Wednesday, 11th December 2024

ಅಮೆರಿಕ ಚುನಾವಣೆ: ಯಾರು ಹಿತವರು ನಮಗೆ ಈ ಇಬ್ಬರೊಳಗೆ

ಶಿಶಿರಕಾಲ

ಶಿಶಿರ್‌ ಹೆಗಡೆ ನ್ಯೂಜೆರ್ಸಿ

ಯಾರು ಹಿತವರು ನಿನಗೆ ಈ ಮೂವರೊಳಗೆ? ನಾರಿಯೋ, ಧಾರುಣಿಯೋ, ಬಲುಘನದ ಸಿರಿಯೋ..? ಎಂದು ಕೇಳುತ್ತ
ಪುರಂದರ ದಾಸರು ಕೊನೆಯಲ್ಲಿ ಇಡೀ ವಿಚಾರಕ್ಕೆ ಆಸ್ತಿಕ ಆಯಾಮವನ್ನು ಕೊಡುತ್ತಾರೆ. ಮೊದಲು ಮೂರು ಆಯ್ಕೆ ಕೊಟ್ಟು
ಆಮೇಲೆ ನಾಲ್ಕನೆಯ, ಪ್ರಶ್ನೆ ಕೇಳುವಾಗ ಕೊಡದ ಆಯ್ಕೆ ಉತ್ತರ ಎನ್ನುವ ಪದ್ಯವದು.

ಇಂದು ಜಗತ್ತಿನ ದೇಶಗಳೆಲ್ಲ ಕೇಳಿ ಕೊಳ್ಳುತ್ತಿರುವ ಪ್ರಶ್ನೆ – ಯಾರು ಹಿತವರು ನಮಗೆ ಈ ಈರ್ವರೊಳಗೆ? ಅಮೆರಿಕನ್ನರೆಲ್ಲ ಈ ಕರೋನಾ ಸಾಂಕ್ರಾಮಿಕದ ಮಧ್ಯದಲ್ಲಿ ತಲೆಕೆಡಿಸಿಕೊಂಡಿರುವ ಪ್ರಶ್ನೆ ಕೂಡ ಇದುವೇ. ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲೇ ಬೇಕು, ಅನ್ಯ ಮೂರನೆಯ ಆಯ್ಕೆಯಿಲ್ಲ. ಚುನಾವಣೆ ಯೊಂದು ಜನರಲ್ಲಿ ಜಿಜ್ಞಾಸೆ ಹುಟ್ಟಿಸದಿದ್ದಲ್ಲಿ, ವಾದ ಪ್ರತಿವಾದ ನಡೆಯ ದಿದ್ದಲ್ಲಿ ಅದು ಪ್ರಜಾಪ್ರಭುತ್ವ ಹೇಗಾದೀತು? ಯಾರು ಅಮೆರಿಕನ್ನರಿಗೆ ಒಳ್ಳೆಯದು ಎನ್ನುವುದು ಅಮೆರಿಕನ್ನರ ತಲೆಬಿಸಿಗೆ ಬಿಡೋಣ. ಭಾರತೀಯರಾದ ನಮಗೆ ಯಾರು ಹಿತವರು ಅನ್ನುವುದು ಈಗಿರುವ ಪ್ರಶ್ನೆ.

ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಠ ಮತ್ತು ಪ್ರಭಾವ ಬೀರುವ ತಾಕತ್ತುಳ್ಳ ದೇಶ ಅಮೆರಿಕ. ಯಾವೊಂದು ದೇಶವೂ ಅಮೆರಿಕಾ ವನ್ನು ಅಲಕ್ಷ್ಯ ಮಾಡಲು ಸಾಧ್ಯವಿಲ್ಲದ ಇಂದಿನ ಸ್ಥಿತಿಯಲ್ಲಿ ಇಂತಹ ದೇಶವೊಂದರ ಚುಕ್ಕಾಣಿ ಹಿಡಿಯುವ ನೇತಾರ ಯಾರಾಗ ಬಹುದು ಎನ್ನುವ ಕುತೂಹಲ ಸಹಜ. ನಾವು ಭಾರತೀಯ ರ ಮಟ್ಟಿಗೆ ಯಾವೆಲ್ಲ ಲೆಕ್ಕಾಚಾರ ಪ್ರಸ್ತುತ ಎನ್ನುವ ಪ್ರಶ್ನೆಯನ್ನಿಟ್ಟು ಕೊಂಡು ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಬೇಕಾಗಿದೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರ ಮಟ್ಟಿಗೆ ಯಾರು ಒಳ್ಳೆಯದು ಎನ್ನುವುದು ಇಲ್ಲಿ ನಿಮಗೆಲ್ಲ ಅಪ್ರಸ್ತುತ ಎನ್ನುವುದು ನನ್ನ ಅಭಿಪ್ರಾಯ.

ಮೇಲ್ನೋಟಕ್ಕೆ ಡೊನಾಲ್ಡ ಟ್ರಂಪ್‌ನ ಮಂಗಾಟಗಳು, ಟ್ವೀಟ್ ಗಳು ಒಂದು ಕಡೆ. ಜೋ ಬೈಡನ್ ಎಂಬ ಸಾಚ ಎನಿಸುವ,
ಡಿಪ್ಲೊಮ್ಯಾಟಿಕ್ ಆಗಿ ಮಾತನಾಡುವ ಅಧ್ಯಾಕಾಂಕ್ಷಿ ಇನ್ನೊಂದುಕಡೆ. ಮೈಕ್ ಪೆನ್ಸ್ ಉಪಾಧ್ಯಕ್ಷ ಆಕಾಂಕ್ಷಿಯಾಗಿ ಒಂದುಕಡೆ ಯಾದರೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಇನ್ನೊಂದು ಕಡೆ. ರಿಪಬ್ಲಿಕನ್ ಮತ್ತು ಡೆಮೊಕ್ರಟಿಕ್ ಪಕ್ಷದ ಅಮೆರಿಕಾದ ಅಭಿವೃದ್ಧಿಯ ವಿಚಾರಗಳು ಇಲ್ಲಿ ನಮಗೆಲ್ಲ ಅಪ್ರಸ್ತುತ. ಯಾರು ಹಿತವರು ಭಾರತಕ್ಕೆ ಈ ಈರ್ವರೊಳಗೆ ಎನ್ನುವುದೊಂದೇ ನಮಗೆಲ್ಲ ಪ್ರಸ್ತುತ.

ಮೊನ್ನೆ ಅಧ್ಯಕ್ಷ ಟ್ರಂಪ್ ‘ಚೀನಾ, ರಷ್ಯಾ, ಭಾರತ ಹೊಲಸು ದೇಶಗಳು’ ಎಂದಾಗ ನಮ್ಮೆಲ್ಲರ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಂತೂ
ಸುಳ್ಳಲ್ಲ. ಕೇವಲ ಅದೊಂದೇ ಮಾತಿಗೆ ಜೋತು ಬಿದ್ದು, ಅದರ ಹಿನ್ನೆಲೆ ಮತ್ತು ಉದ್ದೇಶವನ್ನು ಕಡೆಗಣಿಸಿ out of context ಆ
ಮಾತನ್ನು ಕೇಳಿದಾಗ ಟ್ರಂಪ್ ಮೋದಿಯ ಜೊತೆ ಆಡಿzಲ್ಲ ನಾಟಕ, ಇದು ಟ್ರಂಪ್‌ನ ನಿಜ ಬಣ್ಣ ಎಂದು ಒಮ್ಮೆ ಅನಿಸುವುದು ಸಹಜ. ಇದೇ ಘಟನೆಯನ್ನು ಇಟ್ಟುಕೊಂಡು ಟ್ರಂಪ್ ನಮಗೆಲ್ಲ ಶತ್ರು ಎಂದು ಹಲವು ಭಾರತೀಯ ಮೀಡಿಯಾಗಳು ಬಿಂಬಿಸಿ ದ್ದನ್ನು ನೋಡಿದ್ದೇವೆ. ಅದೇ ಮೀಡಿಯಾ ಎಲ್ಲ ದೇಶಗಳ ಜೊತೆಯಲ್ಲೂ ಉತ್ತಮ ಸಂಬಂಧವನ್ನು ಹೊಂದುವ ಮಾತನಾಡುವ ಜೋ ಬೈಡನ್ ಮಾತುಗಳನ್ನು ವಿಜೃಂಭಿಸಿದ್ದು ಕೂಡ ನೋಡಿಯಾಗಿದೆ.

ಕೇವಲ ಚುನಾವಣೆಯ ಸಂದರ್ಭದಲ್ಲಿ ಬರುವ ಮಾತುಗಳನ್ನು ನಮ್ಮ ವಾಹಿನಿಗಳು ತೋರಿಸಿದಂತೆ ನೋಡಿ, ಅಳೆದು ತೂಗು ವುದು ಸರಿಯೇ? ಚುನಾವಣೆಯ ಗಿಮಿಕ್ಕುಗಳನ್ನು ಬದಿಗಿಟ್ಟು ಇಲ್ಲಿನ ವರೆಗಿನ ಟ್ರಂಪ್ ಅವಽಯ ಇತಿಹಾಸ ಮತ್ತು ಜೋ ಬೈಡನ್
ವೈಚಾರಿಕ ಹಿನ್ನೆಲೆ ಮತ್ತು ದೃಷ್ಟಿಕೋನವನ್ನು ಆಧಾರವಾಗಿಟ್ಟು ಕೊಂಡು ಯಾರು ನಮಗೆ ಒಳ್ಳೆಯವರು ಎಂದು ಜಿಜ್ಞಾಸೆ
ಮಾಡಿಕೊಳ್ಳಬೇಕಾಗಿದೆ. ಈ ಇಡೀ ವಿಷಯ, ವಾದ ಕೇವಲ ಮೇಲ್ನೋಟದ ಬಾಯಿಮಾತುಗಳನ್ನಷ್ಟೇ ನಂಬಿ ನಿರ್ಧಾರಕ್ಕೆ ಬರುವ
ವಿಚಾರ ಖಂಡಿತ ಅಲ್ಲ.

ಈಗ ಕಳೆದ ಒಂದು ದಶಕದಲ್ಲಿ ಹಲವಾರು ಜಾಗತಿಕ ಬದಲಾವಣೆಗಳಾಗಿವೆ. ಚೀನಾ ಹಿಂದೆಲ್ಲದಕ್ಕಿಂತ ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಪಾಲಿಸುತ್ತಿದೆ. ಚೀನಾ ಅದಾಗಲೇ ಹಲವಾರು ದೇಶಗಳಿಗೆ ಸಾಲ ಕೊಟ್ಟು, ರಾಜಕಾರಣದ ಒಳ ಹೊಕ್ಕು ಪರೋಕ್ಷ ಆಳ್ವಿಕೆಯಲ್ಲಿ ತೊಡಗಿಯಾಗಿದೆ. ಚೀನಾ ಈಗ ಹಿಂದೆಂದಿಗಿಂತ ಬಲಿಷ್ಠ ವಾಗಿದೆ. ಇದು ಜಾಗತಿಕವಾಗಿ ಭಾರತವೂ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ಬೆದರಿಕೆಯ ವಿಚಾರ ಕೂಡ ಹೌದು. ಎಲ್ಲ ದೇಶಗಳೂ ಸ್ವಹಿತಾಸಕ್ತಿ ಹೊಂದಿರುತ್ತವೆ, ಆದರೆ ಚೀನಾ ಮಾತ್ರ ಒಂದು ಪರಮ ಸ್ವಾರ್ಥಿ ಮತ್ತು ತನ್ನ ಉದ್ಧಾರಕ್ಕೆ ಯಾವ ದೇಶವನ್ನು ಬೇಕಾದರೂ ಮೆಟ್ಟಲು ಸಿದ್ಧವಾಗಿ ನಿಲ್ಲುವ ದೇಶ. ಇದರ ಜೊತೆ ಸೇರಿಕೊಂಡ ಎಡಬಿಡಂಗಿ, ಊಟಕ್ಕೆ ಗತಿಯಿಲ್ಲದ ಅನ್ ಪ್ರೆಡಿಕ್ಟೇಬಲ್ ದೇಶ ಪಾಕಿಸ್ತಾನ. ಇವೆರಡೂ ದೇಶ ಗಳು ನಮ್ಮ ನಸೀಬಕ್ಕೆ ನಮ್ಮ ಅಕ್ಕಪಕ್ಕದ ಇವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪಾಕಿಸ್ತಾನಕ್ಕೆ ಚೀನಾ ಹತ್ತಿರವಾಗಿದ್ದೇ ಭಾರತದ ಮೇಲಿನ ದ್ವೇಷದ ಕಾರಣದಿಂದ.

ಈಗ ಈ ಎರಡು ದೇಶಗಳ ನಡುವೆ ಹಿಂದಿರದ ಬಾಂಧವ್ಯ. ತೀರಾ ಇತ್ತೀಚಿನವರೆಗೆ, ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ಕೂಡ ಪಾಕಿಸ್ತಾನ ಚೀನಾಕ್ಕೆ ಇಷ್ಟು ಹತ್ತಿರವಾಗಿರಲಿಲ್ಲ. ಆದರೆ ಪಾಕಿಸ್ತಾನದ ಇಡೀ ವರಸೆ ಬದಲಾಗಲು ಕಾರಣ ಅಧ್ಯಕ್ಷ ಡೊನಾಲ್ಡ್
ಟ್ರಂಪ್. ಅಲ್ಲಿಯವರೆಗೆ ಅಮೆರಿಕಾದ ಪಾಕಿಸ್ತಾನದೆಡೆಗಿನ ನಿಲುವು ಬೇರೆಯದೇ ಆಗಿತ್ತು. ಅಮೆರಿಕಾ ತನ್ನ ಫೆಡರಲ್ ಬಜೆಟ್‌ನ
ಸುಮಾರು ೧.೨ ಶೇ. ಹಣವನ್ನು ಫಾರಿನ್ ಏಡ್, ವಿದೇಶಿ ನೆರವಿಗೆ ಮೀಸಲಿಡುತ್ತದೆ. ಇದು ಬಹು ದೊಡ್ಡ ಮೊತ್ತ. ಈ ವಿದೇಶಿ
ನೆರವನ್ನು, ಮಿಲಿಟರಿ, ಮಾನವೀಯತೆ ಮತ್ತು ಹಲವು ಕಾರ್ಯತಂತ್ರಗಳಿಗೆ ಬಳಸಲಾಗುತ್ತದೆ. ಇದರ ಒಂದು ಭಾಗವೇ
ಪಾಕಿಸ್ತಾನಕ್ಕೆ ಸಿಕ್ಕುತ್ತಿದ್ದ ಭಿಕ್ಷೆಯಾಗಿತ್ತು. ಈ ಭಿಕ್ಷೆ ಹಲವು ವರ್ಷಗಳಿಂದ ನಡೆದುಕೊಂಡುಬಂದಿತ್ತು. ಈ ಅಮೆರಿಕಾದ ಎಂಜಲು ಕಾಸು ಪಾಕಿಸ್ತಾನದಂಥ ಹೊಟ್ಟೆಗಿಲ್ಲದ ದೇಶಕ್ಕಂತೂ ಮೃಷ್ಠಾನ್ನದ ಭೂರಿ ಭೋಜನವೇ ಆಗಿತ್ತು.

ಇದನ್ನು ಹಿಂದೆ ಮುಂದೆ ಹೇಳದೇ ನಿಲ್ಲಿಸಿದ್ದು ಟ್ರಂಪ್. ಅಂದು ಬರಾಕ್ ಆಡಳಿತದ ಸಮಯದಲ್ಲಿ ಬಿನ್ ಲಾಡೆನ್ ಪಾಕಿಸ್ತಾನದ ನೆಲದಲ್ಲಿ ಸಿಕ್ಕಾಗ ಕೂಡ ಬರಾಕ್ ಈ ಭಿಕ್ಷೆ ಕೊಡುವುದನ್ನು ನಿಲ್ಲಿಸಿರಲಿಲ್ಲ. ಟ್ರಂಪ್ ಈ ಭಿಕ್ಷೆಯನ್ನು ನಿಲ್ಲಿಸಿದ ರೀತಿ ಕೂಡ ಟಿಪಿಕಲ್ ಟ್ರಂಪ್ ರೀತಿಯ ಆಗಿತ್ತು. ಒಂದು ದಿನ ಬೆಳಗ್ಗೆ ಎದ್ದು ಟ್ರಂಪ್ ಕಳೆದ ೧೫ ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್
ಮೂರ್ಖತನದಿಂದ ಪಾಕಿಸ್ತಾನಕ್ಕೆ ೩೩ ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿನ ಹಣವನ್ನು ನೀಡಿದೆ.

ಪಾಕಿಸ್ತಾನ ಇದಕ್ಕೆ ಪ್ರತಿಯಾಗಿ, ನಮ್ಮ ನಾಯಕರನ್ನು ಮೂರ್ಖರೆಂದು ಭಾವಿಸಿ, ಸುಳ್ಳು ಮತ್ತು ವಂಚನೆಯನ್ನು ಹೊರತುಪಡಿಸಿ ಬೇರೆ ಏನನ್ನೂ ನೀಡಿಲ್ಲ. ಅಫ್ಘಾನಿಸ್ತಾನದಲ್ಲಿ ನಾವು ಬೇಟೆಯಾಡುವ ಭಯೋತ್ಪಾದಕರಿಗೆ ಪಾಕಿಸ್ತಾನ ಸುರಕ್ಷಿತ ತಾಣ. ಈ ಹಣ ದಾನ ಮಾಡುವ ಪದ್ಧತಿ ಇನ್ನು ಮೇಲೆ ನಿಲ್ಲುತ್ತದೆ!’ ಹೀಗೆ ಟ್ವೀಟ್ ಮಾಡಿದ್ದರು. ಇದೊಂದು ಟ್ವೀಟ್ ಇಡೀ ಜಗತ್ತಿನ ಸಂಚಲನ ಮೂಡಿಸಿತ್ತು. ಈ ಸುದ್ಧಿ – ಟ್ವೀಟ್ ನೋಡಿ ಪಾಕಿಸ್ತಾನದ ನಾಮ್ ಕೆ ವಾಸ್ತೆ ಪ್ರಧಾನಿ ಓಡಿದ್ದ, ಅಲ್ಲಿನ ಐಎಸ್‌ಐ ಅಣತಿಯಂತೆ ಓಡಿದ್ದ.

ಹೀಗೆ ಇಮ್ರಾನ್ ಖಾನ್ ಅಮೆರಿಕಾಕ್ಕೆ ಬಂದಿಳಿದಾಗ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಟ್ರಂಪ್ ಕಳುಹಿಸಿದ್ದು ನಾಲ್ಕನೇ ದರ್ಜೆಯ ಅಧಿಕಾರಿಗಳನ್ನು. ಹೋದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ ಬಂದು ಇಮ್ರಾನ್ ಖಾನ್ ನಮಗೆ ಯಾವುದೇ ಹಣದ ಅವಶ್ಯಕತೆ ಯಿಲ್ಲ ಎಂದು ಬುರುಡೆ ಬೇರೆ ಬಿಟ್ಟಿದ್ದ. ಬಹುಷಃ ಎರಡನೇ ಮಹಾಯುದ್ಧವಾದ ಮೇಲೆ, ಪಾಕಿಸ್ತಾನವೆಂಬ ದೇಶ ಹುಟ್ಟಿದ ಮೇಲೆ ಜಾಗತಿಕವಾಗಿ ಈ ರೀತಿ ಪಾಕಿಸ್ತಾನಕ್ಕೆ ಬೇರೊಂದು ಅವಮಾನವಾಗಿರಲಿಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನ ಅನಿವಾರ್ಯವಾಗಿ ಚೀನಾ ಜತೆ ದೋಸ್ತಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಅಧ್ಯಕ್ಷ ಟ್ರಂಪ್ ಮಾಡಬೇಕಾದ ಕೆಲಸವನ್ನು ಜಾರ್ಜ್ ಬುಷ್ ಮಾಡಬೇಕಿತ್ತು. ನಂತರ ಬಂದ, ಮೋದಿಗೆ – ಭಾರತಕ್ಕೆ ಹತ್ತಿರ ವಾದೆನೆಂಬಂತೆ ಬಿಂಬಿಸಿಕೊಂಡ ಬರಾಕ್ ಒಬಾಮ ಆದರೂ ಮಾಡಬೇಕಿತ್ತು. ಬಿನ್ ಲಾಡೆನ್ ಪಾಕಿಸ್ತಾನದ ನೆಲದಲ್ಲಿ ಸಿಕ್ಕ ಕೂಡಲೆಯಾದರೂ ಈ ಕೆಲಸವಾಗಬೇಕಿತ್ತು. ಅಮೆರಿಕಾದ ಯಾವೊಬ್ಬ ಹಿಂದೆ ಘಟಿಸಿದ ಅಧ್ಯಕ್ಷನೂ ಅಂಥದ್ದೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈ ಟ್ರಂಪ್‌ನ ಒಂದು ನಿರ್ಧಾರ ಅಮೆರಿಕಾ ಮತ್ತು ಭಾರತದ ಇನ್ನಷ್ಟು ಗಟ್ಟಿ ಸಂಬಂಧಕ್ಕೆ ನಾಂದಿಯಾಯಿತು.

ಇನ್ನೊಂದು ಬಹುಮುಖ್ಯ ಬೆಳವಣಿಗೆಯೆಂದರೆ ೨೦೧೬ರಲ್ಲಿ ಭಾರತ ಮತ್ತು ಅಮೆರಿಕಾ ಸಹಿ ಹಾಕಿದ LEMOA – Logistics
Exchange Memorandum of agreement. ಇದರ ಪ್ರಕಾರ ಭಾರತಕ್ಕೆ ಅಮೆರಿಕಾದ ಮಿಲಿಟರಿ ಬೇಸ್ ಅನ್ನು ಬಳಸುವ ಸವಲತ್ತು ಸಿಗುತ್ತದೆ. ಅಮೆರಿಕಾ ಜಗತ್ತಿನಾದ್ಯಂತ ಸುಮಾರು ೭೦ ದೇಶಗಳಲ್ಲಿ ೮೦೦ ಮಿಲಿಟರಿ ಬೇಸ್‌ಗಳನ್ನು ಹೊಂದಿದೆ ಎನ್ನುವುದು ಗಮನಾರ್ಹ ವಿಚಾರ. ಇದಲ್ಲದೇ ಅಮೆರಿಕಾ – ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯ ಭಾರತವನ್ನು  ಪ್ರಮುಖ ರಕ್ಷಣಾ ಪಾಲುದಾರ’ ಎಂದು ಘೋಷಿಸಿತು. ಇದರಿಂದ ಭಾರತ ಅಮೆರಿಕಾದಿಂದ ಇನ್ನಷ್ಟು ಅತ್ಯಾಧುನಿಕ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಮತ್ತು ಸಲಕರಣೆಗಳನ್ನು ಖರೀದಿಸುವ ಸಾಧ್ಯತೆ ತೆರೆದುಕೊಂಡಿತು.

ಇನ್ನು ಜಾಗತಿಕ ಅಣ್ವಸ ಸರಬರಾಜು ಮಾಡುವ ಕೆಲವೇ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಬೇಕು ಎನ್ನುವ ವಿಚಾರಕ್ಕೆ ಅಮೆರಿಕಾ ಬೆಂಬಲಿಸಿದ್ದು ಕೂಡ ಟ್ರಂಪ್ ಕಾಲಮಾನದಲ್ಲಿಯೇ. ಚೀನಾ ಅದಕ್ಕೆ ಅಡ್ಡ ಕಾಲು ಹಾಕಿತು ಎನ್ನುವುದು ಬೇರೆ ಮಾತು. ವಿಶ್ವಸಂಸ್ಥೆಯಲ್ಲಿ ಈ ಪ್ರಮಾಣದ ಬೆಂಬಲ ಅಮೆರಿಕಾದಿಂದ ಹಿಂದೆಂದೂ ಸಿಕ್ಕಿರಲಿಲ್ಲ. ಇದಕ್ಕೆ ಪರೋಕ್ಷ ಕಾರಣ ಮೋದಿ ಸ್ಥಾಪಿಸಿದ ಅಂತಾರಾಷ್ಟ್ರೀಯ ಸಂಬಂಧಗಳಿರಬಹುದು ಅಥವಾ ಚೀನಾ ಬೆಳೆಯುತ್ತಿರುವ ರೀತಿ ಅಮೆರಿಕಾಕ್ಕೆ
ಉಂಟು ಮಾಡಿದ ಭೀತಿಯಿರಬಹುದು. ಕಾರಣ ಇಂಥದ್ದೊಂದೇ ಎಂದು ಹೇಳಲಾಗುವುದಿಲ್ಲ.

ಆದರೆ ಇದೆಲ್ಲ ನಡೆಯುತ್ತಿರುವಾಗ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿದ್ದರು ಎನ್ನುವುದು ಮಹತ್ವದ್ದಾಗುತ್ತದೆ. ಈ ಬೆಂಬಲಕ್ಕೆ ಪ್ರತಿಯಾಗಿ ಭಾರತ ಮತ್ತು ಮೋದಿ ಆಡಳಿತ ಕೂಡ ಹಲವಾರು ಸಂದರ್ಭಗಳಲ್ಲಿ ಟ್ರಂಪ್ ಮತ್ತು ಅಮೆರಿಕಾದ ಬೆಂಬಲಕ್ಕೆ ನಿಂತಿದೆ. ಉದಾಹರಣೆಗೆ, ಅಮೆರಿಕಾ ಇರಾನ್‌ನ ಮೇಲೆ ಒತ್ತಡ ಹೇರುವ ಸಂದರ್ಭದಲ್ಲಿ ಭಾರತ ಇರಾನ್ ನ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿತ್ತು. ಇದೇ ರೀತಿ ವೆನಿಜುಯೆಲಾ ಮೇಲೆ ಅಮೆರಿಕಾ ಒತ್ತಡ ಹೇರುವ ಸಮಯದಲ್ಲಿ ಭಾರತ ಅಮೆರಿಕಾದ ಜೊತೆ ಕೈ ಜೋಡಿಸಿತ್ತು.

ವೆನಿಜುಯೆಲಾದಿಂದ ತೈಲ ಖರೀದಿಯನ್ನು ನಿಲ್ಲಿಸಿತ್ತು. ಇದೆಲ್ಲವನ್ನು ನೋಡಿದರೆ ಭಾರತ ಮತ್ತು ಅಮೆರಿಕಾ ಸಂಬಂಧ ಅತ್ಯುತ್ತಮ ಹಂತವನ್ನು ತಲುಪಲು ಮೋದಿ ಮತ್ತು ಟ್ರಂಪ್ ಬಹುಮುಖ್ಯ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ. ಅಂದು ವಾಜಪೇಯಿ ಅಣ್ವಸ ಪರೀಕ್ಷೆ ನಡೆಸಿದಾಗ ಅಮೆರಿಕಾ ಏನೇನೆಲ್ಲ ನಿರ್ಬಂಧ ಹೇರಿದ್ದು ನಮಗೆಲ್ಲ ನೆನಪಿದೆ. ಆದರೆ ಹಿಂದಿನ
ವರ್ಷ ಮೋದಿ ಸರಕಾರ ಕಾಶ್ಮೀರದಲ್ಲಿನ ಆರ್ಟಿಕಲ್ ೩೭೦ ತೆಗೆದು ಎಸೆದಾಗ ಟ್ರಂಪ್ ನಡೆದುಕೊಂಡ ರೀತಿ ಅಮೆರಿಕಾದ ಮಟ್ಟಿಗೆ
ಸಂಪೂರ್ಣ ವ್ಯತಿರಿಕ್ತವಾಗಿತ್ತು ಎನ್ನುವುದನ್ನು ನಾವು ನಿರ್ಲಕ್ಷಿಸುವಂತಿಲ್ಲ.

ಜಮ್ಮು ಕಾಶ್ಮೀರದ ಬಗ್ಗೆ ಟ್ರಂಪ್ ಅನ್ನು ಪ್ರಶ್ನಿಸಿದಾಗ, ನಾವು ಇದನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದೇವೆ’ ಎಂದಷ್ಟೇ ಹೇಳಿಕೆ
ಹೊರ ಬಂತು. ಆದರೆ ಭಾರತದ, ಮೋದಿ ಸರಕಾರದ ನಡೆಯ ಬಗ್ಗೆ ಒಮ್ಮೆ ಕೂಡ ತುಟಿ ಪಿಟಕ್ ಎನ್ನಲಿಲ್ಲ. ಕೊನೆಗೆ ಸ್ವಲ್ಪ ದಿನದ ನಂತರ ಇದು ಭಾರತದ ಆಂತರಿಕ ವಿಚಾರ ಎಂದು ಪರೋಕ್ಷವಾಗಿ ಭಾರತದ ನಡೆಯನ್ನು ಬೆಂಬಲಿಸಿದ್ದು ಇದೇ ಡೊನಾಲ್ಡ್ ಟ್ರಂಪ್. ಅಧ್ಯಕ್ಷಾಂಕ್ಷಿ ಜೋ ಬೈಡನ್ NRC, CAA ಮತ್ತು ಜಮ್ಮು ಕಾಶ್ಮೀರದಲ್ಲಿ ಭಾರತ ಆರ್ಟಿಕಲ್ ೩೭೦ ಅನ್ನು ತೆಗೆದದ್ದನ್ನು
ವಿರೋಧಿಸಿದ್ದು ಈ ಸಂದರ್ಭದಲ್ಲಿ ಗ್ರಹಿಸಬೇಕಾಗುತ್ತದೆ. ಜೋ ತನ್ನ ಚುನಾವಣಾ ರ‍್ಯಾಲಿಯಲ್ಲಿ ಕೂಡ ಈ ಭಾರತದ ನಡೆಗಳನ್ನು
ವಿರೋಧಿಸಿದ್ದಾರೆ. ಜೋ ಅವರ ಈ ನಿಲುವನ್ನು ಅವರ ಅಧಿಕೃತ ಚುನಾವಣಾ ಪ್ರಚಾರ ಪ್ರಣಾಳಿಕೆಯ ವೆಬ್ಸೆ ಟ್‌ನಲ್ಲಿ ನೋಡ ಬಹುದು. ಚೀನಾ ಮತ್ತು ಪಾಕಿಸ್ತಾನದೆಡೆಗೆ ಸಾಫ್ಟ್ ಕಾರ್ನರ್ ಹೊಂದಿರುವ ಜೋ ಆಡಳಿತಕ್ಕೆ ಬಂದರೆ ಈ ಎರಡು
ದೇಶಗಳೊಂದಿಗಿನ ಸಂಬಂಧವನ್ನು ಸುಧಾರಿಸುವುದಾಗಿ ಹೇಳಿಕೊಂಡಿದ್ದಾರೆ.

ಇದರರ್ಥ ಒಂದೊಮ್ಮೆ ಜೋ ಅಮೆರಿಕಾ ಅಧ್ಯಕ್ಷರಾದಲ್ಲಿ ಮತ್ತೆ ಅಮೆರಿಕಾ ತನ್ನ ಹಳೆ ಚಾಳಿಯನ್ನು ಚಾಲ್ತಿಗೆ ತರುವುದು ಮತ್ತು ಜಾಗತಿಕ ಹಿನ್ನೆಲೆಯಲ್ಲಿ ಭಾರತಕ್ಕೆ ಹಿನ್ನಡೆಯಾಗುವುದು ಬಹುತೇಕ ಖಚಿತ. ಒಂದೊಮ್ಮೆ ಜೋ ಅಧ್ಯಕ್ಷರಾದಲ್ಲಿ ಮೊದಲ ಒಂದೆರಡು ತಿಂಗಳ ಪಾಕಿಸ್ತಾನದ ಇಮ್ರಾನ್ ಖಾನ್ ಮತ್ತೆ ಭಿಕ್ಷಾಟನೆಗೆ ಅಮೆರಿಕಾಕ್ಕೆ ಹೊರಡುವುದು ಪಕ್ಕಾ. ಇದರ ಜೊತೆ
ಜೊತೆ ಮೋದಿ ಸಾಽಸಿದ್ದ ರಾಜತಾಂತ್ರಿಕ ಸಂಬಂಧ ಮತ್ತೆ ಪುನರ್ನಿರ್ಮಿಸುವ ಸ್ಥಿತಿ ನಮ್ಮ ಭಾರತಕ್ಕಾಗಲಿದೆ. ಅಲ್ಲದೇ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯನ್ನು ಭಾರತದ ಮೂಲದವಳೆಂದು ಭಾರತೀಯರು ಬೆಂಬಲಿಸುವುದು ಮೂರ್ಖತನದ ಪರಮಾವಧಿ.

ಆಕೆಯ ತಾಯಿ ಭಾರತೀಯ ಮೂಲದವಳು. ಆದರೆ ಆಕೆಯ ತಂದೆ ಕಪ್ಪು ಜನಾಂಗದವನು. ಸುಮಾರು ಶೇ.೧೪ ಕರಿಯ
ವರ್ಣೀಯರಿರುವುದರಿಂದಲೋ ಏನೋ, ಆಕೆ ತನ್ನನ್ನು ಗುರುತಿಸಿಕೊಳ್ಳುವುದೇ ಕಪ್ಪು ಜನಾಂಗದ ಹೆಣ್ಣು ಎಂದು. ಅಲ್ಲಲ್ಲಿ
ಭಾರತೀಯ ಮೂಲದ ಮತದಾರರ ಎದುರು (ಸಂಖ್ಯೆಯಲ್ಲಿ ಸುಮಾರು ಒಂದು ಪ್ರತಿಶತ ಆಸುಪಾಸು ವೋಟ್ ಭಾರತೀಯ
ಮೂಲದವರದ್ದು) ಮಾತ್ರ. ಭಾರತದ ಮೂಲವನ್ನು ಆಕೆ ನೆನಪಿಸಿಕೊಳ್ಳುತ್ತಾಳೆ. ಆಕೆಯ ಭಾರತದ ಮೂಲ ಎನ್ನುವ ಒಂದೇ ಕಾರಣಕ್ಕೆ ಆಕೆ ಭಾರತಕ್ಕೆ ಒಳ್ಳೆಯದು ಮಾಡಲು ಹೊರಡುತ್ತಾಳೆ ಎಂದು ವರ್ತಿಸುವುದು ಮೂರ್ಖತನವಾಗುತ್ತದೆ.

ಅದೊಂದೇ ಕಾರಣದಿಂದ ಭಾರತೀಯ ರಾದ ನಾವು ಹಿಗ್ಗುವುದು ಬಾಲಿಶವೆನಿಸುತ್ತದೆ. ಇಷ್ಟಾಗಿಯೂ ಟ್ರಂಪ್ ಭಾರತವನ್ನು ಹೊಲಸು ದೇಶ ಎಂದದ್ದೇಕೆ? ಹಾಗನ್ನಬಾರದಿತ್ತು ಹೌದು, ಆದರೆ ಹಾಗಂದ ಮಾತ್ರಕ್ಕೆ ಭಾರತದೊಂದಿಗಿನ ಸಂಬಂಧವೇ ಹರಿದು ಹೋಯಿತು, ಮೋದಿ ಟ್ರಂಪ್ ದೋಸ್ತಿ ಹಳ್ಳ ಹಿಡಿಯಿತು ಎನ್ನುವ ವಿಶ್ಲೇಷಣೆ ಸರಿಯಲ್ಲ. ಪ್ಯಾರಿಸ್ ಜಾಗತಿಕ ಒಪ್ಪಂದದ ಪ್ರಕಾರ ಹವಾಮಾನಕ್ಕೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ದೇಶಗಳು ಮಾಡಿಕೊಳ್ಳಬೇಕು. ಡೊನಾಲ್ಡ್ ಟ್ರಂಪ್ ಒಬಾಮ ಕಾಲದ ಹಲವು ಒಪ್ಪಂದಗಳನ್ನು ಬೇರೆ ಬೇರೆ ಕಾರಣಗಳಿಂದ ಮುರಿದಿದ್ದು ಈ ಪ್ಯಾರಿಸ್ ಒಪ್ಪಂದ ಕೂಡ ಅದರಲ್ಲಿ ಒಂದು. ಆ ಪ್ಯಾರಿಸ್ ಒಪ್ಪಂದ ವನ್ನು ಮುರಿದ ಕಾರಣವನ್ನು ಸಮರ್ಥಿಸಿಕೊಳ್ಳುತ್ತ ಭಾರತ, ಚೀನಾ, ಮತ್ತು ರಷ್ಯಾ ಮೊದಲಾದ ದೇಶಗಳು ಒಪ್ಪಂದ ಮಾಡಿಕೊಂಡು ಕೂಡ ಯಾವುದೇ ರೀತಿ ಬದಲಾವಣೆ ತಂದಿಲ್ಲ. ಈ ದೇಶಗಳು ಕೊಳಕು(ಈ ಶಬ್ದದ ಬಳಕೆಯನ್ನು ನಾನು ಕೂಡ ಒಪ್ಪುವುದಿಲ್ಲ) ಮತ್ತು ಅಲ್ಲಿನ ಮಾಲಿನ್ಯ ಪ್ರಮಾಣ ಜಾಸ್ತಿ.

ಹೀಗಿರುವಾಗ ನಾವಷ್ಟೇ ಏಕೆ ಅಂತಹ ಒಪ್ಪಂದವನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವುದು ಟ್ರಂಪ್ ಮಾತಿನ ವರಸೆಯಾಗಿತ್ತು. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಇಲ್ಲಿ ಯಾವುದೇ ರೀತಿ ಭಾರತಕ್ಕೆ ಅವಮಾನ ಮಾಡಬೇಕೆನ್ನುವ ಉದ್ದೇಶವಿರದೇ, ತನ್ನ ಪ್ಯಾರಿಸ್ ಒಪ್ಪಂದವನ್ನು ಮುರಿದ ನಡೆಯ ಸಮರ್ಥನೆಯೇ ಇತ್ತು. ಹೀಗೆ ತನ್ನನ್ನು ಸಮರ್ಥಿಸಿ ಕೊಳ್ಳು ವಾಗ ಬೇಕಾ ಬಿಟ್ಟಿ ಶಬ್ದಪ್ರಯೋಗ ಮಾಡುವುದು ಕೂಡ ಟಿಪಿಕಲ್ ಟ್ರಂಪ್‌ನ ಮಾತಿನ ಸ್ಟೆ ಲ್ ಎನ್ನುವುದು ಅವರ
ಮಾತುಗಳನ್ನು ಕೇಳಿದವರಿಗೆ ಗೊತ್ತು. ಇಷ್ಟಕ್ಕೂ ಅಲ್ಲಿ ನೆರೆದಿದ್ದ ಎಲ್ಲರೂ ಅಮೆರಿಕನ್ನರೇ ಮತ್ತು ಅವರು ತಾನೇ ವೋಟ್ ಹಾಕಿ
ಅಧ್ಯಕ್ಷರನ್ನು ನಿರ್ಧರಿಸುವವರು.

ಟ್ರಂಪ್‌ಗೆ ತನ್ನ ಚುನಾವಣಾ ರ‍್ಯಾಲಿಯಲ್ಲಿ ಭಾರತವನ್ನು ಹೊಗಳಿದರೂ, ತೆಗಳಿದರೂ ಏನೂ ಫರಕ್ ಬೀಳುವುದಿಲ್ಲ. ಈ ಇಡೀ ಸಂದರ್ಭವನ್ನು ಪರಿಗಣಿಸದೇ, ಟ್ರಂಪ್‌ನ ಮಾತನಾಡುವ ರೀತಿಯನ್ನು ಅರಿಯದೇ, ಕೇವಲ ಆಡಿದ ಮಾತಾನ್ನೊಂದೇ ಹಿಡಿದು ಭಾರತದೊಂದಿಗಿನ ಸಂಬಂಧ ವನ್ನು ವಿಶ್ಲೇಷಿಸಲು, ಇಷ್ಟೆಲ್ಲ ಭಾರತದ ಬೆನ್ನಿಗೆ ನಿಂತ ಟ್ರಂಪ್ ಅವರ ನಿಲುವನ್ನು ಪ್ರಶ್ನಿಸುವುದು ಅಪ್ರಬುದ್ಧತೆ ಅನಿಸುತ್ತದೆ. ಒಂದಂತೂ ನಿಜ. ಭಾರತ ಇಂದು ಒಂದು ಶಕ್ತಿಶಾಲಿ ದೇಶ. ಭಾರತದೊಂದಿಗೆ ಫ್ರಾನ್ಸ್, ಇಸ್ರೇಲ್‌, ಇಟಲಿ, ಜರ್ಮನಿ, ಆಸ್ಟ್ರೇಲಿಯಾ ಮೊದಲಾದ ರಾಷ್ಟ್ರಗಳು ಹಿಂದೆಂದಿಗಿಂತ ಉತ್ತಮ ಸಂಬಂಧವನ್ನು ಹೊಂದಿವೆ.

ಅಮೆರಿಕಾ ಸೇರಿದಂತೆ ಹಲವು ಬಲಿಷ್ಠ ರಾಷ್ಟ್ರಗಳಿಗೆ ನಮ್ಮೊಂದಿಗಿನ ಉತ್ತಮ ಬಾಂಧವ್ಯ ಅನಿವಾರ್ಯ ಕೂಡ ಹೌದು. ಅಲ್ಲದೇ ಅಮೆರಿಕಾದ ಎದುರು ಸೆಟೆದು ನಿಂತ, ಪಾಕಿಸ್ತಾನ ಮತ್ತು ರಷ್ಯಾದೊಂದಿಗೆ ದೋಸ್ತಿ ಮಾಡಿಕೊಂಡ ಚೀನಾವನ್ನು ಹದ್ದು ಬಸ್ತಿನಲ್ಲಿಡಲು ಭಾರತ ಅಮೆರಿಕಾದ ಮಟ್ಟಿಗೆ ತೀರಾ ಸ್ಟ್ರಾಟೆಜಿಕ್. ಅದೇ ಕಾರಣಕ್ಕೆ ಈ ಎಲ್ಲ ಚುನಾವಣೆಯ ಗಡಿಬಿಡಿಯಲ್ಲಿ ಕೂಡ ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪೋಮ್ಪೆಯೋ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಎರಡು ದಿನದ ಮೊದಲು ಭಾರತಕ್ಕೆ ಭೇಟಿಕೊಟ್ಟು ನಮ್ಮ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿಯಾಗಿದ್ದು. ಈ ಭೇಟಿ ಇನ್ನೊಂದು ವಾರದಲ್ಲಿ ನಡೆಯುವ ಚುನಾವಣೆಯ ಫಲಿತಾಂಶ ಬಂದ ಮೇಲೆ ಕೂಡ ನಡೆಸ ಬಹುದಿತ್ತು.

ಆದರೆ ಅಮೆರಿಕಾದ ಈ ನಡೆ, ಮುಂದಿನ ಅಧ್ಯಕ್ಷರು ಯಾರೇ ಆದರೂ ಅಮೆರಿಕಾದ ಭಾರತದ ಜೊತೆಗಿನ ಸಂಬಂಧದ ಅನಿವಾ ರ್ಯತೆಯ ಕಾರಣವನ್ನು ನಾವು ಇಲ್ಲಿ ಗ್ರಹಿಸಬಹುದು. ಅಲ್ಲದೆ ಭಾರತದ ಇಂದಿನ ಪ್ರಧಾನಿ ಮೋದಿ ಹಿಂದಿನ ಪ್ರಧಾನಿಗಳಂತೆ ನಿಷ್ಕ್ರಿಯರಲ್ಲ. ಅಂತಾರಾಷ್ಟ್ರೀಯ ರಂಗಸ್ಥಳದಲ್ಲಿ ಭಾರತಕ್ಕೆ ತನ್ನದೇ ಆದ ಸ್ಥಾನ ಮೋದಿ ಅಧಿಕಾರಕ್ಕೆ ಬಂದ ನಂತರ, ಅತೀ ಕಡಿಮೆ ಸಮಯದಲ್ಲಿ ಪ್ರಾಪ್ತವಾಗಿದೆ.

ಆದರೂ ಒಂದೊಮ್ಮೆ ಜೋ ಅಧ್ಯಕ್ಷರಾಗಿ ಬಂದಲ್ಲಿ ಮೊದಲಿನಂತೆ ಪಾಕಿಸ್ತಾನಕ್ಕೆ, ಚೀನಾಕ್ಕೆ ಬೆಂಬಲಿಸಿದಲ್ಲಿ ಭಾರತ ಅದರ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಅಮೆರಿಕಾ ಪುನಃ ಪಾಕಿಸ್ತಾನಕ್ಕೆ ಭಿಕ್ಷೆ ಮುಂದುವರಿಸಿದರೆ, ಅದರ ಬೆನ್ನಿಗೆ ನಿಂತರೆ ಭಾರತದ ಗಡಿಯಲ್ಲಿನ ಉಪಟಳ ಕೂಡ ಸಹಜವಾಗಿ ಹೆಚ್ಚಲಿದೆ. ನಮ್ಮ ದೇಶ ಎಷ್ಟೇ ಶಕ್ತಿಯುತವಾಗಿದ್ದರೂ ಅಮೆರಿಕಾ ಈ ಎರಡು ಅಪದ್ಧ ದೇಶಗಳನ್ನು ಬೆಂಬಲಿಸಿದಲ್ಲಿ ನಮಗೆ ಹಿನ್ನಡೆಯಾಗುವುದು ನಿಜ. ಈ ಎಲ್ಲ ಹಿನ್ನೆಲೆಯಲ್ಲಿ ಜೋ ಬೈಡನ್
ಗಿಂತ ಡೊನಾಲ್ಡ್ ಟ್ರಂಪ್ ಇನ್ನೊಮ್ಮೆ ಆರಿಸಿ ಬರುವುದುಭಾರತದ ಮಟ್ಟಿಗೆ ಒಳ್ಳೆಯದೆನಿಸುತ್ತದೆ.