ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
ಮುಂಬರುವ ವರ್ಷಗಳಲ್ಲಿ ನಿರ್ಮಾಪಕರು, ನಿರ್ದೇಶಕರು ತಮ್ಮ ಚಿತ್ರದಲ್ಲಿ ಹಾಡಲು ಲತಾ ಅವರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಾರೆ, ನೋಡಿ’ ಎಂದಿದ್ದರು. ಹೈದರ್‌ಗೆ ತಮ್ಮ ಮಾತಿನಲ್ಲಿ, ಲತಾಗೆ ತಮ್ಮ ಗಾಯನದಲ್ಲಿ ವಿಶ್ವಾಸವಿತ್ತು. ಆ ಮಾತು ನಿಜವಾಯಿತು.
ಸಂಗೀತ ಎಂದರೇ ಹಾಗೆ. ಒಮ್ಮೆ ಹೃದಯದಲ್ಲಿ ಇಳಿದರೆ ಅಲ್ಲಿಯೇ ಮನೆ ಕಟ್ಟಿಕೊಳ್ಳುತ್ತದೆ. ಹಾಗಂತ ಬಹು ಕಾಲ ಅಲ್ಲಿಯೂ ನಿಲ್ಲುವುದಿಲ್ಲ. ಆತ್ಮ ದೊಂದಿಗೆ ಬೆರೆಯುತ್ತದೆ. ಒಂದು ವೇಳೆ ಆತ್ಮಕ್ಕೆ ಮುಕ್ತಿ ಸಿಕ್ಕರೂ ಸಂಗೀತ ಸಾಯುವುದಿಲ್ಲ. ಅದು ನಿರಂತರ ಸುತ್ತುತ್ತಲೇ ಇರುತ್ತದೆ, ಬೇರೆ ಆತ್ಮದ ಹುಡು ಕಾಟದಲ್ಲಿ… ಅದಕ್ಕೇ ಸಂಗೀತ ಅಜರ, ಅಮರ! ಅಂತಹ ಸಂಗೀತಕ್ಕೆ ಅದೆಷ್ಟು ಆತ್ಮಗಳೋ ಗೊತ್ತಿಲ್ಲ, ಲತಾ ಮಂಗೇಶ್ಕರ್ ಎಂಬ ಬೆರಗು ಅವುಗಳಲ್ಲಿ ಒಂದು ಎಂಬುದಂತೂ ಸತ್ಯ.
ಮುಖೇಶ್, ಜೊ ಆಪ್ ಸಬ್ ಕೆ ಪ್ರಿಯ ಗಾಯಕ ಥೆ, ಮೆರೆ ಬಡೆ ಭಯ್ಯಾ ಥೆ…ನನ್ನ ಕಿವಿ ಸ್ಪರ್ಶಿಸಿದ ಲತಾ ಮಂಗೇ ಶ್ಕರ್ ಅವರ ಮೊದಲ ಪದಗಳು ಅವು. 1977, ನಮ್ಮ ಮನೆಗೆ ಮೊದಲ ಟೇಪ್ ರೆಕಾರ್ಡರ್ ಬಂದಿತ್ತು. ಆಗಿನ್ನೂ ಅದು ಎದ್ದು ನಿಂತಿರಲಿಲ್ಲ. ಮಲಗೇ ಇರುತ್ತಿದ್ದ, ಆಯತ ಆಕಾರದ, ಚಪ್ಪಟೆಯಾಗಿ ರುತ್ತಿದ್ದ ಟೇಪ್‌ರೆಕಾರ್ಡರ್ ಅದು. ಹಾಗೆ ಮನೆಗೆ ಬಂದ ಟೇಪ್‌ರೆಕಾರ್ಡರ್ ಜತೆ ಒಂದು ಆಡಿಯೋ ಕ್ಯಾಸೆಟ್ ಅಥವಾ ಧ್ವನಿ ಸುರುಳಿಯೂ ಬಂದಿತ್ತು. ಅದೊಂದು ಸಂಗೀತ ಸಂಜೆಯ ಧ್ವನಿಮುದ್ರಣ.
ಅದಕ್ಕೂ ಒಂದು ವರ್ಷ ಮೊದಲು ಮುಕೇಶ್ ಮತ್ತು ಲತಾ ಮಂಗೇಶ್ಕರ್ ಅಮೆರಿಕ ಮತ್ತು ಕೆನಡಾದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದರು. ಅಮೆರಿಕದ ಮಿಶಿಗನ್ ಡೆಟ್ರಾಯಟ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಯ ಬೇಕಿತ್ತು. ಉಸಿರಾಟದ ತೊಂದರೆಯಿಂದ ಮುಖೇಶ್ ಕೊನೆಯುಸಿರು ಎಳೆದಿದ್ದರು. ನಂತರದ ಕಾರ್ಯಕ್ರಮ ವನ್ನು ಲತಾ ಮಂಗೇಶ್ಕರ್ ಮತ್ತು ಮುಖೇಶ್ ಮಗ ನಿತಿನ್ ಮುಖೇಶ್ ನಡೆಸಿಕೊಟ್ಟಿದ್ದರು. ಆ ಕಾರ್ಯಕ್ರಮದ ಧ್ವನಿ ಸುರುಳಿಯನ್ನು ಎಚ್‌ಎಂವಿ ಕಂಪನಿಯವರು ಮಾರುಕಟ್ಟೆಗೆ ಬಿಟ್ಟಿದ್ದರು. ಅದು ನಮ್ಮ ಮನೆಗೂ ಬಂದಿತ್ತು.
ಧ್ವನಿ ಸುರುಳಿ ಬಿಚ್ಚಿಕೊಳ್ಳುವಾಗ, ಆರಂಭದ ಲತಾ ಮಂಗೇಶ್ಕರ್ ಅವರ ಶೋಕ ತಪ್ತ ಮೆಲು ದನಿ. ನಿಮಗೆಲ್ಲ ಪ್ರೀತಿಯ ಗಾಯಕರಾಗಿದ್ದ ಮುಖೇಶ್, ನನ್ನ ಅಣ್ಣನಾಗಿದ್ದರು. ಅವರು ಸ್ವರ್ಗವಾಸಿಗಳಾದ ಸುದ್ದಿ ಕೇಳಿ, ವಿಶ್ವದ ಮೂಲೆ ಮೂಲೆಯಲ್ಲಿರುವ ಲಕ್ಷಾಂತರ ಜನರ ಕಣ್ಣಲ್ಲಿ ಕಣ್ಣೀರು ಹರಿದರೆ, ನನ್ನ ಕಣ್ಣುಗಳು ಅವರು ಅಮೆರಿಕದಲ್ಲಿ ಕೊನೆ ಯುಸಿರು ಎಳೆದದ್ದನ್ನು ಕಂಡವು. ಅಶ್ರು ತುಂಬಿದ ಕಣ್ಣುಗಳಿಂದ ನಾನು ಅವರ ಪಾರ್ಥಿವ ಶರೀರ ಅಮೆರಿಕದಿಂದ ಭಾರತಕ್ಕೆ ಹೋಗುತ್ತಿದ್ದು ದನ್ನು ಕಂಡಿದ್ದೇನೆ. ಆ ನನ್ನ ಅಣ್ಣನಿಗೆ ಶ್ರದ್ಧಾಂಜಲಿ ಸಲ್ಲಿಸುವುದಾದರೂ, ಯಾವ ಶಬ್ದಗಳಲ್ಲಿ? ಒಬ್ಬ ತಂಗಿಯಾಗಿ ಗದ್ಗದಿತಳಾಗಿಯೇ? ಒಬ್ಬ ಕಲಾವಿದೆಯಾಗಿ, ಇನ್ನೊಬ್ಬ ಕಲಾವಿದನ ಮಹಾನ್ ಕಲೆಯ ಪ್ರಶಂಸಕಳಾಗಿಯೇ? ಅಥವಾ ಒಂದು ಮಹಾನ್ ಆತ್ಮಕ್ಕೆ ಶ್ರದ್ಧಾಂಜಲಿ ಸಮರ್ಪಿಸುವ ಶಬ್ದಗಳಿಂದಲೇ? ಮುಖೇಶ್ ಒಬ್ಬ ಮಹಾನ್ ಕಲಾವಿದ, ಪ್ರೀತಿಯ ಅಣ್ಣ ಅಷ್ಟೇ ಅಲ್ಲದೆ ಮಹಾನ್ ಆತ್ಮ ವಾಗಿದ್ದರು.
ಮೂರು ದಶಕಗಳಿಂದ ಅವರು ತಮ್ಮ ಮಧುರ ಸ್ವರದಿಂದ ಅದೆಷ್ಟೋ ಜನರ ಮನವನ್ನು ರಂಜಿಸಿದ್ದಾರೆ. ಅದನ್ನೆಲ್ಲ ಎಣಿಸುತ್ತ ಹೋದರೆ ಅದೆಷ್ಟೂ ವರ್ಷಗಳು ಕಳೆದು ಹೋಗುತ್ತವೋ ಗೊತ್ತಿಲ್ಲ, ಆದರೆ ಮುಖೇಶ್ ಇನ್ನೆಲ್ಲಿ? ಇನ್ನೇ ನಿದ್ದರೂ ಅವರ ನೆನಪುಗಳು ಮಾತ್ರ… ಮುಖೇಶ್ ಕುರಿತಂತೆ ಲತಾ ಮಂಗೇಶ್ಕರ್ ಮಾತು ಮುಂದುವರಿಯುತ್ತದೆ. ಮಾತು ಮುಗಿಯುತ್ತಿದ್ದಂತೆ ಮೊದಲ ಹಾಡು ಆರಂಭವಾಗುತ್ತದೆ, ’ತುಮ್ ನ ಜಾನೆ ಕಿಸ್ ಜಹಾ ಮೆ ಖೋ ಗಯೆ… ಹಮ್ ಭರೀ ದುನಿಯಾ ಮೆ ತನಹಾ ಹೋಗಯೇ…’ ವಿಪರ್ಯಾಸ ಎಂದರೆ, ಇಂದು ಪುನಃ ಅದೇ ಮಾತು, ಅದೇ ಹಾಡು ಮರುಕಳಿಸಿದೆ.
ವ್ಯತ್ಯಾಸ ಇಷ್ಟೇ, ಅಂದು ಮುಖೇಶ್, ಇಂದು ಲತಾ ಮಂಗೇಶ್ಕರ್. ಮುಖೇಶ್ ತೀರಿಹೋದದ್ದು, ಅಮೆರಿಕದಲ್ಲಿ, ಲತಾ ಭಾರತದಲ್ಲಿ. ಮುಖೇಶ್ ಮೂರು ದಶಕ ಭಾರತೀಯರನ್ನು ತಮ್ಮ ಗಾಯನದಿಂದ ರಂಜಿಸಿದರೆ ಲತಾ ಮಂಗೇಶ್ಕರ್ ಏಳು ದಶಕಗಳ ಕಾಲ ನಮ್ಮನ್ನು ಸಂಗೀತ ಸುಧೆಯಲ್ಲಿ ತೋಯಿಸಿದರು. ಈಗಿರು ವುದು ಒಂದೇ ಪ್ರಶ್ನೆ, ಲತಾ ದೀದಿ, ’ಲೂಟಕರ್ ಮೆರಾ ಜಹಾ ಚುಪ್ ಗಯೇ ಹೋ ತುಮ್ ಕಹಾ…?’ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಅವರು ಹಾಡಿದ ಎರಡು ಹಾಡುಗಳ ಪೈಕಿ ಒಂದು ಹಾಡು ‘ಬೆಳ್ಳನೆ ಬೆಳಗಾಯಿತು..’ ಯಾಕೋ ಅವರಿಗೆ ಭಾನುವಾರ ಬೆಳಗ್ಗೆ ಬೆಳ್ಳನೆ ಬೆಳಗಾಗಲೇ ಇಲ್ಲ.
ಅವರಿಗಷ್ಟೇ ಅಲ್ಲ, ಯಾವ ಭಾರತೀಯನಿಗೂ ಅದು ಬೆಳ್ಳನೆ ಬೆಳಗಲ್ಲ. ಭಾರತರತ್ನ ಪಡೆದ ಎರಡನೆಯ ಮಹಿಳೆ ಎಂಬ ಕೀರ್ತಿಗೆ ಪಾತ್ರವಾದ, ಭಾರತದ ಗಾನ ಕೋಗಿಲೆ ನಮ್ಮನ್ನು ಬಿಟ್ಟು ಹೊರಟ ಕ್ಷಣ ಬೆಳ್ಳನೆ ಬೆಳಕಾಗಲು ಹೇಗೆ ಸಾಧ್ಯ? ಇದೊಂದು ಬೆಳಗಾಗದೆಯೇ ರಾತ್ರಿಯಾದ ಅನುಭವ. ಈ ದಿನ ಯಾಕೋ ಲತಾ ಮಂಗೇಶ್ಕರ್‌ಗೆ ‘ಆಜ್ ಫಿರ್ ಜೀನೆ ಕಿ ತಮನ್ನಾ ಹೈ…’ ಎಂದು ಅನಿಸಲೇ ಇಲ್ಲ. ಕಳೆದ ಕೆಲವು ದಿನಗಳಿಂದ ಕರೋನಾ ಮಹಾಮಾರಿ ಯೊಂದಿಗೆ ಸೆಣಸಿ, ಬಹು ಅಂಗಗಳ ವೈಫಲ್ಯದಿಂದಾಗಿ ಆ ಜೀವ ಎಷ್ಟು ಬಳಲಿತ್ತೋ, ಜೀವನ ಪಥದಲ್ಲಿ ಅದೆಷ್ಟು ನೊಂದಿತ್ತೋ ಏನೋ, ’ಆಜ್ ಮರನೆ ಕಾ ಇರಾದಾ ಹೈ…’ ಎನ್ನುವುದನ್ನೇ ಗಟ್ಟಿಮಾಡಿ, ಹೊರಟೇ ಹೋದರು.
ಸಪ್ತ ಸಾಗರದಲ್ಲಿರುವ ನೀರಿನಷ್ಟು ನೆನಪನ್ನು ಬಿಟ್ಟುಹೋದರು. ಲತಾ ಮಂಗೇಶ್ಕರ್ ಹುಟ್ಟಿದ್ದು 1929ರಲ್ಲಿ, ಮಧ್ಯಪ್ರದೇಶದ ಇಂದೋರ್‌ನದರೂ,
ಬೆಳೆದದ್ದು ಮಹಾರಾಷ್ಟ್ರದದರೂ, ಮೂಲತಃ ಗೋವಾದವರು. ಅವರ ಅಜ್ಜ ಗಣೇಶ ಭಟ್ಟ ನವಾಥೆ ಹರ್ಡಿಕರ ಗೋವಾದ ಮಂಗೇಶಿ ದೇವಳದಲ್ಲಿ ಅರ್ಚಕರಾಗಿ ದ್ದರು. ದೇವಸ್ಥಾನದಲ್ಲಿರುವ ವಿಗ್ರಹಕ್ಕೆ ಅಭಿಷೇಕ ಮಾಡುತ್ತಿದ್ದುದರಿಂದ ಅವರ ಹೆಸರಿನೊಂದಿಗೆ ಅಭಿಷೇಕಿ ಎಂಬ ಹೆಸರೂ ಸೇರಿ ಕೊಂಡಿತ್ತು. ಗಣೇಶ ಭಟ್ಟರ ಪತ್ನಿ ಯೆಸುಬಾಯಿ ಅದೇ ದೇವಸ್ಥಾನದ ಉತ್ಸವಗಳಲ್ಲಿ, ಹಬ್ಬದ ಸಂದರ್ಭದಲ್ಲಿ ಗಾಯನ, ನರ್ತನದಲ್ಲಿ ಭಾಗವಹಿಸು ತ್ತಿದ್ದರು. ಅವರಿಬ್ಬರ ಮಗ ದೀನಾನಾಥ (ಲತಾ ಮಂಗೇಶ್ಕರ್ ತಂದೆ) ಅವರಿಗೂ ಅದು ರಕ್ತಗತವಾಗಿ ಬಂದಿತ್ತು. ತಮ್ಮ ಐದನೆಯ ವರ್ಷದ ಸಂಗೀತಾ ಭ್ಯಾಸ ಆರಂಭಿಸಿದರು. ಹನ್ನೊಂದನೆಯ ವರ್ಷದಲ್ಲಿ ಕಿರ್ಲೋಸ್ಕರ್ ನಾಟಕ ಮಂಡಲಿ ಸೇರಿಕೊಂಡರು.
ಅವರ ಕಾರ್ಯಕ್ರಮಗಳೆಲ್ಲ ಹೆಚ್ಚಾಗಿ ಮಧ್ಯಪ್ರದೇಶದಲ್ಲಿ ನಡೆಯುತ್ತಿತ್ತು. ಅಲ್ಲಿಯೇ ಶಾಸ್ತ್ರೀಯ ಸಂಗೀತ ಕಲಿತರು, ಸ್ವಂತ ತಂಡ ರಚಿಸಿಕೊಂಡು, ಸಂಗೀತ, ನಾಟಕದ ಪ್ರದರ್ಶನ ನೀಡುತ್ತಿದ್ದರು. ದೀನಾನಾಥ ತಮ್ಮ ಮೂಲ ಊರು ಮಂಗೇಶಿ ಯನ್ನು ತಮ್ಮ ಕುಟುಂಬದೊಂದಿಗೆ ಗುರುತಿಸಿಕೊಳ್ಳಲು ಮಂಗೇಶ್ಕರ್ ಎಂಬ ಉಪನಾಮವನ್ನು ತಮ್ಮ ಹೆಸರಿನಲ್ಲಿ ಸೇರಿಸಿಕೊಂಡರು. ಗೋವಾದಿಂದ ಕರ್ನಾಟಕದ ಉತ್ತರ ಕನ್ನಡ, ಸಮಗ್ರ ದಕ್ಷಿಣ ಕನ್ನಡ ಜಿಲ್ಲೆಗೆ ವಲಸೆ ಬಂದ ಅನೇಕ ಕೊಂಕಣಿ ಕುಟುಂಬಗಳ ಪೈಕಿ ಮಂಗೇಶ್ಕರ್ ಕುಟುಂಬವೂ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಎಂದು ನಾನು ಬಾಲ್ಯದಲ್ಲಿ ಅನೇಕ ಬಾರಿ ಅಲವತ್ತುಕೊಂಡದ್ದಿದೆ. ಹಾಗೇನಾದರೂ ಆಗಿದ್ದರೆ ಲತಾ ಮಂಗೇಶ್ಕರ್ ಕರ್ನಾಟಕದವರಾಗಿರುತ್ತಿದ್ದರು ಎಂಬ ಸಣ್ಣದೊಂದು ಸ್ವಾರ್ಥ!
ದೀನಾನಥರ ಮೊದಲ ಮಡದಿಗೆ ಒಂದು ಹೆಣ್ಣು ಮಗುವಾಗಿತ್ತು. ಅದಕ್ಕೆ ಲತಿಕಾ ಎಂದು ನಾಮಕರಣ ಮಾಡಿದ್ದರು. ಕೆಲವೇ ದಿನಗಳಲ್ಲಿ ಆ ಮಗು ತೀರಿ ಹೋಯಿತು. ಅದಾದ ಕೆಲವು ದಿನಗಳ ನಂತರ ಅವರ ಮಡದಿಯೂ ತೀರಿಹೋದರು. ದೀನಾನಾಥ ತಮ್ಮ ಮಡದಿಯ ತಂಗಿ ಶೇವಂತಿ (ಸುಧಾಮತಿ) ಯನ್ನು ಲಗ್ನವಾದರು. ಅವರಿಗೆ ಜನಿಸಿದ ಮೊದಲ ಮಗು ಹೇಮಾ. ನಂತರ ಹುಟ್ಟಿದವರು ಮೀನಾ, ಆಶಾ, ಉಷಾ ಮತ್ತು ಹೃದಯನಾಥ. ಎಲ್ಲರೂ ನಿಪುಣ ಗಾಯಕರು ಮತ್ತು ಸಂಗೀತಗಾರರು.
ನಿಜ, ಲತಾ ಮಂಗೇಶ್ಕರ್ ಅವರ ಮೊದಲ ಹೆಸರು ಹೇಮಾ. ತಮ್ಮ ಮೊದಲ ಮಗಳು ಲತಿಕಾ ನೆನಪಿಗಾಗಿ ದೀನಾನಾಥ ಹೇಮಾಳನ್ನು ಲತಾ ಎಂದು ಕರೆಯುತ್ತಿದ್ದರು. ಆ ಹೆಸರು ಅವರಿಗೆ ಎಷ್ಟು ಪ್ರಿಯವಾಗಿತ್ತೆಂದರೆ, ಅವರು ಪ್ರದರ್ಶಿಸುತ್ತಿತ್ತ ‘ಭಾವ ಬಂಧನ’ ನಾಟಕದಲ್ಲಿ ಬರುವ ಒಂದು ಪಾತ್ರಕ್ಕೂ ಅದೇ ಹೆಸರಿಟ್ಟಿದ್ದರು. ಹೇಮಾ, ಲತಾ ಆಗಿಯೇ ಮುಂದುವರಿದರು. ಲತಾ ತಂದೆಯಿಂದಲೇ ಮೊದಲ ಸಂಗೀತ ಪಾಠ ಕಲಿತರು. ಮೊದಲ ದಿನವೇ ಶಾಲೆಗೆ ಹೋಗು ವಾಗ ತಂಗಿ ಆಶಾಳನ್ನು ಕರೆದುಕೊಂಡು ಹೋಗಿದ್ದರು.
ಸಾಲದೆಂಬಂತೆ ಅಲ್ಲಿರುವ ಮಕ್ಕಳಿಗೆ ಸಂಗೀತ ಹೇಳಿಕೊಡಲು ಆರಂಭಿಸಿದರು. ಅದನ್ನು ಶಿಕ್ಷಕರು ವಿರೋಧಿಸಿದಾಗ ಹಿಂತಿರುಗಿ ಮನೆಗೆ ಬಂದವರು ಪುನಃ ಶಾಲೆಗೆ ಹೋಗಲಿಲ್ಲ. ಒಳ್ಳೆಯದೇ ಆಯಿತು, ಇಲ್ಲವಾದರೆ ಲತಾ ಇನ್ನೇನೋ ಆಗುತ್ತಿದ್ದರೆ? ಇದೂ ಒಂದು ರೀತಿ ಸ್ವಾರ್ಥವೇ ಹೌದು. ಲತಾ ಮಂಗೇಶ್ಕರ್ ತಮ್ಮ ಐದನೆಯ ವಯಸ್ಸಿನಲ್ಲಿಯೇ ರಂಗ ಪ್ರವೇಶ ಮಾಡಿದರು. ಮರಾಠಿ ಸಂಗೀತ ನಾಟಕಗಳಲ್ಲಿ ನಟಿಯಾಗಿ ಕೆಲಸ ಆರಂಭಿಸಿದರು. ದುರಾದೃಷ್ಟ, ಲತಾ ಹದಿಮೂರು ವರ್ಷದವರಾಗಿದ್ದಾಗ, ದೀನಾನಾಥ ತಮ್ಮ ನಲವತ್ತೊಂದು ವರ್ಷದ ಸಣ್ಣ ಪ್ರಾಯದ ಐದೂ ಮಕ್ಕಳನ್ನು ಅನಾಥರನ್ನಾಗಿಸಿ ಹೊರಟು ಹೋದರು.
ಹಿರಿಯ ಮಗಳಾದ ಲತಾ ಹೆಗಲ ಮೇಲೆ ದೊಡ್ಡ ಭಾರ ಬಿದ್ದಿತ್ತು. ಆಗ ಈ ಪರಿವಾರದ ಸಹಾಯಕ್ಕೆ ನಿಂತವರು ಮಾಸ್ಟರ್ ವಿನಾಯಕ್ ಎಂದೇ ಹೆಸರಾದ ವಿನಾಯಕ್ ದಾಮೋದರ ಕರ್ನಾಟಕಿ. ವಿನಾಯಕ್ ತಮ್ಮ ನವಯುಗ್ ಚಿತ್ರಪಟ್ ಮೂವಿ ಕಂಪನಿಯಲ್ಲಿ ಲತಾಗೆ ಹಾಡಲು ಮತ್ತು ಅಭಿನಯಿಸಲು ಅವಕಾಶ ಒದಗಿಸಿದರು. ನಿಮಗೆ ತಿಳಿದಿರಬಹುದು, ದೇಶ ಕಂಡ ಮಹಾನ್ ಗಾಯಕಿ, ಭಾರತದ ಇಪ್ಪತ್ತೈದಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ ಲತಾ ದೀದಿಯ ಮೊದಲ ಹಾಡು ಕೇಳಿದವರು ಬೆರಳೆಣಿಕೆಯ ಜನ ಮಾತ್ರ. ಆ ಹಾಡಿಗೆ ಸಂಗೀತ ನಿರ್ದೇಶಿಸಿದವರು, ವಾದ್ಯ ನುಡಿಸಿದವರು ಕೆಲವರನ್ನು ಬಿಟ್ಟರೆ, ಆ ಹಾಡನ್ನು ಕೇಳಿದವರು ಕಮ್ಮಿ. ಕಿತಿ ಹಸಾಲ್ ಎಂಬ ಮರಾಠಿ ಚಿತ್ರದಲ್ಲಿ ಲತಾ ಒಂದು ಹಾಡು ಹಾಡಿದ್ದರು.
ಕೊನೆಯ ಘಳಿಗೆಯಲ್ಲಿ ಆ ಹಾಡನ್ನು ಚಿತ್ರದಿಂದ ತೆಗೆದುಹಾಕಲಾಯಿತು. (ಆ ಸಂದರ್ಭದಲ್ಲಿ ದೀನಾನಾಥ ಬದುಕಿದ್ದು, ಅವರಿಗೆ ಮಗಳು ಲತಾ ಸಿನಿಮಾಕ್ಕೆ ಹಾಡುವುದು ಇಷ್ಟವಿರಲಿಲ್ಲ, ಅವರೇ ಅದನ್ನು ತೆಗೆಸಿ ಹಾಕಿದ್ದರು ಎನ್ನುವ ಮಾತೂ ಇದೆ) ದೀನಾನಾಥ ಮರಣಾನಂತರ ವಿನಾಯಕ್ ತಮ್ಮದೇ ಚಿತ್ರ ಪಹಿಲಿ ಮಂಗಲಾ ಗೌರ್ ಚಿತ್ರದಲ್ಲಿ ಲತಾ ಅವರಿಂದ ಒಂದು ಹಾಡು ಹಾಡಿಸಿ, ಒಂದು ಸಣ್ಣ ಪಾತ್ರವನ್ನೂ ಕೊಟ್ಟರು. ಇಂದಿಗೂ ಅದೇ ಅವರ ಮೊದಲ ಹಾಡು ಎಂದು ದಾಖಲಾಗಿದೆ. ಅದಾಗಿ ಒಂದು ವರ್ಷದ ನಂತರ ಲತಾ ಮೊದಲ ಹಿಂದಿ ಚಿತ್ರಗೀತೆ ಹಾಡಿದರು.
ಆರಂಭದ ದಿನಗಳಲ್ಲಿ ಅವರು ಹಾಡಿದ್ದಕ್ಕೆ ಇಪ್ಪತ್ತೈದು ರೂಪಾಯಿ ಸಂಭಾವನೆ ಸಿಗುತ್ತಿತ್ತು. ಅವರ ಸಂಗೀತದ ದೋಣಿ, ಸಂಸಾರವನ್ನು ಮುನ್ನಡೆಯು ವಷ್ಟು ಸಶಕ್ತವಾಗಿತ್ತು. 1945ರಲ್ಲಿ ಲತಾ ತಮ್ಮ ಪರಿವಾರ ಸಮೇತ ಮುಂಬೈಗೆ ಬಂದರು. ಅಲ್ಲಿ ಉಸ್ತಾದ್ ಅಮನ್ ಅಲಿ ಖಾನ್ ಅವರಲ್ಲಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದರು. 1948 ರಲ್ಲಿ ಮಾರ್ಸ್ಟ ವಿನಾಯಕ್ ಕೂಡ ತೀರಿ ಹೋದರು. ಆಗ ಲತಾ ಅವರ ಬೆನ್ನಿಗೆ ನಿಂತದ್ದು, ಸಂಗೀತ ನಿರ್ದೇಶಕ ಗುಲಾಮ್ ಹೈದರ್. ಹೈದರ್ ಲತಾ ಅವರನ್ನು ನಿರ್ದೇಶಕ ಸಶರ್ಧ ಮುಖರ್ಜಿಯವರ ಬಳಿ ಕರೆದೊಯ್ದರು.
ಮುಖರ್ಜಿ ಆಗ ‘ಶಹೀದ್’ ಚಿತ್ರ ನಿರ್ಮಿಸುತ್ತಿದ್ದರು. ಆದರೆ ಮುಖರ್ಜಿ ಲತಾ ಅವರ ಧ್ವನಿ ‘ಅತೀ ನಾಜೂಕು(ಸಪೂರ)’ ಎಂದು ತಿರಸ್ಕರಿಸಿದ್ದರು. ಸಿಟ್ಟಾದ ಹೈದರ್, ’ಮುಂಬರುವ ವರ್ಷಗಳಲ್ಲಿ ನಿರ್ಮಾಪಕರು, ನಿರ್ದೇಶಕರು ತಮ್ಮ ಚಿತ್ರದಲ್ಲಿ ಹಾಡಲು ಲತಾ ಅವರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಾರೆ, ನೋಡಿ’ ಎಂದಿದ್ದರು. ಹೈದರ್ ಗೆ ತಮ್ಮ ಮಾತಿನಲ್ಲಿ, ಲತಾಗೆ ತಮ್ಮ ಗಾಯನದಲ್ಲಿ ವಿಶ್ವಾಸವಿತ್ತು. ಆ ಮಾತು ನಿಜವಾಯಿತು. ನಂತರ ನಡೆದದ್ದೆಲ್ಲ ಈಗ ಎಲ್ಲರೂ ತಿಳಿದಿರುವ ಇತಿಹಾಸ. ಲತಾ ಮಂಗೇಶ್ಕರ್ ಮದುವೆಯಾಗಲಿಲ್ಲ, ಹೊರಲಿಲ್ಲ, ಹೆರಲಿಲ್ಲ, ಆದರೂ ದೇಶದ ಅಸಂಖ್ಯಾತ ಸಂಗೀತ ಪ್ರೇಮಿಗಳಿಗೆ ಮಾತೆಯಾದರು, ಅಕ್ಕರೆಯ ಅಕ್ಕ ಆದರು. ಅಮ್ಮನ ಜೋಗುಳದಲ್ಲಿ, ಮಡದಿಯ ಅಡುಗೆಯಲ್ಲಿ, ಸಹೋದರಿಯ ಆಟದಲ್ಲಿ ಜತೆಯಾದರು.
ಅಸಂಖ್ಯಾತ ಪ್ರಯಾಣಿಕರ ಪಯಣದಲ್ಲಿ ಸಾಥಿಯಾದರು. ಲೆಕ್ಕವಿಲ್ಲದಷ್ಟು ಪ್ರೇಮಿಗಳ ಮನದ ಪಿಸು ಮಾತಿಗೆ, ಪ್ರಣಯಕ್ಕೆ, ಮಂದಹಾಸಕ್ಕೆ, ಕಾವ್ಯಕ್ಕೆ, ಜೇನ ಮಾಧುರ್ಯದ ದನಿಯಾದರು. ಮಮತೆಯ, ಕರುಣೆಯ, ಶೋಕದ, ಬಲಿದಾನದ, ವಿರಹ ವೇದನೆಯ ಭಾವನೆಗಳಿಗೆ ಧ್ವನಿಯಾದರು. ಅವರ ಹಾಡೆಂದರೆ ಅದೇನೋ ವ್ಯಾಮೋಹ, ಎಷ್ಟು ಕೇಳಿದರೂ ತೀರದ ದಾಹ. ಮಾಧುರ್ಯದ ಮಹಾರಾಣಿ ನಮಗೆ ಕೊಟ್ಟು ಹೋದದ್ದು ಕೇವಲ ಹಾಡು ಗಳಲ್ಲ, ಸಂಗೀತದ ದಾಸೋಹ. ಅಂತ್ಯವಿಲ್ಲದಷ್ಟು, ಮೊಗೆಮೊಗೆದು ಕಿವಿಯಲ್ಲಿ ತುಂಬಿಸಿಕೊಳ್ಳುವಷ್ಟು, ಹೃದಯದಲ್ಲಿ ಇಳಿಸಿಕೊಂಡು ಬೆಚ್ಚಗೆ ಬಚ್ಚಿಟ್ಟುಕೊಳ್ಳುವಷ್ಟು!
ಮೆರೆ ಆವಾಜ್ ಹಿ ಪೆಹೆಚಾನ್ ಹೈ…’ ಎಂದ ಸ್ವರ ಸಾಮ್ರಾಜ್ಞಿಗೆ ನಮನ, ಅನವರತ…