Friday, 13th December 2024

ಅತ್ಯಾಚಾರ ಪ್ರಕರಣಗಳಿಗೆ ಯಾರು ಹೊಣೆ ?

ಅಭಿವ್ಯಕ್ತಿ

ಕಾರ್ತಿಕ್ ಕಬ್ಬೂರ‍್

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಈ ಪ್ರಕರಣದ ನಂತರ ಬೆಳಕಿಗೆ ಬಂದಂತಹ ಇನ್ನೋರ್ವ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಕೂಡ ದೇಶದಲ್ಲಿ ತಲ್ಲಣ ಮೂಡಿಸಿದೆ.

ಮಹಿಳೆಯರನ್ನು ಪೂಜ್ಯನೀಯವಾಗಿ ಕಾಣುವ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಅವರಿಗೆ ಭದ್ರತೆ ಇಲ್ಲ ಎಂಬ ಕೂಗು ಕೇಳಿಬರುತ್ತಿದೆ. ಹೆಣ್ಣನ್ನು ಮಾತೆ, ಸೋದರಿಯಾಗಿ ಗೌರವಿಸುತ್ತಿರುವ ಭಾರತದಲ್ಲಿ ಹೆಣ್ಣು ಮಕ್ಕಳ ಮೇಲಿನ ಹಿಂಸಾಚಾರ, ಅತ್ಯಾಚಾರಗಳು ಹೆಚ್ಚಾಗುತ್ತಿರುವುದು ಅತ್ಯಂತ ಆತಂಕಕಾರಿ ಮತ್ತು ವಿಷಾದನೀಯ ಬೆಳವಣಿಗೆ. ಎನ್ .ಸಿ.ಆರ್.ಬಿ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಅತ್ಯಧಿಕ ಅತ್ಯಾಚಾರ ಪ್ರಕರಣ ವರದಿ ಯಾಗುತ್ತಿದ್ದು, 2020ರಲ್ಲಿ ದಿನ ವೊಂದಕ್ಕೆ ಸರಾಸರಿ ೮೦ ಕೊಲೆಗಳು ಹಾಗೂ 77 ಅತ್ಯಾಚಾರಗಳು ನಡೆಯುತ್ತಿದೆ ಎಂದು ರಾಷ್ಟ್ರೀಯ ಅಪರಾಧಿ ದಾಖಲೆ ಬ್ಯೂರೋ ಎನ್‌ಸಿಅರ್‌ಬಿ ಬುಧ ವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಈ ವರದಿಯ ಪ್ರಕಾರ ಅಪರಾಧಗಳ ಸಂಖ್ಯೆಯಲ್ಲಿ ರಾಜಸ್ಥಾನ್ ಮುಂಚೂಣಿಯ ರಾಜ್ಯವಾಗಿದೆ. ನಂತರದಲ್ಲಿ ಮಧ್ಯಪ್ರದೇಶ, ಹರಿಯಾಣ, ಛತ್ತೀಸ್‌ಘಡ ಮತ್ತು ಉತ್ತರ ಪ್ರದೇಶ. ಈ ಅಂಶಗಳನ್ನು ನೋಡುವಾಗ ಉತ್ತರ ಭಾರತವು ಮಹಿಳೆಯರಿಗೆ ಅಷ್ಟೊಂದು ಸುರಕ್ಷಿತ ವಾಗಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ಇನ್ನು ದಕ್ಷಿಣ ಭಾರತದ ಆಂಧ್ರ ಪ್ರದೇಶವೂ ಕೂಡಾ ಇದೇ ಪಟ್ಟಿಗೆ ಸೇರಿಕೊಳ್ಳುತ್ತಿದ್ದು ಇದುವರೆಗೆ ಆಂದ್ರ ಪ್ರದೇಶದಲ್ಲಿ ದಾಖಲಾದ ಒಟ್ಟು ಅತ್ಯಾಚಾರ ಪ್ರಕರಣ ಗಳೆಂದರೆ 1086 ಕೇಸುಗಳು. ಇದರಲ್ಲಿ 2000ಕ್ಕೂ ಅಧಿಕ ಪ್ರಕರಣಗಳು 18 ವರ್ಷದ ಕೆಳಗಿನ ಅಪ್ರಾಪ್ತ ಬಾಲಕಿಯರ ಮೇಲೆ ಆದಂತಹ ಅತ್ಯಾಚಾರ ಜತೆಗೆ 561 ಪ್ರಕರಣಗಳು ಮಕ್ಕಳ ಮೇಲೆ ಮತ್ತು 543 ಸೀಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. 2005 ರಿಂದ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಗರಿಷ್ಟ ಮಟ್ಟದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು, 2005 ರಿಂದ 2019 ರ ವರೆಗೆ 338 ಸಾವಿರಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗಿವೆ.

ಕೇವಲ ನಿರಂತರ ಸುದ್ದಿಯಲ್ಲಿರುವ ಹಾಗೂ ಬೆಳಕಿಗೆ ಬಂದಂತಹ ಅತ್ಯಾಚಾರಗಳು ಮಾತ್ರ ಸಾರ್ವಜನಿಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಅದೆಷ್ಟೋ ಗ್ರಾಮೀಣ ಮತ್ತು ಬಡ ಮಕ್ಕಳ ಮೇಲಿನ ಅತ್ಯಾಚಾರಪ್ರಕರಣಗಳು ವರದಿಯೇ ಆಗುವುದಿಲ್ಲ. ಒಟ್ಟಾರೆ ಈ ಎಲ್ಲಾ ಅಂಶಗಳಿಂದ ಭಾರತವು ಮಹಿಳೆಯರಿಗೆ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ದಿನೇ ದಿನೇ ಹೆಚ್ಚುತ್ತಿರುವ ಇಂತಹಾ ದೌರ್ಜನ್ಯ ಪ್ರಕರಣಗಳು ನಿಯಂತ್ರಿಸು ವಲ್ಲಿ ಸರಕಾರವು ತೆಗೆದುಕೊಂಡ ನಿಲುವುಗಳ ಕುರಿತು ಸ್ಪಷ್ಟಪಡಿಸಬೇಕು.

‘ನಿರ್ಭಯಾ’ ಪ್ರಕರಣದ ನಂತರ ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ಜಾರಿಯಾಗಿದ್ದು ನಂತರದ ದಿನಗಳಲ್ಲಿ ಇಂತಹಾ ಪ್ರಕರಣಗಳು ಕಡಿಮೆ ಯಾಗಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾನೂನು ಕಠಿಣವಾಗಿದ್ದರೂ ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚುತಿರುವುದು ವ್ಯವಸ್ಥೆಯೊಳಗಿನ ಲೋಪವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅತ್ಯಾಚಾರದಂತಹ ಪ್ರಕರಣಗಳನ್ನು ಕೇವಲ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಕಠಿಣ ಶಿಕ್ಷಣ ಹೊರತಾಗಿಯೂ ಹೆಚ್ಚಾಗುತ್ತಿರುವ ಪ್ರಕರಣಗಳಿಂದ ಸ್ಪಷ್ಟವಾಗುತ್ತದೆ. ಸಾಮಾಜಿಕ, ಶೈಕ್ಷಣಿಕ ವಿಷಯ ವನ್ನಾಗಿ ಚರ್ಚಿಸುವ ಮತ್ತು ಅದನ್ನು ಜಾರಿಗೆ ತರುವ ಅವಶ್ಯಕತೆ ಹಿಂದೆಂದಿಗಿಂತಲೂ ಅಗತ್ಯವಿದೆ.

ಸಾಮಾಜಿಕವಾಗಿ ಮಹಿಳೆಗೆ ಕೇವಲ ದೈವತ್ವದ ಸ್ಥಾನದಿಂದ ರಕ್ಷಣೆ ಸಾಧ್ಯವಿಲ್ಲವೆಂದು ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಜಿಸಬೇಕಾಗಿದೆ. ಆ ಮೂಲಕ ಮಹಿಳೆ ಪುರಷನಷ್ಟೇ ಸಮಾನಳು ಎಂಬ ಚಿಂತನೆಯನ್ನು ಹುಟ್ಟುಹಾಕಬೇಕಾಗಿದೆ. ತಂದೆ ತಾಯಿಗಳು ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡುವ ದೃಷ್ಠಿ ಕೋನ ಬೆಳೆಸಿಕೊಳ್ಳಬೇಕು. ಲೈಂಗಿಕ ಶಿಕ್ಷಣವನ್ನು ಮನೆಯಿಂದಲೇ ಪ್ರಾರಂಭಿಸಿ ಶಿಕ್ಷಣ ವ್ಯವಸ್ಥೆಯಲ್ಲಿಯೂ ಅದನ್ನು ಅಳವಡಿಕೊಂಡು ಹೋಗುವುದರಿಂದ ಮಕ್ಕಳಲ್ಲಿ ಲೈಂಗಿಕತೆ ಕುರಿತು ಇರುವ ಜಿಜ್ಞಾಸೆಗಳನ್ನು ನಿವಾರಿಸಿ ಅವರನ್ನು ಸತ್ಪ್ರಜೆಯನ್ನಾಗಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ.