ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ರಾಮ-ಕೃಷ್ಣರನ್ನು ಹೀಯಾಳಿಸಿಯಾಯಿತು. ಅವರ ಮಂದಿರವನ್ನು ಕೆಡವಿಯಾಯಿತು. ಈಗ ಕಟ್ಟುವ ಕಾರ್ಯ ನಡೆಯುತ್ತಿದೆ. ಭಾರತೀಯ ಸಂಸ್ಕೃತಿ, ಪರಂಪರೆ, ನಂಬಿಕೆ, ಆಚರಣೆಗಳನ್ನು ಎಷ್ಟು ಸಾಧ್ಯವೋ ಅಷ್ಟೂ ಅಪಹಾಸ್ಯಕ್ಕೆ ಈಡು ಮಾಡಿ ಆಯಿತು.
ಅಂತೂ ನಾವು ಸ್ವತಂತ್ರರು. ಕನ್ನಡವನ್ನು ಬಿಟ್ಟು ಪರಂಗಿಗಳ ಇಂಗ್ಲಿಷನ್ನು ನೆಚ್ಚಿಕೊಂಡು ನಮ್ಮ ಭಾಷೆಯನ್ನೂ ಕೊಂದುಕೊಂಡು, ಇಂಗ್ಲಿಷನ್ನು ದಿನನಿತ್ಯದ ಬದುಕಿನಲ್ಲಿ ಮಾತಾಡುತ್ತ ಅದನ್ನು ಬೆಳೆಸುವುದಕ್ಕೆ; ಯಾರೋ ಬರೆದ ನಮ್ಮ ಚರಿತ್ರೆಯನ್ನು ಕಣ್ಮುಚ್ಚಿ ಬಾಯ್ಮುಚ್ಚಿ ಓದುವುದಕ್ಕೆ; ಯಾರೋ ತಿರುಚಿ ಬರೆದ ಚರಿತ್ರೆಯನ್ನೇ ಸತ್ಯವೆಂದು ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಬರೆದು ಅಂಕಗಳಿಸುವುದಕ್ಕೆ; ಮತ್ತೊಬ್ಬರ ಕೈಕೆಳಗೆ ದುಡಿಯುವುದರ ಆನಂದ ಪಡುವುದಕ್ಕೆ; ನಮ್ಮ ಸಾಂಸ್ಕೃ ತಿಕ ಹಿರಿಮೆಯನ್ನು ಮರೆಸಿ ವಿದೇಶಿ ಸಂಸ್ಕೃತಿ ಯನ್ನು ಮೆರೆಸುವುದಕ್ಕೆ; ಜಾತ್ಯತೀತರೆನ್ನುತ್ತಲೇ ಜಾತೀಯತೆಯನ್ನು ಬೆಳೆಸುತ್ತಾ ಜಾತಿಯಾಧಾರದಲ್ಲಿ ರಾಜಕೀಯ ದೊಂಬರಾಟ ಮಾಡುವುದಕ್ಕೆ; ಮಠಗಳನ್ನು ಕಟ್ಟಿ ಕೊಂಡು ಮಂತ್ರಿಗಿರಿಗೆ ಲಾಬಿ ಬ್ಲಾಕ್ ಮೇಲ್ ಮಾಡುವುದಕ್ಕೆ; ಹಾದಿಬೀದಿಯಲ್ಲಿ ನಮ್ಮ ಹೆಂಗಳೆಯರ ಮಾನ-ಅಭಿಮಾನ ಕಳೆಯುವುದಕ್ಕೆ; ನಿರುದ್ಯೋಗವನ್ನೇ ಉದ್ಯೋಗ ವೆನ್ನುವುದಕ್ಕೆ; ನಾವೇ ಆರಿಸಿ ಕಳಿಸಿದ ನಾಯಕನನ್ನು ಜಗತ್ತು ಕೇಳುವಂತೆ ನಿಂದಿಸುವು ದಕ್ಕೆ; ದೇಶದ ಬಗ್ಗೆ ಚಿಂತಿಸದೆ ದೇಶ ದ್ರೋಹದ ಕಾರ್ಯವೆಸಗುವುದಕ್ಕೆ; ಯಾರದ್ದೇ ಕೆಲಸವನ್ನು ಗುಲಾಮರಂತೆ ಮಾಡುತ್ತಾ ಅದೇ ನಮ್ಮತನವೆಂದು ಮೆರೆಯುವುದಕ್ಕೆ; ಹೆತ್ತವರನ್ನು ಗೋಳು ಹೊಯ್ದುಕೊಳ್ಳುವುದಕ್ಕೆ; ನಮ್ಮ ನಮ್ಮ ಮನೆಯಲ್ಲಿರುವ ಹಿರಿಯ ರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಅನಾಥರಾಗಿಸುವುದಕ್ಕೆ; ಅಂತರಂಗದಲ್ಲಿ ಒಂಥರ, ಬಹಿರಂಗದಲ್ಲಿ ಇನ್ನೊಂದು ಥರ ಬದುಕನ್ನು ಬಾಳುವುದಕ್ಕೆ; ಸತ್ಯವನ್ನು ಮರೆ ಮಾಚಿ ಸುಳ್ಳನ್ನೇ ಎತ್ತಿಹಿಡಿಯುವುದಕ್ಕೆ; ಜಾತಿ, ಮತ, ಧರ್ಮಗಳ ಸೋಗಲಾಡಿತನ ದಲ್ಲಿ ಕುತಂತ್ರ ಹೆಣೆಯುವುದಕ್ಕೆ; ಯಾರದ್ದೇ ಪ್ರಾಣ ತೆಗೆದು ದೊಂಬಿಯೆಬ್ಬಿಸುವುದಕ್ಕೆ; ಜಾತಿ, ಮತ, ಧರ್ಮಗಳ ಆಫೀಮು ಏರಿಸಿಜನರ ಬದುಕನ್ನು ಹೈರಾಣು ಮಾಡುವುದಕ್ಕೆ; ಯಾವ ಆತ್ಮಶುದ್ಧಿಯೂ ಇಲ್ಲದೆ ಬಹಿರಂಗದಲ್ಲಿ ಶುದ್ಧತೆಯ ಬಗ್ಗೆ ಮಾತನಾಡುವುದಕ್ಕೆ; ಗೊತ್ತಿಲ್ಲದ ವಿಚಾರ ಗಳಲ್ಲಿ ಎಲ್ಲವೂ ಗೊತ್ತಿದೆಯೆಂಬಂತೆ ಸುಳ್ಳು ಸೃಷ್ಟಿಸುವುದಕ್ಕೆ; ಭ್ರಷ್ಟಾಚಾರ ಮಾಡುತ್ತಲೇ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಮಾತನಾಡುವುದಕ್ಕೆ; ಪರೀಕ್ಷೆಯಲ್ಲಿ ನಕಲು ಮಾಡಿ ಅತ್ಯುತ್ತಮ ಶ್ರೇಣಿಯನ್ನು ಪಡೆಯುವುದಕ್ಕೆ.
ಹಾಗೇ ಅನ್ನ ಕೊಟ್ಟ ಯಜಮಾನನಿಗೆ ದ್ರೋಹವೆಸಗುವುದಕ್ಕೆ; ಸಿಕ್ಕ ಸಂದರ್ಭದಲ್ಲ ದೇಶದ ಘನತೆಯನ್ನು ಸಾರಾಸಗಟಾಗಿ ಮಣ್ಣುಪಾಲು ಮಾಡುವುದಕ್ಕೆ; ನ್ಯಾಯವನ್ನು ಸೋಲಿಸಿ ಅನ್ಯಾಯದ ಪರ ದನಿಯನ್ನು ಎತ್ತರಿಸುವುದಕ್ಕೆ; ಸರಕಾರದ ದುಡ್ಡಿನಲ್ಲಿ ಕುಟುಂಬ ಸಮೇತ ಮೋಜು ಮಾಡುವುದಕ್ಕೆ; ಓಟು ಕೊಟ್ಟವರನ್ನು ಮಂಗ ಮಾಡುವುದಕ್ಕೆ; ಹೊನ್ನ ವೇಷವ ತೊಟ್ಟು ಮಣ್ಣು ತಿನ್ನುವ ಕೆಲಸ ಮಾಡುವುದಕ್ಕೆ; ಅನ್ಯ ವಿಷಯಗಳಲ್ಲಿ ಅನುರಕ್ತಿಯಾಗಿ ದೇವರೆದುರು ಬೂಟಾಟಿಕೆಯ ಭಕ್ತಿಯನ್ನು ಪ್ರದರ್ಶಿಸುವುದಕ್ಕೆ; ಹಣ, ಹೆಂಡವನ್ನು ಹಂಚಿ ಚುನಾವಣೆಯಲ್ಲಿ ಗೆದ್ದು ಬರುವುದಕ್ಕೆ; ಜನರಿಗೆ ಭರವಸೆಗಳನ್ನು ಕೊಡುತ್ತ ಅವರನ್ನೇ ನಂಬಿಸಿ ಮೋಸ ಮಾಡುವುದಕ್ಕೆ; ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡುವುದಕ್ಕೆ; ಅಧರ್ಮಿ ಗಳಾಗಿ ಧರ್ಮದ ಬಗ್ಗೆ ಪುಂಖಾನುಪುಂಖವಾಗಿ ಪುಂಗಿಯೂದುವುದಕ್ಕೆ; ಯಾರದೋ ಹೆಸರಿನಲ್ಲಿ ಹೆಸರು, ಪದವಿ, ಅಂತಸ್ತು, ನಮಾನ ಹೊಡೆದುಕೊಳ್ಳುವುದಕ್ಕೆ; ಯಾರದ್ದೇ ಕೈಕಾಲು ಹಿಡಿದು ಪ್ರಶಸ್ತಿಗಳನ್ನು ಹೊಡೆಯುವುದಕ್ಕೆ; ಅರ್ಹತೆಯಿಲ್ಲದಿದ್ದರೂ ಸ್ಥಾನ ,ಪದವಿ, ಅಧಿಕಾರ ಪಡೆದು ಸರಕಾರದ ಹಣ ನುಂಗುವುದಕ್ಕೆ; ಮಕ್ಕಳಿಗೆ ಪಾಠವನ್ನು ಸರಿಯಾಗಿ ಮಾಡದೆ ಸ್ವಂತ ಕಾರ್ಯ ಗಳನ್ನು ಡ್ಯೂಟಿ ಸಮಯದ ಮಾಡಿಕೊಂಡು ಸರಕಾರದ ಸಂಬಳವನ್ನು ಬಿಟ್ಟಿ ತಿನ್ನುವುದಕ್ಕೆ; ಯಾವುದೇ ಲೆವೆಲ್ಲಿನ ಅಧಿಕಾರ ದಲ್ಲಿದ್ದರೂ ಭ್ರಷ್ಟಾಚಾರವನ್ನೇ ಸೇವಾರೂಪದ ಕಾಯಕ ಮಾಡಿಕೊಂಡು ಕೋಟಿ ಕೋಟಿ ಗಳಿಸಿ ದೊಡ್ದದೊಡ್ಡ ಮಹಲ್ಲು ಗಳಲ್ಲಿ ಐಷಾರಾಮಿ ಬದುಕನ್ನು ಸಾಗಿಸುವುದಕ್ಕೆ; ಲಂಚ ಪಡೆದು ಅಧಿಕಾರದ ದರ್ಪ ಮೆರೆಯುವುದಕ್ಕೆ; ಕೊಲೆ ಸುಲಿಗೆಗಳನ್ನು ಮಾಡಿ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಅಂತ ಅನ್ಯಾಯದ ಮಾರ್ಗದಲ್ಲಿ ಸಾಕ್ಷ್ಯಗಳನ್ನು ನಾಶಮಾಡಿ ಕಾನೂನು ಸರಪಳಿಯಿಂದ ತಪ್ಪಿಸಿಕೊಳ್ಳುವುದಕ್ಕೆ; ಜಾತ್ಯತೀತರೆಂದು ಹೇಳಿಕೊಂಡು ಜಾತಿ ರಾಜಕೀಯ ಮಾಡುವು ದಕ್ಕೆ; ಕೂಲಿ ಕೊಡದೆ ಬಡವರನ್ನು ದುಡಿಸಿಕೊಳ್ಳುವುದಕ್ಕೆ; ನಾವೇ ಸರಿಯಿಲ್ಲದೆ ಅನ್ಯರನ್ನು ಸರಿಮಾಡುವುದಕ್ಕೆ; ಇನ್ನೂ ಏನೇನೋ ಅಲ್ಲಸಲ್ಲದ ಕಾರ್ಯಗಳನ್ನು ಮಾಡುತ್ತಲೇ ಇರುವುದಕ್ಕೆ- ಹೇಳುತ್ತ ಹೋದರೆ, ಇನ್ನೂ ಇದೆ. ಇರಲಿ.
ಅಂತೂ ನಾವು ಸ್ವತಂತ್ರರು! ನಮಗೆ ಸ್ವಾತಂತ್ರ್ಯ ಬಂದಿದೆ. ಬೇಕಾದಾಗಲೆಲ್ಲ ಪ್ರಜಾಪ್ರಭುತ್ವ, ಪ್ರಜಾತಂತ್ರ, ಪ್ರಜಾಸತ್ತೆಯ ಬಗ್ಗೆ, ಅದು ನೀಡುವ ಉದಾರ ಸ್ವಾತಂತ್ರ್ಯದ ಬಗ್ಗೆ ಏನೇನೆಲ್ಲ ಮಾತಾಡಿ ಸ್ವಾರ್ಥ ಮನೋಭಾವದಿಂದ ವರ್ತಿಸುವುದಕ್ಕೆ! ಯಾರು ಹೇಳಿದರು ನಾವು ಸ್ವತಂತ್ರರಲ್ಲವೆಂದು? ನಮಗೆ ಸ್ವಾತಂತ್ರ್ಯ ಬಂದಿಲ್ಲವೆಂದು? ಜಮ್ಮು ಕಾಶ್ಮೀರದ ವಿಚಾರವಾಗಿ ಐತಿಹಾಸಿಕ ಮೈಲಿಗ ಸೃಷ್ಟಿಸಿ ಒಂದು ಜನಾಂಗವನ್ನೇ ಸಮಗ್ರ ಭಾರತೀಯ ಪರಂಪರೆಯಲ್ಲಿ ಬದುಕುವುದಕ್ಕೆ ತೆರೆದು ಅವಕಾಶವಿತ್ತ ಸರಕಾರ ವನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದವರು, ಅವರನ್ನು ಬೆಂಬಲಿಸುವವರ ಕಂಡರೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಸಂದರೂ ದೇಶದ್ರೋಹದ ದರಿದ್ರ ಬುದ್ಧಿಗೆ ಹಿಡಿದ ಕಿಲುಬನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ!
ಇದಿನ್ನೆಂಥಾ ಸ್ವಾತಂತ್ರ್ಯವಿರಬಹುದು ಎಂದು ಅಂದಾಜಿಸಿ! ಜಾತಿ, ಮತ, ಧರ್ಮ, ಪಂಥದ ಅಮಲಿನಲ್ಲಿ ಉನ್ಮಾದಗೊಂಡು ಹಾರಾಡುವವರಿಂದ ದೇಶ ಕುದಿಯುತ್ತಿದೆ. ದೇಶದ ಹಿತಕ್ಕೆ ಕಾನೂನುಗಳನ್ನು ಜಾರಿಗೊಳಿಸಿದರೆ ಅದನ್ನು ಹಿಂಪಡೆಯುವುದಕ್ಕೆ ಅನ್ಯ ಮಾರ್ಗಗಳ ಮೂಲಕ ವಾಮಮಾರ್ಗವನ್ನು ಹಿಡಿದು ವಿರೋಧಿಸಿ ನಾಯಕನನ್ನು ಸೋಲಿಸುವುದಕ್ಕೆ; ಅಂಥದ್ದಕ್ಕೆ ತುಪ್ಪ ಸುರಿಯುವ ವಿಕೃತ ಮನಸ್ಸುಗಳನ್ನು ಕಂಡರೆ ಭವಿಷ್ಯದ ಭಾರತದ ಅಸ್ತಿತ್ವದ ಬಗ್ಗೆ ಕಳವಳ ಮತ್ತು ಭಯ ಆವರಿಸುತ್ತಿದೆ.
ಎತ್ತ ಕಡೆಗೆ ಸಾಗುತ್ತಿದೆ ನಮ್ಮ ಭಾವ ಮತ್ತು ಬುದ್ಧಿ? ಎಲ್ಲಿಗೆ ಬಂದು ಮುಟ್ಟಿದ್ದೇವೆ? ಎಲ್ಲಿಗೆ ಹೋಗಿ ಮುಟ್ಟುತ್ತೇವೆ? ಯಾವುದು
ದೇಶಕ್ಕೆ ಹಿತ ಯಾವುದು ಅಹಿತ ಎಂಬುದನ್ನು ಅರಿತೂ ವಾಮಮಾರ್ಗದ ಮೂಲಕ ದೇಶದ ಪ್ರಗತಿಗೆ ವಿರೋಧವಾಗಿ ನಿಲ್ಲುವ ವರನ್ನು, ಮಾತಾಡುವವರನ್ನು, ನೋಡಿದರೆ ನಮಗೆ ಸ್ವಾತಂತ್ರ್ಯ ಬಂದಿಲ್ಲ, ನಾವು ಸ್ವತಂತ್ರವಾಗಿಲ್ಲವೆಂದು ಹೇಗೆ ಹೇಳುವುದು? ಪ್ರಥಮ ಪ್ರಧಾನಿಯ ಹೆಸರನ್ನು ಹೊತ್ತ ರಾಷ್ಟ್ರ ರಾಜಧಾನಿಯಲ್ಲಿರುವ ವಿವಿಯಲ್ಲಿ ದೇಶವನ್ನೇ ತುಂಡರಿಸುತ್ತೇನೆಂದು ದೇಶದ್ರೋಹದ ಮಾತುಗಳನ್ನಾಡಿದವರು, ಹದಿನೈದು ನಿಮಿಷದಲ್ಲಿ ಹಿಂದೂಗಳನ್ನು ಮುಗಿಸುತ್ತೇವೆ ಎಂದವರು, ಭಯೋ ತ್ಪಾದಕ ಅಫ್ಜಲ್ ಗುರುವಿನ ಪರ ದನಿಯೆತ್ತುವವರು, ವೇದಿಕೆಯಲ್ಲಿ ನಿಂತು ‘ಬಹುತ್ವ ಭಾರತ’ ದ ಬಗ್ಗೆ ಮಾತಾಡು ವವರನ್ನು ಕಂಡರೆ ನಮಗೆ ಸಿಕ್ಕಿದ ಸ್ವಾತಂತ್ರ್ಯದ ವ್ಯಾಪ್ತಿ ಮತ್ತು ಹರಹನ್ನು ಸಂವಿಧಾನದ ಮೂಲಕ ಹೇಗೂ ವಿಸ್ತರಿಸಿಕೊಳ್ಳಲು ಸಾಧ್ಯವೆಂಬ ಬೌದ್ಧಿಕ ಸ್ವಾತಂತ್ರ್ಯವನ್ನು ಈ ತೆರನಾಗಿ ತೆರೆದಿಡುವವರನ್ನು ಕಂಡಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವೆಂದು ಬೊಬ್ಬೆ ಇರಿಯುವರನ್ನು ನಪುಂಸಕರೆಂದು ಭಾವಿಸಬೇಕೇ? ಅದೂ ಅವರ ಸ್ವಾತಂತ್ರ್ಯವೇ? ನಿಜವೇ ಆದರೆ ಅದಿನ್ನೆಂಥಾ ಸ್ವಾತಂತ್ರ್ಯವಿರ ಬಹುದು? ಇಂಥವರನ್ನು ಹೆತ್ತ ಭಾರತ ಮಾತೆ ಅದ್ಯಾವ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಧನ್ಯತಾ ಭಾವವನ್ನು ತಾಳುತ್ತಾಳೋ!
ತಾಯಿ ಭಾರತಿಯೇ ತಲೆಚಚ್ಚಿಕೊಂಡು ಹೇಳಬೇಕು! ಯಾರು ಹೇಳಿದರು ನಾವು ಸ್ವತಂತ್ರರಲ್ಲವೆಂದು? ನಮಗೆ ಸ್ವಾತಂತ್ರ್ಯ ಬಂದಿಲ್ಲವೆಂದು? ರಾಮ-ಕೃಷ್ಣರನ್ನು ಹೀಯಾಳಿಸಿಯಾಯಿತು. ಅವರ ಮಂದಿರವನ್ನು ಕೆಡವಿಯಾಯಿತು. ಈಗ ಕಟ್ಟುವ ಕಾರ್ಯ ನಡೆಯುತ್ತಿದೆ. ಭಾರತೀಯ ಸಂಸ್ಕೃತಿ, ಪರಂಪರೆ, ನಂಬಿಕೆ, ಆಚರಣೆಗಳನ್ನು ಎಷ್ಟು ಸಾಧ್ಯವೋ ಅಷ್ಟೂ ಅಪಹಾಸ್ಯಕ್ಕೆ ಈಡು ಮಾಡಾಯಿತು.
ಅಲ್ಲಗಳೆದಾಯಿತು. ಜರೆದಾಯಿತು. ಗೀತೆ-ವೇದ-ಪುರಾಣ -ಉಪನಿಷತ್ತುಗಳನ್ನು ನಿಂದಿಸಿ ಅಲ್ಲಗಳೆದಾಯಿತು. ಹಿಂದೂವಾಗಿದ್ದೇ ಹಿಂದುತ್ವವನ್ನು ಬೈದು ಭಂಗಿಸಿಯಾಯಿತು. ಹಿಂದೂ ಎಂಬುದನ್ನು ಮುಖ್ಯವಾಹಿನಿಯಲ್ಲಿ ನಿಲ್ಲಿಸಿಕೊಂಡು ಏನೇನು ಕೆಟ್ಟದ್ದು ಅಂತ ತಿಳಿದು ಉದ್ದೇಶ ಪೂರ್ವಕವಾಗಿ ಮಾಡಲು ಸಾಧ್ಯವೋ ಅವೆಲ್ಲವನ್ನೂ ಬಹಿರಂಗವಾಗೇ ಮಾಡಾಯಿತು. ಆದರೂ ಮನಸ್ಸು ತೃಪ್ತಗೊಂಡಿಲ್ಲ. ಕೊನೆಯ ಅಂಕವೋ ಎಂಬಂತೆ ಜನರಿಂದ ಆಯ್ಕೆಯಾದ ಪ್ರಧಾನಿಯನ್ನು ಏನಕೇನ ವಿರೋಧಿಸು ವುದಕ್ಕೂ ಅವರ ಜೀವಕ್ಕೆ ಕುಂದು ತರುವ ದುಷ್ಕಾರ್ಯವನ್ನೂ ಹುನ್ನಾರವನ್ನೂ ಮಾಡಲಾಯಿತು.
ಅಂಥ ಕುಕೃತ್ಯದಲ್ಲಿ ತೊಡಗಿದವರನ್ನು ಕಂಡರೆ ಯಾವ ಸ್ವಾತಂತ್ರ್ಯದ ಬಗ್ಗೆ ಮಾತನಾಡಬೇಕು? ದೇಶ ಎತ್ತ ಸಾಗುತ್ತಿದೆ? ಎತ್ತ ಕೊಂಡೊ ಯ್ಯುತ್ತಿದ್ದೇವೆ? ಯಾರು ಹೇಳಿದರು ನಾವು ಸ್ವತಂತ್ರರಲ್ಲವೆಂದು? ನಮಗೆ ಸ್ವಾತಂತ್ರ್ಯ ಬಂದಿಲ್ಲವೆಂದು? ಅಂತೂ ನಾವು ಸ್ವತಂತ್ರರು. ನಮಗೆ ಬೇಕಾದ ಹಾಗೆ ಬದುಕುವುದಕ್ಕೆ. ಮಾತನಾಡುವುದಕ್ಕೆ. ಉಗುಳುವುದಕ್ಕೆ. ಸಂವಿಧಾನ, ಕಾನೂನು ಎಲ್ಲವನ್ನೂ
ಧಿಕ್ಕರಿಸಿ ಓರಾಟ ಹೋರಾಟ ಮಾದುವುದಕ್ಕೆ! ಈ ದೇಶ ಯಾರಿಗೂ ಸಲ್ಲೀತು ಎಂದು ನಾವು ಅನುಭವಿಸುತ್ತಿರುವ ಸ್ವೇಚ್ಛೆಯ ಸ್ವಾತಂತ್ರ್ಯವನ್ನು ನೋಡಿ ಯಾರೂ ಅಂದುಕೊಳ್ಳುವಷ್ಟು ನಾವು ಸ್ವತಂತ್ರರು! ಇಂಥ ಸ್ವಾತಂತ್ರ್ಯಕ್ಕೆ ಒಂದೇ ಭಾರತಮ್!