Wednesday, 11th December 2024

ಯಾರು ಈ ಸ್ಟ್ಯಾನ್‌ ಸ್ವಾಮಿ ?

ಅವಲೋಕನ

ಪ್ರಕಾಶ್ ಶೇಷರಾಘವಾಚಾರ್‌

84 ವರ್ಷದ ಸ್ತಾನಿಸ್ಲೌಸ್ ಲೂರ್ದುಸ್ವಾಮಿ ಅಲಿಯಾಸ್ ಸ್ಟ್ಯಾನ್ ಸ್ವಾಮಿ ಜುಲೈ 5ರಂದು ಮುಂಬೈ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದುತ್ತಾರೆ. ಒಮ್ಮೆಗೆ ಇವರ ಸಾವನ್ನು ಅಮಾನುಷ ಪ್ರಭುತ್ವದಿಂದ ನಡೆದ ಹತ್ಯೆ, ನ್ಯಾಯಾಂಗದ ವೈಫಲ್ಯದಿಂದ ಉಂಟಾದ ಸಾವು, ಮುಂತಾದ ವಾಖ್ಯಾನಗಳೊಂದಿಗೆ ಖ್ಯಾತ – ಕುಖ್ಯಾತ ಪತ್ರಕರ್ತರು, ಸಮಾಜದಲ್ಲಿ ಪ್ರತಿಷ್ಠಿತರು ಎಂದು ಬೋರ್ಡ್ ಹಾಕಿಕೊಂಡವರು ಸರಕಾರದ ವಿರುದ್ಧ ವಾಗ್ದಾಳಿ ಮಾಡುತ್ತಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಶಶಿ ತರೂರ್, ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯಚೂರಿ ಮತ್ತು ಬರಹಗಾರ ರಾಮಚಂದ್ರ ಗುಹಾ ಮುಂತಾದವರು ದೇಶದ ಹಿತವನ್ನು ಕಡೆಗಣಿಸಿ ಸ್ಟ್ಯಾನ್ ಸ್ವಾಮಿ ಎದುರಿಸುತ್ತಿರುವ ಗಂಭೀರ ಆರೋಪವನ್ನು ಗೌಣವಾಗಿಸಿ ಇವರ ಸಾವಿಗೆ ಸರಕಾರ ವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆದಿದೆ.

ಯಾರು ಈ ಸ್ಟ್ಯಾನ್ ಸ್ವಾಮಿ? ಈತನೊಬ್ಬ ಕ್ಯಾಥೋಲಿಕ್ ಪಾದ್ರಿ. ಜಾರ್ಖಂಡದಲ್ಲಿ ಆದಿವಾಸಿ ಗಳ ನಡುವೆ ಸೇವೆಯ ಮುಖವಾಡದಲ್ಲಿ ಮತಾಂತರ ಮತ್ತು ದೇಶ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿದ್ದ ವ್ಯಕ್ತಿ ಎಂದು ಎನ್‌ಐಎ ತನಿಖೆ ಹೇಳುತ್ತದೆ. ವಯಸ್ಸು 84 ಆಗಿದ್ದರೂ ನಿರ್ಬಂಧಿತ ಮಾವೋವಾದಿ ಸಂಘಟನೆಯ ಜತೆ ಕೈಜೋಡಿಸಿ ಕೇಂದ್ರ ಸರಕಾರದ ವಿರುದ್ಧ ವಿದ್ರೋಹ ಕೃತ್ಯದಲ್ಲಿ ಭಾಗಿ ಎಂದು ತನಿಖೆಯ ವಿವರಗಳು ತಿಳಿಸುತ್ತದೆ. ಇವರಿಗೆ ಪಾರ್ಕಿನ್‌ಸನ್ ಕಾಯಿಲೆ, ಎರಡೂ
ಕಿವಿಗಳು ಕೇಳುತ್ತಿರಲಿಲ್ಲ, ವಯೋ ಸಹಜ ಕಾಯಿಲೆ ಗಳು ಇವರನ್ನು ಭಾಽಸುತ್ತಿರುತ್ತದೆ.

ತಲೋಜಾ ಸೆರೆಮನೆಯಲ್ಲಿ ಇದ್ದ ಸಂದರ್ಭದಲ್ಲಿ ಕರೋನಾ ಪೀಡಿತರಾಗಿ ಗುಣಮುಖರಾಗಿದ್ದರು. ಪುಣೆಯ ಶನಿವಾರವಾಢ ಸ್ಥಳದಲ್ಲಿ ಎಲಿಗಾರ್ ಪರಿಷದ್
ಸಮ್ಮೇಳನವನ್ನು ಆಯೋಜಿಸಿರುತ್ತದೆ. ಈ ಸಂದರ್ಭದಲ್ಲಿ ವ್ಯಾಪಕವಾದ ಹಿಂಸಾಚಾರ ನಡೆಯುತ್ತದೆ. ಈ ಹಿಂದೆ ಕಾರ್ಯಕ್ರಮ ನಡೆದಾಗ ಯಾವುದೇ ಗಲಭೆ
ಯಾಗದೆ ಸೌರ್ಹಾದಪೂರ್ವಕ ವಾತಾವರಣ ದಲ್ಲಿ ನಡೆಯುತ್ತಿತ್ತು. ಆದರೆ 2018ರಲ್ಲಿ ಮಾವೋವಾದಿಗಳ ಷಡ್ಯಂತರದಿಂದ ದಲಿತರು ಮತ್ತು ಇತರ
ಸಮುದಾಯದ ಜತೆ ಗಲಭೆಯಾಗಿ ಅಪಾರವಾದ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗುತ್ತದೆ. ಈ ಗಲಭೆ ಕೋರೆಗಾಂವ್ ಹಿಂಸಾಚಾರವೆಂದು ಕುಖ್ಯಾತಿ
ಪಡೆಯುತ್ತದೆ. ಈ ಗಲಭೆಯ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸುತ್ತಾರೆ. ಈ ಗಲಭೆಯ ತನಿಖೆಯ
ಸಂದರ್ಭದಲ್ಲಿ ಹಲವಾರು ಆತಂಕಕಾರಿ ಮಾಹಿತಿಗಳು ಹೊರಬೀಳುತ್ತದೆ.

ನಿರ್ಬಂಧಿತ ಮಾವೋವಾದಿಗಳ ಹಾಗೂ ನಗರದಲ್ಲಿ ಇವರ ಬೆಂಬಲಿಗರ ಪಾತ್ರ ಅನಾವರಣವಾಗುವುದು. ತತ್ಸಂಬಂಧವಾಗಿ ಸುಧೀರ್ ದಾವ್ಲೆ, ಸುಧಾ ಭಾರದ್ವಾಜ್, ಗೌತಮ್ ನಾವಲಖಾ, ಆನಂದ್ ತೇಲ್‌ತುಂಬ್ಡೆ, ವರವರ ರಾವ್ ಮತ್ತು ರೋನಿ ವಿಲ್ಸನ್ ಮುಂತಾದ ಮಾವೋ ಬೆಂಬಲಿಗರನ್ನು ಎನ್‌ಐಎ ವಶಕ್ಕೆ ಪಡೆಯುತ್ತದೆ. ಭೀಮಾ ಕೋರೆಗಾಂವ್ ಹಿಂಸಾಚಾರದ ತನಿಖೆಯ ಸಂದರ್ಭದಲ್ಲಿ ಸ್ಟ್ಯಾನ್ ಸ್ವಾಮಿ ನಡೆಸುತ್ತಿರುವ ಕಾನೂನುಬಾಹಿರ ಚಟುವಟಿಕೆಗಳು ಬೆಳಕಿಗೆ
ಬರುತ್ತದೆ. ಮಾವೋವಾದಿಗಳೊಂದಿಗೆ ಇವರ ನಿರಂತರ ಸಂರ್ಪಕ ಮತ್ತು ದಲಿತರು ಹಾಗೂ ಮುಸ್ಲಿಂರನ್ನು ಒಂದು ಮಾಡಿ ಸರಕಾರದ ವಿರುದ್ಧ ದಂಗೆ ಎಬ್ಬಿಸುವ ಷಡ್ಯಂತ್ರ. ಇದಕ್ಕಾಗಿ ದಲಿತರ ಮೇಲೆ ಹಲ್ಲೆ ನಡೆಸಿ ಅದರ ಆರೋಪವನ್ನು ಹಿಂದತ್ವವಾದಿಗಳ ಮೇಲೆ ಬರುವಂತೆ ಮಾಡುವ ಕುಟಿಲ ಯೋಜನೆ ತನ್ಮೂಲಕ ಸಮಾಜದಲ್ಲಿ ಕ್ಷೋಭೆ ನಿರ್ಮಾಣ ಮಾಡುವ ಅಪಾಯಕಾರಿ ಪಿತೂರಿ ಬಯಲಾಗುತ್ತದೆ.

ಬಲವಾದ ಸಾಕ್ಷ್ಯಾಧಾರಗಳ ಮೇಲೆ ಎನ್‌ಐಎ 2020ರ ಅಕ್ಟೋಬರ್ 8ರಂದು ಸ್ಟ್ಯಾನ್ ಸ್ವಾಮಿಯನ್ನು ರಾಂಚಿಯಲ್ಲಿ ವಶಕ್ಕೆ ಪಡೆಯುತ್ತಾರೆ. ತನಿಖೆಯ ವೇಳೆ ಹಲವಾರು ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದ ಕಾರಣ ಬಂಧನದ ತರುವಾಯ ಎನ್‌ಐಎ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಯನ್ನು ಕೇಳುವುದಿಲ್ಲ. ಹೀಗಾಗಿ ಇವರನ್ನು ಮುಂಬೈ ತಲೋಜಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವುದು.

ಇವರ ವಯಸ್ಸು ಮತ್ತು ಅನಾರೋಗ್ಯ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಇವರಿಗೆ ಸೆರೆಮನೆಯಲ್ಲಿ ಪ್ರತ್ಯೇಕ ಕೊಠಡಿ ಮತ್ತು ಸಹಾಯಕರನ್ನು ನೀಡಲಾಗುತ್ತದೆ ಹಾಗೂ ಇವರಿಗೆ ಬೇಕಾದ ಎಲ್ಲಾ ಪರಿಕರಗಳನ್ನು ಒದಗಿಸಲಾಗುವುದು. ಎನ್‌ಐಎ ಭೀಮಾಕೋರೆ ಗಾಂವ್ ಹಿಂಸಾಚಾರದ 10 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸುತ್ತದೆ. ಈ ಆರೋಪ ಪಟ್ಟಿಯಲ್ಲಿ ಸ್ಟ್ಯಾನ್ ಸ್ವಾಮಿಯ ನಿರ್ಬಂಧಿತ ಸಿಪಿಐ ಮಾವೋವಾದಿಗಳ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೋರೆಗಾಂವ್ ಹಿಂಸಾಚಾರದ ಪಿತೂರಿಯ ಕೇಂದ್ರ ವ್ಯಕ್ತಿ ಎಂದು ಆರೋಪಿಸಿದೆ.

ದೇಶದಲ್ಲಿ ಅಶಾಂತಿ ಹುಟ್ಟುಹಾಕಲು ಮತ್ತು ಸಶಸ್ತ್ರ ದಂಗೆಗೆ ಪ್ರಚೋದನೆ ನೀಡುವ ಷಡ್ಯಂತರ ನಡೆಸಿರುವುದಕ್ಕೆ ಬರೆದಿರುವ ಪತ್ರಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸುತ್ತಾರೆ. ಸಿಪಿಐ ಮಾವೋವಾದಿ ಭಯೋತ್ಪಾದಕ ಸಂಘಟನೆಯನೆಯನ್ನು ಸರಕಾರವು ನಿಷೇಧಿಸಿದೆ. ಕಳೆದ ಎರಡು ದಶಕದಲ್ಲಿ ಈ ಸಂಘಟನೆಯು 12
ಸಾವಿರ ನಾಗರಿಕರ ಹತ್ಯೆ ಮಾಡಿದೆ ಮತ್ತು 2700 ಸುರಕ್ಷಾ ಪಡೆಯವರನ್ನು ನಿರ್ದಯೆಯಿಂದ ಹತ್ಯೆ ಮಾಡಿದ್ದಾರೆ. ಇಂಥ ಸಂಘಟನೆಯಲ್ಲಿ ಸಕ್ರಿಯವಾಗಿ
ತೊಡಗಿಸಿಕೊಂಡಿದ್ದ ವ್ಯಕ್ತಿ ಸ್ಟ್ಯಾನ್ ಸ್ವಾಮಿ. ನಾನೊಬ್ಬ ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವವನು ನನಗೆ ನೀರು ಕುಡಿಯಲು ಸ್ಟ್ರಾ ಅವಶ್ಯಕತೆ ಇರುವುದು. ಆದರೆ ಎನ್ ಐಎ ಅದನ್ನು ನಿರಾಕರಿಸಿದೆ ಎಂದು ಸುಳ್ಳು ಮಾಹಿತಿಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಾರೆ.

ಎನ್‌ಐಎ ಇದನ್ನು ಬಲವಾಗಿ ನಿರಾಕರಿಸಿ ಇವರ ಸುಳ್ಳನ್ನು ಬಯಲು ಮಾಡುತ್ತಾರೆ. ಒಮ್ಮೆ ನ್ಯಾಯಾಂಗ ಬಂಧನಕ್ಕೆ ಒಳಗಾದ ತರುವಾಯ ಅವರ ಜವಾಬ್ದಾರಿಯು ರಾಜ್ಯ ಸರಕಾರಕ್ಕೆ ಸೇರುತ್ತದೆ. ಆದರೆ ಈ ವಿಚಾರವನ್ನು ಮುಚ್ಚಿಟ್ಟು ಕೇಂದ್ರ ಸರಕಾರವು 84 ವರ್ಷ ವಯಸ್ಸಿನ ವ್ಯಕ್ತಿಗೆ ಕುಡಿಯಲು ಸ್ಟ್ರಾ ನೀಡಲು ನಿರಾಕರಿಸುತ್ತಿದೆ ಎಂದು ಇವರ ಬೆಂಬಲಿಗರು ಅಪಪ್ರಚಾರದಲ್ಲಿ ತೊಡಗುತ್ತಾರೆ. ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿ ಇರುವುದು ಮಹಾವಿಕಾಸ್ ಅಗಾಡಿ ಸರಕಾರ ವಿಚಾರಣಾಽನ ಖೈದಿಗೆ ಬೇಕಾದ ವಸ್ತುಗಳನ್ನು ನೀಡುವುದು ಅವರ ಹೊಣೆಗಾರಿಕೆ ಎಂಬುದನ್ನು ಮರೆಮಾಚಿ ಜನರ ಸಹಾನುಭೂತಿ ಪಡೆಯಲು
ಯತ್ನಿಸುತ್ತಾರೆ.

ಸ್ಟ್ಯಾನ್ ಸ್ವಾಮಿಯವರನ್ನು ಭಯೋತ್ಪಾದನೆ ಕಾಯಿದೆ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿರುತ್ತದೆ. ನ್ಯಾಯಾಲಯದ ಮುಂದೆ ಇವರ ಬಂಧನ ಮತ್ತು ಇವರ ದೇಶ ವಿದ್ರೋಹಿ ಚಟುವಟಿಕೆಗಳ ಬಗ್ಗೆ ಬಲವಾದ ಸಾಕ್ಷ್ಯಧಾರಗಳನ್ನು ಸಲ್ಲಿಸಿದ್ದ ಕಾರಣ ಇವರ ಜಾಮೀನು ಅರ್ಜಿಯು ತಿರಸ್ಕೃತವಾಗುತ್ತದೆ. ಎನ್‌ಐಎ ವಿಶೇಷ
ನ್ಯಾಯಾಲಯವು ಇವರ ಜಾಮೀನು ಅರ್ಜಿ ತಿರಸ್ಕರಿಸುವ ವೇಳೆ ಒಬ್ಬ ವ್ಯಕ್ತಿಯ ಹಕ್ಕಿಗಿಂತ ಸಮಾಜದ ಹಕ್ಕು ಮತ್ತು ಸ್ವಾತಂತ್ರ್ಯ ಮುಖ್ಯ ಎಂದು ಅಭಿಪ್ರಾಯ ಪಡುತ್ತದೆ.

ಮುಂಬೈ ಉಚ್ಚ ನ್ಯಾಯಾಲಯವು ಇವರ ಮೇಲೆ ಇರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ನೀಡಲಾಗುವುದಿಲ್ಲ ಎಂದು ತಿರಸ್ಕರಿಸು ತ್ತದೆ. ಆದರೆ ಅವರ ಅನಾರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಅನುಮತಿ ನೀಡುತ್ತದೆ. ಸ್ಟ್ಯಾನ್ ಸ್ವಾಮಿ ಇಚ್ಛೆಯಂತೆ ಬಾಂದ್ರದಲ್ಲಿ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದ ಹೋಲಿ ಫ್ಯಾಮಿಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗುವುದು. ತಾಂತ್ರಿಕವಾಗಿ ಪೊಲೀಸ್ ಕಸ್ಟಡಿಯಲ್ಲಿ ಇದ್ದರೂ ಸಹ ಇವರಿಗೆ ಪ್ರತ್ಯೇಕ ಕೊಠಡಿ ಮತ್ತು ಸಹಾಯಕರನ್ನು ನೀಡಲಾಗಿರುತ್ತದೆ. ಜುಲೈ 3ರಂದು ಇವರಿಗೆ ಹೃದಯಾಘಾತವಾಗಿ ಜುಲೈ 5ರಂದು ಮರಣ ಹೊಂದುತ್ತಾರೆ. ಅತ್ಯುತ್ತಮ ವೈದ್ಯಕೀಯ ಸೇವೆ ಲಭ್ಯವಿದ್ದರೂ ವಯಸ್ಸಿನ ಕಾರಣವಾಗಿ ಇವರ ಸಾವು ಸಂಭವಿಸುತ್ತದೆ ವಿನಃ
ಮತ್ಯಾವುದೇ ಕಾರಣದಿಂದಲ್ಲ.

ಸ್ಟ್ಯಾನ್ ಸ್ವಾಮಿ ಬಂಧನದ ವೇಳೆ ಇವರ ವಯಸ್ಸನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಬೇಕು ಎಂದು ಒತ್ತಡ ಹೇರುವ ತಂತ್ರ ಮಾಡುತ್ತಿದ್ದರು. ಈ ದೇಶದ ಕಾನೂನು ವಯಸ್ಸಿನ ಆಧಾರದ ಮೇಲೆ ಅನ್ವಯವಾಗುವುದಿಲ್ಲ, ಬದಲಿಗೆ ಮಾಡುವ ಅಪರಾಧದ ಮೇಲೆ ಎಂಬುದರ ಬಗ್ಗೆ ಇವರದು ಜಾಣ ಮರೆವು. ವಯಸ್ಸಿನ ನೆಪವನ್ನು ಹೇಳುತ್ತಿದ್ದವರು ಈ ಇಳಿ ವಯಸ್ಸಿನಲ್ಲಿ ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿ ಕೊಂಡಿದ್ದನ್ನು ಮತ್ತು ದೇಶ ವಿದ್ರೋಹಿ ಚಟುವಟಿಕೆ ಯಲ್ಲಿ ಭಾಗಿಯಾಗಿದ್ದ ಸಂಗತಿಯ ಬಗ್ಗೆ ಚಕಾರವಿಲ್ಲ.

ಕಠಿಣ ಯುಎಪಿಎ ಕಾಯಿದೆಯ ಕಾರಣ ನ್ಯಾಯಾಲಯವು ಜಾಮೀನು ನೀಡಲಿಲ್ಲ ಮತ್ತು ವಯಸ್ಸಿನ ಪರಿಗಣನೆ ನ್ಯಾಯಾಲಯ ಮಾಡದಿರುವುದು ಅತ್ಯಂತ ಹೇಯ ಎಂದು ಕಟುವಾಗಿ ಟೀಕಿಸುವವರು ಇದೇ ಕಾಯಿದೆಯಡಿಯಲ್ಲಿ ಬಂಧಿತನಾಗಿದ್ದ ಅಸ್ಸಾಂನ ಅಖಿಲ್ ಗೊಗೋಯ್‌ಗೆ ಮತ್ತು ದೆಹಲಿ ಕೋಮುಗಲಭೆಯ ರೂವಾರಿಗಳಿಗೆ ಅಷ್ಟೇಕೆ ಬೆಂಗಳೂರು ಕಾಡುಗೊಂಡನ ಹಳ್ಳಿ ಗಲಭೆಯ ಆರೋಪಿಗಳಿಗೂ ನ್ಯಾಯಾಲಯ ಜಾಮೀನು ನೀಡಿದೆ. ಸ್ಟ್ಯಾನ್ ಸ್ವಾಮಿಗೆ ಜಾಮೀನು ನೀಡದಿರಲು ಇವರ ಮೇಲಿನ ಆರೋಪಕ್ಕೆ ಬಲವಾದ ಸಾಕ್ಷ್ಯಗಳು ನ್ಯಾಯಾಲಯದ ಮುಂದೆ ಇದ್ದ ಕಾರಣ.

2014ರಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೆಮುಲ ತನ್ನ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡ
ಸಂದರ್ಭದಲ್ಲಿ ಇದೇ ಜನರು ಕೇಂದ್ರ ಸರಕಾರ ವಿಶೇಷವಾಗಿ ಸ್ಮೃತಿ ಇರಾನಿಯವರನ್ನು ಗುರಿಯಾಗಿಸಿ ದೇಶಾದ್ಯಂತ್ಯ ಗುಲ್ಲೆಬ್ಬಿಸಿ ದಲಿತ ಸಮುದಾಯವನ್ನು
ಬಿಜೆಪಿ ವಿರುದ್ಧ ತಿರುಗಿ ಬೀಳಿಸಲು ಷಡ್ಯಂತರ ಹೂಡಿದ್ದರು. ೨೦೨೧ರಲ್ಲಿ ಸ್ಟ್ಯಾನ್ ಸ್ವಾಮಿ ಸಹಜ ಸಾವು ಕಸ್ಟಡಿಯಲ್ಲಿ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು
ಎಂದು ಬಿಂಬಿಸುವ ಕುಚೇಷ್ಟೆಯಲ್ಲಿ ತೊಡಗಿದ್ದಾರೆ ಮತ್ತು ಈಗಾಗಲೇ ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟ ಆರೋಪದಲ್ಲಿ ಕಂಬಿ
ಎಣಿಸುತ್ತಿರುವ ಹಲವಾರು ಮಾವೋವಾದಿ ಬೆಂಬಲಿಗರಿಗೆ ಜಾಮೀನು ನೀಡಲು ನ್ಯಾಯಾಂಗದ ಮೇಲೆ ಒತ್ತಡ ಹೇರಲು ಸ್ಟ್ಯಾನ್ ಸ್ವಾಮಿಯವರ ಸಹಜ ಸಾವನ್ನು ಬಳಸಿಕೊಳ್ಳುತ್ತಿದ್ದಾರೆ.

ದೇಶದ ಹತ್ತು ವಿರೋಧ ಪಕ್ಷಗಳ ನಾಯಕರು ರಾಷ್ಟ್ರಪತಿಗಳಿಗೆ ಪತ್ರ ಬರೆದು ಭಯೋತ್ಪಾದಕರ ನೆಂಟು ಹೊಂದಿದ್ದ ಸ್ಟ್ಯಾನ್ ಸ್ವಾಮಿಯ ವಯೋ ಸಹಜ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಬಂಧಿತ ನಗರ ನಕ್ಸಲರನ್ನು ಬಿಡುಗಡೆ ಮಾಡಬೇಕು ಎಂದು ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಲು ಪ್ರಯತ್ನಿಸುತ್ತಿರುವ ಶಕ್ತಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ದೇಶದ ಐಕ್ಯತೆ ಮತ್ತು ಅಖಂಡತೆಗೆ ಭಂಗವಾದರೂ
ಅಡ್ಡಿಯಿಲ್ಲ. ಆದರೆ ಮೋದಿ ಸರಕಾರದ ಪ್ರತಿಯೊಂದು ಹೆಜ್ಜೆಯನ್ನು ವಿರೋಽಸಿ ದೇಶ ವಿರೋಧಿ ಶಕ್ತಿಗಳ ಕೈಬಲಪಡಿಸಲು ಹಿಂಜರಿಯದ ಶಕ್ತಿಗಳನ್ನು ಸಮರ್ಥ ವಾಗಿ ಎದುರಿಸುವ ಸವಾಲು ಮೋದಿ 2.0 ಸರಕಾರದ ಮುಂದಿರುವುದು.