Wednesday, 11th December 2024

ನಡೆಯುವವ ಬೀಳಬಹುದು, ಮಲಗಿದವನಲ್ಲ !

ವಿದೇಶವಾಸಿ

dhyapaa@gmail.com

ಒಂದು ಮಗು ನಡೆಯುವುದನ್ನು ಕಲಿಯುವುದಕ್ಕಿಂತ ಮೊದಲು ಎಷ್ಟು ಬಾರಿ ಬೀಳುತ್ತದೆ ಎಂದು ಎಲ್ಲರಿಗೂ ಗೊತ್ತು. ಎಷ್ಟೇ ಸಾರಿ ಬಿದ್ದರೂ ಆ ಮಗು ಪುನಃ ಎದ್ದು ನಿಲ್ಲಲು, ನಡೆಯಲು ಯತ್ನಿಸುತ್ತದೆ. ಬಿದ್ದಾಗ ತಾನು ಸೋತೆ ಎಂದು ಅದು ಸುಮ್ಮನೆ ಕೂರುವುದಿಲ್ಲ. ಅಷ್ಟಕ್ಕೂ ನಡೆಯುವವನೇ ಬೀಳಬೇಕೆ ವಿನಾ ಮಲಗಿದವ ಬೀಳಲು ಸಾಧ್ಯವೇ?

never lose, I either win or learn lesson’ ದಕ್ಷಿಣ ಆಫ್ರಿಕಾದ ಪಿತಾಮಹ ಎಂದು ಕರೆಸಿಕೊಂಡ ನೆಲ್ಸನ್ ಮಂಡೇಲಾ ಹೇಳಿದ ಮಾತಿದು. ಪ್ರಪಂಚ ದಲ್ಲಿ ಯಾರೇ ಆಗಲಿ, ಎಲ್ಲ ವಿಷಯದಲ್ಲಿಯೂ ಗೆಲ್ಲುವುದಿಲ್ಲ. ಹಾಗೆಯೇ ಎಲ್ಲ ವಿಷಯದಲ್ಲಿ ಸೋಲುವುದೂ ಇಲ್ಲ. ಒಮ್ಮೆ ಗೆದ್ದವ ಅದೇ ವಿಷಯದಲ್ಲಿ ಸೋಲಬಾರದು ಎಂದೇನೂ ಇಲ್ಲ, ಹಾಗೆಯೇ ಒಂದು ವಿಷಯದಲ್ಲಿ ಒಮ್ಮೆ ಸೋತರೆ ಅದೇ ವಿಷಯದಲ್ಲಿ ಯಾವತ್ತೂ ಗೆಲ್ಲಬಾರದು ಎಂದೂ ಇಲ್ಲ.

ಸೋಲಾಗಲಿ, ಗೆಲುವಾಗಲಿ, ಯಾವತ್ತೂ ಶಾಶ್ವತವಲ್ಲ. ಅದೇನಿದ್ದರೂ ಕ್ಷಣಿಕ. ನಿಜ, ಸರಿಯಾಗಿಯೇ ಓದಿದ್ದೀರಿ; ಗೆಲುವೂ ಕ್ಷಣಿಕ. ಸೋಲಾಗಲಿ, ಗೆಲುವಾಗಲಿ, ಅದು ಆಯಾ ಸಂದರ್ಭದಲ್ಲಿ ಘಟಿಸುವ ವಿಷಯ. ಅದೇನಿದ್ದರೂ ಆ ಕ್ಷಣಕ್ಕೆ ಮಾತ್ರ. ಮುಂದಿನದ್ದು ಆ ಘಟನೆಯ ಪುನರಾವರ್ತನೆ ಅಥವಾ ಪರಿಣಾಮ. ಸಂತೋಷ
ಅಥವಾ ದುಃಖದ ಕ್ಷಣಕ್ಕಿಂತ ಪರಿಣಾಮದ ಸಮಯವನ್ನು ಮನುಷ್ಯ ಹೆಚ್ಚು ಕಾಲ ಅನುಭವಿಸುತ್ತಾನೆ.

‘ಸೋಲು’ ಎಂಬ ಪದಕ್ಕೆ ಸಂಕೀರ್ಣವಾದ ಅರ್ಥವಿದೆ. ಅದನ್ನು ನೋಡುವ ದೃಷ್ಟಿಕೋನವೂ ಒಬ್ಬೊಬ್ಬರದ್ದು ಒಂದೊಂದು ರೀತಿಯದ್ದಾಗಿರುತ್ತದೆ. ಜನರ ವ್ಯಕ್ತಿತ್ವದ ಆಧಾರದ ಮೇಲೆ ದೃಷ್ಟಿಕೋನವೂ ಬದಲಾಗುತ್ತದೆ. ಕೆಲವರಿಗೆ ಸೋಲು ಆಘಾತ ನೀಡಿದರೆ ಕೆಲವರಿಗೆ ಅದು ಮಾಮೂಲು. ಒಂದು ವಿಷಯ ಕೆಲವರಿಗೆ ಸೋಲು ಎಂದು ಅನಿಸಿದರೆ, ಅದೇ ವಿಷಯ ಇನ್ನೊಬ್ಬರಿಗೆ ಸೋಲು ಎಂದು ಅನಿಸಲಿಕ್ಕಿಲ್ಲ. ಕೆಲವರಿಗಂತೂ ಸೋಲು ಮತ್ತು ತಪ್ಪಿನ ನಡುವೆಯ ಅಂತರವೇ ತಿಳಿದಿರು ವುದಿಲ್ಲ.

ಕೆಲವರು ತೀರಾ ಸಣ್ಣ ತಪ್ಪು ಅಥವಾ ವೈಫಲ್ಯವನ್ನು ಅತಿದೊಡ್ಡ ಸೋಲು ಎಂದು ಪರಿಗಣಿಸುತ್ತಾರೆ. ಕೆಲವರು ಅದೇ ಸೋಲನ್ನು ಜೀವನದ ಪಾಠವಾಗಿಸಿ
ಕೊಳ್ಳುತ್ತಾರೆ, ಗೆಲುವಿನ ಮೆಟ್ಟಿಲಿನ ಚಪ್ಪಡಿ ಕಲ್ಲಿನ ಹಾಸಾಗಿಸಿಕೊಳ್ಳುತ್ತಾರೆ. ಮನುಷ್ಯ ಎಷ್ಟೋ ಬಾರಿ ತಾನು ಮಾಡುವ ಕೆಲಸದಲ್ಲಿ ತಪ್ಪು ಮಾಡುತ್ತಾನೆ, ವಿಫಲನಾಗುತ್ತಾನೆ, ಸೋಲುತ್ತಾನೆ. ಸರಿಯಾಗಿ ಲೆಕ್ಕ ಇಟ್ಟರೆ ಮನುಷ್ಯ ಹುಟ್ಟಿನಿಂದ ಸಾಯುವವರೆಗೆ, ಗೆಲ್ಲುವುದಕ್ಕಿಂತ ಸೋಲುವುದೇ ಹೆಚ್ಚು. ಒಂದೇ ಒಂದು ದಿನ ಮುಂಜಾನೆಯಿಂದ ರಾತ್ರಿಯವರೆಗೆ ನಮ್ಮನ್ನು ನಾವೇ ಅವಲೋಕಿಸಿಕೊಂಡರೆ ನಾವು ಎಷ್ಟು ಬಾರಿ ಸೋತಿದ್ದೇವೆ ಎಂದು ತಿಳಿಯುತ್ತದೆ.

ನಾಳೆ ಬೆಳಗ್ಗೆ ಐದು ಗಂಟೆಗೆ ಏಳಬೇಕು ಎಂದು ಎಚ್ಚರಿಕೆಯ ಗಂಟೆ ಇಟ್ಟುಕೊಂಡು ಮಲಗಿ, ಬೆಳಗ್ಗೆ ಗಂಟೆ ಹೊಡೆದಾಗ ಎಷ್ಟೋ ಬಾರಿ ಗಡಿಯಾರದ ತಲೆಯ ಮೇಲೆ ಮೊಟಕಿ ಮತ್ತೆ ಮಲಗುತ್ತೇವೆ. ಹಾಗೆ ನೋಡಿದರೆ ಸೋಲಿನ ಶುಭಾರಂಭ ಅಲ್ಲಿಂದಲೇ ಶುರು. ಐದು ನಿಮಿಷದಲ್ಲಿ ಸ್ನಾನ ಮುಗಿಸಿ ಬರುವುದಾಗಿ
ನಿರ್ಣಯಿಸಿ, ಹತ್ತು ನಿಮಿಷದ ನಂತರ ಬಚ್ಚಲು ಮನೆಯಿಂದ ಹೊರಗೆ ಬರುತ್ತೇವೆ. ಅದು ಇನ್ನೊಂದು ಸೋಲು. ತೊಡುವ ಬಟ್ಟೆಯಿಂದ ಹಿಡಿದು, ತಿನ್ನುವ ತಿಂಡಿಯವರೆಗೆ ಅದೆಷ್ಟೋ ಬಾರಿ ಮನಸ್ಸಿಲ್ಲದಿದ್ದರೂ ಒಪ್ಪಿಕೊಂಡು ಮುನ್ನಡೆಯುತ್ತಿರುತ್ತೇವೆ.

ಇಂದು ರಾತ್ರಿ ಇಷ್ಟೇ ಗಂಟೆಗೆ ಮಲಗಬೇಕು ಎಂದು ನಿರ್ಧರಿಸಿದ ನಂತರವೂ ಟಿವಿ ನೋಡುತ್ತಲೋ, ಮೊಬೈಲ್‌ನಲ್ಲಿ ಕಾಲ ಕಳೆದೋ ತಡವಾಗಿ ಮಲಗುತ್ತೇವೆ. ಕೆಲವರಿಗೆ ಇದು ಸೋಲು ಅನಿಸದಿರಬಹುದು, ಕೆಲವರಿಗೆ ಇದು ಸಣ್ಣ ತಪ್ಪು ಅನಿಸಬಹುದು, ಏನೇ ಆದರೂ, ನಾವೇ ನಿರ್ಧರಿಸಿಕೊಂಡದ್ದನ್ನು ನಮ್ಮ ಕೈಯಲ್ಲೇ ಈಡೇರಿಸಿಕೊಳ್ಳಲಾಗ ದಿದ್ದರೆ ಅದು ಸೋಲೇ. ಅದನ್ನು ವೈಫಲ್ಯ ಅನ್ನಿ, ತಪ್ಪು ಅನ್ನಿ, ಅದಕ್ಕೆ ನಾವು ಕೊಡುವ ಹೆಸರು ಮಾತ್ರ ಬೇರೆಯೇ ಹೊರತು ಪರಿಣಾಮ ಬೇರೆ ಅಲ್ಲ.

ಪರಿಣಾಮ ಅಷ್ಟು ತೀವ್ರವಾಗಿರದಿದ್ದರೂ ಒಂದು ಲೆಕ್ಕದಲ್ಲಿ ಇವೆಲ್ಲವೂ ವಿಫಲತೆಯೇ ಅಲ್ಲವೇ? ಸಣ್ಣ ವಿಷಯವೇ ಆದರೂ, ಸುಧಾರಿಸಿಕೊಂಡರೆ ಒಳ್ಳೆಯದೇ. ಸುಧಾರಿಸಿಕೊಳ್ಳುವ ಎಲ್ಲ ಪ್ರಯತ್ನ ವನ್ನೂ ಮನುಷ್ಯ ಮಾಡಬೇಕು ಎನ್ನುವುದೂ ಸತ್ಯ. ಆದರೆ, ಸೋತೆ ಎಂದು ಹತಾಶರಾಗುವುದಾಗಲಿ, ಕೈ ಚೆಲ್ಲಿ ಕುಳಿತು ಕೊಳ್ಳುವುದಾಗಲಿ ಯಾವ ಕಾರಣಕ್ಕೂ, ಯಾವ ಸಂದರ್ಭಕ್ಕೂ ಸರಿಯಲ್ಲ. ಬದುಕಿನಲ್ಲಿ ಒಮ್ಮೆಯೂ ಸೋಲಲಿಲ್ಲ ಎನ್ನುವವರು ದುರ್ಬೀನು ಹಾಕಿ ಹುಡುಕಿದರೂ ಸಿಗಲಿಕ್ಕಿಲ್ಲ.

‘ತಪ್ಪು ಮಾಡದವ್ರು ಯಾರವ್ರೇ… ತಪ್ಪೇ ಮಾಡದವ್ರು ಎಲ್ಲವ್ರೇ…’ ಅಲ್ಲವೇ? ಒಂದು ವೇಳೆ ಯಾರಾದರೂ ಇದ್ದರೆ, ಅಂಥವರಿಗೊಂದು ಪಂಥಾಹ್ವಾನ!
’’Giannis Antetokounmpo’ ಇದನ್ನು ಹತ್ತು ಬಾರಿ ಓದಿದರೂ ಅಡ್ಡಿ ಯಿಲ್ಲ, ಆದರೆ ಯಾರ ಸಹಾಯವೂ ಇಲ್ಲದೇ, ಎಲ್ಲಿಯೂ ಕೇಳದೆ, ಇದರ ಸರಿಯಾದ ಉಚ್ಚಾರ ಹೇಗೆ ಎಂದು ಒಂದೇ ಬಾರಿ ಹೇಳಬಹುದೆ? ಇದು ಪ್ರಸಿದ್ಧ ಬಾಸ್ಕೆಟ್‌ಬಾಲ್ ಆಟಗಾರ ನೊಬ್ಬನ ಹೆಸರು. ಅವನ ಎರಡನೆಯ ಹೆಸರು ಬಿಡಿ, ಒಮ್ಮೆ ಕೇಳದಿದ್ದರೆ ಅವನ ಮೊದಲನೆಯ ಹೆಸರು ಹೇಳುವುದೇ ಕಷ್ಟ.

ಗಿಯನ್ನಿಸ್? ಜಿಯನ್ನಿಸ್? ಊಹೂಂ… ಇವನ ಹೆಸರನ್ನು ಉಚ್ಚಾರ ಮಾಡುವಂತೆ ಕನ್ನಡದಲ್ಲಿ ಬರೆಯುವುದಾದರೆ, ‘ಇಯಾನಿಸ್ ಅಂಟೆಟಿಕೌಂಪು’. ಈಗ ಹೇಳಿ,
ಮೊದಲ ಪ್ರಯತ್ನದಲ್ಲಿ ಯಾರು ಸರಿಯಾಗಿ ಹೇಳಿ ಯಾರು? ಅವನ ಊರಿನವರು, ಆ ದೇಶದವರು ಹೇಳಬಹುದು ಎನ್ನುವುದಾದರೆ, ಅಂಥವರಿಗೆ ಒಂದು ಸವಾಲು. ಅವರು ‘ಶೆಲ್ವಪಿಳ್ಳೈ ಬಾಲಸುಬ್ರಹ್ಮಣ್ಯಂ’ ಎಂಬ ಹೆಸರನ್ನು ಒಂದೇ ಬಾರಿಗೆ ಸರಿಯಾಗಿ ಹೇಳಲಿ! ಇಯಾನಿಸ್ ಹುಟ್ಟಿ ಬೆಳೆದ ದೇಶದವರಿಗೇ ಅವನ ಹೆಸರು ಹೇಳಲು ಕಷ್ಟವಾಗುತ್ತಿದ್ದುದರಿಂದ ಅವನನ್ನು ‘ಗ್ರೀಕ್ ಫ್ರೀಕ್’ ಎಂದು ಕರೆದರು. ಇಂದಿಗೂ ಆತನ ನಿಜನಾಮಕ್ಕಿಂತ ಅದೇ ಹೆಸರಿನಿಂದಲೇ ಆತ ಜನಪ್ರಿಯನಾಗಿದ್ದಾನೆ.

ತಮಾಷೆಯ ಮಾತು ಹಾಗಿರಲಿ, ಇಲ್ಲಿ ಇಯಾನಿಸ್ ಹೆಸರು ಹೇಳುವುದಕ್ಕೆ ಕಾರಣವಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆತನ ಒಂದು ವಿಡಿಯೋ ಬಹಳ ಜನಪ್ರಿಯವಾಯಿತು. ಭಾರತ ತಂಡ ವಿಶ್ವಕಪ್ ಕ್ರಿಕೆಟ್‌ನ ಅಂತಿಮ ಪಂದ್ಯದಲ್ಲಿ ಸೋತ ಸಂದರ್ಭವಾದದ್ದರಿಂದ ಈ ಭೂಭಾಗದಲ್ಲಿ ವಿಡಿಯೋ ಸ್ವಲ್ಪ ಹೆಚ್ಚೇ ಜನ
ಪ್ರಿಯವಾಯಿತು. ಅದೊಂದು ಪತ್ರಿಕಾಗೋಷ್ಠಿಯ ತುಣುಕು. ‘ಈ ಋತುವಿನಲ್ಲಿ ನಿಮ್ಮ ಪ್ರದರ್ಶನ ಚೆನ್ನಾಗಿರಲಿಲ್ಲ, ಇದನ್ನು ನೀವು ನಿಮ್ಮ ವೈಫಲ್ಯ ಎಂದು ಪರಿಗಣಿಸುತ್ತೀರಾ?’ ಎಂದು ಪತ್ರಕರ್ತ ನೊಬ್ಬ ಪ್ರಶ್ನೆ ಕೇಳಿದ್ದ.

ಅದಕ್ಕೆ ಇಯಾನಿಸ್ ನೀಡಿದ ಖಡಕ್ ಉತ್ತರ ಬಹಳ ಇಷ್ಟವಾಯಿತು: ‘ನೀವು ಕಳೆದ ವರ್ಷವೂ ನನ್ನಲ್ಲಿ ಇದೇ ಪ್ರಶ್ನೆಯನ್ನು ಕೇಳಿದ್ದಿರಿ. ಈಗ ಮತ್ತೆ ಅದೇ ಪ್ರಶ್ನೆ
ಕೇಳುತ್ತಿದ್ದೀರಿ. ನೀವು ಪ್ರತಿವರ್ಷ ನಿಮ್ಮ ಹುದ್ದೆಯಲ್ಲಿ ಬಡ್ತಿ ಪಡೆಯುತ್ತೀರಾ? ಇಲ್ಲ ತಾನೆ? ನೀವು ಪ್ರತಿನಿತ್ಯ ಕೆಲಸ ಮಾಡುವಾಗಲೂ ನಿಮ್ಮ  ಮನಸ್ಸಿನಲ್ಲಿ ಯಾವುದೋ ಆಸೆಯಿರುತ್ತದೆ, ಆಕಾಂಕ್ಷೆಗಳಿರುತ್ತವೆ. ಏನಿಲ್ಲವೆಂದರೂ ಒಂದು ಗುರಿ ಯಂತೂ ಇದ್ದೇ ಇರುತ್ತದೆ. ಅದು ನೀವು ಮಾಡುತ್ತಿರುವ ಉದ್ಯೋಗದಲ್ಲಿ ಬಡ್ತಿ ಪಡೆಯಲಿಕ್ಕೆ ಇರಬಹುದು, ಹೆಚ್ಚಿನ ಸಂಬಳ ಸಿಗಲಿ, ತನ್ಮೂಲಕ ಪರಿವಾರದವರನ್ನು ಚೆನ್ನಾಗಿ ಸಾಕಬಹುದು ಎಂದು ಇರಬಹುದು, ಮನೆ ಕಟ್ಟಬೇಕು ಎಂದಿರಬ ಹುದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು, ತಂದೆ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದಿರಬಹುದು ಅಥವಾ ಸಂಸ್ಥೆಯಲ್ಲಿ ಒಳ್ಳೆಯ
ಹೆಸರು ಗಳಿಸಬೇಕು ಎಂದು ಇರಬಹುದು. ಆದರೆ ಪ್ರತಿವರ್ಷವೂ ಇದೆಲ್ಲ ಆಗುವುದಿಲ್ಲ.

ಹಾಗಾದರೆ ಪ್ರತಿವರ್ಷ ನೀವು ವಿಫಲರಾದಂತೆ, ಸೋತಂತೆ ಆಯಿತೇ? ಇದನ್ನು ಸೋಲು ಎನ್ನುವುದಿಲ್ಲ. ಬದಲಾಗಿ ಇವೆಲ್ಲ ‘ಗೆಲುವು’ ಎಂಬ ಮಜಲನ್ನು
ತಲುಪುವ ಕಡೆಗೆ ಹಾಕುವ ಹೆಜ್ಜೆಗಳು’. ಇಯಾನಿಸ್ ಮುಂದುವರಿದು ಹೇಳುತ್ತಾನೆ: ‘ಮೈಕಲ್ ಜಾರ್ಡನ್ (ಹೆಸರಾಂತ ಬಾಸ್ಕೆಟ್‌ಬಾಲ್ ಆಟಗಾರ) ೧೫ ವರ್ಷಗಳ ಕಾಲ ಸುದೀರ್ಘವಾಗಿ ಆಡಿದರು. ೬ ಬಾರಿ ಮಾತ್ರ ಅವರು (ತಂಡ) ಗೆಲ್ಲಲು ಸಾಧ್ಯವಾಯಿತು. ಹಾಗಾದರೆ ಉಳಿದ ೯ ವರ್ಷ ಅವರು ವಿಫಲರಾದರು ಎನ್ನಬೇಕೆ? ಇಂಥ ಪ್ರಶ್ನೆಯೇ ಸರಿಯಲ್ಲ. ಯಾವುದೇ ಕ್ರೀಡೆಯಾಗಲಿ, ವೈಫಲ್ಯ ಎನ್ನುವುದು ಇಲ್ಲ.

ಕೆಲವೊಂದು ದಿನ ಆಟಗಾರನಿಗೆ ಒಳ್ಳೆಯದಾಗಿರುತ್ತದೆ, ಕೆಲವೊಮ್ಮೆ ಕೆಟ್ಟ ದಿನವಾಗಿರುತ್ತದೆ. ಕೆಲವು ದಿನ ನೀವು ಜಯಶಾಲಿಯಾಗುತ್ತೀರಿ, ಕೆಲವು ದಿನ ಆಗುವುದಿಲ್ಲ. ಕೆಲವೊಮ್ಮೆ ನಿಮ್ಮ ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ, ಅದೇ ಅದೃಷ್ಟ ಕೆಲವೊಮ್ಮೆ ನಿಮಗೆ ಕೈ ಕೊಡುತ್ತದೆ. ಪ್ರತಿ ಸಲವೂ ನೀವೇ ಜಯಶಾಲಿ
ಯಾಗಲು ಸಾಧ್ಯವಿಲ್ಲ. ಕೆಲವೊಮ್ಮೆ ಬೇರೆಯವರೂ ಗೆಲ್ಲುತ್ತಾರೆ. ಮುಂದಿನ ಸಲ ಪುನಃ ನಾವು ಗೆಲ್ಲಬಹುದು. ಆದರೆ ಮತ್ತೆ ಗೆಲ್ಲಲು ಬೇಕಾದ ಸಿದ್ಧತೆಯನ್ನು ನಾವು ಈ ನಡುವೆ ಮಾಡಿಕೊಳ್ಳಬೇಕು.

ನಾವು ಎಲ್ಲಿ ತಪ್ಪಿದ್ದೇವೆ ಎಂಬುದನ್ನು ಕಂಡುಕೊಳ್ಳಬೇಕು, ಆ ತಪ್ಪನ್ನು ತಿದ್ದಿಕೊಳ್ಳಬೇಕು, ಅದೇ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು’.ಎಷ್ಟು ಸತ್ಯವಾದ ಮಾತು ಅಲ್ಲವೇ? ಆಟವಾಗಲಿ, ಜೀವನವಾಗಲಿ, ಶಾಲೆ-ಕಾಲೇಜಿನ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲ. ಅಲ್ಲಿ ಒಂದು ವಿಷಯದಲ್ಲಿ ಉತ್ತೀರ್ಣ ರಾಗದಿದ್ದರೆ ಇಡೀ ವರ್ಷವೇ ಹಾಳಾಗಿಹೋಗುತ್ತದೆ. ಅಲ್ಲಿಯೂ ಆ ವಿಷಯದಲ್ಲಿ ಮತ್ತೆ ತೇರ್ಗಡೆಯಾಗಬಹುದು. ನ್ನು ಆಟ ಯಾವ ಮಹಾ? ಸೋಲುತ್ತೇನೆ ಎಂಬ
ಭಯದಿಂದ ಆಟವನ್ನೇ ಆಡದೆ ಇದ್ದರೆ ಹೇಗೆ? ಬೀಳುತ್ತೇನೆ ಎಂಬ ಭಯದಿಂದ ನಡೆಯದೇ ಇರಲು ಸಾಧ್ಯವೇ? ಒಂದು ಮಗು ನಡೆಯುವುದನ್ನು ಕಲಿಯುವು ದಕ್ಕಿಂತ ಮೊದಲು ಎಷ್ಟು ಬಾರಿ ಬೀಳುತ್ತದೆ ಎಂದು ಎಲ್ಲರಿಗೂ ಗೊತ್ತು.

ಎಷ್ಟೇ ಸಾರಿ ಬಿದ್ದರೂ ಆ ಮಗು ಪುನಃ ಎದ್ದು ನಿಲ್ಲಲು, ನಡೆಯಲು ಪ್ರಯತ್ನಿಸುತ್ತದೆ. ಬಿದ್ದಾಗ ತಾನು ಸೋತೆ ಎಂದು ಅದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅಷ್ಟಕ್ಕೂ ನಡೆಯುವವನೇ ಬೀಳಬೇಕೆ ವಿನಾ ಮಲಗಿದವ ಬೀಳಲು ಸಾಧ್ಯವೇ? ಇಂಥ ವಿಷಯಗಳು ಇಯಾನಿಸ್ ಕಡೆಯಿಂದ ಬಂದರೆ ಅದಕ್ಕೆ ಮೌಲ್ಯ ಇನ್ನೂ ಹೆಚ್ಚು. ಯಾಕೆಂದರೆ ಇಯಾನಿಸ್ ಜೀವನದಲ್ಲಿ ಸಾಕಷ್ಟು ಸಂಘರ್ಷಪಟ್ಟು ಮೇಲೆ ಬಂದ ವ್ಯಕ್ತಿ. ಮೂಲತಃ ಆತ ನೈಜೀರಿಯಾದವ. ಆತನ ತಂದೆ ಫುಟ್‌ಬಾಲ್ ಆಟಗಾರ, ತಾಯಿ ಎತ್ತರ ಜಿಗಿತದ ಕ್ರೀಡಾಪಟು. ಕಾರಣಾಂತರ ದಿಂದ ಇಯಾನಿಸ್ ಅಪ್ಪ-ಅಮ್ಮ ಇಬ್ಬರೂ ನೈಜೀರಿಯಾದಿಂದ ಗ್ರೀಸ್‌ಗೆ ವಲಸೆ ಬಂದಿದ್ದರು.

ಆದರೆ ಅವರಿಗೆ ಗ್ರೀಸ್‌ನ ಪೌರತ್ವ ದೊರೆತಿರಲಿಲ್ಲವಾದ್ದರಿಂದ ಸರಿಯಾದ ಕೆಲಸವೂ ಇರಲಿಲ್ಲ. ಹಾಗಾಗಿ ಇಯಾನಿಸ್ ಮತ್ತು ಆತನ ಸಹೋದರರು ದಾರಿ
ಬದಿಯಲ್ಲಿ ವಾಚು, ತಂಪಿನ ಕನ್ನಡಕ, ಕೈಚೀಲ ಇತ್ಯಾದಿ ವಸ್ತುಗಳನ್ನು ಮಾರುತ್ತಿದ್ದರು. ಈ ನಡುವೆ ಸಮಯ ಸಿಕ್ಕಾಗೆಲ್ಲ ಆತ ಬಾಸ್ಕೆಟ್ ಬಾಲ್ ಆಡುತ್ತಿದ್ದ.
ಇದೆಲ್ಲ ಒಂದು ಕಡೆಯಾದರೆ, ಇನ್ನೊಂದು ಕಡೆ ಆತನ ಬಣ್ಣ, ಮತ್ತು ಗ್ರೀಸ್‌ನ ಕಾನೂನಿನಿಂದಾಗಿ ಅವನಿಗೆ ೧೮ ವರ್ಷವಾಗುವವರೆಗೂ ಗ್ರೀಸ್‌ನ ಪೌರತ್ವವೇ ಸಿಕ್ಕಿರಲಿಲ್ಲ. ಗ್ರೀಸ್‌ನಲ್ಲಿ ಹುಟ್ಟಿ ಬೆಳೆದವನಾದದ್ದರಿಂದ ಅವನಿಗೆ ನೈಜೀರಿಯಾದ ಭಾಷೆಯೂ ಬರುತ್ತಿರಲಿಲ್ಲ, ಅಲ್ಲಿಯ ರೀತಿ- ರಿವಾಜುಗಳೂ ತಿಳಿದಿರಲಿಲ್ಲ.

ಆದ್ದರಿಂದ ನೈಜೀರಿಯಾದ ಪೌರತ್ವವೂ ಇರಲಿಲ್ಲ. ಪೌರತ್ವ ಇಲ್ಲದಿದ್ದರೇನಂತೆ, ಬಾಸ್ಕೆಟ್‌ಬಾಲ್ ಆಡುವುದನ್ನು ಆತ ನಿಲ್ಲಿಸಲೇ ಇಲ್ಲ. ತನ್ನಲ್ಲಿರುವ ಪ್ರತಿಭೆಯಿಂದ
ಗ್ರೀಸ್‌ನ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಹಂತ ತಲುಪಿದ್ದ. ಕೊನೆಗೆ ಆತ ಗ್ರೀಸ್ ಪರವಾಗಿ ಆಡುವುದಕ್ಕಿಂತ ೨ ತಿಂಗಳು ಮೊದಲು ಆತನಿಗೆ ಗ್ರೀಸ್‌ನ ಪೌರತ್ವ ದೊರೆಯಿತು. ಮೊದಲ ಬಾರಿ ಆತ ದೇಶ ಬಿಟ್ಟು ಹೊರಗೆ ಹೋಗಿದ್ದ. ನಂತರ ಅವನಿಗೆ ನೈಜೀರಿಯಾದ ಪೌರತ್ವವೂ ದೊರಕಿತು. ೬ ಅಡಿ ೧೧ ಇಂಚು ಎತ್ತರವಿದ್ದು, ೧೧೦ ಕಿಲೋ ತೂಗುವ ಇಯಾನಿಸ್ ಇದೇ ವರ್ಷ ೧,೭೦೦ ಕೋಟಿ ರುಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಕರಾರುಪತ್ರಕ್ಕೆ ಸಹಿ ಹಾಕಿದ್ದಾನೆ ಎಂದರೆ ಆತನ ಒಟ್ಟೂ ಆದಾಯ ಎಷ್ಟಿರಬಹುದು ಲೆಕ್ಕ ಹಾಕಿ.

ತಾನು ಯಾವ ದೇಶದ ಪ್ರಜೆ ಎಂಬುದೇ ಗೊತ್ತಿಲ್ಲದವ, ಹೊಟ್ಟೆಪಾಡಿಗಾಗಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಇದ್ದವ, ತನ್ನ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾನೆ ಎಂದಾದರೆ ಉಳಿದವರಿಂದ ಯಾಕೆ ಸಾಧ್ಯವಿಲ್ಲ? ಸೋಲನ್ನು ಅದೇ ಅಂತಿಮ ಎಂದು ನಿರ್ಧರಿಸದೆ, ಕಲಿಕೆಯ ಪಾಠ, ಗೆಲುವಿನ ಮೆಟ್ಟಿಲು ಎಂದು ತಿಳಿದುಕೊಂಡರೆ ಸೋಲನ್ನೂ ಗೆಲ್ಲಬಹುದು.