಣುತ್ತಿದ್ದಾರೆ. ಗತಕಾಲದ ತಮ್ಮ
ವೈಭವವನ್ನು ಮೆಲುಕು ಹಾಕುತ್ತಾ ಮತ್ತೊಮ್ಮೆ ಅಂತಹ ಸುವರ್ಣಯುಗಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ನಿರುದ್ಯೋಗಿ ಗಳು ಇವರು. ಈ ಸಿದ್ಧಾಂತಿಗಳನ್ನು ಪೋಷಿಸಿದ ಪೋಷಕ ಮಹಾಶಯರು ಕಾಂಗ್ರೆಸ್ಸಿಗರು. ಒಂದು ಕಾಲದಲ್ಲಿ ದೇಶದ ಭವಿಷ್ಯವೆಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದ ಕಾಂಗ್ರೆಸ್ ಇಂದು ಎಲ್ಲಿದೆ? ಎಂದು ಹುಡುಕುವ ಪರಿಸ್ಥಿತಿ ಬಂದಿದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸನ್ನು ವಿಸರ್ಜಿಸಿ ಎಂಬ ಗಾಂಧೀಜಿಯವರ ಮಾತನ್ನು ಧಿಕ್ಕರಿಸಿ ಪಕ್ಷವನ್ನು ಉಳಿಸಿಕೊಂಡು, ಆಧುನಿಕ ಗಾಂಧಿ ಕುಟುಂಬಕ್ಕೆ ನೆಲೆತಾಣವಾಗಿಸಿದ್ದಾರೆ.
ಈ ಪಕ್ಷವು ಹೊಸ ತಲೆಮಾರಿಗೆ, ಹೊಸ ರಕ್ತಕ್ಕೆ, ಹೊಸ ಚಿಂತನೆಗಳಿಗೆ ಕೆರೆದುಕೊಳ್ಳದೆ ನಿರ್ಜೀವ ಕೊರಡಾಗಿದೆ. ಪಕ್ಷ ಮೂಲೆ ಗುಂಪಾದರೂ ಪರವಾಗಿಲ್ಲ, ಅದರ ಸಾರಥ್ಯ ನಮ್ಮ ಕೈಯ ಇರಬೇಕೆಂಬುದು ಗಾಂಧಿ ಕುಟುಂಬದ ಧ್ಯೇಯ. ದೇಶದ ಬಗ್ಗೆ ಏನೂ ಗೊತ್ತಿಲ್ಲದ ಯುವರಾಜ, ಯುವರಾಣಿ ದಿನಕ್ಕೊಂದು ಬಾಲಿಶ ಎಡಬಿಡಂಗಿ ಹೇಳಿಕೆ ಕೊಡುತ್ತಾ ನಗೆಪಾಟಲಾಗಿದ್ದಾರೆ.
ನಮ್ಮ ರಾಜ್ಯದಲ್ಲಿಯೂ ಕಾಂಗ್ರೆಸ್ ನವರ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಸಿದ್ದರಾಮಯ್ಯನವರು ತಮ್ಮ ನಾಲ್ಕೆ ದು ಜನ ಕಮ್ಯುನಿಸ್ಟ್ ಸಿದ್ಧಾಂತದ ಲೇಖಕರನ್ನು ಮೆಚ್ಚಿಸಲು ‘ನಾನು ಗೋಮಾಂಸ ತಿನ್ನುತ್ತೇನೆ’, ‘ನಾನು ರಾಮಮಂದಿರಕ್ಕೆ ದೇಣಿಗೆ
ಕೊಡುವುದಿಲ್ಲ’, ‘ಆಂಜನೇಯ ಯಾವ ದಿನ ಹುಟ್ಟಿದ ನಿನಗೆ ಗೊತ್ತಾ’? ಇಂತಹ ಹಿಂದೂ ಧರ್ಮವನ್ನು ಕೀಳರಿಮೆಯಾಗಿ ಕಾಣುವ ಹೇಳಿಕೆಗಳನ್ನು ನೀಡುತ್ತಾ, ಅಲ್ಪಸಂಖ್ಯಾತರು ಮಾಡಿದ್ದೆಲ್ಲವನ್ನೂ ಮೌನವಾಗಿ ಸಮರ್ಥಿಸುತ್ತಾ ತಮ್ಮ ಪಕ್ಷವನ್ನು ತಾವೇ ಮುಗಿಸುತ್ತಿದ್ದಾರೆ.
ಅವರಿಗೆ ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಿಲ್ಲವೆಂದು ಚೆನ್ನಾಗಿ ತಿಳಿದಿದೆ. ಏಕೆಂದರೆ ಅವರ ನಾಯಕತ್ವದ 120 ರಿಂದ 70ಕ್ಕೆ ಶಾಸಕರ ಸಂಖ್ಯೆ ಅವರೋಹಣವಾಗಿದೆ. ಅಪ್ಪಿತಪ್ಪಿ ಕಾಂಗ್ರೆಸ್ ಗೆದ್ದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ. ಇದು ಸಿದ್ದರಾಮಯ್ಯನವರಿಗೆ ಅಪಥ್ಯ. ಹಾಗಾಗಿ ಅದನ್ನು ನೇರವಾಗಿ ತಪ್ಪಿಸುವ ಬದಲು ಹೇಳಿಕೆಗಳ ಮೂಲಕ
ಕಾಂಗ್ರೆಸ್ ಅಧಿಕಾರ ಹಿಡಿಯದಂತೆ ಮಾಡುವುದೇ ಸಿದ್ದರಾಮಯ್ಯರ ಯೋಜನೆ ಇರುವಂತಿದೆ.
ಹೀಗೆಯೇ ಹೇಳಿಕೆಗಳನ್ನು ಕೊಡುತ್ತಿದ್ದರೆ ಕಾಂಗ್ರೆಸ್ ಶಾಸಕರ ಸಂಖ್ಯೆ ಮುಂದಿನ ಚುನಾವಣೆಯಲ್ಲಿ 70 ರಿಂದ 20ಕ್ಕೆ ಇಳಿದರೂ ಆಶ್ಚರ್ಯವಿಲ್ಲ. ಸಿದ್ದರಾಮಯ್ಯ ಅವರಿಗೂ ಅದೇ ಬೇಕಿರುವುದು ಅನಿಸುತ್ತಿದೆ. ಈಗಾಗಲೇ ಅವರ ಪಕ್ಷದ ಶಾಸಕರುಗಳೇ ಈ ಬಗ್ಗೆ ಬಹಿರಂಗವಾಗಿಯೇ ಆತಂಕ ವ್ಯಕ್ತಪಡಿಸಿzರೆ. ಒಂದು ಕಾಲದಲ್ಲಿ ನಮ್ಮನ್ನೆಲ್ಲ ಗೆಲ್ಲಿಸಿಕೊಂಡು ಬರುತ್ತಿದ್ದ ಹೀರೋ, ಇಂದು
ನಮ್ಮಗಳ ಪಾಲಿಕೆ ವಿಲನ್ ಆಗುತ್ತಿದ್ದಾರಲ್ಲ ಎಂಬುದು ಅವರ ಅಂತರಂಗದ ಕೊರಗು.
ಕೆಲವು ರೈತ ಸಂಘಟನೆಗಳು ರೈತರನ್ನು ಪ್ರಚೋದಿಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಇದರ ನಾಯಕತ್ವ ವಹಿಸಿರುವ ಮಹಾಶಯರು ಆರಂಭದಲ್ಲಿ ರೈತರ ಪಾಲಿಗೆ ದೇವದೂತರಂತೆ ಕಂಡಿದ್ದೇನೊ ನಿಜ. ಆದರೆ ಗಣರಾಜ್ಯೋತ್ಸವ ದಿನ ಕೆಂಪುಕೋಟೆಯಲ್ಲಿ ನಡೆದ ದಾಂಧಲೆ, ಒಂದೇ ಕ್ಷಣದಲ್ಲಿ ಈ ನಾಯಕರ ನಿಜಬಣ್ಣ ಬಯಲು ಮಾಡಿದ್ದಷ್ಟೇ ಅಲ್ಲದೆ ಅದರ ಹಿಂದಿನ ಪಿತೂರಿಯ ರೂವಾರಿ ಕೂಡ ಎಲ್ಲರಿಗೂ ತಿಳಿಯಿತು.
ಭೂಮಿ ತಾಯಿಯೊಂದಿಗೆ ಸದಾ ಭಕ್ತಿಭಾವದಿಂದ ಬದುಕುವ ರೈತ ಈ ರೀತಿಯ ದಾಂಧಲೆ ಮಾಡಲು ಸಾಧ್ಯವೇ? ಹಾಗಾಗಿ ಅಲ್ಲಿ ಪ್ರತಿಭಟಿಸುತ್ತಿರುವವರು ನಿಜ ರೈತರಲ್ಲ ಎಂಬ ಸತ್ಯ ಕನ್ನಡಿಯಷ್ಟೇ ಸ್ಪಷ್ಟ. ನೈಜಸಂಘಟನೆಯ ನೇತಾರನೊಬ್ಬ ಪ್ರಭುತ್ವದ
ವಿರುದ್ಧ ಹೋರಾಟದಷ್ಟೇ, ತನ್ನ ಸಂಘಟನೆಯಲ್ಲಿರುವ ಅತಿರೇಕವನ್ನು ನಿಯಂತ್ರಿಸುವ ಜವಾಬ್ದಾರಿ ಹೊರಬೇಕಾಗುತ್ತದೆ. ಇಲ್ಲದಿದ್ದರೆ ದಾಂಧಲೆಯಂಥ ಕುಯುಕ್ತಿಯ ಇಂದಿನ ಕಾಣದ ಕೈ ಅವನದೇ ಆಗಿರುತ್ತದೆ ಎಂಬುದು ಸುಸ್ಪಷ್ಟ.
ಹಾಗಾಗಿ ಆರಂಭದಲ್ಲಿ ರೈತರ ಪಾಲಿಗೆ ಹೀರೋಗಳಂತೆ ಕಂಡ ನಾಯಕರಿಂದು ಜನರ ಕಣ್ಣಲ್ಲಿ ವಿಲನ್‌ಗಳಾಗಿ ಕಾಣುತ್ತಿದ್ದಾರೆ.
ಒಂದು ಕಾಲದಲ್ಲಿ ಅನ್ಯಭಾಷಿಕರ ಹಾವಳಿ ಬೆಂಗಳೂರಿನಲ್ಲಿ ಅಧಿಕವಾಗಿದ್ದ ಸಂದರ್ಭದಲ್ಲಿ ಕನ್ನಡಪರ ಹೋರಾಟವನ್ನು ಮಾಡಿದವರು ವಾಟಾಳ್ ನಾಗರಾಜ್. ಪೊಲೀಸರಿಂದ ಬೂಟಿನ ಏಟು ತಿಂದು ಅಪ್ರತಿಮ ಕನ್ನಡ ಪ್ರೇಮಿ ಎಂದು ಹೆಸರಾಗಿದ್ದರು. ಬೆಂಗಳೂರಿನಲ್ಲಿ ಕನ್ನಡ ಭಾಷೆ ಉಳಿಯಲು ಬೆಳೆಯಲು ಅವರ ಕಾಣಿಕೆ ಅಪಾರ. ಹಾಗಾಗಿ ಅವರು ಆ ಕಾಲದ ಹೀರೋ.
ಆದರೆ ಹೋರಾಟಗಾರನಿಗೆ ಹೋರಾಟವೆಂಬುದು ಚಾಳಿಯಾಗಬಾರದು ಬದಲಾದ ಕಾಲಕ್ಕೆ ತಕ್ಕಂತೆ ನಮ್ಮ ಹೋರಾಟಗಳ ಸ್ವರೂಪ ಬದಲಾಗಬೇಕು. ಇಂದು ವಾಟಾಳ್ ನಾಗರಾಜ್ ಕೈಯಲ್ಲಿ ಮೈಕ್ ಹಿಡಿದುಕೊಂಡು ಬೀದಿಯಲ್ಲಿ ನಿಂತರೆ ಅದು ಬಂದ್
ಕರೆ ಎಂಬುದು ಒಂದು ಮಗುವಿಗೂ ಅರ್ಥವಾಗಿಬಿಡುತ್ತದೆ. ಮಾತಿಗೆ ಮುಂಚೆ ಕರ್ನಾಟಕ ಬಂದ್, ಭಾರತ್ ಬಂದ್ ಎಂದು ಕರೆ ನೀಡಿದರೆ ಅದು ಹುಚ್ಚನೊಬ್ಬನ ವ್ಯರ್ಥಾಲಾಪ ವಾಗುತ್ತದೆಯೇ ಹೊರತು ಅದರಿಂದ ಯಾರಿಗೂ ಪ್ರಯೋಜನವಾಗದು.
ಅಂದಂದಿನ ಕೂಲಿಯಿಂದ ಜೀವನ ನಡೆಸುವ ಕೂಲಿಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಎಷ್ಟೊಂದು ತೊಂದರೆ? ಕಾರ್ಪೊರೇಟ್ ಸಂಸ್ಥೆಗಳಿಂದ ರಾಜ್ಯಕ್ಕೆ, ರಾಷ್ಟ್ರಕ್ಕೆ ಕೀರ್ತಿ ಬಂದಿದೆ. ಬಂದ್ ನೆಪದಲ್ಲಿ ಅವು ಸೇವೆಯನ್ನು ನೀಡದಿದ್ದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರು.
ಗಳ ಖೋತ ಆಗುತ್ತದೆ.
ಗರ್ಭಿಣಿಯರು, ಕಾಯಿಲೆಯವರು, ತುರ್ತುಚಿಕಿತ್ಸೆಯ ಅವಶ್ಯವಿರುವವರು ಎಷ್ಟೆ ತೊಂದರೆ ಅನುಭವಿಸಬೇಕಾಗುತ್ತದೆ. ಮಕ್ಕಳಿಗೂ ಒಂದು ದಿನದ ವಿದ್ಯೆ ಇಲ್ಲವಾಗುತ್ತದೆ. ಒಬ್ಬ ಜವಾಬ್ದಾರಿಯುತ ಹೋರಾಟಗಾರ ಇವೆಲ್ಲವನ್ನು ಯೋಚಿಸಿ ತೀರ್ಮಾನ
ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಜನರ ಕಣ್ಣಲ್ಲಿ ವಿಲನ್ ಆಗುವುದರಲ್ಲಿ ಅನುಮಾನವಿಲ್ಲ. ಈ ಸಾಲಿಗೆ ಇತ್ತೀಚಿನ ಸೇರ್ಪಡೆ ಸಾರಿಗೆ ನೌಕರರ ಮುಷ್ಕರ. ಕೋಡಿಹಳ್ಳಿ ಚಂದ್ರಶೇಖರ್ ಎಂಬ ರೈತನಾಯಕ ಒಂದು ಕಾಲದಲ್ಲಿ ಮಾದರಿ ಚಳವಳಿಗೆ
ಹೆಸರಾಗಿದ್ದರು. ಅವರ ಬೆನ್ನಿಗೆ ಸಾರಿಗೆ ನೌಕರರು ಅದೇಗೆ ಗಂಟುಬಿದ್ದರೊ ತಿಳಿಯದು. ಅಥವಾ ಇವರೇ ಸಾರಿಗೆ ನೌಕರರ ಬೆನ್ನು ಬಿದ್ದರೊ ಗೊತ್ತಿಲ್ಲ.
ಅಂತೂ ಪ್ರತಿಷ್ಠೆ ತೋರಿಸಲು ಹೋಗಿ ಇದೀಗ ಅವರ ಬದುಕಿನ ಜತೆ ಚೆಟವಾಡುತ್ತಿದ್ದಾರೆ. ಈಡೇರಿಸಲು ಸಾಧ್ಯವಿಲ್ಲದ ಬೇಡಿಕೆ ಗಳಿಗೆ ಒತ್ತಾಯಿಸುವುದು ನ್ಯಾಯೋಚಿತವಲ್ಲ. ಬಾಯಲ್ಲಿ ಪುಕ್ಕಟೆ ಸಲಹೆ ನೀಡುವ ಇಂಥ ನಾಯಕರು ಒಂದು ದಿನದ ಮಟ್ಟಿಗೆ ಸಾರಿಗೆ ನೌಕರರ ಕುಟುಂಬಗಳನ್ನು ಸಾಕುವ ಯೋಗ್ಯತೆಯಾದರೂ ಇದೆಯೇ? ಇಲ್ಲವೆಂದಮೇಲೆ ತಮ್ಮಷ್ಟಕ್ಕೆ ತಾವಿರುವುದು ಒಳಿತಲ್ಲವೇ? ಇವರಿಗೆ ಕಮ್ಯುನಿಸ್ಟರು, ಕಾಂಗ್ರೆಸ್‌ನವರು ಮತ್ತು ಕೆಲವು ಬುದ್ಧಿಜೀವಿ ಎನಿಸಿಕೊಂಡವರು ತಮ್ಮನ್ನು ಬೆಂಬಲಿಸು ತ್ತಾರೆ ಎಂಬ ಭಂಡವಿಶ್ವಾಸ.
ಆ ಭಂಡ ಧೈರ್ಯವೇ ಇಂಥ ಸಾಧುವಲ್ಲದ ಕೆಲಸಕ್ಕೆ ಪ್ರೇರೇಪಣೆ. ಸಾವಿರಾರು ಜನ ಹಬ್ಬಕ್ಕೆಂದು ಊರಿಗೆ ಹೋಗಬೇಕಾದ ಈ ಸಂದರ್ಭದಲ್ಲಿ, ಅವರಿಗೆ ಸಾರಿಗೆ ವ್ಯವಸ್ಥೆ ಇಲ್ಲದಂತೆ ಮಾಡಿದ್ದೂ ಅಲ್ಲದೆ , ಸಾವಿರಾರು ನೌಕರರ ಭವಿಷ್ಯದ ಮೇಲೆ ಚಪ್ಪಡಿ ಎಳೆದ ಈ ಮನುಷ್ಯನೂ ಇತ್ತೀಚಿನ ವಿಲನ್.