ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ಈ ಯುದ್ಧದಲ್ಲಿ ಈಗಾಗಲೇ ಸುಮಾರು ಐವತ್ತು ಸಾವಿರ ಜನರು ಸಾವನ್ನಪ್ಪಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನ ಅಂಗ ವಿಹೀನರಾಗಿದ್ದಾರೆ. ಐದು ನೂರು ಜನ ಕಾಣೆಯಾಗಿದ್ದಾರೆ. ಒಂದು ಕೋಟಿಗೂ ಅಽಕ ಜನ ಮನೆ ಬಿಟ್ಟಿದ್ದಾರೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಕಟ್ಟಡಗಳು ಧ್ವಂಸಗೊಂಡಿವೆ.
’War does not determine who is right, only who is left’’ ‘ಯುದ್ಧ ಯಾರು ಸರಿ ಎಂಬುದನ್ನು ನಿರ್ಧರಿಸುವುದಿಲ್ಲ, ಯಾರು ಬದುಕಿ ಉಳಿದಿದ್ದಾರೆ ಎಂಬುದನ್ನು ಮಾತ್ರ ನಿರ್ಧರಿಸುತ್ತದೆ’ ಎಂದು ಈ ಮಾತಿನ ಅರ್ಥ.
ಯುದ್ಧಕ್ಕೆ ಸಂಬಂಧಿಸಿದಂತೆ ಇದಕ್ಕಿಂತ ಉತ್ತಮ ವಾಕ್ಯ ಸಿಗಲಿಕ್ಕಿಲ್ಲ. ಕಳೆದ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ರಷ್ಯಾ-ಯುಕ್ರೇನ್ ಯುದ್ಧವನ್ನು ಎರಡನೆಯ ವಿಶ್ವಯುದ್ಧದ ನಂತರ ಯುರೋಪ್ ಖಂಡದಲ್ಲಿ ನಡೆಯುತ್ತಿರುವ ಭೀಕರ ಯುದ್ಧ ಎಂದೇ ಹೇಳಲಾಗುತ್ತಿದೆ. ಈ ಯುದ್ಧಕ್ಕೆ ಕಾರಣಗಳೇನು, ಯಾರು ಸರಿ, ಯಾರು ತಪ್ಪು ಎಂದು ಈಗಾಗಲೇ ಸಾಕಷ್ಟು ಚರ್ಚೆ ಆಗಿರುವುದರಿಂದ ಇಲ್ಲಿ ಈ ವಿಷಯ ಬೇಡ. ಇದುವರೆಗೂ ಈ ಯುದ್ಧ ದಲ್ಲಿ ಗೆದ್ದವರು ಯಾರು? ಸೋತವರು ಯಾರು ಎಂದು ನಿರ್ಣಯವಾಗಿಲ್ಲ.
ಸದ್ಯ ಆಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಏನೇ ಆದರೂ ಯುದ್ಧದಲ್ಲಿ ಗೆಲ್ಲುವುದು ಒಂದು ದೇಶ ಮಾತ್ರ. ಏಕೆಂದರೆ ಯುದ್ಧ ಎಂದರೆ ಸಂಗೀತದ ಸ್ಪರ್ಧೆಯೂ ಅಲ್ಲ, ಓಟದ ಪೈಪೋಟಿಯೂ ಅಲ್ಲ. ಅಲ್ಲಿ ಎರಡನೆಯ ಬಹು ಮಾನ, ಸಮಾಧಾನಕರ ಬಹುಮಾನ ಎಂಬ ಪದಗಳೇ ಇಲ್ಲ. ಯುದ್ಧ ಆರಂಭವಾಗುವುದಕ್ಕಿಂತ ಮೊದಲೇ ಮಾತುಕತೆಯಿಂದ ಶಾಂತಿ ನೆಲೆಸುವಂತಾದರೆ, ಇಬ್ಬರೂ ವಿಜೇತರು ಎಂದಷ್ಟೇ ಹೇಳಬಹುದು ಶಿವಾಯ್ ಒಮ್ಮೆ ಯುದ್ಧ ಆರಂಭವಾಗಿ, ಸಾವು, ನಷ್ಟ ಅನುಭವಿಸಿ ಬರ್ಬಾದ್ ಆದ ನಂತರದ ಸಂಧಾನದಲ್ಲಿ ಇಬ್ಬರನ್ನೂ ವಿಜೇತರೆಂದು ಹೇಳಲಾಗದು.
ಈ ಯುದ್ಧದಲ್ಲಿ ಈಗಾಗಲೇ ಸುಮಾರು ಐವತ್ತು ಸಾವಿರ ಜನರು ಸಾವನ್ನಪ್ಪಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನ ಅಂಗ ವಿಹೀನರಾಗಿದ್ದಾರೆ. ಐದು ನೂರು
ಜನ ಕಾಣೆಯಾಗಿದ್ದಾರೆ. ಒಂದು ಕೋಟಿಗೂ ಅಧಿಕ ಜನ ಮನೆ ಬಿಟ್ಟಿದ್ದಾರೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಕಟ್ಟಡಗಳು ಧ್ವಂಸಗೊಂಡಿವೆ. ಇನ್ನು ರಸ್ತೆ, ಚರಂಡಿ
ಉಳಿದ ಮೂಲ ಸೌಕರ್ಯಗಳನ್ನಂತೂ ಕೇಳುವುದೇ ಬೇಡ. ಇದುವರೆಗಿನ ಹಾನಿ ಆರು ನೂರು ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗುತ್ತಿದೆ. ಇದು ಈಗ ನಡೆಯುತ್ತಿರುವ ರಷ್ಯಾ- ಉಕ್ರೇನ್ ಯುದ್ಧದ ಬಳುವಳಿ.
ಒಂದು ವಿಷಯ ಗಮನದಲ್ಲಿರಲಿ, ಯುದ್ಧದ ಲೆಕ್ಕಚಾರಗಳೆಲ್ಲ ಅಂದಾಜು ಮಾತ್ರ, ಯಾವುದೂ ನಿಖರವಲ್ಲ. ಅದಲ್ಲದೇ ಈ ಯುದ್ಧ ಇನ್ನೂ ಮುಗಿದಿಲ್ಲ! ಇದೆಲ್ಲದರ ನಡುವೆ ಈ ಯುದ್ಧದ ಸಾಧನೆ ಎಂದರೆ, ಒಂದಷ್ಟು ಯುದ್ಧ ಪಂಡಿತರ ಲೆಕ್ಕಾಚಾರ ಅಡಿಮೇಲೆ ಮಾಡಿದ್ದು. ಮೊದಲಂತೂ ತಿಳಿಯಲಿಲ್ಲ ಬಿಡಿ, ವಿಶ್ಲೇಷಕರಿಗೆ ಈಗಲೂ ಇದರ ಅಂತ್ ಪಾರ್ ಹರಿಯುತ್ತಿಲ್ಲ. ಪುಟಿನ್ ಬರೀ ಬೆದರಿಕೆ ನೀಡುತ್ತಿದ್ದಾನೆ ಅಷ್ಟೇ, ಆತ ಯುದ್ಧ ಮಾಡುವುದಿಲ್ಲ ಎಂದವರು ಕೆಲವರು. ಕೆಲವರು ಯುದ್ಧ ಆರಂಭವಾದ ಮೇಲೆ ರಷ್ಯಾ ಒಂದೆರಡು ದಿನದಲ್ಲಿ, ಅಬ್ಬಬ್ಬಾ ಎಂದರೆ ಒಂದು ವಾರದಲ್ಲಿ ಉಕ್ರೇನನ್ನು ಬಡಿದು ಹಾಕುತ್ತದೆ ಎಂದಿದ್ದರು.
ಇನ್ನು ಹಲವರು ಯುದ್ಧ ಆರಂಭವಾದರೆ ನ್ಯಾಟೊ ಅಥವಾ ಅಮೆರಿಕದಂಥ ದೇಶಗಳು ಉಕ್ರೇನ್ ಬೆಂಬಲಕ್ಕೆ ನಿಲ್ಲಬಹುದೆಂದು ನಂಬಿದ್ದವರು. ಹಾಗೆ ನಂಬಿದ್ದವ ರಲ್ಲಿ ಉಕ್ರೇನ್ ಕೂಡ ಸೇರಿತ್ತು. ಗೋಟಾವಳಿ ಆದದ್ದೇ ಅಲ್ಲಿ. ಹಲವಾರು ವರ್ಷ ಜತೆಗಿದ್ದ ರಷ್ಯಾವನ್ನು ಎದುರು ಹಾಕಿಕೊಂಡು, ಇತ್ತೀಚಿನ ಯಾವ ಯುದ್ಧವನ್ನೂ
ಸಂಪೂರ್ಣವಾಗಿ ಜಯಿಸದ, ಭಯೋತ್ಪಾದನೆಯ ನಿರ್ಮೂಲನೆಯ ಹೆಸರಿನಲ್ಲಿ ಇಪ್ಪತ್ತು ವರ್ಷ ಅಫ್ಗಾನಿಸ್ತಾನದಲ್ಲಿ ಮೇಯ್ದು, ರಾತ್ರೋ ರಾತ್ರಿ ತಾಲಿಬಾನಿಗಳ ಕೈಗೆ ದೇಶ ಒಪ್ಪಿಸಿ ಬಂದ ಅಮೆರಿಕವನ್ನು ಉಕ್ರೇನ್ ಯಾವ ಧೈರ್ಯದ ಮೇಲೆ ನಂಬಿತೋ ದೇವರೇ ಬಲ್ಲ.
ನ್ಯಾಟೋ ಸೇರುವ ಒಂದು ಆಸೆಗೆ ಉಕ್ರೇನ್ ಅಧ್ಯಕ್ಷ ವಲೋಡಿಮಿರ್ ಜೆಲೆನಿಸ್ಕಿ ಬೀಳದಿದ್ದರೆ ಇಂದು ಉಕ್ರೇನಿನ ಸಾವಿರಾರು ಜನ ಸಾಯುತ್ತಿರಲಿಲ್ಲ. ಲಕ್ಷಾಂತರ ಜನ ತಮ್ಮ ಮನೆ ಬಿಟ್ಟು, ದೇಶ ಬಿಟ್ಟು ಹೋಗುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಯಾವ ನ್ಯಾಟೊದಿಂದ ತನ್ನ ದೇಶಕ್ಕೆ ರಕ್ಷಣೆ ಸಿಗುತ್ತದೆ ಎಂದು ಬಯಸಿದ್ದನೋ ಆ ದೇಶವನ್ನೇ ಆತ ಬಲಿಕೊಟ್ಟನಲ್ಲ! ಇನ್ನು ನ್ಯಾಟೊ ಪಡೆ ಬಂದರೆಷ್ಟು, ಬಿಟ್ಟರೆಷ್ಟು? ದೇಶ ಈಗಾಗಲೇ ಇಪ್ಪತ್ತೈದು ವರ್ಷ ಹಿಂದೆ ಹೋಗಿ ಆಗಿದೆ. ಯುದ್ಧ ಹೀಗೇ ಮುಂದುವರಿದರೆ ಇನ್ನೊಂದಿಷ್ಟು ವರ್ಷ ಹಿಂದೆ ಹೋಗುತ್ತದೆ ವಿನಾ ಯಾವ ಪ್ರಯೋಜನವೂ ಇಲ್ಲ.
ಪಂಡಿತರ ಲೆಕ್ಕಾಚಾರ ಇನ್ನೂ ಹೆಚ್ಚು ಬುಡ ಮೇಲಾದದ್ದು ರಷ್ಯಾಕ್ಕೆ ಹೇರಿದ ನಿರ್ಬಂಧದ ವಿಷಯದಲ್ಲಿ. ಅಮೆರಿಕ ಮತ್ತು ಯುರೋಪ್‌ನ ಕೆಲವು ದೇಶಗಳು ರಷ್ಯಾ ಮೇಲೆ ನಿರ್ಬಂಧ ಹೇರಿದವು. ಇನ್ನೇನು ರಷ್ಯಾದ ಕಥೆ ಮುಗಿದೇ ಹೋಯಿತು, ರಷ್ಯಾದ ಬಳಿ ಉಳಿದ ಹಣ ಮತ್ತು ಸಂಪನ್ಮೂಲದಲ್ಲಿ ಇನ್ನು ಬಹಳ ದಿನ ಯುದ್ಧ
ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದವು. ರಷ್ಯಾದ ಜನರಿಗೇ ಪುಟಿನ್ ನಡೆ ಇಷ್ಟವಾಗುತ್ತಿಲ್ಲ, ದೇಶದ ಒಳಗೇ ಕ್ರಾಂತಿ ಉಂಟಾಗಬಹುದು, ಹೀಗೆ
ಏನೇನೋ ಭವಿಷ್ಯವಾಣಿ… ಅದಾಗಿ ಈಗ ಎರಡು ತಿಂಗಳ ಮೇಲೇ ಆಯಿತು, ರಷ್ಯಾ ಇನ್ನೂ ಯುದ್ಧ ಮಾಡುತ್ತಲೇ ಇದೆ.
ಆಗೊಮ್ಮೆ ಈಗೊಮ್ಮೆ ಉಕ್ರೇನ್ ಸೈನ್ಯ ರಷ್ಯಾದ ಒಂದು ಹೆಲಿಕಾಪ್ಟರ್ ಹೊಡೆದು ಉರುಳಿಸಿತು, ರಷ್ಯಾದ ಎರಡು ಟ್ಯಾಂಕರ್‌ಗಳನ್ನು ಧ್ವಂಸ ಮಾಡಿತು ಎಂಬ ಸುದ್ದಿಯನ್ನೇ ದೊಡ್ಡಾದಾಗಿ ಬಿತ್ತರಿಸಿದ್ದಷ್ಟೇ ಅವರಿಗೆ ಸಿಕ್ಕ ಸಮಾಧಾನ. ಅಸಲಿಗೆ ಬೆಂಕಿ ಬಿದ್ದದ್ದು ತಮ್ಮ ಬುಡಕ್ಕೇ ಎಂದು ಯುರೋಪ್ ದೇಶಗಳಿಗೆ ಈಗ ಅರಿ ವಾಗುತ್ತಿದೆ. ಅವರೇನೋ ರಷ್ಯಾದ ಮೇಲೆ ನಿರ್ಬಂಧ ಹೇರಿದ್ದಾರೆ. ಅದೇ ರಷ್ಯಾ ಮನಸ್ಸು ಮಾಡಿದರೆ ಯುರೋಪಿನ ದೊಡ್ಡ ಭಾಗ ಕತ್ತಲೆಯಲ್ಲಿ ಮುಳುಗ
ಬೇಕಾದೀತು. ಬಹಳಷ್ಟು ಜನ ವಾಹನಗಳನ್ನು ಮನೆಯ ಬಿಟ್ಟು ಸೈಕಲ್ ಮೇಲೆ ಅಥವಾ ನಡೆದು ಹೋಗಬೇಕಾದೀತು, ಉಪವಾಸ ಮಲಗಬೇಕಾದೀತು.
ಏಕೆಂದರೆ ಈ ಭಾಗಕ್ಕೆ ವಿದ್ಯುತ್ತು, ಪೆಟ್ರೋಲ, ಡೀಸೆಲ, ಗ್ಯಾಸ್‌ನಂತಹ ಇಂಧನ ಸರಬರಾಜು ಆಗುವುದು, ಗೋಧಿ, ಎಣ್ಣೆ ಇತ್ಯಾದಿ ಆಹಾರ ಪದಾರ್ಥಗಳು ಪೂರೈಕೆ ಆಗುವುದು ರಷ್ಯಾದಿಂದ. ರಷ್ಯಾ ಇದನ್ನು ಇನ್ನೂ ನಿಲ್ಲಿಸಿಲ್ಲ ಎಂದರೆ ಏನೋ ಅನುಮಾನ. ನಿಜವಾಗಿಯೂ ಈ ದೇಶಗಳು ರಷ್ಯಾಕ್ಕೆ ನಿರ್ಬಂಧ ಹೇರಿವೆಯೇ? ಒಳಗಿನ ವ್ಯವಹಾರದ ಮರ್ಮ ಬಲ್ಲವರು ಯಾರು? ಹಾಗಾದರೆ ಈ ಯುದ್ಧದಿಂದ ಯಾರಿಗಾದರೂ ಲಾಭ ಇದೆಯೇ? ಯಾವುದೇ ಕಾರಣಕ್ಕೂ ಉಕ್ರೇನಿಗಂತೂ ಇಲ್ಲ.
ಇನ್ನು ರಷ್ಯಾಕ್ಕೆ? ಊಹೂ… ಆರ್ಥಿಕವಾಗಿ ಒಂದೇ ಅಲ್ಲ, ಇನ್ನುಳಿದ ಯಾವುದೇ ಕ್ಷೇತ್ರದಲ್ಲೂ ರಷ್ಯಾಕ್ಕೆ ಲಾಭ ಇಲ್ಲ. ಒಂದು ವೇಳೆ ಯುದ್ಧ ಗೆದ್ದರೂ ರಷ್ಯಾಕ್ಕೆ ಸಿಗುವುದು ಆತ್ಮ ಗೌರವ. ಅದನ್ನೇ ಕೆಲವರು ರಷ್ಯಾದ ಅಹಂಕಾರಕ್ಕೆ ಸಿಕ್ಕ ತೃಪ್ತಿ ಎನ್ನಬಹುದು. ಆದರೂ ಈ ಯುದ್ಧದಿಂದ ಲಾಭ ಪಡೆಯುವ ಒಂದು ವರ್ಗವಿದೆ. ಯಾರು ಯುದ್ಧ ಮಾಡಿದರೂ ಅವರಿಗೆ ಖುಷಿಯೋ ಖುಷಿ. ಅಪ್ಪಿತಪ್ಪಿಯೂ ಅವರು ಕನಸಿನಲ್ಲಿಯೂ ಯುದ್ಧ ನಿಲ್ಲಿಸಿ ಎಂದು ಬಡಿದಾಡುವ ದೇಶಗಳಿಗೆ ಹೇಳುವು ದಿಲ್ಲ.
ಯುದ್ಧ ನಿಲ್ಲುವುದನ್ನು ಬಯಸುವುದೂ ಇಲ್ಲ. ಏಕೆಂದರೆ ಯುದ್ಧ ನಡೆಯುವಷ್ಟು ದಿನವೂ ಅವರ ಹತ್ತೂ ಬೆರಳು ತುಪ್ಪದಲ್ಲಿ ಅದ್ದಿರುತ್ತದೆ. ಯುದ್ಧದಲ್ಲಿ ಯಾರು ಸೋತರೂ ಅವರು ಗೆಲ್ಲುತ್ತಾರೆ. ಈ ಯುದ್ಧ ದಲ್ಲೂ ಗೆಲ್ಲುತ್ತಿರುವುದು ಅವರೇ, ಯುದ್ಧೋಪಕರಣಗಳನ್ನು ತಯಾರಿಸುವ ಕಂಪನಿಯವರು ಮತ್ತು ಗುತ್ತಿಗೆದಾರರು. ಇವರಿಗೆ ಮಾತ್ರ ಈ ಯುದ್ಧ ನಿಲ್ಲುವುದು ಬೇಕಿಲ್ಲ. ಒಂದು ಅಂಕಿ ಅಂಶ ನೋಡಿದರೆ ಯಾರಿಗೂ ಅರ್ಥವಾಗುತ್ತದೆ.
ಕರೋನಾ ಆರಂಭವಾಗುವುದಕ್ಕಿಂತ ಐದು ವರ್ಷ ಮೊದಲು ಅಮೆರಿಕ, ರಷ್ಯಾ, ಯುಕೆ, ಜರ್ಮನಿ, ಚೀನಾ, ಫ್ರಾನ್ಸ್ ಈ ಆರು ದೇಶಗಳು ಸೇರಿ ವಿಶ್ವದ ಶೇಕಡಾ ಎಂಬತ್ತರಷ್ಟು ಸಮರೋಪಕರಣಗಳನ್ನು ಇತರ ದೇಶಗಳಿಗೆ ರಫ್ತು ಮಾಡಿವೆ. ಇದರಲ್ಲಿ ಜರ್ಮನಿ ಒಂದನ್ನು ಬಿಟ್ಟು ಉಳಿದ ಐದು ದೇಶಗಳು ಸಂಯುಕ್ತ ರಾಷ್ಟ್ರದ ಭದ್ರತಾ ಮಂಡಳಿತ ಖಾಯಂ ಸದಸ್ಯರು! ವಿಶ್ವದಲ್ಲಿ ಶಾಂತಿ ಕಾಪಾಡುವುದೇ ಇವರ ಮೂಲ ಉದ್ದೇಶವಾಗಿರಬೇಕಿತ್ತು. ಸಂಸ್ಥೆಯ ಧ್ಯೇಯೋದ್ದೇಶವೇ ಅದು. ಆದರೆ ಅಮೆರಿಕ ಒಂದೇ ವಿಶ್ವದ ಮೂವತ್ತೇಳು ಪ್ರತಿಶತಕ್ಕಿಂತಲೂ ಹೆಚ್ಚು ಆಯುಧವನ್ನು ರಫ್ತು ಮಾಡುತ್ತಿದೆ ಎಂದರೆ ನಂಬಲೇಬೇಕು!
ಹಾಗಾದರೆ, ಅಮೆರಿಕ ಅಷ್ಟೊಂದು ಆಯುಧಗಳನ್ನು ಮಾರಲು ಸಾಧ್ಯವಾಗುತ್ತಿರುವುದು ಹೇಗೆ? ನಿಮಗೆ ತಿಳಿದಿರಲಿ, ವಿಶ್ವದ ಐದು ಅತಿ ದೊಡ್ಡ ಆಯುಧ ತಯಾ ರಿಸುವ ಕಂಪನಿಗಳು ಅಮೆರಿಕದಲ್ಲಿವೆ. ಯುದ್ಧವಿಮಾನ, ಹೆಲಿಕಾಪ್ಟರ್‌ನಿಂದ ಹಿಡಿದು, ರಾಕೆಟ್ ಲಾಂಚ್‌ವರೆಗೆ ಯುದ್ಧಕ್ಕೆ ಬೇಕಾದ ಎಲ್ಲ ವಿಭಾಗದ ಉಪಕರಣ ಗಳನ್ನೂ ತಯಾರಿಸುವ ಕಂಪನಿ ಲಾಕ್‌ಹೀಡ್ ಮಾರ್ಟಿನ್ ಕಳೆದ ವರ್ಷ ಐವತ್ಮೂರು ಬಿಲಿಯನ್ ಡಾಲರ್ ಮೌಲ್ಯದ ಆಯುಧಗಳನ್ನು ರಫ್ತು ಮಾಡಿದೆ. ಹಾಗೆಯೇ ಬೋಯಿಂಗ್ ಮೂವತ್ತಮೂರು ಬಿಲಿಯನ್, ನಾರ್ಥ್ರಪ್ ಗ್ರುಮ್ಮನ್ ಇಪ್ಪತ್ತೊಂಬತ್ತು ಬಿಲಿಯನ್, ಜನರಲ್ ಡೈನಮಿಕ್ಸ್ ಮತ್ತು ರೇಥಿಯಾನ್ ಟೆಕ್ನಾಲಜಿಸ್ ತಲಾ ಇಪ್ಪತ್ತೈದು ಬಿಲಿಯನ್ ಡಾಲರ್ ನಂತೆ ಈ ಐದು ಕಂಪನಿಗಳು ಒಟ್ಟೂ ನೂರ ಅರವತ್ತೈದು ಶತಕೋಟಿ ರುಪಾಯಿ ಮೌಲ್ಯದ ಶಸ್ತ್ರಾಸ್ತ್ರ ರಫ್ತು ಮಾಡಿವೆ.
ಒಂದೆಡೆ ಯುದ್ಧದಲ್ಲಿ ರಷ್ಯಾ ಮತ್ತು ಉಕ್ರೇನ್ ನಷ್ಟ ಅನುಭವಿಸುತ್ತಿವೆ. ಇನ್ನೊಂದೆಡೆ ಕೆಲವು ರಾಷ್ಟ್ರಗಳು ಪೆಟ್ರೋಲ್, ಪೇಪರ್, ಅಡುಗೆ ಎಣ್ಣೆ, ಗೋಧಿ ಇತ್ಯಾದಿ ವಸ್ತುಗಳ ಪೂರೈಕೆಯ ವ್ಯತ್ಯಯದಿಂದ ನಲುಗಿ ಹೋಗಿವೆ. ಮತ್ತೊಂದೆಡೆ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರ ತಯಾರಿಸುವ ಕಂಪನಿಗಳ ಷೇರಿನಲ್ಲಿ ವೃದ್ಧಿಯಾಗುತ್ತಿದೆ. ನಾರ್ಥ್ರಪ್ ಗ್ರುಮ್ಮನ್ ಇಪ್ಪತ್ತೆರಡು ಪ್ರತಿಶತ, ಲಾಕ್‌ಹೀಡ್ ಮಾರ್ಟಿನ್ ಹದಿನೆಂಟು ಪ್ರತಿಶತ, ಜನರಲ್ ಡೈನಮಿಕ್ಸ್ ಹನ್ನೆರಡು ಪ್ರತಿಶತ,
ರೇಥಿಯಾನ್ ಟೆಕ್ನಾಲಜಿಸ್‌ನ ಎಂಟು ಪ್ರತಿಶತದಷ್ಟು ಷೇರಿನ ಮೌಲ್ಯ ವೃದ್ಧಿಯಾಗಿದೆ.
ಅದಕ್ಕಾಗಿಯೇ ಯುದ್ಧ ಆರಂಭವಾದಾಗಿನಿಂದಲೂ ಅಮೆರಿಕ ಉಕ್ರೇನ್‌ಗೆ ಶಸ್ತ್ರಾಸ್ತ್ರ ಒದಗಿಸುವುದಾಗಿ ಹೇಳುತ್ತಿದೆಯೇ ವಿನಾ ಒಬ್ಬನೇ ಒಬ್ಬ ಸೈನಿಕನನ್ನು ಯುದ್ಧ
ಭೂಮಿಗೆ ಕಳಿಸಿಲ್ಲ, ಕಳಿಸುವ ಮಾತನ್ನೂ ಆಡಿಲ್ಲ. ಈ ಕಂಪನಿಗಳು ತಯಾರಿಸಿದ ಬಹುತೇಕ ಯುದ್ಧ ಸಾಮಗ್ರಿಗಳು ಈಗಾಗಲೇ ಉಕ್ರೇನಿಗೆ ತಲುಪಿವೆ. ಅವು ಗಳಲ್ಲಿ ಕೆಲವು ಈಗಾಗಲೇ ಗುಜರಿಗೂ ತಲುಪಿವೆ. ಯೋಚಿಸಬೇಕಾದ ವಿಷಯವೆಂದರೆ, ಹೋರಾಡಲು ಸೈನಿಕರೇ ಇಲ್ಲದಿರುವಾಗ ಶಸ್ತ್ರಾಸ್ತ್ರ ಕಳುಹಿಸಿ
ಏನು ಪ್ರಯೋಜನ? ಅನಿವಾರ್ಯವಾಗಿ ಅಲ್ಲಿನ ಪ್ರಜೆಗಳೂ ಕೈಯಲ್ಲಿ ಆಯುಧ ಹಿಡಿದು ಹೊಡೆದಾಡುತ್ತಿದ್ದಾರೆ.
ಒಂದು ವರದಿಯ ಪ್ರಕಾರ, ಅಮೆರಿಕ ಈಗಾಗಲೇ ಮೂರೂವರೆ ಬಿಲಿಯನ್ ಡಾಲರ್ ಮೌಲ್ಯದ ಆಯುಧವನ್ನು ಉಕ್ರೇನ್‌ಗೆ ಕಳಿಸಿದೆ. ಉಕ್ರೇನ್ ಯುದ್ಧಕ್ಕೆ ಮೂವತ್ತಮೂರು ಬಿಲಿಯನ್ ಡಾಲರ್ ಸಹಾಯ ಮಾಡುವಂತೆ ಕಳೆದ ತಿಂಗಳು ಅಧ್ಯಕ್ಷ ಜೋ ಬೈಡೆನ್ ಅಲ್ಲಿಯ ಪ್ರತಿನಿಧಿಗಳ ಸಭೆಯನ್ನು ಕೇಳಿಕೊಂಡಿದ್ದಾರೆ. ಅದರಲ್ಲಿ ಹದಿಮೂರು ಬಿಲಿಯನ್ ಮಾನವೀಯ ನೆರವಿಗೆ, ಉಳಿದ ಇಪ್ಪತ್ತು ಬಿಲಿಯನ್ ಡಾಲರ್ ಶಸ್ತ್ರಾಸ್ತ್ರ ಖರೀದಿಗೆ! ಇದು ಅಮೆರಿಕ ಉಕ್ರೇನ್‌ಗೆ ಮಾಡುತ್ತಿರುವ ಘನಂದಾರಿ ಸಹಾಯ! ಅಂದರೆ ಸದ್ಯಕ್ಕೆ ಈ ಯುದ್ಧ ನಿಲ್ಲುವುದು ಅಮೆರಿಕಕ್ಕೂ ಬೇಕಿಲ್ಲ. ಬೇರೆಯವರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದು ಎಂದರೆ ಹೀಗೆ. ಜಿನಿವಾದಲ್ಲಿರುವ Graduate Institute of International and Development Studiesಸಂಸ್ಥೆ ನಾಲ್ಕು ವರ್ಷಗಳ ಹಿಂದೆ ಒಂದು ಸಮೀಕ್ಷೆ ನಡೆಸಿತ್ತು.
ಆ ಸಮೀಕ್ಷೆಯ ಪ್ರಕಾರ, ಇಂದು ವಿಶ್ವಾದ್ಯಂತ ನೂರು ಕೋಟಿಗೂ ಹೆಚ್ಚು ಬಂದೂಕು, ಪಿಸ್ತೂಲಿನಂತಹ ಸಣ್ಣ ಆಯುಧಗಳಿವೆ. ಅದರಲ್ಲಿ ಶೇಕಡಾ ಎಂಬತ್ತೈದರಷ್ಟು ಅಂದರೆ ಎಂಬತ್ತೈದು ಕೋಟಿ ಆಯುಧಗಳು ಸಾಮಾನ್ಯ ಜನರ ಬಳಿ ಇವೆ. ವಿಶ್ವದಾದ್ಯಂತ ನೂರು ದೇಶಗಳಲ್ಲಿ, ಶಸ್ತ್ರಾಸ್ತ್ರ ತಯಾರಿಸುವ ಸಾವಿರಕ್ಕೂ ಹೆಚ್ಚು ಕಂಪನಿಗಳು ಮನುಕುಲಕ್ಕೆ ನೀಡಿರುವ ಉಡುಗೊರೆ ಇದು. ನಿಮಗೆ ಆಶ್ಚರ್ಯವಾಗಬಹುದು, ಅಫ್ಗಾನಿಸ್ತಾನದ ಒಟ್ಟೂ ಜನಸಂಖ್ಯೆ ಸುಮಾರು ಮೂರೂವರೆ
ಕೋಟಿ. ಅದರಲ್ಲಿ ಸುಮಾರು ನಲವತ್ತಮೂರು ಲಕ್ಷ ಜನರ ಬಳಿ ಬಂದೂಕು, ಪಿಸ್ತೂಲಿನತಹ ಸಣ್ಣ ಆಯುಧಗಳಿವೆ. ಇವರಾರೂ ದೇಶದ ಸೈನ್ಯಕ್ಕೆ ಸೇರಿದವರಲ್ಲ ಎಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ.
ಕೊನೆಯದಾಗಿ, ‘ರಣರಂಗದಲ್ಲಿ ಕಾಣುವ ಪ್ರತಿಯೊಂದು ಬಂದೂಕು ಹಸಿದವನ ತಟ್ಟೆಯಿಂದ ಅನ್ನ ಕದ್ದ ಸಂಕೇತ. ಪ್ರತಿಯೊಂದು ಟ್ಯಾಂಕರ್ ಚಳಿಯಲ್ಲಿ ನಡುಗು ತ್ತಿರುವವನ ಮೈಮೇಲಿಂದ ಬಟ್ಟೆ ಕದ್ದ ಸೂಚಕ. ಒಂದು ಆಧುನಿಕ ಯುದ್ಧ ವಿಮಾನದ ವೆಚ್ಚ ಮೂವತ್ತು ನಗರಗಳಲ್ಲಿರುವ ಶಾಲೆಗಳಿಗೆ ಸಮ. ತಲಾ ಅರವತ್ತು ಸಾವಿರ ಜನಸಂಖ್ಯೆ ಹೊಂದಿದ ಎರಡು ಪಟ್ಟಣಗಳಿಗೆ ವಿದ್ಯುತ್ ಶಕ್ತಿ ಒದಗಿಸುವ ಸ್ಥಾವರಗಳಿಗೆ ಸಮ. ಸುಸಜ್ಜಿತವಾದ ಎರಡು ಆಸ್ಪತ್ರೆಗೆ ಅಥವಾ ಐವತ್ತು ಮೈಲು ಕಾಂಕ್ರೀಟ್ ರಸ್ತೆಗೆ ಸಮ ಅಥವಾ ಎಂಟು ಸಾವಿರ ಜನರ ವಾಸಕ್ಕೆ ಯೋಗ್ಯವಾದ ಮನೆಗಳಿಗೆ ಸಮ. ‘ಈ ಮಾತನ್ನು ಹೇಳಿದವರು ಸ್ವತಃ ಸೇನೆಯ ಕಮಾಂಡರ್ ಆಗಿದ್ದ, ನಂತರ ಅಮೆರಿಕದ ಅಧ್ಯಕ್ಷರೂ ಆಗಿದ್ದ ಐಸೆನ್ ಹೋವರ್.
ರಷ್ಯಾದೊಂದಿಗೆ ಆಯುಧ ಪೈಪೋಟಿ ಮುಂದೊಂದು ದಿನ ಚಿಂತಾಜನಕವಾಗಲಿದೆ ಎಂದು ಅರವತ್ತರ ದಶಕದಲ್ಲಿಯೇ ಹೇಳಿದ್ದರು ಐಸೆನ್ ಹೋವರ್. ಇಂದಿನ ಯುದ್ಧ ಪಂಡಿತರನ್ನು ಬಿಡಿ, ಐಸೆನ್‌ಹೋವರ್ ಮಾತು ನಿಜವಾಗುತ್ತಿದೆ.