Friday, 13th December 2024

ನಮ್ಮ ಸಂತಸವನ್ನು ನೂರ್ಮಡಿಗೊಳಿಸುವ ಹೃದಯ ಸಂಪನ್ನರು

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಮೊನ್ನೆ ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರಿಂದ ನನಗೊಂದು ಪತ್ರ ಬಂದಿತು. ಕುತೂಹಲ
ದಿಂದ ತೆರೆದು ನೋಡಿದೆ.

ಕನ್ನಡ ಸಾಹಿತ್ಯ ಪರಿಷತ್ತು ಮಾಧ್ಯಮ ರಂಗದಲ್ಲಿ ಸಾಧನೆ ಮಾಡಿದವರಿಗೆ ನೀಡುವ ‘ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ’ಗೆ ಈ ವರ್ಷ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಅಭಿನಂದನೆಗಳನ್ನು ಸೂಚಿಸಿ, ಸುತ್ತೂರು ಶ್ರೀಗಳು ಆ
ಪತ್ರವನ್ನು ಬರೆದಿದ್ದರು.

ಸುತ್ತೂರು ಶ್ರೀಗಳು ಬರೆದಿದ್ದರು – ‘ಸಾಹಿತ್ಯ ಪರಿಷತ್ತು ನೀಡುವ ಪ್ರಸಕ್ತ ವರ್ಷದ ’ ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿಪ್ರಶಸ್ತಿ’ ನಿಮಗೆ ಲಭಿಸಿರುವುದು ಸಂತೋಷದ ವಿಷಯ. ಕನ್ನಡ ನಾಡಿನಲ್ಲಿ ಪತ್ರಿಕೋದ್ಯಮ ವೃತ್ತಿಗೆ ಹೊಸ ಭಾಷ್ಯ ಬರೆದವರು. ಹೊಸ ಹೊಸಲೇಖಕರನ್ನು ಗುರುತಿಸಿ, ಪ್ರೋತ್ಸಾಹಿಸಿ ಅಂಥವರದೊಂದು ತಂಡವನ್ನೇ ರೂಪಿಸಿದವರು.

ಪತ್ರಕರ್ತ, ವಾಗ್ಮಿ, ಲೇಖಕ ಇವೆಲ್ಲವೂ ನಿಮ್ಮ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿವೆ. ವಿದ್ಯಾಸಂಪನ್ನತೆಗೆ ವಿನಯ ಸಂಪನ್ನತೆಯೂ ಸೇರಿ ನಿಮ್ಮ ವ್ಯಕ್ತಿತ್ವಕ್ಕೊಂದು ಹೊಸ ಕಾಂತಿ ಲಭಿಸಿದೆ. ಪ್ರಶಸ್ತಿಗಳು ದೊರೆಯುತ್ತಿರುವುದು ನಿಮಗೆ ಹೊಸ ಸಂಗತಿಯೇನೂ ಅಲ್ಲ.
ಆದರೂ ಪ್ರತಿ ಬಾರಿ ಇಂಥ ಪುರಸ್ಕಾರ ದೊರೆತಾಗ, ನಿಮ್ಮಲ್ಲಿಯ ಕ್ರಿಯಾಶೀಲತೆ ಮತ್ತಷ್ಟು ಉತ್ಸಾಹದಿಂದ ಗರಿಗೆದರುತ್ತದೆ
ಎಂಬುದು ಅಷ್ಟೇ ನಿಜ. ಇನ್ನೂ ಉನ್ನತತರವಾದಂಥ ಸಾಧನೆಗಳನ್ನು ನೀವು ಮಾಡುವಂತಾಗ ಲೆಂದು ಹಾರೈಸುತ್ತೇವೆ.

ಶುಭಾಶಂಸನೆಗಳೊಂದಿಗೆ…, ಇಂತೂ ಭಗವತ್ಸೇವೆಯಲ್ಲಿ, ಜದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು’ ನನಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಯಿತು!

ಸ್ವಾಮೀಜಿಯವರು ನನ್ನನ್ನು ಹೊಗಳಿ ಬರೆದಿದ್ದಾರೆ ಎಂಬುದಕ್ಕಲ್ಲ. ಅದಕ್ಕಿಂತ ಮುಖ್ಯವಾಗಿ, ಇಂಥ ಸಣ್ಣ ಸಂಗತಿಗಳನ್ನು ಗುರುತಿಸಿ, ತಮ್ಮ ಸಂತೋಷವನ್ನು ಸಂಬಂಧಪಟ್ಟವರಿಗೆ ತಿಳಿಸಿ, ಆ ಸಂತಸವನ್ನು ಇಮ್ಮಡಿಗೊಳಿಸಿ, ಖುಷಿಯನ್ನು ಹಂಚಿ,
ಸೂಕ್ಷ್ಮ ಸಂವೇದಿ ಭಾವನೆಯನ್ನುಪ್ರದರ್ಶಿಸಿದ್ದಕ್ಕೆ ಮತ್ತು ತಮ್ಮ ಈ ಖುಷಿಯನ್ನು ಪತ್ರ ಮುಖೇನ ಬರೆದು, ಶಾಶ್ವತವಾಗಿ
ದಾಖಲಿಸಿ ಸಂಗ್ರಹಿಸಿಟ್ಟುಕೊಳ್ಳುವಂತೆ, ಅದನ್ನೂಒಂದು ಅಮೂಲ್ಯ ಹೆಗ್ಗಳಿಕೆಯಾಗಿ ಮಾರ್ಪಡಿಸಿದ್ದಕ್ಕೆ.

ಪ್ರತಿ ದಿನ ಅನೇಕರಿಗೆ ಪ್ರಶಸ್ತಿಗಳು ಬರುತ್ತವೆ, ಸನ್ಮಾನ ಸಮಾರಂಭಗಳು ನಡೆಯುತ್ತವೆ. ಇವೆ ಪತ್ರಿಕೆಗಳಲ್ಲಿ ವರದಿಯಾಗುತ್ತವೆ ಕೂಡ. ನಾವೆ ಈ ಸುದ್ದಿಯನ್ನು ಓದಿ ಸುಮ್ಮನಾಗುತ್ತೇವೆ. ಆದರೆ ಪ್ರಶಸ್ತಿ ಪುರಸ್ಕೃತರು ಅಥವಾ ಸನ್ಮಾನಿತರು ತಮಗೆ ಪರಿಚಯ ದವರಾದರೆ, ಸುತ್ತೂರು ಶ್ರೀಗಳು ಅವರಿಗೊಂದು ಪತ್ರ ಬರೆದು ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಾರೆ. ಈ ದಿನಗಳಲ್ಲಿ ತಕ್ಷಣ ನಮ್ಮ ಖುಷಿ ಹಂಚಿಕೊಂಡು, ನಂತರ ಮರೆತು ಬಿಡಲು ವಾಟ್ಸಾಪ್, ಎಸ್ಸೆಮ್ಮೆಸ್ ಮತ್ತು ಇಮೇಲ್ ಗಳಿವೆ. ಅವು ಬಂದಾಗಷ್ಟೇ ಖುಷಿಯಾಗುತ್ತವೆ. ಅದೊಂಥರಾ ಐಸ್ಕ್ರೀಮ್ ಇದ್ದಂತೆ.

ತಿನ್ನುವಾಗಷ್ಟೇ ತಂಪು. ಆದರೆ ಪತ್ರವಿದೆಯಲ್ಲ, ಅದು ಕ್ಷರವಿಲ್ಲದ್ದು. ಓದಿದಾಗ, ನೆನಪು ಮಾಡಿಕೊಂಡಾಗಲೆ ಧಾರಾಳ ನೆನಪು. ಅದಕ್ಕೆ ಕಾಪಿಡುವ ಮೌಲ್ಯ. ದುರ್ದೈವವೆಂದರೆ, ಇಂದು ಪತ್ರ ಬರೆಯಲು ಯಾರಿಗೂ ಪುರುಸೊತ್ತು ಇಲ್ಲ. ಆದರೆ ನಮ್ಮ-ನಿಮ್ಮೆಲ್ಲರಿಗಿಂತ ಬಿಜಿಯಾಗಿರುವ ಸುತ್ತೂರು ಶ್ರೀಗಳು ನಮ್ಮ ಖುಷಿಯನ್ನು ತಮ್ಮದನ್ನಾಗಿಸಿಕೊಂಡು, ಪುನಃ ನಮ್ಮಲ್ಲಿ ಇಮ್ಮಡಿಗೊಳಿಸುತ್ತಾರೆ. ಇದೊಂದು ಅಪರೂಪದ, ಈ ದಿನಗಳಲ್ಲಿ ಮರೆಯಾಗುತ್ತಿರುವ, ವಿಶೇಷಗುಣ.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರೂ ಹೀಗೆ. ಅವರಿಗೂ ತಮ್ಮ ಖುಷಿ ಮತ್ತು ಸಂತಸವನ್ನು ಪತ್ರ ಮುಖೇನ ವ್ಯಕ್ತಪಡಿಸಲು ಸಮಯವಿದೆ. ಪತ್ರಿಕೆಯಲ್ಲಿ ಓದಿದ ಲೇಖನ ಇಷ್ಟವಾದರೆ ಅವರು, ಅದನ್ನು ಬರೆದವರಿಗೆ ತಮ್ಮ ಅನಿಸಿಕೆ, ಸಂತಸವನ್ನು ಅಕ್ಷರಗಳಲ್ಲಿ ಹಂಚಿಕೊಳ್ಳುತ್ತಾರೆ. ನಮ್ಮಲ್ಲಿ ಧನ್ಯತೆ, ಸಾರ್ಥಕ ಭಾವ ತುಂಬುತ್ತಾರೆ. ಮಂತ್ರಾಲಯದ ಶ್ರೀ ಸುಬೇಧೇಂದ್ರ ತೀರ್ಥರು ಫೋನ್ಮೂಲಕ ತಮ್ಮ ಹರ್ಷವನ್ನು ಪ್ರೀತಿಯಿಂದ ನಮಗೆ ವರ್ಗಾಯಿಸುತ್ತಾರೆ. ದೊಡ್ಡವರು ಯಾವತ್ತೂ ದೊಡ್ಡವರೇ!

ಆಸ್ಪತ್ರೆಗೆ ಬರುವವರನ್ನು ನಿಯಂತ್ರಿಸುವ ಉಪಾಯ

ನಮ್ಮ ಆಪ್ತರು, ಆತ್ಮೀಯರು ಆಸ್ಪತ್ರೆ ಸೇರಿದರೆ, ಅವರನ್ನು ನೋಡಲು ಹೋಗುವ ಸಂಪ್ರದಾಯವಿದೆ. ಕಾಯಿಲೆ ಪೀಡಿತರನ್ನು ಖುದ್ದಾಗಿ ನೋಡಲು ಹೋಗುವುದು ಒಳ್ಳೆಯ ಪರಿಪಾಠವೇ. ನಾವು ಅವರ ಬಗ್ಗೆ ಕಾಳಜಿವಹಿಸುತ್ತೇವೆ ಎಂಬುದನ್ನು ಹೇಳುವ ಒಳ್ಳೆಯ ಅಭ್ಯಾಸವಿದು.

ಆಸ್ಪತ್ರೆಯಲ್ಲಿದ್ದಾಗಲೂ ನೋಡಲು ಬರಲಿಲ್ಲ ಎಂದು ಬೇಸರದಿಂದ ಹೇಳುವುದನ್ನು ಕೇಳಿರಬಹುದು. ಆದರೆ ಕಾಯಿಲೆ ಪೀಡಿತರಾಗಿ ಆಸ್ಪತ್ರೆ ಸೇರಿದ ವ್ಯಕ್ತಿ ಜನಪ್ರಿಯನಾಗಿದ್ದರೆ, ಅವನನ್ನು ನೋಡಲು ಬರುವವರನ್ನು ನಿಯಂತ್ರಿಸುವುದು ಆಸ್ಪತ್ರೆ ಸಿಬ್ಬಂದಿಗೆ ದೊಡ್ಡ ಸಮಸ್ಯೆ. ಇದು ಕಾಯಿಲೆಪೀಡಿತರಿಗೂ ತಲೆನೋವೇ. ಆಸ್ಪತ್ರೆಯಲ್ಲಿದ್ದವರಿಗೆ ವಿಶ್ರಾಂತಿ ಬೇಕು. ಸಾಂತ್ವನ ಹೇಳಲು ಬರುವವರಿಂದ ಕಿರಿಕಿರಿಯೇ ಹೆಚ್ಚು.

ಇತ್ತೀಚಿನ ವರ್ಷಗಳಲ್ಲಂತೂ ಆಸ್ಪತ್ರೆಗೆ ದೌಡಾಯಿಸುವುದು ಒಂದು ಅನಿವಾರ್ಯ ಕಾಟವೇ ಆಗಿದೆ. ಆಸ್ಪತ್ರೆಗೆ ಬಂದು
ನೋಡುವ ದರಿಂದ ಕಾಯಿಲೆಯಂತೂ ಕಮ್ಮಿಯಾಗುವುದಿಲ್ಲ. ಆದರೆ ರೋಗಿಗಳಿಗೆ ವಿಶ್ರಾಂತಿಗೆ ಚ್ಯುತಿಯಾಗಿ ಮತ್ತಷ್ಟು ಕಿರಿಕಿರಿಯಾಗುತ್ತದೆ. ಆಸ್ಪತ್ರೆ ಸೇರಿದವರನ್ನು ನೋಡಲು ಹೋದರೂ ಕಿರಿಕಿರಿ. ಹೋಗದಿದ್ದರೆ ಏನೋ ಅಪರಾಧ ಭಾವ. ತಮ್ಮಲ್ಲಿ ವಿಐಪಿ ರೋಗಿಗಳು ಬರಲಿ ಎಂದು ಎ ಆಸ್ಪತ್ರೆಗಳೂ ಬಯಸುತ್ತವೆ.

ಆದರೆ ಅವರು ಬಂದ ನಂತರ ಆಸ್ಪತ್ರೆ ಸಿಬ್ಬಂದಿ ಗೋಳು ಹೇಳತೀರದು. ಇದರಿಂದ ಇತರ ರೋಗಿಗಳಿಗೂ ಸಮಸ್ಯೆ. ಹೀಗಾಗಿ
ಎ ಆಸ್ಪತ್ರೆಗಳೂ ವಿಸಿಟರುಗಳನ್ನು ನಿಯಂತ್ರಿಸಲ ಹೆಣಗುತ್ತವೆ. ದಿನಕ್ಕೆ ಇಬ್ಬರು, ನಾಲ್ವರು ಮಾತ್ರ ಪೇಶಂಟುಗಳನ್ನು
ನೋಡಬಹುದು ಎಂದು ನಿರ್ಬಂಧ ಹೇರಿದರೂ, ಜನ ಕೇಳುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಅಹಮದಾಬಾದಿ ನಲ್ಲಿರುವ ಒಂದು ಆಸ್ಪತ್ರೆ ಒಂದು ಹೊಸ ಉಪಾಯ ಕಂಡುಕೊಂಡಿದೆ.

ಆಸ್ಪತ್ರೆಗೆ ಅಡ್ಮಿಟ್ ಆದವರನ್ನು ಯಾರು ಬೇಕಾದರೂ ಬಂದು ನೋಡಬಹುದು. ದಿನದಲ್ಲಿ ಎಷ್ಟು ಜನ ಬೇಕಾದರೂ
ಬರಬಹುದು. ಆದರೆ ತಲಾ 200 ರುಪಾಯಿ ಕೊಡಬೇಕು. ಹೀಗೆ ಸಂಗ್ರಹವಾದ ಹಣವನ್ನು ರೋಗಿಯ ಬಿಲ್‌ನಲ್ಲಿ ಕಳೆಯ ಲಾಗುತ್ತದೆ. ಪರಿಣಾಮ, ಆಸ್ಪತ್ರೆಗೆ ಬರುವವರ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗಿದೆ. ರೋಗಿಗಳಿಗೆ ಧಾರಾಳ ವಿಶ್ರಾಂತಿ ಸಿಗುತ್ತಿದೆ. ಆಸ್ಪತ್ರೆ ಸಿಬ್ಬಂದಿಗೆ ಒತ್ತಡ ತಗ್ಗಿದೆ. ಅಷ್ಟಾಗಿಯೂ ನೋಡಲು ಬಂದರೆ ಸಮಸ್ಯೆ ಇಲ್ಲ. ಅದರಿಂದ ರೋಗಿಗೇ ಒಳ್ಳೆಯದು.
ತಲಾ ಒಬ್ಬರಿಂದ ಇನ್ನೂರು ರುಪಾಯಿ ಸಂಗ್ರಹವಾಗಿ, ಕೊನೆಯಲ್ಲಿ ಬಿಲ್ ಮೊತ್ತ ಕಡಿಮೆಯಾಗುತ್ತದೆ.

ಸಕಾರಾತ್ಮಕತೆಯ ಪರಾಕಾಷ್ಠೆ
ಸಕಾರಾತ್ಮಕತೆಯ ಪರಾಕಾಷ್ಠೆ ಅಂದ್ರೆ ಏನು ಗೊತ್ತಾ? ಒಮ್ಮೆ ಪತ್ರಕರ್ತನೊಬ್ಬ ತೊಂಬತ್ತೊಂಬತ್ತು ವರ್ಷ ತುಂಬಿದ ಉದ್ಯಮಿ ಯನ್ನು ಸಂದರ್ಶಿಸಲು ಅವರ ಮನೆಗೆ ಹೋದ. ಅವರಿಬ್ಬರ ನಡುವೆ ನಡೆದ ಈ ಸಂಭಾಷಣೆಯನ್ನು ಓದಿ. ಸಂದರ್ಶಕ ಪತ್ರಕರ್ತ – ಮುಂದಿನ ವರ್ಷ ನಿಮಗೆ ನೂರು ವರ್ಷ ತುಂಬುತ್ತದಲ್ಲ, ಆ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದು ನಿಮ್ಮನ್ನುನೋಡುತ್ತೇನೆ ಎಂಬ ಆತ್ಮವಿಶ್ವಾಸ ನನಗಿದೆ. ವೃದ್ಧ ಉದ್ಯಮಿ – ಖಂಡಿತವಾಗಿಯೂ ಬರಬಹುದು, ನೀವು ನೋಡಲು ದಷ್ಟ – ಪುಷ್ಟನಾಗಿ ಆರೋಗ್ಯವಂತನಂತೆ ಕಾಣುತ್ತೀಯ!

ದಿವಾಳಿಗೆ ಕಾರಣವೇನು?

ಕೆಲವು ದೊಡ್ಡ ದೊಡ್ಡ ಕಂಪನಿಗಳು, ಸಂಸ್ಥೆಗಳು ದಿವಾಳಿಯೆದ್ದು ಹೋಗುತ್ತವೆ. ಅದಕ್ಕೆ ಕಾರಣವೇ ನಿದ್ದಿರಬಹುದು ಎಂದು ಸಾರ್ವಜನಿಕರಲ್ಲಿ ಜಿಜ್ಞಾಸೆ ಮೂಡುವುದು ಸಹಜ.

ಅದಕ್ಕೆ ಕಾರಣ ಹುಡುಕಲು ತನಿಖೆ ಮಾಡಬೇಕಿಲ್ಲ. ಮ್ಯಾನೇಜ್ ಮೆಂಟ್ ತಜ್ಞರಿಂದ ಕಾರಣ ಕೇಳಬೇಕಿಲ್ಲ. ಉತ್ತರ ಬಹಳ
ಸರಳವಾಗಿರುತ್ತದೆ. ಅದಕ್ಕೆ ಒಂದು ಚಿಕ್ಕ ಪ್ರಸಂಗವನ್ನು ಹೇಳುತ್ತೇನೆ. ಒಮ್ಮೆ ಆರ್.ಪಿ.ಜಿ. ಎಂಟರ್ ಪ್ರೈಸೆಸ್ ಮುಖ್ಯಸ್ಥ ಹರ್ಷ್
ಗೋಯೆಂಕಾ ಅವರಿಗೆ, ಭಾರತದ ಪ್ರಮುಖ ಇಂಡಸ್ಟ್ರಿಯಲ್ ಹೌಸ್‌ನ ಸಿಇಒ ಸಿಕ್ಕಿದ್ದರಂತೆ. ‘ನಿಮ್ಮ ಸಂಸ್ಥೆ ದಿವಾಳಿಯ
ಅಂಚಿನಲ್ಲಿದೆ ಎಂದು ಕೇಳಿ ಬಹಳ ಬೇಸರವಾಯಿತು. ಇದಕ್ಕೆ ಕಾರಣವೇನು?’ ಎಂದು ಕೇಳಿದರಂತೆ.

ಅದಕ್ಕೆ ಆ ಸಿಇಒ ಸರಳವಾಗಿ ಹೇಳಿದನಂತೆ – ಇದಕ್ಕೆ ಅಂಥ ಹೇಳಿಕೊಳ್ಳುವ ಪ್ರಮುಖ ಕಾರಣವೇನೂ ಇಲ್ಲ. ಯಾವ ಬಾಸ್
ಹೇಳಿದ್ದನ್ನುಕೇಳುವುದಿಲ್ಲವೋ, ಅಂಥವನು ಹೇಳಲೇನೂ ಗೊತ್ತಿಲ್ಲದವರಿಂದ ಸುತ್ತುವರಿದಿರುತ್ತಾರೆ. ನಮ್ಮ ಸಂಸ್ಥೆಯ ವಿಷಯದಲ್ಲಿ ಆದದ್ದೂ ಅದೇ.’

‘ಸ್ಸಾರಿ’ ಎಂಬ ಕಿರುಚಿತ್ರ!
ಇತ್ತೀಚೆಗೆ ಎರಡು ನಿಮಿಷದ ಒಂದು ಕಿರುಚಿತ್ರ ನೋಡಿದೆ.
ಅದರ ಹೆಸರು – Sorry.
ಒಂದು ದೊಡ್ಡ ಮಾಲ್‌. ಒಬ್ಬ ಯುವಕ ಓಡೋಡುತ್ತಾ,
ಇನ್ನೇನು ಬಾಗಿಲು ಮುಚ್ಚಿಕೊಳ್ಳಲಿದ್ದ ಒಂದು ಲಿಫ್ಟ್‌ನೊಳಗೆ
ಹೋಗಿ ಸೇರಿಕೊಂಡ. ಲಿಫ್ಟ್‌ನಲ್ಲಿ ಸುಮಾರು ಇಪತ್ತು ಜನರಿದ್ದರು.
‘ಲಿಫ್ಟ್‌ ಓವರ್ ಲೋಡ್ ಆಗಿದೆ, ಒಬ್ಬ ವ್ಯಕ್ತಿ ಇಳಿದರೆ ಮಾತ್ರ ಮೇಲಕ್ಕೆ ಹೋಗುತ್ತೆ’ ಎಂಬ ಸಂದೇಶ, ಬಟನ್ ಮೇಲಿದ್ದ ಸ್ಕ್ರೀನ್
ನಲ್ಲಿ ಕಾಣಿಸಿತು. ಲಿಫ್ಟ್‌ ಬಾಗಿಲು ತೆರೆದುಕೊಂಡಿತು. ಅಲ್ಲಿದ್ದವರೆಲ್ಲ ಕೊನೆಯಲ್ಲಿ ಸೇರಿಕೊಂಡ ಆ ಯುವಕನನ್ನೇ ನೋಡಲಾ ರಂಭಿಸಿದರು. ಆತ ಹೊರಹೋಗಲಿ ಎಂಬುದು ಅಲ್ಲಿದ್ದವರ ನಿರೀಕ್ಷೆಯಾಗಿತ್ತು. ಆದರೆ ಆತ ಅದಕ್ಕೂ, ತನಗೂ ಸಂಬಂಧವೇ ಇಲ್ಲ ಎಂದು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದ.

ಸ್ಕ್ರೀನ್ ಮೇಲೆ ಕ್ಷಣ ಕ್ಷಣಕ್ಕೆ ಆ ಸಂದೇಶ ಮೂಡಿ ಮರೆಯಾಗುತ್ತಿತ್ತು. ಲಿಫ್ಟ್‌ ಒಳಗೆ ಇದ್ದವರು ಸ್ವಾಟೆ ತಿರುವುತ್ತಾ ಬೇರೆಯವರು ಹೊರಹೋಗಲಿಅಂದುಕೊಳ್ಳುತ್ತಿದ್ದರು. ಆ ಯುವಕ ಬೇರೆಯವರನ್ನು ನೋಡಿದ. ಉಳಿದವರು ತಮ್ಮ ಅಕ್ಕಪಕ್ಕದಲ್ಲಿದ್ದವರನ್ನು ನೋಡುತ್ತಿದ್ದರು. ‘ಯಾರಾದರೂ ಒಬ್ಬರು ಆಫ್ಲೋಡ್ ಆಗಬೇಕು (ಇಳಿಯಬೇಕು)’ ಎಂದು ಸಂದೇಶ ಮೊಳಗುತ್ತಿದ್ದರೂ, ಯಾರೂ ಇಳಿಯಲು ಮುಂದಾಗಲಿಲ್ಲ. ಎಲ್ಲರೂ ಬೇರೆಯವರು ಇಳಿಯಲಿ ಎಂದೇ ಅಪೇಕ್ಷಿಸುತ್ತಿದ್ದರು.

ಎಲ್ಲರೂ ಪದೇ ಪದೆ ಲಿಫ್ಟ್‌ ಬಟನ್ ಮೇಲಿದ್ದ ಸ್ಕ್ರೀನ್ ನೋಡುತ್ತಿದ್ದರು. ಭಾರ ಜಾಸ್ತಿಯಾಗಿದ್ದರಿಂದ ಲಿಫ್ಟ್‌ ಮೇಲಕ್ಕೆ ಹೋಗು ತ್ತಿಲ್ಲ, ಯಾರಾದರೂ ಒಬ್ಬರು ಇಳಿದರೆ ಮಾತ್ರ ಮೇಲಕ್ಕೆ ಹೋಗುತ್ತದೆ ಎಂಬುದು ಅದರೊಳಗಿದ್ದವರಿಗೆಲ್ಲ ಖಚಿತ ವಾಗಿತ್ತು. ಆದರೆ ಎಲ್ಲರೂ ಮುಖ ಸಿಂಡರಿಸಿಕೊಂಡು ಬೇರೆಯವರು ಇಳಿಯಲಿ ಎಂದೇ ಅಂದುಕೊಳ್ಳುತ್ತಿದ್ದರು. ಬಾಗಿಲ ಬಳಿಯೇ ನಿಂತಿದ್ದ ಆ ಯುವಕನೂ ಬೇರೆಯವರು ಇಳಿಯಲಿ ಎಂದೇ ಅಂದುಕೊಳ್ಳುತ್ತಿದ್ದ.

ಸುಮಾರು ಒಂದೂವರೆ ನಿಮಿಷ ಅದೇ ಅದೇ ದೃಶ್ಯ. ಯಾರೂ ಹೊರ ಬರುತ್ತಿಲ್ಲ. ಬೇರೆಯವರು ಇಳಿಯಲಿ ಎಂಬುದೇ ಎಲ್ಲರ ಅಪೇಕ್ಷೆ. ಆಗ ಲಿಫ್ಟಿನ ಹಿಂದಿನ ಮೂಲೆಯಲ್ಲಿದ್ದ ಯುವತಿಯೊಬ್ಬಳು ಸುತ್ತಲೂ ಎಲ್ಲರ ಮುಖ ನೋಡಿದಳು. ಆಕೆ ನಿಂತಲ್ಲಿಂದ ಎರಡು ಹೆಜ್ಜೆ ಕದಲಿದಳು. ತಕ್ಷಣ ಎಲ್ಲರೂ ಅವಳಿಗೆ ಹೊರ ಹೋಗಲು ದಾರಿ ಮಾಡಿಕೊಟ್ಟಳು. ಆಕೆ ನಿಧಾನವಾಗಿ ಹೆಜ್ಜೆ ಹಾಕುತ್ತಾ, ಎಲ್ಲರನ್ನೂಸವರಿಕೊಂಡು ಲಿಫ್ಟ್‌ ಹೊರ ನಡೆದಳು. ಆಗ ಪಾರದರ್ಶಕವಾದ ಲಿಫ್ಟಿನ ಬಾಗಿಲು ನಿಧಾನವಾಗಿ
ಮುಚ್ಚಿಕೊಂಡಿತು. ಆ ಯುವತಿ ಎರಡೂ ಕೈಗಳಲ್ಲಿ ಊರುಗೋಲನ್ನು ಹಿಡಿದುಕೊಂಡಿದ್ದಳು!

ಶತಕ ಮತ್ತು ಮಾನವೀಯತೆ

ಎರಡು ತಿಂಗಳ ಹಿಂದೆ, ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್ ಬ್ಲೇಜ್ ಮತ್ತು ಒಟಾಗೊ ಸ್ಪಾರ್ಕ್ ಮಹಿಳಾ ಕ್ರಿಕೆಟ್ ತಂಡದ ನಡುವೆ ಟಿ-20. ವೆಲ್ಲಿಂಗ್ಟನ್ ಬ್ಲೇಜ್ ತಂಡದ ಆಟಗಾರ್ತಿ ಸೋಫಿ ದೇವಿನೇ ಅತ್ಯಂತ ವೇಗದ ಶತಕ ಬಾರಿಸಿದಳು. ಅವಳು ಕೇವಲ ಮೂವತ್ತಾರು ಎಸೆತಗಳಲ್ಲಿ, ಒಂಬತ್ತು ಸಿಕ್ಸರ್ ಮತ್ತು ಒಂಬತ್ತು ಬೌಂಡರಿ ಹೊಡೆದು ಸೆಂಚುರಿ ಪೂರೈಸಿದಳು.

ವಿಷಯ ಇದಲ್ಲ. ಆಕೆ ಸೆಂಚುರಿ ಅಂಚಿನಲ್ಲಿದ್ದಾಗ, ಬ್ಯಾಟ್ ಬೀಸಿದ ರಭಸಕ್ಕೆ ಚೆಂಡು ಬೌಂಡರಿ ಆಚೆ ಹೋಯಿತು. ಅಂಪೈರ್ ಸಿಕ್ಸರ್ ಎಂದು ಎರಡೂ ಕೈಗಳನ್ನುಎತ್ತಿದರು. ಸೋಫಿ ದೇವಿನೇ ಕೂಡ ಸೆಂಚುರಿ ಬಾರಿಸಿದ ಖುಷಿಯಲ್ಲಿ ಬ್ಯಾಟ್ ಎತ್ತಿದಳು.
ಸೋಫಿ ದೇವಿನೇ ಬೀಸಿದ ಆ ಹೊಡೆತ ಬೌಂಡರಿಯಾಚೆಯ ಹುಲ್ಲುಹಾಸಿನ ಮೇಲೆ ಕುಳಿತ ಒಂದು ಪುಟ್ಟ ಮಗುವಿನ ತಲೆಗೆ
ಬಡಿಯಿತು. ಆಪುಟ್ಟ ಮಗು ತನ್ನ ತಂದೆ – ತಾಯಿ ಮತ್ತು ಅಣ್ಣ – ಅಕ್ಕನ ಜತೆ ಪಂದ್ಯ ನೋಡಲು ಬಂದಿದ್ದಳು.

ಈ ವಿಷಯ ಸೋಫಿ ದೇವಿನೇಗೆ ಗೊತ್ತಾಯಿತು. ಅವಳು ಕ್ರೀಸ್‌ನಲ್ಲಿ ಬ್ಯಾಟ್ ಇಟ್ಟು, ಅಂಪೈರ್‌ಗೂ ಹೇಳದೇ, ಮೈದಾನದಲ್ಲಿ ನಡೆಯುತ್ತಾ, ಆ ಪುಟ್ಟ ಬಾಲಕಿಯ ಹತ್ತಿರ ಹೋಗಿ ತಲೆ ನೇವರಿಸಿದಳು. ಪೆಟ್ಟಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡಳು. ಆ ಬಾಲಕಿಯನ್ನು ಎತ್ತಿಮುದ್ದಾಡಿದಳು. ಅವಳ ಜತೆ ಫೋಟೋ ತೆಗೆಸಿಕೊಂಡಳು.

ಕೊನೆಯಲ್ಲಿ ಅವಳಿಗೆ ‘ತಪ್ಪಾಯ್ತು’ ಎಂದು ಹೇಳಿದಳು. ಅಲ್ಲಿ ತನಕ ಆಟ ಸ್ಥಗಿತವಾಗಿತ್ತು. ಇಡೀ ಕ್ರೀಡಾಂಗಣ ಕುತೂಹಲದಿಂದ
ಆ ದೃಶ್ಯಗಳನ್ನುನೋಡುತ್ತಿತ್ತು. ‘ನನಗೆ ಕ್ರಿಕೆಟ್, ಶತಕಕ್ಕಿಂತ ಆ ಮಗುವಿನ ಯೋಗಕ್ಷೇಮ ಮುಖ್ಯ. ಅವಳಿಗೆ ಏನಾದರೂ ಆಗಿದ್ದಿದ್ದರೆ, ನಾನು ಅ ಬ್ಯಾಟ್ ಬಿಸಾಡುತ್ತಿದ್ದೆ. ಬ್ಯಾಟ್ ಮುಂದುವರಿಸಲು ನನಗೆ ಮನಸ್ಸಾದರೂ ಹೇಗೆ ಬರುತ್ತಿತ್ತು?’ ಎಂದು ಸೋಫಿ ದೇವಿನೇ ಹೇಳಿದಳು. ಅಂದು ಆಕೆಯ ದಾಖಲೆಯ ಶತಕಕ್ಕಿಂತ ಅವಳ ಮಾನವೀಯತೆ ದಾಖಲೆ ಮಾಡಿತು!

ಅತಿ ಚಿಕ್ಕ ರಾಜೀನಾಮೆ

ಇತ್ತೀಚೆಗೆ ದಿನೇಶ್ ತ್ರಿವೇದಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು. ಅವರು ಬರೆದಿದ್ದಕ್ಕಿಂತ ಚಿಕ್ಕ ರಾಜೀನಾಮೆ ಪತ್ರವನ್ನುಯಾರೂ ಬರೆಯಲೂ ಸಾಧ್ಯವಿಲ್ಲ. ತ್ರಿವೇದಿಯವರು ಬರೆದಿದ್ದರು – ‘ಜೈ ಶ್ರೀರಾಮ’